ಸಿಬಿಐನ ಅವನತಿ
ಸಿಬಿಐನ ವಿಶ್ವಾಸಾರ್ಹತೆಯು ಅದರ ಸಿಬ್ಬಂದಿಯು ಎಷ್ಟರಮಟ್ಟಿಗೆ ಉತ್ತಮ ಆಡಳಿತ ನೀತಿನಿಯಮಗಳಿಗೆ ಬದ್ಧರಾಗಿರುತ್ತಾರೆಂಬುದನ್ನು ಆಧರಿಸಿರುತ್ತದೆ
ಸಿಬಿಐನ ಈ ಪ್ರಸ್ತುತ ಗೊಂದಲಕ್ಕೆ ಅಲೋಕ್ವರ್ಮಾ ಮತ್ತು ರಾಕೇಶ್ ಅಸ್ತಾನಾ ಅವರ ನಡುವಿನ ವೈಷಮ್ಯವಾಗಲೀ, ಮೋದಿ ಸರಕಾರದ ಯಂತ್ರಾಂಗವಾಗಲೀ ಮಾತ್ರ ಕಾರಣವಲ್ಲ. ಇದರ ಮೂಲವು (2013ರ ನವೇಂದ್ರ ಕುಮಾರ್ ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಗೌಹಾಟಿ ಹೈಕೋರ್ಟು ಬೆಟ್ಟು ಮಾಡಿ ತೋರಿಸಿದಂತೆ) ಆ ಸಂಸ್ಥೆಯ ಗುಪ್ತ ಮತ್ತು ಅಪಾರದರ್ಶಕ ಅಧಿಕಾರಶಾಹಿ ರಚನೆಯಲ್ಲೂ ಮತ್ತು ಆ ಸಂಸ್ಥೆಯ ನೀತಿ ನಿರ್ವಹಣೆಯ ಚೌಕಟ್ಟನ್ನು ರೂಪಿಸಿರುವ 1946ರ ರಕ್ತಮಾಂಸವಿಲ್ಲದ ಸಡಿಲವಾದ ಕಾಯ್ದೆಯಲ್ಲೂ ಅಡಗಿದೆ.
ಸಿಬಿಐ (ಕೇಂದ್ರೀಯ ತನಿಖಾ ದಳ)ನ ಅಂತ್ಯವು ಸಮೀಪಿಸುತ್ತಿದೆ. ದೇಶದ ಪ್ರಧಾನ ತನಿಖಾ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಹೊಂದಿದ ಈ ಸಂಸ್ಥೆ ಈಗ ಒಳಗಿನಿಂದ ಮತ್ತು ಹೊರಗಿನಿಂದ ಛಿದ್ರಗೊಂಡಿದೆ. ಪ್ರಧಾನವಾಗಿ ಸಿಬಿಐನ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರುಗಳ ನಡುವಿನ ವೈಷಮ್ಯದಿಂದಾಗಿ ಸಂಸ್ಥೆಯೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನವು ಇದೀಗ ಅತ್ಯಂತ ವಿಕೃತ ಸ್ವರೂಪದ ಆರೋಪ ಮತ್ತು ಪ್ರತ್ಯಾರೋಪಗಳ ಸ್ವರೂಪವನ್ನು ಪಡೆದುಕೊಂಡಿದೆ. ಈ ವಿವಾದವು ಸುಪ್ರೀಂ ಕೋರ್ಟು, ಪ್ರಧಾನಿಗಳ ಕಚೇರಿ, ಕೇಂದ್ರ ಸರಕಾರದ ಸಂಪುಟ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾರೂ ಅಷ್ಟಾಗಿ ಇಷ್ಟ ಪಡದ ಆದರೆ ಕೆಲವೊಮ್ಮೆ ಅಗತ್ಯವೂ ಆಗಿರುವ ಈ ಸಂಸ್ಥೆಯ ಒಳಹೂರಣವೂ ಹೇಗೆ ಕೊಳೆತು ನಾರುತ್ತಿದೆಯೆಂಬುದನ್ನು ಇದು ಸ್ಪಷ್ಟವಾಗಿ ಬಯಲಿಗೆಳೆದಿದೆ.
ಸಿಬಿಐನ ಈ ಪ್ರಸ್ತುತ ಗೊಂದಲಕ್ಕೆ ಅಲೋಕ್ವರ್ಮಾ ಮತ್ತು ರಾಕೇಶ್ ಅಸ್ತಾನಾ ಅವರ ನಡುವಿನ ವೈಷಮ್ಯವಾಗಲೀ, ಮೋದಿ ಸರಕಾರದ ಯಂತ್ರಾಂಗವಾಗಲೀ ಮಾತ್ರ ಕಾರಣವಲ್ಲ. ಇದರ ಮೂಲವು (2013ರ ನವೇಂದ್ರ ಕುಮಾರ್ ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಗೌಹಾಟಿ ಹೈಕೋರ್ಟು ಬೆಟ್ಟು ಮಾಡಿ ತೋರಿಸಿದಂತೆ) ಆ ಸಂಸ್ಥೆಯ ಗುಪ್ತ ಮತ್ತು ಅಪಾರದರ್ಶಕ ಅಧಿಕಾರಶಾಹಿ ರಚನೆಯಲ್ಲೂ ಮತ್ತು ಆ ಸಂಸ್ಥೆಯ ನೀತಿ ನಿರ್ವಹಣೆಯ ಚೌಕಟ್ಟನ್ನು ರೂಪಿಸಿರುವ 1946ರ ರಕ್ತಮಾಂಸವಿಲ್ಲದ ಸಡಿಲವಾದ ಕಾಯ್ದೆಯಲ್ಲೂ ಅಡಗಿದೆ. ಅದರಲ್ಲಿ ಏನಾದರೂ ಸುಧಾರಣೆ ಕಂಡುಬಂದಿದ್ದರೆ ಅದಕ್ಕೆ ನ್ಯಾಯಾಲಯಗಳು ಆ ಸುಧಾರಣೆಗಳನ್ನು ಜಾರಿ ಮಾಡಲು ಸರಕಾರವನ್ನು ಪದೇಪದೇ ಎಚ್ಚರಿಸಿ, ಉತ್ತೇಜಿಸಿ ಮುಂದೆ ತಳ್ಳಿದ್ದೇ ಕಾರಣ. ಇಷ್ಟಾದರೂ ಅಂಥಾ ಸುಧಾರಣೆಗಳನ್ನು ಅರೆಮನಸ್ಸಿನಿಂದ ಮತ್ತು ಕೆಲವೊಮ್ಮೆ ಅದರ ಬಗ್ಗೆ ಯಾವುದೇ ಬದ್ಧತೆ ಇಲ್ಲದಂತೆ ಜಾರಿಗೊಳಿಸಲಾಗಿದೆ. ತನ್ನ ತನಿಖೆಯನ್ನು ಪ್ರಾರಂಭಿಸುವ ಮುಂಚೆ ಸರಕಾರಗಳಿಂದ ಪರವಾನಿಗೆಯನ್ನು ಪಡೆದುಕೊಳ್ಳಬೇಕೆಂಬ ಹಾಗೂ ಅಂಥ ಇನ್ನಿತರ ಹಲವು ಕಲಮನ್ನು ಸೇರಿಸುವ ಮೂಲಕ ಉನ್ನತ ಮಟ್ಟದ ಅಧಿಕಾರಿಗಳನ್ನು ಸಿಬಿಐ ತನಿಖೆಯಿಂದ ಬಚಾವು ಮಾಡುವ ಹಲವು ಪ್ರಯತ್ನಗಳನ್ನು ನಡೆಸುತ್ತಲೇ ಬರಲಾಗಿದೆ.
ಈ ಬಗೆಯ ಪಕ್ಷಪಾತಿ ರಾಜಕೀಯ ಮಧ್ಯಪ್ರವೇಶದಿಂದ ಸಿಬಿಐ ಅನ್ನು ಮುಕ್ತವಾಗಿಡಲು ಹಲವಾರು ವರ್ಷಗಳಿಂದ ನ್ಯಾಯಾಲಯಗಳು ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದರೂ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ. ಸಿಬಿಐನ ಕಾರ್ಯಾಚರಣೆಗಳ ಮೇಲೆ ನಿಗಾ ವಹಿಸಲು ಕೇಂದ್ರೀಯ ವಿಚಕ್ಷಣಾ ಆಯೋಗಕ್ಕೆ (ಸಿವಿಸಿ) ಅಧಿಕಾರ ನೀಡುವ ಮತ್ತು ಸಿಬಿಐನ ಸಿಬ್ಬಂದಿಯ ನೇಮಕಾತಿಯಲ್ಲಿ ದ್ವಿಪಕ್ಷೀಯತೆಯನ್ನು ಖಾತರಿಗೊಳಿಸುವಂಥ ನ್ಯಾಯಾಲಯಗಳ ಸದುದ್ದೇಶದ ಕ್ರಮ ಮತ್ತು ಸಲಹೆಗಳನ್ನು ನೀಡಲಾಗಿದೆ. ಆದರೆ ಈ ಸಂಸ್ಥೆಯ ತನಿಖಾ ಸಾಮರ್ಥ್ಯಕ್ಕಿಂತ ಅದನ್ನು ರಾಜಕೀಯ ಹಸ್ತಕ್ಷೇಪದ ಸಾಧನವನ್ನಾಗಿ ಬಳಸಿಕೊಳ್ಳುವಲ್ಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಸರಕಾರಗಳು ಅವುಗಳನ್ನೆಲ್ಲ ನಿಷ್ಫಲಗೊಳಿಸಿವೆ.
ಇದಕ್ಕೆ ಹಾಲೀ ಸರಕಾರದ ಜೊತೆಗೆ ಹಿಂದಿನ ಹಲವಾರು ಸರಕಾರಗಳೂ ಸಹ ಕಾರಣವಾಗಿವೆ. ವಿರೋಧ ಪಕ್ಷದಲ್ಲಿದ್ದಾಗ ಪ್ರತಿಯೊಂದು ಪಕ್ಷವೂ ಸಿಬಿಐನ ಸುಸ್ಪಷ್ಟ ಪಕ್ಷಪಾತಿತನವನ್ನ್ನು ಸರಿಯಾಗಿಯೇ ಎತ್ತಿ ತೋರಿಸುತ್ತವೆ. ಆದರೆ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರೂ ಅದೇ ಚಾಳಿಯನ್ನು ಮುಂದುವರಿಸುತ್ತಾರೆ. ಇದು 2018ರ ನವೆಂಬರ್ನಲ್ಲಿ ಆಂಧ್ರಪ್ರದೇಶದ ತೆಲುಗು ದೇಶಂ ಸರಕಾರವು ಸಿಬಿಐ ತನ್ನ ರಾಜ್ಯದಲ್ಲಿ ಕಾರ್ಯಾಚರಣೆಯನ್ನು ನಡೆಸಲು ಕೊಟ್ಟಿದ್ದ ಸಾರ್ವತ್ರಿಕ ಒಪ್ಪಿಗೆಯನ್ನು ಹಿಂದೆಗೆದುಕೊಂಡಿರುವುದರಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ತೆಲುಗುದೇಶಂ ಪಕ್ಷವು ಎನ್ಡಿಎ ಒಕ್ಕೂಟದ ಭಾಗವಾಗಿದ್ದಾಗ ತನ್ನ ರಾಜ್ಯದ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ಕೊಡಲು ಸಿಬಿಐ ಅನ್ನು ಒಂದು ಸಾಧನವನ್ನಾಗಿ ಅತ್ಯಂತ ಸಂತೋಷದಿಂದಲೇ ಬಳಸಿಕೊಂಡಿತ್ತು. ಈಗ ಅದು ಕೇಂದ್ರ ಸರಕಾರದ ಮೈತ್ರಿಯಿಂದ ಹೊರಬಿದ್ದಿರು ವುದರಿಂದ ಇದ್ದಕ್ಕಿದ್ದ ಹಾಗೆ ಅದಕ್ಕೆ ಸಿಬಿಐನ ದುರ್ಬಳಕೆ ಎದ್ದುಕಾಣುತ್ತಿದೆ.
ಆಂಧ್ರಪ್ರದೇಶ ಸರಕಾರ ತೆಗೆದುಕೊಂಡ ಕ್ರಮವನ್ನು ಈ ಹಿಂದೆಯೇ ಬೇರೆ ಸರಕಾರಗಳೂ ಸಹ ತೆಗೆದುಕೊಂಡಿದ್ದವು. ತಮ್ಮ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಪುಟ ಸಚಿವರನ್ನೂ ಒಳಗೊಂಡಂಥ ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣಗಳಲ್ಲಿ ರಾಜ್ಯ ಸರಕಾರಗಳು ಸಿಬಿಐಗೆ ನೀಡಿದ ಸಮ್ಮತಿಯನ್ನು ಹಿಂದೆಗೆದುಕೊಂಡ ಉದಾಹರಣೆಗಳಿವೆ. ಕೇಂದ್ರ ಸರಕಾರಕ್ಕೆ ಸಂಸತ್ತಿನಲ್ಲಿ ಪೂರ್ಣ ಬಹುಮತ ಇರುವ ಸಂದರ್ಭಗಳಲ್ಲಂತೂ ರಾಜ್ಯ ನಾಯಕರು ತಮ್ಮ ಮರ್ಜಿಗೆ ತಕ್ಕಂತೆ ನಡೆದುಕೊಳ್ಳುವಂತೆ ಮಾಡಲು ಕೇಂದ್ರ ಸರಕಾರ ಸಿಬಿಐನ ಬೆದರಿಕೆಯನ್ನು ಹಾಕುತ್ತಲೇ ಬಂದಿವೆ. ಹಾಗಿದ್ದರೂ ಸಿಬಿಐಗಿರುವ ಜನಪ್ರಿಯತೆಗಿರುವ ಒಂದು ಕಾರಣವೆಂದರೆ ದೇಶಾದ್ಯಂತ ವ್ಯಾಪಕವಾಗಿರುವ ರಾಜ್ಯ ಪೊಲೀಸರ ಅಸಾಮರ್ಥ್ಯ ಅಥವಾ ನಿಷಕ್ರೆಿಯತೆಗಳೇ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಕೇಂದ್ರ ಸರಕಾರವು ಸಿಬಿಐನ ಮೂಲಕ ಮಧ್ಯಪ್ರವೇಶ ಮಾಡುತ್ತಿವೆ ಎಂದು ದೂರುವ ರಾಜ್ಯ ಸರಕಾರಗಳು ಮತ್ತು ಪಕ್ಷಗಳು ಏಕೆ ನ್ಯಾಯಾಲಯಗಳು ಪ್ರತಿಷ್ಠಿತ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಸಿಬಿಐಗೆ ಅಥವಾ ಎನ್ಐಎ(ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ- ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವಹಿಸುತ್ತಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು.
ಸಿಬಿಐನ ಪ್ರಸ್ತುತ ಪರಿಸ್ಥಿತಿಯೂ ಸಹ ದೇಶಾದ್ಯಂತ ಪೊಲೀಸ್ ವ್ಯವಸ್ಥೆ ಅನುಭವಿಸುತ್ತಿರುವ ಸಿಬ್ಬಂದಿ ಮತ್ತು ಸೌಕರ್ಯಗಳ ಕೊರತೆ ಮತ್ತು ಯಾವುದೇ ತನಿಖಾ ಸ್ವಾತಂತ್ರ್ಯವಿಲ್ಲದ ಪರಿಸ್ಥಿತಿಗಳಿಂದ ಉಂಟಾಗಿರುವ ನಿಷ್ಕ್ರಿಯತೆಗಳ ಪ್ರತಿಫಲನವಾಗಿದೆ. ಸಿಬಿಐಗೆ ತನ್ನದೇ ಆದ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಅವಕಾಶವಿಲ್ಲ. ಹೀಗಾಗಿ ಅದು ರಾಜ್ಯದ ಪೊಲೀಸರ ಎರವಲು ಸೇವೆಯನ್ನೇ ಆಧರಿಸಿದೆ. ಅದರ ಬಳಿ ಈಗಲೂ ಅಗತ್ಯವಿರುವ ವಿಧಿ ವಿಜ್ಞಾನ (ಫೊರೆನ್ಸಿಕ್) ಸಾಮರ್ಥ್ಯವಾಗಲೀ ಮತ್ತು ತಮಗೆ ನೀಡಲಾಗುವ ಪ್ರಕರಣಗಳನು ಭೇದಿಸಲು ಬೇಕಾದ ವಿಷಯ ಪರಿಣಿತರಾಗಲೀ ಇಲ್ಲ.
ಆದರೆ ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರದ ಪ್ರಕರಣಗಳನ್ನು ಮತ್ತು ಪ್ರತಿಷ್ಠಿತ ಮತ್ತು ಸೂಕ್ಷ್ಮವಾದ, ಅಂತರ್ರಾಜ್ಯ, ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲೆಂದೇ ನಿಗದಿಯಾಗಿರುವ ಒಂದು ತನಿಖಾ ಸಂಸ್ಥೆಯ ಅಗತ್ಯವಿದೆಯೆಂಬುದರ ಬಗ್ಗೆ ಎರಡನೇ ಮಾತಿಲ್ಲ. ಆದರೆ ಇಂತಹ ಎಲ್ಲಾ ಪ್ರಕರಣಗಳ ಬಗ್ಗೆ ಸಿಬಿಐನ ಇತಿಹಾಸ ಮಾತ್ರ ವಿಶ್ವಾಸಾರ್ಹವಾಗಿಲ್ಲ. ಅತ್ಯಂತ ಪ್ರತಿಷ್ಠಿತ 2-ಜಿ ಹಗರಣದಲ್ಲಿ ಎಲ್ಲಾ ಆರೋಪಿಗಳು ದೋಷಮುಕ್ತರಾಗಿದ್ದರ ಬಗ್ಗೆ ಒಂದು ಆತ್ಮಾವಲೋಕನ ಹಾಗೂ ವಿಚಾರಣೆಯು ನಡೆಯಬೇಕಿತ್ತು. ಅದರಲ್ಲೂ ಮುಖ್ಯವಾಗಿ ಇಡೀ ತನಿಖೆಯು ಸುಪ್ರೀಂಕೋರ್ಟಿನ ಉಸ್ತುವಾರಿಯಲ್ಲಿ ನಡೆದಿದ್ದರಿಂದ ಹಾಗೂ ಆಗಿನ ಕೇಂದ್ರ ಸರಕಾರವು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲು ಕಾರಣವಾದದ್ದರಿಂದ ಇಂತಹ ಆತ್ಮಾವಲೋಕನಕ್ಕೆ ಇನ್ನೂ ಹೆಚ್ಚಿನ ಮಹತ್ವವಿತ್ತು. ಸಿಬಿಐ ಅಧಿಕಾರಿಗಳ ಕಿರುಕುಳವನ್ನು ಆರೋಪಿಸಿ ಬನ್ಸಾಲ್ ಕುಟುಂಬವು ಆತ್ಮಹತ್ಯೆ ಮಾಡಿಕೊಂಡದ್ದು ಸಂಸ್ಥೆಯೊಳಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಬೇಕಿತ್ತು. ಆದರೂ ಪರಿಸ್ಥಿತಿಯನ್ನು ಸರಿತಿದ್ದಲು ಸಂಸ್ಥೆಯು ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ.
ಸಿಬಿಐನ ಹಾಲೀ ಪರಿಸ್ಥಿತಿಯಲ್ಲಿ ಅದರಿಂದ ಯಾವುದೇ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆಲೋಕ್ ವರ್ಮಾ ಅವರು ತನ್ನ ವ್ಯಾಪ್ತಿಯಲ್ಲಿದ್ದ ಪ್ರಕರಣಗಳ ತನಿಖೆಗಳ ಮೇಲೆ ಪ್ರಭಾವ ಬೀರಿದ ಆರೋಪವನ್ನು ಹೊತ್ತಿರುವ ಸಿಬಿಐನ ಮೂರನೇ ನಿರ್ದೇಶಕರಾಗಿದ್ದಾರೆ. ಅಲೋಕ್ ವರ್ಮಾ ಅವರನ್ನು ಪದಚ್ಯುತಗೊಳಿಸಿದ ಕೇಂದ್ರ ಸರಕಾರದ ಕ್ರಮದ ಕಾನೂನು ಬದ್ಧತೆಯ ಬಗ್ಗೆ ನಿಷ್ಪಕ್ಷಪಾತದಿಂದ ಮತ್ತು ನಿರ್ಮಮಕಾರದಿಂದ ವಿಚಾರಣೆ ನಡೆಸಿ ತೀರ್ಮಾನ ನೀಡುವ ನ್ಯಾಯಾಲಯದ ಪ್ರಯತ್ನಗಳನ್ನು ಕೇಂದ್ರ ಸರಕಾರ ಮತ್ತು ಅದರ ಅಧಿಕಾರಿಗಳ ಮೇಲೆ ಮಾಡಲಾದ ಸಂಚಲನಾತ್ಮಕ ಆರೋಪಗಳು ಮತ್ತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಪರ್ಯಾಯ ವಿಚಾರಣೆಗಳು ಹೈಜಾಕ್ ಮಾಡಿಬಿಟ್ಟಿವೆ. ಆಲೋಕ್ ವರ್ಮಾ ಅವರು ದಾಖಲಿಸಿರುವ ಅಹವಾಲಿನ ಬಗ್ಗೆ ಸುಪ್ರೀಂ ಕೋರ್ಟು ನೀಡುವ ಯಾವುದೇ ತೀರ್ಮಾನವು ಸಾರ್ವಜನಿಕರ ವಿಶ್ವಾಸವನ್ನೇನೂ ಮರಳಿಸುವುದಿಲ್ಲ.
ಕೃಪೆ: Economic and Political Weekly