ನಿಷ್ಕ್ರಿಯ ಕಂಪೆನಿಯಲ್ಲಿ ಡಸ್ಸಾಲ್ಟ್ ಹೂಡಿಕೆ: ಅನಿಲ್ ಅಂಬಾನಿ ಕೊಳ್ಳೆ ಹೊಡೆದ ಲಾಭವೆಷ್ಟು?
ಫ್ರಾನ್ಸ್‌ನ ಪ್ರಮುಖ ರಕ್ಷಣಾ ಕಂಪೆನಿಯಾಗಿರುವ ಡಸ್ಸಾಲ್ಟ್, ತನ್ನ ಜಂಟಿ ಸಹಭಾಗಿತ್ವದ ಕಂಪೆನಿಯಂತೆ, ಅನಿಲ್ ಅಂಬಾನಿಯವರ ಶೂನ್ಯ ಆದಾಯದ, ಮತ್ತೊಂದು ನಷ್ಟದಾಯಕ ಕಂಪೆನಿಯಲ್ಲಿ 2017ರಲ್ಲಿ ಸುಮಾರು 40 ದಶಲಕ್ಷ ಯೂರೊಗಳನ್ನು ಹೂಡಿಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಈ ಹೂಡಿಕೆಯಿಂದಾಗಿ ಅಂಬಾನಿ ಸಮೂಹದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ 284 ಕೋಟಿ ರೂಪಾಯಿ ದಿಢೀರ್ ಲಾಭ ಗಳಿಸಿದೆ.
ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಮತ್ತು ಅನಿಲ್ ಅಂಬಾನಿಯವರ ರಿಲಯನ್ಸ್ ಉದ್ಯಮ ಸಮೂಹ ನಡುವಿನ ಜಂಟಿ ಸಹಭಾಗಿತ್ವ ಕಂಪೆನಿ ರಚನೆ ಸಂದರ್ಭದಲ್ಲಿ ವಾಣಿಜ್ಯೇತರ ಅಂಶಗಳು ಕೆಲಸ ಮಾಡಿವೆ ಎಂಬ ಆರೋಪಗಳ ನಡುವೆಯೇ, ಫ್ರಾನ್ಸ್ ಹಾಗೂ ಭಾರತದಲ್ಲಿ ಸಲ್ಲಿಕೆಯಾಗಿರುವ ಕಾನೂನುಬದ್ಧ ಹೇಳಿಕೆಯಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಫ್ರಾನ್ಸ್ ನ ಪ್ರಮುಖ ರಕ್ಷಣಾ ಕಂಪೆನಿಯಾಗಿರುವ ಡಸ್ಸಾಲ್ಟ್, ತನ್ನ ಜಂಟಿ ಸಹಭಾಗಿತ್ವದ ಕಂಪೆನಿಯಂತೆ, ಅನಿಲ್ ಅಂಬಾನಿಯವರ ಶೂನ್ಯ ಆದಾಯದ, ಮತ್ತೊಂದು ನಷ್ಟದಾಯಕ ಕಂಪೆನಿಯಲ್ಲಿ 2017ರಲ್ಲಿ ಸುಮಾರು 40 ದಶಲಕ್ಷ ಯೂರೊಗಳನ್ನು ಹೂಡಿಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಈ ಹೂಡಿಕೆಯಿಂದಾಗಿ ಅಂಬಾನಿ ಸಮೂಹದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ 284 ಕೋಟಿ ರೂ. ದಿಢೀರ್ ಲಾಭ ಗಳಿಸಿದೆ. ಈ ಕಂಪೆನಿ ತನ್ನ ಸಹವರ್ತಿ ಕಂಪೆನಿಯಾದ ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್ ಲಿಮಿಟೆಡ್ (ಆರ್‌ಎಡಿಎಲ್) ಷೇರುಗಳನ್ನು ಪ್ರಿಮಿಯಂನೊಂದಿಗೆ ಮಾರಾಟ ಮಾಡಲು ಸಾಧ್ಯವಾಗಿದೆ.
ಆರ್‌ಎಡಿಎಲ್ ಸ್ಟೇಕ್‌ನ ಮೌಲ್ಯಮಾಪನ ಹೇಗೆ ನಡೆದಿದೆ ಅಥವಾ ಲಿಸ್ಟೆಡ್ ಅಲ್ಲದ, ಯಾವುದೇ ಆದಾಯ ಇಲ್ಲದ, ಡಸ್ಸಾಲ್ಟ್ ವ್ಯವಹಾರಕ್ಕೆ ಸಂಬಂಧವೇ ಇಲ್ಲದ ಕಂಪೆನಿಯೊಂದರ ಷೇರನ್ನು ಡಸ್ಸಾಲ್ಟ್ ದೊಡ್ಡ ಪ್ರಮಾಣದಲ್ಲಿ ಏಕೆ ಖರೀದಿ ಮಾಡಿದೆ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ. ಎಡಿಎಜಿ ಸಮೂಹ ಕಂಪೆನಿಯಾದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸಲ್ಲಿಸಿರುವ ಹೇಳಿಕೆಯಂತೆ, ಸಂಪೂರ್ಣ ಮಾಲಕತ್ವದ ಸಹವರ್ತಿ ಕಂಪೆನಿಯಾದ ಆರ್‌ಎಡಿಎಲ್‌ನ ಶೇ. 34.7 ಷೇರುಗಳನ್ನು ಡಸ್ಸಾಲ್ಟ್ ಏವಿಯೇಶನ್‌ಗೆ 2017-18ನೇ ಹಣಕಾಸು ವರ್ಷದಲ್ಲಿ ಮಾರಾಟ ಮಾಡಿದೆ. ಆದರೆ ಈ ಮಾರಾಟದ ಷರತ್ತುಗಳು ತಿಳಿದುಬಂದಿಲ್ಲ. ಆದರೆ ತಲಾ 10 ರೂಪಾಯಿ ಮುಖಬೆಲೆಯ 24,83,923 ಷೇರುಗಳ ಮಾರಾಟದಿಂದ ಕಂಪೆನಿಗೆ 284.19 ಕೋಟಿ ರೂ. ಲಾಭ ಬಂದಿದೆ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ.
2017ರ ಮಾರ್ಚ್ ಕೊನೆಗೆ ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್ 10.35 ಲಕ್ಷ ರೂಪಾಯಿ ನಷ್ಟವನ್ನು ದಾಖಲಿಸಿತ್ತು ಹಾಗೂ ಕೇವಲ ಆರು ಲಕ್ಷ ರೂಪಾಯಿ ಆದಾಯ ಹೊಂದಿತ್ತು. 2016ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಕಂಪೆನಿಯ ಆದಾಯ ಶೂನ್ಯವಾಗಿತ್ತು ಹಾಗೂ ಒಂಬತ್ತು ಲಕ್ಷ ರೂಪಾಯಿ ನಷ್ಟ ದಾಖಲಾಗಿತ್ತು.
ಸಮೂಹ ಮಾಲಕತ್ವದ ಸಹವರ್ತಿ ಕಂಪೆನಿಗಳಲ್ಲಿ ಈ ಕಂಪೆನಿ ಪಾಲು ಹೊಂದಿತ್ತು. ಈ ಪೈಕಿ ಬಹುತೇಕ ಕಂಪೆನಿಗಳು ನಷ್ಟದಾಯಕ ಕಂಪೆನಿಗಳಾಗಿದ್ದು, 2009ರಲ್ಲಿ ಕೇವಲ 63 ಕೋಟಿ ರೂಪಾಯಿಗೆ ಮಹಾರಾಷ್ಟ್ರ ಸರಕಾರ ಮಂಜೂರು ಮಾಡಿದ ವಿಮಾನ ನಿಲ್ದಾಣ ಯೋಜನೆಗಳಾಗಿದ್ದವು. 2015ರ ಅಕ್ಟೋಬರ್‌ನಲ್ಲಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿಯಾಗದಿರುವ ಹಿನ್ನೆಲೆಯಲ್ಲಿ ಇವುಗಳನ್ನು ವಾಪಸ್ ಪಡೆಯಲು ಸರಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ಮತ್ತು ಸಚಿವರು ಅಭಿಪ್ರಾಯಪಟ್ಟಿದ್ದರು. ಕಂಪೆನಿ ಈ ವಿಮಾನ ನಿಲ್ದಾಣಗಳ ಪಾಲಿನಿಂದ ಹೊರಬರಲು ಬಯಸಿದೆ ಎನ್ನಲಾಗಿತ್ತು. ಆದರೆ 2017ರ ಜನವರಿಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಅದು ತನ್ನ ನಿಲುವು ಬದಲಿಸಿತ್ತು.
ವಿಚಿತ್ರವೆಂದರೆ, ಆರ್‌ಎಡಿಎಲ್ ಅಧೀನದ ಯೋಜನೆಗಳ ಪ್ರಗತಿ ಬಗ್ಗೆ ಅತೃಪ್ತಿ ಹೊಂದಿದ್ದ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿ (ಎಂಎಡಿಸಿ), ವಿಮಾನ ನಿಲ್ದಾಣಗಳನ್ನು ವಾಪಸ್ ಪಡೆಯುವ ಸಿದ್ಧತೆಯಲ್ಲಿದ್ದ ನಡುವೆಯೇ, ಅದೇ ವರ್ಷ ದಿಢೀರನೇ ಮತ್ತೊಂದು ಕಂಪೆನಿಗೆ 289 ಎಕರೆ ಜಮೀನು ಮಂಜೂರು ಮಾಡಿತು.
ಡಸ್ಸಾಲ್ಟ್ ಕಂಪೆನಿಯ 2017ರ ವಾರ್ಷಿಕ ವರದಿಯಲ್ಲಿ, ಕಂಪೆನಿಯು ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್ ನ ಶೇ. 34.7ರಷ್ಟು ಷೇರು ಸೇರಿದಂತೆ ನಾನ್ ಲಿಸ್ಟೆಡ್ ಸೆಕ್ಯುರಿಟಗಳನ್ನು ಕಂಪೆನಿ ಖರೀದಿಸಿದೆ ಎಂದು ವಿವರಿಸಲಾಗಿತ್ತು. ವಿಮಾನ ನಿಲ್ದಾಣಗಳ ಅಭಿವೃದ್ಧಿ, ನಿರ್ವಹಣೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಏರ್‌ಪೋರ್ಟ್ ಲಿಮಿಟೆಡ್‌ನ ಶೇ. 35ರಷ್ಟು ಷೇರು ಖರೀದಿಸುವ ಮೂಲಕ ನಾವು ಭಾರತದಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದೇವೆ ಎಂದು ವರದಿಯಲ್ಲಿ ಹೇಳಲಾಗಿದೆ.
ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ವೆಬ್‌ಸೈಟ್‌ನಲ್ಲಿ ಹಾಕಲಾದ ರಿಲಯನ್ಸ್ ಏರ್‌ಪೋರ್ಟ್ಸ್‌ನ ವಾರ್ಷಿಕ ವರದಿಯಲ್ಲಿ, ಡಸ್ಸಾಲ್ಟ್ ಏವಿಯೇಶನ್ ಇದೀಗ ನಮ್ಮ ಕಂಪೆನಿಯ ಶೇ. 34.79 ಸಾಮಾನ್ಯ ಷೇರುಗಳನ್ನು ಹೊಂದಿದೆ ಎಂದು ವಿವರಿಸಿತ್ತು. ಆದರೆ ಈ ಈಕ್ವಿಟಿ ಷೇರುಗಳ ಷರತ್ತುಗಳು ಹಾಗೂ ಹಕ್ಕುಗಳ ಬಗ್ಗೆ ವಿವರಣೆ ನೀಡುವ ಕಲಂ ಖಾಲಿ ಬಿಡಲಾಗಿತ್ತು.
ಈ ವಹಿವಾಟಿನ ಬಗ್ಗೆ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ವಾರ್ಷಿಕ ವರದಿಯಲಲಿ ಪರೋಕ್ಷ ಉಲ್ಲೇಖವಿದ್ದು, ಎಕ್ಸೆಪ್ಷನಲ್ ಐಟಮ್ಸ್ ಶೀರ್ಷಿಕೆಯಡಿ ನೋಟ್ 43ರಲ್ಲಿ ಈ ವಿವರ ನೀಡಲಾಗಿದೆ. ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್ ಲಿಮಿಟೆಡ್‌ನ ಹೂಡಿಕೆ ಮಾರಾಟದಿಂದ 284.19 ಕೋಟಿ ರೂ. ಲಾಭ ಬಂದಿದೆ ಎಂದು ಹೇಳಲಾಗಿದೆ.
ಆರ್‌ಎಡಿಎಲ್ ಸೆಕ್ಯುರಿಟಿಗಳ ನಿವ್ವಳ ಬುಕ್ ವ್ಯಾಲ್ಯೂ 39,962,000 ಯೂರೊ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ರಫೇಲ್‌ಗಾಗಿ ರಿಲಯನ್ಸ್ ಜತೆ ಮಾಡಿಕೊಂಡ ಜಂಟಿ ಸಹಭಾಗಿತ್ವದ ಕಂಪೆನಿಯಾದ ಡಿಆರ್‌ಎಎಲ್‌ನಲ್ಲಿ ಸೆಕ್ಯುರಿಟಿಗಳ ನಿವ್ವಳ ಬುಕ್ ವ್ಯಾಲ್ಯೂ 96,2000 ಯೂರೊ ಎಂದು ನಮೂದಿಸಿ, ಇದು ಬೆಳೆಯುವ ಸಾಧ್ಯತೆ ಇದೆ ಎಂದು ವಿವರಿಸಲಾಗಿದೆ.
ಅನಿಲ್ ಅಂಬಾನಿ ಉದ್ಯಮ ಸಮೂಹದ ಜತೆಗೆ ಮಾಡಿಕೊಂಡ ಜಂಟಿ ಸಹಭಾಗಿತ್ವದ ಕಂಪೆನಿಯಾದ ಡಸ್ಸಾಲ್ಟ್ ರಿಲಯನ್ಸ್ ಏರೊಸ್ಪೇಸ್ ಲಿಮಿಟೆಡ್‌ನಲ್ಲಿ 70 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ಡಸ್ಸಾಲ್ಟ್ ಸಿಇಒ ಎರಿಕ್ ಟ್ರಪೀರ್ ಇತ್ತೀಚೆಗೆ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.
ಆದರೆ ಡಸ್ಸಾಲ್ಟ್ ಏವಿಯೇಶನ್ ಫ್ರಾನ್ಸ್‌ನಲ್ಲಿ ಸಲ್ಲಿಸಿದ ಹೇಳಿಕೆಯಲ್ಲಿ, ಈಕ್ವಿಟಿಯಲ್ಲಿ ಡಸ್ಸಾಲ್ಟ್ 22 ಕೋಟಿ ರೂಪಾಯಿ ಹೂಡಿಕೆ ಮಾಡುವ ಜತೆಗೆ, 40 ಲಕ್ಷ ಯೂರೊ ಮೊತ್ತವನ್ನು ಜಂಟಿ ಸಹಭಾಗಿತ್ವದ ಕಂಪೆನಿಗೆ ಸಾಲದ ರೂಪದಲ್ಲಿ ನೀಡಲಾಗಿದೆ ಎಂದು ವಿವರಿಸಲಾಗಿದೆ. ಇದು ಭಾರತೀಯ ರೂಪಾಯಿಯಲ್ಲಿ 32 ಕೋಟಿ ಆಗುತ್ತದೆ. ಅನಿಲ್ ಅಂಬಾನಿ ಸಮೂಹದ ಮೂಲಗಳು ‘ದ ವೈರ್’ಗೆ ನೀಡಿದ ಮಾಹಿತಿಯಂತೆ ಈ ಹಣವನ್ನು ಡಿಆರ್‌ಎಎಲ್ ಮಿಹಾನ್‌ನಲ್ಲಿ ಹ್ಯಾಂಗರ್‌ಗಾಗಿ ಪಾವತಿಸಿದೆ. ಈ ಹಣವನ್ನು ಆರ್‌ಎಡಿಎಲ್‌ನ ಶೇ. 35ರಷ್ಟು ಷೇರುಗಳನ್ನು ಖರೀದಿಸಲು ಈ ಹಣ ವೆಚ್ಚ ಮಾಡಲಾಗಿದೆ ಎಂದು ಟ್ರಪೀರ್ ತಮ್ಮ ಸಂದರ್ಶನದಲ್ಲಿ ಹೇಳಿಲ್ಲ.
ಭೂಸ್ವಾಧೀನ ಹೇಗೆ?
ಪ್ರಧಾನಿ ನರೇಂದ್ರ ಮೋದಿ, ರಫೇಲ್ ಒಪ್ಪಂದವನ್ನು 2015ರ ಎಪ್ರಿಲ್ 10ರಂದು ಘೋಷಿಸಿದ್ದರು. 2015ರ ಜುಲೈನಲ್ಲಿ ರಿಲಯನ್ಸ್ ಏರೊಸ್ಟ್ರಕ್ಚರ್, ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿಗೆ ಅರ್ಜಿ ಸಲ್ಲಿಸಿ, ನಾಗ್ಪುರದ ಮಿಹಾನ್ ಎಸ್‌ಇಝೆಡ್‌ನಲ್ಲಿ ಜಮೀನು ಮಂಜೂರು ಮಾಡುವಂತೆ ಕೋರಿತು. 2015ರ ಆಗಸ್ಟ್ ನಲ್ಲಿ 63 ಕೋಟಿ ರೂ.ಗೆ 289 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಆದರೆ ಕಂಪೆನಿ ಕೇವಲ 104 ಎಕರೆ ಜಮೀನನ್ನು ಮಾತ್ರ ಪಡೆದಿದೆ. 2015ರಲ್ಲಿ ಈ ಜಮೀನು ಮಂಜೂರಾಗಿದ್ದರೆ, ರಿಲಯನ್ಸ್ ಏರೊಸ್ಟ್ರಕ್ಚರ್ ತಾನು ಪಾವತಿಸಬೇಕಾದ ಮೊತ್ತವನ್ನು ಪಾವತಿಸಿರುವುದು 2017ರ ಜುಲೈ 13ರಂದು. ಇದಕ್ಕೂ ಮುನ್ನ ಹಣ ಪಾವತಿಯ ಹಲವು ಗಡುವುಗಳನ್ನು ರಿಲಯನ್ಸ್ ಮೀರಿತ್ತು.
ರಿಲಯನ್ಸ್ ಏರೊಸ್ಟ್ರಕ್ಚರ್ ಆರಂಭವಾದದ್ದು 2015ರ ಏಪ್ರಿಲ್ 24ರಂದು. ಅಂದರೆ, ರಫೇಲ್ ಒಪ್ಪಂದವನ್ನು ಮೋದಿ ಘೋಷಿಸಿದ ಕೆಲ ದಿನಗಳ ಬಳಿಕ. ಇದಕ್ಕೆ 2016ರಲ್ಲಿ ರಕ್ಷಣಾ ಸಚಿವಾಲಯ, ಯುದ್ಧವಿಮಾನಗಳ ಉತ್ಪಾದನೆಗೆ ಲೈಸನ್ಸ್ ನೀಡಿದೆ. ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಈ ಲೈಸನ್ಸ್ ನೀಡಲಾಗಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ.
2017ನೇ ಹಣಕಾಸು ವರ್ಷದ ಹೇಳಿಕೆ ಸಲ್ಲಿಕೆಯಿಂದ ತಿಳಿದುಬರುವಂತೆ, ರಿಲಯನ್ಸ್ ಏರೊಸ್ಟ್ರಕ್ಚರ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನಿಂದ 89.45 ಕೋಟಿ ರೂಪಾಯಿಗಳ ಇಂಟರ್-ಕಾರ್ಪೊರೇಟ್ ಠೇವಣಿಯನ್ನು ಪಡೆದಿದೆ. ಇದೇ ವರ್ಷ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್, ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್‌ನಲ್ಲಿ ಹೊಂದಿದ್ದ ಷೇರುಗಳ ಪೈಕಿ ಶೇ. 34.79 ಷೇರುಗಳನ್ನು ಡಸ್ಸಾಲ್ಟ್ ಏವಿಯೇಶನ್ ಖರೀದಿಸಿದೆ. ಈ ಅನುಕ್ರಮಣಿಕೆಯಿಂದ ಸ್ಪಷ್ಟವಾಗಿ ತಿಳಿಯುವಂತೆ ರಿಲಯನ್ಸ್ ಏರೊಸ್ಟ್ರಕ್ಚರ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನಿಂದ ಪಡೆದ ಹಣದ ಪೈಕಿ 38 ಕೋಟಿ ರೂಪಾಯಿಗಳನ್ನು ಜಮೀನು ಮಂಜೂರು ಮಾಡಿದ ಎಂಎಡಿಸಿಗೆ ಪಾವತಿಸಿದೆ. ಈ ಮೊತ್ತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಬಾಕಿ ಇತ್ತು. ರಿಲಯನ್ಸ್ ಏರೊಸ್ಟ್ರಕ್ಚರ್ ಸಲ್ಲಿಸಿದ ಹೇಳಿಕೆಯಿಂದ ತಿಳಿದುಬರುವಂತೆ, ಕಂಪೆನಿಯ ನಿವ್ವಳ ಮೌಲ್ಯ ಸಂಪೂರ್ಣ ಕ್ಷೀಣಿಸಿದೆ. ಆದರೆ ಪ್ರವರ್ತಕ ಕಂಪೆನಿಯ ಹಣಕಾಸು ನೆರವಿನಿಂದಾಗಿ ಮುಂದುವರಿದಿದೆ. 2017ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್ ಏರೊಸ್ಟ್ರಕ್ಚರ್ 13 ಕೋಟಿ ರೂಪಾಯಿ ನಷ್ಟ ದಾಖಲಿಸಿತ್ತು. ಅದಕ್ಕೂ ಹಿಂದಿನ ವರ್ಷ 27 ಕೋಟಿ ರೂಪಾಯಿ ನಷ್ಟ ದಾಖಲಿಸಿತ್ತು.
ಡಸ್ಸಾಲ್ಟ್ ಕಂಪೆನಿ ಎಡಿಎಜಿಯನ್ನು ಪಾಲುದಾರ ಕಂಪೆನಿಯಾಗಿ ಆಯ್ಕೆ ಮಾಡಲು ಮುಖ್ಯ ಕಾರಣವೆಂದರೆ ಆ ಕಂಪೆನಿ ವಿಮಾನ ನಿಲ್ದಾಣದ ಬಳಿಯಲ್ಲೇ ಜಮೀನು ಹೊಂದಿರುವುದು ಎಂದು ಸಿಎನ್‌ಬಿಸಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಡಸ್ಸಾಲ್ಟ್ ಸಿಇಒ ಎರಿಕ್ ಟ್ರಪೀರ್ ಸ್ಪಷ್ಟಪಡಿಸಿದ್ದರು. ಆದರೆ ವಾಸ್ತವವಾಗಿ ರಫೇಲ್ ಯುದ್ಧವಿಮಾನ ಸಂಬಂಧ ಡಸ್ಸಾಲ್ಟ್, ರಿಲಯನ್ಸ್ ಜತೆ ಸಹಭಾಗಿತ್ವ ಹೊಂದುವ ಕುರಿತ ಒಡಂಬಡಿಕೆ ಮಾಡಿಕೊಂಡ ಬಳಿಕ ರಾಜ್ಯ ಸರಕಾರ ರಿಲಯನ್ಸ್‌ಗೆ ಜಮೀನು ಮಂಜೂರು ಮಾಡಿದೆ.
ಡಸ್ಸಾಲ್ಟ್ ಪತ್ರಿಕಾ ಹೇಳಿಕೆಯ ಪ್ರಕಾರ, ರಿಲಯನ್ಸ್ ಏರೊಸ್ಟ್ರಕ್ಚರ್ ಮತ್ತು ಡಸ್ಸಾಲ್ಟ್‌ನ ಜಂಟಿ ಸಹಭಾಗಿತ್ವದ ಕಂಪೆನಿಯಾದ ಡಸ್ಸಾಲ್ಟ್ ರಿಲಯನ್ಸ್ ಏರೊಸ್ಪೇಸ್ ಲಿಮಿಟೆಡ್ (ಡಿಆರ್‌ಎಎಲ್) ಆರಂಭವಾಗಿರುವುದು 2017ರಲ್ಲಿ. ಆದರೆ ಉಭಯ ಕಂಪೆನಿಗಳ ಜತೆಗಿನ ಸಂಬಂಧ ಮಾತ್ರ 2015ರ ಎಪ್ರಿಲ್‌ನಷ್ಟು ಹಿಂದಕ್ಕೆ ಹೋಗುತ್ತದೆ.
2018ರ ಜುಲೈ 12ರಂದು ಡಿಆರ್‌ಎಲ್, ರಿಜಿಸ್ಟ್ರಾರ್ ಆಫ್ ಕಂಪೆನೀಸ್‌ನಲ್ಲಿಸಲ್ಲಿಸಿದ ಭೂ ದೇಣಿಗೆ ಒಪ್ಪಂದದ ಪ್ರಕಾರ, ರಿಲಯನ್ಸ್ ಏರೊಸ್ಟ್ರಕ್ಚರ್, ಡಿಆರ್‌ಎಎಲ್ ಮತ್ತು ಡಸ್ಸಾಲ್ಟ್ ಏವಿಯೇಶನ್ ನಡುವೆ ಸಬ್‌ಲೀಸ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಅನ್ವಯ, ಜಂಟಿ ಸಹಭಾಗಿತ್ವ ಕಂಪೆನಿಯ ಪಾಲುದಾರ ಕಂಪೆನಿಯಾಗಿರುವ ಡಿಆರ್‌ಎಎಲ್, ರಿಲಯನ್ಸ್ ಗೆ 22.8 ಕೋಟಿ ರೂಪಾಯಿಗಳನ್ನು ಕಂತಾಗಿ ನೀಡಬೇಕು. ಇದಕ್ಕೆ ಪ್ರತಿಯಾಗಿ ಜಂಟಿ ಸಹಭಾಗಿತ್ವದ ಕಂಪೆನಿಗೆ 31 ಎಕರೆ ಜಮೀನನ್ನು ಭೋಗ್ಯಕ್ಕೆ ನೀಡಲಾಗುತ್ತದೆ. ಈ ಸಾಲವನ್ನು ನಗದೇತರ ಪರಿಗಣನೆಯಾಗಿ ಪರಿವರ್ತಿಸಲಾಗಿದ್ದು, ಕಂಪೆನಿಯ 22.8 ಲಕ್ಷ ಈಕ್ವಿಟಿ ಷೇರುಗಳನ್ನು ನೀಡಲಾಗಿದೆ. ಆದ್ದರಿಂದ ಮಹಾರಾಷ್ಟ್ರ ಸರಕಾರ ಮಂಜೂರು ಮಾಡಿದ ಭೂಮಿಯನ್ನು ಜಂಟಿ ಸಹಭಾಗಿತ್ವದ ಕಂಪೆನಿಯಲ್ಲಿ ರಿಲಯನ್ಸ್ ಈಕ್ವಿಟಿ ಹಕ್ಕಿಗಾಗಿ ಪಾವತಿಸಲಾಗಿದೆ. ಡಸ್ಸಾಲ್ಟ್ ಏವಿಯೇಶನ್, ಈ ಕಂಪೆನಿಯ ಈಕ್ವಿಟಿ ಹಕ್ಕಿಗಾಗಿ 21.09 ಕೋಟಿ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದೆ.
ಈ ಭೂ ವ್ಯವಹಾರದ ಬಗ್ಗೆ ‘ದ ವೈರ್’ ಡಸ್ಸಾಲ್ಟ್ ಮತ್ತು ರಿಲಯನ್ಸ್ ಎಡಿಎಜಿಯಿಂದ ಸ್ಪಷ್ಟನೆ ಕೋರಿದೆ. ಅಂತೆಯೇ ರಿಲಯನ್ಸ್ ಏರ್‌ಪೋರ್ಟ್ ಡೆವಲಪರ್ಸ್ ಲಿಮಿಟೆಡ್‌ನ ಮೌಲ್ಯಮಾಪನ ಸೇರಿದಂತೆ ರಿಲಯನ್ಸ್ ಎಡಿಎಜಿ ಸಮೂಹದ ಜತೆಗಿನ ವ್ಯವಹಾರದ ಬಗ್ಗೆ ಡಸ್ಸಾಲ್ಟ್‌ನಿಂದಲೂ ಸ್ಪಷ್ಟನೆ ಬಯಸಿದೆ. ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ವರದಿ ಪರಿಷ್ಕರಣೆಯಾಗಲಿದೆ.
ಕೃಪೆ: thewire.in