ಶಿವಮೊಗ್ಗ: ಜೀವ ಬಲಿಗೆ ಬಾಯ್ತೆರೆದು ರೆಡಿಯಾಗಿವೆ ರಸ್ತೆಯಂಚಿನ ಕೆರೆಗಳು
ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ಜಿಲ್ಲಾಡಳಿತ?
ಶಿವಮೊಗ್ಗ, ನ. 25: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಸ್ ಉರುಳಿ ಬಿದ್ದು 30 ಮಂದಿ ಮೃತಪಟ್ಟ ದಾರುಣ ಘಟನೆಯ ನಂತರ, ಶಿವಮೊಗ್ಗ ಜಿಲ್ಲೆಯಲ್ಲಿಯೂ ಪ್ರಮುಖ ರಸ್ತೆಯಂಚಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆಕಟ್ಟೆಗಳ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗಲಾರಂಭಿಸಿದೆ. ಸೂಕ್ತ ರಕ್ಷಣಾ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರಲಾರಂಭಿಸಿದೆ.
ಶಿವಮೊಗ್ಗ ನಗರದ ಹೊರವಲಯ ಸೇರಿದಂತೆ ಜಿಲ್ಲೆಯ ಹಲವೆಡೆ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ಗ್ರಾಮೀಣ ಭಾಗದ ರಸ್ತೆಗಳಂಚಿಗೆ ಹೊಂದಿಕೊಂಡಂತೆ ಸಾಕಷ್ಟು ಕೆರೆಕಟ್ಟೆಗಳಿವೆ. ಹಲವೆಡೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪಿಡಬ್ಲ್ಯೂಡಿ ಇಲಾಖೆಯವರು ಕಲ್ಲುಕಂಬ, ಶೀಟ್ ಹೊದಿಕೆ ಮತ್ತಿತರ ವಸ್ತುಗಳನ್ನು ರಸ್ತೆಯಂಚಿನಲ್ಲಿ ಅಳವಡಿಸಿದ್ದಾರೆ. ಈ ಮೂಲಕ ವಾಹನಗಳು ಕೆರೆಗಳಿಗೆ ಬೀಳುವುದಕ್ಕೆ ಕಡಿವಾಣ ಹಾಕಿದ್ದಾರೆ.
ಆದರೆ ಮುಕ್ಕಾಲುಪಾಲು ರಸ್ತೆಯಂಚಿನ ಕೆರೆಗಳ ಬಳಿ, ವಾಹನಗಳು ಕೆರೆ ಪಾಲಾಗದಂತೆ ಎಚ್ಚರವಹಿಸುವ ಯಾವುದೇ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ ಹಲವು ಬಾರಿ ಚಾಲಕರ ನಿಯಂತ್ರಣ ಕಳೆದುಕೊಂಡು ವಾಹನಗಳು ಕೆರೆಗೆ ಬಿದ್ದು, ಅಮಾಯಕ ನಾಗರೀಕರು ಸಾವು-ನೋವಿಗೆ ತುತ್ತಾಗಿದ್ದ ಸ್ಥಳಗಳಲ್ಲಿಯೂ ಮುನ್ನಚ್ಚರಿಕೆ ವಹಿಸಿಲ್ಲ. ಇದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ.
ತಾಜಾ ನಿದರ್ಶನವೆಂಬಂತೆ ಶಿವಮೊಗ್ಗ ನಗರದ ಹೊರವಲಯ ಪುರಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 13 ಕ್ಕೆ ಹೊಂದಿಕೊಂಡಂತಿರುವ ಕೆರೆಗೆ ಈ ಹಿಂದೆ ಬಸ್, ಕಾರು, ಲಾರಿ ಸೇರಿದಂತೆ ಹಲವು ವಾಹನಗಳು ಬಿದ್ದಿವೆ. ಈ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಒತ್ತಾಯ ಹಲವು ವರ್ಷಗಳದ್ದಾಗಿದೆ. ಆದರೆ ಇಲ್ಲಿಯವರೆಗೂ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿಲ್ಲ. ಅದೇ ರೀತಿಯಲ್ಲಿ ನಗರದ ಹೊರವಲಯ ಅಬ್ಬಲಗೆರೆ ಗ್ರಾಮದ ಬಳಿಯಿರುವ ಕೆರೆಯೂ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಭದ್ರತಾ ಏರ್ಪಾಡು ಕ್ರಮಗಳು ಮಾತ್ರ ಅನುಷ್ಠಾನಗೊಂಡಿಲ್ಲವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರುತ್ತಾರೆ.
'ಜಿಲ್ಲೆಯ ಹಲವೆಡೆ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿರುವ ಕೆರೆಕಟ್ಟೆ, ನಾಲೆಗಳ ಬಳಿ ತಡೆಗೋಡೆಯಿರಲಿ ಕನಿಷ್ಠ ಸುರಕ್ಷತಾ ಕ್ರಮಗಳೂ ಇಲ್ಲವಾಗಿದೆ. ಅತ್ಯಂತ ಅಪಾಯಕಾರಿ ಸ್ಥಿಯಲ್ಲಿವೆ. ಇಷ್ಟೆಲ್ಲದರ ಹೊರತಾಗಿಯೂ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯಿಂದ ಹೊರಬಂದಿಲ್ಲ. ನಾಗರಿಕರಿಗೆ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಿಲ್ಲ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ಗಮನಿಸಿದರೆ ಅಮಾಯಕರ ಸಾವು-ನೋವು ಸಂಭವಿಸಿ, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ನಂತರವಷ್ಟೆ ಚಿತ್ತ ಹರಿಸುವಂತೆ ಕಾಣುತ್ತಿವೆ' ಎಂದು ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಮೀಕ್ಷೆ ನಡೆಸಲಿ: 'ಕೆರೆಕಟ್ಟೆ, ನಾಲೆಗಳಿಗೆ ವಾಹನಗಳು ಉರುಳಿಬಿದ್ದು ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದಾಗ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆಕಟ್ಟೆಗಳ ಬಗ್ಗೆ ಮಾತನಾಡುತ್ತಾರೆ. ತಡೆಗೋಡೆ ನಿರ್ಮಿಸುವ, ಸೂಚನಾ ಫಲಕ ಹಾಕುವ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡುವ ಮಾತುಗಳನ್ನಾಡುತ್ತಾರೆ. ನಂತರ ಈ ವಿಷಯವನ್ನೇ ಮರೆತು ಬಿಡುತ್ತಾರೆ' ಎಂದು ಕೆಲ ನಾಗರೀಕರು ದೂರುತ್ತಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ಗ್ರಾಮೀಣ ಭಾಗದ ರಸ್ತೆಯಂಚಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆಕಟ್ಟೆ-ನಾಲೆಗಳ ಸಮಗ್ರ ಸಮೀಕ್ಷೆ ನಡೆಸಬೇಕು. ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಬಳಸಿ, ತಡೆಗೋಡೆ ಸೇರಿದಂತೆ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸುವತ್ತ ಚಿತ್ತ ಹರಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಾರೆ.
ಅನುದಾನ ನೀಡಲಿ: ರಸ್ತೆಯಂಚಿನಲ್ಲಿರುವ ಕೆರೆಕಟ್ಟೆಗಳ ಬಳಿ ಶಾಶ್ವತ ಸ್ವರೂಪದ ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ತಡೆಗೋಡೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಿತ್ತ ಹರಿಸಬೇಕಾಗಿದೆ. ನಾಗರಿಕರ ಜೀವ ರಕ್ಷಣೆ ಮಾಡುವತ್ತ ಪ್ರಾಮಾಣಿಕ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಸಲಹೆ ನೀಡುತ್ತಾರೆ.
ಕನಿಷ್ಠ ಎಚ್ಚರಿಕೆ ಫಲಕವೂ ಹಾಕಿಲ್ಲ: ಅಬ್ಬಲಗೆರೆ ಗ್ರಾಮದ ನಿತೀನ್ ಪಟೇಲ್
'ತಮ್ಮ ಗ್ರಾಮ ಅಬ್ಬಲಗೆರೆ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಂಚಿನಲ್ಲಿಯೇ ದೊಡ್ಡ ಕೆರೆಯಿದೆ. ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಕೆರೆಯಂಚಿನಲ್ಲಿ ಯಾವುದೇ ತಡೆಗೋಡೆಯಾಗಲಿ ಅಥವಾ ಇತರೆ ಸುರಕ್ಷತಾ ಕ್ರಮಗಳಿಲ್ಲ. ಕನಿಷ್ಠ ಸೂಚನಾ, ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ಈಗಾಗಲೇ ಈ ಸ್ಥಳದಲ್ಲಿ ಹಲವು ಬಾರಿ ಅಪಘಾತಗಳಾಗಿವೆ. ಸಾವುನೋವುಗಳು ಸಂಭವಿಸಿವೆ. ಕೆಲವೊಮ್ಮೆ ವಾಹನಗಳೇ ಕೆರೆಗಳಿಗೆ ಬಿದ್ದಿರುವ ಊದಾಹರಣೆಗಳೂ ಇವೆ. ಈ ಕಾರಣದಿಂದ ಪಿಡಬ್ಲ್ಯೂಡಿ ಇಲಾಖೆಯು ಈ ಸ್ಥಳದ ಬಳಿ ಸೂಕ್ತ ತಡೆಗೋಡೆ ನಿರ್ಮಿಸಬೇಕಾಗಿದೆ' ಎಂದು ಅಬ್ಬಲಗೆರೆ ಗ್ರಾಮದ ಯುವ ಮುಖಂಡ ನಿತೀನ್ ಪಟೇಲ್‍ರವರು ಆಗ್ರಹಿಸುತ್ತಾರೆ.
ಹಲವು ಬಾರಿ ಕೆರೆಗೆ ವಾಹನ ಬಿದ್ದಿವೆ : ಪುರಲೆ ಗ್ರಾಮದ ಮಂಜುನಾಥ್
ಪುರಲೆ ಕೆರೆ ಎಂದರೇ ವಾಹನ ಸವಾರರು ಬೆಚ್ಚಿ ಬೀಳುವಂತಹ ಸ್ಥಿತಿಯಿದೆ. ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿರುವ ಈ ಕೆರೆಗೆ ಹಲವು ಬಾರಿ ವಾಹನಗಳು ಬಿದ್ದಿವೆ. ಸಾವುನೋವುಗಳು ಸಂಭವಿಸಿವೆ. ಈ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಿದೆ. ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಪುರಲೆ ಕೆರೆ ಸಮೀಪದ ರಸ್ತೆಯು ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ. ಇನ್ನಾದರೂ ಸಂಬಂಧಿಸಿದವರು ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಗಮನಹರಿಸಬೇಕಾಗಿದೆ' ಎಂದು ಪುರಲೆ ಗ್ರಾಮದ ನಿವಾಸಿ ಮಂಜುನಾಥ್‍ರವರು ತಿಳಿಸುತ್ತಾರೆ.