ಪೋಷಕರ ದೃಷ್ಟಿ ಮಕ್ಕಳ ಭವಿಷ್ಯದ ಸೃಷ್ಟಿ
ಬೆಳೆಯುವ ಪೈರು ►ಅಧ್ಯಯನ ಮತ್ತು ಅರಿವು
ಕಲಿಕಾ ನ್ಯೂನತೆಗಳು: ಭಾಗ 5
ಧೋರಣೆಯ ಸಮಸ್ಯೆ
ನಮ್ಮ ದೇಶದ ಪೋಷಕರ ಧೋರಣೆ ಮತ್ತು ದೃಷ್ಟಿ ಕೋನವೇ ನವೀನ ಮತ್ತು ವಿಕಾಸ ಅಥವಾ ಪ್ರಗತಿಪರ ಶಿಕ್ಷಣಕ್ಕೆ ತೊಡಕಾಗಿರುವುದು. ಅವುಗಳಲ್ಲಿ ಕೆಲವೊಂದನ್ನು ಗುರುತಿಸುವುದಾದರೆ,
1. ಹಣೆಬರಹ:ಮಗುವಿನ ಕೈಯಲ್ಲಿ ವಿದ್ಯೆಯ ರೇಖೆ ಇದ್ದರೆ ವಿದ್ಯೆ ಹತ್ತುವುದು. ಅವನ ಹಣೆಬರಹದಲ್ಲಿ ವಿದ್ಯೆ ಬರೆದಿಲ್ಲವಾದರೆ ಏನು ಮಾಡುವುದು? ಮಗುವಿನ ಜಾತಕದಲ್ಲಿಯೇ ವಿದ್ಯೆಯ ಯೋಗವಿಲ್ಲ. ಇತ್ಯಾದಿ.
2. ಧಾರ್ಮಿಕವಾಗಿ ವಿದ್ಯೆ ಅಥವಾ ಬುದ್ಧಿಯ ದೇವರನ್ನು ಒಲಿಸಿಕೊಳ್ಳುವುದು: ವಿದ್ಯಾಧಿದೇವತೆಯನ್ನು ಪೂಜಿಸಬೇಕು. ಆ ದೇವರು ಒಲಿದರೆ ನಮಗೆ ವಿದ್ಯೆ ಒಲಿಯುವುದು. ಬುದ್ಧಿಗೆ ಇವನೊಬ್ಬ ದೇವತೆ. ಇವನಿಗೆ ಹರಕೆ ಕಟ್ಟಿಕೊಂಡರೆ ಪರೀಕ್ಷೆಯಲ್ಲಿ ಉತ್ತೀರ್ಣರಾ ಗುತ್ತೇವೆ. ಇತ್ಯಾದಿ. ಬೇರೆ ಕಡೆಗಳಲ್ಲೂ ಈ ತರಹದ ಉದಾಹರಣೆಗಳನ್ನು ನೋಡಬಹುದೇನೋ, ಆದರೆ, ಬೆಂಗಳೂರಿನಲ್ಲಿ ಒಂದು ದೇವಾಲಯವಿದೆ. ಕಾರ್ಯಸಿದ್ಧಿ ಗಣಪತಿ ದೇವಾಲಯ ಅಂತ. ಅದು ವಿದ್ಯಾರ್ಥಿಗಳಿಗೆ ಬಹಳ ಶ್ರದ್ಧಾಕೇಂದ್ರ. ವಿಜ್ಞಾನ ಮತ್ತು ಗಣಿತದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ವಿಷಯಗಳ ವಿದ್ಯಾರ್ಥಿಗಳು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಅಲ್ಲಿಗೆ ಹೋಗಿ ಕಾಯಿ ಕಟ್ಟುತ್ತಾರೆ. ಹದಿನಾರು ದಿನಗಳೋ ಅಥವಾ ಇಪ್ಪತ್ತೊಂದು ದಿನಗಳೋ ಪ್ರತಿದಿನವೂ ಹೋಗಿ ಪೂಜಿಸಿಕೊಂಡು ಬಂದು, ನಂತರ ಆ ಕಾಯಿಯನ್ನು ಮನೆಯಲ್ಲಿ ಸಿಹಿ ಮಾಡಿಕೊಂಡು ತಿಂದರೆ ಅವರ ಕಾರ್ಯಸಿದ್ಧಿಯಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳು ಬರುವುವು. ಪರೀಕ್ಷೆಗಳಲ್ಲಿ ಉತ್ತಮಶ್ರೇಣಿಗಳಲ್ಲಿ ಪಾಸಾಗುವರು. ಈ ಬಗೆಯ ನಂಬಿಕೆಗಳನ್ನು ಹೊತ್ತಿರುವಕೆಲವು ವಿಶೇಷವಾದ ಗಣಪತಿ ದೇವಾಲಯಗಳಿವೆ. ಅವುಗಳಲ್ಲಿ ಪೂಜೆ ಮಾಡಿಸುವ, ಕಾಯಿ ಒಡೆಸುವ ಶ್ರದ್ಧೆ ಮತ್ತು ಆರಾಧನೆಯ ಆಧಾರದ ಮೇಲೆ ಉತ್ತಮ ಅಂಕಗಳು ಸಿಗುತ್ತವೆ ಎಂಬಂತಹ ವಿಜ್ಞಾನ ಮತ್ತು ಗಣಿತದ ವಿದ್ಯಾರ್ಥಿಗಳಿರುವಾಗ ಅವರಿಂದ ಎಂತಹ ಪ್ರಗತಿಯ ಮತ್ತು ವೈಜ್ಞಾನಿಕ ವಿಕಾಸವನ್ನುನಿರೀಕ್ಷಿಸಬಹುದು? ಅವರು ಪಡೆದಿರುವ ವೈಜ್ಞಾನಿಕ ಶಿಕ್ಷಣದ ಮಹತ್ವ ಮತ್ತು ಉದ್ದೇಶವಾದರೂ ಏನು?
3.ದ್ವಂದ್ವ ನೀತಿಯ ಪೋಷಕರು: ಶಾಲೆಯಲ್ಲಿ ವಿಜ್ಞಾನವನ್ನು ಮತ್ತು ವೈಜ್ಞಾನಿಕ ವಿಷಯವನ್ನು ಕಲಿಯುತ್ತಿದ್ದರೆ, ಇತ್ತ ಅದಕ್ಕೆ ವ್ಯತಿರಿಕ್ತವಾಗಿರುವ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿರುತ್ತಾರೆ. ಯಂತ್ರ ಮಂತ್ರ ಮತ್ತು ತಾಯತಗಳ ಶಕ್ತಿಗಳ ಬಗ್ಗೆ ಭ್ರಮೆಗಳನ್ನು ಹುಟ್ಟಿಸಿರುತ್ತಾರೆ.
4. ಕರ್ಮ ಸಿದ್ಧಾಂತ: ಯಾವ ಜನ್ಮದಲ್ಲಿ ಈ ಮಗುವು ಏನು ಮಾಡಿತ್ತೋ ಅದಕ್ಕೆ ಈಗ ಓದು ಬರಹ ತಲೆಗೆ ಹತ್ತುತ್ತಿಲ್ಲ. ಅವರವರ ಕರ್ಮ ಅವರವರು ಅನುಭವಿಸುತ್ತಾರೆ. ಯಾರೇನೂ ಮಾಡಲಾಗುವುದಿಲ್ಲ.
5.ಹೋಲಿಕೆಯ ಒತ್ತಡ: ಮೇಲಿನ ಧೋರಣೆಗಳಿಗೆ ಹೊರತಾಗಿ ಇನ್ನು ಬೇರೆ ಚತುರ ಮತ್ತು ಓದುವ ವಿದ್ಯಾರ್ಥಿಗಳಿಗೆ ಹೋಲಿಸುತ್ತಾ ನೀನು ಕೂಡಾ ಹಾಗೆಯೇ ಉತ್ತಮ ಅಂಕಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದು.
6. ಮೊದಲ ಸ್ಥಾನದ ಗೀಳು: ಯಾವಾಗಲೂ ನೀನು ಮೊದಲನೆಯ ಸ್ಥಾನದಲ್ಲೇ ಇರಬೇಕು ಎಂದು ಒತ್ತಾಯಿಸುವುದು. ಯಾವಾಗಲೇ ಸ್ವಲ್ಪ ಕಡಿಮೆ ಅಂಕ ಬಂದರೂ ಅತೃಪ್ತಿಯನ್ನು ತೋರಿಸುವ ಪೋಷಕರು ಮಕ್ಕಳನ್ನು ಮಾನಸಿಕ ರೋಗಕ್ಕೆ, ಖಿನ್ನತೆಗೆ ತಳ್ಳುತ್ತಾರೆ.
7. ದಾಖಲೆಯ ಸಾಧನೆ: ನಮ್ಮ ಕುಟುಂಬದಲ್ಲೇ ಇದುವರೆಗೂ ಯಾರೂ ಮಾಡಿಲ್ಲದಿರುವುದನ್ನು ನೀನು ಮಾಡಬೇಕು. ದಾಖಲೆಯ ಕೆಲಸ ನಿನ್ನದಾಗಬೇಕು ಎಂದು ಒತ್ತಾಯಿಸುವುದು ಕೂಡಾ ಮಹಾ ತಪ್ಪಿನ ಕೆಲಸ. ಮೊದಲನೆಯದಾಗಿ, ದಾಖಲೆ ಮಾಡುವ ಕಾರಣಕ್ಕಾಗಿಯೇ ಸಾಧಿಸಲು ಹೊರಡುವುದೇ ಮನೋರೋಗದ ಒಂದು ಲಕ್ಷಣ. ಕೀಳರಿಮೆಯನ್ನು ದಾಟಲು ಮೇಲರಿಮೆಯನ್ನು ಸಾಧಿಸಿಕೊಳ್ಳಲು ಹೋಗುವ ಒಂದು ಮಾನಸಿಕ ಸಮಸ್ಯೆ. ಲಿಮ್ಕಾ ಅಥವಾ ಗಿನ್ನಿಸ್ ದಾಖಲೆ ಮಾಡಬೇಕೆಂದೇ ದಿನಗಟ್ಟಲೇ ನೃತ್ಯ ಮಾಡುವುದು, ಮಾತಾಡುವುದು, ಬಾಯಲ್ಲಿ ಹೆಚ್ಚು ಕಾಯಿ ಸುಲಿಯುವುದು, ಕೋಕ್ ಬಾಟಲ್ಲಿನ ಮೇಲೆ ಕೀ ಬೋರ್ಡ್ ಇಟ್ಟುಕೊಂಡು ಟೈಪ್ ಮಾಡುವುದು; ಇವೆಲ್ಲವೂ ಅನಗತ್ಯ ಮತ್ತು ಅವೈಚಾರಿಕ ಪ್ರಯತ್ನಗಳು. ಅದೇ ರೀತಿ, ಕೈಗಳಲ್ಲಿ ವರ್ಷಾನುಗಟ್ಟಲೆ ಉಗುರು ಬೆಳೆಸುವುದು, ಕೂದಲು ಬೆಳೆಸುವುದು ಇತ್ಯಾದಿಗಳಂತೂ ಇನ್ನೂ ಬೇಡದೇ ಇರುವಂತಹ ದಾಖಲೆಗಳು. ಅವರ್ಯಾರೋ ಎಷ್ಟೋ ಉದ್ದ ಉಗುರು ಬೆಳೆಸಿದರೆ ಯಾರಿಗೇನು? ಹೋಗಲಿ, ಅವರಿಗೇ ಏನು? ಆದರೆ, ಇನ್ನೂ ಕೆಲವು ಬಗೆಯ ದಾಖಲೆಗಳು ಆರೋಗ್ಯಕರವಾಗಿರುತ್ತವೆ. ಲತಾ ಮಂಗೇಶ್ಕರ್ ಯಾವುದೇ ದಾಖಲೆ ಮಾಡುವುದಕ್ಕಾಗಿ ಹಾಡಿಕೊಂಡು ಹೋದವರಲ್ಲ. ಆದರೆ, ಅವರಿಗಿರುವ ಪ್ರತಿಭೆ ಮತ್ತು ಸಾಮರ್ಥ್ಯದ ಕಾರಣದಿಂದಾಗಿ ಹೆಚ್ಚಿನ ಅವಕಾಶಗಳು ಸಿಕ್ಕು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಹಾಡುಗಳನ್ನು ಹಾಡಿದಂತಹ ದಾಖಲೆ ಅವರದಾಗಿರುತ್ತದೆ. ಇದೇ ರೀತಿಯಲ್ಲಿ ಕೆಲವು ಕ್ರೀಡೆಗಳಲ್ಲಿಯೂ ಆಗುತ್ತದೆ. ಈ ದಾಖಲೆಗಳನ್ನು ಅಳೆಯುವ ಮಾನದಂಡವೇ ಬೇರೆ. ಒಟ್ಟಾರೆ ದಾಖಲೆಗಾಗಿಯೇ ಸಾಧನೆ ಮಾಡಲು ಹೋಗುವುದು ಒಂದು ಅಗ್ಗದ ದೃಷ್ಟಿಕೋನ ಮತ್ತು ಸಮಸ್ಯೆ ಹೊಂದಿರುವಂತಹ ಮನಸ್ಥಿತಿ ಎಂದು ಇಲ್ಲಿ ನಾನು ಹೇಳಲು ಹೊರಟಿರುವುದು. ಮಕ್ಕಳಿಗೆ ಈ ದಾಖಲೆಗಳ ಹುಚ್ಚನ್ನು ಹಿಡಿಸಿದರೆ ಅವರಂತೂ ನಿತ್ಯ ಅತೃಪ್ತರಾಗಿದ್ದು ಬಹು ಬೇಗನೆ ಖಿನ್ನತೆಗೆ ಜಾರುತ್ತಾರೆ.
8. ಹೆಸರಿನ ಗೀಳು: ದಾಖಲೆಯನ್ನು ಮಾಡುವುದರ ಹುಚ್ಚಿನ ಮತ್ತೊಂದು ಮುಖವೇ ಹೆಸರಿನ ಗೀಳು. ಸಮಾಜದಲ್ಲಿ ತಮ್ಮ ಹೆಸರು ಅತ್ಯಂತ ಪ್ರಚಲಿತದಲ್ಲಿರಬೇಕು. ಒಳ್ಳೆಯ ಹೆಸರು ಬರಬೇಕು ಎಂದು ಮಕ್ಕಳನ್ನು ಹುರಿದುಂಬಿಸುವುದೂ ಕೂಡಾ ಅವರಿಗೆ ನಿಜವಾದ ಶಿಕ್ಷಣವನ್ನು ಪಡೆಯುವುದರಲ್ಲಿ ತೊಡಕುಂಟಾಗುತ್ತದೆ.
9.ನಕಲು ಪ್ರತಿಗಳ ಅಪೇಕ್ಷೆ: ನಾನು ಸಾಹಿತಿ, ನೀನೂ ಸಾಹಿತಿಯಾಗಬೇಕು. ನಾನು ಡಾಕ್ಟರ್, ನಮ್ಮ ಕುಟುಂಬದವರೆಲ್ಲಾ ಡಾಕ್ಟರ್, ನೀನೂ ಡಾಕ್ಟರ್ ಆಗಬೇಕು. ನಮ್ಮದು ಇಂಜಿನಿಯರ್ ಫ್ಯಾಮಿಲಿ. ನೀನೂ ಇಂಜಿನಿಯರ್ ತಗೊ; ಇತ್ಯಾದಿಗಳ ಜೊತೆಯಲ್ಲಿ, ನೀನು ಅಂತಾ ಸಾಹಿತಿಗಳ ಮಗ/ಮಗಳು. ನಿನಗೆ ಸಾಹಿತ್ಯ ರಚನೆ ರಕ್ತದಲ್ಲಿಯೇ ಬಂದಿರುತ್ತದೆ, ಇಂತಹವುಗಳೂ ವಿಕಾಸಮುಖ ಅಥವಾ ಪ್ರಗತಿಪರ ಶಿಕ್ಷಣಕ್ಕೆ ಅಡ್ಡಗಾಲೇ ಆಗಿವೆ. ಯಾವುದೇ ಬಗೆಯ ಪೂರ್ವಗ್ರಹಗಳು, ಪೂರ್ವನಿರ್ಧರಿತ ಉದ್ದೇಶ ಮತ್ತು ಧೋರಣೆಗಳು ಪ್ರಗತಿಪರವಲ್ಲ.
10. ಅವರವರ ಸಾಮರ್ಥ್ಯ: ನಾವು ಮಕ್ಕಳಿಗೆ ಏನೂ ಹೇಳಕ್ಕಾಗಲ್ಲ. ಅವರ ಆಸಕ್ತಿಗೆ, ಸಾಮರ್ಥ್ಯಕ್ಕೆ ಅವರೇನೋ ಮಾಡಿಕೊಳ್ಳುತ್ತಾರೆ. ನಾವೇನೂ ಮಾಡುವಷ್ಟಿಲ್ಲ. ಮಾಡಿದರೂ ನಡೆಯಲ್ಲ. ಬುದ್ಧಿ ಇದ್ದರೆ ಅನ್ನ ತಿಂತಾನೆ, ಇಲ್ಲಾಂದ್ರೆ ಮಣ್ಣು ತಿಂತಾನೆ; ಎಂಬಂತಹ ಉಡಾಫೆಯ ಧೋರಣೆಯೂ ಕೂಡಾ ಮಗುವಿನ ಪ್ರಗತಿಪರ, ಪುರೋಗಾಮಿ ಶಿಕ್ಷಣಕ್ಕೆ ತೊಡಕಾಗಿದೆ.
11. ನ್ಯೂನತೆಗಳನ್ನು ಗುರುತಿಸದ ಪೋಷಕರು: ಮಗುವಿಗೆ ಮೆದುಳಿನ ಅಥವಾ ನರಗಳ ಸಮಸ್ಯೆಯೋ, ಇನ್ನೇನಾದರೂ ಆರೋಗ್ಯದ ಸಮಸ್ಯೆಯೋ ಇದ್ದು ಕಲಿಯಲಾರದೇ ಹೋದಾಗಲೂ ಅದನ್ನು ಗುರುತಿಸದೇ ಸಾಧಾರಣ ಮಾದರಿಯ ಪದ್ಧತಿಯಲ್ಲಿಯೇ ಕಲಿಸಲು ಬಲವಂತ ಪಡಿಸುವುದು ಬಹುದೊಡ್ಡ ಸಮಸ್ಯೆ. ಅವರಿಗೆ ವಿಶೇಷವಾದಂತಹ ಗಮನಗಳನ್ನು ಕೊಡಬೇಕಾಗುತ್ತದೆ. ಅಲ್ಲದೇ ವಿಶೇಷವಾದಂತಹ ಮಕ್ಕಳಿಗೆ ವಿಭಿನ್ನವಾದ ಬೋಧನಾಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಅರಿವೇ ಇಲ್ಲದೇ ಇರುವುದೂ ಕೂಡ ನಾವೀಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ.
12. ಪ್ರತಿಭೆ ಮತ್ತು ಸಾಮರ್ಥ್ಯ ಗಳನ್ನು ಗುರುತಿಸದಿರುವುದು: ನ್ಯೂನತೆಗಳನ್ನು ಗುರುತಿಸಲಾಗದಂತಹ ಪೋಷಕರು ಮತ್ತು ಶಿಕ್ಷಕರು ಅದೇ ರೀತಿಯಲ್ಲಿ ಒಂದು ಮಗುವಿನ ವಿಶೇಷ ಮತ್ತು ಅನುಪಮವಾಗಿರುವಂತಹ ಪ್ರತಿಭೆೆ ಮತ್ತು ಸಾಮರ್ಥ್ಯಗಳನ್ನು ಗುರುತಿಸದಿರುವುದು ಕೂಡ ಸದ್ಯದ ಸಮಸ್ಯೆ. ಮಗುವಿನ ಎಷ್ಟೆಷ್ಟೋ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಇದು ಯಾಕೆ ಪರೀಕ್ಷೆಯಲ್ಲಿ ಅಂಕವನ್ನು ಗಳಿಸಲ್ಲ, ಉದ್ಯೋಗ ಒದಗಿಸಲ್ಲ, ಹೊಟ್ಟೆ ಬಟ್ಟೆಗೆ ನೆರವಾಗಲ್ಲ; ಎಂದೇ ಅಸಡ್ಡೆ ಮಾಡುವ ಬಹುದೊಡ್ಡ ಸಮಸ್ಯೆಯೂ ಕೂಡ ಪ್ರಗತಿಪರ ಶಿಕ್ಷಣಕ್ಕೆ ತೊಡಕಾಗಿವೆ.
13. ಪೋಷಕರ ಕನಸಿನ ಗೋಪುರಗಳು: ಮಗುವಿನ ಕನಸುಗಳನ್ನು ಅರ್ಥ ಮಾಡಿಕೊಳ್ಳಲು ಅಥವಾ ತಿಳಿಯಲೂ ಬಹುಕಷ್ಟದ ಕೆಲಸ. ಆದರೆ, ಬಹಳಷ್ಟು ಪೋಷಕರು ತಮ್ಮ ಕನಸಿನ ಗೋಪುರಗಳಲ್ಲಿ ಅವರನ್ನು ಕಾಣುವಂತಹ ಧಾವಂತದಿಂದಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ಸಂಘರ್ಷವುಂಟಾಗುತ್ತದೆ.
ಆಸೆ ವರ್ಸಸ್ ಅಗತ್ಯ
ಬಹುಕಾಲದ ನಂತರ ಭೇಟಿಯಾದ ಗೆಳೆಯನೊಬ್ಬ ತನ್ನ ಮಗ ಬರೀ ಎಪ್ಪತ್ತು ಪರ್ಸೆಂಟು ತೆಗೆದುಕೊಂಡಿದ್ದಾನೆ ಎಂದು ಪೇಚಾಡಿಕೊಳ್ಳುತ್ತಿದ್ದ. ನನಗೆ ಚೆನ್ನಾಗಿ ಗೊತ್ತಿತ್ತು. ಆ ನನ್ನ ಸ್ನೇಹಿತ ಅವನು ಆ ವಯಸ್ಸಿನಲ್ಲಿ, ಆ ತರಗತಿಯಲ್ಲಿ ಎಷ್ಟು ತೆಗೆದುಕೊಳ್ಳುತ್ತಿದ್ದ ಎಂದು. ಅವನೆಂದೂ ಮೂವತ್ತು - ಮೂವತ್ತೈದು ದಾಟಿಯೇ ಇರಲಿಲ್ಲ. ಅದೂ ಔದಾರ್ಯದ ವೌಲ್ಯಮಾಪನಗಳಿಂದಾಗಿ. ಇದನ್ನು ನೆನಪಿಸಿದೆ. ಆದರೆ ಅದೇನೋ ಆ ಕಾಲಕ್ಕೆ ಸರಿ ಹೋಯ್ತು. ಆದರೆ, ಈ ಕಾಲಕ್ಕೆ ಇವನು ಹೇಗಿರಬೇಕು? ಆವಾಗೇನೋ ಹಾಗಿತ್ತು, ಈವಾಗಲಾದರೂ ಇವನು ಚೆನ್ನಾಗಿರಲಿ ಅನ್ನೋದು ನನ್ನ ಆಸೆ ಎನ್ನುತ್ತಿದ್ದ. ಕಾಲದಿಂದ ಕಾಲಕ್ಕೆ ಬದಲಾಗಬೇಕಾಗಿರುವುದು ಆಸೆಗಳಲ್ಲ. ಧೋರಣೆಗಳು, ವಿಚಾರಗಳು, ವಿಷಯಗಳು ಮತ್ತು ಅಗತ್ಯಗಳು. ಬಹಳಷ್ಟು ಪೋಷಕರಿಗೆ ಆಸೆಗಳಿಗೂ ಮತ್ತು ಅಗತ್ಯಗಳಿಗೂ ವ್ಯತ್ಯಾಸ ತಿಳಿಯದೇ ಇರುವುದರಿಂದ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಎಡವುತ್ತಾರೆ. ಪೋಷಕರು ತಮ್ಮಾಸೆಯಂತೆ ಮಕ್ಕಳನ್ನು ರೂಪಿಸಲು ಹೋಗುತ್ತಾರೆ. ಅವರ ವಿದ್ಯೆ, ಕಲಿಕೆ ಮತ್ತು ಮುಂದಿನ ಉದ್ಯೋಗಾವಕಾಶವೆಲ್ಲವೂ ತಮ್ಮಾಸೆಯಂತೆ ಆಗಲಿ ಎಂದು ಅಪೇಕ್ಷೆಪಡುತ್ತಾರೆ ಮತ್ತು ಅದಕ್ಕಾಗಿ ತಾವೂ ಶ್ರಮಿಸುತ್ತಾರೆ ಮತ್ತು ಮಕ್ಕಳನ್ನು ಒತ್ತಾಯಿಸುತ್ತಾರೆ. ಆದರೆ, ಮಕ್ಕಳಿಗೆ ಅಗತ್ಯವಾಗಿರುವುದನ್ನು ನೋಡುವಲ್ಲಿ ವಿಫಲರಾಗುತ್ತಾರೆ. ಮಗುವಿನ ಕುರಿತಾಗಿಯೇ ಹಲವು ವಿಷಯಗಳು ನಮಗೆ ತಿಳಿದುಕೊಳ್ಳಲು ಈಗ ಸಾಧ್ಯವಾಗುತ್ತಿದೆ. ಅವರನ್ನು ನಮ್ಮ ಬಾಲ್ಯದ ಮತ್ತು ನಮ್ಮ ಎಳವೆಯ ಸಮಯದಲ್ಲಿ ನಮ್ಮ ಬಗ್ಗೆ ನಮ್ಮ ಪೋಷಕರಿಗಿದ್ದ ತಿಳುವಳಿಕೆಗಿಂತ ಈಗ ನಮಗೆ ಉತ್ತಮವಾದ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗಿದೆ. ಇದರಿಂದಾಗಿ ಮಗುವಿನ ಜೈವಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಮತ್ತು ಅದರೊಂದಿಗೇ ಭೌತಿಕ, ಲೌಕಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಗತ್ಯಗಳನ್ನೂ ಉತ್ತಮ ರೀತಿಯಲ್ಲಿ ಪೂರೈಸುವ ಸಾಧ್ಯತೆಗಳು ವಿಪುಲವಾಗಿವೆ. ಒಟ್ಟಾರೆ, ಪೋಷಕರು ತಮ್ಮ ಮಕ್ಕಳನ್ನು ಅರಿಯುವುದರಲ್ಲಿ ಹೊಸ ತಿಳುವಳಿಕೆಗಳಿಗೆ ತೆರೆದುಕೊಳ್ಳಲೇಬೇಕು.