ಭಾರತದಲ್ಲಿ 1 ಜಿಬಿ ಡಾಟಾ ತಂಪು ಪಾನೀಯ ಬಾಟಲಿಗಿಂತಲೂ ಅಗ್ಗ: ಟೋಕಿಯೊದಲ್ಲಿ ಮೋದಿ
ಟೋಕಿಯೊ, ಅ. 29: ‘ಮೇಕ್ ಇನ್ ಇಂಡಿಯಾ’ ಈಗ ‘ಜಾಗತಿಕ ಬ್ರಾಂಡ್’ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ವಸ್ತುಗಳನ್ನು, ಅದರಲ್ಲೂ ಮುಖ್ಯವಾಗಿ ಮೊಬೈಲ್ ಫೋನ್ಗಳನ್ನು ಭಾರತದಲ್ಲಿ ಉತ್ಪಾದಿಸುವುದಕ್ಕೆ ಉತ್ತೇಜನ ನೀಡುವುದು ತನ್ನ ಸರಕಾರದ ನೀತಿಯಾಗಿದೆ ಎಂದು ಅವರು ಹೇಳಿದರು.
‘‘ ‘ಮೇಕ್ ಇನ್ ಇಂಡಿಯಾ’ ಇಂದು ಜಾಗತಿಕ ಬ್ರಾಂಡ್ ಆಗಿ ಹೊರಹೊಮ್ಮಿದೆ. ನಾವು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುತ್ತಿದ್ದೇವೆ. ಭಾರತ ಈಗ ಇಲೆಕ್ಟ್ರಾನಿಕ್ಸ್ ಮತ್ತು ಆಟೊಮೊಬೈಲ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುತ್ತಿದೆ. ಮೊಬೈಲ್ ಫೋನ್ಗಳ ಉತ್ಪಾದನೆಯಲ್ಲಿ ನಾವು ನಂಬರ್ ಒಂದು ಆಗುವತ್ತ ದಾಪುಗಾಲಿಡುತ್ತಿದ್ದೇವೆ’’ ಎಂದು ಮೋದಿ ಹೇಳಿದರು.
ಅವರು ಜಪಾನ್ ರಾಜಧಾನಿ ಟೋಕಿಯೊದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
13ನೇ ಭಾರತ-ಜಪಾನ್ ವಾರ್ಷಿಕ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೋದಿ ಶನಿವಾರ ಸಂಜೆ ಜಪಾನ್ಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ತನ್ನ ಸರಕಾರದ ಸಾರ್ವಜನಿಕ ಕಲ್ಯಾಣ ನೀತಿಗಳನ್ನೂ ಶ್ಲಾಘಿಸಿದರು.
‘‘ಭಾರತ ಇಂದು ಬೃಹತ್ ಪರಿವರ್ತನಾ ಮಜಲಿನ ಮೂಲಕ ಸಾಗುತ್ತಿದೆ. ಮಾನವತೆಗೆ ನೀಡಿದ ಸೇವೆಗಳಿಗಾಗಿ ಜಗತ್ತು ಇಂದು ಭಾರತವನ್ನು ಶ್ಲಾಘಿಸುತ್ತಿದೆ. ಭಾರತದಲ್ಲಿ ರೂಪಿಸಲಾಗುವ ನೀತಿಗಳು ಮತ್ತು ಸಾರ್ವಜನಿಕ ಕಲ್ಯಾಣದ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಕೆಲಸಗಳಿಗಾಗಿ ದೇಶವನ್ನು ಇಂದು ಶ್ಲಾಘಿಸಲಾಗುತ್ತಿದೆ’’ ಎಂದು ಮೋದಿ ನುಡಿದರು.
1 ಜಿಬಿ ಡಾಟಾ ಚಿಕ್ಕ ಕೋಲ್ಡ್ ಡ್ರಿಂಕ್ ಬಾಟಲಿಗಿಂತಲೂ ಅಗ್ಗ!
ಭಾರತದ ಡಿಜಿಟಲ್ ಮೂಲಸೌಕರ್ಯದಲ್ಲಿ ಅಗಾಧ ಪ್ರಗತಿಯಾಗಿದ್ದು, ಈಗ ಒಂದು ಜಿಬಿ ಡಾಟಾ ಅತ್ಯಂತ ಚಿಕ್ಕ ಕೋಲ್ಡ್ ಡ್ರಿಂಕ್ ಬಾಟಲಿಗಿಂತಲೂ ಅಗ್ಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ದೂರಸಂಪರ್ಕ ಮತ್ತು ಇಂಟರ್ನೆಟ್ ಜಾಲ ವಿಸ್ತಾರಗೊಳ್ಳುತ್ತಿದೆ ಎಂದರು.
‘‘1 ಜಿಬಿ ಡಾಟಾ ಅತ್ಯಂತ ಚಿಕ್ಕ ಕೋಲ್ಡ್ ಡ್ರಿಂಕ್ ಬಾಟಲಿಗಿಂತಲೂ ಅಗ್ಗವಾಗಿದೆ. ಇಂಟರ್ನೆಟ್ ಇಂದು ಸರಕಾರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ’’ ಎಂದರು.
ಯೋಗ, ಆಯುರ್ವೇದಲ್ಲಿ ಸಹಕಾರಕ್ಕೆ ಒಪ್ಪಂದ
ಉಭಯ ದೇಶಗಳ ಜನರಿಗೆ ಸಮಗ್ರ ಆರೋಗ್ಯ ರಕ್ಷಣೆ ಮತ್ತು ನೆಮ್ಮದಿಯನ್ನು ನೀಡುವುದಕ್ಕಾಗಿ ಯೋಗ ಮತ್ತು ಆಯುರ್ವೇದ ಮುಂತಾದ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ಹೊಂದಲು ಭಾರತ ಮತ್ತು ಜಪಾನ್ ಸೋಮವಾರ ನಿರ್ಧರಿಸಿವೆ.
ಪ್ರಧಾನಿ ನರೇಂದ್ರ ಮೋದಿಯ ಜಪಾನ್ ಭೇಟಿಯ ವೇಳೆ, ಭಾರತದ ಆಯುಶ್ (ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಸಚಿವಾಲಯ ಮತ್ತು ಜಪಾನ್ನ ಕನಗವ ರಾಜ್ಯ ಸರಕಾರಗಳು ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದವು.
ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯ ಕ್ಷೇತ್ರದಲ್ಲೂ ಸಹಕಾರವನ್ನು ವಿಸ್ತರಿಸುವ ಇನ್ನೊಂದು ಸಹಕಾರ ಒಪ್ಪಂದಕ್ಕೂ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು.