ಹಲ್ಮಿಡಿ ಶಾಸನದಿಂದಲೇ ಕನ್ನಡ ಭಾಷೆ ಉಗಮ ಎನ್ನುವುದು ಅರ್ಧಸತ್ಯ: ಡಾ.ಷ. ಶೆಟ್ಟರ್
ಮೂಡುಬಿದಿರೆ: 15ನೆ ವರ್ಷದ ‘ಆಳ್ವಾಸ್ ನುಡಿಸಿರಿ’ಗೆ ಅದ್ದೂರಿ ಚಾಲನೆ
ಮೂಡುಬಿದಿರೆ, ನ.16: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿತ 15ನೆ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗೆ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿಂದು ಬೆಳಗ್ಗೆ ಅದ್ದೂರಿ ಚಾಲನೆ ಸಿಕ್ಕಿತು.
‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ ಉಗಮ ಹಲ್ಮಿಡಿ ಶಾಸನದಿಂದ ಆಯಿತು ಎನ್ನುವುದು ಅರ್ಧ ಸತ್ಯ. ನಾಲ್ಕನೇ ಶತಮಾನದ ಆರಂಭದಲ್ಲೇ ಕನ್ನಡ ಭಾಷೆಯ ಉಗಮವಾಗಿದೆ. ಇದನ್ನು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದರು. ತೆಲುಗು ಲಿಪಿಕಾರಾರು ಮೊದಲು ಬಳಸುತ್ತಿದ್ದುದು ಕನ್ನಡ ಲಿಪಿಯನ್ನೇ. ಹದಿಮೂರನೇ ಶತಮಾನದವರೆಗೂ ಅವರು ಕನ್ನಡ ಲಿಪಿಯನ್ನೇ ಬಳಸಿದ್ದರು. ಆ ನಂತರ ತೆಲುಗು ಲಿಪಿಯನ್ನು ಲಿಪಿಕಾರರು ಕಂಡುಹಿಡಿದರು ಎಂದ ಡಾ.ಷಟ್ಟರ್, ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ. ಆದರೆ ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ ಎಂದರು.
ಸಂಶೋಧಕರು ಆಳವಾದ ಅಧ್ಯಯನ ಮಾಡಬೇಕು. ಆಕರ ಗ್ರಂಥಗಳನ್ನು ಸಿದ್ದ ಮಾದರಿಯಾಗಿಸುವುದು ಬೇಡ. ಸಂಶೋಧಕರು ಎಚ್ಚರಿಕೆಯಿಂದಿದ್ದರೆ ಸಂಸ್ಕೃತಿಯ ಬೇರನ್ನು ಪತ್ತೆ ಹಚ್ಚಬಹುದು ಎಂದು ಅವರು ಅಭಿಪ್ರಾಯಿಸಿದರು.
ಏಕತ್ವದ ಸಂಸ್ಕೃತಿ ಸಮಾಜಕ್ಕೆ ಅಪಾಯ. ಬಹುಭಾಷೆಗಳು ಒಗ್ಗೂಡಿದಾಗ ಬಹುತ್ವದ ಸಂಸ್ಕೃತಿಗೆ ಬುನಾದಿ ಹಾಕಲು ಸಾಧ್ಯ ಎಂದರು.
ನಮಗಿಂದು ಧರ್ಮದ ಸ್ವಾತಂತ್ರವಿಲ್ಲ, ಲಾಠಿ, ಪಿಸ್ತೂಲ್ ಎಲ್ಲೆಡೆ ಮೇಳೈಸುತ್ತದೆ. ಹೀಗಾಗಿ ಎಲ್ಲಿದೆ ಸಹಿಷ್ಣುತೆ ಎಂದು ಪ್ರಶ್ನಿಸಿದ ಡಾ.ಷ ಶೆಟ್ಟರ್, ಈ ಶತಮಾನ ಅಸಹಿಷ್ಣುತೆಯ ಶತಮಾನ ಎಂದರು.
ಅರಸೊತ್ತಿಗೆಯ ಕಾಲದಲ್ಲೂ ವಾಕ್ ಸ್ವಾತಂತ್ರವಿತ್ತು. ಯಾವ ಕೃತಿಯೂ ನಿಷೇಧಕ್ಕೊಳಗಾಗಿರಲಿಲ್ಲ. ಆದರೆ ಈಗಿನ ಪ್ರಜಾಪ್ರಭುತ್ವದಲ್ಲಿ ಯಾವುದು ಸರಿ, ಯಾವುದು ತಪ್ಪುಎಂದು ಸರಕಾರ ನಿರ್ಧರಿಸುತ್ತಿದೆ. ಕೃತಿಕಾರರ ಮೇಲೆ ಎಗ್ಗಿಲ್ಲದೆ ದಾಳಿ ನಡೆಯುತ್ತಿರುವುದು ವಿಷಾದನೀಯ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ, ಸಂಶೋಧಕಿ ಡಾ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎ.ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಶಿಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.