ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಹೈಕೋರ್ಟ್ ಹಸಿರು ನಿಶಾನೆ
ಲಂಡನ್, ನ. 17: ಶಂಕಿತ ಕ್ರಿಕೆಟ್ ಬುಕ್ಕಿ ಸಂಜೀವ್ ಚಾವ್ಲಾರನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಆರೋಪಿಯ ಗಡಿಪಾರನ್ನು ತಡೆಯುವ ಕೆಳ ನ್ಯಾಯಾಲಯವೊಂದರ 2017 ಅಕ್ಟೋಬರ್ ತೀರ್ಪನ್ನು ಪ್ರಶ್ನಿಸಿ ಭಾರತ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಗಡಿಪಾರು ಮಾಡಿದರೆ ಅವರನ್ನು ತಿಹಾರ್ ಜೈಲಿನಲ್ಲಿ ಇಡಲಾಗುತ್ತದೆ ಹಾಗೂ ಅಲ್ಲಿ ಅವರಿಗೆ ‘‘ಯಾವುದೇ ನೈಜ ಅಪಾಯವಿಲ್ಲ’’ ಎಂದು ನ್ಯಾಯಾಲಯ ಹೇಳಿದೆ.
2000 ಫೆಬ್ರವರಿ-ಮಾರ್ಚ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಗಳನ್ನು ಫಿಕ್ಸ್ ಮಾಡಿದ ಆರೋಪದಲ್ಲಿ, ಸಂಜೀವ್ ಚಾವ್ಲಾರನ್ನು ವಿಚಾರಣೆಗೆ ಗುರಿಪಡಿಸಲು ಭಾರತ ಬಯಸಿದೆ.
ಚಾವ್ಲಾರನ್ನು ಇಡಲಾಗುವ ತಿಹಾರ್ ಜೈಲಿನ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯಗಳಿಗೆ ಮೂರು ಭರವಸೆಗಳನ್ನು ಭಾರತೀಯ ಗೃಹ ಸಚಿವಾಲಯ ಸಲಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ತಿಹಾರ್ ಜೈಲಿನಲ್ಲಿ ಆರೋಪಿಯ ಮಾನವಹಕ್ಕುಗಳಿಗೆ ನೈಜ ಬೆದರಿಕೆಯಿದೆ ಎಂಬುದಾಗಿ ಪರಿಗಣಿಸಿರುವ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ರೆಬೆಕಾ ಕ್ರೇನ್, ಆರೋಪಿಯ ಗಡಿಪಾರನ್ನು ತಡೆದಿರುವುದನ್ನು ಸ್ಮರಿಸಬಹುದಾಗಿದೆ.
ಈ ತೀರ್ಪನ್ನು ಭಾರತ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಕೆಳ ನ್ಯಾಯಾಲಯವು ಭಾರತ ಸಲ್ಲಿಸಿರುವ ಎರಡನೇ ಭರವಸೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅದು ವಾದಿಸಿತ್ತು.
ಖಾಸಗಿ ಸ್ಥಳ, ವೈದ್ಯಕೀಯ ಸೌಲಭ್ಯ ಮತ್ತು ಶೌಚಾಲಯಕ್ಕೆ ಸಂಬಂಧಿಸಿದ ವಿವರಗಳನ್ನೊಳಗೊಂಡ ಮೂರನೇ ಭರವಸೆಯನ್ನು ಸ್ವೀಕರಿಸಿದ ಬಳಿಕ, ತೀರ್ಪು ನೀಡಿದ ನ್ಯಾಯಮೂರ್ತಿ ಲೆಗಟ್ ಮತ್ತು ನ್ಯಾಯಮೂರ್ತಿ ಡಿಂಜ್ಮನ್ಸ್, ಆರೋಪಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.