ಸಿಎನ್‍ಎನ್ ವರದಿಗಾರನ ಶ್ವೇತಭವನದ ಪಾಸ್ ರದ್ದುಪಡಿಸಿದ ಟ್ರಂಪ್ ಆಡಳಿತ
ಅಧ್ಯಕ್ಷರಿಗೆ ಕಿರಿಕಿರಿ ಪ್ರಶ್ನೆಗಳನ್ನು ಕೇಳಿದ ಆರೋಪ
ವಾಷಿಂಗ್ಟನ್, ನ.8: ಶಿಷ್ಟಾಚಾರದ ಆಘಾತಕಾರಿ ಉಲ್ಲಂಘನೆ ಪ್ರಕರಣದಲ್ಲಿ ಬುಧವಾರ ರಾತ್ರಿ ಶ್ವೇತಭವನವು ಸಿಎನ್‍ಎನ್ ಪತ್ರಕರ್ತ ಜಿಮ್ ಅಕೋಸ್ಟ ಅವರ ಪ್ರೆಸ್ ಪಾಸ್ ಅನ್ನು ಮುಂದಿನ ಆದೇಶದ ತನಕ ರದ್ದುಗೊಳಿಸಿದೆ.
ಸಿಎನ್‍ಎನ್ ಸುದ್ದಿ ಸಂಸ್ಥೆಯ ಶ್ವೇತಭವನದ ಮುಖ್ಯ ವರದಿಗಾರರಾಗಿರುವ ಜಿಮ್ ಅವರು ಅಧ್ಯಕ್ಷ ಟ್ರಂಪ್ ಮತ್ತವರ ಸಹವರ್ತಿಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಕೇಳಿರುವುದು ಈ ಕ್ರಮಕ್ಕೆ ಕಾರಣವಾಗಿದೆ. ಜಿಮ್ ಅವರನ್ನು `ಟೆರಿಬಲ್ ಪರ್ಸನ್' ಎಂದೂ ಟ್ರಂಪ್ ಅವಮಾನಿಸಿದ ಘಟನೆ ನಡೆದಿದೆ.
ಜಿಮ್ ಅವರು ಟ್ರಂಪ್ ಗೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆನ್ನಲಾಗಿದೆ. ಈ ಸಂದರ್ಭ ಶ್ವೇತಭವನದ ಸಿಬ್ಬಂದಿಯೊಬ್ಬರು ಜಿಮ್ ಕೈಯಲ್ಲಿದ್ದ ಮೈಕ್ರೋಫೋನ್ ವಾಪಸ್ ಪಡೆಯಲು ಕೈ ಮುಂದಕ್ಕೆ ಮಾಡಿದ ಫೋಟೋ ಒಂದನ್ನೂ ಸಿಎನ್‍ಎನ್ ಪ್ರಕಟಿಸಿದೆ. ತಾನು ತನ್ನ ವರದಿಗಾರನ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದಾಗಿ ಸಿಎನ್‍ಎನ್ ತಿಳಿಸಿದೆ.
ಶ್ವೇತಭವನ ವರದಿಗಾರರ ಸಂಘ ಈ ಬೆಳವಣಿಗೆಯ ನಂತರ ಹೇಳಿಕೆ ನೀಡಿ ಜಿಮ್ ಅವರ ಪಾಸ್ ವಾಪಸ್ ಪಡೆದಿರುವುದು ಅಸ್ವೀಕಾರಾರ್ಹ ಎಂದು ಹೇಳಿದೆ. ಜಿಮ್ ಅವರ ಆಕ್ರಮಣಕಾರಿ ರೀತಿಯ ವರದಿಗಳು ಅವರಿಗೆ ಹಲವಾರು ಅಭಿಮಾನಿಗಳನ್ನು ಹುಟ್ಟು ಹಾಕಿದೆ, ಜತೆ ಅವರನ್ನು ಟೀಕಿಸುವವರೂ ಹಲವರಿದ್ದಾರೆ.
ಈ ಬೆಳವಣಿಗೆಯ ನಂತರ ಪ್ರತಿಕ್ರಿಯಿಸಿದ ಶ್ವೇತ ಭವನದ ಅಧಿಕಾರಿಗಳು “ಅಧ್ಯಕ್ಷ ಟ್ರಂಪ್ ಮಾಧ್ಯಮ ಸ್ವಾತಂತ್ರ್ಯದಲ್ಲಿ ನಂಬಿಕೆಯಿರಿಸಿದ್ದಾರೆ ಹಾಗೂ ತಮ್ಮ ಹಾಗೂ ತಮ್ಮ ಆಡಳಿತದ ಬಗೆಗಿನ ಕಠಿಣ ಪ್ರಶ್ನೆಗಳನ್ನು ಸ್ವಾಗತಿಸುತ್ತಾರೆ” ಎಂದು ಹೇಳಿದ್ದಾರೆ.