‘ಹೊಸಗಾಲದ ಸೂಳ್ನುಡಿಗಳು’ ಒಂದು ಸೀಳುನೋಟ
ಹೊಸಗಾಲದ ಒತ್ತಡಗಳು, ನಮ್ಮ ಮನಸ್ಸನ್ನು ನಮ್ಮ ಮಣ್ಣಿಂದ ದೂರ ಸರಿಸುತ್ತವೆ. ಪಡುವಣ ನಾಡುಗಳ ಕೂಡಣದ, ಹಣಕಾಸಿನ, ಸರಿತಪ್ಪಿನ ಏರ್ಪಾಡುಗಳು, ನಮ್ಮ ಬಿಡುಗಡೆ ಮತ್ತು ಹೊಸ ನಡೆಯ ದಾರಿಗಳಾಗಿ ಮಾರ್ಪಟ್ಟಿರುವಾಗ, ಇಲ್ಲಿಯತನ ನಮ್ಮಿಂದ ಮರೆಯಾಗುತ್ತಿದೆ. ಈ ಕೊರತೆಯನ್ನು ನೀಗಿಸಲೋಸುಗ, ಮರಳಿ ಮಣ್ಣಿಗೆ ಎಂದು ಹಿಂದಿರುಗಿ ನೋಡಲು ಹೋದರೆ, ಒಂದು ದೇಶ ಒಂದು ಸಂಸ್ಕೃತಿ, ದೇವಭಾಷೆ, ಹಿಂದುತ್ವ, ನ್ಯಾಶನಲಿಸಂ ಎಂಬ ಬೊಬ್ಬೆಗಳು ಕಿವಿಗಡಚುತ್ತವೆ. ಒಬ್ಬ ಕನ್ನಡಿಗನಾಗಿ, ನಮ್ಮತನವನ್ನು ಬಿಟ್ಟುಕೊಡದೆ, ಹಳೆ ಬೇರು ಹೊಸ ಚಿಗುರಿನ ಅನುಸಂಧಾನಕ್ಕೆ ಹಾತೊರೆವ ಮನಸ್ಸಿಗೆ ಒಂದು ದಾರಿ ಬೇಕಲ್ಲವೇ? ಅಂತಹದ್ದೊಂದು ದಾರಿಯನ್ನು ಭರತ್ ಕುಮಾರ್ ಅವರು ಕೊರೆದು, ತುಳಿದು, ಬಹುದೂರ ಸಾಗಿಬಂದಿದ್ದಾರೆ. ತಮ್ಮ ಹೊಸಗಾಲದ ಸೂಳ್ನುಡಿಗಳು ಎಂಬ ಪುಸ್ತಕದ ಮೂಲಕ. ಈ ಪುಸ್ತಕವು ಮೂರು ಓರಿಕೆ/ಚಿಂತನೆಗಳ ನೇಯ್ಗೆಯಾಗಿದೆ. ಮೊದಲನೆಯದು ಸೂಳ್ನುಡಿಗಳು ಅಲ್ಲವೇ, ವಚನಗಳು. ಸರಳ ಆದರೂ ಅಳವುಳ್ಳ ಮಾದರಿಯಲ್ಲಿ, ನಮ್ಮ ಒಳಗಿನ ಮತ್ತು ಹೊರಗಿನ ಅನುಭವಗಳು ಅನುಭಾವಗಳಾದ ಪರಿಯನ್ನು ತೋರ್ಪಡಿಸುವ ಬೆಡಗೇ ಈ ಸೂಳ್ನುಡಿಗಳು. ಅಂತಹ ಮಾದರಿಯಲ್ಲಿ, ನಮ್ಮೆಳಗಿನ ಹುಡುಕಾಟವನ್ನು, ಈ ನೂರೇಡಿ/ಶತಮಾನದಲ್ಲೂ ಮುಂದುವರಿಸಲು ಏನಾದರು ತೊಡಕುಂಟೇ? ಇಲ್ಲ ಎಂದು ಚೆನ್ನಾಗಿಯೇ ತೋರಿಸಿಕೊಟ್ಟಿದ್ದಾರೆ ಭರತ್ ಅವರು. ಕತ್ತಿಯ ಹೊಳಪು ಹಗೆಯ ನುಂಗಿತ್ತು,
ಹತ್ತಿದ ಅರಿವು ನನ್ನನೇ ನುಂಗಿತ್ತು,
ಮತ್ತಿತಾಳಯ್ಯ ನೀನೆತ್ತ ಹೋದೆ ಎಂದು ಅವರು ತಮ್ಮ ಮತ್ತಿತಾಳಯ್ಯನನ್ನು ಆರ್ದ್ರತೆಯಿಂದ ಕರೆದಾಗ, ಕೂಡಲಸಂಗಮರೂ ಚೆನ್ನಮಲ್ಲಿಕಾರ್ಜುನರೂ ಓಗೊಟ್ಟು ಬಾರದೇ ಇರಲಾರರು!
ಎರಡನೆಯ ಓರಿಕೆ, ಕನ್ನಡದ ಪದಗಳು, ಅವುಗಳ ಚೆಲುವು ಮತ್ತು ಅಳವು, ಮೇಣ್ ಕವಿ ಆಂಡಯ್ಯ. ಸಂಸ್ಕೃತದಿಂದಲೇ ಕನ್ನಡ ಬಂದಿದೆ ಅಂತಲೋ, ಸಂಸ್ಕೃತ ಇಲ್ಲದೆ ಕನ್ನಡ ಬೆಳೆಯಲಾರದು ಅಂತಲೋ ಹುಸಿ ನಂಬಿಕೆಯಲ್ಲಿ ಮುಳುಗಿರುವ, ಅರಿವುಗೆಟ್ಟ ಮೇಲರಿಮೆ, ಇಲ್ಲ, ಹೊಲಬುಗೆಟ್ಟ ಕೀಳರಿಮೆಯಿಂದ ಸತ್ತಂತಿಹ ಕನ್ನಡಿಗರನ್ನು, ಎಂಟು ನೂರು ಏಡುಗಳ/ವರ್ಷಗಳ ಹಿಂದೆ ಬದುಕಿದ್ದ ಆಂಡಯ್ಯನು, ಈಗಲೂ ತನ್ನ ಕಬ್ಬದಿಂದ ಎಚ್ಚರಿಸುತ್ತಲೇ ಇದ್ದಾನೆ. ಆ ಎಚ್ಚರ, ಕನ್ನಡದಲ್ಲೇ ಹೊಸ ಪದಗಳ ಕಟ್ಟಣೆ ಮತ್ತು ಬಳಕೆಗೆ ಈ ಪುಸ್ತಕದಲ್ಲಿ ಎಡೆಮಾಡಿಕೊಟ್ಟಿದೆ. ಅದರ ಮುಂದುವರಿಕೆಯಂತೆ, ಕದಲದೆ ಕಟ್ಟೊರಕಿನಲ್ಲಿದ್ದೆ
ಕದಲಿ ಕನಸಿನಲ್ಲಿದ್ದೆ
ಕಡವನಾಗಿ ಕಟ್ಟೆಚ್ಚರದಲ್ಲಿದ್ದೆ ಎಂಬಲ್ಲಿ, ಕಟ್ಟೊರಕು - ಸುಷುಪ್ತಿ, ಕನಸು - ಸ್ವಪ್ನ,ಕಟ್ಟೆಚ್ಚರ - ಜಾಗೃತ್, ಕಡವ - ದೇವರು ಎಂಬುದು ಅಚ್ಚಗನ್ನಡದ ಬೆಡಗನ್ನು ಸೊಗಯಿಸುತ್ತದೆ.
ಇನ್ನು, ಈ ಅಂದದ ನೇಯ್ಗೆಯ ಮೂರನೆಯ ಎಳೆ, ಹೆಬ್ಬುಸುರಿ/ಮಹಾಪ್ರಾಣ, ಷ, ಋಗಳಿಲ್ಲದ ಹೊಸ ಬರಹದ ಪ್ರಯೋಗ. ಅವರು ತಮ್ಮ ಹೆಸರನ್ನು ಭರತ್ ಎನ್ನದೇ ಬರತ್ ಎಂದು ಬರೆಯುವುದರಲ್ಲೇ ಆ ನಿಲುವು ಪ್ರಕಟವಾಗಿದೆ. ಹೆಚ್ಚಿನ ಕನ್ನಡಿಗರು ಯಾರೂ ಉಲಿಯದ, ಸಂಸ್ಕೃತದ ಮಹಾಪ್ರಾಣಗಳನ್ನು ಕನ್ನಡದಲ್ಲೂ ಹಾಗೆಯೇ ಬರೆಯಬೇಕು ಎಂಬುದು ಎಷ್ಟು ಸರಿ? ಈ ಕೇಳ್ವಿಗೆ ಮೈಯ್ಯಿಡ್ಡಿ, ತಮ್ಮ ನಿಲುವನ್ನು ಪಟ್ಟು ಬಿಡದೆ, ಅರಿವಿನಿಂದಾದ ಎಚ್ಚರವೇ ಇಷ್ಟಲಿಂಗ,
ಅನುಭಾವವೇ ಜಂಗಮ ಎನ್ನುವಲ್ಲಿ ಅವರು ಷ ಮತ್ತು ಭ ಗಳನ್ನು ಸಾರಾಸಗಟಾಗಿ ಮರೆಗೆ ತಳ್ಳುತ್ತಾರೆ.
ಒಟ್ಟೂ ನೂರು ಸೂಳ್ನುಡಿಗಳ ನ್ನೊಳಗೊಂಡ ಈ ಪುಸ್ತಕವನ್ನು, ನಾನು ಈ ಮೂರು ಕ್ರಾಂತಿಕಾರಕ ನೋಟದಿಂದ ಸೀಳುನೋಡಿದ್ದೇನಷ್ಟೇ. ಇದು ನನ್ನ ಮಿತಿ. ಈ ಬರಹದ ಮಿತಿಯೂ ಹೌದು. ಒಂದೊಂದು ಸೂಳ್ನುಡಿಯೂ, ಒಂದೊಂದು ನೋಟವನ್ನ್ನು, ಏಕೆ, ಹಲವಾರು ನೋಟವನ್ನೇ ಬೇಡುತ್ತದೆ. ನಮಗೆ ಆ ಕಾಣ್ಮೆಗಳು ನಿಲುಕಬೇಕಷ್ಟೇ.
ಮುಗಿಸುವ ಮುನ್ನ, ಬಾಡಿನ ಬಗೆಗಿನ ಅವರ ಒಳನೋಟವನ್ಮೊಮ್ಮೆ ಕಂಡು, ವಿದಾಯ ಹೇಳೋಣ.
ಬಾಡು ಬಾಡೆಂದೇಕೆ ಬಡಬಡಿಸುವರು
ಬಾಡುಣದಿಕೆ ಮೇಲಲ್ಲ
ಬಾಡುಣ್ಣುವಿಕೆ ಕೀಳಲ್ಲ
ಬಾಡು ಹೊಲಸಾದೊಡೆ ಈ
ಮಯ್ಯೇ ಹೊಲಸು ಕಾಣಿರಯ್ಯ
ಬಾಡು-ಗಿಡಕ್ಕಿಂತ ನುಣ್ಬಗೆಯ
ಬೇಡಿರಯ್ಯ ಮತ್ತಿತಾಳಯ್ಯನಲ್ಲಿ.
ನಾನು ಓದಿದ ಪುಸ್ತಕ
ಬೆಳ್ಳಾಳ ಕಾವೊನ್