ನಿರುದ್ಯೋಗಿಯ ಸ್ವಗತಗಳು
ಮುನವ್ವರ್ ಜೋಗಿಬೆಟ್ಟು
ಪದವಿ ಓದುತ್ತಿದ್ದಾಗ ಟಾಕು- ಟೀಕಿನಿಂದ ಸೂಟು ಟೈ ಕಟ್ಟಿ ನಡೆಯುತ್ತಿದ್ದ ಭಂಗಿ ನೋಡಬೇಕಿತ್ತು. ನೋಡಿದವರು ಅಂಬಾನಿಯೋ, ಬಿಲ್ಗೆಟ್ಸೋ ಅಂದು ಕೊಳ್ಳಬೇಕು. ಕಾಲೇಜು ಮುಗಿದ ಬಳಿಕ ಕೆಲಸಕ್ಕಾಗಿ ಕಷ್ಟ ಪಟ್ಟದ್ದೂ ಬಂತು. ಬಾಯಿವರೆಗೂ ಬಂದ ತುತ್ತು ಜಾರಿ ಬಿದ್ದಂತೆ ಅವಕಾಶಗಳು ತಪ್ಪಿ ಹೋಗುತ್ತಿದ್ದವು. ಒಂದು ಕಡೆ ಮನೆಯವರಿಗೆ ನೆರೆಯವರ ಕಿರುಕುಳ. ನಿಮ್ಮ ಮಗ ಇಷ್ಟೂ ಕಲಿತು ಸುಮ್ಮನೆ ಮನೆಯಲ್ಲಿ ಕುಳಿತಿದ್ದಾನಂತೆ, ನಮ್ಮ ಮಕ್ಕಳು ಏನೂ ಕಲೀಲಿಲ್ಲ ಆದ್ರೂ ಕೆಲಸದಲ್ಲಿದ್ದಾರಪ್ಪ ಎಂದು ಕಂಡ ಕಂಡವರೆಲ್ಲೆಲ್ಲಾ ಚುಚ್ಚು ಮಾತುಗಳನ್ನಾಡಿ ತಮ್ಮ ಮಕ್ಕಳಿಗೆ ಸಿಗದ ಪದವಿಯನ್ನು ಈ ರೀತಿ ಸೇಡು ತೀರಿಸುತ್ತಿದ್ದರು. ಕೆಲವೊಮ್ಮೆ ಕೋಪ ನೆತ್ತಿಗೇರಿದರೂ ಏನೂ ಹೇಳಲಾಗದೆ ಸುಮ್ಮನಾಗುತ್ತಿದ್ದುದೇ ಜಾಸ್ತಿ. ಮತ್ತೆ ಕೆಲವರದ್ದು ಬಿಟ್ಟಿ ಸಲಹೆಗಳು. ಕೆಲಸ ಸಿಗದಿದ್ದರೂ ಆದೀತು, ಕಿವಿಯಲ್ಲಿ ರಕ್ತ ಬರುವಷ್ಟು ಸಲಹೆಯನ್ನು ಮಾತ್ರ ನನಗೆ ಸಹಿಸಲಾಗುತ್ತಿರಲಿಲ್ಲ. ಸಲಹೆ ಮಿತಿ ಮೀರಿ ಕರಡಿ ನೆಕ್ಕಿದ ಕಾಲ ಬುಡದಂತೆ ಎದೆಯೊಳಗೆ ಕೆಲಸ ದಕ್ಕದ ನೋವು ಉಮ್ಮಳಿಸಿ ಬರುತ್ತಿತ್ತು. ಕಾಲೇಜು ವಾಟ್ಸ್ಆ್ಯಪ್ ಗುಂಪಿನಲ್ಲಿ ಆಗಾಗ್ಗೆ ಮೆಸೇಜು ಬರುತ್ತಿತ್ತು. ‘ಐ ಯಾಮ್ ಎಲೆಕ್ಟೆಡ್ ಆಸ್ ಫಿನಾನ್ಸ್ ಫೆಲ್ಲೋ’, ಆಡಿಟರ್... ವಗೈರೆ. ಸಹಪಾಠಿಗಳ ಬಿಲ್ಡಪ್ಗೇನೂ ಕೊರತೆ ಇರಲಿಲ್ಲ. ವಿದೇಶಕ್ಕೆ ಹೋದವರಲ್ಲಿ ಕೆಲಸ ಸಿಕ್ಕಿದ ಕೆಲವರಂತೂ ಯಾವುದೋ ಕಂಪೆನಿಗೆ ಸಿಇಒ ಎಂಬಷ್ಟು ಕೊಚ್ಚಿಕೊಂಡರು. ಈತನ್ಮಧ್ಯೆ ನಾನು ನನ್ನೊಳಗೆ ಕಳೆದು ಹೋಗುತ್ತಿದ್ದೆ. ಹಾಳಾದ ಪಿ.ಜಿ ಯಾಕಾದರೂ ಮಾಡಿದೆನೋ ಅನ್ನುವ ಕೋಪ ಹೊಗೆಯಾಡುತ್ತಿತ್ತು. ಕೆಲವೊಮ್ಮೆ ನೀವು ಓವರ್ ಕ್ವಾಲಿಫೈಡ್, ಡಿಗ್ರಿಯವರು ಸಾಕೆನ್ನುವಾಗ ಎಲ್ಲವೂ ಮೂಲೆಗೆಸೆದು ಹಿಮಾಲಯಕ್ಕೆ ಹೊರಡಬೇಕೆಂದು ಅನಿಸಿ ಬಿಡುತ್ತಿತ್ತು. ಗೆಳೆಯರಿಗೆ ಕೆಲಸ ಸಿಕ್ಕಿದ ಮೆಸೇಜ್ಗಳು ಬರುವಾಗಲೆಲ್ಲಾ ದುಃಖ ಒತ್ತರಿಸಿ ಬರುತ್ತಿತ್ತು. ಹಾಗಂತ ಅವರಿಗೆ ಕೆಲಸ ಸಿಕ್ಕಿತು, ನನಗೆ ಮಾತ್ರ ಸಿಗಲಿಲ್ಲವೆಂಬ ಸ್ವಾರ್ಥವೆಂದು ಹೇಳಲಾರೆ. ನಾನು ಹಿಂದಿಗಿಂತ ಮೌನಿಯಾಗತೊಡಗಿದೆ. ಯಾವ ಸಭೆ ಸಮಾರಂಭಕ್ಕೂ ನಾನು ಹೋಗುವುದೇ ಸಂಪೂರ್ಣ ನಿಲ್ಲಿಸಿಬಿಟ್ಟಿದ್ದೆ. ಹೋದರೆ ‘ಕೆಲಸವಾಯಿತಾ?’ ಎಂಬ ಬೇತಾಳನ ಪ್ರಶ್ನೆ ವಿಕ್ರಮಾದಿತ್ಯನ ಹೆಗಲ ಮೇಲೆ ಬಂದು ಬೀಳುತ್ತಿತ್ತು. ದಿನ ಕಳೆದಂತೆ ಖಿನ್ನನಾಗುತ್ತಿದ್ದೆ. ರಾಶಿ ಪುಸ್ತಕದ ಮಧ್ಯೆ ಓದುತ್ತಾ ದಿನ ಕೊಲ್ಲತೊಡಗಿದ್ದೆ. ಯಾರಾದರೊಬ್ಬ ಫೋನ್ ಮಾಡಿ ‘ಹೇಗಿದ್ದೀ ಮಾರಾಯ, ಕೆಲಸವಾಯಿತಾ, ಹೊಟೇಲ್ನಲ್ಲೊಂದು ವೈಟರ್ ಕೆಲಸವಿದೆ’ ಎಂದು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಜೀವಂತ ಹೂಳುತ್ತಲೇ ಇದ್ದರು. ಅಂತಹ ಕೆಲಸಕ್ಕಾಗಿ ನಾನು ಕಾಯುತ್ತಿರಲಿಲ್ಲವಾದರೂ, ನಾನು ಯಾವುದೇ ಪ್ರತಿಕ್ರಿಯೆ ಕೊಡದಿದ್ದಾಗ ಅದನ್ನೇ ನೆಪ ಮಾಡಿಕೊಂಡು ಅವರೆಲ್ಲಾ ‘ಕಲಿತವರಪ್ಪಾ, ಜಂಭ ಜಾಸ್ತಿ’ ಎಂಬ ಹಿಂಬದಿಯ ಬಾಣಗಳೂ ತೂರಿ ಬರುತ್ತಿದ್ದವು. ನಾನು ಇನ್ನಷ್ಟು ಕುಸಿಯುತ್ತಿದ್ದೆ. ಒಂದು ದಿನ ಬದುಕು ಬೆಂಗಳೂರಿಗೆ ಕೈ ಬೀಸಿ ಕರೆಯಿತು. ಮೂರು ಜನ ಗೆಳೆಯರ ಜೊತೆಗೂಡಿ, ಕೆಲಸ ಅರಸಲು ರಾಜಧಾನಿಗೆ ಹೊರಟೆವು. ನಾನು ಬೆಂಗಳೂರಿಗೆ ಮೊದಲ ಬಾರಿಗೆ ಬರುವವನು. ಉಳಿದಿಬ್ಬರಿಗೆ ಅದಾಗಲೇ ಬಂದು ಪರಿಚಯವಿದೆ. ಮಾತು, ಕಥೆ ನಡುವೆ ಹೊಟ್ಟೆ ತೊಳಸಿ ಬರುವ ಹಡಗಿನಂತಹ ಐರಾವತ ಬಸ್ಸಿನಲ್ಲಿ ವಾಂತಿ ಪುರಾಣವೆಲ್ಲಾ ನಡೆದು ಬಸ್ಸು ಮೆಜೆಸ್ಟಿಕ್ಗೆ ಬಂತು. ಮೆಜೆಸ್ಟಿಕ್ ಇಳಿದೆವು. ಅಚ್ಚರಿ ಜೊತೆ ಗಲಿಬಿಲಿ, ಎಲ್ಲಿ ಹೇಗೆ ಯಾರ ಬಳಿ ಯಾವ ದಾರಿ ಏನೂ ಗೊತ್ತಿಲ್ಲದೆ, ಸುಮ್ಮನೆ ಮೆಜೆಸ್ಟಿಕ್ ಬಸ್ಟಾಂಡಿಗೆ ನಾಲ್ಕೈದು ಸುತ್ತು ಮುಗಿಯಿತು. ಹಾಗೂ ಹೀಗೂ ಗೆಳೆಯರಿಗೆಲ್ಲಾ ಕರೆ ಮಾಡಿ ಕೇಳಿದಾಗ, ತಂಗುವ ವ್ಯವಸ್ಥೆಗಾಗಿ ಹೊಸೂರಿಗೆ ಹೋಗುವುದು ತೀರ್ಮಾನವಾಯಿತು. ಮೆಟ್ರೋ ಬಗ್ಗೆ ನಯಾಪೈಸೆ ಜ್ಞಾನವಿಲ್ಲದ ನಾವು ಹತ್ತಿದ್ದೂ ಆಯಿತು. ಇನ್ನೂ ವಸ್ತ್ರ ಬದಲಿಸಲು ಸ್ಥಳ ಸಿಗದ ನಮಗೆ ಮೆಟ್ರೋದಲ್ಲಿನ ಜನರ ಕನಿಕರದ ನೋಟ ರೇಜಿಗೆ ಹುಟ್ಟಿಸುತ್ತಿತ್ತು. ಕೆಲವರಂಥೂ ತುಂಬಿ ತುಳುಕುತ್ತಿದ್ದ ಮೆಟ್ರೋದಲ್ಲಿ ಮೈಲಿಗೆಯಾಗಬಾರದೆಂದು ನಮ್ಮಿಂದ ದೂರ ನಿಂತಿದ್ದರು. ಬಹುಶಃ ನಮ್ಮ ಅವತಾರವೂ ಅದೇ ಥರವಿತ್ತೇನೋ. ಟ್ರಾಕ್ ಸೂಟಿನಲ್ಲಿದ್ದ ನನ್ನಂತಹ ನರಪೇತಲನನ್ನು ಕಂಪೆನಿ ಕೆಲಸದವರು ಒಗ್ಗಿ ಕೊಳ್ಳುವರೇ, ಹೊಸೂರು ತಲುಪಿದ ಬಳಿಕ ಮೆಟ್ರೋದಿಂದ ಇಳಿದು ನಿರ್ಗಮ ದ್ವಾರಕ್ಕಾಗಿ ಬಾಣದ ಗುರುತು ಕಂಡಲ್ಲೆಲ್ಲಾ ಓಡಿ ಪಡಬಾರದ ಪಾಡು ಪಟ್ಟು ಹೊರ ಬಂದೆವು. ಹಾಗೂ ಹೀಗೂ ಹೊಸೂರಿನಲ್ಲಿ ಗೆಳೆಯ ತಿಳಿಸಿದ ಸ್ಥಳಕ್ಕೆ ಯಾವ ಗೂಗಲ್ ಮ್ಯಾಪ್ ಹಿಡಿದರೂ ತಲುಪಲಾಗಲೇ ಇಲ್ಲ. ಬರೀ ಟರ್ನ್ ರೈಟ್, ಅಂದಾಗ ಬಲಕ್ಕೆ ತಿರುಗೀ ಅಲ್ಲೇ ಸರ್ಕಲ್ ಸುತ್ತಿದ್ದಲ್ಲದೆ ಅದು ಕಳೆದು ಮುಂದೆ ಹೋಗಲು ಆಗಲೇ ಇಲ್ಲ. ಕೊನೆಗೂ ಒಂದೂವರೆ ಗಂಟೆಗಳ ಕಾಲ ಹಂದಾಡಲಾಗದ ನಮಗೆ ಕಾಲ್ ಮಾಡಿ ಮಾಡಿ ದಾರಿ ಹೇಳಿ ಗಂಟಲು ನೋವು ಮಾಡಿಕೊಂಡು ಸೋತ ಗೆಳೆಯ ಮೆಜೆಸ್ಟಿಕ್ನಲ್ಲೇ ರೂಮಿನ ಏರ್ಪಾಡು ಮಾಡಿದ. ಮತ್ತೆ ಮೆಟ್ರೋ ಹತ್ತಿ ಮೆಜೆಸ್ಟಿಕ್ನ್ನಲ್ಲಿಳಿದು ಸುತ್ತಿ ಬಳಸಿ ತಂಗುವ ರೂಂಗೆ ಮಧ್ಯಾಹ್ನ ತಲುಪಿದೆವು. ನಮ್ಮ ಗಂಭೀರ ಅವಸ್ಥೆ ನೋಡಿ, ವಾರ್ಡನ್ಗೆ ಪಾಪ ಅನ್ನಿಸಿರಬೇಕು ಸ್ನಾನ ಮಾಡಿ ಬರುವಂತೆ ಹೇಳಿ ರೂಂ ಮಾಡಿಕೊಟ್ಟರು. ಅಲ್ಲಿಂದ ಆರಂಭವಾಯಿತು, ನಮ್ಮ ಅಲೆದಾಟ. ಕೆಲಸ ಕೆಲಸವೆಂದು ಇಡೀ ಬೆಂಗಳೂರಿನ ಇಂಚಿಚೂ ಸುತ್ತಿದೆವು. ಬಿಎಂಟಿಸಿ ಬಸ್ಸಲ್ಲಿ ಪಾಸ್ ತೆಗೆದು ದಿನವಿಡೀ ಸುತ್ತುವುದೇ ಆಯಿತು. ಯಾರಿಗಾದರೂ ಒಬ್ಬನಿಗೆ ಒಂದು ಜಾಬ್ ಪೋರ್ಟಲ್ ಮೆಸೇಜ್ ಬಂದರೆ ಸಾಕು ಮೂವರೂ ಯುದ್ಧಕ್ಕೆ ಹೊರಟಂತೆ ಹೊರಟು ಬಿಡುತ್ತಿದ್ದೆವು. ಬಿಎಂಟಿಸಿ ಬಿಟ್ಟರೆ ನಾವು ಉಳಿದಂತೆ ನಡೆದದ್ದೇ ಹೆಚ್ಚು. ಬಸ್ಸು ಹೋಗದ ದಾರಿಯಲ್ಲೆಲ್ಲಾ ನಡೆದೇ ಹೋಗುತ್ತಿದ್ದೆವು. ಅದರ ಮಧ್ಯೆ ಕೆಲವು ಸ್ವಾರಸ್ಯಕರ ಘಟನೆಗಳೂ ಇದ್ದವು.
ನನ್ನ ಜೊತೆಗಿದ್ದ ಇತರ ಇಬ್ಬರೆಂದರೆ, ಹಾರಿಸ್ ಮತ್ತು ಅರ್ಫಾಝ್. ಅರ್ಫಾಝ್ ಅಂದರೆ ಸ್ವಲ್ಪ ತುರ್ತಿನ ಮನುಷ್ಯ. ರಸ್ತೆ ದಾಟಬೇಕಾದರೆ ಅವನು ಚಡಪಡಿಸುವ ಪರಿ ನೋಡಿದರೆ ಎಷ್ಟು ಪರಿಣಿತ ಚಾಲಕನಿಗೂ ಡ್ರೈವಿಂಗ್ ಮರೆತು ಹೋಗುವಂತಿತ್ತು. ಅರ್ಧ ರಸ್ತೆ ತನಕ ಹೋಗುವುದು, ಮತ್ತೆ ಹಿಂದೆ ಓಡಿ ಬರುವುದು. ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ನಾವಿಬ್ಬರೂ ಅವನನ್ನು ಮಧ್ಯೆ ಹಾಕಿಕೊಂಡು ಎರಡೂ ತೋಳುಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದೆವು. ಒಮ್ಮೆ ಅದ್ಭುತವೊಂದು ಘಟಿಸಿತು. ನನ್ನ ಮೊಬೈಲ್ಗೆ ಅನಾಮಿಕ ನಂಬರಿನಿಂದ ಕರೆಯೊಂದು ಬಂತು. ‘‘ಸರ್ ನೀವು ಕೆಲಸ ಹುಡುಕುತ್ತಿದ್ದೀರಾ?’’ ಆ ಕಡೆಯಿಂದ ಸೌಮ್ಯವಾದ ಹೆಣ್ಣು ಧ್ವನಿ. ‘‘ಹೂ ಮೇಡಂ, ತುಂಬಾ ದಿನವಾಯಿತು, ಹುಡುಕುತ್ತಿದ್ದೇವೆ’’.
‘‘ಹಾಗಾದರೆ ನಮ್ಮ ಕಂಪೆನಿಯಲ್ಲಿ ನಾಳೆ ಇಂಟರ್ವ್ಯೆ ಇದೆ ಬರಹುದಾ?’’
‘‘ಖಂಡಿತಾ ಮೇಡಂ, ನಿಮ್ಮ ಅಡ್ರೆಸ್ ಕೊಡಬಹುದಾ?’’ ಬೆಂಗಳೂರಿನಲ್ಲಿ ಏನೇನೂ ಪರಿಚಯವಿಲ್ಲದಿದ್ದ ನನಗೆ ಆ ಅಡ್ರೆಸ್ ಒಂದು ಸವಾಲಾಗಿತ್ತು. ಗೆಳೆಯನಿಗೆ ಫೋನ್ ಕೊಟ್ಟು ಅಡ್ರೆಸ್ ನೋಟ್ ಮಾಡಲು ಹೇಳಿದೆ. ಮರುದಿನ ಇಂಟರ್ವ್ಯೆಗೆ ಹೊರಟೆವು. ಇಂಟರ್ವ್ಯೆ ಒಂದು ಹೊಟೇಲ್ನಲ್ಲಿ ನಡೆಯಿತು. ಯಾವನೋ, ಆಂಗ್ಲೋ ಇಂಡಿಯನ್ ಸಂದರ್ಶನ ನಡೆಸುತ್ತಿದ್ದ. ಫಾರಿನ್ ಆಕ್ಸೆಂಟ್ನಲ್ಲಿ ಇಂಗ್ಲಿಷ್ ಮಾತಾಡುತ್ತಾ, ಕೊನೆಗೆ ನಮ್ಮ ಮೂವರಲ್ಲಿ ನನ್ನನ್ನು ಆಯ್ಕೆ ಮಾಡಿದ್ದೇನೆಂದೂ ಹೇಳಿದ, ಉಳಿದಂತೆ ಉಳಿದ 50 ಮಂದಿಯಲ್ಲಿ ನಾಲ್ಕೈದು ಜನರನ್ನೂ. ನನ್ನ ಖುಷಿಗೆ ಪಾರವಿರಲಿಲ್ಲ. ಅದೇ ನೆಪದಲ್ಲಿ ಪಾರ್ಟಿ ಕೊಡಿಸಬೇಕೆಂದು ಗೆಳೆಯರೂ ದಂಬಾಲು ಬಿದ್ದರು. ಇಂಟರ್ವ್ಯೆ ಮುಗಿಸಿ ಅಲ್ಲಿಂದ ನೇರ ಶಿವಾಜಿನಗರಕ್ಕೆ ಹೋಗಿ ಒಂದು ಪಾರ್ಟಿಯೂ ಆಯಿತು. ಹಾಗೆಯೇ ಅಲ್ಲೇ ಹತ್ತಿರದಲ್ಲಿ ಸುತ್ತಿ ಆ ರಾತ್ರಿ ರೂಂಗೆ ಬಂದೆವು. ಉಳಿದ ರೂಂ ಮೇಟ್ಸ್ಗಳಿಂದ ‘ಕಂಗ್ರಾಜುಲೇಶನ್’ ಮಹಾ ಪೂರವೇ ಹರಿದು ಬಂತು. ನಾನು ಆ ರಾತ್ರಿ ಸುಮ್ಮನೆ ಆ ಸಂಸ್ಥೆಯ ಬಗ್ಗೆ ಒಮ್ಮೆ ಗೂಗಲಿನಲ್ಲಿ ಜಾಲಾಡಿದೆ. ಎರಡನೇ ಹಂತದಲ್ಲಿ ಕಂಪೆನಿ ಬಗ್ಗೆ ಹೇಳಿದರೆ ಏನಾದರೂ ಹೇಳಬೇಕಲ್ವಾ. ನನಗೆ ನೋಡಿ ಅಳು ಬರುವುದೊಂದೇ ಬಾಕಿ! ಅಲ್ಲಿ ಕಂಪೆನಿಯ ಬಗ್ಗೆ ಜನರು ಬರೆದ ರಿವೀವ್ ಒಂದೂ ಪೂರಕವಾಗಿರಲಿಲ್ಲ. ಅಂದ್ರೆ ಪಕ್ಕಾ ಫ್ರಾಡ್ ಸಂಸ್ಥೆಯಾಗಿತ್ತು. ಗೂಗಲ್ಗೆ ಧನ್ಯವಾದ ಸಮರ್ಪಿಸಿ ಹಾಸಿಗೆಗೆ ಬಿದ್ದೆ. ಅಂತೂ ಪಾರ್ಟಿಗಾಗಿ ಅನ್ಯಾಯವಾಗಿ ನಾಲ್ಕು ದಿನ ಓಡಾಡಬಹುದಾದ ಕಾಸೂ ಕಳೆದುಕೊಂಡದ್ದನ್ನು ನೆನೆಸಿಕೊಂಡರೆ ನಿದ್ದೆಯೂ ಹತ್ತಲಿಲ್ಲ. ಮರುದಿನ ಗೆಳೆಯರಿಗೆ ತಿಳಿಸಿದೆ. ಯಾರೊಬ್ಬರೂ ನನ್ನನ್ನು ಕಿಚಾಯಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಮತ್ತೆ ಸಿ.ವಿ. ಹಿಡಿದು ಸುತ್ತಾಟ ಆರಂಭಿಸಿದೆವು.
ಇನ್ನೊಮ್ಮೆ ಹೀಗೊಂದು ಅನುಭವವಾಯಿತು. ಯಾರೋ ಗೆಳೆಯರು ಹೇಳಿ ಕೊಟ್ಟಂತೆ ಕೆಲವು ಕನ್ಸಲ್ಟೆನ್ಸಿ ಕೆಲಸ ಮಾಡಿ ಕೊಡುತ್ತದೆಯೆಂದು ನಂಬಿ ಯಾವುದೋ ಮೂಲೆಗೆ ಹೊರಟಿದ್ದೆವು. ಸುಮಾರು ತಾಸುಗಳ ಕಾಲ ಬಿಎಂಟಿಸಿ ನಮ್ಮನ್ನು ನುಗ್ಗು ನುರಿ ಮಾಡಿ ಅಪರಾಹ್ನ ಮೂರು ಗಂಟೆಗೆ ಯಾವುದೋ ಮೂಲೆಗೆ ತಲುಪಿಸಿತು. ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಸಂಪೂರ್ಣ ನಜ್ಜು ಗುಜ್ಜಾಗಿದ್ದ ನಾವು ಆಕಳಿಸುತ್ತಾ ಕನ್ಸಲ್ಟೆನ್ಸಿ ತಲುಪಿದೆವು. ಬಹಳ ನಿರೀಕ್ಷೆಯಿಂದ ಒಳ ಹೊಕ್ಕೆವು. ಇಂಟರ್ವ್ಯೆ ಮಾಡಿ ಮುಗಿಯಿತು. ಅಷ್ಟಕ್ಕೇ ಯಾರೋ ಒಬ್ಬ ಹುಡುಗ ಫೈಲ್ ಹಿಡಿದುಕೊಂಡು ನಮ್ಮೆದುರಿಗೆ ಬಂದ. ನಮ್ಮನ್ನು ಮಾತಾನಾಡಿಸುತ್ತಿದ್ದವಳು ಒಂದ್ನಿಮಿಷ ಎಂದು ಕ್ಷಮೆ ಕೇಳಿ ಅವನ ಕಡೆ ತಿರುಗಿ ಆತನನ್ನು ಮಾತಾನಾಡಿಸ ತೊಡಗಿದಳು. ‘ಹೌದು ಮೇಡಂ, ಜಾಬ್ ಸಿಕ್ತು’ ಆಗಂತುಕ ಉಸುರಿದ. ‘‘ವಾವ್ ಕಂಗ್ರಾಟ್ಸ್ ಯಾವಾಗ ಜಾಯಿನಿಂಗ್’’ ‘‘ನೆಕ್ಸ್ಟ್ ಮಂಡೆ’’ ಎಲ್ಲವೂ ನಮಗೆ ಕೇಳುವಂತೆ ಇಬ್ಬರೂ ಮಾತಾಡಿದರು. ಬಹಳ ಖುಷಿಯಿಂದ ಕೈ ಮುಗಿಯುತ್ತಾ ಆತ ಹೊರಟು ಹೋದ.
‘‘ಆ ಹುಡ್ಗ ಇಲ್ಲೇ ಬಂದಿದ್ದು, ಕೆಲಸ ಗಿಟ್ಟಿಸಿಕೊಂಡ. 75 ಕೊಟ್ರೆ ಸಾಕು. ನಿಮ್ಗೂ ಜಾಬ್ ಕನ್ಪರ್ಮ್ ಮಾಡಿ ಕೊಡ್ತೀವಿ .25 ಸಾವಿರ ಅಡ್ವಾನ್ಸ್ ಕೊಡಿ, ಜೆ.ಪಿ ಮಾರ್ಗನ್ಸ್, ಎಕ್ಸೆಂಚರ್ ಯಾವ ಕಂಪೆನಿ ಬೇಕಾದ್ರೂ ಮಾಡಿಕೊಡ್ತೀವಿ, ಎಚ್ಆರ್ಗಳೆಲ್ಲಾ ನಾವು ಹೇಳಿದಂತಿರುವುದು, ಜಾಬ್ ಆದ್ರೆ ಉಳಿದ 50 ಕಟ್ಟಿದ್ರೆ ಸಾಕು’’
ಆಕೆ ಪುಸಲಾಯಿಸುವಂತೆ ಮಾತನಾಡಿದಳು.
‘ಸರಿ ನಿಮ್ಮಪ್ಪ ಏನು ಮಾಡ್ತಾರೆ?’ ಎಂದು ಕೇಳಿದಳು. ಎಲ್ಲಿಂದ ಆ ಸುಳ್ಳು ಹೊಳೆಯಿತೋ ಗೊತ್ತಿಲ್ಲ. ‘‘ರಿಟೈರ್ಡ್ ಪೋಲಿಸ್ ಆಫಿಸರ್’’ ಎಂದೆ. ಅವಳು ಮುಖ ಸ್ವಲ್ಪ ವಿವರ್ಣವಾಯಿತು. ‘‘ನೀವೇ ಡಿಸೈಡ್ ಮಾಡಿ ಬನ್ನಿ’’ ಎಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಳು. ಅವಳು ಕೇಳಿದಷ್ಟು ಹಣವಿರುತ್ತಿದ್ದರೆ ನಾವು ಇಷ್ಟು ತುರ್ತಾಗಿ ಕೆಲಸ ಹುಡುಕುತ್ತಿರಲಿಲ್ಲವೇನೋ. ಅರ್ಫಾಝ್ ಹೇಗಾದ್ರೂ ಮಾಡಿ 75 ಸಾವಿರ ಕೊಡುವ ಎಂಬಷ್ಟರ ಮಟ್ಟಿಗೆ ಕನ್ಫೂಸಾಗಿ ಹೋಗಿದ್ದ. 75 ಸಾವಿರ ಕೊಟ್ಟು ಪಂಗನಾಮ ಹಾಕಲೂಬಹುದು, ಯಾ ಖುದ್ದು ಎಚ್ಆರ್ ಜೊತೆ ಒಳ ಸಂಚೂ ಇದ್ದರೂ ಇರಬಹುದು. ನಾವಂತೂ ರಿವೀವ್ ನೋಡಿಕೊಂಡು ಮತ್ತೆ ಕನ್ಸಲ್ಟೆನ್ಸಿಯ ಹಣೆ ಬರಹವನ್ನೂ ತಿಳಿದೆವು.
ಹಾಗೆಯೇ ಬೆಂಗಳೂರಿನಲ್ಲಿ ಎರಡೂ ತಿಂಗಳು ಅಲೆದು, ಶೂ ಸವೆದು ಹೋಯಿತೇ ವಿನಃ ಯಾವ ಕೆಲಸವೂ ಕೈಗೂಡಲಿಲ್ಲ. ಈ ಮಧ್ಯೆ ಬೆಂಗಳೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ಕೊಟ್ಟು ಮುಗಿದಿತ್ತು. ಜಯನಗರ 4ನೇ ಬ್ಲಾಕಿನಿಂದ ಬಿಲಾಲ್ ಮಸೀದಿ ವರೆಗೂ ಕಾಲ್ನಡಿಗೆಯಲ್ಲೇ ಯಾರೋ ಮಾಹಿತಿ ಕೊಟ್ಟ ಪ್ರಕಾರ ದೂರದ ರಸ್ತೆಯಲ್ಲಿ ನಡೆದು ಸೇರಿದ್ದೆವು. ಹೆಬ್ಬಾಳ, ಇಲೆಕ್ಟ್ರಾನಿಕ್ ಸಿಟಿ, ಮಾರ್ತಹಳ್ಳಿ ಎಲ್ಲಾ ರಸ್ತೆಯೂ ನಡೆದೇ ಮುಗಿಸಿದೆವು. ಸರಾಸರಿ 5 ರಿಂದ 7 ಕಿ.ಮೀ. ದಿನವೂ ನಡೆಯುತ್ತಿದ್ದೆವು. ದಾರಿ ತಪ್ಪಿ ಗಲ್ಲಿ ಗಲ್ಲಿ ತಿರುಗಿದೆವು. ಮಧ್ಯರಾತ್ರಿ ಕೋಣೆ ತಲುಪುವಷ್ಟು ಸಿಕ್ಕು ಸಿಕ್ಕಾದ ಟ್ರಾಫಿಕ್ನಲ್ಲೂ ಜಖಂ ಆದೆವು. ಹಾಗೂ ಹೀಗೂ ಕೆಲಸಕ್ಕಾಗಿ ಕಲ್ಲಿಕೋಟೆ, ಮಂಗಳೂರು, ಬೆಂಗಳೂರು, ಕೊಚ್ಚಿ ಬಹುತೇಕ ನಗರಗಳೂ ಸುತ್ತಿ ಬಂದೆವು. ತಿಗಣೆ ತುಂಬಿದ ರೂಂಗಳಲ್ಲಿ ಮಲಗಿದೆವು. ಕೊನೆಗೊಂದು ದಿನ ಕೆಲಸ ದಕ್ಕಿತು. ಆದರೆ ಯಾವುದೆಲ್ಲಾ ಕಷ್ಟಗಳು ಅನುಭವಿಸಿದೆವೋ ಎಲ್ಲವೂ ಮರೆತು ಹೋಗುವಷ್ಟು ದಿನಗಳು ಮುಂದೆ ಸಾಗಿದೆ. ಕೆಲವೊಮ್ಮೆ ಇವೆಲ್ಲಾ ನೆನೆದುಕೊಂಡರೆ ಹುಚ್ಚು ಹುಚ್ಚಾಗಿ ನಗು ಬರುತ್ತದೆ. ಆತ್ಮಸ್ಥೈರ್ಯ, ಬದುಕುವ ಛಲ ನಿರುದ್ಯೋಗಿಯಾಗಿದ್ದಾಗಿನ ಚುಚ್ಚು ಮಾತುಗಳು, ನೋವುಗಳನ್ನು ಅಳಿಸಿ ಹಾಕಿದೆ. ಬರೆಯಲು ಕುಳಿತರೆ ಒಂದು ದೊಡ್ಡ ಕಾದಂಬರಿಯಾಗುವಷ್ಟು ಅನುಭವ ಕಥನಗಳು ಆ ಆರು ತಿಂಗಳಲ್ಲಿ ನನಗೆ ದಕ್ಕಿದ್ದವು. ಬಹುಶಃ ಈ ಅನುಭವ ಎಲ್ಲರದ್ದೂ ಆಗಿರಬೇಕು. ಎಲ್ಲರಿಗೂ ಕೆಲಸ ಸಿಕ್ಕೇ ಸಿಗುತ್ತದೆ, ಸ್ವಲ್ಪ ತಾಳ್ಮೆ ಬೇಕಷ್ಟೇ ಎಂಬ ಪುಗಸಟ್ಟೆ ಸಲಹೆ ನಾನೂ ನೀಡಬಲ್ಲೆ. ಕೆಲವೊಮ್ಮೆ ಇಷ್ಟೆಲ್ಲಾ ಅನುಭವಿಸಿದ್ದು ನಾವೇನಾ? ಅನ್ನುವಷ್ಟು ಮರೆತು ನಾವು ನೀವೆಲ್ಲಾ ಬದುಕಿನಲ್ಲಿ ಮುಂದೆ ಸಾಗುತ್ತೇವೆ.