ಹಿರಿಯಡ್ಕ ಗೋಪಾಲರಾಯರಿಗೆ ಸಚಿವೆ ಜಯಮಾಲರಿಂದ ರಾಜ್ಯೋತ್ಸವ ಪ್ರಶಸ್ತಿ ಹಸ್ತಾಂತರ
ಉಡುಪಿ, ನ. 30: ಇನ್ನು 15 ದಿನಗಳಲ್ಲಿ (ಡಿ.15) ಬದುಕಿನ ಶತಕವನ್ನು ಪೂರ್ಣಗೊಳಿಸಲಿರುವ ಯಕ್ಷಗಾನ ರಂಗದ ‘ಮದ್ದಲೆ ಮಾಂತ್ರಿಕ’ ಹಿರಿಯಡ್ಕ ಗೋಪಾಲರಾಯರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಅವರು ಶುಕ್ರವಾರ ಹಿರಿಯಡ್ಕ ಸಮೀಪದ ಓಂತಿಬೆಟ್ಟಿನಲ್ಲಿರುವ ಅವರ ‘ಸೀತಾರಾಮ ನಿಲಯ’ದಲ್ಲಿ ಪ್ರದಾನ ಮಾಡಿದರು.
ವೃದ್ಧಾಪ್ಯದ ಕಾರಣ ಹಿರಿಯಡ್ಕ ಗೋಪಾಲ ರಾವ್ ಅವರು ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವೆ, ಮಣಿಪಾಲದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ನೇರವಾಗಿ ಹಿರಿಯ ಕಲಾವಿದನ ಮನೆಗೆ ಧಾವಿಸಿ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
‘ಇದು ನಮ್ಮ ಸರಕಾರ ನಿಮಗೆ ನೀಡುತ್ತಿರುವ ಗೌರವ. ನಿಮಗೆ ಇದನ್ನು ನೀಡುವ ಸೌಭಾಗ್ಯ ನಮ್ಮದು’ ಎಂದು ಡಾ. ಜಯಮಾಲ ಅವರು ಶಾಲು ಹೊದಿಸಿ, ಫಲಫುಷ್ಪ, ಪ್ರಶಸ್ತಿ ಫಲಕ, ಚಿನ್ನದ ಉಡುಗೊರೆಯನ್ನು ನೀಡುತ್ತಾ ನುಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಬಳಿಕ 99ರ ಹರೆಯದ ಹಿರಿಯಡ್ಕ ಗೋಪಾಲರಾಯರು, ಸ್ವತಹ ಕಲಾವಿದೆ ಯಾಗಿರುವ ಜಯಮಾಲಾ ಅವರನ್ನು ಪಕ್ಕದಲ್ಲೇ ಕುಳ್ಳಿರಿಸಿಕೊಂಡು, 20ರ ತರುಣನನ್ನೂ ನಾಚಿಸುವಂತೆ ಸ್ವತಹ ಯಕ್ಷಗಾನದ ಹಾಡುಗಳನ್ನು ಹೇಳುತ್ತಾ, ಮಟ್ಟುಗಳನ್ನು ಹಾಕಿ, ಅದಕ್ಕೆ ಸರಿಯಾಗಿ ತನ್ನ ಬೆರಳುಗಳಿಂದ ಮದ್ದಲೆಯನ್ನೂ ನುಡಿಸಿ ಸಚಿವೆಯನ್ನು ಮಂತ್ರಮುಗ್ಧಗೊಳಿಸಿದರು.