ಸುಗ್ರೀವಾಜ್ಞೆಗೆ ವರಾತ ಮತ್ತು ಪೇಜಾವರ ಶ್ರೀಗಳ ನಿಲುವುಗಳ ಬಗ್ಗೆ ಒಂದಿಷ್ಟು
ಇದೀಗ ಪೇಜಾವರ ಸ್ವಾಮಿಯವರ ಅಸಲಿಯತ್ತು ಮತ್ತೊಮ್ಮೆ ಬಟಾಬಯಲಾಗಿದೆ. ಸುಪ್ರೀಂ ಕೋರ್ಟು ರಾಮ ಮಂದಿರ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30, 2018ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮೋದಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಸಂಸತ್ತಿನ ಅನುಮೋದನೆ ಪಡೆದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ತಮ್ಮ ಅಭಿಲಾಷೆ ಎಂದು ಹೇಳಿರುವುದಾಗಿ ಮರುದಿನದ ಪತ್ರಿಕೆಗಳಲ್ಲಿ ವರದಿಯಾಗಿದೆ. ಪೇಜಾವರರ ವರಾತ ಸಿಡಿಮಿಡಿಗೊಂಡಿರುವ ಸಂಘ ಪರಿವಾರದ ವಿವಿಧ ಮುಖಂಡರುಗಳ ವರಾತಕ್ಕೆ ಅನುಗುಣವಾಗಿಯೇ ಇದೆ.
ಬಿಕ್ಕಟ್ಟಿನ ಸಂದರ್ಭಗಳಲ್ಲಿ ವ್ಯಕ್ತಿಯ ಅಸಲಿ ಚಹರೆ ಬೆಳಕಿಗೆ ಬರುತ್ತದೆ ಎನ್ನಲಾಗುತ್ತದೆ. ಅಯೋಧ್ಯೆ ವಿವಾದ/ಬಾಬರಿ ಮಸೀದಿ ಧ್ವಂಸ/ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯವರ ನಿಲುವಿನ ಮಟ್ಟಿಗಂತೂ ಇದು ನಿಜವಾಗಿದೆ ಎನ್ನಬಹುದು. ಹಿಂದೂತ್ವ ಎಂಬ ರಾಜಕೀಯ ಸಿದ್ಧಾಂತವನ್ನು ಚಾಚೂತಪ್ಪದೆ ಅನುಸರಿಸುವ, ಮನುಸ್ಮತಿಯನ್ನು ಜಾರಿಗೊಳಿಸಲು ಬಯಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಪದಾಧಿಕಾರಿಯಾದ ಪೇಜಾವರರು ಅನೇಕ ವಿಷಯಗಳಲ್ಲಿ ಆರೆಸ್ಸೆಸ್‌ನ ಹಾಗೇ ವಿರೋಧಾಭಾಸಗಳ ದೊಡ್ಡ ಖಜಾನೆೆ. ತನಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎನ್ನುವ ಪೇಜಾವರರ ಮಾತುಗಳು ಕೂಡಾ ಸಂಘ ಪರಿವಾರದ ಒಳಗೊಂದು, ಹೊರಗೊಂದು ಎಂಬ ದ್ವಂದ್ವ ನಿಲುವುಗಳಿಗೆ ಅನುಗುಣವಾಗಿಯೇ ಇವೆ. ಸದ್ಯ ಉದಾಹರಣೆಯಾಗಿ ಇತ್ತೀಚಿನ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಹಕ್ಕೊತ್ತಾಯ, ‘ದಲಿತೋದ್ಧಾರ’ ಕಾರ್ಯಕ್ರಮಗಳು ಮತ್ತು ಪಂಕ್ತಿಭೇದ ಆಚರಣೆ ಎಂಬ ಮೂರು ವಿಷಯಗಳನ್ನಷ್ಟೆ ಎತ್ತಿಕೊಳ್ಳೋಣ.
ಪಂಕ್ತಿಭೇದ
2016ರ ಐತಿಹಾಸಿಕ ‘ಉಡುಪಿ ಚಲೊ’ ಜಾಥಾದ ವೇಳೆ ಕೃಷ್ಣ ಮಠದಲ್ಲಿ ಪಂಕ್ತಿಭೇದ ನಿಲ್ಲದಿದ್ದಲ್ಲಿ ಮುತ್ತಿಗೆ ಹಾಕಲಾಗುವುದೆಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪೇಜಾವರರು ಪ್ರಶ್ನೆಗೆ ನೇರವಾಗಿ ಉತ್ತರಿಸದೆ, ‘‘ಮಠಕ್ಕೆ ಬರುವ ಕೆಲವು ಸಂಪ್ರದಾಯಸ್ಥ ಬ್ರಾಹ್ಮಣರ ಅಪೇಕ್ಷೆಯ ಮೇರೆಗೆ ಅವರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಇದೆ’’ ಎಂಬ ಕೂದಲು ಸೀಳುವ ವಿವರಣೆ ನೀಡಿದ್ದರು. ಆದರೆ 2014ರಲ್ಲಿ ಇದೇ ಕೃಷ್ಣ ಮಠದಲ್ಲಿ ಓರ್ವ ಬಂಟ ಸಮುದಾಯದ ಮಹಿಳೆಯನ್ನು ಪಂಕ್ತಿಯಿಂದ ಎಬ್ಬಿಸಿರುವ ಘಟನೆ ನಡೆದಿರುವುದು ವಾಸ್ತವ.
‘ದಲಿತೋದ್ಧಾರ’
ಆರೆಸ್ಸೆಸ್‌ನ ಬೆನ್ನೆಲುಬಾಗಿರುವ ಹಿಂದೂತ್ವ ಸಿದ್ಧಾಂತದ ಜನಕ ವಿನಾಯಕ ದಾಮೋದರ ಸಾವರ್ಕರ್ ‘‘ಅಸ್ಪಶ್ಯರನ್ನು ಹಿಂದೂ ಧರ್ಮದ ತೆಕ್ಕೆಯೊಳಗೆ ಇರಿಸಿಕೊಳ್ಳದಿದ್ದಲ್ಲಿ ಮೇಲ್ಜಾತಿ ಹಿಂದೂಗಳಿಗೆ ಇನ್ನಷ್ಟು ದುರಂತ ಕಾದಿದೆಯಲ್ಲದೆ ಅವರಿಂದ ನಮಗೆ ಸಿಗುವ ಪ್ರಯೋಜನಗಳು ಇಲ್ಲವಾಗಲಿವೆ’’ ಎಂದು ಹೇಳಿದ್ದರು. ಹಿಂದೂತ್ವದ ಅಲ್ಪಸಂಖ್ಯಾತ ವಿರೋಧಿ ಕಾರ್ಯಾಚರಣೆಗಳಿಗೆ ದಲಿತ ಕಾಲಾಳುಪಡೆಯ ಭಾರೀ ಆವಶ್ಯಕತೆ ಇರುವುದನ್ನು ಮನಗಂಡಿದ್ದ ಸಾವರ್ಕರ್ ಆ ನಿಟ್ಟಿನಲ್ಲಿ ಅಸ್ಪಶ್ಯತೆ ವಿರುದ್ಧದ ಕಾರ್ಯಕ್ರಮಗಳು, ಅವರಿಗೆ ದೇವಸ್ಥಾನಗಳೊಳಗೆ ಮುಕ್ತ ಪ್ರವೇಶ ಕಲ್ಪಿಸಬೇಕೆಂದು ಹೇಳುವುದೇ ಮುಂತಾದ ಮೇಲ್ನೋಟಕ್ಕೆ ಪ್ರಾಮಾಣಿಕ ಅನ್ನಿಸುವಂತಹ ಕೆಲವೊಂದು ತಂತ್ರಗಳನ್ನು ಅಳವಡಿಸಿಕೊಂಡಿದ್ದರು. ಪೇಜಾವರರು ತಮ್ಮ ತಥಾಕಥಿತ ದಲಿತೋದ್ಧಾರದ ಕಾರ್ಯಕ್ರಮಗಳ ಭಾಗವಾಗಿ ನಡೆಸಿದ ದಲಿತ ಕೇರಿ ಭೇಟಿ ಇ್ಯಾದಿಗಳ ಅಸಲಿ ಹಿನ್ನೆಲೆ ಇದೇ ಆಗಿದೆ.
ರಾಮ ಮಂದಿರ ನಿರ್ಮಾಣ
ಬಾಬರಿ ಮಸೀದಿಯನ್ನು ಕೆಡವಿದ ಕಾಲದಲ್ಲಿ ಇತರ ಹಲವಾರು ಸಾಧುಸಂತರೊಂದಿಗೆ ಪೇಜಾವರರೂ ಅಯೋಧ್ಯೆಯಲ್ಲಿ ಉಪಸ್ಥಿತರಿದ್ದರು. ಅವರೆಲ್ಲರೂ ಅಲ್ಲಿದ್ದುದು ಆ ಮಾನವತಾ ವಿರೋಧಿ, ಸಂವಿಧಾನ ವಿರೋಧಿ ದುಷ್ಕೃತ್ಯವನ್ನು ತಡೆಯಲಲ್ಲ, ಅದನ್ನು ಹರಸಲು ಮತ್ತು ಹುರಿದುಂಬಿಸಲು! ‘ಆಪರೇಷನ್ ಜನ್ಮಭೂಮಿ’ ಹೆಸರಿನಲ್ಲಿ ಕೋಬ್ರಾಪೋಸ್ಟ್ ನಡೆಸಿದ್ದ ಕುಟುಕು ಕಾರ್ಯಾಚರಣೆಯೊಂದರ ವೇಳೆ ಈ ಸತ್ಯಾಂಶ ಹೊರಬಿದ್ದಿದೆ. ಆದಾಗ್ಯೂ ಇದನ್ನು ನಿರಾಕರಿಸಿದ ಪೇಜಾವರರು ತಾನು ಕರಸೇವಕರನ್ನು ತಡೆಯಲೆತ್ನಿಸುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದರು. ಅಲ್ಪಸಂಖ್ಯಾತರಿಂದ ಹೊರೆಕಾಣಿಕೆಯನ್ನು ಮಹದಾನಂದದಿಂದ ಸ್ವೀಕರಿಸುವ ಪೇಜಾವರ ಸ್ವಾಮಿಯವರು ಅಲ್ಪಸಂಖ್ಯಾತರ ವಿರುದ್ಧ ತನ್ನದೇ ಪರಿವಾರಿಗರು ನಡೆಸುವ ಅಸಂಖ್ಯಾತ ಅನ್ಯಾಯಗಳನ್ನು ತಡೆಯಲು ಏಕೆ ಮುತುವರ್ಜಿ ವಹಿಸುತ್ತಿಲ್ಲ ಎನ್ನುವ ಪ್ರಶ್ನೆಯಂತೂ ಹಾಗೇ ಉಳಿದಿತ್ತು. ಆದರೆ ಒಳಗೊಂದು, ಹೊರಗೊಂದು ಎನ್ನುವುದು ಎಷ್ಟು ದಿನ ತಾನೆ ಮುಂದುವರಿಯಲು ಸಾಧ್ಯ? ಸತ್ಯ ಎಂದಿಗೂ ಸತ್ಯವೇ ಅಲ್ಲವೆ! ಒಂದಲ್ಲ ಒಂದು ದಿನ ಹೊರಬಿದ್ದೇ ಬೀಳುತ್ತದೆ!
* ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆ ವೇಳೆ ಮಾತನಾಡಿದ ಮಾಜಿ ಬಿಜೆಪಿ ಸಂಸದ ಮಹಾಂತ್ ರಾಮ್ ವಿಲಾಸ್ ವೇದಾಂತಿ, 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲ್ಲಿ ಜಮಾಯಿಸಿದ್ದ ಲಕ್ಷಾಂತರ ಕರಸೇವಕರಿಗೆ ‘ಸಂಕಲ್ಪವಿಧಿ’ ಬೋಧಿಸುತ್ತಿದ್ದಾಗ ಉಪಸ್ಥಿತರಿದ್ದ ಸಾಧುಸಂತರಲ್ಲಿ (ಉಡುಪಿಯ ಶಂಕರಾಚಾರ್ಯ) ಪೇಜಾವರ ಸ್ವಾಮಿಯೂ ಒಬ್ಬರೆಂದು ತಿಳಿಸಿದ್ದಾರೆ.
* ಮಸೀದಿ ಧ್ವಂಸ ಪ್ರಕರಣದಲ್ಲಿ ಅಂದಿನ ಪ್ರಧಾನಿ ನರಸಿಂಹ ರಾವ್ ವಹಿಸಿದ ಪಾತ್ರದ ಕುರಿತು ರಾಮ್ ವಿಲಾಸ್ ವೇದಾಂತಿ ಹೀಗಂದಿದ್ದಾರೆ: ‘‘ನರಸಿಂಹ ರಾವ್ ಡಿಸೆಂಬರ್ 6ರ ಬೆಳಗ್ಗೆ 6 ಗಂಟೆಗೆ ನನಗೆ ಫೋನ್ ಮಾಡಿದರು...... ಅವರು 15 ದಿನಗಳ ಹಿಂದೆ ನನಗೆ ಕರೆಮಾಡಿ ವೇದಾಂತಿಜೀ ಏನಾಗಲಿದೆ? ಎಂದು ಕೇಳಿದ್ದರು...... ಕಟ್ಟಡದ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿರುವಿರಿ ಎಂದು ಕೇಳಿದರು...... ನಂತರ ಅದನ್ನು ಪೂರ್ತಿಯಾಗಿ ಕೆಡವಬೇಕೆಂದು ಹೇಳಿದರು.’’ ನರಸಿಂಹ ರಾವ್ ಪೇಜಾವರ ಸ್ವಾಮಿಯ ಶಿಷ್ಯರಾಗಿದ್ದರೆಂಬುದು ಇಡೀ ಜಗತ್ತಿಗೇ ತಿಳಿದಿದ್ದ ವಿಚಾರ.
* ಧ್ವಂಸಕೃತ್ಯದ ಪ್ರತ್ಯಕ್ಷದರ್ಶಿಯಾಗಿದ್ದ ಬಿಜೆಪಿಯ ಸಾಕ್ಷಿ ಮಹಾರಾಜ್ ಪ್ರಕಾರ ‘‘ಉಡುಪಿ ಶಂಕರಾಚಾರ್ಯ ಜಗದ್ಗುರು ವಿಶ್ವೇಶತೀರ್ಥಜೀ ಮಹಾರಾಜ್...... ಹಿಂದಿ ಅರಿಯದ ಮಂದಿಯನ್ನು ಅಲ್ಲಿ ಅಯೋಧ್ಯೆಯಲ್ಲಿ ಒಂದುಗೂಡಿಸಿದ್ದರು...... ಉಡುಪಿ ಶಂಕರಾಚಾರ್ಯರು ಮಸೀದಿಯ ಮುಖ್ಯದ್ವಾರದ ಮೇಲೆ ನಿಂತಿದ್ದರು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಂದ ಬಂದ ಕರಸೇವಕರು ಅಲ್ಲಿ ನೆರೆದಿದ್ದರು. ಅವರಿಗೆ ಹಿಂದಿ ಮಾತಾಡಲು ಬರುತ್ತಿರಲಿಲ್ಲ. ಕರಸೇವೆಯನ್ನು ಆರಂಭಿಸಿ ಮಸೀದಿಯ ಮೇಲೆ ಮೊದಲು ಹತ್ತಿದವರು ಇವರೇ....... (ಹೊ.ವೆ.) ಶೇಷಾದ್ರಿಯವರೂ ಅವರನ್ನು ತಡೆಯಲೆತ್ನಿಸಿದರು. ಆದರೆ ಉಡುಪಿ ಶಂಕರಾಚಾರ್ಯರು ತಮ್ಮ ಕನ್ನಡ ಭಾಷೆಯಲ್ಲಿ ಅದೇನೋ ‘ಕುಡ್ಸೇವ, ಕುಡ್ಸೇವ’ ಎನ್ನುತ್ತಾ ಅವರನ್ನೆಲ್ಲ ಪ್ರಚೋದಿಸುತ್ತಿದ್ದರು.’’
* 2015ರ ನವೆಂಬರ್ 22ರಂದು ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕನೂ, ರಾಮ ಜನ್ಮಭೂಮಿ ಹೋರಾಟದ ರೂವಾರಿಯೂ ಆಗಿದ್ದ ಅಶೋಕ್ ಸಿಂಘಾಲ್‌ಗೆ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರರು ರಾಮ ಜನ್ಮಭೂಮಿಯ ಹಿಂಸಾತ್ಮಕ ಹೋರಾಟವನ್ನು ಒಂದು ಶುದ್ಧ ಅಹಿಂಸಾತ್ಮಕ ಚಳವಳಿಯಾಗಿದ್ದ ಉಪ್ಪಿನ ಸತ್ಯಾಗ್ರಹದೊಂದಿಗೆ ಸಮೀಕರಿಸಿದ್ದರು. ‘‘ಗಾಂಧಿಯವರದ್ದು ಉಪ್ಪಿನ ಸತ್ಯಾಗ್ರಹವಾದರೆ ರಾಮ ಜನ್ಮಭೂಮಿ ಹೋರಾಟ ಸಕ್ಕರೆ ಸತ್ಯಾಗ್ರಹ’’ ಎಂದು ಹೇಳಿದ್ದ ಪೇಜಾವರರು ‘‘ಬಾಬರಿ ಮಸೀದಿಯನ್ನು ನೆಲಸಮ ಮಾಡಿದ್ದು ಸರಿಯಾಗಿಯೆ ಇತ್ತು, ಅದರಿಂದ ನಮಗೆ ಸಮಾಧಾನ ಆಗಿತ್ತು’’ ಎಂದು ಅದನ್ನು ಸಮರ್ಥಿಸಿಕೊಂಡಿದ್ದರು.
ಇದೀಗ ಪೇಜಾವರ ಸ್ವಾಮಿಯವರ ಅಸಲಿಯತ್ತು ಮತ್ತೊಮ್ಮೆ ಬಟಾಬಯಲಾಗಿದೆ. ಸುಪ್ರೀಂ ಕೋರ್ಟು ರಾಮ ಮಂದಿರ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30, 2018ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮೋದಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಸಂಸತ್ತಿನ ಅನುಮೋದನೆ ಪಡೆದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ತಮ್ಮ ಅಭಿಲಾಷೆ ಎಂದು ಹೇಳಿರುವುದಾಗಿ ಮರುದಿನದ ಪತ್ರಿಕೆಗಳಲ್ಲಿ ವರದಿಯಾಗಿದೆ. ಪೇಜಾವರರ ವರಾತ ಸಿಡಿಮಿಡಿಗೊಂಡಿರುವ ಸಂಘ ಪರಿವಾರದ ವಿವಿಧ ಮುಖಂಡರುಗಳ ವರಾತಕ್ಕೆ ಅನುಗುಣವಾಗಿಯೇ ಇದೆ.
ಈ ಹೊತ್ತು ಆರೆಸ್ಸೆಸ್ ಸಿಡಿಮಿಡಿಗೊಂಡಿರುವುದೇಕೆಂದರೆ ಅದರ ಪಾಲಿಗೆ ರಾಮ ಮಂದಿರ ನಿರ್ಮಾಣ ಕೇವಲ ಚುನಾವಣೆಗಳ ಕಾಲಕ್ಕಷ್ಟೆ ಸೀಮಿತವಾಗಿ ಸದಾ ಕೊತಕೊತ ಕುದಿಯುತ್ತಲೇ ಇರಬೇಕಿರುವ ಅಪ್ಪಟ ರಾಜಕೀಯ ವಿಚಾರ. ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಂದಿನಿಂದಲೂ ಇದು ಸಾಬೀತಾಗುತ್ತಾ ಬಂದಿದೆ. ಕೇಂದ್ರದಲ್ಲಿ ಅಂದು ವಾಜಪೇಯಿ ಸರಕಾರ ಇದ್ದಾಗ ಮಾತ್ರವಲ್ಲ, ಈಗಲೂ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿಯೂ ಮಂದಿರ ಕಟ್ಟದಿರುವುದು ಇದಕ್ಕೊಂದು ಬಲವಾದ ಪುರಾವೆಯಾಗಿದೆ. ಈಗ 2019ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಮೋದಿ ಸರಕಾರದ ಅಸಂಖ್ಯಾತ ವೈಫಲ್ಯಗಳು ಜನಸಾಮಾನ್ಯರ ದೈನಂದಿನ ಜೀವನವನ್ನು ತಟ್ಟುವುದರೊಂದಿಗೆ ನಿಧಾನಕ್ಕೆ ಅವರ ಮನಸ್ಸಿನಾಳಕ್ಕೂ ಇಳಿಯಲಾರಂಭಿಸಿವೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಂಘ ಪರಿವಾರಕ್ಕೆ ಜನರ ಗಮನವನ್ನು ಮೋದಿ ಸರಕಾರದ ದುರಾಡಳಿತದಿಂದ ಆಚೆ ಸೆಳೆಯಲೇಬೇಕಾದ ಅನಿವಾರ್ಯ ಎದುರಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ಇದುವರೆಗೆ ಹೊರಬಿದ್ದಿರುವ ಹಗರಣಗಳನ್ನು, ವೈಫಲ್ಯಗಳನ್ನು ಲೆಕ್ಕಹಾಕಲು ಹೊರಟರೆ ಹನುಮನ ಬಾಲಕ್ಕಿಂತಲೂ ಲಂಬವಾಗಬಹುದು! ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಫೇಲ್ ಹಗರಣ, ಬ್ಯಾಂಕುಗಳಿಗೆ ಕೋಟಿಗಟ್ಟಲೆ ಪಂಗನಾಮ ಹಾಕಿ ವಿದೇಶಗಳಿಗೆ ಪರಾರಿಯಾದ ನೀರವ್ ಮೋದಿಯಂಥವರ ಹಗರಣಗಳು, ರೂಪಾಯಿ ಬೆಲೆ ದಾಖಲೆ ಮಟ್ಟಕ್ಕೆ ಕುಸಿತ, ನೋಟು ರದ್ದತಿಯಿಂದಾಗಿ ಮುಚ್ಚಿದ ಲಕ್ಷಾಂತರ ಉದ್ದಿಮೆಗಳು, ಉದ್ಯೋಗ ಕಳೆದುಕೊಂಡ ಲಕ್ಷೋಪಲಕ್ಷ ಕಾರ್ಮಿಕರು, ಹಿಂದೆಂದೂ ಇರದಷ್ಟು ಹೆಚ್ಚಾಗಿರುವ ನಿರುದ್ಯೋಗದ ಪ್ರಮಾಣ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ಪ್ರತಿಯೊಬ್ಬನ ಜೇಬಿಗೆ 15 ಲಕ್ಷ ಇಳಿಬಿಡುವುದೇ ಮುಂತಾದ ಕನಸಾಗಿಯೇ ಉಳಿದ ಭರವಸೆಗಳು, ಗೊಂದಲದ ಗೂಡಾಗಿರುವ ಜಿಎಸ್‌ಟಿ, ಗಗನಕ್ಕೇರುತ್ತಿರುವ ಇಂಧನ ಮತ್ತು ಅವಶ್ಯಕ ವಸ್ತುಗಳ ಬೆಲೆಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚಿದ ಗುಂಪು ದಾಳಿಗಳು, ಶ್ರೀಮಂತರು, ಬಡವರ ನಡುವೆ ಹೆಚ್ಚಿದ ಅಸಮಾನತೆ, ಇನ್ನಷ್ಟು ಧನಿಕರಾಗಿರುವ ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್ ಕುಳಗಳು, ಸಂಪೂರ್ಣವಾಗಿ ವಿಫಲವಾಗಿರುವ ವಿದೇಶ ನೀತಿ............. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗಾಗಿ ಜನ ಇದನ್ನೆಲ್ಲ ಪ್ರಶ್ನಿಸದೆ ಮುಂದಿನ ಬಾರಿಯೂ ಬಿಜೆಪಿಗೇ ಮತ ಹಾಕುವಂತೆ ಮಾಡಲು ಆರೆಸ್ಸೆಸ್‌ಗೆ ಉಳಿದಿರುವ ಏಕೈಕ ಉಪಾಯವೆಂದರೆ ಮತದಾರರನ್ನು ಜಾತೀಯವಾಗಿ ಹಾಗೂ ಮತೀಯವಾಗಿ ಧ್ರುವೀಕರಿಸುವುದರೊಂದಿಗೆ ಮೋದಿಯವರಿಂದ ಜನಮರುಳು ಭಾಷಣ ಕುಟ್ಟಿಸುವುದು. ಅದೇ ರಣತಂತ್ರದ ಭಾಗವಾಗಿ ರಾಮ ಮಂದಿರ ವಿಷಯವನ್ನು ಕೆದಕಿ, ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಮೂಲಕ ಅವರ ಚಿತ್ತವನ್ನು ಬೇರೆ ದಿಕ್ಕಿಗೆ ತಿರುಗಿಸುವ ಯತ್ನ ಪ್ರಾರಂಭವಾಗಿದೆ. ಸಹಜವಾಗಿಯೇ ಆರೆಸ್ಸೆಸ್‌ನ ಕಟ್ಟಾಳು ಪೇಜಾವರರೂ ತಮ್ಮ ಮಾತೃ ಸಂಘಟೆಯ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
ಒಂದು ವೇಳೆ ಸರಕಾರ ಸುಗ್ರೀವಾಜ್ಞೆ ಹೊರಡಿಸಿತು ಎಂದಿಟ್ಟುಕೊಂಡರೂ 6 ತಿಂಗಳೊಳಗಾಗಿ ಅದಕ್ಕೆ ಸಂಸತ್ತಿನ ಅನುಮೋದನೆ ಪಡೆಯಬೇಕಿರುವುದು ಒಂದಾದರೆ, ಎರಡನೆಯದಾಗಿ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಲೂಬಹುದಾಗಿದೆ. ಏಕೆಂದರೆ ಶಾಸಕಾಂಗ ರಚಿಸುವ ಇಂತಹ ಕಾನೂನುಗಳನ್ನು ಸ್ವತಂತ್ರ ನ್ಯಾಯಾಂಗದ ಪರಿಶೀಲನೆಗೆ ಒಡ್ಡಬೇಕಾಗುತ್ತದೆಂದು ಎಲ್ಲದಕ್ಕಿಂತಲೂ ಮಿಗಿಲಾಗಿರುವ ಸಂವಿಧಾನ ಹೇಳುತ್ತದೆ. ರಾಷ್ಟ್ರಪತಿ ಮತ್ತು ನ್ಯಾಯಾಂಗದ ಮಧ್ಯೆ ನೇರ ಸಂಘರ್ಷಕ್ಕೆ ಕಾರಣವಾಗಲಿರುವ ಈ ವಿಚಾರ ಖಂಡಿತವಾಗಿಯೂ ಆರೆಸ್ಸೆಸ್‌ನ ಸೈದ್ಧಾಂತಿಕರ ಗಮನಕ್ಕೆ ಬಂದಿರದೆ ಇರಲಿಕ್ಕಿಲ್ಲ. ಆದಾಗ್ಯೂ ಪೇಜಾವರರನ್ನೂ ಒಳಗೊಂಡಂತೆ ಇಡೀ ಸಂಘ ಪರಿವಾರ ಸುಗ್ರೀವಾಜ್ಞೆಗೆ ತಗಾದೆ ಮಾಡುತ್ತಿದೆ ಎಂದರೆ ಅವರಿಗೆಲ್ಲ ರಾಮ ಮಂದಿರ ನಿರ್ಮಾಣದ ವಿವಾದ ಬೇಕಿರುವುದು ಕೇವಲ ರಾಜಕೀಯ ಬೇಳೆ ಬೇಯಿಸುವುದಕ್ಕಾಗಿ ಎನ್ನುವುದು ಮತ್ತೊಮ್ಮೆ ಸಾಬೀತಾಗುವುದಿಲ್ಲವೇ?
*********
ಆಕರಗಳು:
Destruction of the Babri Masjid, ಎ.ಜಿ.ನೂರಾನಿ
ಸಾವರ್ಕರ್ - ಸತ್ಯ ಮತ್ತು ಮಿಥ್ಯ, ಶಂಸುಲ್ ಇಸ್ಲಾಂ