ಅಂತರ್‌ರಾಷ್ಟ್ರೀಯವಾಗಿಯೂ ಗಮನ ಸೆಳೆದಿದೆ ಪವಾಡ ರಹಸ್ಯ ಬಯಲು
ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳು ರಾಷ್ಟ್ರವ್ಯಾಪಿಯಾಗಿ ಜನಪ್ರಿಯವಾಗುತ್ತಿರುವಂತೆಯೇ ಸಾವಿರಾರು ಮಂದಿ ಈ ಬಯಲು ಕಾರ್ಯಕ್ರಮವನ್ನು ಅಲ್ಲಲ್ಲಿ ಮಾಡಲು ಆರಂಭಿಸಿದರು. ಕೆಲವರು ಜಾದೂಗಾರರಾದರು. ಕೆಲವರು ಪವಾಡಗಳನ್ನು ಮಾಡಿ ತೋರಿಸುವ ಮೂಲಕ ಜನಜಾಗೃತಿ ಮೂಡಿಸಲಾರಂಭಿಸಿದರು. ಸ್ಥಳೀಯ ಜನರು ತಮ್ಮ ಅನುಭವಗಳನ್ನು, ತಾವು ನೋಡಿದ ಪವಾಡಗಳನ್ನು ಮಾಡಿ ತೋರಿಸಲಾರಂಭಿಸಿದರು. ಪವಾಡ ರಹಸ್ಯ ಬಯಲು ಮಾಡುವ ಜತೆಗೆ ಪವಾಡಗಳ ಸಂಶೋಧನೆ, ಪವಾಡಗಳ ಶಕ್ತಿ ಇದೆ ಎಂದು ಹೇಳಿಕೊಳ್ಳುವವರಿಗೆ ಸವಾಲು ಹಾಕುವಂತಹ ರೀತಿಯಲ್ಲಿ ಕಾರ್ಯಕ್ರಮಗಳು ನಡೆದವು. ಇದೀಗ ಬೆಳೆದು ಇದರ ಮಗ್ಗಲುಗಳು ಅದೆಷ್ಟು ಕಡೆ ಹಬ್ಬಿದೆ ಎಂಬುದು ನಮಗೂ ತಿಳಿದಿಲ್ಲ.
ಹೀಗೆ ರಾಷ್ಟ್ರೀಯವಾಗಿ ಹಬ್ಬಿದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಅಂತರ್‌ರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಲಾ ರಂಭಿಸಿತು. ಪ್ರಥಮವಾಗಿ ನನಗೆ ಆಸ್ಟ್ರೇಲಿಯಾದಲ್ಲಿ ಪವಾಡ ರಹಸ್ಯ ಬಯಲು ಮಾಡುವ ಅವಕಾಶ ದೊರೆಯಿತು. ಐದು ಕಾರ್ಯಕ್ರಮಗಳನ್ನು ನಾವಲ್ಲಿ ನೀಡಿದೆವು. ಆಸ್ಟ್ರೇಲಿಯಾದ ವಾರ್ಷಿಕ ಕಾರ್ಯಕ್ರಮವೊಂದರಲ್ಲಿ ನನ್ನನ್ನು ದಿಕ್ಸೂಚಿ ಭಾಷಣ ನೀಡಲು ಅತಿಥಿಯಾಗಿ ಕೂಡಾ ಕರೆಸಲಾಯಿತು. ಅಲ್ಲಿ ಈ ಕಾರ್ಯಕ್ರಮ ಅಲ್ಲಿನ ವೀಕ್ಷಕರಿಗೆ ಅಚ್ಚರಿಯನ್ನು ತರಿಸಿತ್ತು. ಆ ಬಳಿಕ ಇಂಗ್ಲೆಂಡ್, ನಾರ್ವೆ, ಡೆನ್ಮಾರ್ಕ್ ಹೀಗೆ ವಿದೇಶಗಳಲ್ಲೂ ವಿಚಾರವಾದ ಛಾಪು ವ್ಯಾಪಿಸಲಾರಂಭಿಸಿತು. ಅಲ್ಲಿನ ಸ್ಥಳೀಯ ಟಿವಿ ಚಾನೆಲ್‌ಗಳು ಕೂಡಾ ಈ ಕಾರ್ಯಕ್ರಮಕ್ಕೆ ಒತ್ತು ನೀಡಿ ಪ್ರಸಾರ ಮಾಡಿದವು. ಇದರಿಂದಾಗಿ ವಿಚಾರವಾದ ಅಂತರ್‌ರಾಷ್ಟ್ರೀಯವಾಗಿ ಬೆಳೆಯಲು, ಜನರನ್ನು ಆಕರ್ಷಿಸಲು ಕಾರಣವಾಯಿತು. ಜನರ ಬಳಿ ವೈಜ್ಞಾನಿಕವಾಗಿ ಯೋಚನೆ ಮಾಡಬೇಕು ಎಂದಾಗ ಅವರಿಗದು ಅಷ್ಟಾಗಿ ಅರ್ಥವಾಗುವುದಿಲ್ಲ. ಆದರೆ ಪವಾಡಗಳ ಮೂಲಕ ಜನರಲ್ಲಿ ವೈಜ್ಞಾನಿಕ ಸತ್ಯಗಳನ್ನು ಬಿಚ್ಚಿಟ್ಟಾಗ ಅದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ನನ್ನಲ್ಲಿ ‘‘ನೀವು ನಾಸ್ತಿಕರಲ್ಲವೇ?’’ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರು ವಿಚಾರವಾದಿಗಳಾಗಿ ಒಂದು ವಿಷಯಕ್ಕೆ ಸಂಬಂಧಿಸಿ ಮಾತ್ರವೇ ಮಾತನಾಡುತ್ತೀರಿ ಎಂಬ ಆರೋಪವನ್ನು ಮಾಡುತ್ತಾರೆ. ಜಗತ್ತು ಹೇಗೆ ಅಸ್ತಿತ್ವಕ್ಕೆ ಬಂತು? ಜೀವಗಳ ಸೃಷ್ಟಿ ಹೇಗಾಗಿಯಿತು? ಎಂಬ ಪ್ರಶ್ನೆಗಳನ್ನೂ ಮಾಡುತ್ತಾರೆ. ಆಗ ವೈಜ್ಞಾನಿಕ ವಿವರಣೆಗಳನ್ನು ಅವರಿಗೆ ನೀಡಿದಾಗ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಕೆಲವೊಂದು ರೀತಿಯ ಇರಿಸು ಮುರಿಸಿನ ಪ್ರಸಂಗಗಳು ನಡೆದಿವೆ. ಆದರೆ ನಾವು ಅದಕ್ಕೆ ಸಿದ್ಧರಾಗಿಯೇ ಇರುತ್ತೇವೆ. ಅಂತಹ ಬಾಲಿಶ ಎದುರಾಳಿಗಳನ್ನು ಎದುರಿಸಿದ್ದೂ ಇದೆ. ಯಾವುದೇ ರೀತಿಯ ಪವಾಡಗಳ ಸವಾಲಿಗೆ ಪ್ರತಿಯಾಗಿ ನಾವು ಕೇವಲ ವಿವರಣೆ ಮಾತ್ರ ನೀಡದೆ, ಅದನ್ನು ಪ್ರಾಯೋಗಿಕವಾಗಿ ಬಹಿರಂಗ ಪಡಿಸಿದಾಗ ಮಾತ್ರವೇ ಜನರು ನಂಬುವಂತಹ ಪರಿಸ್ಥಿತಿ ಇರುವುದರಿಂದ ನಾವು ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಯೇ ನಮ್ಮ ಕಾರ್ಯಕ್ರಮ ನಡೆಸಿದ ಕಾರಣ ನಾವು ಜನರ ಮಧ್ಯೆ ವಿಜ್ಞಾನದ ಸತ್ಯ, ಕೌತುಕಗಳನ್ನು ತಿಳಿಸಲು ಸಾಧ್ಯವಾಗಿದೆ. ನಕಲಿ ವೈದ್ಯರು, ಚಿಕಿತ್ಸಕರ ಬಗ್ಗೆ ಇರಲಿ ಎಚ್ಚರ!
ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಮಂಗಳೂರು ನಗರ ಶೈಕ್ಷಣಿಕ ಕೇಂದ್ರವಾಗಿಯೇ ಹೆಸರು ಪಡೆದಿರುವಂತಹದ್ದು. ಇಲ್ಲಿ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳು ಬಹಳಷ್ಟಿವೆ. ವೈದ್ಯಕೀಯ ಕ್ಷೇತ್ರದಲ್ಲಂತೂ ನಾನಾ ರೀತಿಯ ಆವಿಷ್ಠಾರಗಳೊಂದಿಗೆ, ವಿನೂತನ ಚಿಕಿತ್ಸಾ ಉಪಕರಣಗಳೊಂದಿಗೆ ಮಂಗಳೂರು ನಗರ ದೇಶದಲ್ಲಿ ಹೆಸರು ಪಡೆದಿದೆ. ಇದೆಲ್ಲಾ ಪೀಠಿಕೆಯನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ಇಂತಹ ಹಲವು ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಸಾವಿರಾರು ಸಂಖ್ಯೆಯ ವೈದ್ಯಕೀಯ ವೃತ್ತಿಪರರ ನಗರವಾಗಿದ್ದರೂ, ಇಲ್ಲಿಯೂ ಜನರನ್ನು ಏಮಾರಿಸುವ, ಚಿಕಿತ್ಸೆಯ ಹೆಸರಿನಲ್ಲಿ ದಂಧೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿರುವುದನ್ನು ಜನಸಾಮಾನ್ಯರ ಗಮನಕ್ಕೆ ತರುವುದಕ್ಕಾಗಿ. ಚಿಕಿತ್ಸಾ ತಜ್ಞರೆಂದು ಕರೆಸಿಕೊಳ್ಳುವ ದಂಡೊಂದನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಾನು ಕಂಡು ದಂಗಾದೆ. ಪುಣೆಯಿಂದ ಬಂದಿರುವ ಈ ತಂಡ ಎಲ್ಲಾ ರೀತಿಯ ದೈಹಿಕ ನ್ಯೂನ್ಯತೆಗಳಿಗೆ ಚಿಕಿತ್ಸೆ ನೀಡುವ ಗ್ಯಾರಂಟಿಯನ್ನು ಕೂಡಾ ನೀಡುತ್ತದೆ!
ಕುಲಶೇಖರ ಕೈಕಂಬದ ಬಳಿ ಸಂಚಾರಿ ವಾಹನದೊಂದಿಗೆ ಈ ಚಿಕಿತ್ಸಾ ತಂಡ ಕಂಡು ಬಂದಿದೆ. ಸಂಚಾರಿ ವಾಹನದ ಬ್ಯಾನರ್‌ನಲ್ಲಿ ವಯಸ್ಸಾದ ಬಳಿಕ ವಿವಾಹ, ವಿವಾಹಕ್ಕೆ ಮುಂಚಿತ ಲೈಂಗಿಕತೆ ಸೇರಿದಂತೆ ಮಹಿಳೆಯರ ಎಲ್ಲಾ ರೀತಿಯ ರೋಗಗಳಿಗೆ ತಮ್ಮಲ್ಲಿ ಚಿಕಿತ್ಸೆ ಇರುವುದಾಗಿ ಹೇಳಿಕೊಳ್ಳಲಾಗಿದೆ. ಇಷ್ಟು ಮಾತ್ರವಲ್ಲ, ಪ್ಯಾರಾಲಿಸಿಸ್‌ಗೂ ಈ ಸಂಚಾರಿ ಚಿಕಿತ್ಸಾ ತಂಡದಲ್ಲಿ ಮದ್ದು ನೀಡಲಾಗುತ್ತದೆಯಂತೆ!
ಈ ಬಗ್ಗೆ ತಂಡದ ವ್ಯಕ್ತಿಯೊಬ್ಬನನ್ನು ವಿಚಾರಿದಾಗ, ವೈದ್ಯನೆಂದು ಹೇಳಿಕೊಂಡ ಆ ವ್ಯಕ್ತಿ ಹೇಳಿದ್ದು, ತಾನು ಸಾಂಪ್ರದಾಯಿಕ ಚಿಕಿತ್ಸಕನಂತೆ. ಸಂಚಾರಿ ವಾಹನದಲ್ಲಿ ನೂರಾರು ಬಗೆಯ ಪ್ಲಾಸ್ಟಿಕ್ ಜಾರ್‌ಗಳಿದ್ದು, ಅದರ ತುಂಬೆಲ್ಲಾ ನಾನಾ ರೀತಿಯ ವಸ್ತುಗಳು. ಆತ ಅದೆಷ್ಟು ಮಹಾನ್ ಚಿಕಿತ್ಸಕನೆಂದರೆ, ಬೇರೆ ಯಾವುದೇ ವಿವರಣೆಯನ್ನು ಆತ ನೀಡಲಾರ, ಬ್ಯಾನರ್‌ನಲ್ಲಿ ಏನು ಬರೆದಿದೆ ಎಂದೂ ಆತನಿಗೆ ತಿಳಿದಿಲ್ಲ!
ಆತನ ಜತೆಗೊಬ್ಬ ಬಾಲಕನಿದ್ದು. ಆತನಿಗೆ ಶಾಲೆ ಇಲ್ಲವೇ ಎಂದು ಪ್ರಶ್ನಿಸಿದರೆ, ಆ ‘ವೈದ್ಯ’ನ ಉತ್ತರ ಆತನಿಗೆ ರಜೆ ಎಂಬುದಾಗಿತ್ತು. ಚಿಕಿತ್ಸೆಯ ಹೆಸರಿನಲ್ಲಿ ಈ ರೀತಿ ಜನಸಾಮಾನ್ಯರಿಗೆ ಮೋಸ ಮಾಡುವ ಜಾಲಗಳು ಹೊಸತೇನಲ್ಲ. ಆದರೆ, ಇಂತಹ ಮೋಸದ ಜಾಲಗಳಿಗೆ ಬಲಿ ಹೋಗುವವರೂ ಇದ್ದಾರೆ ಎನ್ನುವುದು ಮಾತ್ರ ಬೇಸರದ ಸಂಗತಿ. ಈ ರೀತಿ ಯಾವುದೇ ಪದವಿಯನ್ನು ಹೊಂದಿರದ ಅದ್ಯಾವುದೋ ಸಾಂಪ್ರದಾಯಿಕ ಪದ್ಧತಿ ಎಂದು ಹೇಳಿಕೊಳ್ಳುವ ಎಲ್ಲಿಂದಲೋ ಇಲ್ಲಿಗೆ ಆಗಮಿಸಿ ಜನಸಾಮಾನ್ಯರನ್ನು ಮೋಸ ಗೊಳಿಸುವ ಇಂತಹ ನಕಲಿ ಚಿಕಿತ್ಸಾ ಪದ್ಧತಿಗಳ ಬಗ್ಗೆ ಜನರು ಜಾಗೃತರಾಗಿರಬೇಕು.