ಕಥೆ ಹೇಳುವ ಚಿತ್ರಗಳು: ಕಣ್ಮನ ಸೆಳೆದ ಅಪರೂಪದ-ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ
ಶಿವಮೊಗ್ಗ
ಶಿವಮೊಗ್ಗ, ನ. 26: ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿತವಾಗಿರುವ ಉದಯೋನ್ಮುಖ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‍ರವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಲ್ಲಿ ಕಂಡುಬಂದ, ಕೆಲ ಅಪರೂಪದ - ಆಕರ್ಷಕ ಛಾಯಾಚಿತ್ರಗಳು ಪ್ರಮುಖ ಝಲಕ್‍ಗಳು ಕೆಲವು ಮನಸ್ಸಿಗೆ ಮುದ ನೀಡಿದರೆ, ಮತ್ತೆ ಕೆಲವು ಕಣ್ಮನಗಳೆರಡನ್ನು ತಣಿಸುತ್ತವೆ.
ಪ್ರದರ್ಶನದಲ್ಲಿರುವ ಪ್ರತಿ ಛಾಯಾಚಿತ್ರವೂ ವಿಶಿಷ್ಟ ಕಥೆಯೊಂದನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಕೆಲ ಛಾಯಾಚಿತ್ರಗಳು ನೋಡುಗರೊಂದಿಗೆ ಸಮಾಲೋಚಿಸುತ್ತಿರುವ ಅನುಭವ ಉಂಟು ಮಾಡುತ್ತವೆ. 'ಸಾವಿರ ಪದಗಳು ಹೇಳಲಾಗದ್ದನ್ನು, ಒಂದು ಚಿತ್ರ ಹೇಳಬಲ್ಲದು..' ಎಂಬ ಮಾತು ಇಲ್ಲಿ ಸತ್ಯವಾಗಿದೆ.
ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲೊಂದಾದ 'ಕರ್ನಾಟಕ ಸಂಘ'ವು ತನ್ನ 88 ನೇ ವಾರ್ಷಿಕೋತ್ಸವದ ಅಂಗವಾಗಿ, ಬಿ.ಹೆಚ್.ರಸ್ತೆಯಲ್ಲಿರುವ ಸಂಘದ ಕಟ್ಟಡದ ಆವರಣದಲ್ಲಿ ನ. 25 ರಿಂದ ನ. 26 ರವರೆಗೆ ಶಿವಮೊಗ್ಗ ನಾಗರಾಜ್‍ರವರ ಛಾಯಾಚಿತ್ರ ಪ್ರದರ್ಶನ ಆಯೋಜಿಸಿತ್ತು. ಈ ಪ್ರದರ್ಶನಕ್ಕೆ ನಾಗರಿಕ ವಲಯದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕಳೆದೆರೆಡು ದಿನಗಳ ಅವಧಿಯಲ್ಲಿ ಹಿರಿ-ಕಿರಿಯರು ಸೇರಿದಂತೆ, ನೂರಾರು ಜನ ಈ ಛಾಯಚಿತ್ರ ವೀಕ್ಷಿಸಿದ್ದಾರೆ. ಅಪರೂಪದ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜೀವನ: ಜನಸಾಮಾನ್ಯರ ದೈನಂದಿನ ಬದುಕು, ಪಶು-ಪಕ್ಷಿ, ವನ್ಯಜೀವಿಗಳ ಜೀವನ ಕ್ರಮ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ನಡೆಸುವ ಬೇಟೆ, ಪ್ರಾಕೃತಿಕ ವಿಸ್ಮಯಗಳು ಸೇರಿದಂತೆ ವಿಭಿನ್ನ ವಿಷಯಗಳ ಸುಮಾರು 25 ಕ್ಕೂ ಅಧಿಕ ವರ್ಣರಂಜಿತ
ಫೋಟೋಗಳನ್ನು ಪ್ರದರ್ಶನಕ್ಕೀಡಲಾಗಿದೆ.
ಕಡುಬಡತನದ ಬೇಗೆಯಲ್ಲಿ ಬೆಳೆದುಬಂದ ಶಿವಮೊಗ್ಗ ನಾಗರಾಜ್‍ರವರು, ಕಳೆದ ಒಂದು ದಶಕದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿರುವ ಅವರು, ವರದಿಗಾರರಾಗಿ ತಮ್ಮ ವೃತ್ತಿ ಆರಂಭಿಸಿದ್ದರು. ನಂತರ ಛಾಯಾಗ್ರಹಣದತ್ತ ಆಸಕ್ತಿ ಬೆಳೆಸಿಕೊಂಡರು.
'ಕ್ಯಾಮರ ಖರೀದಿಗಾಗಿ ಸ್ವಂತ ಮನೆಯನ್ನೇ ಅವರು ಮಾರಿದ್ದರು. ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅವರು, ಛಾಯಾಗ್ರಹಣವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ. ಫೋಟೋಗ್ರಫಿ ವೃತ್ತಿಯ ಬಗ್ಗೆ ಅವರಿಗಿರುವ ಅದಮ್ಯ ಆಸಕ್ತಿಯೇ ಅವರನ್ನು ಓರ್ವ ಅಪರೂಪದ ಛಾಯಾಗ್ರಾಹಕನನ್ನಾಗಿ ಹೊರಹೊಮ್ಮುವಂತೆ ಮಾಡಿದೆ' ಎಂದು ಅವರ ಬಾಲ್ಯ ಸ್ನೇಹಿತ ಮಧುಸೂಧನ್‍ರವರು ಹೇಳುತ್ತಾರೆ.
ಸಹಕಾರ: ಛಾಯಾಗ್ರಾಹಣ ಕ್ಷೇತ್ರವು ವಿಶಾಲ ಸಾಗರವಿದ್ದಂತೆ. ನಾನಿನ್ನೂ ಈ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದೆನೆ. ಮಹನೀಯರ ಫೋಟೋಗಳಿಗೆ ಹೋಲಿಸಿದರೆ, ನಾನು ತೆಗೆದ ಛಾಯಾಚಿತ್ರಗಳೂ ಏನೂ ಅಲ್ಲವಾಗಿದೆ. ಈ ಕ್ಷೇತ್ರದಲ್ಲಿ ನಾನಿನ್ನೂ ಚಿಕ್ಕವನಾಗಿದ್ದೆನೆ. ನನ್ನ ಫೋಟೋಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸಂಘಕ್ಕೆ ನಾನು ಆಭಾರಿಯಾಗಿದ್ದೆನೆ' ಎಂದು ಹೇಳುತ್ತಾರೆ.