ಕ್ಯಾಲಿಫೋರ್ನಿಯ ಬೆಂಕಿ ಉಲ್ಬಣ: 110ಕ್ಕೂ ಅಧಿಕ ಮಂದಿ ನಾಪತ್ತೆ
ಕ್ಯಾಲಿಫೋರ್ನಿಯ, ನ. 12: ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಉಲ್ಬಣಿಸಿದ್ದು, ಹೊಸ ಪ್ರದೇಶಗಳಿಗೆ ವೇಗವಾಗಿ ಹರಡುತ್ತಿದೆ.
ಅದೇ ವೇಳೆ, ರವಿವಾರ ಪ್ರಬಲ ಗಾಳಿ ಬೀಸುತ್ತಿದ್ದು ಅಗ್ನಿಶಾಮಕ ಸಿಬ್ಬಂದಿಯ ಕೆಲಸವನ್ನು ಕಠಿಣಗೊಳಿಸುತ್ತಿದೆ.
ಸ್ಯಾಕ್ರಮೆಂಟೊ ನಗರದ ಈಶಾನ್ಯದಲ್ಲಿ ಗುರುವಾರ ಹೊತ್ತಿಕೊಂಡ ಬೆಂಕಿ ಈವರೆಗೆ ಕನಿಷ್ಠ 23 ಮಂದಿಯನ್ನು ಬಲಿತೆಗೆದುಕೊಂಡಿದೆ. ಅದು ಗುಡ್ಡಗಾಡು ಪಟ್ಟಣ ಪ್ಯಾರಡೈಸ್‌ನ ಹೆಚ್ಚಿನ ಭಾಗವನ್ನು ಆಪೋಶನ ತೆಗೆದುಕೊಂಡಿದೆ.
ಬೆಂಕಿ ಹರಡುತ್ತಿರುವ ಪ್ರದೇಶದ 110ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಬಟ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರೆಯೊಬ್ಬರು ತಿಳಿಸಿದರು.
ಲಾಸ್ ಏಂಜಲಿಸ್ ಸಮೀಪದ ಮಲಿಬು ಪಟ್ಟಣದ ಸಮುದ್ರ ತೀರದಲ್ಲಿರುವ ಶ್ರೀಮಂತ ಕಾಲನಿಗೂ ಅಪಾಯ ಎದುರಾಗಿದೆ.
ಈವರೆಗೆ ಕಾಡ್ಗಿಚ್ಚು 6,700ಕ್ಕೂ ಅಧಿಕ ಮನೆಗಳು ಮತ್ತು ವ್ಯಾಪಾರಿ ಕಟ್ಟಡಗಳನ್ನು ಸುಟ್ಟಿದೆ.
ಕಾಡ್ಗಿಚ್ಚು ರವಿವಾರದವರೆಗೆ ಪ್ಲೂಮಾಸ್ ರಾಷ್ಟ್ರೀಯ ಅರಣ್ಯದ ಗಡಿಯಲ್ಲಿ 1,09,000 ಎಕರೆಗೂ ಅಧಿಕ ಪ್ರದೇಶವನ್ನು ಸುಟ್ಟಿದೆ.