ಸಿಂಗಾಪುರ: ಅಕ್ರಮವಾಗಿ ಪಟಾಕಿ ಸುಟ್ಟ ಭಾರತೀಯರ ಬಂಧನ
ಸಿಂಗಾಪುರ, ನ. 8: ಸಿಂಗಾಪುರದ ‘ಲಿಟಲ್ ಇಂಡಿಯ’ ಪ್ರದೇಶದಲ್ಲಿ ದೀಪಾವಳಿಯ ಮುನ್ನಾದಿನದಂದು ಅಕ್ರಮವಾಗಿ ಪಟಾಕಿ ಬಿಟ್ಟ ಆರೋಪದಲ್ಲಿ ಇಬ್ಬರು ಭಾರತ ಮೂಲದವರನ್ನು ಬಂಧಿಸಲಾಗಿದೆ.
ಅವರು ಎರಡು ವರ್ಷಗಳವರೆಗಿನ ಜೈಲು ಹಾಗೂ 2,000 ಸಿಂಗಾಪುರ ಡಾಲರ್ (ಸುಮಾರು 1.05 ಲಕ್ಷ ರೂಪಾಯಿ)ನಿಂದ 10,000 ಸಿಂಗಾಪುರ ಡಾಲರ್ (ಸುಮಾರು 5.28 ಲಕ್ಷ ರೂಪಾಯಿ)ವರೆಗಿನ ದಂಡ ಎದುರಿಸುತ್ತಿದ್ದಾರೆ.
ಸಿಂಗಾಪುರದಲ್ಲಿ ಅಧಿಕಾರಿಗಳಿಂದ ಪರವಾನಿಗೆ ಪಡೆಯದೆ ಪಟಾಕಿ ಬಿಡುವುದು ಅಥವಾ ಸುಡುಮದ್ದು ಸುಡುವುದು ಅಪರಾಧವಾಗಿದೆ.
29 ವರ್ಷದ ತ್ಯಾಗು ಸೆಲ್ವರಾಜ್ ವಿರುದ್ಧ ಅಪಾಯಕಾರಿ ಪಟಾಕಿಗಳನ್ನು ಬಿಟ್ಟ ಆರೋಪ ದಾಖಲಾದರೆ, ಅವರನ್ನು ಉತ್ತೇಜಿಸಿದ ಆರೋಪವನ್ನು 48 ವರ್ಷದ ಶಿವಕುಮಾರ್ ಸುಬ್ರಮಣ್ಯಮ್ ವಿರುದ್ಧ ಹೊರಿಸಲಾಗಿದೆ.
ಸೋಮವಾರ ಮಧ್ಯರಾತ್ರಿ ಒಂದು ಡಬ್ಬಿ ಪಟಾಕಿಗಳನ್ನು ಗ್ಲೌಸೆಸ್ಟರ್ ರಸ್ತೆಯ ವಿಭಾಜಕದ ಮೇಲೆ ಇಟ್ಟ ಆರೋಪವನ್ನು ಶಿವಕುಮಾರ್ ಎದುರಿಸಿದರೆ, ಅವುಗಳಿಗೆ ಬೆಂಕಿ ಕೊಟ್ಟ ಆರೋಪವನ್ನು ಸೆಲ್ವರಾಜ್ ಎದುರಿಸುತ್ತಿದ್ದಾರೆ.
ಪಟಾಕಿ ಪ್ರದರ್ಶನದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.