ನುಡಿಗಳ ಅಳಿವು ಉಳಿವುಗಳ ಕುರಿತಂತೆ.....
ಈ ಹೊತ್ತಿನ ಹೊತ್ತಿಗೆ
ಕನ್ನಡ ಅರಿವಿನ ಲೋಕದಲ್ಲಿ ಕೆವಿಎನ್ ಎಂದೇ ಹೆಸರುವಾಸಿಯಾಗಿರುವ ಪ್ರೊ. ಕೆವಿ. ನಾರಾಯಣ ಅವರು ಕನ್ನಡದ ಮಹತ್ವದ ಚಿಂತಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆವಿಎನ್ ಅವರು ಅನುವಾದವೆಂಬ ಕ್ರಿಯೆಯನ್ನು ಕೇವಲ ಎರಡು ನುಡಿಗಳ ನಡುವಿನ ಒಂದು ತರ್ಜುಮೆಯ ಚಟುವಟಿಕೆಯನ್ನಾಗಿ ನೋಡದೆ, ಅದನ್ನೊಂದು ಸಾಂಸ್ಕೃತಿಕ ಗ್ರಹಿಕೆಯಾಗಿ ಹಾಗೂ ಬಹುಶಿಸ್ತೀಯ ಜ್ಞಾನ ಮೀಮಾಂಸೆಯನ್ನಾಗಿ ಅರಿಯುವುದಕ್ಕೆ ಬೇಕಾಗಿರುವ ರಚನಾತ್ಮಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡರು. ಈ ನುಡಿಯ ಅಳಿವು ಉಳಿಯುವಿನ ಹಿಂದಿನ ಸಾಂಸ್ಕೃತಿಕ ಪಲ್ಲಟಗಳನ್ನು ಅವರು ಗುರುತಿಸಿದ್ದಾರೆ. ನುಡಿಯ ಕುರಿತ ಅವರ ಸುದೀರ್ಘ ಕುತೂಹಲದ ಭಾಗವಾಗಿದೆ ‘ನುಡಿಗಳ ಅಳಿವು-ಬೇರೆ ದಿಕ್ಕಿನ ನೋಟ’ ಕೃತಿ. ಲೇಖಕರೇ ಹೇಳುವಂತೆ ನುಡಿಗಳ ಅಳಿವನ್ನು ತಮ್ಮ ಕಾಳಜಿಯನ್ನಾಗಿ ಮಾಡಿಕೊಂಡಿರುವ ಎಲ್ಲರನ್ನೂ ಓದುಗರನ್ನಾಗಿ ಒಳಗೊಳ್ಳಲೆಂದು ಇದನ್ನು ಬರೆಯಲಾಗಿದೆ. ಈ ಪುಟ್ಟ ಕೃತಿ ವಾಗ್ವಾದವನ್ನು ಗುರಿಯಾಗಿರಿಸಿಕೊಂಡು ಬರೆಯಲ್ಪಟ್ಟಿದೆ. ಕನ್ನಡ ಭಾಷೆಯೂ ಸೇರಿದಂತೆ ಪ್ರಾದೇಶಿಕ ನುಡಿಗಳ ಅಳಿವು ಚರ್ಚೆಗೊಳಗಾಗುತ್ತಿರುವ ದಿನಗಳಲ್ಲಿ, ಈ ಪುಟ್ಟ ಕೃತಿ ಅದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುತ್ತದೆ. ನುಡಿ ಎಂದರೆ ಏನು ಎನ್ನುವುದರಿಂದ ಹಿಡಿದು, ಅದರ ಉಳಿವಿನ ಅಗತ್ಯ ಮತ್ತು ಉಳಿವಿನ ದಾರಿಯ ಕುರಿತಂತೆಯೂ ಚಿಂತಿಸುತ್ತದೆ.
ನುಡಿಗಳು ಅಳಿಯುವ ಪ್ರಕ್ರಿಯೆಯನ್ನು ಈ ಬರಹ ಅಲ್ಲಗಳೆಯುವುದಿಲ್ಲ. ಆದರೆ ನುಡಿಗಳ ಅಳಿವನ್ನು ಒಟ್ಟು ಮಾನವ ವ್ಯಾಪಾರದಿಂದ ಬೇರೆಯಾಗಿಸಿ ನೋಡುವುದನ್ನು ಒಪ್ಪುವುದಿಲ್ಲ. ನುಡಿಗಳನ್ನು ಆಡುವವರನ್ನು ಮತ್ತು ನುಡಿಗಳನ್ನು ಬೇರೆ ಬೇರೆಯಾಗಿರಿಸಿ ಕೇವಲ ನುಡಿಗಳನ್ನು ಕಾಪಿಡುವ ಯೋಜನೆಗಳನ್ನು ರೂಪಿಸುವ ಯೋಜನೆಗಳ ಕೊರತೆಗಳನ್ನು ಗುರುತಿಸುವುದು ಅಗತ್ಯ ಎಂದು ಕೃತಿ ಅಭಿಪ್ರಾಯಪಡುತ್ತದೆ.
ನುಡಿಗಳ ವ್ಯಾಪಾರ ಕೇವಲ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ನುಡಿಗಳಿಗೆ ಮಾತ್ರ ಸಂಬಂಧಪಟ್ಟಿರುವುದಿಲ್ಲ. ಅದೊಂದು ಸಂಕೀರ್ಣವಾದ ಜಗತ್ತು. ಇದರಲ್ಲಿ ಹಲವು ಬಗೆಯ ಪರಸ್ಪರ ಪೂರಕ ಸಂಗತಿಗಳಿರುತ್ತವೆ. ಒಂದಕ್ಕೊಂದು ವಿರೋಧವೆನಿಸುವ ಸಂಗತಿಗಳೂ ಇರುತ್ತವೆ. ಇವೆಲ್ಲವನ್ನು ಒಟ್ಟಿಗಿರಿಸಿ ನೋಡಬೇಕಾಗಿದೆ ಎಂದು ಲೇಖಕರು ಬಯಸುತ್ತಾರೆ.
ಅಹರ್ನಿಶಿ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 88. ಮುಖಬೆಲೆ 100 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.