14 ದಿನಗಳಿಂದ ಗೋವಾಕ್ಕೆ ತೆರಳದ ಕರ್ನಾಟಕ ಕರಾವಳಿ ಮೀನು
‘ಸರಕಾರ ಮಟ್ಟದಲ್ಲಿ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ’
ಉಡುಪಿ, ನ.12: ಕರ್ನಾಟಕವೂ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಮೀನುಗಳಿಗೆ ಗೋವಾದ ಅಧಿಕೃತ ನಿಷೇಧ ಇಂದಿನಿಂದ ಜಾರಿಗೊಂಡಿದ್ದರೂ, ಕಳೆದ 14 ದಿನಗಳಿಂದ ಕರ್ನಾಟಕದ ಕರಾವಳಿಯಿಂದ ಒಂದೇ ಒಂದು ಮೀನು ಗೋವಾಕ್ಕೆ ಹೋಗಿಲ್ಲ ಎಂದು ತಿಳಿದುಬಂದಿದೆ.
ಹೊರ ರಾಜ್ಯಗಳಿಂದ ಬರುವ ಮೀನುಗಳಿಗೆ ಅವುಗಳ ತಾಜಾತನ ಉಳಿಯಲು ವಿಷಯುಕ್ತವಾದ ಫಾರ್ಮಾಲಿನ್ ರಾಸಾಯನಿಕವನ್ನು ಬೆರೆಸಲಾಗುತ್ತದೆ ಎಂಬ ವದಂತಿಯ ಮೇಲೆ ಕರ್ನಾಟಕವೂ ಸೇರಿದಂತೆ ಹೊರಗಿನಿಂದ ಆಮದಾಗುವ ಎಲ್ಲಾ ಮೀನುಗಳ ಮೇಲೆ ಆರು ತಿಂಗಳ ಕಾಲ ನಿಷೇಧವನ್ನು ವಿಧಿಸಲಾಗಿದೆ ಎಂದು ಶನಿವಾರ ಪಣಜಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿತ್ತು.
ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ನೀಡಿದ ಈ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಗೋವಾದ ಈ ನಿರ್ಧಾರದ ತಾರ್ಕಿಕತೆಯನ್ನು ರಾಜ್ಯದ ಮೀನುಗಾರರು ಗಟ್ಟಿ ಸ್ವರದಲ್ಲಿ ಪ್ರಶ್ನಿಸತೊಡಗಿದ್ದಾರೆ. ಈಗಾಗಲೇ ಪ್ರಾಕೃತಿಕ ಮುನಿಸು ಸೇರಿದಂತೆ ವಿವಿಧ ಕಾರಣಗಳಿಂದ ತೀವ್ರವಾಗಿ ಸೊರಗಿರುವ ಈ ಬಾರಿಯ ಮೀನುಗಾರಿಕೆ, ಗೋವಾ ಸರಕಾರದ ಈ ಘೋಷಣೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕುವ ಭೀತಿಯನ್ನು ಕರಾವಳಿಯ ಮೀನುಗಾರರು ವ್ಯಕ್ತಪಡಿಸುತಿದ್ದಾರೆ.
ಈ ನಡುವೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಕರಾವಳಿಯ ಮೀನುಗಾರರು ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲು ಉಡುಪಿಗೆ ಆಗಮಿಸಿದ್ದ ರಾಜ್ಯ ಮೀನುಗಾರಿಕಾ ಇಲಾಖೆಯ ಪ್ರಭಾರ ನಿರ್ದೇಶಕ ರಾಮಕೃಷ್ಣ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಸಭೆ ರದ್ದಾದ ಕಾರಣ ಬೆಂಗಳೂರಿಗೆ ಮರಳಿದ್ದಾರೆ.
ಆದರೆ ರಾಮಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳಿಗೆ, ಸಭೆ ರದ್ದಾದರೂ, ಸರಕಾರದ ಮಟ್ಟದಲ್ಲಿ ಗೋವಾದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ನಾವು ಕಾದು ನೋಡಲು ನಿರ್ಧರಿಸಿದ್ದೇವೆ. ಶೋಕಾಚರಣೆಯ ಮೂರು ದಿನಗಳು ಸೇರಿದಂತೆ ಒಂದು ವಾರ ಕಾಲ ಕಾದು ನೋಡಿ, ನಂತರ ಮುಂದಿನ ಕ್ರಮದ ಬಗ್ಗೆ ಸಮಸ್ತ ಮೀನುಗಾರರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದವರು ತಿಳಿಸಿದರು.
ಮಲ್ಪೆಯಲ್ಲಿ ಸಿಗುವ ಮೀನಿನ ಆಧಾರದಲ್ಲಿ ಪ್ರತಿದಿನ 5ರಿಂದ 15-20 ಲಾರಿ ಮೀನು ಗೋವಾಕ್ಕೆ ಹೋಗುತ್ತಿತ್ತು. ಪ್ರತಿ ಲಾರಿಯಲ್ಲಿ 3ರಿಂದ 5ಟನ್‌ಗಳವರೆಗೆ ಮೀನು ಇರುತಿತ್ತು. ಈ ಮೀನುಗಳು ಅಲ್ಲಿನ ಸ್ಥಳೀಯ ಮಾರುಕಟ್ಟೆಗೆ ಹಾಗೂ ಫಿಶ್ ಮಿಲ್‌ಗಳಿಗೆ ಹೋಗುತಿದ್ದವು. ಆದರೆ ಕಳೆದ 14 ದಿನಗಳಿಂದ ಇಲ್ಲಿಂದ ಯಾವುದೇ ಮೀನು ಗೋವಾಕ್ಕೆ ಹೋಗಿಲ್ಲ. ಗೋವಾದ ನಿರ್ಬಂಧದಿಂದಾಗಿ ಮಲ್ಪೆಯ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗೆಟ್ಟಿದ್ದಾರೆ ಎಂದು ಅವರು ನುಡಿದರು.
ಗೋವಾದ ಮೀನಿಗೆ ತಡೆ ಒಡ್ಡಲು ಒತ್ತಾಯ: ಈ ನಡುವೆ ಕರ್ನಾಟಕದ ಮೀನಿಗೆ ಸಂಪೂರ್ಣ ನಿರ್ಬಂಧ ವಿಧಿಸಿರುವ ಗೋವಾ ಸರಕಾರದ ಕ್ರಮಕ್ಕೆ ಪ್ರತಿಯಾಗಿ, ರಾಜ್ಯದ ಮೂಲಕ ಕೇರಳಕ್ಕೆ ಸಾಗುವ ಗೋವಾದ ಮೀನಿಗೆ ತಡೆಯೊಡ್ಡಬೇಕು ಹಾಗೂ ಗೋವಾದ ಮೀನನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂಬ ಕೂಗು ಮೀನುಗಾರರ ಒಂದು ವಲಯದಿಂದ ಜೋರಾಗಿ ಕೇಳಿಬರುತ್ತಿದೆ.
ಗೋವಾದ ಬಹುಪಾಲು ಮೀನು ಕೇರಳಕ್ಕೆ ರಫ್ತಾಗುತ್ತಿದೆ. ಅದು ಕಾರವಾರದ ಮೂಲಕ ರಾಜ್ಯ ಪ್ರವೇಶಿಸಿ ಉತ್ತರ ಕನ್ನಡ, ಉಡುಪಿ, ದ.ಕ.ದ ಮೂಲಕವೇ ಕೇರಳಕ್ಕೆ ಸಾಗುತ್ತಿದೆ. ಇದನ್ನು ತಡೆದರೆ ಗೋವಾ ಅನಿವಾರ್ಯ ವಾಗಿ ರಾಜ್ಯದ ಮೀನುಗಳಿಗೆ ಹೇರಿರುವ ನಿಷೇಧವನ್ನು ಹಿಂಪಡೆಯಲು ಸಾಧ್ಯವಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರಕಾರವನ್ನು ಒತ್ತಾಯಿಸಲು, ಇದಕ್ಕಾಗಿ ಸಂಘಟಿತ ಹೋರಾಟ ನಡೆಸಲೂ ಮೀನುಗಾರರ ಒಂದು ವರ್ಗ ಚಿಂತನೆ ನಡೆಸಿದೆ.
ನಿಷೇಧ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಗೋವಾ ರಾಜ್ಯದ ಮೀನು ಸಾಗಾಟ ವಾಹನ ಸಹಿತ ಎಲ್ಲಾ ವಾಹನ ಸಂಚಾರಕ್ಕೆ ರಸ್ತೆ ತಡೆ ಮಾಡಿ ಗೋವಾ ರಾಜ್ಯದೊಂದಿಗೆ ಎಲ್ಲಾ ವ್ಯವಹಾರಗಳನ್ನು ನಿರ್ಬಂಧಿಸುವ ಮೂಲಕ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಸದ್ಯಕ್ಕೆ ಆರು ತಿಂಗಳ ನಿಷೇಧ: ಗೋವಾ ಸರಕಾರ ಸದ್ಯಕ್ಕೆ ಹೊರಗಿನಿಂದ ಬರುವ ಮೀನುಗಳ ಮೇಲೆ ಆರು ತಿಂಗಳ ನಿಷೇಧ ವಿಧಿಸಿದೆ. ಶನಿವಾರ ಪಣಜಿಯಲ್ಲಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ನೀಡಿದ ಹೇಳಿಕೆಯಂತೆ ಈ ನಿಷೇಧ ಇಂದಿನಿಂದ ಅಧಿಕೃತವಾಗಿ ಜಾರಿಯಾಗಿದೆ. ಫುಡ್ ಆ್ಯಂಡ್ ಡ್ರಗ್ಸ್ ಅಡ್ಮಿನಿಸ್ಟ್ರಿಷನ್ (ಎಫ್‌ಡಿಎ) ಸರ್ಟಿಫಿಕೇಷನ್ ಇಲ್ಲದೇ ಯಾವುದೇ ಮೀನನ್ನು ಗೋವಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದವರು ಘೋಷಿಸಿದ್ದಾರೆ.
ಇದೇ ವೇಳೆ ಸರಕಾರ ಸಮುದ್ರ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆಗಾಗಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವನ್ನು ರಾಜ್ಯದಲ್ಲಿ ಸ್ಥಾಪಿಸಲಿದೆ ಎಂದು ಅವರು ಪ್ರಕಟಿಸಿದ್ದು, ಈ ಪ್ರಯೋಗಾಲಯ ಮುಂದಿನ ಆರು ತಿಂಗಳೊಳಗೆ ಸ್ಥಾಪನೆಗೊಳ್ಳದೇ ಇದ್ದಲ್ಲಿ, ಈಗ ವಿಧಿಸಿರುವ ನಿಷೇಧವನ್ನು ಮತ್ತೆ ಮುಂದು ವರಿಸಲಾಗುವುದು ಎಂದೂ ಅವರು ಘೋಷಿಸಿದ್ದಾರೆ.
ಗೋವಾ ಸರಕಾರ ಇಂಥ ನಿಷೇಧ ವಿಧಿಸಿರುವುದು ಇದು ಎರಡನೇ ಸಲ ಎಂದು ಹೇಳಲಾಗುತ್ತಿದೆ. ಮೂರು ತಿಂಗಳ ಹಿಂದೆ ಕಳೆದ ಆಗಸ್ಟ್‌ನಲ್ಲಿ 15 ದಿನಗಳ ಕಾಲ ಇಂಥ ನಿಷೇಧ ವಿಧಿಸಲಾಗಿತ್ತು. ಬಳಿಕ ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಎಲ್ಲಾ ವಾಹನಗಳನ್ನು ಪರಿಶೀಲಿಸಿ ಒಳಗೆ ಬಿಡುವ ಕ್ರಮಕೈಗೊಳ್ಳಲಾಗಿತ್ತು.
ಯಾವುದೇ ತಪ್ಪು ಮಾಡದಿದ್ದರೂ ಕರಾವಳಿ ಭಾಗದ ಸಾವಿರಾರು ಮೀನುಗಾರರು ಹಾಗೂ ಮೀನು ಮಾರಾಟಗಾರರು ಈಗ ತಮ್ಮ ‘ತುತ್ತಿನ ಚೀಲ’ವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ಕ್ಷಣಿಕ ಅವಧಿಯ ಲಾಭಕ್ಕಾಗಿ ದೀರ್ಘಾವಧಿಯ ಲಾಭವನ್ನು ಕಳೆದುಕೊಳ್ಳುವಂಥ ದುರಾಶೆಗೆ ನಾವೆಂದೂ ಬಲಿ ಬೀಳುವುದಿಲ್ಲ ಎಂಬ ಉಡುಪಿಯ ನೂರಾರು ಮೀನುಗಾರ ಕುಟುಂಬಗಳ ಹೃದಯದಾಳದ ಮಾತು ಗೋವಾ ಸರಕಾರಕ್ಕೆ ತಲುಪೀತೇ ?
ಸರಕಾರದ ಮಟ್ಟದಲ್ಲಿ ಗೋವಾ ಸರಕಾರದೊಂದಿಗೆ ಮಾತುಕತೆ ನಡೆಸಿ ರಾಜ್ಯದ ಮೀನುಗಳ ಮೇಲೆ ಹೇರಿರುವ ನಿಷೇಧವನ್ನು ವಾಪಾಸು ಪಡೆಯಲು ಬೇಕಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಕೃಷ್ಣ ಭರವಸೆ ನೀಡಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸವಿರಿಸಿ ಒಂದು ವಾರ ಕಾಲ ಕಾದು ನೋಡುತ್ತೇವೆ. ಯಾವುದೇ ಪರಿಹಾರ ಸಿಗದಿದ್ದರೆ, ಮೀನುಗಾರರ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.
-ಸತೀಶ್ ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಗೋವಾ ಸರಕಾರ ಉಲ್ಲೇಖಿಸಿದಂತೆ ರಾಜ್ಯದಿಂದ ಕಳುಹಿಸಲಾದ ಮೀನಿನಲ್ಲಿ ಈವರೆಗೆ ಯಾವುದೇ ರಾಸಾಯನಿಕಗಳ ಬಳಕೆ ಪತ್ತೆಯಾಗಿಲ್ಲ. ಕೇವಲ ಕೆಲವು ಸ್ಥಾಪಿತ ಹಿತಾಸಕ್ತಿಗಳ ದುರಾಸೆಯಿಂದ ರಾಜ್ಯದ ಮೀನನ್ನು ನಿಷೇಧಿಸುವ ಹುನ್ನಾರ ನಡೆದಿದೆ. ಗೋವಾ ಸರಕಾರಕ್ಕೆ ಮಾಹಿತಿ ಕೊರತೆಯಿಂದ ರಾಜ್ಯದ ಮೀನು ಆಮದನ್ನು ನಿಷೇಧಿಸಿದೆ. ರಾಜ್ಯ ಸರಕಾರ ಮೀನುಗಾರರ ಪರವಾಗಿ ಈ ಬಗ್ಗೆ ಗೋವಾ ಸರಕಾರಕ್ಕೆ ಮಾಹಿತಿ ನೀಡಿ ನಿಷೇಧ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು.
- ಯಶ್‌ಪಾಲ್ ಸುವರ್ಣ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ