ದೇಶದ ಆರೋಗ್ಯ ಕ್ಷೇತ್ರ ಸುಧಾರಿಸುವುದೆಂದು?
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಎಚ್1 ಎನ್1 ಸೋಂಕಿನಿಂದ ಜನರು ಪ್ರಾಣಕಳೆದುಕೊಳ್ಳುತ್ತಿರುವುದು ನೋವನ್ನುಂಟುಮಾಡಿದೆ. ಆದರೆ ಈ ಸೋಂಕಿಗೆ ಸರಕಾರ ಪ್ರಾಯೋಜಿತ ಆರೋಗ್ಯ ಯೋಜನೆಗಳಾದ ಯಶಸ್ವಿನಿ, ಆಯುಷ್ಮಾನ್ ಭಾರತ್ ಮೊದಲಾದ ಸೇವೆಗಳನ್ನು ಖಾಸಗಿ ಆಸ್ಪತ್ರೆಯವರು ತಿರಸ್ಕರಿಸುವುದು ಜನರನ್ನು ಚಿಂತೆಗೀಡುಮಾಡಿದೆ. ಜನರ ಆರೋಗ್ಯವನ್ನು ಸುಧಾರಣೆ ಮಾಡಲು ಸರಕಾರ ಜಾರಿಗೊಳಿಸುವ ಕಾನೂನುಗಳು ನಿಷ್ಪ್ರಯೋಜಕವಾಗುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ, ವೈದ್ಯರು, ಶುಶ್ರೂಷಕಿಯರ ನಿರ್ಲಕ್ಷ್ಯ ಕಾಡುವುದು ಒಂದೆಡೆಯಾದರೆ ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಜೀವದ ಜೊತೆ ಚಲ್ಲಾಟವಾಡುವುಡುತ್ತಿವೆ. ಅಲ್ಲದೆ ಜನತೆ ವೈದ್ಯರು, ಆಸ್ಪತ್ರೆಯ ಆಡಳಿತ ಮಂಡಳಿಗಳ ವಿರುದ್ಧ ತಿರುಗಿಬೀಳುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ ಆಡಳಿತಾರೂಢ ಸರಕಾರಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿವೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಭಾರತವು ಶೇ. 1.2 ಜಿಡಿಪಿ ಹಣವನ್ನು ಖರ್ಚುಮಾಡುತ್ತಿದೆ ಅಂದರೆ ಜಗತ್ತಿನ ಇತರ ಬಡರಾಷ್ಟ್ರಗಳ ವೆಚ್ಚಕ್ಕಿಂತ ತೀರ ಕಡಿಮೆ. ಭಾರತ ಸಂವಿಧಾನದ ಆರ್ಟಿಕಲ್ 47 ಪ್ರತಿಯೊಂದು ರಾಜ್ಯವು ತನ್ನ ಜನತೆಯ ಪೌಷ್ಟಿಕತೆಯ ಮಟ್ಟವನ್ನು ಮತ್ತು ಆರೋಗ್ಯದ ಮಟ್ಟವನ್ನು ಸುಧಾರಿಸುವಲ್ಲಿ ರಾಜ್ಯದ ಜವಾಬ್ದಾರಿಯನ್ನು ತಿಳಿಸಿದೆ. ಕರ್ನಾಟಕ ರಾಜ್ಯವು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಹಾಗೂ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರೂ ನಾಡಿನ ಜನತೆಯು ಅನಾರೋಗ್ಯದಿಂದ ಹಾಗೂ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದು ಕಡಿಮೆಯಾಗಿಲ್ಲ. ಜನರ ಆರೋಗ್ಯವನ್ನು ಕಾಪಾಡಲು ಅನೇಕ ಯೋಜನೆಗಳನ್ನು ಪ್ರಕಟಿಸುವ ಸರಕಾರವು ಆ ಯೋಜನೆಗಳ ಸಫಲತೆಯತ್ತ ಗಮನ ಹರಿಸದಿರುವುದು ವಿಷಾದನೀಯ.
ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ 2018ರ ಪ್ರಕಾರ ಭಾರತದಲ್ಲಿ ಸುಮಾರು 23,582 ಸರಕಾರಿ ಆಸ್ಪತ್ರೆಗಳಿದ್ದು 71,0761 ಬೆಡ್ಗಳ ವ್ಯವಸ್ಥೆ ಇದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ಸುಮಾರು 2,844 ಆಸ್ಪತ್ರೆಗಳಿದ್ದು (ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೇರಿಸಿ) 69,865 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ, ಆದರೆ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ 1,217 ಆಸ್ಪತ್ರೆಗಳಿದ್ದು 77,532 ಬೆಡ್ ವ್ಯವಸ್ಥೆ ಇದೆ. ಅಂತೆಯೇ ಕೇರಳ ರಾಜ್ಯದಲ್ಲಿ 1,280 ಆಸ್ಪತ್ರೆಗಳಿವೆ 38,004 ಬೆಡ್ ವ್ಯವಸ್ಥೆ ಇದೆ. ಒಟ್ಟಾರೆ ಹೇಳುವುದಾದರೆ ಮೇಲ್ನೋಟಕ್ಕೆ ಕರ್ನಾಟಕದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಒದಗಿಸಿರುವಂತೆ ಬಿಂಬಿತವಾದರೂ ಜನಸಂಖ್ಯೆ ಅನುಪಾತಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕರ್ನಾಟಕ ದಲ್ಲಿ ಪ್ರಸ್ತುತ ಹಲವು ಮಂದಿ ಹೆಚ್1 ಎನ್1 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು 100ಕ್ಕೂ ಅಧಿಕ ಮಂದಿಗಳಲ್ಲಿ ಈ ಸೋಂಕಿರುವ ಋಣಾತ್ಮಕ ಲಕ್ಷಣಗಳು ಕಂಡುಬಂದಿವೆ. ಇವೆಲ್ಲವನ್ನು ಗಮನಿಸಿದಾಗ ಸರಕಾರವು ಈ ರೋಗವನ್ನು ಹೋಗಲಾಡಿಸಲು ಮತ್ತು ನಾಡಿನ ಜನರನ್ನು ರಕ್ಷಿಸಲು ಸರಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ ಸೌಲಭ್ಯಗಳನ್ನು, ಸಹಕಾರಗಳನ್ನು ಒದಗಿಸಲು ತ್ವರಿತ ಕ್ರಮಗಳನ್ನು ಜರುಗಿಸದಿದ್ದುದರಿಂದ ಜನರು ಖಾಸಗಿ ಆಸ್ಪತ್ರೆಗಳ ದೌರ್ಜನ್ಯ, ದ್ಬಾಳಿಕೆಗಳನ್ನು ಎದುರಿಸುವಂತಾಗಿದೆ.
ದುರ್ಬಲಗೊಂಡ ಕಾಯ್ದೆ
ಭಾರತದಲ್ಲಿ 1991ರಲ್ಲಿ ಜಾರಿಗೆ ಬಂದ ನೀತಿಯಿಂದ ಇಂದು ರಾಷ್ಟ್ರದ ಎಲ್ಲಾ ಕ್ಷೇತ್ರಗಳೂ ಖಾಸಗಿ ಸ್ವಾಮ್ಯಕ್ಕೆ ಒಳಗಾಗಿರುವುದನ್ನ್ನು ಕಾಣಬಹುದು. ನಾಡಿನ ಭೂಮಿ, ನೀರು, ಇತರ ಸೌಲಭ್ಯಗಳನ್ನು ಬಳಸಿಕೊಂಡು ತಲೆ ಎತ್ತುವ ಖಾಸಗಿ ಕ್ಷೇತ್ರಗಳು ಇಂದು ನಾಡಿಗೆ ಮತ್ತು ನಾಡಿನ ಜನತೆಗೆ ತಮ್ಮ ಸೇವೆಯನ್ನು ನೀಡಲು ನಿರ್ಬಂಧಗಳನ್ನು ಹೇರುತ್ತಿರುವುದು ಖಾಸಗಿ ಸ್ವಾಮ್ಯದ ಧೋರಣೆಯನ್ನು ತಿಳಿಸುತ್ತಿದೆ. ಅಂದರೆ ನಮ್ಮನ್ನಾಳುವ ನಾಯಕರು, ಸರಕಾರಗಳ ಭ್ರಷ್ಟತೆಗೆ ಈ ನಾಡಿನ ಸಂಪತ್ತು ಖಾಸಗಿ ವ್ಯಕ್ತಿಗಳ ಸ್ವತ್ತಾಗಿ ಜನಸಾಮಾನ್ಯರಿಗೆ ನೆಲೆ ಇಲ್ಲದಂತಾಗಿದೆ. ಹಾಗೆಯೇ 1976ರಲ್ಲಿ ಜಾರಿಯಾಗಿದ್ದ ಖಾಸಗಿ ನರ್ಸಿಂಗ್ ಹೋಮ್ ನಿಯಂತ್ರಣ ಕಾಯ್ದೆಯಲ್ಲಿ ಕೆಲವು ಮಹತ್ತರ ಬದಲಾವಣೆ ತರಲು ಜಾರಿಯಾಗಿದ್ದ ‘2007 ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ’ಯನ್ನು ಖಾಸಗಿ ಸ್ವಾಮ್ಯದ ಆಸ್ಪತ್ರೆಗಳ ಮೇಲೆ ರೂಪಿಸಿತ್ತು. ಅಲ್ಲದೆ ಈ ಕಾನೂನನ್ನು ಮತ್ತಷ್ಟು ಉತ್ತಮಗೊಳಿಸಲು 2017ರಲ್ಲಿ ತಿದ್ದುಪಡಿಗೆ ಮುಂದಾದಾಗ ಖಾಸಗಿ ಆಸ್ಪತ್ರೆಗಳ ಆಡಳಿತ ವರ್ಗ, ವೈದ್ಯರು ಬೀದಿಗಿಳಿದು ತೀವ್ರ ವಿರೋಧ ಮಾಡುವ ಮೂಲಕ ಕಾನೂನನ್ನು ದುಬಲರ್ಗೊಳಿಸಲಾಯಿತು.
ಈ ಕಾಯ್ದೆಯಲ್ಲಿ ನೋಂದಣಿಯಾಗದ ಖಾಸಗಿ ನರ್ಸಿಂಗ್ ಹೋಮ್ಗಳ ಮೇಲೆ 5,00,000 ದಂಡ ವಿಧಿಸುವುದು, ವೈದ್ಯಕೀಯ ನಿರ್ಲಕ್ಷ್ಯ ತೋರುವ ವೈದ್ಯರನ್ನು ಜೈಲಿಗೆ ಕಳುಹಿಸುವುದು, ಕೆಲವು ಪ್ರಮುಖ ಶಸ್ತ್ರ ಚಿಕಿತ್ಸೆಗಳಿಗೆ ತಗಲುವ ವೆಚ್ಚದ ಅಂದಾಜನ್ನು ಸರಕಾರವೇ ನಿರ್ಧರಿಸುವುದು, ತುರ್ತುಸೇವೆಗಳಿಗೆ ಮುಂಗಡ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ ಇವೇ ಮೊದಲಾದ ಮಹತ್ತರ ತಿದ್ದುಪಡಿಯನ್ನು ಒಳಗೊಂಡಿತ್ತಾದರೂ ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ಮಾಲಕರ ಪ್ರತಿರೋಧದಿಂದ ಜಾರಿಗೊಳ್ಳುವಲ್ಲಿ ವಿಫಲವಾಯಿತು.
‘ವೈದ್ಯೋ ನಾರಾಯಣ ಹರಿ’ ಎಂಬ ಮಾತಿದೆ ಆದರೆ ಇಂದು ರಕ್ಷಿಸುವವರೇ ಭಕ್ಷಕರಾಗಿರುವುದು ಮಾನವೀಯ ಮೌಲ್ಯಗಳ ಅಳಿವನ್ನು ಸೂಚಿಸುತ್ತಿದೆ. ಅಂದರೆ ಸರಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಸಣ್ಣ ಸಣ್ಣ ಚಿಕಿತ್ಸೆಗಳಿಗೂ ಖಾಸಗಿ ಆಸ್ಪತ್ರೆಗಳತ್ತ ಕೈತೋರಿಸುವುದು, ಖಾಸಗಿ ಔಷಧಾಲಯಗಳಲ್ಲಿ ಔಷಧಿಯನ್ನು ತರಲು ತಾಕೀತು ಮಾಡುವುದು ಮೇಲ್ನೋಟಕ್ಕೆ ಸರಕಾರಿ ಆಸ್ಪತ್ರೆಗಳ ಕುಂದುಕೊರತೆಯನ್ನು ಹೇಳುವಂತಿದ್ದರೂ ವಾಸ್ತವದಲ್ಲಿ ಅವರ ಭ್ರಷ್ಟ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇಂದು ವೈದ್ಯರು ಇಷ್ಟು ಭ್ರಷ್ಟರಾಗಲು ವೈದ್ಯಕೀಯ ಕೋರ್ಸ್ಗಳು ದುಬಾರಿಯಾಗಿರುವುದೇ ಕಾರಣವಾಗಿದೆ. ಸಾಮಾನ್ಯ ಕುಟುಂಬದಿಂದ ಬರುವ ಪ್ರತಿಭಾನ್ವಿತರಿಗಂತೂ ವೈದ್ಯಕೀಯ ಕೋರ್ಸ್ ಗಳು ಕನಸಾಗಿವೆ. ಭಾರತೀಯ ವೈದ್ಯಕೀಯ ಸಮಿತಿಯ ಪ್ರಕಾರ ಸುಮಾರು 472 ವೈದ್ಯಕೀಯ ಕಾಲೇಜುಗಳಿದ್ದು 65,510 ಎಂಬಿಬಿಎಸ್ ಸೀಟುಗಳು ಹಾಗೂ 25,000 ಎಂಡಿ/ಎಂಎಸ್ ಸೀಟುಗಳಿವೆ. ಇವುಗಳನ್ನು ನಿಯಂತ್ರಿಸುವ ಭಾರತೀಯ ವೈದ್ಯಕೀಯ ಸಮಿತಿಯೇ ಭ್ರಷ್ಟತೆಯಲ್ಲಿ ಮುಳುಗಿರುವಾಗ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ಬಯಸುವುದು ಸಾಧ್ಯವಿಲ್ಲ. ದೇಶದಾದ್ಯಂತ ಸಂಚಲನ ಮೂಡಿಸಿದ್ದ ಮಧ್ಯಪ್ರದೇಶದ ವ್ಯಾಪಂ ಹಗರಣದಲ್ಲಿ ಸುಮಾರು 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಮೋಸದಿಂದ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಪಡೆದುಕೊಂಡಿದ್ದು ಶಿಕ್ಷಣದ ಮೌಲ್ಯವನ್ನು ಕುಂದಿಸುವ ವಿಚಾರವಾಗಿದೆ. ಹೀಗೆ ಅತಿ ಹೆಚ್ಚು ಹಣವನ್ನು ಕೊಟ್ಟು ವೈದ್ಯಕೀಯ ಶಿಕ್ಷಣ ಪಡೆಯುವವರು ಮುಂದೆ ಹೇಗೆ ತಾನೇ ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯ. ಭಾರತೀಯ ವೈದ್ಯಕೀಯ ಸಮಿತಿಯ ರಿಜಿಸ್ಟಾರ್ ಡಾ. ಗಿರೀಶ್ ತ್ಯಾಗಿಯವರ ಪ್ರಕಾರ ಪ್ರತೀ ತಿಂಗಳು 20-30 ವೈದ್ಯಕೀಯ ನಿರ್ಲಕ್ಷ್ಯದ ಕೇಸುಗಳು ನೋಂದಣಿಯಾಗುತ್ತವೆ ಹಾಗೆಯೇ ಡಾ. ಅಭಿಷೇಕ್ ಯಾದವ್ ಪ್ರಕಾರ ಶೇ. 45ರಷ್ಟು ಕೇಸುಗಳಲ್ಲಿ ತಪ್ಪುಚಿಕಿತ್ಸಾ ವಿಧಾನ ಮತ್ತು ತಪ್ಪು ಔಷಧಿಗಳಿಂದ ಸಾವು ಸಂಭವಿಸುತ್ತಿವೆ. ಇದು ಸಾಲದೆಂಬಂತೆ ವೈದ್ಯಕೀಯ ಲೋಕದಲ್ಲಿ 2004-2013 ರವರೆಗೆ ಔಷಧ ಪ್ರಯೋಗವು ಎಗ್ಗಿಲ್ಲದೆ ನಡೆದಿದ್ದು ಸಾವಿರಾರು ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಮೇಲಿನ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ದೇಶದಲ್ಲಿ ವೈದ್ಯಕೀಯ ಶಿಕ್ಷಣ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಸ್ಥಾಪನೆಗಾಗಿ ಜಾರಿಯಲ್ಲಿರುವ ಕಾನೂನು ಇನ್ನೂ ಪ್ರಬಲವಾಗಬೇಕಾದ ಅನಿವಾರ್ಯವಿದೆ. ಅಲ್ಲದೆ ನಮ್ಮನಾಳುವ ಆಡಳಿತ ಪಕ್ಷಗಳು, ನಾಯಕರು ಬರೀ ಸಂಪತ್ತಿನ ಗಳಿಕೆಯನ್ನಷ್ಟೇ ಯೋಚಿಸದೆ ನಾಡಿನ ಜನರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಕಾನೂನು ರೂಪಿಸಬೇಕಾಗಿದೆ. ಜನರ ಆರೋಗ್ಯದ ಗುಣಮಟ್ಟವನ್ನು ಉತ್ತಮಪಡಿಸಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮತ್ತು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಕೈಗೊಳ್ಳಬೇಕಿದೆ. ಅಲ್ಲದೆ ಸರಕಾರವು ಖಾಸಗಿ ಸ್ವಾಮ್ಯಕ್ಕೆ ಅನುಮತಿಗಳನ್ನು ಕೊಡುವಾಗ ಜನರ ಒಳಿತನ್ನು ಗಮನದಲ್ಲಿಟ್ಟುಕೊಂಡು ಷರತ್ತುಗಳನ್ನು ವಿಧಿಸಿ ಅವುಗಳ ಉಲ್ಲಂಘನೆಗೆ ತಕ್ಕ ಶಿಕ್ಷೆಯನ್ನು ಗೊತ್ತುಪಡಿಸುವ ಮೂಲಕ ಕಾರ್ಯಪ್ರವೃತ್ತರಾಗಲು ಅನುವುಮಾಡಿಕೊಡಬೇಕಿದೆ. ಅಲ್ಲದೆ ಪ್ರತಿಯೊಬ್ಬ ವೈದ್ಯರೂ ಹಣ ಗಳಿಕೆಯನ್ನೇ ವೃತ್ತಿಮಾಡಿಕೊಳ್ಳದೆ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ನಿಷ್ಠೆ, ಪ್ರಾಮಾಣಿಕರಾಗಿ ದೇಶದ ಹಿತಕ್ಕಾಗಿ ದುಡಿದರೆ ಮಾತ್ರ ದೇಶದ ಆರೋಗ್ಯ ಕ್ಷೇತ್ರ ಸುಧಾರಿಸೀತು.