ಚಿಕ್ಕಮಗಳೂರು ನಗರದಲ್ಲಿ ಹದಗೆಟ್ಟ ರಸ್ತೆಗಳು: ತಪ್ಪದ ವಾಹನಗಳ ಸರ್ಕಸ್
ರಸ್ತೆ ಅವ್ಯವಸ್ಥೆಗೆ ಪ್ರವಾಸಿಗರು ಸುಸ್ತು
ಚಿಕ್ಕಮಗಳೂರು, ಅ.29: ಹಸಿರು ಹೊದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಾಫಿನಾಡಿಗೆ ಸದ್ಯ ಹೊರ ಜಿಲ್ಲೆಗಳ ಪೃಕೃತಿ ಪ್ರಿಯರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಜಿಲ್ಲಾ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಜಿಲ್ಲಾ ಕೇಂದ್ರದಿಂದ ಕೆಲವೇ ಕೆಲವು ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್ಗಿರಿ ಪ್ರಕೃತಿ ಸೌಂದರ್ಯವನ್ನು ಸವಿಯುವುದರಿಂದ ತಪ್ಪಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಜಿಲ್ಲೆಯ ಪ್ರವಾಸಕ್ಕೆ ಬರುವ ದೂರದ ಪ್ರವಾಸಿಗರು ಚಿಕ್ಕಮಗಳೂರು ನಗರಕ್ಕೆ ಬಾರದೇ ಹೋಗಲಾರರು. ಹೀಗೆ ಬರುವ ಪ್ರವಾಸಿಗರು ನಗರದ ರಸ್ತೆಗಳ ಪಾಡು ಕಂಡು ಇಲ್ಲಿನ ನಗರಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದ್ದರೂ ರಸ್ತೆಗಳ ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಂತಾಗಿದೆ.
ಉತ್ತಮ ರಸ್ತೆಗಳು ನಗರವೊಂದರ ಅಭಿವೃದ್ಧಿಯ ಪ್ರತೀಕ ಎಂಬ ಮಾತಿದೆ. ಆದರೆ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳೂ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ರಸ್ತೆಗಳ ಪಾಡು ಅಸ್ಥಿಪಂಜರದಂತಾಗಿರುವುದು ಇಲ್ಲಿನ ನಗರಸಭೆ ಹಾಗೂ ಕ್ಷೇತ್ರದ ಶಾಸಕರು, ಸಂಸದರ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಚಿಕ್ಕಮಗಳೂರು ನಗರ ಮೂರು ಮತ್ತೊಂದು ಪ್ರಮುಖ ರಸ್ತೆಗಳನ್ನು ಹೊಂದಿರುವ ಸಣ್ಣ ನಗರ. ಆದರೆ ಇರುವ ಕೆಲವೇ ರಸ್ತೆಗಳ ಅಭಿವೃದ್ಧಿಗೆ ಇಲ್ಲಿನ ನಗರಸಭೆ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಗುಂಡಿಬಿದ್ದ ರಸ್ತೆಗಳ ಮೂಲಕ ಸರ್ಕಸ್ ಮಾಡುತ್ತಾ ಸಂಚರಿಸುವ ಹೊರ ಜಿಲ್ಲೆಗಳ ಪ್ರವಾಸಿಗರೂ ಸೇರಿದಂತೆ ಸ್ಥಳೀಯ ವಾಹನ ಸವಾರರು, ಸಾರ್ವಜನಿಕರು ರಸ್ತೆಗಳ ದುಸ್ಥಿತಿಗೆ ಕಾರಣವಾಗಿರುವವರಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಎಂಜಿ ರಸ್ತೆ, ಐಜಿ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆ ಹಾಗೂ ಪಾದಾಚಾರಿ ರಸ್ತೆಗಳ ಅಭಿವೃದ್ಧಿಗೆ ಕಳೆದ 15 ವರ್ಷಗಳಿಂದ ಕೋಟ್ಯಂತರ ರೂ. ಅನುದಾನ ಸುರಿಯಲಾಗಿದೆ. ಆದರೆ ಗುತ್ತಿಗೆದಾರರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ನಿರ್ವಹಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಈ ಸಂಬಂಧ ಕೆಲ ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ. ಈ ರಸ್ತೆಗಳನ್ನು ಕೋಟ್ಯಂತರ ರೂ. ಅನುದಾನದಲ್ಲಿ ನಿರ್ವಹಿಸಿದ್ದರೂ ಅಲ್ಲಲ್ಲಿ ಗುಂಡಿಬಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿವೆ. ಈ ಮೂರೂ ರಸ್ತೆಗಳ ಎರಡೂ ಬದಿಗಳಲ್ಲಿ ಪಾದಚಾರಿ ರಸ್ತೆಗಳನ್ನು ನಿರ್ಮಿಸಲಾಗಿದೆಯಾರೂ ಇವು ಸಾರ್ವಜನಿಕರ ಓಡಾಟಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಇನ್ನು ನಗರದಿಂದ ಮೂಡಿಗೆರೆಯತ್ತ ಹೋಗುವ ಹೆದ್ದಾರಿಯಲ್ಲಿ ಬೋಳರಾಮೇಶ್ವರ ದೇವಾಲಯದಿಂದ ಗವನಹಳ್ಳಿವರೆಗಿನ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಇದೇ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೊ ಹಾಗೂ ಎಬಿಸಿ ಕಂಪೆನಿ ಎದುರಿನ ರಸ್ತೆಗಳಲ್ಲಂತೂ ಡಾಂಬಾರಿನ ಲವಲೇಷವಿಲ್ಲದಂತಾಗಿದೆ. ಭಾರೀ ಗುಂಡಿಬಿದ್ದ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಸಾರಿಗೆ ಬಸ್ಗಳು ಹಾಗೂ ಸಾವಿರಾರು ವಾಹನಗಳು ಸರ್ಕಸ್ ಮಾಡುತ್ತಾ ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿದೆ. ನಗರದಿಂದ ಮಂಗಳೂರು, ಧರ್ಮಸ್ಥಳ, ಕಳಸ, ಹೊರನಾಡು, ಶೃಂಗೇರಿಯತ್ತ ಪಯಣಿಸುವ ಪ್ರವಾಸಿಗರಿಗೆ ಗುಂಡಿಬಿದ್ದ ಈ ರಸ್ತೆಗಳ ಯಾತನಮಯ ಪ್ರಯಾಣ ಅನಿವಾರ್ಯವಾಗಿದೆ. ಮಳೆ ಸುರಿದಾಗಲಂತೂ ಈ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕೆಸರುಗುಂಡಿಯಂತಾಗಿ ಕಾಣದಂತಾಗುವುದರಿಂದ ವಾಹನ ಸವಾರರು ಹರಸಾಹಸಪಟ್ಟು ವಾಹನಗಳು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಿಂದ ಕಡೂರಿಗೆ ತೆರಳುವು ಹೆದ್ದಾರಿಯ ಕತೆಯೂ ಇದೇ ಆಗಿದ್ದು, ದಂಟರಮಕ್ಕಿ ಬಡಾವಣೆ ಸಮೀಪ ಹಾದು ಹೋಗಿರುವ ಚಿಕ್ಕಮಗಳೂರು-ಕಡೂರು ರಸ್ತೆಯುದ್ದಕ್ಕೂ ಗುಂಡಿಗಳು ಹೆಜ್ಜೆ ಹೆಜ್ಜೆಗೂ ವಾಹನ ಸವಾರರನ್ನು ಕಾಡುತ್ತಿವೆ. ನಗರದ ಎಂಎನ್ಸಿ ವೃತ್ತದಿಂದ ಮಲ್ಲಂದೂರು ಕಡೆಗೆ ಹಾದು ಹೋಗಿರುವ ರಸ್ತೆಯ ದುಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎಂಬಂತಾಗಿದೆ. ಇನ್ನು ನಗರದ ಕೆಲ ಬಡಾವಣೆಗಳ ರಸ್ತೆಗಳ ಪಾಡಂತೂ ಹೇಳತೀರದಾಗಿದ್ದು, ಒಳಚರಂಡಿ ಸಂಪರ್ಕದ ನೆಪದಲ್ಲಿ ಇರುವ ರಸ್ತೆಗಳನ್ನು ಅಗೆದು ಹಾಕಲಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಅತಿವೃಷ್ಟಿಯಾಗಿ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲೂ ಭಾರೀ ಮಳೆಯಾಗಿ ರಸ್ತೆಗಳು ಅಲ್ಲಲ್ಲಿ ಸಂಪೂರ್ಣವಾಗಿ ಹದಗೆಟ್ಟಿವೆ. ಆದರೆ ಸದ್ಯ ಮಳೆ ನಿಂತು ಬಿಸಿಲು ಝಳಪಳಿಸುತ್ತಿದ್ದರೂ ನಗರ ಹಾಗೂ ನಗರ ಸಮೀಪದ ರಸ್ತೆಗಳ ಗುಂಡಿಮುಚ್ಚಲಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಗರಸಭೆ ಮುಂದಾಗದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಹದಗೆಟ್ಟ ರಸ್ತೆಗಳ ದುರಸ್ತಿಗೆ ಮುಂದಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹರಸಾಹಸಪಟ್ಟು ವಾಹನ ಸವಾರರ ಸಂಚಾರ
ಚಿಕ್ಕಮಗಳೂರು ನಗರದಿಂದ ಮಂಗಳೂರು, ಧರ್ಮಸ್ಥಳ, ಕಳಸ, ಹೊರನಾಡು, ಶೃಂಗೇರಿಯತ್ತ ಪ್ರಯಾಣಿಸುವವರಿಗೆ ಗುಂಡಿಬಿದ್ದ ರಸ್ತೆಗಳ ಯಾತನಾಮಯ ಪ್ರಯಾಣ ಅನಿವಾರ್ಯವಾಗಿದೆ. ಮಳೆ ಸುರಿದಾಗಲಂತೂ ಈ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕೆಸರು ಗುಂಡಿಯಂತಾಗುವುದರಿಂದ ವಾಹನ ಸವಾರರು ಹರಸಾಹಸಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.