ಇಥಿಯೋಪಿಯ: ಸ್ಥಳೀಯ ಉದ್ಯೋಗಿಗಳಿಂದ ಭಾರತೀಯ ಉದ್ಯೋಗಿಗಳ ಒತ್ತೆಸೆರೆ
ವೇತನ ನೀಡಲು ಭಾರತೀಯ ಕಂಪೆನಿ ವಿಫಲ
ಅಡಿಸ್ ಅಬಾಬ (ಇಥಿಯೋಪಿಯ), ನ. 30: ಭಾರತದ ಮೂಲಸೌಕರ್ಯ ಲೀಸಿಂಗ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ (ಐಎಲ್‌ಎಫ್‌ಎಸ್)ಯ ಇಥಿಯೋಪಿಯದಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಏಳು ಭಾರತೀಯರನ್ನು ಕಚೇರಿಯ ಸ್ಥಳೀಯ ಉದ್ಯೋಗಿಗಳು ಒತ್ತೆಸೆರೆಯಲ್ಲಿಟ್ಟಿದ್ದಾರೆ ಎಂಬ ವರದಿಗಳ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ತನಿಖೆ ನಡೆಸುತ್ತಿದೆ.
12.6 ಬಿಲಿಯ ಡಾಲರ್ ಸಾಲ ಮರುಪಾವತಿಯಲ್ಲಿ ಕಂಪೆನಿ ವಿಫಲವಾದ ಬಳಿಕ ಇಥಿಯೋಪಿಯದಲ್ಲಿರುವ ಉದ್ಯೋಗಿಗಳಿಗೆ ಅದು ವೇತನ ನೀಡಿಲ್ಲ ಎಂದು ಹೇಳಲಾಗಿದೆ.
ಇದರಿಂದ ರೋಸಿ ಹೋದ ಇಥಿಯೋಪಿಯನ್ ಉದ್ಯೋಗಿಗಳು ಸಂಬಳ ವಸೂಲಿಗಾಗಿ ತಮ್ಮನ್ನು ಒತ್ತೆಸೆರೆಯಲ್ಲಿಟ್ಟಿದ್ದಾರೆ ಎಂಬುದಾಗಿ ಭಾರತೀಯ ಉದ್ಯೋಗಿಗಳು ಹೇಳಿದ್ದಾರೆ.
ಇಥಿಯೋಪಿಯದ ಒರೊಮಿಯ ಮತ್ತು ಅಮ್‌ಹಾರ ರಾಜ್ಯಗಳಲ್ಲಿರುವ ಮೂರು ಸೈಟ್‌ಗಳಲ್ಲಿ ವೇತನ ಸಿಗದ ಸ್ಥಳೀಯ ಸಿಬ್ಬಂದಿ ಏಳು ಭಾರತೀಯ ಉದ್ಯೋಗಿಗಳನ್ನು ನವೆಂಬರ್ 25ರಿಂದ ಒತ್ತೆಸೆರೆಯಲ್ಲಿಟ್ಟಿದ್ದಾರೆ. ಈ ಸಂಬಂಧ ಉದ್ಯೋಗಿಗಳು ಭಾರತೀಯ ವಿದೇಶ ಸಚಿವಾಲಯಕ್ಕೆ ಇಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ಭಾರತ ಮತ್ತು ಸ್ಪೇನ್‌ಗಳು ಜಂಟಿಯಾಗಿ ವಹಿಸಿಕೊಂಡಿರುವ ಕೆಲವು ರಸ್ತೆ ನಿರ್ಮಾಣ ಯೋಜನೆಗಳು ರದ್ದುಗೊಂಡಿರುವುದು ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿರಬಹುದು ಎಂದು ಭಾರತೀಯ ಉದ್ಯೋಗಿಗಳು ಹೇಳಿದ್ದಾರೆ.
ಪೊಲೀಸರು ಮತ್ತು ಅಧಿಕಾರಿಗಳು ಸ್ಥಳೀಯರ ಪರವಾಗಿ ನಿಂತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.