ಸರಕಾರ ಮತ್ತು ಆರ್ಬಿಐ ನಡುವಿನ ಸಂಘರ್ಷ
ಆರ್ಬಿಐ ಕಾಯ್ದೆಯ 7ನೇ ಕಲಮನ್ನು ಬಳಸುವ ಸರಕಾರದ ನಿರ್ಧಾರವು ನವ-ಉದಾರವಾದಿ ಶಿಬಿರದಲ್ಲುಂಟಾಗಿರುವ ಬಿರುಕನ್ನು ಸೂಚಿಸುತ್ತದೆ.
ಭಾರತದ ಕೇಂದ್ರೀಯ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)ದ ಕಾರ್ಯನಿರ್ವಹಣಾ ಸ್ವಾತಂತ್ರ್ಯದ ಬಗ್ಗೆ ಆರ್ಬಿಐ ಮತ್ತು ಆಳುವ ಸರಕಾರದ ನಡುವೆ ಸಂಘರ್ಷ ಏರ್ಪಡುವುದು ಈ ದೇಶಕ್ಕೆ ಹೊಸದೇನಲ್ಲ. ಆದರೆ ಇತ್ತೀಚೆಗೆ ಆಳುವ ಎನ್ಡಿಎ ಸರಕಾರ ಮತ್ತು ಆರ್ಬಿಐ ನಡುವಿನ ಸಂಘರ್ಷ ಹಿಂದೆಂದೂ ಕಾಣದ ಹೊಸ ಮಜಲನ್ನೇ ಮುಟ್ಟಿದೆ. ಏಕೆಂದರೆ ಎನ್ಡಿಎ ಸರಕಾರ ಆರ್ಬಿಐನ ಸಲಹೆ ಕೇಳುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ-1934ರ 7ನೇ ಕಲಮನ್ನು ಬಳಸುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಬ್ಯಾಂಕಿಂಗ್ಯೇತರ ಹಣಕಾಸು ನಿಗಮಗಳಿಗೆ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಾರ್ಪೊರೇಷನ್-ಎನ್ಬಿಎಫ್ಸಿ) ನಗದು ಮತ್ತು ಸಾಲವನ್ನು ಪೂರೈಸುವ ವಿಷಯದಲ್ಲಿ, ದುರ್ಬಲವಾಗಿರುವ 11 ಸಾರ್ವಜನಿಕ ಬ್ಯಾಂಕುಗಳಲ್ಲಿ ಮೂರು ಬ್ಯಾಂಕುಗಳಿಗೆ ಸಂಬಂಧಪಟ್ಟಂತೆ ಕಠಿಣ ಪರಿಹಾರೋಪಾಯ ಕ್ರಮ (ಪ್ರಾಮ್ಟ್ ಕರೆಕ್ಟೀವ್ ಅಕ್ಷನ್-ಪಿಸಿಎ)ಗಳನ್ನು ಸಡಿಲಗೊಳಿಸುವ ವಿಷಯಗಳಿಂದ ಹಿಡಿದು ತನ್ನಲ್ಲಿರುವ ಹೆಚ್ಚುವರಿ ಸಂಪನ್ಮೂಲವನ್ನು ಲೆಕ್ಕಾಚಾರ ಮಾಡುವ ಮತ್ತು ಹೆಚ್ಚುವರಿಯನ್ನು ಸರಕಾರಕ್ಕೆ ಹಸ್ತಾಂತರಿಸುವ ಆರ್ಬಿಐನ ಸೂತ್ರಗಳವರೆಗೆ ಆರ್ಬಿಐ ನ ಅಭಿಪ್ರಾಯವನ್ನು ಕೇಳುವಾಗ 7ನೇ ಕಲಮನ್ನು ಬಳಸಲು ಸರಕಾರ ನಿರ್ಧರಿಸಿರುವಂತಿದೆ.
ಹಣಕಾಸು ಸಚಿವಾಲಯವು ಈ ಬಗ್ಗೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ 7ನೇ ಕಲಮಿನ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿದ್ದರೂ ಆರ್ಬಿಐ ವಲಯದಲ್ಲಿ ಮಾತ್ರ ಮೇಲೆ ಹೇಳಲಾದ ವಿಷಯಗಳಲ್ಲಿ ಸರಕಾರವು ಆರ್ಬಿಐ ನ ಸ್ವಾಯತ್ತೆೆಯನ್ನು ಮತ್ತು ಆರ್ಬಿಐ ಗವರ್ನರರ ಅಧಿಕಾರವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸಾಕಷ್ಟು ಕೋಲಾಹಲ ಉಂಟಾಗಿರುವುದು ಕಂಡುಬರುತ್ತಿದೆ. ಹಾಗಿದ್ದಲ್ಲ್ಲಿ ಈ 7ನೇ ಕಲಮು ಯಾಕಿಷ್ಟು ಆತಂಕವನ್ನು ಹುಟ್ಟುಹಾಕಿದೆ? ಈ ಕಲಮು ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸರಕಾರವು ಕಾಲಕಾಲಕ್ಕೆ (ಆರ್ಬಿಐ ಗವರ್ನರ ಜೊತೆ ಸಮಾಲೋಚನೆ ಮಾಡಿದ ಬಳಿಕ) ಆರ್ಬಿಐಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಅಧಿಕಾರವನ್ನು ಕೊಡುತ್ತದೆ. ಈಗಾಗಲೇ ಹಲವಾರು ಬ್ಯಾಂಕುಗಳ ಸ್ಥಿಗತಿಗಳು ಹೀನಾಯ ಪರಿಸ್ಥಿತಿಯನ್ನು ಮುಟ್ಟಿರುವ ಹಿನ್ನೆಲೆಯಲ್ಲಿ ಸರಕಾರವು ಈ ಕಲಮನ್ನು ಬಳಸುವ ವಿಷಯವು ಮತ್ತಷ್ಟು ಉದ್ವಿಘ್ನತೆಗೆ ದಾರಿಮಾಡಿಕೊಟ್ಟಿದೆ. ಇದು ಸಕಾರಣವಾದ ಆತಂಕವಾಗಿದೆ. ಏಕೆಂದರೆ ಮೂಲಭೂತ ಸೌಕರ್ಯಗಳಿಗೆ ಸಂಪನ್ಮೂಲವನ್ನು ಒದಗಿಸುವ ಹೆಸರಿನಲ್ಲಿ ಸರಕಾರವು ಬೇಕಾಬಿಟ್ಟಿಯಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ಸಾಲವನ್ನು ಕೊಡುವಂತೆ ಮತ್ತು ದೊಡ್ಡ ವ್ಯವಹಾರೋದ್ಯಮಗಳಿಗೆ ಸಾಲ ಪಡೆಯುವ ಅರ್ಹತೆ ಇಲ್ಲದಿದ್ದರೂ ದೊಡ್ಡ ಮೊತ್ತದ ಸಾಲಗಳನ್ನು ಕೊಡುವಂತೆ ಒತ್ತಡ ಹಾಕಿದ್ದರಿಂದಲೇ ಇಂದು ಸಾರ್ವಜನಿಕ ಬ್ಯಾಂಕುಗಳ ವಿತ್ತೀಯ ಪರಿಸ್ಥಿತಿಯು ಹದಗೆಟ್ಟಿದೆ ಮತ್ತು ಇಂದು ಬ್ಯಾಂಕುಗಳಲ್ಲಿ ಶೇಖರವಾಗಿರುವ ಮರುಪಾವತಿಯಾಗದಿರುವ ಸಾಲಗಳಲ್ಲಿ (ನಾನ್ ಪರ್ಫಾರ್ಮಿಂಗ್ ಅಸೆಟ್-ಎನ್ಪಿಎ) ಮುಕ್ಕಾಲು ಭಾಗ ಈ ಮೂಲದ್ದೇ ಆಗಿವೆ. ಅದೇನೇ ಇದ್ದರೂ ಆರ್ಬಿಐನಲ್ಲಿ ತನ್ನ ಮಾತೇ ನಡೆಯುವಂತೆ ಮಾಡಲು ಸರಕಾರ 7ನೇ ಕಲಮನ್ನು ಬಳಸುವ ಅಗತ್ಯವೇನಿಲ್ಲ.
ಆರ್ಬಿಐನಲ್ಲಿರುವ ತನ್ನ ಶೇರುದಾರ ಹಕ್ಕನ್ನು ಚಲಾಯಿಸುವ ಮೂಲಕವೂ ಅದು ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ ತನ್ನ ಹಿತಾಸಕ್ತಿಗೆ ಪೂರಕವಾಗಿರುವವರನ್ನು ನೇಮಕವಾಗುವಂತೆ ಮಾಡಿಕೊಳ್ಳಬಹುದು. ಅಂತಹ ರಾಜಕೀಯ ನೇಮಕಾತಿಗಳಿಂದಾಗಿ ನಾಮಕರಣಗೊಂಡವರು ಆಡಳಿತರೂಢ ಸರಕಾರದ ಪರವಾಗಿ ನಿಲುವುಗಳನ್ನು ತೆಗೆದುಕೊಂಡು ಆರ್ಬಿಐನ ನಿಯಂತ್ರಣದ ಚೌಕಟ್ಟಿನ ನಿಯಮಗಳನ್ನು ಉಲ್ಲಂಘಿಸಲು ಸಹಕರಿಸುತ್ತಾರೆ. ಆದರೆ ದಿನೇದಿನೇ ಹತ್ತಿರ ಬರುತ್ತಿರುವ 2019ರ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣವನ್ನು ದುರ್ವ್ಯಯ ಮಾಡಿರುವ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಆರೋಪವನ್ನು ಎದುರಿಸಲು ಸರಕಾರವು ಹರಸಾಹಸ ಪಡುತ್ತಿದೆ. ಹಲವಾರು ಕಾರಣಗಳಿಂದಾಗಿ 7ನೇ ಕಲಮನ್ನು ಬಳಸುವುದು ಒಂದು ಮುಖ ಉಳಿಸಿಕೊಳ್ಳುವ ಕ್ರಮವೇ ಆಗಿದೆ. ಈ ಕ್ರಮದ ಮೂಲಕ ಆರ್ಬಿಐ ಬಗೆಗಿನ ತನ್ನ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಾ ಸರಕಾರ ತನ್ನನ್ನು ದೋಷಮುಕ್ತ ಗೊಳಿಸಿಕೊಳ್ಳಬಹುದು, ಆ ಪ್ರಕ್ರಿಯೆಯಲ್ಲಿ ತನ್ನ ರಾಜಕೀಯ ಕಕ್ಷಿದಾರರ ಪರವಾಗಿ ಆರ್ಬಿಐ ತನ್ನ ನಿಯಮಗಳನ್ನು ಸಡಿಲಗೊಳಿಸುವಂತೆ ಒತ್ತಡವನ್ನು ತರಬಹುದು ಮತ್ತು ತನ್ನ ಜನಪ್ರಿಯ ಭರವಸೆಗಳಿಗೆ ಪೂರಕವಾಗಿ ಆರ್ಬಿಐ ಈಗಾಗಲೇ ಸರಕಾರಕ್ಕೆ ವರ್ಗಾಯಿಸಿರುವ ಸಂಪನ್ಮೂಲಗಳ ಜೊತೆಜೊತೆಗೆ ತನ್ನ ಅಂತರಿಕ ಮೀಸಲಿನಿಂದಲೂ ಸಂಪನ್ಮೂಲಗಳ ವರ್ಗಾವಣೆ ಮಾಡುವಂತೆ ಒತ್ತಡವನ್ನು ಸೃಷ್ಟಿಸಬಹುದು.
ಆದರೆ ಆರ್ಬಿಐಗಿರುವ ಸ್ವಾಯತ್ತೆೆಯೆಂಬುದು ನಾಮಮಾತ್ರವಾದದ್ದು ಎಂದು ಸಾಬೀತಾಗಿದ್ದರೂ ಆರ್ಬಿಐನ ಉನ್ನತಾಧಿಕಾರಿಗಳು ಈಗ ಇದ್ದಕ್ಕಿದ್ದಂತೆ ಸಂಸ್ಥೆಯ ಸ್ವಾಯತ್ತೆೆಯ ಹರಣವಾಗುತ್ತಿದೆ ಎಂದು ಆತಂಕದ ಹುಯಿಲೆಬ್ಬಿಸಿರುವುದೇಕೆ? ನೋಟು ನಿಷೇಧದ ಪ್ರಕರಣದಲ್ಲಿ ಆರ್ಬಿಐನ ಸ್ವಾಯತ್ತೆ ಹೇಗೆ ನಾಮಮಾತ್ರವಾಗಿತ್ತೆಂಬುದನ್ನು ಈಗಾಗಲೇ ಹಲವಾರು ಬಾರಿ ಪ್ರಸ್ತಾಪಿಸಲಾಗಿದೆ. ಅದಲ್ಲದೆ ಸರಕಾರದ ಒತ್ತಡಕ್ಕೆ ಮಣಿದು 2014 ಮತ್ತು 2016ರ ಹಣಕಾಸು ವರ್ಷಗಳಲ್ಲಿ ಆರ್ಬಿಐ ತನ್ನ ತಾತ್ಕಾಲಿಕ ನಿಧಿ ಮತ್ತು ಆಸ್ತಿ ನಿರ್ವಹಣಾ ವೆಚ್ಚಗಳಿಗೆ ಬೇಕಾಗಿರುವಷ್ಟು ಸಂಪನ್ಮೂಲವನ್ನೂ ಉಳಿಸಿಕೊಳ್ಳದೆ ತನ್ನೆಲ್ಲಾ ಆದಾಯವನ್ನು ಸರಕಾರಕ್ಕೆ ವರ್ಗಾಯಿಸಿತ್ತು. ಅಷ್ಟು ಮಾತ್ರವಲ್ಲ, ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ಆರ್ಬಿಐನ ಆರ್ಥಿಕ ಬಂಡವಾಳದ ಮಟ್ಟದಲ್ಲಿ ಆವರ್ತನಗಳುಂಟಾಗಿ 2017ರ ಹಣಕಾಸು ವರ್ಷಕ್ಕಿಂತ ಶೇ.63ರಷ್ಟು ಹೆಚ್ಚುವರಿಯು ಸರಕಾರಕ್ಕೆ ವರ್ಗಾವಣೆಗೊಳ್ಳುವಂತಾಗಿತ್ತು. ಇದನ್ನು ನಿವಾರಿಸಿಕೊಳ್ಳಲು 2018ರ ಹಣಕಾಸು ವರ್ಷದಲ್ಲಿ ಆರ್ಬಿಐ ಕಾಲಾನುಕ್ರಮ ಹೆಚ್ಚುವರಿ ವಿತರಣಾ ನೀತಿಯನ್ನು ಅನುಸರಿಸಿತು. ಇವುಗಳ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟು ಒಂದು ದೀರ್ಘಕಾಲದಿಂದ ಮಡುಗಟ್ಟಿಕೊಂಡು ಬಂದ ಸಮಸ್ಯೆಯೆಂಬುದು ನಿರ್ವಿವಾದವಾಗಿ ಸಾಬೀತಾಗಿರುವ ವಿಷಯ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರಮುಖ ನೀತಿಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಆರ್ಬಿಐ ಮತ್ತು ಆಯಾ ಸರಕಾರಗಳು ಪರಸ್ಪರ ಕೈಜೋಡಿಸದೆ ಈ ಎಲ್ಲಾ ಅನಾಹುತಗಳು ಸಂಭವಿಸಿದವು ಎಂದು ನಂಬುವುದು ಕಷ್ಟ.
ವಾಸ್ತವವಾಗಿ 1934ರ ಆರ್ಬಿಐ ಕಾಯ್ದೆಯ 8 (4)ನೇ ಅನುಚ್ಛೇದದ ಪ್ರಕಾರ ಆರ್ಬಿಐನ ಉನ್ನತ ಆಡಳಿತ ಸಮಿತಿಯಾದ ಕೇಂದ್ರೀಯ ನಿರ್ದೇಶನಾ ಮಂಡಳಿಯ ನೇಮಕಾತಿಯೆಲ್ಲಾ ರಾಜಕೀಯ ನೇಮಕಾತಿಗಳೇ ಆಗಿವೆ. ಎಲ್ಲಿಯತನಕ ಎಂದರೆ ಆರ್ಬಿಐನ ಗವರ್ನರ್ ಮತ್ತು ಡೆಪ್ಯೂಟಿ ಗವರ್ನರುಗಳ ಕಾರ್ಯಾವಧಿ, ವಜಾ ಅಥವಾ ಮರು ನೇಮಕಾತಿಗಳೆಲ್ಲವೂ ಕೇಂದ್ರ ಸರಕಾರದ ವಿವೇಚನೆಯನುಸಾರವೇ ನಡೆಯುತ್ತದೆ. ಆರ್ಬಿಐನ ಕಾರ್ಯನಿರ್ವಹಣಾ ಪದ್ಧತಿಗಳಲ್ಲಿ ಬೆಸೆದುಕೊಂಡಿರುವ ರಾಜಕೀಯವೇ ಹೇಗಿದೆಯೆಂದರೆ ಅದು ಆರ್ಥಿಕ ಕಾರ್ಯಕ್ಷಮತೆಗಿಂತ ರಾಜಕೀಯ ಜನಮಾನ್ಯತೆಗೆ ಅಡಿಯಾಳಾಗಿಯೇ ಕಾರ್ಯನಿರ್ವಹಿಸ ಬೇಕಿರುತ್ತದೆ. ಹೀಗಾಗಿ ಅಲ್ಲಿ ಯಾವತ್ತಿಗೂ ಸಂಪೂರ್ಣ ಸ್ವಾಯತ್ತತೆ ಎಂಬು ದಿರುವುದಿಲ್ಲ. ನವಉದಾರವಾದದಡಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೆಂಬುದು ಸಾರಾಂಶದಲ್ಲಿ ರಾಜಕೀಯವಾಗಿ ಮಹತ್ವವುಳ್ಳ ಖಾಸಗಿ ವ್ಯಕ್ತಿಗಳು ಮತ್ತು ಸರಕಾರದ ನಡುವಿನ ಗುಪ್ತ ಪಾಲುದಾರಿಕೆಯಷ್ಟೇ ಆಗಿರುತ್ತವೆ. ದೊಡ್ಡದೊಡ್ಡ ವ್ಯವಹಾರೋದ್ಯಮಿಗಳು ಮತ್ತು ಕಾರ್ಪೊರೇಟ್ಗಳು ರಾಜಕೀಯ ಪಕ್ಷಗಳ ಪೋಷಕರೂ ಆಗಿರುವ ಮೂಲಕ ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಸಾಲ ಮರುಪಾವತಿಗಳ ಸತತ ಉಲ್ಲಂಘನೆ ಮಾಡುತ್ತಿದ್ದರೂ ಅವರಿಗೆ ಬ್ಯಾಂಕ್ ಸಂಪನ್ಮೂಲ ಸರಾಗವಾಗಿ ಸರಬರಾಜಾಗುತ್ತಿರುತ್ತದೆ.
ಅದೇನೇ ಇದ್ದರೂ ಬ್ಯಾಂಕುಗಳು ವಿಫಲಗೊಂಡ ಸಂದರ್ಭದಲ್ಲಿ ಸರಕಾರಗಳಿಗೆ ಅವುಗಳ ವೋಟ್ಬ್ಯಾಂಕಾಗಿರುವ ಡಿಪಾಸಿಟರುಗಳ ರಾಜಕೀಯ ಬೆಂಬಲವೂ ಬೇಕಾಗುತ್ತದೆ. ತಮ್ಮ ಸದುದ್ದೇಶದ ಬಗ್ಗೆ ತಮ್ಮ ವೋಟ್ ಬ್ಯಾಂಕುಗಳಿಗೆ ಮನವರಿಕೆ ಮಾಡಿಕೊಡಲು ಸರಕಾರಗಳು ಶಾಸನವನ್ನು ರೂಪಿಸುವ ಪ್ರಯತ್ನ ಪಡುತ್ತವೆ. ಆದರೆ ಅದೇ ಸಮಯದಲ್ಲಿ ಆ ಶಾಸನವನ್ನು ಜಾರಿಗೆ ತರುವ ನೀತಿ-ನಿಯಮಾವಳಿಗಳು ಮಾತ್ರ ತಮ್ಮ ಪೋಷಕರ ಪರವಾಗಿ ತಿರುಚಿರುತ್ತವೆ. ಈ ಸಂದರ್ಭದಲ್ಲೇ ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿರಬೇಕಾದ ಆರ್ಬಿಐ ಅನ್ನು ತನ್ನ ತೀರ್ಮಾನಗಳಿಗೆ ಕೇವಲ ಶಾಸನಬದ್ಧ ಬೆಂಬಲ ಸೂಚಿಸುವ ರಾಜಕೀಯ ಉಪಕರಣದಂತೆ ಬಳಸಲಾಗುತ್ತದೆ. ಆದರೆ ಬದಲಾಗುತ್ತಿರುವ ಜಾಗತಿಕ ಹಣಕಾಸು ಮಾರುಕಟ್ಟೆಯ ನಿಯಂತ್ರಣ ಚೌಕಟ್ಟುಗಳ ಸಂದರ್ಭದಲ್ಲಿ ಆರ್ಬಿಐ ಕೂಡಾ ತನ್ನ ಸ್ವತಂತ್ರ ಮೇಲುಸ್ತುವಾರಿ ಇಮೇಜನ್ನು ಉಳಿಸಿಕೊಳ್ಳಬೇಕಿದೆ. ಏಕೆಂದರೆ ಕುಸಿಯುತ್ತಿರುವ ಲಾಭದಾಯಕತೆ, ಆದಾಯ ಮತ್ತು ಹೂಡಿಕೆದಾರರ ಅವಿಶ್ವಾಸಗಳು ಆರ್ಬಿಐ ನ ಹಣಕಾಸು ಉಸ್ತುವಾರಿ ಸಾಮರ್ಥ್ಯವನ್ನು ಪ್ರಶ್ನೆಗೊಳಪಡಿಸಿದೆ.
ಹೀಗಾಗಿ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಸುಧಾರಣೆ ಮತ್ತು ಸಂಪನ್ಮೂಲ ಕ್ರೂಡೀಕರಣಕ್ಕೆ ಸಂಬಂಧಪಟ್ಟ ಅದರ ನೀತಿಗಳು ಒಮ್ಮೆಮ್ಮೆ ಆಳುವ ಸರಕಾರದ ಚುನಾವಣಾ ರಣತಂತ್ರಗಳಿಗೆ ವ್ಯತಿರಿಕ್ತವಾಗಿಬಿಡುತ್ತದೆ. ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ಸಾರ್ವಜನಿಕ ಹಿತಾಸಕ್ತಿಯ ಮುಸುಕಿನಲ್ಲಿ ಒಂದು ಪಕ್ಷದ ಹಿತಾಸಕ್ತಿಯನ್ನು ಮತ್ತು ಆರ್ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯರವರು ‘‘ಆರ್ಬಿಐನ ಕಾರ್ಯನಿರ್ವಹಣೆಯಲ್ಲಿ ಸರಕಾರವು ಮೂಗುತೂರಿಸುವುದರಿಂದ ಹಣಕಾಸು ಮಾರುಕಟ್ಟೆಗಳ ಆಕ್ರೋಶಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ’’ ಎಂದು ಹೇಳುವ ಮೂಲಕ ಮತ್ತೊಂದು ಪಕ್ಷದ ಹಿತಾಸಕ್ತಿಯನ್ನು ಪ್ರತಿಧ್ವನಿಸುತ್ತಿದ್ದಾರೆ. ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಗವರ್ನರುಗಳ ನಡುವೆ ನಡೆಯುತ್ತಿರುವ ಕೆಸರೆರಚಾಟವು ಈ ಎರಡೂ ಹಿತಾಸಕ್ತಿಗಳ ನಡುವಿನ ಸಂಘರ್ಷವನ್ನೂ ಸೂಚಿಸುತ್ತದೆ. ಸರಕಾರವು ತನ್ನ ಮುಖವನ್ನು ಉಳಿಸಿಕೊಳ್ಳಲು ಆರ್ಬಿಐ ಮೇಲೆ ಗೂಬೆ ಕೂರಿಸುತ್ತಿದ್ದರೆ ಆರ್ಬಿಐ ಅಧಿಕಾರಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದಿರುವ ಅಪರಾಧಗಳಲ್ಲಿ ತನ್ನ ಪಾತ್ರವನ್ನು ಮರೆಮಾಚಲು ಸಾಂಸ್ಥಿಕ ಸ್ವಾಯತ್ತೆೆಯ ಮೊರೆ ಹೋಗುತ್ತಿದ್ದಾರೆ.