ಭಾರತದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳಕ್ಕೆ ಸೌದಿ ಅರೇಬಿಯ ನಿರ್ಧಾರ
ಜಿ-20 ಶೃಂಗ ಸಮ್ಮೇಳನದಲ್ಲಿ ಸೌದಿ ಯುವರಾಜ ಜೊತೆ ಮೋದಿ ಮಾತುಕತೆ
ಬ್ಯೂನಸ್ ಐರಿಸ್ (ಅರ್ಜೆಂಟೀನ), ನ. 30: ಭಾರತದ ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಸೌದಿ ಅರೇಬಿಯದ ಹೂಡಿಕೆಗಳನ್ನು ಹೆಚ್ಚಿಸಲು ನಾಯಕತ್ವ ಮಟ್ಟದಲ್ಲಿ ವ್ಯವಸ್ಥೆಯೊಂದನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಿರ್ಧರಿಸಿದ್ದಾರೆ.
ಅರ್ಜೆಂಟೀನ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಶುಕ್ರವಾರ ಆರಂಭಗೊಂಡ 20 ದೇಶಗಳ ಗುಂಪು ಜಿ-20ಯ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ಮಾತುಕತೆಯ ವೇಳೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಆರ್ಥಿಕ, ಸಾಂಸ್ಕೃತಿಕ ಮತ್ತು ಇಂಧನ ಕ್ಷೇತ್ರಗಳಲ್ಲಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುವ ವಿಧಾನಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಚರ್ಚಿಸಿದರು.
‘‘ಭಾರತ ಮತ್ತು ಸೌದಿ ಅರೇಬಿಯ ನಾಯಕರ ನಡುವೆ ಹಾರ್ದಿಕ ಮತ್ತು ಆತ್ಮೀಯ ಮಾತುಕತೆ ನಡೆಯಿತು’’ ಎಂದು ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಭಾರತ ಒಂದು ಮಹತ್ವದ ಭಾಗೀದಾರ ಎಂಬುದಾಗಿ ಯುವರಾಜ ಸಲ್ಮಾನ್ ಈ ಸಂದರ್ಭದಲ್ಲಿ ಹೇಳಿದರು. ಭಾರತದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಸೌದಿ ಅರೇಬಿಯ ಹೂಡಿಕೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬ ಬಗ್ಗೆ ಹೆಚ್ಚಿನ ಮಾತುಕತೆ ನಡೆಯಿತು ಎಂದು ಗೋಖಲೆ ಹೇಳಿದರು.
ರಾಷ್ಟ್ರೀಯ ಮೂಲಸೌಕರ್ಯ ನಿಧಿಯಲ್ಲಿ ಹೂಡುವ ಆರಂಭಿಕ ನಿಧಿಯ ಬಗ್ಗೆ ಸೌದಿ ಅರೇಬಿಯ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಯುವರಾಜ ಸಲ್ಮಾನ್ ತಿಳಿಸಿದರು.