ಅವೈಜ್ಞಾನಿಕ, ಅಸಾಂವಿಧಾನಿಕ ಕಸ್ತೂರಿ ರಂಗನ್ ವರದಿ ಮತ್ತು ಪರಿಸರವಾದಿಗಳ ಪೊಳ್ಳುತನ
ಭಾಗ-2
ಕಾಫಿ ಮಂಡಳಿಯ ಅಂಕಿ ಅಂಶಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಕಾಫಿ ಬೆಳೆಗಾರರ ಸಂಖ್ಯೆ 43,182. ಇದರಲ್ಲಿ 10 ಹೆಕ್ಟೇರ್‌ಗಿಂತಲೂ ಕಡಿಮೆ ಇರುವ ಸಣ್ಣ ಬೆಳೆಗಾರರ ಸಂಖ್ಯೆ 42,695. ದೊಡ್ಡ ಬೆಳೆಗಾರರ ಸಂಖ್ಯೆ ಅಂದರೆ 10 ಹೆಕ್ಟೇರ್‌ಗಿಂತಲೂ ಹೆಚ್ಚು ಇರುವವರು ಕೇವಲ 487 ಬೆಳೆಗಾರರಾಗಿದ್ದಾರೆ. ಸಣ್ಣ ಬೆಳೆಗಾರರು ಶೇ. 98.87ರಷ್ಟು ಇದ್ದರೆ, ಶೇ. 1.13ರಷ್ಟು ದೊಡ್ಡ ಬೆಳೆಗಾರರು ಇದ್ದಾರೆ. ಈ ಸಣ್ಣ ಬೆಳೆಗಾರರಲ್ಲಿಯೂ ಅತೀ ಸಣ್ಣ ಬೆಳೆಗಾರರ ಸಂಖ್ಯೆಯೂ ಗರಿಷ್ಠವಾಗಿದೆ. ಈ ಕೃಷಿಯ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬಿತವಾಗಿರುವವರ ಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಾಗಿ ಇದೆ. ಇಷ್ಟೊಂದು ಮಂದಿ ಈ ಕೃಷಿಯ ಮೇಲೆ ಅವಲಂಬಿತರಾಗಿರುವಾಗ ಅವರ ಬದುಕಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಎಲ್ಲಿಯೂ ವರದಿಯಲ್ಲಿ ಚರ್ಚಿಸಿಲ್ಲ.
ಈ ವರದಿಯನ್ನು ಸಿದ್ಧಪಡಿಸಿದ್ದು ಮತ್ತು ಜಾರಿಗೊಳಿಸಬೇಕು ಎನ್ನುತ್ತಿರುವುದು ಪರಿಸರವನ್ನು ಸಂರಕ್ಷಿಸಬೇಕು ಎನ್ನುವ ಕಾರಣಕ್ಕಾಗಿ. ಹಾಗಾದರೆ ಪರಿಸರ ಎಂದರೆ ಏನು?. ಕೇವಲ ಭೂಮಿ ಮಾತ್ರ ಪರಿಸರವಲ್ಲ. ಇಲ್ಲಿ ಜೀವಿಸುವ ಸಕಲ ಚರಾಚರಗಳು ಸೇರಿದಂತೆ, ಮನುಷ್ಯರು ಪರಿಸರದ ಒಳಗೆ ಬರುತ್ತಾರೆ. ಪರಿಸರವನ್ನು ಸಂರಕ್ಷಿಸುವುದು ಏಕೆ ಎಂದರೆ ಮಾನವನಿಗಾಗಿ ಮತ್ತು ಮುಂದಿನ ಪೀಳಿಗೆಗಾಗಿ ಎಂದು ಹೇಳುತ್ತಾರೆ. ಆದರೆ ಮಾನವನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಪರಿಸರದ ಬಗ್ಗೆ ಮಾತನಾಡುತ್ತಾರೆ. ಪರಿಸರ ಸಂರಕ್ಷಣೆ ಕೇವಲ ಪಶ್ಚಿಮಘಟ್ಟದಲ್ಲಿ ಮಾತ್ರ ಆಗಬೇಕೇ ಅಥವಾ ಬೇರೆ ಎಲ್ಲಾ ಪ್ರದೇಶದಲ್ಲಿಯೂ ಆಗಬೇಕೇ ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ. ಪಶ್ಚಿಮಘಟ್ಟದಲ್ಲಿ ವಾಸಿಸುವವರಿಗಾಗಿ ಹಲವಾರು ನಿಯಂತ್ರಣಗಳನ್ನು ಹೇರುವ ಮೂಲಕ ಪ್ರತ್ಯೇಕ ಜೀವಿಗಳು ಎನ್ನುವಂತೆ ಮಾಡುತ್ತಿದ್ದಾರೆ. ಇದು ಸಂವಿಧಾನಬಾಹಿರ ಎನ್ನುವುದರಲ್ಲಿ ಸಂಶಯವಿಲ್ಲ. ದೇಶಕ್ಕೆಲ್ಲಾ ಒಂದು ಕಾನೂನು ಇರುವಾಗ, ಪಶ್ಚಿಮಘಟ್ಟದಲ್ಲಿ ವಾಸಿಸುವವರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಲು ಸಾಧ್ಯವೇ? ಎಂಬುದನ್ನು ಗಮನಿಸಬೇಕು.
ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರ ಮೇಲೆ ಹೇಗೆ ದಬ್ಬಾಳಿಕೆ ನಡೆಯುತ್ತಿದೆ ಮತ್ತು ನಿಯಂತ್ರಣಗಳು ಹೆಚ್ಚಾಗುತಿವೆ ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಪ್ರದೇಶವಾಗಿದೆ. ಹಿಂದೆ ಇದು ಅರಣ್ಯ ಪ್ರದೇಶವಾಗಿತ್ತು. ಆ ನಂತರ ಅದನ್ನು ಮೀಸಲು ಅರಣ್ಯ ಎಂದು ಘೋಷಿಸಲಾಯಿತು. ತದನಂತರ ಅದನ್ನು ರಕ್ಷಿತಾರಣ್ಯ ಹಾಗೂ ಈಗ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ. ಒಂದೊಂದು ಹಂತದಲ್ಲಿಯೂ ನಿಯಂತ್ರಣಗಳು ಹೆಚ್ಚುತ್ತಾ ಬಂದಿದೆ. ಅರಣ್ಯ ಪ್ರದೇಶದ ಮೇಲೆ ನಿಯಂತ್ರಣ ಹೇರಿದರೆ ಯಾರ ಆಕ್ಷೇಪವೂ ಇರುವುದಿಲ್ಲ. ಆದರೆ ನಿಯಂತ್ರಣವು ಪಕ್ಕದಲ್ಲಿರುವ ಖಾಸಗಿ ಜಮೀನಿಗೂ ಒಳಪಡುವುದರಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಅರಣ್ಯ ಪ್ರದೇಶವಾಗಿದ್ದಾಗ, ಅಲ್ಲಿ ಕೃಷಿಕರು ತಮ್ಮ ರಾಸುಗಳನ್ನು ಮೇಯಿಸುತ್ತಿದ್ದರು. ಈಗ ಅವುಗಳಿಗೆ ಅವಕಾಶವಿಲ್ಲ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡುವ ಮೂಲಕ, ಕಾಡಿನಲ್ಲಿ ವಾಸಿಸುವ ಗಿರಿಜನರು, ಆದಿವಾಸಿಗಳು ತಮ್ಮ ಜೀವನವನ್ನು ನಿಭಾಯಿಸುತ್ತಿದ್ದರು. ಈಗ ಒಂದು ಎಲೆಯನ್ನೂ ಅಲುಗಾಡಿಸಲು ಅವಕಾಶವಿಲ್ಲ. ಆದಿವಾಸಿಗಳಿಗೆ ಅರಣ್ಯ ಹಕ್ಕು ನೀಡಬೇಕು ಎಂಬ ನಿಯಮ ವಿದ್ದರೂ ಅದು ಜಾರಿಗೆ ವ್ಯವಸ್ಥಿತವಾಗಿ ಬಂದಿಲ್ಲ. ಕೆಲವರಿಗೆ ಹಕ್ಕು ನೀಡಲಾಗಿದೆ. ಆದರೆ ಆ ಜಮೀನಿಗೆ ಹೋಗಲು ಹಾದಿ ಇಲ್ಲ. ಸಮುದಾಯದ ಹಕ್ಕನ್ನಂತೂ ನಿರಂತರವಾಗಿ ನಿರಾಕರಿಸಲಾಗುತ್ತಿದೆ. ಮಂಜೂರಾತಿ ಮಾಡಬೇಕಾದಾಗ ಹುಲಿ ಸಂರಕ್ಷಿತ ಪ್ರದೇಶ ಎಂದೆಲ್ಲಾ ಹೇಳಿಕೊಂಡು, ಅವರ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಜೊತೆಗೆ ಅರಣ್ಯದ ಒತ್ತಿನಲ್ಲಿರುವ ಖಾಸಗಿ ಜಮೀನಿನ ಮೇಲೆ ಅರಣ್ಯ ಇಲಾಖೆಯ ನಿರ್ಬಂಧಗಳ ಮೂಲಕ ದಬ್ಬಾಳಿಕೆ ನಡೆಯುತ್ತದೆ.
ಅರಣ್ಯ ಪ್ರದೇಶದಲ್ಲಿ ಇರುವಂತಹ ವನ್ಯಪ್ರಾಣಿಗಳಿಗೆ ಮೇವು ಇಲ್ಲದಂತಾಗಿ, ವನ್ಯಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದರಲ್ಲಿ ವಿಶೇಷವಾಗಿ ಆನೆ, ಹುಲಿ ಹಾಗೂ ಚಿರತೆಗಳು ಆಗಾಗ ನಾಡಿಗೆ ಬಂದು ಸಂಘರ್ಷಗಳು ಉಂಟಾಗುತ್ತವೆ. ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪರಿಸರವಾದಿಗಳು ನೀಡುವ ಕಾರಣ ಏನು ಎಂದರೆ, ‘‘ಆನೆಗಳು ಸಂಚರಿಸುತ್ತಿದ್ದ ಮಾರ್ಗಗಳನ್ನು ಮಾನವ ಮುಚ್ಚಿದ್ದಾನೆ. ಅಲ್ಲಿ ಕೃಷಿಯನ್ನು ಮಾಡಿಕೊಂಡಿದ್ದಾನೆ. ಆನೆ ಕಾಡಿನಲ್ಲಿ ಇರುವ ವೇಳೆಯಲ್ಲಿ ಅದಕ್ಕೆ ಕೆಲವೊಮ್ಮೆ ತಾನು ಸಂಚರಿಸುತ್ತಿದ್ದ ಹಳೆಯ ಮಾರ್ಗದ ಬಗ್ಗೆ ನೆನಪು ಬಂದು, ಅದು ಆ ಮಾರ್ಗವಾಗಿ ಸಂಚರಿಸುತ್ತದೆ’’ ಎಂಬುದಾಗಿದೆ. ಆನೆಯ ಆಯಸ್ಸು ಗರಿಷ್ಠ 80 ವರ್ಷ. ಕಾಫಿ ತೋಟಗಳು ಸುಮಾರು 250 ವರ್ಷದಿಂದಲೂ ಇವೆೆ. ಆನೆಗಳಿಗೆ ಹಳೆಯ ನೆನಪು ಬರುತ್ತದೆ ಎಂದರೆ ಪರಿಸರವಾದಿಗಳು ಆನೆಯ ಪುನರ್ಜನ್ಮದ ಬಗ್ಗೆ ಮಾತನಾಡುತ್ತಾರೆಯೇ ಎಂದು ಅವರೇ ವಿವರಿಸಬೇಕು ಮತ್ತು ಹಿಂದಿನ ಜನ್ಮದಲ್ಲಿ ಆನೆಯಾಗಿದದ್ದು, ಮುಂದೆಯೂ ಆನೆಯಾಗಿಯೇ ಹುಟ್ಟುತ್ತದೆಯೇ ಎಂಬ ವಿವರಣೆಯನ್ನು ಅವರೇ ಒದಗಿಸಬೇಕು. ಆನೆ ಸಂಚರಿಸುವ ಮಾರ್ಗವನ್ನು ‘ಎಲಿಫೆಂಟ್ ಕಾರಿಡಾರ್’ ಎಂದು ಕರೆಯುತ್ತಾರೆ. ಕಾಫಿ ತೋಟಗಳು ಮತ್ತು ಕೃಷಿ ವ್ಯವಸ್ಥೆ ಶತಮಾನಗಳಿಂದ ಇದೆ. ಆನೆಗಳ ಬದುಕು ಶತಮಾನಗಳಂತೂ ಖಂಡಿತ ಇಲ್ಲ. ಹಾಗಿರುವಾಗ ಆನೆಗಳಿಗೆ ಹಳೆಯ ಮಾರ್ಗದ ನೆನಪು ಹೇಗೆ ಇರಲು ಸಾಧ್ಯ?
ಇಲ್ಲಿ ವಾಸ್ತವತೆ ಏನು ಎಂದರೆ ಆನೆಯ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇರುವ ಅರಣ್ಯದ ಮೇಲೆ ಒತ್ತಡ ಹೆಚ್ಚಾಗು ತ್ತಿದೆ. ಆನೆಗೆ ಬೇಕಾದಂತಹ ಆಹಾರವನ್ನು ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ. ಕಾಡಿನಲ್ಲಿ ಆನೆಗಳಿಗೆ ಬೇಕಾದ ಆಹಾರ ಹಾಗೂ ನೀರಿನ ಕೊರತೆ ಇದೆ. ನೈಸರ್ಗಿಕ ಕಾಡಿಗೆ ಬದಲಾಗಿ ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ನೆಟ್ಟು ವನ್ಯಪ್ರಾಣಿಗಳಿಗೆ ಆಹಾರವೇ ಇಲ್ಲದಂತೆ ಮಾಡಲಾಗಿದೆ. ಕೊಡಗು ಜಿಲ್ಲೆಯ ದುಬಾರೆ ಅರಣ್ಯ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಆನೆಮನೆ ಫೌಂಡೇಷನ್ ಸಂಸ್ಥೆಯ ಪ್ರಜ್ಞಾಚೌಟರವರಿಗೆ ಎರಡು ಆನೆಗಳನ್ನು ಸಾಕಲು ಅವಕಾಶವನ್ನು ಸರಕಾರ ನೀಡಿತ್ತು. ಅಲ್ಲಿರುವ ವನ್ಯ ಆನೆಗಳ ಸಂಖ್ಯೆಯೇ ಹೆಚ್ಚಾಗಿದೆ. ಹಾಗಿರುವಾಗ ಖಾಸಗಿ ಆನೆಗಳು ಅದರ ಜೊತೆಯಲ್ಲಿ ಬೆರೆತಾಗ ಏನಾಗುತ್ತದೆ ಎಂಬುದು ಒಂದು ಕಡೆಯಾದರೆ ಈ ಎರಡೂ ಆನೆಗಳು ಹೆಣ್ಣಾನೆಗಳಾಗಿದ್ದವು. ಈಗ ನಾಲ್ಕು ಮರಿಗಳು ಸೇರಿ ಅವುಗಳ ಸಂಖ್ಯೆ 6ಕ್ಕೆ ಏರಿದೆ. ಅರಣ್ಯ ಪ್ರದೇಶ ಹೆಚ್ಚಾಗಲಿಲ್ಲ. ಆಹಾರದ ಪ್ರಮಾಣವೂ ಹೆಚ್ಚಾಗಲಿಲ್ಲ. ಆಹಾರ ದೊರೆಯದಿರುವಾಗ, ಆಹಾರವನ್ನು ಅರಸಿಕೊಂಡು ಪಕ್ಕದ ತೋಟಗಳಿಗೆ ಲಗ್ಗೆ ಇಡುತ್ತವೆ. ಹಾಗೆ ಆದಾಗ ಆನೆ-ಮಾನವ ಸಂಘರ್ಷಗಳು ಉಂಟಾಗುತ್ತವೆಯೇ ವಿನಹ, ಈ ಢೋಂಗಿ ಪರಿಸರವಾದಿಗಳು ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಹೇಳುವ ‘ಎಲಿಫೆಂಟ್ ಕಾರಿಡಾರ್’ ಎನ್ನುವ ವಿಚಾರ ಸಂಪೂರ್ಣವಾಗಿ ಸುಳ್ಳು ಎನ್ನುವುದರಲ್ಲಿ ಸಂಶಯವಿಲ್ಲ.
ಇಂತಹ ಬುರುಡೆಗಳನ್ನೆಲ್ಲಾ ಹೇಳಿಕೊಂಡು ಪರಿಸರದ ಮೇಲೆ ಜನರ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ, ಪಶ್ಚಿಮಘಟ್ಟ ಸಂರಕ್ಷಿಸಬೇಕು ಎಂದು ಹೇಳಿಕೊಂಡು ಪರಿಸರವಾದಿಗಳು ಹೊರಟಿದ್ದಾರೆ. ಪಶ್ಚಿಮಘಟ್ಟದಲ್ಲಿ ಕೃಷಿ ಮಾತ್ರವಲ್ಲ ಹಲವಾರು ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ಇವೆ. ಸುಂದರ ಪ್ರದೇಶ ಆಗಿರುವುದರಿಂದ ಪ್ರವಾಸೋದ್ಯಮ ನಡೆಯುತ್ತಿದೆ. ಪ್ರವಾಸೋದ್ಯಮದಿಂದ ಸಾವಿರಾರು ಮಂದಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರವಾಸೋದ್ಯಮ ವ್ಯವಸ್ಥಿತವಾಗಿ ನಡೆಸಿದರೆ ಅದು ಪರಿಸರಕ್ಕೆ ಪೂರಕವಾದ ಚಟುವಟಿಕೆಯಾಗುತ್ತದೆಯೇ ವಿನಹ, ಪರಿಸರಕ್ಕೆ ಮಾರಕವಲ್ಲ.
ಆದರೆ ಈ ಉದ್ಯಮವು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರವಾಸಿಗರ ಒತ್ತಡದಿಂದ ಸಾಕಷ್ಟು ಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿಕೊಂಡು, ಪ್ರವಾಸಿಗರ ಅಂಕಿ ಅಂಶಗಳನ್ನು ನೀಡಿ, ಅವರ ಒತ್ತಡದಿಂದಾಗಿ ಆಗುವ ಹಾನಿಯ ಬಗ್ಗೆ ವಿವರಣೆಯನ್ನು ನೀಡಿ ನಂಬಿಸುವ ಕೆಲಸವನ್ನು ಮಾಡುತ್ತಾರೆ. ಪ್ರವಾಸಿಗರು ಸಂಚರಿಸುವುದು ನಡೆಯುತ್ತದೆ. ಇದು ನಿರಂತರ ಚಟುವಟಿಕೆ. ಆದರೆ ಪರಿಸರವಾದಿಗಳು ನಿರ್ದಿಷ್ಟವಾದ ಪ್ರದೇಶಕ್ಕೆ ಒಂದು ವರ್ಷದಲ್ಲಿ ಸಂಚರಿಸಿದ ಪ್ರವಾಸಿಗರ ಸಂಖ್ಯೆಯನ್ನು ನೀಡಿ, ಅದರಿಂದಾಗಿ ಭೂಮಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಪ್ರವಾಸಿಗರೆಲ್ಲರೂ ಒಂದೇ ದಿನ ಬರುವುದಿಲ್ಲ. ವರ್ಷವಿಡೀ ಬರುತ್ತಿರುತ್ತಾರೆ. ಹಾಗಾಗಿ ಭೂಮಿಯ ಮೇಲೆ ಒಂದು ದಿನದ ಒತ್ತಡ ಎನ್ನುವುದು ಕೂಡ ಯಾವುದೇ ವೈಜ್ಞಾನಿಕ ಲೆಕ್ಕಾಚಾರವಲ್ಲ.
ಕಾಫಿ ಕೃಷಿ ಏಕ ರೀತಿಯ ಕೃಷಿ. ಇದನ್ನು ಕೈಬಿಡಬೇಕು ಎನ್ನು ವುದು ಮಾಧವ ಗಾಡ್ಗೀಳ್ ವರದಿಯಲ್ಲಿ ಇರುವ ಶಿಫಾರಸಿನ ಅಂಶ. ಇದೊಂದು ತಪ್ಪಾದ ವಿಶ್ಲೇಷಣೆಯಾಗಿದೆ. ಕಾಫಿ ಕೃಷಿ ನೈಸರ್ಗಿಕವಾದ ನೆರಳಿನ ಅಡಿಯಲ್ಲಿ ಮಾಡುವ ಕೃಷಿ ಪದ್ಧತಿಯಾಗಿದೆ. ಇಲ್ಲಿ ಕಾಫಿ ಗಿಡಗಳ ಜೊತೆಯಲ್ಲಿ ಮರಗಳು ಇರುತ್ತವೆ. ಈ ಮರಗಳ ಮೇಲೆ ಕರಿಮೆಣಸಿನ ಬಳ್ಳಿಗಳನ್ನು ಹಬ್ಬಿಸಿ ಬಿಡಲಾಗುತ್ತದೆ. ವಿವಿಧ ರೀತಿಯ ನೈಸರ್ಗಿಕ ಮರಗಳು ಹಾಗೂ ಅರಣ್ಯ ಇಲಾಖೆಯ ತಪ್ಪು ನೀತಿಯ ಪರಿಣಾಮವಾಗಿ ಹೆಚ್ಚಾಗಿ ಬೆಳೆಯಲ್ಪಡುತ್ತಿರುವ ಮೆದು ಮರಗಳು ಇರುತ್ತವೆ. ಇದರ ಜೊತೆಯಲ್ಲಿ ಮಾವು, ತೆಂಗು, ಅಡಿಕೆ, ಏಲಕ್ಕಿ, ಕಿತ್ತಲೆ ಮುಂತಾದ ಕೃಷಿ ಇರುತ್ತದೆ. ಇದು ಏಕರೀತಿಯ ಕೃಷಿ ಪದ್ಧತಿ ಹೇಗಾಗುತ್ತದೆ?. ಆದರೆ ಅರಣ್ಯ ಇಲಾಖೆ ತಮ್ಮ ವಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕ ಮರಗಳ ಬದಲಿಗೆ ತೇಗದ ಮರಗಳನ್ನು ನೆಟ್ಟು, ವನ್ಯಪ್ರಾಣಿಗಳಿಗೆ ಆಹಾರವೇ ಇಲ್ಲದಂತೆ ಮಾಡಿದ್ದರ ಬಗ್ಗೆ ಯಾವುದೇ ಉಲ್ಲೇಖ ವರದಿಯಲ್ಲಿ ಇಲ್ಲ. ಹಲವಾರು ಮೀಸಲು ಅರಣ್ಯಗಳು ರಬ್ಬರ್ ಬೆಳೆಸಲು, ಏಲಕ್ಕಿ ಬೆಳೆಸಲು, ವಿದೇಶಿ ಮೂಲದ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದನ್ನು ಹಿಂದಕ್ಕೆ ಪಡೆಯುವ ಬಗ್ಗೆ ವರದಿಯಲ್ಲಿ ಉಲ್ಲೇಖವೇ ಇಲ್ಲ. ಅರಣ್ಯ ಇಲಾಖೆಯು ಈ ಬಗ್ಗೆ ಚಿಂತಿಸುವುದಿಲ್ಲ.
ಕೃಷಿಯನ್ನೂ ಮಾಡಬಾರದು, ಪ್ರವಾಸೋದ್ಯಮವನ್ನೂ ಮಾಡಬಾರದು ಎಂದರೆ ಈ ಭಾಗದ ಜನರ ಜೀವನ ಹೇಗೆ ನಡೆಯಬೇಕು? ಬದಲಿ ವ್ಯವಸ್ಥೆಗಳು ಏನು? ಎಂಬುದರ ಬಗ್ಗೆ ಎರಡೂ ವರದಿಗಳಲ್ಲಿ ಚರ್ಚೆ ಆಗಿಲ್ಲ. ಪರ್ಯಾಯ ವ್ಯವಸ್ಥೆಯನ್ನು ನೀಡದೆ ಕೇವಲ ಇದರಿಂದ ಹಾನಿಯಾಗುತ್ತದೆ ಎಂದು ಹೇಳುವುದು ಸರಿಯೇ?.
ಪಶ್ಚಿಮಘಟ್ಟ ಪ್ರದೇಶವನ್ನು ಮತ್ತಷ್ಟು ಶ್ರೀಮಂತ ಮತ್ತು ಸದೃಢಗೊಳಿಸಬೇಕು ಎಂದಾದರೆ ಇಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಲೇಬೇಕು. ರೈಲು ಮಾರ್ಗವು ಪರಿಸರಕ್ಕೆ ಪೂರಕವಾದ ಸಂಚಾರ ವ್ಯವಸ್ಥೆಯಾಗಿದೆ. ರೈತರ ಕೃಷಿ ಉತ್ಪನ್ನಗಳು ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಸಾಗಾಟ ಮಾಡುವ ಮಾರ್ಗವಾಗಿದೆ. ಇವುಗಳೆಲ್ಲವನ್ನೂ ಅನುಷ್ಠಾನಗೊಳಿಸಿ, ಸದೃಢಗೊಳಿಸಿದರೆ ಪಶ್ಚಿಮಘಟ್ಟ ಉಳಿಯಲು ಸಾಧ್ಯವೇ ವಿನಹ, ನಿಯಂತ್ರಣಗಳ ಮೂಲಕ ಅಲ್ಲ. ಯಾವುದೇ ನಿಯಂತ್ರಣವಿಲ್ಲದೆ, ಸಾವಿರಾರು ವರ್ಷಗಳಿಂದ ಪಶ್ಚಿಮಘಟ್ಟ ಉಳಿದುಕೊಂಡು ಬಂದಿದೆ. ಇದಕ್ಕೆ ಮಾಧವ ಗಾಡ್ಗೀಳ್ ವರದಿಯಾಗಲಿ, ಡಾ ಕಸ್ತೂರಿ ರಂಗನ್ ವರದಿಯಾಗಲಿ ಕಾರಣವಲ್ಲ. ಮನುಷ್ಯ ಸಹಜವಾಗಿ ಪರಿಸರ ಪ್ರೇಮಿಯಾಗಿದ್ದಾನೆ. ವರದಿಗಳು ಆತನನ್ನು ಪರಿಸರ ಪ್ರೇಮಿಯಾಗಿಸುವುದಿಲ್ಲ. ಅರಣ್ಯ ಇಲಾಖೆ ತನ್ನ ವಶದಲ್ಲಿರುವ ಅರಣ್ಯ ಪ್ರದೇಶವನ್ನು ಅರಣ್ಯವಾಗಿಯೇ ಸಂರಕ್ಷಿಸಿದರೆ, ಅದಕ್ಕಿಂತಲೂ ಹೆಚ್ಚಿನ ಕೊಡುಗೆ ಪರಿಸರಕ್ಕೆ ಮತ್ತು ಪಶ್ಚಿಮಘಟ್ಟಕ್ಕೆ ಬೇರೊಂದು ಇಲ್ಲ. ಮಾಧವ ಗಾಡ್ಗೀಳ್ ವರದಿಯಾಗಲಿ, ಕಸ್ತೂರಿ ರಂಗನ್ ವರದಿಯಾಗಲಿ ಜಾರಿಯಾಗಬೇಕು ಎಂದು ಇರುವುದು ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಿರುವವರಿಗಲ್ಲ. ಇದು ಜಾರಿಯಾಗಬೇಕು ಎಂದಿರುವುದು ಏನೇನೋ ಲೆಕ್ಕಾಚಾರಗಳನ್ನು ಇಟ್ಟುಕೊಂಡಿರುವ ಪರಿಸರವಾದದ ಹೆಸರಿನಲ್ಲಿ ವಿವಿಧ ಹೆಸರಿನಲ್ಲಿ ಕೆಲವೇ ವ್ಯಕ್ತಿಗಳು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ. ಇದು ಅವರ ದಂಧೆ, ಸ್ವಾರ್ಥ, ಹಾಗೂ ಸೂಕ್ಷ್ಮವಾಗಿ ಅವಲೋಕಿಸಿದರೆ ಮೇಲ್ವರ್ಗದವರ ದಬ್ಬಾಳಿಕೆ.