ಕೆನೆಪದರ ಮತ್ತು ತಲಪರಿಗೆ
ಇಂದು ಸಂವಿಧಾನ ದಿನ
ಪರಿಶಿಷ್ಟರಲ್ಲಿ ಕೆನೆಪದರಕ್ಕೆ ಏರುವ ಕಿಂಚಿತ್ ಸಾಧ್ಯತೆಗಳೇನಾದರೂ ಇದ್ದಲ್ಲಿ, ಮೇಲ್ಜಾತಿಯವರು ಕೆಳಪದರಕ್ಕೆ ಜಾರಿ ಮ್ಯಾನ್ ಹೋಲ್ಗಳ ಸ್ವಚ್ಛತೆಗೆ ಯಾಕೆ ಇಳಿಯುವುದಿಲ್ಲ? ಪ್ರಾಣಗಳನ್ನೇಕೆ ಕಳೆದುಕೊಳ್ಳುತ್ತಿಲ್ಲ? ಎಂಬ ಸಹಜ ಪ್ರಶ್ನೆ ಏಳುತ್ತದೆ. ಕೆನೆಪದರ ಎಂಬ ಫ್ಯಾಶನ್ನಿನ ನುಡಿಗಳು ದಲಿತರೊಳಗೂ ನುಸುಳಿಬಿಟ್ಟಿವೆ.
ಡಾ. ಅಂಬೇಡ್ಕರ್ ನವೆಂಬರ್ 26, 1949 ರಂದು ಸಂವಿಧಾನ ಸಮರ್ಪಣಾ ಸಭೆಯಲ್ಲಿ ಮಾತನಾಡುತ್ತಾ 1950ರ ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆಯುತ್ತೇವೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿಯುತ್ತದೆ ಎಂದರು. ಹೀಗೆ ಅಂಬೇಡ್ಕರ್ ಅವರು ನುಡಿದ 69 ವರ್ಷಗಳ ನಂತರ, ಈ ಹೇಳಿಕೆಯನ್ನು ಮತ್ತಷ್ಟು ಆಳವಾಗಿ ಗಮನಿಸುವುದಾದರೆ, ರಾಜಕೀಯ ಕ್ಷೇತ್ರದಲ್ಲೂ ಕೂಡ ಅವರು ಹಂಬಲಿಸಿದಷ್ಟು ಸಮಾನತೆಯನ್ನು ಸಾಧಿಸಲಾಗಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಘಟಾನುಘಟಿ ದಲಿತ ರಾಜಕಾರಣಿಗಳು ಶೋಷಣೆಯನ್ನು ಅನುಭವಿಸಿದ್ದಾರೆ. ಆ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಎನ್.ರಾಚಯ್ಯ, ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಬಿ.ಸೋಮಶೇಖರ್, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ರಂತಹವರ ಉದಾಹರಣೆಗಳಿವೆ.
ರಾಜಕೀಯ ಕ್ಷೇತ್ರದಲ್ಲಿ ಪಕ್ಷ ರಾಜಕಾರಣದ ಜಾತೀಯತೆಗೆ ಸಿಲುಕಿ ದಲಿತ ರಾಜಕಾರಣಿಗಳು ನಲುಗಿಹೋಗಿದ್ದಾರೆ. ಅವರು ಪಕ್ಷಗಳ ಹೈಕಮಾಂಡ್ಗಳ ಮರ್ಜಿಗೆ ತಲೆದೂಗಬೇಕಾಗಿದೆ. ಅದಕ್ಕಾಗಿಯೇ, ಡಾ. ಅಂಬೇಡ್ಕರ್ ಅವರು ರಾಜಕೀಯ ಕ್ಷೇತ್ರದ ಮೀಸಲಾತಿಯನ್ನು ಕೊನೆಗಾಣಿಸಬೇಕೆಂದು ಕೆಲವರ್ಷಗಳ ನಂತರ ಬೇಸರದಿಂದ ನುಡಿದರು. ಆ ಕಾರಣಕ್ಕಾಗಿಯೇ ಅವರು ಬದ್ಧತೆಯ ದಲಿತ ರಾಜಕಾರಣಕ್ಕಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬ್ರಿಟಿಷರಿಂದ ಪಡೆದುಕೊಂಡಿದ್ದರು. ಆದರೆ, ಪೂನಾ ಒಪ್ಪಂದದಲ್ಲಿ ಗಾಂಧಿಯ ಒತ್ತಾಯಕ್ಕೆ ಮಣಿದು ಈಗಿನ ಜಂಟಿ ಚುನಾವಣಾ ಪದ್ಧತಿಯನ್ನು ಒಪ್ಪಿಕೊಳ್ಳಬೇಕಾಯಿತು.
ಇನ್ನು ಆರ್ಥಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ಉಳಿದವರ ಮಟ್ಟವನ್ನು ದಲಿತರು ಮುಟ್ಟಲಾಗಿಲ್ಲ. ಮುಟ್ಟಲು ಈ ಭಾರತೀಯ ಸಮಾಜ ಬಿಡುವುದೂ ಇಲ್ಲ. ಇಲ್ಲಿ ಅಸ್ಪೃಶ್ಯತೆ ಮತ್ತು ಜಾತೀಯತೆ ಸಾಯುವುದಿಲ್ಲ. ಅವು ನಶಿಸದೆ, ಪರಿಶಿಷ್ಟರಲ್ಲಿ ಕೆನೆಪದರ ಎಂಬುದೊಂದು ವ್ಯರ್ಥ ಕಲ್ಪನೆ. ಅಸ್ಪಶ್ಯತೆ ಮತ್ತು ಕೆನೆಪದರ ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದರೂ, ಕೆಲವರು ಆಗಾಗ ಪರಿಶಿಷ್ಟರಲ್ಲೂ ಕೆನೆಪದರ ಅಳವಡಿಸಬೇಕೆಂಬ ಗುಲ್ಲೆಬ್ಬಿಸುತ್ತಿರುತ್ತಾರೆ. ಅವರೇಕೆ ಅಂತರ್ಜಾತಿ ವಿವಾಹ, ಸಮಾನ ಭೂ ಹಂಚಿಕೆ, ಉಚಿತ ಗುಣಮಟ್ಟದ ಕಡ್ಡಾಯ ಶಿಕ್ಷಣ, ಖಾಸಗಿ ರಂಗದ ಮೀಸಲಾತಿ ಜಾರಿಗೆ ಒತ್ತಾಯಿಸುವುದಿಲ್ಲ ಎಂಬ ಚರ್ಚೆಗಳಾಗುತ್ತಿವೆ. ಪರಿಶಿಷ್ಟರಲ್ಲಿ ಕೆನೆಪದರಕ್ಕೆ ಏರುವ ಕಿಂಚಿತ್ ಸಾಧ್ಯತೆಗಳೇನಾದರೂ ಇದ್ದಲ್ಲಿ, ಮೇಲ್ಜಾತಿಯವರು ಕೆಳಪದರಕ್ಕೆ ಜಾರಿ ಮ್ಯಾನ್ ಹೋಲ್ಗಳ ಸ್ವಚ್ಛತೆಗೆ ಯಾಕೆ ಇಳಿಯುವುದಿಲ್ಲ? ಪ್ರಾಣಗಳನ್ನೇಕೆ ಕಳೆದುಕೊಳ್ಳುತ್ತಿಲ್ಲ? ಎಂಬ ಸಹಜ ಪ್ರಶ್ನೆ ಏಳುತ್ತದೆ. ಕೆನೆಪದರ ಎಂಬ ಫ್ಯಾಶನ್ನಿನ ನುಡಿಗಳು ದಲಿತರೊಳಗೂ ನುಸುಳಿಬಿಟ್ಟಿವೆ. ಒಳಮೀಸಲಾತಿಗಾಗಿ ರಚಿಸಲಾದ ನ್ಯಾಯಮೂರ್ತಿ ಸದಾಶಿವ ಆಯೋಗದ ಜಿಲ್ಲಾ ಮಟ್ಟದ ಸಂಪರ್ಕ ಸಭೆೆಗಳಲ್ಲಿ ಕೆನೆಪದರ ಜಾರಿಯಾಗಬೇಕೆಂಬ ಮಾತುಗಳನ್ನು ಕೆಲ ದಲಿತ ಮುಂದಾಳುಗಳೆೆನಿಸಿಕೊಂಡವರು ಅನಗತ್ಯವಾಗಿ ಆಡಿದ್ದಾರೆ. ಸದಾಶಿವ ಆಯೋಗದ ವರದಿಯಲ್ಲಿ 21 ಸಾರಿ ಕೆನೆಪದರ ಎಂಬ ಪದ ಪುನರಾವರ್ತನೆಯಾಗುತ್ತದೆ.
ಅಸ್ಪಶ್ಯನೊಬ್ಬ ಎಷ್ಟೇ ಎತ್ತರಕ್ಕೆ ಏರಿದರೂ ಜಾತಿವಾದಿಗಳು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಾ ಅಪಾರವಾದ ಹಿಂಸೆ ನೀಡುತ್ತಾರೆ. ಅರ್ಥಿಕವಾಗಿ ಒಂದು ಅಂಚಿಕಡ್ಡಿಯಷ್ಟು ಸಬಲನಾದರೂ ಸಾಮಾಜಿಕ ಸಬಲತೆ ದಕ್ಕುವುದೇ ಇಲ್ಲ. ಅಸ್ಪೃಶ್ಯತೆ ಅರ್ಥಾತ್ ಅನ್ಟಚೇಬಲ್ ಎಂಬ ಪದವನ್ನು ವಿಶ್ವಕ್ಕೇ ಪರಿಚಯಿಸಿದ ಕೀರ್ತಿಯನ್ನು ಇಲ್ಲಿನ ಹಿಂದೂ ಧರ್ಮ ಹೊತ್ತುಕೊಳ್ಳಬೇಕಿದೆ. ಆರಂಭದಲ್ಲಿ ಅಮೆರಿಕನ್ನರಂತೂ ಅನ್ಟಚೇಬಲ್ ಎಂದರೆ ಮುಟ್ಟಿಸಿಕೊಳ್ಳದವರು ಎಂಬ ಅರ್ಥದಲ್ಲಿ, ಬ್ರಾಹ್ಮಣರು ಅನ್ಟಚೇಬಲ್ಗಳಿರಬಹುದು ಎಂದು ಭಾವಿಸಿದ್ದರಂತೆ. ಯಾವುದೇ ಭಾಷೆ ಅನ್ಟಚೇಬಲ್ ಎಂಬ ಪದಕ್ಕೆ ಅದೇ ಅರ್ಥವನ್ನು ಹೊರಡಿಸುತ್ತದೆ. ಆದರೆ, ಭಾರತದ ಸಂದರ್ಭದಲ್ಲಿ ಅದು ಏರುಪೇರಾಗಿದೆ. ಶಬ್ದಕೋಶವೇ ತಿರುಗುಮುರುಗಾಗಿದೆ.
ತಲಪರಿಗೆ ಎಂಬ ಸಮಾಜ ವಿಜ್ಞಾನ ಕೃತಿ
ತಲಪರಿಗೆ ಎಂಬ ಕೃತಿಯನ್ನು ಕೋಟಿಗಾನಹಳ್ಳಿ ರಾಮಯ್ಯನವರ ಸಂಪಾದಕತ್ವದಲ್ಲಿ 2005 ರಲ್ಲಿ ತರಲಾಗಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿ ನಿಗಮವು ತಲಪರಿಗೆ ಕೃತಿಯನ್ನು ಪ್ರಕಟಿಸಿದೆ. ಆ ಕೃತಿಯ ಆಶಯವು ಅಸ್ಪಶ್ಯಲೋಕದ ನೋವುಗಳನ್ನು ದಾಖಲಿಸುವುದಾಗಿತ್ತು. ತಲಪರಿಗೆ ಪದದ ಅರ್ಥವು ಬತ್ತಿದ ನದಿಯಲ್ಲಿ ಅಪರೂಪಕ್ಕೆ ಉಕ್ಕುವ ಜಲದಸೆಲೆ. ತಲಪರಿಗೆ ಪದವು ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ತಲಪರಿಗೆ ಕೃತಿಯ ವಿವರಣಾತ್ಮಕ ಸಾಲುಗಳು ಜೀವನದಿಯ ಜಾಡು ಹಿಡಿದು, ಅಸ್ಪಶ್ಯಲೋಕದಲ್ಲೊಂದು ಪಯಣ ಎಂಬುದಾಗಿ. ಇದೊಂದು ಸಮಾಜ ವಿಜ್ಞಾನದ ಕೃತಿ.
ಸುಮಾರು 496 ಪುಟಗಳಲ್ಲಿ ಉನ್ನತ ಮಟ್ಟಕ್ಕೇರಿದ ಅಸ್ಪಶ್ಯರು ಅನುಭವಿಸಿದ ಕಷ್ಟಕೋಟಲೆಗಳು ಬಿಚ್ಚಿಕೊಳ್ಳುತ್ತವೆ. ಅಸ್ಪಶ್ಯರಲ್ಲಿ ಕೆನೆಪದರ ಎಂಬ ಸುಳ್ಳು ಕಲ್ಪನೆಯನ್ನು ತಲಪರಿಗೆ ಪಯಣದ ಜತೆಗೆ ತಳಕು ಹಾಕುವ ಒಂದು ಪುಟ್ಟ ಪ್ರಯತ್ನ ಈ ಲೇಖನ.
ಅಸ್ಪಶ್ಯತೆ ಆಚರಣೆಯು ಒಂದು ಸಾಮಾಜಿಕ ಪಿಡುಗು. ಆ ಪಿಡುಗಿಗೆ ಸಿಕ್ಕಿಹಾಕಿಕೊಂಡವರು ಹೇಗೆ ಮೇಲ್ಪದರವಾಗಿಬಿಡುತ್ತಾರೆ ಎಂಬ ಸಾಕ್ಷಿ ಮೊದಲ ಪುಟದಲ್ಲೇ ಗೋಚರಿಸಿಬಿಡುತ್ತದೆ. ಅಸ್ಪಶ್ಯತೆ ಎಂಬುದು ಅಭಿವೃದ್ಧಿಗೆ ತೊಡಿಸಿದ ಸಂಕೋಲೆ ಎಂದು ವ್ಯಾಖ್ಯಾನಿಸಲಾಗಿದೆ. ದಮನಿತ ವರ್ಗಕ್ಕೆ ಹಿಂದೂಗಳಲ್ಲಿ ಸಮಾನತೆ ಸಿಗುವುದು ಸಾಧ್ಯವೇ ಇಲ್ಲ. ಏಕೆಂದರೆ ಅಸಮಾನತೆಯ ಮೇಲೆಯೇ ಹಿಂದೂ ಧರ್ಮದ ಇತರ ತಳಹದಿಗಳಿವೆ. ಹಿಂದೂ ಧರ್ಮದ ಭಾಗವಾಗುವುದನ್ನು ಇನ್ನು ನಾವು ಬಯಸುವುದಿಲ್ಲ ಎಂಬ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಲಾಗಿದೆ. ತಲಪರಿಗೆಯಲ್ಲಿ ಸಂದರ್ಶನದ ಮೂಲಕ ಮಾಜಿ ಮಂತ್ರಿಗಳಾದ ದಿ. ಕೆ. ಎಚ್. ರಂಗನಾಥ್ರವರನ್ನು ಅಸ್ಪಶ್ಯತೆಯ ಆಚರಣೆಯ ಕುರಿತು ಅವರ ಅಭಿಪ್ರಾಯ ಕೇಳಿದಾಗ ಗಾಯ ಮಾಡಿದೋರ್ನ ಕೇಳಿ ನನ್ನನ್ನೇಕೆ ಕೇಳುತ್ತೀರಿ ಎಂಬರ್ಥದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಇದೇ ಮಾತನ್ನು ದೇವನೂರ ಮಹಾದೇವ ಅವರು ಬೇರೊಂದು ಸಂದರ್ಭದಲ್ಲಿ ಭಾರತ ಗಾಯಗೊಂಡು ಬಿದ್ದಿದೆ ಎನ್ನುತ್ತಾರೆ. ಕೃಷಿ ಕೂಲಿಕಾರ ಮಹಿಳೆಯಾದ ಮುನಿಯಮ್ಮನವರು ಇಲ್ಲಿಯ ಜಾತೀಯತೆಗೆ ರೋಸಿಹೋಗಿ ವಲಾರು, ಮಾದಿಗ್ರು ಅಂದ್ರೆ ಆ ದೇವುರ್ಗೂ ಸದ್ರ ಎನ್ನುತ್ತಾರೆ. ರಾಜ್ಯದಲ್ಲಿ ಪರಿಶಿಷ್ಟರಲ್ಲಿ ಮೊತ್ತಮೊದಲ ಮುಖ್ಯ ಇಂಜಿನಿಯರ್ ಆಗಿ ನಿವೃತ್ತರಾದ ಕೆ. ಗಂಗಹನುಮಯ್ಯನವರು ಇಂತಹ ಜಾತಿ ಅಂತ ಗೊತ್ತಾದರೆ ಒಳ್ಳೆಯ ಜಾಗದಲ್ಲಿ ಪೋಸ್ಟಿಂಗ್ ಕೊಡಾಕಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೀಸಲಾತಿಯು ಸರಿಯಾಗಿ ಜಾರಿ ಆಗುತ್ತಿಲ್ಲ. ಅದು ಕೇವಲ ಪುಸ್ತಕದಲ್ಲಿಯೇ ಇದೆ ಎಂದಿರುವವರು ಕೇಂದ್ರದ ಮಾಜಿ ಸಚಿವರಾದ ಕೆ. ಎಚ್. ಮುನಿಯಪ್ಪನವರು. ಸಂವಿಧಾನಾತ್ಮಕ ಮೀಸಲಾತಿ ಜಾರಿಯಾಗಿ 68 ವರ್ಷಗಳು ಕಳೆದರೂ ಪರಿಶಿಷ್ಟರ ಪ್ರಾತಿನಿಧ್ಯವು ಹಲವಾರು ಕೇಡರುಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಮತ್ತಿತರ ಸಂಸ್ಥೆಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯ ಶೇ. 2 ಕ್ಕಿಂತ ಕಮ್ಮಿ. ಅಲ್ಲಿಯ ಹುದ್ದೆಗಳಿಗೆ ಪರಿಶಿಷ್ಟರನ್ನು ಮುಂದಿನ ಐದಾರು ವರ್ಷಗಳಲ್ಲಿ ಹೇಗೆ ತಯಾರು ಮಾಡಬೇಕು ಎಂಬ ದಿಕ್ಕಿನಲ್ಲಿ ಕೆನೆಪದರ ಎಂಬ ಪದವನ್ನು ತೇಲಿಬಿಟ್ಟ ವಾರಸುದಾರರು ಯಾಕೆ ಯೋಚಿಸುವುದಿಲ್ಲ?
ದಲಿತರ ಮೇಲೆ ನಿರಂತರ ದೌರ್ಜನ್ಯಗಳು
ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮೊದಲಾದರೆ, ಎಲ್ಲವನ್ನೂ ಸಹಿಸಿಕೊಂಡು, ನಾವು ಏನೂ ಮಾಡಲಾಗುವುದಿಲ್ಲ ಅಂತ ನಿಸ್ಸಹಾಯಕರಾಗಿದ್ದರು ನಮ್ಮ ಜನ. ಈಗಲೂ ನಮ್ಮ ಜನರನ್ನು ಸುಟ್ಟು ಹಾಕುವುದು, ಕೊಲ್ಲುವುದು ನಡೆಯುತ್ತಲೇ ಇದೆ. ಈಗಲೂ ನಿಸ್ಸಹಾಯಕತೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ಕರ್ನಾಟಕ ಆಡಳಿತ ಸೇವೆಯ ಮಾಜಿ ಅಧಿಕಾರಿಯವರಾದ ಕೆ. ದೇವರಸಯ್ಯನವರು. ಜಾತಿ ಹೋಗಲು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾತಿ ಮದುವೆಗಳಾಗಬೇಕು ಎನ್ನುತ್ತಾರೆ ಅವರು. ಸಂಸದರಾಗಿದ್ದ ಎನ್. ರಾಚಯ್ಯನವರ ಬಳಿ ಖಾಸಗಿ ಕಾರ್ಯದರ್ಶಿಯಾಗಿ ಮತ್ತು ಬಿ. ಬಸವಲಿಂಗಪ್ಪನವರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದರು. ಆಗ ಬಲಗೈ ಎಡಗೈ ಎಂಬ ಭೇದಭಾವಗಳಿರಲಿಲ್ಲ, ಪಂಚಾಯತ್ ಚುನಾವಣೆಗಳು ಪ್ರಾರಂಭವಾದ ಮೇಲೆ ಬಲಗೈ - ಎಡಗೈ ರಾಜಕಾರಣ ಶುರುವಾಯಿತು ಎನ್ನುವುದು ದೇವರಸಯ್ಯನವರು ಕಂಡುಕೊಂಡ ಸತ್ಯ.
ಜಾತಿಗಳ ಮಧ್ಯೆ ಮೂಡಿಗೆರೆ ಕ್ಷೇತ್ರದಲ್ಲಿ ಘರ್ಷಣೆ ಆಯಿತು. ನಾನು ದಲಿತರ ಪರ ನಿಂತೆ. ಮುಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋದಾಗ ಓಟು ಕೇಳೋಕೆ ಯಾಕೆ ಬಂದ್ರಿ ಎನ್ನುತ್ತಾ ಮೇಲ್ಜಾತಿಯವರು ಪ್ರತಿಭಟಿಸಿದರು ಎಂದವರು ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರು. ಜಾತಿಯೆಂಬ ಪೆಡಂಭೂತ ದಲಿತ ರಾಜಕಾರಣಿಗಳನ್ನು ಕಾಡುವ ಪರಿಯಿದು. ಮೇಲ್ಜಾತಿಯವರ ಓಟುಗಳ ಮರ್ಜಿಯಲ್ಲಿ ಗೆದ್ದುಬರುವ ನಾವು ಬಾಂಡೆಂಡ್ ಲೇಬರ್ ರೀತಿಯ ಗುಲಾಮಗಿರಿಯಲ್ಲಿದ್ದೇವೆ ಎಂಬ ಅನಿಸಿಕೆ ಮೋಟಮ್ಮನವರದು. ಅಂತಹ ಗುಲಾಮಗಿರಿಯ ಜನರು ಕೆನೆಪದರದವರಾಗುತ್ತಾರಾ ಎಂಬ ಜಿಜ್ಞಾಸೆ ನಮ್ಮನ್ನು ಕಾಡಬೇಕು. ಬದನವಾಳು ದಲಿತರ ಕೊಲೆಯ ವಿಷಯದಲ್ಲಿ ನೀವ್ಯಾಕೆ ಮಾತಾಡೋದಿಲ್ಲ ಪ್ರೊಫೆಸರ್ರವರೇ ಎಂದು ರೈತನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರಿಗೆ ಬರೆದ ಪತ್ರವನ್ನು ಮೋಟಮ್ಮನವರು ಮೆಲುಕು ಹಾಕಿದ್ದಾರೆ.
ಅಸ್ಪಶ್ಯತೆ ಹೆಚ್ಚು ಅಪಾಯಕಾರಿ. ಅದರಿಂದ ದೇಶದ ಪ್ರಗತಿ ಆಗುತ್ತಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ಎಸೆಸೆಲ್ಸಿ ಫೇಲಾದವರಿಗೆ ತಕ್ಷಣ ಮರುಪರೀಕ್ಷೆ ತಂದು ಒಂದು ವರ್ಷ ಪೋಲಾಗುವುದನ್ನು ತಡೆದೆ. ಇದು ಉತ್ತಮ ಯೋಜನೆ. ನನ್ನ ನಂತರ ಬಂದ ಶಿಕ್ಷಣ ಸಚಿವರು ಆ ಕ್ರೆಡಿಟ್ ನನಗೆ ಸಿಗಬಾರದು ಅಂತ ಮಾರ್ಚ್ ನಂತರ ಜೂನ್ ತಿಂಗಳ ಮರುಪರೀಕ್ಷೆ ರದ್ದುಪಡಿಸಿದರು. ನಂತರ ಸಚಿವ ವಿಶ್ವನಾಥ್ ನನ್ನ ಯೋಜನೆಯನ್ನು ಪುನರ್ ಜಾರಿ ಮಾಡಿದರು ಎಂದಿರುವ ಮಾಜಿ ಶಿಕ್ಷಣ ಸಚಿವರಾದ ಬಿ. ಸೋಮಶೇಖರ್ ಅವರು ಜಾತಿವಾದಿ ಮನಸ್ಸುಗಳನ್ನು ಖಂಡಿಸುತ್ತಾರೆ. ಒಬ್ಬ ದಲಿತ ಕ್ಷೌರಿಕ, ಒಬ್ಬ ದಲಿತ ಲಾಯರ್, ಒಬ್ಬ ದಲಿತ ಡಾಕ್ಟರ್ ಹತ್ತಿರ ಉಳಿದವರು ಹೋಗುವುದಿಲ್ಲ ಎನ್ನುತ್ತಾರೆ. ಹೀಗಿರುವಾಗ, ಅಂತಹ ದಲಿತರು ಕೆನೆಪದರ ಹೇಗಾಗುತ್ತಾರೆ ಎಂಬ ಪ್ರಶ್ನೆ ಸಹಜ.
ದಲಿತರಿಗೆ ಬಾಡಿಗೆ ಮನೆ ಕೊಡರು
ನಾನು ಒಂದು ಲೋಯಸ್ಟ್ ಬ್ಯಾಕ್ವರ್ಡ್ ಆಗಿದ್ದರೂ ನನಗೆ ಇನ್ನೂ ಹೆಚ್ಚಿನ ಖ್ಯಾತಿ ಬಂದುಬಿಡೋದು ಎಂದು ನೊಂದು ನುಡಿದವರು ಮಾಜಿ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರಾದ ಸುಭಾಶ್ ಭರಣಿಯವರು. ನ್ಯಾಯಾಧೀಶನಾಗಿದ್ದರೂ ಬಾಡಿಗೆ ಮನೆ ಸಿಗಲಿಲ್ಲ ಎಂಬ ತಮ್ಮ ಅಸ್ಪಶ್ಯತೆಯ ನೋವನ್ನು ಹೊರಹಾಕಿದವರು ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ ಎಂ. ರಾಮಕೃಷ್ಣ ಅವರು. ಪರಿಶಿಷ್ಟರು ಆರ್ಥಿಕವಾಗಿ ಒಂದಿಷ್ಟು ಸಬಲರಾದರೂ ನಗರಗಳಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ. ಹೀಗಾದರೆ ಕೆನೆಪದರದ ಮಾತೆಲ್ಲಿ?
ಹೊಟೇಲ್ಗಳಲ್ಲಿ ಕಾಫಿ ಕೊಡುವುದಿಲ್ಲ. ದಲಿತರಿಗೆ ಒಂದು ಕರಟವನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ದೇವಸ್ಥಾನದ ಒಳಗೆ ಬರಬೇಡಿ ಎಂದರೆ ನಮಗೆ ರಕ್ತದೊತ್ತಡ ಹೆಚ್ಚಾಗಿಬಿಡುತ್ತದೆ. ಜಾತಿಭೇದ ಈಗಲೂ ಇದೆ ಎಂಬ ಅಭಿಪ್ರಾಯ ಕೇಂದ್ರ ಸರಕಾರದ ಹಿರಿಯ ಶ್ರೇಣಿ ಇಂಜಿನಿಯರ್ ಆಗಿದ್ದಂತಹ ಮಾಂಬಳ್ಳಿಯ ಎಸ್. ಚಿನ್ನಸ್ವಾಮಿ ಅವರದು. ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ದಲಿತರಿಗೆ ಪ್ರತ್ಯೇಕ ಲೋಟ ಇಟ್ಟಿರುವ ವರದಿಗಳು ಸರ್ವೇಸಾಮಾನ್ಯ. ಇದು ಅಸ್ಪೃಶ್ಯತೆ ಆಚರಣೆಯ ಬರ್ಬರತೆಗೆ ಸಾಕ್ಷಿ.
ಸಮಾಜದ ಅಜ್ಞಾನವೇ ಅಸ್ಪೃಶ್ಯತೆಗೆ ಮೂಲಕಾರಣ. ಎಷ್ಟೇ ಬೆಳ್ಳಗಿರಲಿ, ಎಷ್ಟೇ ಶ್ರೀಮಂತನಿರಲಿ, ಎಷ್ಟೇ ಬುದ್ಧ್ದಿವಂತನಿರಲಿ, ಜ್ಞಾನಿಯಿರಲಿ, ಅವನನ್ನು ಮುಟ್ಟಬಾರದು ಎನ್ನುವ ತೀರ್ಮಾನಕ್ಕೆ ಈ ಸಮಾಜ ಬಂದಿದೆ. ಇಂತಹ ಮನೋಭಾವ ಸಮಾಜದಲ್ಲಿ ರಕ್ತಗತವಾಗಿದೆ ಎಂಬ ತಾತ್ವಿಕ ನುಡಿಗಳನ್ನಾಡಿದ್ದಾರೆ ಹಾಲಿ ಸಂಸದರಾದ ಡಾ. ಎಲ್. ಹನುಮಂತಯ್ಯನವರು.
ನಮ್ಮಲ್ಲಿ ಒಗ್ಗಟ್ಟಂತೂ ಇಲ್ಲ. ಎನ್. ರಾಚಯ್ಯನೋರ ಬಗ್ಗೆ ನನಗೆ ತುಂಬಾ ಅಭಿಮಾನ. ಅವರು ಅಸ್ಪೃಶ್ಯತೆ ಆಚರಣೆ ಬಗ್ಗೆ ಕ್ಯಾಬಿನೆಟ್, ಕಾಂಗ್ರೆಸ್ನಲ್ಲಿ ಗಲಾಟೆ ಮಾಡುತ್ತಿದ್ದರು. ಗ್ಲಾಸ್ ಒಡೆದರೆ ಚೂರಾದಂತೆ ದಸಂಸ ಚೆಲ್ಲಾಪಿಲ್ಲಿಯಾಗಿದೆ. ದಸಂಸ ಬೆಳವಣಿಗೆಗೆ ನಾನು ಸಹಾಯ ಮಾಡಿದ್ದೇನೆ ಎಂಬ ತಮ್ಮ ಕೊಡುಗೆಯನ್ನು ಹೇಳಿಕೊಂಡವರು ನಿವೃತ್ತ ಮುಖ್ಯ ಇಂಜಿನಿಯರ್ ಪಿ. ಎಲ್. ನಂಜುಂಡಸ್ವಾಮಿಯವರು.
ದಲಿತ ಉದ್ಯಮಿಯಾದ ಸುಂದರೇಶನ್ ಎಂ. ಸಿ. ಅವರು ಬೇರೆ ಜನಾಂಗದ ಉದ್ಯಮಿಗಳ ಕುರಿತು ಹೇಳಿರುವುದೇನೆಂದರೆ ಅವರು ಎದುರುಗಡೆ ಚೆನ್ನಾಗಿ ಇರುತ್ತಾರೆ. ಒಳಗೊಳಗೆ ಕರುಬುತ್ತಾರೆ. ಹುರಿದುಂಬಿಸುವ ಗುಣವಂತೂ ಇಲ್ಲ. ಕ್ಲಬ್ ಮೆಂಬರ್ಷಿಪ್ ಕೊಡೋಕೆ ಸತಾಯಿಸುತ್ತಿದ್ದರು. ಉದ್ಯಮಿಗಳ ಸಂಘದ ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಕ್ಯಾನ್ಸಲ್ ಮಾಡಿಸಿಬಿಡುತ್ತಿದ್ದರು. ಹೀಗೆ ಆರ್ಥಿಕವಾಗಿ ಕೊಂಚ ಮುಂದುವರಿದ ಅಸ್ಪೃಶ್ಯರ ಹಾದಿಯಲ್ಲಿ ನೂರಾರು ಮುಳ್ಳುಗಳು.
ಮೀಸಲಾತಿಯೆಂಬ ಸಾಧನದಿಂದ ಅಸ್ಪೃಶ್ಯತೆ ಅಳಿಯದು. ಮೀಸಲಾತಿಯು ಒಂದು ಮಿನಿಮಮ್ ಕಾರ್ಯಕ್ರಮವೇ ಹೊರತು ಮ್ಯಾಕ್ಸಿಮಮ್ ಅಲ್ಲ ಎಂದವರು ಮಾಜಿ ಪೋಲಿಸ್ ಮಹಾನಿರ್ದೇಶಕರಾದ ಎಸ್. ಮರಿಸ್ವಾಮಿ ಅವರು. ಪರಿಶಿಷ್ಟರು ಎಂದರೆ ಬಾಡಿಗೆ ಮನೆ ಸಿಗೋದಿಲ್ಲ. ಜಾತಿಯನ್ನು ಮರೆಮಾಚಿ ಬೇರೆ ಯಾವುದೋ ಜಾತಿ ಹೇಳಿಕೊಂಡರೆ ಬಾಡಿಗೆ ಮನೆ ಸಿಗುತ್ತದೆ ಎಂದು ಕೆಲಪರಿಶಿಷ್ಟರ ಬದುಕಿನ ಅನಿವಾರ್ಯ ನಾಟಕದ ಬುತ್ತಿ ಬಿಚ್ಚಿಟ್ಟಿರುವವರು ಬಿ. ಎಚ್. ಅನಿಲ್ಕುಮಾರ್ ಎಂಬ ಭಾರತೀಯ ಆಡಳಿತ ಸೇವೆಗಳ ಅಧಿಕಾರಿ.
ಹೀಗಿರುವಾಗ ಪರಿಶಿಷ್ಟರಲ್ಲಿ ಪದರ, ಕೆನೆಪದರದ ಕಲ್ಪನೆ ಒಂದು ಮಹಾಮೋಸ. ಅನುಭವಿಸಿದವನಿಗೆ ಅದರ ನೋವಿನ ಅರಿವಾಗುತ್ತದೆಯೇ ಹೊರತು, ಬೇರೆಯವರಿಗೆ ಅದು ತಿಳಿಯದು. ಗಂಡಸಿಗೇನು ಗೊತ್ತು ಹೆರಿಗೆ ನೋವಿನ ತೀವ್ರತೆ ಎಂಬಂತೆ. ದಲಿತರ ಕಿಂಚಿತ್ತು ಅಭಿವೃದ್ಧಿಯಾಗಿದ್ದು ಇತ್ತೀಚಿನ ಮೂರ್ನಾಲ್ಕು ದಶಕಗಳಲ್ಲಿ ಮಾತ್ರ. ಆದರೆ, ಎರಡು ಸಾವಿರ ವರ್ಷಗಳ ಇತಿಹಾಸದ ಜಾತೀಯತೆ ಮತ್ತು ಅಸ್ಪೃಶ್ಯತೆ ಅಳಿಯಬೇಕೆಂದರೆ, ಇಂದಿನ ಅಧುನಿಕ ವೈಜ್ಞಾನಿಕ ಯುಗದಲ್ಲಿ ಇನ್ನೂ ಹಲವಾರು ಶತಮಾನಗಳೇ ಬೇಕಿದೆ. ಆದ್ದರಿಂದ, ಪರಿಶಿಷ್ಟರಲ್ಲಿ ಕೆನೆಪದರ ಅನ್ವಯಿಸಬೇಕೆಂಬ ಚರ್ಚೆ ಅನಗತ್ಯ.