ಪ್ರವಾದಿ ಮುಹಮ್ಮದ್(ಸ)ರ ಉದಾರ ಸಂಧಾನಗಳು
ಮೀಲಾದುನ್ನಬಿ ವಿಶೇಷ ಲೇಖನ
ಮಕ್ಕಾದಲ್ಲಿ, ಸತ್ಯಪ್ರಸಾರಕ್ಕೆ ಲಭ್ಯವಿದ್ದ ಬಾಗಿಲುಗಳೆಲ್ಲ ಮುಚ್ಚಿ ಹೋಗಿವೆ ಎಂಬಂತಹ ವಾತಾವರಣವಿದ್ದಾಗ ಸತ್ಯ ಪ್ರಸಾರಕ್ಕೆ ಮದೀನಾ ಎಂಬ ಹೊಸ ಲೋಕವೊಂದು ಮುಕ್ತವಾಗಿ ಬಿಟ್ಟಿತು. ಮಕ್ಕಾದ ವಿಗ್ರಹಾರಾಧಕರ ಹಿಂಸೆ, ಕಿರುಕುಳಗಳಿಂದ ರೋಸಿ ಹೋಗಿದ್ದ ಏಕದೇವಾರಾದಕರಿಗೆ ಆಶ್ರಯ ಪಡೆಯಲು ಮದೀನಾ ಎಂಬ ಶಾಂತಿಧಾಮವೊಂದು ಪ್ರಾಪ್ತವಾಯಿತು. ಈ ಒಪ್ಪಂದದ ಬೆನ್ನಿಗೆ ಮುಸ್ಲಿಮರು ಸಣ್ಣ ಸಣ್ಣ ತಂಡಗಳ ರೂಪದಲ್ಲಿ ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗತೊಡಗಿದರು. ಶೀಘ್ರವೇ ಪ್ರವಾದಿವರ್ಯರೂ ಮದೀನಾ ನಗರಕ್ಕೆ ಹೋದರು. ಅತ್ತ ಮದೀನಾದಲ್ಲಿ ಸದಾ ಪರಸ್ಪರ ಯುದ್ಧ ನಿರತರಾಗಿರುತ್ತಿದ್ದ ಖಜ್ರಜ್ ಮತ್ತು ಔಸ್ ಎಂಬೆರಡು ಗುಂಪುಗಳು ಪ್ರವಾದಿಯ ಅನುಸರಣೆಯಲ್ಲಿ ಒಂದಾಗಿ ಬಿಟ್ಟವು. ಪ್ರವಾದಿವರ್ಯರು ಇಬ್ಬರ ಜಗಳದ ಲಾಭ ಪಡೆಯುವ ಬದಲು ಜಗಳವನ್ನೇ ಇಲ್ಲವಾಗಿಸಿ ಬಿಟ್ಟರು.
ಪ್ರವಾದಿ ಮುಹಮ್ಮದ್ (ಸ) ಅವರ ಬದುಕನ್ನು ಚಿತ್ರಿಸುವಾಗ ಹಲವರು ಅವರ ಕಾಲದಲ್ಲಿ ಬೆನ್ನು ಬೆನ್ನಿಗೆ ನಡೆದ ಹಲವು ಯುದ್ಧಗಳನ್ನು ಪ್ರಸ್ತಾಪಿಸಿ, ಅದನ್ನು ಒಂದು ಯುದ್ಧ ಪ್ರಧಾನ ಬದುಕೆಂಬಂತೆ ಚಿತ್ರಿಸುತ್ತಾರೆ. ಪ್ರವಾದಿವರ್ಯರ ಬದುಕಿನಲ್ಲಿ ಯುದ್ಧಗಳು ನಡೆದಿದ್ದವು ಎಂಬುದು ಸುಳ್ಳೇನಲ್ಲ. ಸ್ವತಃ ಪ್ರವಾದಿವರ್ಯರು ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರವಾದಿವರ್ಯರನ್ನು ಕೇವಲ ಒಬ್ಬ ಉಪದೇಶಕರಾಗಿ ಕಾಣುವವರಿಗೆ, ಅವರ ಬದುಕಿನಲ್ಲಿ ಎದ್ದು ಕಾಣುವ ಯುದ್ಧಗಳು ಅಸಹಜವಾಗಿ ತೋರುತ್ತವೆ. ಆದರೆ ಪ್ರವಾದಿವರ್ಯರು ಕೇವಲ ಒಬ್ಬ ಉಪದೇಶಕರಾಗಿರದೆ, ಒಂದು ಸರಕಾರ ಮತ್ತು ಒಂದು ಆಡಳಿತ ವ್ಯವಸ್ಥೆಯ ಸ್ಥಾಪಕರಾಗಿದ್ದರು, ಹಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಟಕ್ಕಿಳಿದವರಾಗಿದ್ದರು, ಹಲವು ಪರಂಪರಾಗತ ನಂಬಿಕೆ ಮತ್ತು ಆಚರಣೆಗಳನ್ನು ದಿಟ್ಟವಾಗಿ ಪ್ರಶ್ನಿಸಿದವರಾಗಿದ್ದರು, ಹಲವು ಹೊಸ ಕಾನೂನುಗಳನ್ನು ಅನುಷ್ಠಾನಿಸಿದವರಾಗಿದ್ದರು, ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಿದವರಾಗಿದ್ದರು, ಎಂಬಿತ್ಯಾದಿ ವಿವಿಧ ಆಯಾಮಗಳನ್ನು ಗಮನಿಸಿದಾಗ, ಅವರು ಭಾಗವಹಿಸಿದ ಯುದ್ಧಗಳ ಔಚಿತ್ಯ ಮನವರಿಕೆಯಾಗುತ್ತದೆ. ಇನ್ನು, ಪ್ರವಾದಿವರ್ಯರು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಲು, ಯುದ್ಧಗಳನ್ನು ತಪ್ಪಿಸಲು, ವಿವಿಧ ಜನಾಂಗ ಹಾಗೂ ಸಮುದಾಯಗಳ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ಮತ್ತು ಸಶಸ್ತ್ರ ಘರ್ಷಣೆಗಳನ್ನು ನಿವಾರಿಸಲು ನಡೆಸಿದ ಶ್ರಮಗಳು, ಅವರು ತಮ್ಮ ಕಡು ವಿರೋಧಿಗಳ ಮುಂದೆ ಮಂಡಿಸಿದ ಶಾಂತಿ ಪ್ರಸ್ತಾವಗಳು ಮತ್ತು ಅವರು ತಮ್ಮ ವಿರುದ್ಧ ಯುದ್ಧ ನಿರತರಾದವರು ಹಾಗೂ ಯುದ್ಧಕ್ಕೆ ಸಜ್ಜಾಗಿದ್ದವರು ಸೇರಿದಂತೆ ವಿವಿಧ ಪಂಗಡಗಳ ಜೊತೆ ನಡೆಸಿದ ಶಾಂತಿ ಒಪ್ಪಂದಗಳು ಇತ್ಯಾದಿ ಅಂಶಗಳ ಕುರಿತು ಅಧ್ಯಯನ ಮಾಡಿದರೆ ಖಂಡಿತವಾಗಿಯೂ ಅವರ ವ್ಯಕ್ತಿತ್ವ, ಸ್ವಭಾವ ಮತ್ತು ಧೋರಣೆಗಳ ಬಗ್ಗೆ ಅಪಾರ ಗೌರವ ಮೂಡುತ್ತದೆ.
ಪ್ರವಾದಿ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿದಾಗ ಅವರಿಗೆ 40 ವರ್ಷ ವಯಸ್ಸಾಗಿತ್ತು. ಅವರಿನ್ನೂ ಹತ್ತರ ಹರೆಯದಲ್ಲಿದ್ದಾಗ ಅವರ ಹುಟ್ಟೂರು ಮಕ್ಕಾದ ಉಕಾಜ್ಹ್ ಪೇಟೆಯಲ್ಲಿ ಒಂದು ಜಾತ್ರೆ ನಡೆದಿತ್ತು. ಜಾತ್ರೆಯ ವೇಳೆ, ಖುರೈಶ್ ಮತ್ತು ಖೈಸ್ ಎಂಬೆರಡು ಕುಲಗಳ ಜನರ ಮಧ್ಯೆ ಜಗಳವಾಯಿತು. ಜಗಳವು ಹಿಂಸೆಗೆ ತಿರುಗಿ ಕೆಲವು ಜೀವಗಳು ಆಹುತಿಯಾದವು. ಮುಂದೆ ಪ್ರತೀಕಾರದ ಹೆಸರಲ್ಲಿ ಹಿಂಸೆಯ ಒಂದು ದೀರ್ಘ ಸರಣಿಯೇ ಆರಂಭವಾಯಿತು. ಎರಡೂ ಗುಂಪುಗಳು ಇನ್ನೊಂದು ಗುಂಪಿನ ಸದಸ್ಯರ ಮೇಲೆ ಹಲ್ಲೆ ಮಾಡಲು, ಅವರನ್ನು ಅಪಹರಿಸಲು ಅಥವಾ ಅವರ ಸೊತ್ತುಗಳನ್ನು ದೋಚಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ಉದ್ವಿಗ್ನತೆ ಸುಮಾರು ಹತ್ತು ವರ್ಷಗಳವರೆಗೆ ಮುಂದುವರಿದಿತ್ತು. ಇದರ ಪರಿಣಾಮವಾಗಿ ಸಮಾಜದಲ್ಲಿ ಹಿಂಸೆ, ಅಭದ್ರತೆ ನೆಲೆಸಿತ್ತು. ಶಾಂತಿ ಪ್ರಿಯರು ಚಿಂತಾಕ್ರಾಂತರಾಗಿದ್ದರು. ಈ ವೇಳೆ ಪ್ರವಾದಿಯ ಚಿಕ್ಕಪ್ಪ ಝುಬೈರ್ ಬಿನ್ ಅಬ್ದುಲ್ ಮುತ್ತಲಿಬ್ ಅವರ ಶ್ರಮದಿಂದ ಬನೂ ಹಾಶಿಮ್, ಬನೂ ತೈಮ್, ಬನೂ ಅಸದ್, ಬನೂ ಝುಹ್ರಾ ಮತ್ತು ಬನೂ ಮುತ್ತಲಿಬ್ ಎಂಬ ಐದು ವಂಶಗಳಿಗೆ ಪ್ರಾತಿನಿಧ್ಯವಿದ್ದ ಶಾಂತಿ ಸಮಿತಿಯೊಂದು ರೂಪುಗೊಂಡಿತು. ಅಬ್ದುಲ್ಲಾ ಬಿನ್ ಜಾಝಾನ್ ಎಂಬ ಹಿರಿಯರ ನಿವಾಸದಲ್ಲಿ ಈ ಸಮಿತಿಯ ಸಭೆಗಳು ನಡೆಯುತ್ತಿದ್ದವು. ಆಗಿನ್ನೂ ತರುಣರಾಗಿದ್ದ ಮುಹಮ್ಮದ್ (ಸ) ಈ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. ಸಮಿತಿಯ ಧ್ಯೇಯೋದ್ದೇಶಗಳನ್ನು ನಿರ್ಧರಿಸುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು, ವಿಶೇಷವಾಗಿ ಅಪರಿಚಿತರು, ಪ್ರಯಾಣಿಕರು ಮತ್ತು ದುರ್ಬಲರಿಗೆ ಭದ್ರತೆ ಒದಗಿಸಬೇಕು, ಅನ್ಯಾಯ ಮಾಡುವವರು ಎಷ್ಟೇ ಬಲಿಷ್ಠರಾಗಿದ್ದರೂ ಅವರನ್ನು ವಿರೋಧಿಸಿ ಸಂತ್ರಸ್ತರ ಪರ ನಿಲ್ಲಬೇಕು, ಯಾರಿಗೇ ಆಗಲಿ ನೆರವಿನ ಅಗತ್ಯವಿದ್ದರೆ ತಕ್ಷಣ ಧಾವಿಸಿ ನೆರವಾಗಬೇಕು-ಎಂದು ಇದರ ಸದಸ್ಯರು ‘ಕಾಬಾ’ ಮಂದಿರದ ಮುಂದೆ ಪ್ರತಿಜ್ಞೆ ಮಾಡಿದ್ದರು. ಈ ಸಮಿತಿಯು ‘ಹಿಲ್ ಫುಲ್ ಫುದೂಲ್’ ಎಂಬ ಹೆಸರಿಂದ ಪರಿಚಿತವಾಗಿತ್ತು.
ಮುಹಮ್ಮದ್ (ಸ) 35ರ ಹರೆಯದವರಾಗಿದ್ದಾಗ ಇನ್ನೊಂದು ಘರ್ಷಣೆ ನಡೆಯಿತು. ಆಗ ‘ಕಾಬಾ’ದ ಕಟ್ಟಡ ತೀರಾ ಶಿಥಿಲ ಸ್ಥಿತಿಯಲ್ಲಿತ್ತು. ಅದರ ಮರುನಿರ್ಮಾಣ ನಡೆಸಬೇಕೆಂಬುದು ಜನರ ಬಹುಕಾಲದ ಬೇಡಿಕೆಯಾಗಿತ್ತು. ಮಂದಿರದ ಗೋಡೆಗಳು ಕೇವಲ ಸುಮಾರು ಆರಡಿಯಷ್ಟು ಎತ್ತರವಿದ್ದವು. ಈ ಮಧ್ಯೆ ಯಾರೋ ಕಾಬಾದ ಗೋಡೆ ಹಾರಿ ಒಳನುಗ್ಗಿ ಅದರೊಳಗಿನ ಕೆಲವು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದರು. ಆ ವೇಳೆ, ಮರು ನಿರ್ಮಾಣದ ಕಾರ್ಯವನ್ನು ತಕ್ಷಣವೇ ಆರಂಭಿಸಬೇಕೆಂದು ತೀರ್ಮಾನಿಸಲಾಯಿತು. ಕೆಲಸವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಖುರೈಶ್ ಗೋತ್ರದ ಪ್ರತಿಯೊಂದು ವಂಶದವರಿಗೆ ಒಂದೊಂದು ಭಾಗದ ಹೊಣೆಯನ್ನು ವಹಿಸಿಕೊಡಲಾಯಿತು. ನಿರ್ಮಾಣದ ಕೆಲಸ ಕೊನೆಯ ಹಂತದಲ್ಲಿದ್ದಾಗ ಒಂದು ವಿವಾದ ತಲೆದೋರಿತು. ಕಾಬಾದ ಗೋಡೆಯ ಹೊರಮುಖದಲ್ಲಿದ್ದ ‘ಹಜರುಲ್ ಅಸ್ವದ್’ ಎಂಬ ಪ್ರಾಚೀನ ಶಿಲೆಯನ್ನು ಮರು ಪ್ರತಿಷ್ಠಾಪಿಸುವ ಹಕ್ಕನ್ನು ತಮಗೆ ನೀಡಬೇಕೆಂದು ಪ್ರತಿಯೊಂದು ವಂಶದವರೂ ಆಗ್ರಹಿಸಲಾರಂಭಿಸಿದರು. ಈ ವಿವಾದ ಕ್ರಮೇಣ ತುಂಬಾ ಗಂಭೀರ ಸ್ವರೂಪ ತಾಳಿತು. ಮೂರು ನಿರ್ದಿಷ್ಟ ವಂಶಗಳ ಜನರು, ಆ ಕಾಲದ ಸಂಪ್ರದಾಯದಂತೆ ರಕ್ತ ತುಂಬಿದ ಹರಿವಾಣದಲ್ಲಿ ತಮ್ಮ ಕೈಗಳನ್ನು ಮುಳುಗಿಸಿ, ತಮ್ಮ ಬೇಡಿಕೆ ಈಡೇರಿಸುವುದಕ್ಕಾಗಿ ತಮ್ಮ ಜೀವಗಳನ್ನು ಪಣಕ್ಕಿಟ್ಟು ಹೋರಾಡುತ್ತೇವೆಂದು ಪ್ರತಿಜ್ಞೆ ಮಾಡಿ ಬಿಟ್ಟರು. ನಿರ್ಮಾಣ ಕಾರ್ಯ ನಾಲ್ಕೈದು ದಿನಗಳ ತನಕ ಸ್ಥಗಿತವಾಗಿತ್ತು. ಈ ವೇಳೆ ಮಧ್ಯಸ್ತಿಕೆ ನಡೆಸಿ ರಕ್ತಪಾತ ತಪ್ಪಿಸುವ ಕೆಲಸವನ್ನು ಮುಹಮ್ಮದ್ (ಸ) ಮಾಡಿದರು. ಅವರ ವ್ಯಕ್ತಿತ್ವದ ಬಗ್ಗೆ ಜನರಿಗಿದ್ದ ಗೌರವದ ಕಾರಣ, ಎಲ್ಲ ಜಗಳ ನಿರತ ಗುಂಪುಗಳೂ ಅವರ ಮಧ್ಯಸ್ತಿಕೆಯನ್ನು ಒಪ್ಪಿಕೊಂಡವು. ಅವರು ಸೂಚಿಸಿದ ಪರಿಹಾರೋಪಾಯ ಕೂಡಾ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪ್ರಾಚೀನ ಶಿಲೆಯನ್ನು ಒಂದು ವಿಶಾಲ ಬಟ್ಟೆಯಲ್ಲಿಟ್ಟು ಎಲ್ಲ ವಂಶಗಳ ನಾಯಕರು ಸೇರಿ ಆ ಬಟ್ಟೆಯನ್ನು ಎತ್ತಿ ಹಿಡಿಯಬೇಕು ಮತ್ತು ಮುಹಮ್ಮದ್ (ಸ) ಆ ಶಿಲೆಯನ್ನು ಕಾಬಾದ ಗೋಡೆಯ ಹೊರಮುಖದಲ್ಲಿ ಪ್ರತಿಷ್ಠಾಪಿಸಬೇಕು ಎಂಬ ತೀರ್ಮಾನಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದರು. ವ್ಯಾಪಕ ರಕ್ತಪಾತ ಖಚಿತವಾಗಿದ್ದ ಒಂದು ಸನ್ನಿವೇಶವು ಶಾಂತಿಯುತ ಪರಿಹಾರವನ್ನು ಕಂಡಿತು. ಈ ರೀತಿ ಪ್ರವಾದಿವರ್ಯರು, ತಾವು ಪ್ರವಾದಿಯಾಗುವ ಮುನ್ನವೇ ಶಾಂತಿದೂತರಾಗಿದ್ದರು.
ಕ್ರಿ.ಶ. 610ರಲ್ಲಿ ಪ್ರವಾದಿ ಮುಹಮ್ಮದ್ (ಸ) ತಾವು ಅಲ್ಲಾಹನಿಂದ ನಿಯುಕ್ತ ದೂತನೆಂದು ಘೋಷಿಸಿದರು. ಅವರು ಮಕ್ಕಾದಲ್ಲಿ ಅಲ್ಲಿನ ಪರಂಪರಾಗತ ಮೌಢ್ಯಗಳನ್ನು ಪ್ರಶ್ನಿಸಿ, ಕಟ್ಟುನಿಟ್ಟಿನ, ಏಕದೇವತ್ವ, ವಿಶ್ವ ಮಾನವ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಪ್ರಸಾರ ಆರಂಭಿಸಿದಾಗ ಅವರ ವಿರುದ್ಧ ಪ್ರತಿರೋಧ ಆರಂಭವಾಯಿತು. ಒಂದು ಕಡೆ ಕೆಲವರು ಅವರಲ್ಲಿ ನಂಬಿಕೆ ಇಟ್ಟು ಅವರ ಅನುಯಾಯಿಗಳಾಗಲು ಆರಂಭಿಸಿದರೆ ಇನ್ನೊಂದು ಕಡೆ ಸಮಾಜದಲ್ಲಿ ಅವರ ಮತ್ತು ಅವರ ಅನುಯಾಯಿಗಳ ಬಗ್ಗೆ ಅಸಹಿಷ್ಣುತೆ ಹೆಚ್ಚತೊಡಗಿತು. ಕ್ರಮೇಣ ಪ್ರತಿರೋಧವು ಹಿಂಸೆಯ ರೂಪ ತಾಳಿತು. ಕಂಡ ಕಂಡಲ್ಲಿ ನಿಂದನೆ, ಹಲ್ಲೆಗಳು ನಡೆಯತೊಡಗಿದವು. ಸ್ವತಃ ಪ್ರವಾದಿಯ ಮೇಲೆ ಶಾರೀರಿಕ ಆಕ್ರಮಣಗಳು ನಡೆದವು. ಅವರ ಅನುಯಾಯಿಗಳ ಪೈಕಿ ದುರ್ಬಲರಾಗಿದ್ದವರನ್ನು ಚಿತ್ರಹಿಂಸೆಗೆ ಗುರಿ ಪಡಿಸಲಾಯಿತು. ವರ್ಷಗಳು ಉರುಳಿದಂತೆ ವಿರೋಧವೂ ತಾರಕಕ್ಕೇರ ತೊಡಗಿತು. ಈ ಮಧ್ಯೆ, ಪ್ರವಾದಿತ್ವದ 10ನೇ ವರ್ಷ, ಪ್ರವಾದಿವರ್ಯರು(ಸ) ಮಕ್ಕಾದಿಂದ ಸುಮಾರು 64 ಕಿ.ಮೀ. ದೂರವಿರುವ ತಾಯಿಫ್ ನಗರಕ್ಕೆ ಹೋಗಿ ಅಲ್ಲಿ ಸತ್ಯ ಪ್ರಸಾರಕ್ಕೆ ಶ್ರಮಿಸಿದರು. ಅಲ್ಲೂ ಪ್ರತಿಕ್ರಿಯೆ ತೀರಾ ಪ್ರತಿಕೂಲವಾಗಿತ್ತು.
ಆದರೆ ಅದೇ ವರ್ಷ ಬದಲಾವಣೆಯ ಹೊಸ ಗಾಳಿಯೊಂದು ಬೀಸತೊಡಗಿತು. ಮಕ್ಕಾದಿಂದ ಸುಮಾರು 450 ಕಿ.ಮೀ. ದೂರವಿರುವ ಮದೀನಾ ನಗರದಲ್ಲಿ ಜನರು ಪ್ರವಾದಿಯ ಸಂದೇಶದ ಕುರಿತು ಆಸಕ್ತಿ ತೋರತೊಡಗಿದರು. ಆಗ ಮದೀನಾದ ಹೆಸರು ಯಸ್ರಿಬ್ ಎಂದಿತ್ತು. ಕ್ರಿ.ಶ. 620ರಲ್ಲಿ ಹಜ್ ಯಾತ್ರೆಯ ವೇಳೆ, ಮದೀನಾದಿಂದ ಬಂದ ಆರು ಮಂದಿಯ ನಿಯೋಗವೊಂದು, ಮಕ್ಕಾದೊಳಗೆ ಅಖಬ ಎಂಬಲ್ಲಿ ಪ್ರವಾದಿವರ್ಯರನ್ನು ಭೇಟಿಯಾಯಿತು. ಪ್ರವಾದಿವರ್ಯರು ಅವರಿಗೆ ಇಸ್ಲಾಮ್ ಧರ್ಮವನ್ನು ಪರಿಚಯಿಸಿ ಅದರ ಆದೇಶಗಳನ್ನು ವಿವರಿಸಿದರು. ಆ ಆರು ಮಂದಿ ಅಲ್ಲೇ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ಮದೀನಾಗೆ ಮರಳಿ ಅಲ್ಲಿ ತಮ್ಮ ಜ್ಞಾನ ಹಾಗೂ ಅನುಭವವನ್ನು ಇತರರ ಜೊತೆ ಹಂಚಿಕೊಂಡರು. ಮುಂದಿನ ವರ್ಷ ಹಜ್ನ ವೇಳೆ ಸುಮಾರು ಹನ್ನೆರಡು ಮಂದಿಯ ನಿಯೋಗವೊಂದು ಮದೀನಾದಿಂದ ಬಂದು ಪ್ರವಾದಿವರ್ಯರನ್ನು ಭೇಟಿಯಾಯಿತು. ಈ ಹಿಂದೆ ಬಂದಿದ್ದ ಆರು ಮಂದಿಯ ಪೈಕಿ ಐದು ಮಂದಿ ಆ ನಿಯೋಗದಲ್ಲಿದ್ದರು. ಆ ವೇಳೆ ಮದೀನಾದಲ್ಲಿ ಔಸ್ ಮತ್ತು ಖಜ್ರಜ್ ಎಂಬ ಎರಡು ವಂಶಗಳ ಜನರು ಪರಸ್ಪರ ಯುದ್ಧನಿರತವಾಗಿದ್ದರು. ಆ ಎರಡೂ ಗುಂಪುಗಳ ಸದಸ್ಯರು ನಿಯೋಗದಲ್ಲಿದ್ದರು. ನಿಯೋಗದ ಎಲ್ಲ ಸದಸ್ಯರು ಪ್ರವಾದಿಯಲ್ಲಿ ಹಾಗೂ ಅವರ ಸಂದೇಶದಲ್ಲಿ ತಮಗಿರುವ ನಂಬಿಕೆಯನ್ನು ಪ್ರಕಟಪಡಿಸಿದರು. ಪ್ರಸ್ತುತ ನಿಯೋಗದ ಜೊತೆ ಪ್ರವಾದಿವರ್ಯರು ಒಂದು ಒಡಂಬಡಿಕೆಯನ್ನು ಮಾಡಿದರು. ಅದನ್ನು ‘ಪ್ರಥಮ ಅಖಬಾ ಒಡಂಬಡಿಕೆ’ ಎಂದು ಗುರುತಿಸಲಾಗುತ್ತದೆ. ಒಡಂಬಡಿಕೆಯಲ್ಲಿ ಒಪ್ಪಲಾದ ಅಂಶಗಳು ಹೀಗಿದ್ದವು:
‘‘ನಾವು ಅಲ್ಲಾಹನಲ್ಲದೆ ಬೇರೆ ಯಾರನ್ನೂ ಆರಾಧಿಸಲಾರೆವು, ಕಳವು ಮಾಡಲಾರೆವು, ವ್ಯಭಿಚಾರವೆಸಗಲಾರೆವು, ಶಿಶುಹತ್ಯೆ ಮಾಡಲಾರೆವು, ಯಾರಿಗೂ ಮಾನಹಾನಿ ಮಾಡಲಾರೆವು, ಉದ್ದೇಶಪೂರ್ವಕ ಯಾವುದೇ ಸುಳ್ಳನ್ನು ಸೃಷ್ಟಿಸಲಾರೆವು ಮತ್ತು ನ್ಯಾಯೋಚಿತವಾದ ಯಾವುದೇ ವಿಷಯದಲ್ಲಿ ನಿಮ್ಮ ಆದೇಶವನ್ನು ಮೀರಿ ನಡೆಯಲಾರೆವು.’’
ಮುಂದಿನ ವರ್ಷ ಮತ್ತೆ ಹಜ್ ಸಂದರ್ಭದಲ್ಲಿ ಮದೀನಾದಿಂದ 73 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದ ದೊಡ್ಡ ನಿಯೋಗವೊಂದು ಮಕ್ಕಾಗೆ ಬಂದು ಅಖಬದಲ್ಲಿ ಪ್ರವಾದಿವರ್ಯರನ್ನು ಭೇಟಿಯಾಯಿತು. ಇದು ಸತತ ಮೂರನೇ ವರ್ಷ ಮದೀನಾದ ಕಡೆಯಿಂದ ಬಂದ ಮೂರನೇ ನಿಯೋಗವಾಗಿತ್ತು. ಈ ಬಾರಿ ಅವರನ್ನು ಭೇಟಿಯಾಗುವಾಗ ಪ್ರವಾದಿವರ್ಯರ ಜೊತೆ ಅವರ ಚಿಕ್ಕಪ್ಪ ಅಬ್ಬಾಸ್ ಇದ್ದರು. ಆಗ ಅಬ್ಬಾಸ್ ಮುಸ್ಲಿಮರಾಗಿರಲಿಲ್ಲ. ಆದರೆ ಪ್ರವಾದಿವರ್ಯರ ರಕ್ಷಣೆಯನ್ನು ತಮ್ಮ ಪರಮ ಕರ್ತವ್ಯವೆಂದು ನಂಬಿದ್ದರು.
ಮದೀನಾದ ನಿಯೋಗದೊಂದಿಗೆ ಮೊದಲು ಮಾತನಾಡಿದ ಅಬ್ಬಾಸ್ ಹೇಳಿದರು: ‘‘.......ನಮ್ಮ ನಡುವೆ ಮುಹಮ್ಮದ್ ರಿಗೆ ಎಂತಹ ಸ್ಥಾನಮಾನವಿದೆ ಎಂಬುದು ನಿಮಗೆ ತಿಳಿದಿದೆ. ಅವರನ್ನು ನಮ್ಮವರಿಂದ ಸುರಕ್ಷಿತರಾಗಿಡಲು ನಾವು ನಮ್ಮಿಂದ ಸಾಧ್ಯವಿರುವಷ್ಟು ಗರಿಷ್ಠ ಪ್ರಯತ್ನ ನಡೆಸಿದ್ದೇವೆ. ಅವರು ನಮ್ಮ ಸಮಾಜದ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರು ಈ ತನಕ ನಿಮ್ಮ ಹೊರತು ಬೇರಾವುದೇ ಪಕ್ಷವನ್ನು ಸೇರಲು ಒಲವು ತೋರಿದವರಲ್ಲ. ಇದೀಗ ನೀವು ಅವರನ್ನು ನಿಮ್ಮ ನಗರಕ್ಕೆ ಆಮಂತ್ರಿಸುತ್ತಿರುವಿರಾದರೆ, ಅವರನ್ನು ಎಲ್ಲ ಶತ್ರುಗಳಿಂದ ರಕ್ಷಿಸುವಿರಿ ಎಂಬ ವಿಶ್ವಾಸ ನಿಮಗಿದ್ದರೆ ಮತ್ತು ನೀವು ಹೊತ್ತಿರುವ ಹೊಣೆಗಾರಿಕೆಯನ್ನು ನಿಭಾಯಿಸುವ ಸಾಮರ್ಥ್ಯ ನಿಮಗಿದ್ದರೆ ಮಾತ್ರ ಮುಂದುವರಿಯಿರಿ. ನಾಳೆ ನೀವು ಅವರನ್ನು ಶತ್ರುಗಳಿಗೆ ಒಪ್ಪಿಸುವುದಾಗಿದ್ದರೆ ಅಥವಾ ಅವರನ್ನು ನಿಮ್ಮ ಜೊತೆ ಕರೆದೊಯ್ದ ಬಳಿಕ ನೀವು ಅವರಿಗೆ ದ್ರೋಹ ಬಗೆಯುವುದಾಗಿದ್ದರೆ ಅವರನ್ನು ಈಗಲೇ ಬಿಟ್ಟು ಹೋಗಿರಿ. ಏಕೆಂದರೆ ಇಲ್ಲಿ ಅವರು ಸಾಕಷ್ಟು ಗೌರವಾನ್ವಿತರೂ ಸುರಕ್ಷಿತರೂ ಆಗಿದ್ದಾರೆ.
ಮದೀನಾದವರ ಪರವಾಗಿ ಕಅಬ್ ಬಿನ್ ಮಾಲಿಕ್ ಹೇಳಿದರು: ‘‘...... ಅಲ್ಲಾಹನ ದೂತರೇ, ಇದೀಗ ನಿಮ್ಮ ಆದೇಶ ಪ್ರಕಟವಾಗಲಿ, ನೀವು ನಿಮ್ಮ ದೇವರ ವಿಷಯದಲ್ಲಾಗಲಿ, ನಿಮ್ಮ ವಿಷಯದಲ್ಲಾಗಲಿ ನಮ್ಮಿಂದ ಬಯಸುವ ಯಾವುದೇ ವಾಗ್ದಾನವನ್ನು ನಿಮಗೆ ನೀಡಲು ನಾವು ಸಿದ್ಧರಿದ್ದೇವೆ.’’
ಪ್ರವಾದಿವರ್ಯರು ಕುರ್ಆನ್ನ ಕೆಲವು ವಚನಗಳನ್ನು ಓದಿ, ಇಸ್ಲಾಮ್ ಧರ್ಮದ ಕೆಲವು ವಿಶೇಷತೆಗಳನ್ನು ಪ್ರಸ್ತಾಪಿಸಿ, ‘‘ನೀವು ನಿಮ್ಮ ಮಹಿಳೆಯರು ಮತ್ತು ಮಕ್ಕಳಿಗೆ ನೀಡುವಂತಹ ರಕ್ಷಣೆಯನ್ನು ನನಗೆ ನೀಡುವಿರಿ ಎಂಬ ವಾಗ್ದಾನವನ್ನು ನಾನು ನಿಮ್ಮಿಂದ ಬಯಸುತ್ತಿದ್ದೇನೆ’’ ಎಂದರು. ಆಗ ಅಲ್ ಬರಾ ಎಂಬವರು ಪ್ರವಾದಿಯ ಕೈಹಿಡಿದು ‘‘ಅಲ್ಲಾಹನ ದೂತರೇ, ನಾವಿದೋ ನಿಮಗೆ ನಮ್ಮ ವಾಗ್ದಾನ ನೀಡುತ್ತಿದ್ದೇವೆ. ಅಲ್ಲಾಹನಾಣೆ ನಾವು ಯುದ್ಧ ಪ್ರವೀಣರು. ನಮ್ಮಲ್ಲಿ ತಂದೆಯಿಂದ ಪುತ್ರರಿಗೆ ಶಸ್ತ್ರಗಳು ವರ್ಗವಾಗುತ್ತವೆ ಮತ್ತು ಅವು ನಮ್ಮ ಬಳಿ ಇವೆ’’ ಎಂದರು. ಅಬುಲ್ ಹೈತಮ್ ಹೇಳಿದರು: ‘‘ಅಲ್ಲಾಹನ ದೂತರೇ, ಇತರ ಕೆಲವರ ಜೊತೆ ನಾವು ಮಾಡಿಕೊಂಡ ಒಪ್ಪಂದಗಳಿವೆ. ನಾವೀಗ ಅವುಗಳನ್ನು ಮುರಿದು ನಿಮ್ಮ ಜೊತೆ ಸೇರುತ್ತಿದ್ದೇವೆ. ಮುಂದೆ ಅಲ್ಲಾಹನು ನಿಮಗೆ ವಿಜಯ ನೀಡಿದರೆ, ನೀವೇನು ನಮ್ಮನ್ನು ಬಿಟ್ಟು ನಿಮ್ಮ ಜನರ ಬಳಿಗೆ ಮರಳುವಿರಾ?’’
ಪ್ರವಾದಿ ಮುಗುಳು ನಗುತ್ತಾ ಹೇಳಿದರು: ‘‘ಖಂಡಿತ ಹಾಗೆ ಆಗದು. ನಿಮ್ಮ ರಕ್ತ ನನ್ನ ರಕ್ತ. ನಿಮ್ಮ ಪಾಲಿಗೆ ಗೌರವಾರ್ಹವಾದ ಎಲ್ಲವೂ ನನ್ನ ಪಾಲಿಗೂ ಗೌರವಾರ್ಹವಾಗಿರುವುದು. ನಾನು ನಿಮ್ಮವನು ಮತ್ತು ನೀವು ನನ್ನವರು. ನೀವು ಯಾರ ವಿರುದ್ಧ ಹೋರಾಡುವಿರೋ ಅವರ ವಿರುದ್ಧ ನಾನು ಹೋರಾಡುವೆನು. ನೀವು ಯಾರ ಜೊತೆ ಶಾಂತಿ ಪಾಲಿಸುವಿರೋ ಅವರ ಜೊತೆ ನಾನೂ ಶಾಂತಿ ಪಾಲಿಸುವೆನು.’’
ಅಬ್ಬಾಸ್ ಬಿನ್ ಉಬಾದ ತಮ್ಮ ಜನರನ್ನುದ್ದೇಶಿಸಿ ಹೇಳಿದರು: ‘‘ಮದೀನಾದವರೇ, ನೀವಿಂದು ಯಾವುದಕ್ಕೆ ಬದ್ಧರಾಗುತ್ತಿರುವಿರಿ ಎಂಬುದರ ಅರಿವು ನಿಮಗಿದೆಯೇ? ಈ ವ್ಯಕ್ತಿಗೆ ಬೆಂಬಲ ಘೋಷಿಸುವುದೆಂದರೆ ಬೇರೆಲ್ಲರ ವಿರುದ್ಧ ಯುದ್ಧ ಘೋಷಿಸುವುದೆಂದೇ ಅರ್ಥ. ನಾಳೆ ನಿಮ್ಮ ಸೊತ್ತುಗಳು ನಷ್ಟವಾಗಿ ನಿಮ್ಮ ನಾಯಕರು ಹತರಾದ ಬಳಿಕ ನೀವು ಇವರನ್ನು ಕೈ ಬಿಡುವುದಾದರೆ ಅದರ ಬದಲು ಇಂದೇ ಇವರನ್ನು ಕೈ ಬಿಡಿ. ನಾಳೆ ನೀವು ಹಾಗೆ ಮಾಡಿದರೆ ಅದರಿಂದ ಈ ಲೋಕದಲ್ಲೂ ಪರಲೋಕದಲ್ಲೂ ನೀವು ಅಪಮಾನಿತರಾಗುವಿರಿ. ನಿಮ್ಮ ಸೊತ್ತುಗಳು ಕಳೆದು ಹೋದರೂ ನಿಮ್ಮ ನಾಯಕರು ಹತರಾದರೂ ನೀವು ನಿಮ್ಮ ಪ್ರತಿಜ್ಞೆಗೆ ಬದ್ಧರಾಗಿ ಉಳಿಯುವಿರಿ ಎಂಬ ದೃಢ ವಿಶ್ವಾಸ ನಿಮಗಿದ್ದರೆ ಮಾತ್ರ ನೀವು ಅವರನ್ನು ನಿಮ್ಮ ಜೊತೆಗೆ ಕರೆದೊಯ್ಯಿರಿ. ಅಲ್ಲಾಹನಾಣೆ ಅದರಿಂದ ನಿಮಗೆ ಈ ಲೋಕದಲ್ಲೂ ಪರಲೋಕದಲ್ಲೂ ಲಾಭವಾಗುವುದು.’’
‘‘ಏನೇ ಬರಲಿ, ನಾವು ಬದ್ಧತೆ ಪ್ರಕಟಿಸುತ್ತೇವೆ’’ ಎಂದು ಎಲ್ಲರೂ ಒಕ್ಕೊರಲಿನಿಂದ ಘೋಷಿಸಿದರು. ಜನರೆಲ್ಲಾ ಪ್ರವಾದಿಯೆಡೆಗೆ ಕೈ ಚಾಚಿ ಪ್ರತಿಜ್ಞೆ ಮಾಡಿದರು. ಪ್ರತಿಜ್ಞೆಯಲ್ಲಿ ಮುಖ್ಯವಾಗಿ ಐದು ಅಂಶಗಳಿದ್ದುವು:
1. ಅನುಕೂಲವಿರಲಿ, ಪ್ರತಿಕೂಲವಿರಲಿ ಎಲ್ಲ ಸ್ಥಿತಿಗಳಲ್ಲೂ ನಿಮ್ಮ ಮಾತನ್ನು ಕೇಳುವೆವು ಮತ್ತು ಅನುಸರಿಸುವೆವು.
2. ದಾರಿದ್ರ್ಯವಿರಲಿ, ಶ್ರೀಮಂತಿಕೆ ಇರಲಿ, ಎಲ್ಲ ಸ್ಥಿತಿಗಳಲ್ಲೂ (ಸತ್ಯದ ಮಾರ್ಗದಲ್ಲಿ) ಖರ್ಚು ಮಾಡುವೆವು.
3. ಜನರಿಗೆ ಸತ್ಕಾರ್ಯವನ್ನು ಆದೇಶಿಸುವೆವು ಮತ್ತು ದುಷ್ಟ ಕೃತ್ಯಗಳಿಂದ ಜನರನ್ನು ತಡೆಯುವೆವು.
4. ಅಲ್ಲಾಹನ ಹಾದಿಯಲ್ಲಿ ಸಕ್ರಿಯರಾಗಿರುವೆವು - ಈ ವಿಷಯದಲ್ಲಿ ಯಾವುದೇ ನಿಂದಕನ ನಿಂದೆಯನ್ನು ಗಣಿಸಲಾರೆವು.
5. ಪ್ರವಾದಿವರ್ಯರು ನಮ್ಮ ಬಳಿಗೆ ಬಂದ ಬಳಿಕ ಅವರ ನೆರವಿಗೆ ನಿಲ್ಲುವೆವು. ನಮ್ಮ ಸ್ವಂತ ಜೀವವನ್ನೂ ನಮ್ಮ ಮನೆಯವರ ಜೀವಗಳನ್ನೂ ರಕ್ಷಿಸುವಂತೆ ನಾವು ಪ್ರವಾದಿವರ್ಯರನ್ನು ರಕ್ಷಿಸುವೆವು.
ಈ ಒಡಂಬಡಿಕೆಯೊಂದಿಗೆ ಸತ್ಯ ಧರ್ಮದ ಇತಿಹಾಸವು ಒಂದು ಪ್ರಮುಖ ತಿರುವನ್ನು ಪಡೆಯಿತು. ಮಕ್ಕಾದಲ್ಲಿ, ಸತ್ಯಪ್ರಸಾರಕ್ಕೆ ಲಭ್ಯವಿದ್ದ ಬಾಗಿಲುಗಳೆಲ್ಲ ಮುಚ್ಚಿ ಹೋಗಿವೆ ಎಂಬಂತಹ ವಾತಾವರಣವಿದ್ದಾಗ ಸತ್ಯ ಪ್ರಸಾರಕ್ಕೆ ಮದೀನಾ ಎಂಬ ಹೊಸ ಲೋಕವೊಂದು ಮುಕ್ತವಾಗಿ ಬಿಟ್ಟಿತು. ಮಕ್ಕಾದ ವಿಗ್ರಹಾರಾದಕರ ಹಿಂಸೆ, ಕಿರುಕುಳಗಳಿಂದ ರೋಸಿ ಹೋಗಿದ್ದ ಏಕದೇವಾರಾದಕರಿಗೆ ಆಶ್ರಯ ಪಡೆಯಲು ಮದೀನಾ ಎಂಬ ಶಾಂತಿಧಾಮವೊಂದು ಪ್ರಾಪ್ತವಾಯಿತು. ಈ ಒಪ್ಪಂದದ ಬೆನ್ನಿಗೆ ಮುಸ್ಲಿಮರು ಸಣ್ಣ ಸಣ್ಣ ತಂಡಗಳ ರೂಪದಲ್ಲಿ ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗತೊಡಗಿದರು. ಶೀಘ್ರವೇ ಪ್ರವಾದಿವರ್ಯರೂ ಮದೀನಾ ನಗರಕ್ಕೆ ಹೋದರು. ಅತ್ತ ಮದೀನಾದಲ್ಲಿ ಸದಾ ಪರಸ್ಪರ ಯುದ್ಧ ನಿರತರಾಗಿರುತ್ತಿದ್ದ ಖಜ್ರಜ್ ಮತ್ತು ಔಸ್ ಎಂಬೆರಡು ಗುಂಪುಗಳು ಪ್ರವಾದಿಯ ಅನುಸರಣೆಯಲ್ಲಿ ಒಂದಾಗಿ ಬಿಟ್ಟವು. ಪ್ರವಾದಿವರ್ಯರು ಇಬ್ಬರ ಜಗಳದ ಲಾಭ ಪಡೆಯುವ ಬದಲು ಜಗಳವನ್ನೇ ಇಲ್ಲವಾಗಿಸಿ ಬಿಟ್ಟರು. ಮದೀನಾದಲ್ಲಿ ಪ್ರವಾದಿವರ್ಯರು ಒಂದು ಅಧಿಕೃತ ಸರಕಾರವನ್ನು ಸ್ಥಾಪಿಸಿದರು. ಅವರು ಮದೀನಾದವರಿಗೆ ಮಾತು ಕೊಟ್ಟಂತೆ, ತಮ್ಮ ನೆಚ್ಚಿನ ಹುಟ್ಟೂರಾದ ಮಕ್ಕಾ ಪಟ್ಟಣವು ತಮಗೆ ಶರಣಾದ ಬಳಿಕವೂ ಮಕ್ಕಾದಲ್ಲಿ ನೆಲೆಸಲು ಒಲವು ತೋರಲಿಲ್ಲ. ಯಾತ್ರೆಗೆಂದು ಮಕ್ಕಾಗೆ ಹೋದವರು ಕೆಲವೇ ದಿನಗಳಲ್ಲಿ ಮದೀನಾಗೆ ಮರಳಿ ಬಂದು ಮದೀನಾದಲ್ಲೇ ಕೊನೆಯುಸಿರೆಳೆದರು.
ಕ್ರಿ.ಶ. 622ರಲ್ಲಿ ಮದೀನಾಗೆ ಪ್ರವಾದಿವರ್ಯರು ವಲಸೆ ಬಂದ ದಿನವು ಮುಸ್ಲಿಮ್ ಇತಿಹಾಸದ ಅತ್ಯಂತ ಪ್ರಮುಖ ದಿನವಾದ್ದರಿಂದ ಮತ್ತು ಆ ಮೂಲಕ ಹೊಸ ಯುಗವೊಂದರ ಉದಯವಾದುದರಿಂದ ಆ ದಿನವನ್ನೇ ಮುಸ್ಲಿಮರ ಹಿಜ್ರತ್ ಅಥವಾ ಹಿಜರಿ ಕ್ಯಾಲೆಂಡರ್ನ ಪ್ರಥಮ ದಿನವೆಂದು ಪರಿಗಣಿಸಲಾಗುತ್ತದೆ.
ಮದೀನಾ ಪ್ರವೇಶಿಸಿದ ಪ್ರವಾದಿವರ್ಯರು ಪ್ರಥಮವಾಗಿ ಆ ನಗರದಲ್ಲಿ ಒಂದು ಸರಕಾರವನ್ನು ರಚಿಸಿ, ಕಾನೂನಿನ ಆಡಳಿತವನ್ನು ಪರಿಚಯಿಸಿದರು. ವಿವಿಧ ಗುಂಪು, ಪಂಗಡ ಹಾ