varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 2 Dec, 2018

ಚಿರಾಗ್ ಉದಯ
ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ಕಳೆದ ವಾರ ತಮ್ಮ ಮಗ ಚಿರಾಗ್ ಪಾಸ್ವಾನ್‌ಗೆ ಪಕ್ಷದ ಅಧ್ಯಕ್ಷ ಹುದ್ದೆಗೆ ಭಡ್ತಿ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸುವುದೂ ಸೇರಿದಂತೆ ಪಕ್ಷದ ವಿಚಾರಗಳ ಬಗ್ಗೆ ಚಿರಾಗ್ ಇನ್ನು ಮುಂದೆ ನಿರ್ಧಾರ ಕೈಗೊಳ್ಳಲಿದ್ದಾರೆ. ಪಾಸ್ವಾನ್ ಅವರ ಈ ನಡೆ ಎಲ್‌ಜೆಪಿಯಲ್ಲಿ ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಿಕೊಡುವ ಕ್ರಮ ಎಂದು ಹೇಳಲಾಗಿದೆ. 2014ರಲ್ಲಿ ತಮ್ಮ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಆರು ಸ್ಥಾನಗಳನ್ನು ಗೆಲ್ಲಲು ಚಿರಾಗ್ ಅವರೇ ಕಾರಣ ಎಂದು ಈಗಾಗಲೇ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಯು ಬಹತೇಕ ಸ್ಥಾನಗಳನ್ನು ಹಂಚಿಕೊಳ್ಳಲು ಮುಂದಾಗಿರುವುದರಿಂದ ಎಲ್‌ಜೆಪಿಗೆ ಅಷ್ಟು ಸ್ಥಾನಗಳು ಸಿಗುವುದು ಕಷ್ಟಸಾಧ್ಯ. ಇನ್ನೊಂದೆಡೆ ಚಿರಾಗ್, ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಸದ್ದೆಬ್ಬಿಸಿದ್ದಾರೆ. ಆದರೆ ಖಾಸಗಿಯಾಗಿ ತಮ್ಮ ತಂದೆಯನ್ನು ಮತ್ತು ಬಿಜೆಪಿಯನ್ನು ಎದುರು ನೋಡುತ್ತಿದ್ದಾರೆ. ತಂದೆ ಲೋಕಸಭೆಗೆ ಸ್ಪರ್ಧಿಸುವುದು ನಿಲ್ಲಿಸಿ, ರಾಜ್ಯಸಭಾ ಮಾರ್ಗದ ಮೂಲಕ ಸಂಸದರಾಗಬೇಕು ಎನ್ನುವುದು ಚಿರಾಗ್ ಬಯಕೆ. ಆದರೆ ಇದನ್ನು ಪಾಸ್ವಾನ್ ಕೇಳುತ್ತಿಲ್ಲ ಎನ್ನಲಾಗಿದ್ದು, ಲೋಕಸಭೆಗೆ ಸ್ಪರ್ಧಿಸಲು ಬಯಸಿದ್ದಾರೆ. ಅಂದರೆ ಚಿರಾಗ್ ಅವರನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಮುಖಂಡ ಎಂದು ಬಿಂಬಿಸಿದ್ದರೂ, ವಾಸ್ತವವಾಗಿ ಅಧಿಕಾರ ಇನ್ನೂ ರಾಮ್‌ವಿಲಾಸ್ ಕೈಯಲ್ಲಿದೆ.


ನಡೆದಂತೆ ನುಡಿವ ಸೀತಾರಾಂ
ತಮ್ಮ ಸಿದ್ಧಾಂತಕ್ಕೆ ಅಂಟಿಕೊಳ್ಳುವಲ್ಲಿ ಮತ್ತು ಎಲ್ಲ ವಿಷಯಗಳ ಬಗ್ಗೆಯೂ ವಾದಿಸುವುದರಲ್ಲಿ ಕಮ್ಯುನಿಸ್ಟರು ಹೆಸರುವಾಸಿ. ಕೆಲವೊಂದು ಅಪ್ರಸ್ತುತ ಎನಿಸುವ ಕಮ್ಯುನಿಸ್ಟ್ ಸಿದ್ಧಾಂತಗಳ ಪರವಾಗಿಯೂ ವಾದಿಸುತ್ತಾರೆ. ಕೆಲವರು ಪ್ರತಿಯೊಂದನ್ನೂ ಸಂದರ್ಭಕ್ಕೆ ಅನುಸಾರವಾಗಿ ಪರಿವರ್ತಿಸಿಕೊಂಡು, ತಮ್ಮ ಮಾತು ಕೇಳುವವರಿದ್ದಾರೆ ಎಂದು ತೋರ್ಪಡಿಸಿಕೊಳ್ಳುತ್ತಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ರಾಜಕೀಯ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ಕಾರ್ಯಸಾಧು ಎನಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಖ್ಯಾತರು. ಮಾಧ್ಯಮಗಳ ಜತೆಗೆ ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಯೆಚೂರಿಯವರನ್ನು, ಶ್ರೀಮಂತ ಉದ್ಯಮಿ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಮುಖಂಡ ಜಾಕ್ ಮಾ ಬಗ್ಗೆ ಕೇಳಲಾಯಿತು. ಯೆಚೂರಿಯವರ ಅಭಿಪ್ರಾಯ ಕೇಳಿದಾಗ, ಜಾಕ್ ಅವರು ಕಮ್ಯುನಿಸ್ಟ್ ಪಕ್ಷದ ನಾಯಕರು ಎನ್ನುವ ಅರಿವೇ ತಮಗಿಲ್ಲ ಎಂದು ಮೊದಲು ಹೇಳಿದರು. ಬಳಿಕ ಜಾಕ್ ಅವರು ಅತ್ಯಂತ ಯಶಸ್ವಿ ಉದ್ಯಮಿ ಎಂದು ಹೇಳಿದರು. ಇದು ಬಂಡವಾಳಶಾಹಿ ವ್ಯವಸ್ಥೆಯ ಮೇಲೆ ಸಮಾಜವಾದದ ಶ್ರೇಷ್ಠತೆಯನ್ನು ತೋರಿಸುತ್ತದೆ. ಸಮಾಜವಾದದ ಲಾಭಕ್ಕಾಗಿ ಹೇಗೆ ಬಂಡವಾಳಶಾಹಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸುತ್ತದೆ ಎಂದು ಯೆಚೂರಿ ಹೇಳಿದರು. ಯೆಚೂರಿಯವರ ಸ್ಪಿನ್ ಮೋಡಿ, ಹಲವು ಮಂದಿ ಶ್ರೋತೃಗಳನ್ನು ಸ್ಟಂಪ್ ಮಾಡಿದ್ದಂತೂ ನಿಜ. ಯೆಚೂರಿಯವರ ಮಾತು ಕೇಳಿ ಹಲವರು ದೊಡ್ಡದಾಗಿ ನಕ್ಕರು. ಇದಕ್ಕಿಂತ ಹೆಚ್ಚಾಗಿ ಇದನ್ನು ಹೇಳುವಾಗ ಸ್ವತಃ ಯೆಚೂರಿಯವರ ಮುಖದಲ್ಲೇ ನಗು ಕಾಣಿಸಿಕೊಂಡಿತು.


ಮಮತಾ ಕಠಿಣ
ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ ವಿರೋಧಿಸುವ ರಾಜಕೀಯ ಪಕ್ಷಗಳು ನವೆಂಬರ್ 22ರಂದು ಹೊಸದಿಲ್ಲಿಯಲ್ಲಿ ಸಭೆ ಸೇರಿ, 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾವಿತ ಜಂಟಿ ರಂಗ ರಚಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದವು. ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅತ್ಯುತ್ಸಾಹದಿಂದ ಕೆಲ ವಾರ ಮೊದಲೇ ಇದನ್ನು ಘೋಷಿಸಿದ್ದರು. ಆದರೆ ಈ ಪರಿಕಲ್ಪನೆ ಈಗಷ್ಟೇ ಹುಟ್ಟಿಕೊಂಡಿದ್ದು, ನಾಯ್ಡು ಅವರು ಎಷ್ಟೇ ಪ್ರಯತ್ನಿಸಿದರೂ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸುವಂತೆ ಮನವೊಲಿಸುವುದು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳುತ್ತವೆ. 22ರ ಸಭೆ ಮೂಲಭೂತವಾಗಿ, ಪ್ರಸ್ತಾವಿತ ಬಿಜೆಪಿ ವಿರೋಧಿ ವೇದಿಕೆಯ ಸ್ವರೂಪ ಹಾಗೂ ರಚನೆ ಬಗ್ಗೆ ಗಮನ ಹರಿಸಬೇಕಿತ್ತು ಹಾಗೂ ಈ ಉಪಕ್ರಮವನ್ನು ಮುನ್ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಬೇಕಿತ್ತು. ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳ ಅಂದರೆ ಅಧಿಕೃತ ಏಜೆನ್ಸಿಗಳಾದ ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ವಿರೋಧಿ ಮುಖಂಡರನ್ನು ಬಗ್ಗುಬಡಿಯಲು ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ನೋಟು ನಿಷೇಧದ ದುಷ್ಪರಿಣಾಮಗಳು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿತ್ತು. ಇದೀಗ ಡಿಸೆಂಬರ್ 11ನ್ನು ಅಂದರೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನವನ್ನು ಸಭೆಗೆ ಹೊಸ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಈ ಸಭೆ ಕೂಡಾ ಮಮತಾಗೆ ಖುಷಿ ಕೊಟ್ಟಂತಿಲ್ಲ. ಅವರ ಮುಖ್ಯವಾದ ಅಭಿಪ್ರಾಯವೆಂದರೆ, ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದಷ್ಟೂ, ಪ್ರಧಾನಿಯಾಗುವ ತಮ್ಮ ಅವಕಾಶ ಕಡಿಮೆಯಾಗುತ್ತದೆ ಎನ್ನುವುದು. ಮೈತ್ರಿಕೂಟದಲ್ಲಿ ಪ್ರತಿ ಪಕ್ಷಕ್ಕೂ ಸಮಾನ ಅವಕಾಶ ಸಿಗಬೇಕು ಎಂಬ ಕಠಿಣ ಚೌಕಾಶಿಗೆ ಮಮತಾ ಇಳಿದಿದ್ದಾರೆ. ಮಮತಾರಂಥ ಮುಖಂಡರ ಜತೆ ವ್ಯವಹರಿಸುವುದು ನಾಯ್ಡು ಅವರಿಗೆ ಕಠಿಣ ಎನಿಸಿದೆ. ಅಂತಿಮವಾಗಿ ಅವರನ್ನು ಮನವೊಲಿಸಲಾಗುತ್ತದೆಯೇ ಎನ್ನುವುದನ್ನು ಕಾದುನೋಡಬೇಕು.


ಶಿವರಾಜ್ ಕಥೆ ಮುಗಿಯಿತೇ?
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನವಾದ ಡಿಸೆಂಬರ್ 11ರಂದು ಯಾರು ಗೆಲ್ಲುತ್ತಾರೆ ಎನ್ನುವ ಖಾತ್ರಿ ಬಹಳಷ್ಟು ಮಂದಿಗೆ ಇಲ್ಲ. ಆದರೆ ಮಧ್ಯಪ್ರದೇಶ ಸಚಿವಾಲಯದ ಬಹಳಷ್ಟು ಮಂದಿ ಪ್ರಮುಖ ಅಧಿಕಾರಿಗಳು ಗೈರುಹಾಜರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಶಿವ ರಾಜ್ ಸಿಂಗ್ ಚೌಹಾಣ್ ಅವರಿಗೆ ಆಪ್ತರು ಎನ್ನಲಾದ ಕೆಲ ಅಧಿಕಾರಿಗಳು, ಸ್ವೀಡನ್, ದಕ್ಷಿಣ ಆಫ್ರಿಕಾ, ಯುಎಇ, ಸಿಂಗಾಪುರ ಹೀಗೆ ವಿದೇಶಗಳಿಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಮತ್ತೆ ಕೆಲ ಬಾಬೂಗಳು ಸುದೀರ್ಘ ರಜೆಯಲ್ಲಿ ತೆರಳಿದ್ದಾರೆ. ಅನೌಪಚಾರಿಕ ಮಟ್ಟದಲ್ಲಿ ಕೂಡಾ ಹಾಲಿ ಆಡಳಿತಕ್ಕೆ ನೆರವು ನೀಡುವ ಉತ್ಸಾಹ ಅವರಲ್ಲಿಲ್ಲ. ಚುನಾವಣೆಯ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎನ್ನುವ ಸುಳಿವು ಉನ್ನತ ಅಧಿಕಾರಿಗಳಿಗೆ ಸಿಕ್ಕಿದೆಯೇ? ಸಿಕ್ಕಿರಬಹುದು; ಸಿಗದಿರಲೂಬಹುದು. ಕಳೆದ ಬಾರಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆದ ಬಳಿಕ ಕೂಡಾ ಇಂಥದ್ದೇ ಊಹಾಪೋಹಗಳಿದ್ದವು. ಮಾಯಾವತಿಯನ್ನು ಹೊಸ ಸಿಎಂ ಆಗಿ ಸ್ವಾಗತಿಸಲು ಕೆಲ ಉನ್ನತ ಅಧಿಕಾರಿಗಳು ಸಜ್ಜಾಗಿದ್ದರು ಹಾಗೂ ಅವರನ್ನು ಭೇಟಿ ಮಾಡಿದ್ದರು. ಆದರೆ ಫಲಿತಾಂಶ ಬಂದಾಗ ಬಿಜೆಪಿ ಭರ್ಜರಿ ಬಹುಮತ ಗಳಿಸಿತು. ಪ್ರತಿ ಬಾರಿ ಅಧಿಕಾರಿಗಳ ಊಹೆ ಸರಿಯಾಗುತ್ತದೆ ಎನ್ನುವಂತಿಲ್ಲ. ಆದರೆ ಬಹಳಷ್ಟು ಬಾರಿ ಕೆಲವರ ಊಹೆ ಸರಿಯಾಗಬಹುದು.


ತಿವಾರಿ ಹಾಸ್ಯಪ್ರಜ್ಞೆ
ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ, ಆದರೆ ಪಕ್ಷದ ಕೆಲ ನಾಯಕರು ತಮ್ಮ ಮಾರ್ಗದಲ್ಲಿ ಬಂದ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಟಿವಿ ಕ್ಯಾಮರಾಮನ್‌ಗಳು ಮೈಕ್ ಕೇಬಲ್‌ಗಳನ್ನು ಕಳಚಲು ಆರಂಭಿಸಿದಾಗ, ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಇದನ್ನು ತಕ್ಷಣ ಗಮನಿಸಿದರು. ಈ ಪತ್ರಿಕಾಗೋಷ್ಠಿಯ ವಿವರಗಳು ಸುದ್ದಿ ಬುಲೆಟಿನ್‌ಗಳಲ್ಲಿ ಪ್ರಸಾರವಾಗುವುದಿಲ್ಲ ಎನ್ನುವುದರ ಸ್ಪಷ್ಟ ಸಂದೇಶ ಅದಾಗಿತ್ತು. ಸಮಾಧಾನದಿಂದಲೇ ತಿವಾರಿ, ‘‘ಪತ್ರಿಕಾಗೋಷ್ಠಿಯನ್ನು ಪ್ರದರ್ಶಿಸದಂತೆ ನಿಮಗೆ ಕರೆ ಬಂದಂತಿದೆ’’ ಎಂದು ಹೇಳಿದರು. ‘‘ಆದರೆ ಇಂದು ಅಧಿಕಾರದಲ್ಲಿರುವವರು ಸೂಕ್ಷ್ಮವಾಗಿ ಟಿವಿ ಚಾನಲ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ’’ ಎಂದೂ ಸೇರಿಸಿದರು. ವಾಸ್ತವವಾಗಿ ಬಿಜೆಪಿ ಸರಕಾರ ಟಿವಿ ಜಾಹೀರಾತುಗಳಿಗೆ ವ್ಯಾಪಕ ವೆಚ್ಚ ಮಾಡುತ್ತಿದೆ ಎಂಬ ವಿಷಯದ ಬಗ್ಗೆ ಗಮನ ಸೆಳೆಯುವ ಸಲುವಾಗಿ ಈ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ದೇಶದ ಪ್ರಮುಖ ಗ್ರಾಹಕ ಕಂಪೆನಿಗಳನ್ನೂ ಹಿಂದಿಕ್ಕಿ ದೇಶದ ಅತಿಹೆಚ್ಚು ಜಾಹೀರಾತು ನೀಡುವ ಸಂಸ್ಥೆಯಾಗಿ ಬಿಜೆಪಿ ಸರಕಾರ ಹೊರಹೊಮ್ಮಿದೆ ಎಂದು ಹೇಳಲು ಉದ್ದೇಶಿಸಲಾಗಿತ್ತು. ಈ ವಿಚಾರ ಪ್ರಸಾರವಾದಲ್ಲಿ, ಬಿಜೆಪಿ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಬಿಜೆಪಿ ಸದಸ್ಯರು ಚಾನಲ್‌ಗಳಿಗೆ ಕರೆ ಮಾಡಲು ಆರಂಭಿಸಿದ್ದೇನೂ ಗುಟ್ಟಾಗಿ ಉಳಿದಿಲ್ಲ. ಕೆಲ ಚಾನಲ್‌ಗಳಂತೂ ಅತಿನಿಷ್ಠರು; ಬಹುಶಃ ಆ ದಿನ ಚಾನೆಲ್‌ಗಳು ಪ್ರದರ್ಶಿಸಿದ್ದು ಇದನ್ನೇ. ಇದನ್ನೇ ತಿವಾರಿ ಬಹಿರಂಗವಾಗಿ ಗಮನಕ್ಕೆ ತಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)