ವಿಭಿನ್ನ ಓದಿನ ಅನುಭವ ನೀಡುವ ಸರ್ವೆ ಸಾಹಿತ್ಯ
ನಾನು ಓದಿದ ಪುಸ್ತಕ
ನಾಡಿನ ಅನೇಕಾನೇಕ ಭಾಷೆ, ಉಪಭಾಷೆಗಳ ಜೊತೆ ಆಡಳಿತ ಕನ್ನಡದಂತೆಯೇ ಸರ್ವೆ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಬಳಕೆಯಾಗುವ ಸರ್ವೆ ಕನ್ನಡ, ಅದರ ವಿಶಿಷ್ಟ ಪದಗಳು, ಭಿನ್ನಾಭಿವ್ಯಕ್ತಿ ಭಿನ್ನರೂಪ ರೂಪಕವನ್ನು ತಳೆಯುವ ಸಾಧನ ಸಲಕರಣೆಗಳು, ಸಾಮಾನ್ಯ ಜನರನ್ನೂ ತಲುಪಿಲ್ಲ. ಇಂತಹ ಸ್ಥಿತಿಯಲ್ಲಿ ಈ ಸರ್ವೆ ಕನ್ನಡ ಜನಪ್ರಿಯವಾಗುವ ಅವಶ್ಯಕತೆ ಇದೆ. ಇದು ಸಾಹಿತ್ಯ ರೂಪವನ್ನು ಪಡೆದುಕೊಳ್ಳುವ ಒಂದು ಪ್ರತಿಕ್ರಿಯೆಯೂ ಹೌದು.
ಸರ್ವೆ ಇಲಾಖೆಯ ಪಾರಿಭಾಷಿಕ ಶಬ್ಧಗಳನ್ನು ಬಳಸಿಕೊಂಡು ತಮ್ಮ ಸೃಜನಶೀಲತೆ ಬೆರಸಿ ಅರ್ಥ ಕೊಡುವ ಹಾಗೆ ಬರೆಯುವುದಕ್ಕೆ ವಿಶೇಷವಾದ ಜಾಣ್ಮೆ ಮತ್ತು ತಾಳ್ಮೆ ಬೇಕಾಗುತ್ತದೆ. ಭೂಮಾಪಕರು ಸಾಮಾನ್ಯವಾಗಿ ರೈತರ ನೋವು ನಲಿವುಗಳನ್ನು ಹತ್ತಿರದಿಂದ ಕಾಣುವುದರಿಂದ ಸಾಹಿತ್ಯ ಕೃಷಿಗೆ ಬೇಕಾದ ವಸ್ತು ಮತ್ತು ವಿಷಯ, ರೂಪಕಗಳು ಹೇರಳವಾಗಿ ಸಿಗುತ್ತವೆ. ಇದನ್ನು ಸಮಯೋಚಿತವಾಗಿ ಬಳಸಿಕೊಂಡು, ಸರ್ವೆ ಕನ್ನಡದ ಬಳಕೆಯ ಜೊತೆಗೆ ಸೃಜನಶೀಲ ಸಾಹಿತ್ಯದ ರಚನೆಗೆ ಅವಕಾಶ ಸೃಷ್ಟಿಸಲಾಗಿದೆ. ಸರ್ವೆಯರ್ಗಳು ತಮ್ಮ ಅನುಭವ, ಆಡುನುಡಿ, ಸೃಜನಶೀಲತೆಗೆ ಅನುಗುಣವಾಗಿ ಅನೇಕ ಕವನಗಳನ್ನು ಲೇಖನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸೂಕ್ತವಾದ ಸಶಕ್ತವಾದವುಗಳನ್ನು ಆಯ್ದುಕೊಂಡು ಒಂದು ಕವನ ಸಂಕಲನದ ರೂಪದಲ್ಲಿ ತರುವ ಕ್ರಿಯೆ ಅರ್ಥಪೂರ್ಣವಾಗಿದೆ. ನನಗೆ ತುಂಬಾ ಮೆಚ್ಚುಗೆಯಾದ ಅನೇಕ ಕವನಗಳಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸಿ ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ.
ನವೀನ ಬೆಂಕಿಪೂರ ಅವರು ‘ತರಿಗೊಳಿಸಿದೆ’ ಎಂಬ ಕವಿತೆಯಲ್ಲಿ ತಮ್ಮ ಮನದಿಂಗಿತವನ್ನು ಹೀಗೆ ಹರಿಬಿಡುತ್ತಾರೆ.
ಇದ್ಯಾವ ಅಡಚಣೆ ಗೊತ್ತಿಲ್ಲ / ನಿನ್ನ ನೋಡಲು ಸಾಧ್ಯ
ಮಾತನಾಡಿಸಲು ಸಾಧ್ಯವಾಗುತ್ತಿಲ್ಲ
ತರತರದ ಕನಸು ಬಿತ್ತಿ / ತರಿಗೊಳಿಸಿದೆ ನೀ ಈ ಖುಷ್ಕಿ ಮನಸನು
ಮೊದಲ ಓದಿಗೆ ಸುಲಭ ಗ್ರಾಹ್ಯವಾಗದಿದ್ದರೂ ಸರ್ವೆ ಇಲಾಖೆಯಲ್ಲಿ ಬರುವ ಅಡಚಣೆಗಳ ಕುರಿತು ಮತ್ತು ಖುಷ್ಕಿ ಮತ್ತು ತರಿ ಎಂಬ ಭೂಮಿಯ ಫಲವತ್ತತೆಗೆ ಅನುಗುಣವಾಗಿ ವಿಂಗಡಿಸಿ ಮಾಡಿರುವ ಸೂಕ್ಷ್ಮವನ್ನು ಅರಿತಾಗ ಕವಿತೆಯ ಮಹತ್ವ ಅರಿವಾಗುತ್ತದೆ.
ಇನ್ನೂ ಶಿಲ್ಪಾ ಪಿ ಪಟ್ಟೆದ ಅವರು ತಮ್ಮ ಪ್ರೀತಿಯ ನೆಲಪ್ರತಿ ಕವಿತೆಯಲ್ಲಿ ಸರ್ವೆ ಶಬ್ಧಗಳು ಬಳಸಿಕೊಂಡು ರಚಿಸಿರುವ ಕವನ ಗಮನಾರ್ಹವಾದದು.
ಹೃದಯ ಎಂಬ ಜಮೀನಿನಲ್ಲಿ
ಶಾಮೀಲಾಗುವ ಬಯಕೆ
ಮಾಡದಿರು ವಜಾಯಿ
ಬಾಂದುಗಲ್ಲಾದರಾಗಿಯೂ ಉಳಿಯುವೆ
ನಿನ್ನೊಲವಿನ ವಸಲೆಯಲ್ಲಿ...
ಧನಂಜಯ ಸ ಬಡಿಗೇರ ಅವರ ‘ಪ್ರೀತಿ ನಮ್ಮ ರೀತಿ’ ಕವಿತೆಯಲ್ಲಿ ಪ್ರೇಯಸಿಯ ನೋಟದ ಕುರಿತು ತಮ್ಮಳಗೆ ಉಂಟಾದ ಸಂವೇದನೆಯನ್ನು ಕಡಿಮೆ ಪದಗಳಲ್ಲಿಯೇ ಹೀಗೆ ಕಟ್ಟಿಕೊಡುತ್ತಾರೆ.
ಲಂಬವಾದ ನಿನ್ನ ನೋಟದಿ
ಪೋಡಿ ಆಯಿತು ನನ್ನ ಹೃದಯ
ಚೈನಿನಂತೆ ಬಳಕುವ ನಿನಗೆ
ನಾನಾಗುವೆನು ಇನಿಯ
ನವೀನಕುಮಾರ ಗುದಿಗಪ್ಪ ಅವರ ‘ನಾವು ಭೂಮಾಪಕರು’ ಕವಿತೆಯಲ್ಲಿ ಭೂಮಾಪಕರ ಬದುಕು ಬವಣೆಯನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ಬಿಸಿಲೆಂಬ ವಿನಾಯಿತಿ ನಮಗಿಲ್ಲ / ದುಡಿಯುವೆವು ರಾತ್ರಿ ಹಗಲೆಲ್ಲ
ದೇಶದ ಗಡಿ ರಕ್ಷಣೆ ಮಾಡುವವನು ಸೈನಿಕ
ಜಮೀನಿನ ಗಡಿ ರಕ್ಷಣೆ / ಮಾಡುವವನು ಭೂಮಾಪಕ
ಮಮತಾ ರಾಮಾಪೂರ ಅವರ ‘ಶಾಮೀಲಾಗುವ ಬಯಕೆ’ ಕವಿತೆಯ ಪುಟ್ಟ ಸಾಲಿನಲ್ಲಿಯೇ ಹಿರಿದಾದ ಅರ್ಥವೊಂದನ್ನು ಹಿಡಿದಿದ್ದಾರೆ.
ನೀನೊಂಥರ ನೋಡಲು ಸಾಧ್ಯ/ ಅಳೆಯಲು ಸಾಧ್ಯವಾಗದ ಅಡಚಣೆ
ಆದರೂ ಸಂತಸ ತುಂಬುತಿದೆ ನಿನ್ನೆಡೆಗಿನ ಈ ಆಕರ್ಷಣೆ
ಮಂಜುನಾಥ ಮಲ್ಲಾಡದ ಅವರು ತಮ್ಮ ಆದರ್ಶ ಭೂಮಾಪಕ ಕವಿತೆಯಲ್ಲಿ ಇಡೀ ಭೂಮಾಪಕನ ಜಾಣ್ಮೆ, ನೈಪುಣ್ಯತೆ, ಸಾಹಸ ಪ್ರವೃತ್ತಿಯನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ.
ಧರೆಯ ಅದ್ಭುತಗಳೆಲ್ಲವು ಚಿತ್ರಿಸಿ
ನಕ್ಷೆಯ ರಚಿಸಿದ ಮುತ್ಸದ್ದಿ;
ಇವ ಕಾಣದ ತಾಣದ ಇಳೆಯೊಳಗಿಲ್ಲ
ಆ ಆದಿತ್ಯನಿಗಿವನೇ ಪ್ರತಿಸ್ಪರ್ಧಿ
ಪ್ರತಿಭಾ ಕುಲಕರ್ಣಿ ತಮ್ಮ ಪ್ರತಿಭೆಯನ್ನು ನಾಲ್ಕೇ ನಾಲ್ಕು ಸಾಲಿನ ಕವನದ ಮೂಲಕ ಸರ್ವೆ ಸಾಹಿತ್ಯದ ಸೃಜನಶೀಲತೆಯನ್ನು ತೆರೆದಿಟ್ಟಿದ್ದಾರೆ.
ಬಿರುಸಿನಿಂದ ನಡೆಯುತಿದೆ ಸಾಹಿತ್ಯದ ಹಂಗಾಮ
ಸಾಹಿತ್ಯದೊಂದಿಗೆ ಬಲು ಜೋರು
ಸರ್ವೆ ಪದಗಳ ಸಂಗಮ
ಹೊರಹೊಮ್ಮಿದ ಎಲ್ಲ ಲೇಖನ
ಕವಿತೆಗಳಿಗೆ ನನ್ನದೊಂದು ದೊಡ್ಡ ಸಲಾಮು
ಇದುವೇ
ಕನ್ನಡ ಸಾಹಿತ್ಯಕ್ಕೆ ನಮ್ಮೀ ಇಲಾಖೆಯ ಚಿಕ್ಕ ಇನಾಮು.
- ಇನ್ನೊಂದು ವಿಶೇಷತೆ ಎಂದರೆ ಇಲ್ಲಿನ ಬಹುತೇಕ ಕವಿಗಳು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅದರಲ್ಲೂ ಇಂಜಿನಿಯರಿಂಗ್ ಓದಿಕೊಂಡು ಬಂದವರು. ಕನ್ನಡ ನಾಡು-ನುಡಿಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತದ ಬಗ್ಗೆ ಅಪಾರ ಅಭಿರುಚಿ ಇರಿಸಿಕೊಂಡ ಇವರಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡಬಹುದಾಗಿದೆ.ನಿರಂತರ ಸಾಹಿತ್ಯಾಭ್ಯಾಸ, ಓದು, ವಿಚಾರ ಮಂಥನ ಸಾಗಿದ್ದೇ ಆದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕವಿ ಮನಸ್ಸುಗಳ ಸೇರ್ಪಡೆಯಾಗುತ್ತದೆ. ತಮಾಷೆ ಎನ್ನಿಸುವ ಕೆಲ ಬರಹಗಳು ಓದುಗರ ಮೊಗದಲ್ಲಿ ನಗು ಚಿಮ್ಮುಸುತ್ತಲೇ ಒಂದಿಷ್ಟು ಸಂದೇಶವನ್ನು ನೀಡುತ್ತದೆ. ಈ ಸಂಕಲನದಲ್ಲಿಯ ಪ್ರತಿ ಬರಹದಲ್ಲಿಯೂ ವೃತ್ತಿಯ ಕುರಿತು ಇರುವ ಬದ್ಧತೆ, ಗೌರವ, ಪ್ರಾಮಾಣಿಕತೆಯ ಅಂಶಗಳು ಎದ್ದು ಕಾಣುತ್ತಿದೆ. ಸರಕಾರಿ ಇಲಾಖೆಗಳಲ್ಲಿ ಬಳಸುವ ಕನ್ನಡ ಭಾಷೆಯ ಅದೆಷ್ಟೋ ಶಬ್ದಗಳು ಇನ್ನೂ ಜನಸಾಮಾನ್ಯರಿಗೆ ತಲುಪದಿರುವುದು ಕಂಡು ಬರುತ್ತದೆ. ಅದರಲ್ಲೂ ಸರ್ವೆ ಇಲಾಖೆಯಲ್ಲಿಯ ಪದಗುಚ್ಛಗಳು ಜನಸಾಮಾನ್ಯರಿಂದ ಬಹು ಅಂತರ ಕಾಯ್ದುಕೊಂಡಂತಿವೆ. ಉದಾಹರಣೆಗೆ ಲಾಂಬಿ, ರುಂದಿ, ವಸಲೆ, ಶಾಮೀಲು, ವಜಾಯಿ, ಕರ್ದಾ, ಪೊಕಳೆ ಹೀಗೆ ನೂರಾರು ಪದಗಳು ಬಳಕೆಯಾಗಿಲ್ಲ. ಬಹುತೇಕ ಪದಗಳು ಅನ್ಯದೇಶ್ಯ ಮೂಲದ್ದಾಗಿವೆ. ಈ ಪ್ರಯತ್ನದ ವಿಶೇಷತೆ ಎಂದರೆ ಸರ್ವೆ ಇಲಾಖೆಯಲ್ಲಿನ ಪದಗಳನ್ನು ಕನ್ನಡ ಸಾಹಿತ್ಯ ಸಾಗರದಲ್ಲಿ ಸೇರಿಸುವುದರೊಂದಿಗೆ ಹೊಸ ಕವಿಮನಸ್ಸುಗಳಿಗೆ ಇದು ವೇದಿಕೆಯಾಗಿದೆ.