ಆಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರೀಡೆ: ಡಾ.ಸ್ನೇಹಲ್ ಕರಿಯಾ
ಬೆಂಗಳೂರು, ಡಿ.2: ಅಬ್ಯಾಕಸ್ ಮೆದುಳಿಗೆ ಸಂಬಂಧಿಸಿದ ಶ್ರೇಷ್ಠ ಕ್ರೀಡೆಯಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಯುಸಿಎಂಎಎಸ್ ಅಬ್ಯಾಕಸ್ ಸಂಸ್ಥೆಯ ಭಾರತ ವಿಭಾಗದ ಅಧ್ಯಕ್ಷ ಡಾ.ಸ್ನೇಹಲ್ ಕರಿಯಾ ಅಭಿಪ್ರಾಯಿಸಿದರು.
ರವಿವಾರ ರಾಜ್ಯ ಮಟ್ಟದ 8 ನೆ ಯುಸಿಎಂಎಎಸ್ ಅಬ್ಯಾಕಸ್ ಮತ್ತು ಮಾನಸಿಕ ಅಂಕಗಣಿತ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, 4 ವರ್ಷದ ಮಗು ಕೆಲವೇ ಸೆಕೆಂಡುಗಳಲ್ಲಿ ಕಠಿಣ ಗಣಿತದ ಸಮಸ್ಯೆಗಳನ್ನು ಯಾವುದೇ ಯಂತ್ರಗಳ ಉಪಯೋಗವಿಲ್ಲದೆ ಉತ್ತರ ನೀಡುವುದು ಬಹಳ ಆಕರ್ಷಣೀಯ. ಇಂತಹ ಭೌದ್ಧಿಕ ಶಕ್ತಿಯ ವಿಕಸನ ಬಾಲ್ಯದಲ್ಲೇ ಆಗುವುದರಿಂದ ಮುಂಬರುವ ಶೈಕ್ಷಣಿಕ ಸಮಸ್ಯೆಗಳಿಂದ ವಿದ್ಯಾರ್ಥಿಗಳು ವಿಚಲಿತರಾಗುವುದು ತಪ್ಪುತ್ತದೆ ಎಂದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಲಿಷ್ಟಕರ ಗಣಿತದ ಸಮಸ್ಯೆಗಳನ್ನು ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ ಕ್ಷಣಮಾತ್ರದಲ್ಲಿ ಪರಿಹರಿಸುತ್ತಿದದ್ದು ಬಹಳ ಆಕರ್ಷಣೀಯವಾಗಿತ್ತು. ಗಣಿತಶಾಸ್ತ್ರದಲ್ಲಿ ಉನ್ನತ ಮಟ್ಟದ ಕೌಶಲ್ಯ ಪ್ರದರ್ಶಿಸಿರುವ ಈ ಮಕ್ಕಳ ಬುದ್ಧಿಮತ್ತೆ ಶ್ಲಾಘನೀಯ, ಗಣಿತದ ಸಮಸ್ಯೆಗಳ ಬಹಳ ಸುಲಭ ಪರಿಹಾರ ನೀಡುವ ಅಬ್ಯಾಕಸ್ ಪದ್ದತಿ ಇನ್ನೂ ಹೆಚ್ಚಿನದಾಗಿ ಪ್ರಚಾರ ಪಡಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
ಯುಸಿಎಂಏಎಸ್ ಕರ್ನಾಟಕದ ನ ವ್ಯವಸ್ಥಾಪಕ ನಿರ್ದೇಶಕಿ ಜಯಾ ಸಂತೋ ಬಾಯಿ ಮಾತನಾಡಿ, ರಾಜ್ಯದಲ್ಲಿ ಅಬ್ಯಾಕಸ್ಗೆ ವ್ಯಾಪಕವಾದ ಅವಕಾಶವಿದೆ. 4 ರಿಂದ 14 ವರ್ಷ ವಯಸ್ಸಿನ ಮಕ್ಕಳು ಈ ತರಬೇತಿಯನ್ನು ಪಡೆಯುವುದರಿಂದ ಅವರು ಮುಂದಿನ ಶೈಕ್ಷಣಿಕ ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯಲು ಸಾಧ್ಯ. ಶೈಕ್ಷಣಿಕ ಒತ್ತಡವನ್ನು ತಡೆದುಕೊಳ್ಳಲು ಹಾಗೂ ಬೇರೆ ವಿಷಯಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಈ ತರಬೇತಿ ಅನುವು ಮಾಡಿಕೊಡುತ್ತದೆ ಎಂದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 2000ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಹೆಚ್ಚಿನ ಮಕ್ಕಳು ಅಂಕಗಣಿತದ 200ಕ್ಕೂ ಹೆಚ್ಚು ಲೆಕ್ಕಗಳಿಗೆ ಯಾವುದೇ ಕ್ಯಾಲುಕ್ಯುಲೇಟರ್ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸದೇ ಕೇವಲ 8 ನಿಮಿಷಗಳಲ್ಲಿ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿದರು.