ಕೇಂದ್ರದ 'ಅಮೃತ್ ಯೋಜನೆ'ಗೆ ಪಾಲು ನೀಡಿಕೆ: ಭದ್ರಾವತಿ ನಗರಸಭೆ ಮುಂದೆ, ಶಿವಮೊಗ್ಗ ಮನಪಾ ಹಿಂದೆ
54.25 ಕೋಟಿ ರೂ. ಯೋಜನಾ ಮೊತ್ತದಲ್ಲಿ ನೀಡಿದ್ದು ಕೇವಲ 6 ಕೋ.ರೂ.!
ಶಿವಮೊಗ್ಗ, ನ. 9: ಕೇಂದ್ರ ಸರ್ಕಾರ ಪ್ರಾಯೋಜಿತ 'ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ' (ಅಮೃತ್) ದಡಿ, ಜಿಲ್ಲೆಯ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಭದ್ರಾವತಿ ನಗರಸಭೆ ಆಯ್ಕೆಯಾಗಿವೆ. ಅಭಿಯಾನದಡಿ ತನ್ನ ಪಾಲಿನ ಯೋಜನಾ ಮೊತ್ತ ನೀಡಿಕೆಯಲ್ಲಿ ಭದ್ರಾವತಿ ನಗರಸಭೆ ಮುಂದಿದೆ. ಆದರೆ ಈ ವಿಷಯದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಹಿಂದಿದೆ. ಇದರಿಂದ ಯೋಜನೆಯ ಅನುಷ್ಠಾನ ಹಿನ್ನಡೆಯಾಗುವಂತಾಗಿದೆ.
ಅಮೃತ ಯೋಜನೆಯಡಿ ಭದ್ರಾವತಿ ನಗರಸಭೆಗೆ 163.06 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 81.53 ಕೋಟಿ ರೂ., ರಾಜ್ಯ ಸರ್ಕಾರ 32.61 ಕೋಟಿ ರೂ. ಭರಿಸುತ್ತದೆ. ಉಳಿದ ಮೊತ್ತ 48.92 ಕೋ.ರೂ.ಗಳನ್ನು ಭದ್ರಾವತಿ ನಗರಸಭೆ ಪಾವತಿಸಬೇಕು. ಇದರಲ್ಲಿ 32.61 ಕೋ. ರೂ.ಗಳನ್ನು ಸಾಲದ ಮೂಲಕ ಹೊಂದಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ 16.31 ಕೋ. ರೂ. ಮೊತ್ತವನ್ನು ನಗರಸಭೆ ಆಡಳಿತವೇ ಪಾವತಿಸಬೇಕಾಗಿತ್ತು. ಅದರಂತೆ ಭದ್ರಾವತಿ ನಗರಸಭೆಯು ನಿಯಮಾನುಸಾರ, ತನ್ನ ಪಾಲಿನ ಬಹುತೇಕ ಯೋಜನಾ ಮೊತ್ತ ಪಾವತಿಸುವಲ್ಲಿ ಯಶಸ್ವಿಯೂ ಆಗಿದೆ.
ಆದರೆ ನಗರಾಭಿವೃದ್ದಿ ಇಲಾಖೆಯ ಅಂಕಿಅಂಶಗಳ ಅನುಸಾರ, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ತನ್ನ ಪಾಲಿನ ಯೋಜನಾ ಮೊತ್ತ ಪಾವತಿಸುವಲ್ಲಿ ಸಾಕಷ್ಟು ಹಿಂದೆ ಬಿದ್ದಿರುವುದು ಕಂಡುಬರುತ್ತದೆ. ಶಿವಮೊಗ್ಗ ಮಹಾನಗರ ಪಾಲಿಕೆಗೆ 180.82 ಕೋ.ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು 90.41 ಕೋ.ರೂ., ರಾಜ್ಯ ಸರ್ಕಾರವು 36.164 ಕೋ.ರೂ. ಅನುದಾನ ನೀಡಲಿದೆ. ಉಳಿದಂತೆ ಪಾಲಿಕೆ ಆಡಳಿತವು ತನ್ನ ಪಾಲಿನ 54.25 ಕೋ.ರೂ. ಪಾವತಿಸಬೇಕಾಗಿತ್ತು. ಆದರೆ ಲಭ್ಯ ಮಾಹಿತಿ ಅನುಸಾರ, ಇಲ್ಲಿಯವರೆಗೂ ಪಾಲಿಕೆ ಆಡಳಿತ ಭರಿಸಿರುವ ತನ್ನ ಪಾಲಿನ ಮೊತ್ತ ಕೇವಲ ಸುಮಾರು 6 ಕೋ.ರೂ. ಮಾತ್ರವಾಗಿದೆ. ಈ ಮೊತ್ತ ಪಾವತಿಯಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಎಂದು ಮೂಲಗಳು ಮಾಹಿತಿ ನೀಡುತ್ತವೆ.
ಈಗಾಗಲೇ ನಗರಾಭಿವೃದ್ದಿ ಇಲಾಖೆಯು ನಿಗದಿತ ಅವಧಿಯೊಳಗೆ ತನ್ನ ಪಾಲಿನ ಅನುದಾನ ಭರಿಸುವಂತೆ ಮಹಾನಗರ ಪಾಲಿಕೆ ಆಡಳಿತಕ್ಕೆ ಹಲವು ಬಾರಿ ಸೂಚಿಸಿದೆ. ಇದೆಲ್ಲದರ ಹೊರತಾಗಿಯೂ ತನ್ನ ಪಾಲಿನ ಬಾಕಿ ಮೊತ್ತ ಭರಿಸುವಲ್ಲಿ ಪಾಲಿಕೆ ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಹಿನ್ನಡೆ: ಕೇಂದ್ರ ಸರ್ಕಾರದ ಮಾರ್ಗಸೂಚನೆಯಂತೆ ಅಮೃತ್ ಯೋಜನೆ ಅನುಷ್ಠಾನಕ್ಕೆ ರಾಜ್ಯಮಟ್ಟದಲ್ಲಿ ಸಂಚಲನಾ ಸಮಿತಿ ರಚಿಸಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಮಿತಿಯ ಅಧ್ಯಕ್ಷರಾಗಿದ್ದಾರೆ. ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಯೋಜನೆಯಡಿ ಆಯ್ಕೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಹೂಡಿಕೆ ಮತ್ತಿತರ ಅಂಶಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.
ಯೋಜನೆಯಡಿ ಆಯ್ಕೆಯಾದ ನಗರ ಸ್ಥಳೀಯ ಸಂಸ್ಥೆಗಳು, ಕ್ರಿಯಾಯೋಜನೆ ಸಿದ್ದಪಡಿಸಿ ಕಳುಹಿಸುತ್ತವೆ. ಅನುಮೋದನೆ ಸಿಗುವ ಮೊತ್ತಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ದಿಷ್ಟ ಮೊತ್ತದ ಪಾಲು ಭರಿಸುತ್ತವೆ. ಇದಕ್ಕೆ ಸಂಬಂಧಿತ ಸ್ಥಳೀಯ ಸಂಸ್ಥೆಗಳು ಕೂಡ, ನಿರ್ದಿಷ್ಟ ಮೊತ್ತದ ಪಾಲು ನೀಡಬೇಕು. ಈ ಪಾಲು ನೀಡಿದ ನಂತರವಷ್ಟೆ ಕೇಂದ್ರ - ರಾಜ್ಯ ಸರ್ಕಾರಗಳ ಪಾಲು ಬಿಡುಗಡೆಯಾಗಲಿದೆ.
'ಸ್ಥಳೀಯ ಸಂಸ್ಥೆಗಳು ತಮ್ಮ ಪಾಲು ನೀಡುವಲ್ಲಿ ವಿಳಂಬವಾದರೆ, ಕೇಂದ್ರ - ರಾಜ್ಯ ಸರ್ಕಾರಗಳ ಮ್ಯಾಚಿಂಗ್ ಗ್ರ್ಯಾಂಟ್ ಬಿಡುಗಡೆಯೂ ವಿಳಂಬವಾಗುತ್ತದೆ. ಇದರಿಂದ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದ ಮೇಲೆ ಪರಿಣಾಮ ಬೀರುತ್ತದೆ. ಈ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ನಿರ್ದಿಷ್ಟ ಕಾಲಾವದಿ ನಿಗದಿಪಡಿಸಿರುವುದರಿಂದ, ಕಾಲಮಿತಿಯಲ್ಲಿ ಕಾಮಗಾರಿ ಕಾರ್ಯಗತಗೊಳಿಸಲು ಸಾಧ್ಯವಾಗದಂತಾಗುತ್ತದೆ' ಎಂದು ಹೆಸರೇಳಲಿಚ್ಚಿಸದ ನಗರಾಭಿವೃದ್ದಿ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ.
ರಾಜ್ಯದಲ್ಲಿ ಆಯ್ಕೆಯಾಗಿವೆ 27 ನಗರಗಳು
2015 ರಲ್ಲಿ ಕೇಂದ್ರ ಸರ್ಕಾರ ಅಮೃತ್ ಯೋಜನೆ ಜಾರಿಗೆ ತಂದಿತ್ತು. ದೇಶದ 500 ನಗರಗಳನ್ನು ಆಯ್ಕೆ ಮಾಡಿತ್ತು. ಇದರಲ್ಲಿ ಕರ್ನಾಟಕ ರಾಜ್ಯದ 27 ನಗರಗಳು ಸ್ಥಾನ ಪಡೆದುಕೊಂಡಿದ್ದವು. ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ-ಬೆಟಗೇರೆ, ರಾಣೆಬೆನ್ನೂರು, ಕೋಲಾರ, ರಾಬರ್ಟ್‍ಸನ್ ಪೇಟೆ, ಮೈಸೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ಗುಲ್ಬರ್ಗಾ, ಬೀದರ್, ಬಳ್ಳಾರಿ, ಗಂಗಾವತಿ, ಹೊಸಪೇಟೆ, ರಾಯಚರೂರು, ಬಾದಾಮಿ ನಗರವು ಅಮೃತ್ ಯೋಜನೆಯಡಿ ಅಭಿವೃದ್ದಿಪಡಿಸಲಾಗುತ್ತಿದೆ.
ಯೋಜನೆಯ ಉದ್ದೇಶವೇನು?
ನಗರದ ಜೀವನ ಮಟ್ಟ ಸುಧಾರಣೆ ಹಾಗೂ ನಾಗರಿಕರಿಗೆ ಪರಿಣಾಮಕಾರಿ ಮೂಲಸೌಕರ್ಯ ಕಲ್ಪಿಸುವುದು ಅಮೃತ್ ಯೋಜನೆಯ ಮುಖ್ಯೋದ್ದೇಶವಾಗಿದೆ. ಕುಡಿಯುವ ನೀರು ಸರಬರಾಜು, ಒಳಚರಂಡಿ, ರಾಜಕಾಲುವೆಗಳ ನಿರ್ಮಾಣ, ಯಾಂತ್ರೀಕೃತವಲ್ಲದ ಸಾರ್ವಜನಿಕ ಸಾರಿಗೆ ಸೌಲಭ್ಯ ಅಭಿವೃದ್ದಿ, ನಗರಗಳ ಉದ್ಯಾನವನ, ಹಸಿರು ಜಾಗಗಳು, ಮನರಂಜನಾ ಕೇಂದ್ರಗಳನ್ನು ಉನ್ನತೀಕರಿಸಿ ಮಕ್ಕಳಿಗೆ ಸೌಕರ್ಯ ಮಟ್ಟ ಹೆಚ್ಚಿಸುವುದು ಯೋಜನೆ ಆದ್ಯತೆಯಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ನಗರಗಳಿಗೆ ಯೋಜನಾ ಮೊತ್ತ ನಿಗದಿಪಡಿಸಲಾಗಿದೆ.
ಆಯುಕ್ತರು ಗಮನಹರಿಸಲಿ
ಶಿವಮೊಗ್ಗ ಮಹಾನಗರ ಪಾಲಿಕೆಯು, ಅಮೃತ್ ಯೋಜನೆಯ ಅನುಮೋದಿತ ಕ್ರಿಯಾಯೋಜನೆಗೆ ತನ್ನ ಪಾಲಿನ ಪೂರ್ಣ ಮೊತ್ತ ನೀಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಈ ಹಿಂದಿನ ಪಾಲಿಕೆ ಆಯುಕ್ತರಾಗಿದ್ದ ಎ.ಆರ್.ರವಿಯವರ ಅವದಿಯಲ್ಲಿ 6 ಕೋಟಿ ರೂ. ಪಾವತಿಸಿದ್ದು ಬಿಟ್ಟರೆ, ನಂತರ ಬಂದ ಆಯುಕ್ತರು ಉಳಿದ ಮೊತ್ತ ಪಾವತಿಸುವತ್ತ ಗಮನಹರಿಸಿಲ್ಲ. ಕಳೆದ ನಾಲ್ಕೈದು ತಿಂಗಳ ಹಿಂದೆ ಪಾಲಿಕೆಯ ಆಯುಕ್ತರಾಗಿ ನೇಮಕಗೊಂಡಿರುವ ಯುವ ಐಎಎಸ್ ಅಧಿಕಾರಿ ಚಾರುಲತಾ ಸೋಮಲ್‍ರವರು ತಮ್ಮ ನೇರ-ನಿರ್ಭೀಡ ಕಾರ್ಯವೈಖರಿಯ ಮೂಲಕ ಗಮನ ಸೆಳೆದಿದ್ದಾರೆ. ಪಾಲಿಕೆ ಆಡಳಿತದಲ್ಲಿ ಆಮೂಲಾಗ್ರ ಸುಧಾರಣೆಗೆ ಮುಂದಾಗಿದ್ದಾರೆ. ಅಮೃತ್ ಯೋಜನೆಯಡಿ ಪಾಲಿಕೆ ಪಾವತಿಸಬೇಕಾದ ತನ್ನ ಪಾಲಿನ ಮೊತ್ತ ನೀಡಲು, ಆಯುಕ್ತರು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.