varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಮಾಧ್ಯಮ ರಂಗದ ಸಾಮರ್ಥ್ಯ ಮತ್ತು ವೈಫಲ್ಯಗಳು

ವಾರ್ತಾ ಭಾರತಿ : 3 Dec, 2018
ಎ.ಎಸ್.ಪುತ್ತಿಗೆ

ನಿಮ್ಮ ‘ವಾರ್ತಾ ಭಾರತಿ’ ಇಂದು ತನ್ನ ಪ್ರಯಾಣದ 15 ವರ್ಷಗಳನ್ನು ಪೂರ್ತಿ ಗೊಳಿಸಿ 16ನೇ ವರ್ಷವನ್ನು ಪ್ರವೇಶಿಸಿದೆ. ಸಂಭ್ರಮದ ಈ ಸಂದರ್ಭದಲ್ಲಿ ಮಾಧ್ಯಮ ರಂಗದ ಕುರಿತಂತೆ ಒಂದಿಷ್ಟು ಆತ್ಮಾವಲೋಕನ ಇಲ್ಲಿದೆ;

ನಮ್ಮ ಸಮಾಜದಲ್ಲಿ ಜನಸಾಮಾನ್ಯರೇ ಮಾಧ್ಯಮಗಳ ಪ್ರಧಾನ ಬಳಕೆದಾರರು. ಆದರೆ ಈ ಜನಸಾಮಾನ್ಯರು, ತಾವು ಬಳಸುವ ಮಾಧ್ಯಮಗಳಲ್ಲಿ ತಮ್ಮನ್ನು ಹುಡುಕಲು ಹೊರಟರೆ ನಿರಾಶರಾಗಬೇಕಾಗುತ್ತದೆ. ಜನಸಾಮಾನ್ಯರ ಪೈಕಿ ತುಸು ಸಂವೇದನಾಶೀಲರಾಗಿರುವವರು ತಾವು ಓದುವ ಪತ್ರಿಕೆಗಳ ಪುಟಗಳಲ್ಲಾಗಲಿ, ತಾವು ನೋಡುವ ಟಿವಿ ಸುದ್ದಿ ವಾಹಿನಿಗಳ ಪರದೆಗಳಲ್ಲಾಗಲಿ ತಮ್ಮ ಅಸ್ತಿತ್ವಕ್ಕೆ ಯಾವುದೇ ಮಾನ್ಯತೆ ಇಲ್ಲದಿರುವುದನ್ನು ಕಂಡು ಚಕಿತರಾಗುತ್ತಾರೆ. ಮಾಧ್ಯಮಗಳ ವರ್ತನೆ, ಅವುಗಳ ಧೋರಣೆಗಳು, ಪ್ರಾಶಸ್ತ್ಯಗಳು, ಅವುಗಳ ವರಸೆ ಮತ್ತು ಧಾಟಿ ಇವೆಲ್ಲಾ ಅವರಿಗೆ ತೀರಾ ನಿಗೂಢವಾಗಿ ತೋರುತ್ತವೆ. ಕೆಲವರು ಕ್ರಮೇಣ ಈ ಸನ್ನಿವೇಶಕ್ಕೆ ಒಗ್ಗಿ ಹೋಗುತ್ತಾರೆ. ತಮ್ಮ ನಿರೀಕ್ಷೆಗಳನ್ನೇ ತಿದ್ದಿಕೊಳ್ಳುತ್ತಾರೆ. ಆದರೆ ನಾವು ಬಳಸುವ ಮಾಧ್ಯಮಗಳು ನಮ್ಮನ್ನೇಕೆ ಪ್ರತಿನಿಧಿಸುವುದಿಲ್ಲ ಎಂಬ ಪ್ರಶ್ನೆ ಹೆಚ್ಚಿನ ಪ್ರಜ್ಞಾವಂತ ಜನಸಾಮಾನ್ಯರನ್ನು ನಿತ್ಯ ಕಾಡುತ್ತಿರುತ್ತದೆ.

ತಮ್ಮ ಬಳಕೆದಾರರನ್ನು ಸಾವಿರಾರು ಇತರ ವಸ್ತುಗಳ ಕಡ್ಡಾಯ ಬಳಕೆದಾರರಾಗಿ ಪರಿವರ್ತಿಸುವುದು - ಇದು ಇಂದು ನಮ್ಮ ಸಮಾಜದ ಹೆಚ್ಚಿನ ಜನಪ್ರಿಯ ಮಾಧ್ಯಮಗಳ ಪ್ರಮುಖ ಚಟುವಟಿಕೆಯಾಗಿದೆ. ನೇರವಾಗಿ ತಮ್ಮನ್ನೇ ಗುರಿಯಾಗಿಸಿ ನಡೆಯುತ್ತಿರುವ ಈ ಚಟುವಟಿಕೆ ಬಹುಕಾಲ ಅದೆಷ್ಟೋ ಮಂದಿ ಜನಸಾಮಾನ್ಯರ ಗಮನಕ್ಕೆ ಬಂದಿರುವುದಿಲ್ಲ. ಗಮನಿಸಿದರೂ ಈ ಚಟುವಟಿಕೆಯ ಪಾಶವೀಯ ಮುಖವನ್ನು ಅವರು ಕಂಡಿರುವುದಿಲ್ಲ. ಮಾಧ್ಯಮಗಳು ನಮ್ಮನ್ನು ನಮಗೆ ಅಗತ್ಯವೇ ಇಲ್ಲದ ಅದೆಷ್ಟೋ ವಸ್ತುಗಳ ಚಟ ಹಿಡಿಸಿ, ಅವುಗಳ ಶಾಶ್ವತ ಗ್ರಾಹಕರಾಗಿ ಮಾತ್ರವಲ್ಲ ದಾಸರಾಗಿ ಮಾರ್ಪಡಿಸಿವೆ ಎಂಬುದನ್ನು ಜನ ಸಾಮಾನ್ಯರು ಗುರುತಿಸಿರುವುದಿಲ್ಲ. ಸೈಕಲ್ ಖರೀದಿಸುವಷ್ಟು ದುಡ್ಡಿದ್ದರೆ, ಸಾಲ ಮಾಡಿ ಬೈಕು, ಕಾರು ಖರೀದಿಸಬೇಕೆಂದು ನಮ್ಮನ್ನು ಪ್ರಚೋದಿಸಿ ನಮ್ಮನ್ನು ಸಾಲದ ಜಾಲದಲ್ಲಿ ಸಿಲುಕಿಸಿದ್ದು ಮಾಧ್ಯಮಗಳೆಂಬುದು ಹೆಚ್ಚಿನ ಜನ ಸಾಮಾನ್ಯರಿಗೆ ಮನವರಿಕೆಯಾಗುವಾಗ ಅವರು ಆ ಜಾಲದಿಂದ ಹೊರ ಬರಲಾಗದಷ್ಟು ದೂರ ಸಾಗಿರುತ್ತಾರೆ.

ಹೆಚ್ಚಿನ ಜನಪ್ರಿಯ ಮಾಧ್ಯಮಗಳ ಜನಸೇವೆ ಈ ರೀತಿ ತಮ್ಮ ಗ್ರಾಹಕರನ್ನು ದಾಸ್ಯದಲ್ಲಿ ಸಿಲುಕಿಸುವ ಕಾಯಕಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಜನರನ್ನು ಅವರ ನಿಜವಾದ ಸಮಸ್ಯೆಗಳ ಮತ್ತು ಅವರ ಮುಂದಿರುವ ನಿಜವಾದ ಭೀಕರ ಸವಾಲುಗಳ ವಿಷಯಗಳಲ್ಲಿ ಅಜ್ಞಾನದ ಅಂಧಕಾರದಲ್ಲಿ ಕಟ್ಟಿಡುವ ಕೆಲಸವನ್ನೂ ನಮ್ಮ ಮಾಧ್ಯಮಗಳು ಮಾಡುತ್ತವೆ. ಅವು ಈ ಕೆಲಸವನ್ನು ನಿತ್ಯವೂ ಎಷ್ಟೊಂದು ಎಚ್ಚರಿಕೆಯಿಂದ, ಎಂತಹ ನೈಪುಣ್ಯದೊಂದಿಗೆ, ಎಷ್ಟು ನಾಜೂಕಾಗಿ ಮಾಡಿ ಮುಗಿಸುತ್ತವೆಂದರೆ, ತಮ್ಮನ್ನು ಗುರಿಯಾಗಿಸಿ ಇಂತಹದೊಂದು ಮಾರಕ ಚಟುವಟಿಕೆ ತಮ್ಮ ಅಕ್ಕ ಪಕ್ಕದಲ್ಲೇ ನಡೆಯುತ್ತಿದೆ ಎಂಬುದು ಅವುಗಳ ಬಲಿ ಪಶುಗಳಿಗೆ ತಿಳಿಯುವುದೇ ಇಲ್ಲ.

ಭಾರತ ಇರುವುದು ಕೊಲ್ಕತಾ ಮತ್ತು ಮುಂಬೈಯಲ್ಲಿ ಅಲ್ಲ. ಭಾರತ ಬದುಕುತ್ತಿರುವುದು ಇಲ್ಲಿಯ 7 ಲಕ್ಷ ಹಳ್ಳಿಗಳಲ್ಲಿ ಎಂದು ಗಾಂಧೀಜಿ ಹೇಳಿದ್ದನ್ನು ನಂಬಿ ಯಾರಾದರೂ ನಮ್ಮ ಮಾಧ್ಯಮಗಳಲ್ಲಿ ಹುಡುಕಿದರೆ ಅಲ್ಲಿ ಅವರಿಗೆ ಆ ಗ್ರಾಮಗಳಾಗಲಿ, ಗ್ರಾಮವಾಸಿ ಭಾರತೀಯರಾಗಲಿ ಕಾಣ ಸಿಗುವುದಿಲ್ಲ. ಸದ್ಯ ನಮ್ಮ ದೇಶದಲ್ಲಿ ಗ್ರಾಮಗಳ ಸಂಖ್ಯೆ 6.5 ಲಕ್ಷಕ್ಕೆ ಕುಸಿದಿದೆ. ಆದರೆ ಈಗಲೂ ದೇಶದ ಸುಮಾರು ಶೇ.70ರಷ್ಟು ಜನರು ವಾಸಿಸುವುದು ಗ್ರಾಮಗಳಲ್ಲಿ. ಅವರಲ್ಲಿ ಹೆಚ್ಚಿನವರು ತೀವ್ರ ಸ್ವರೂಪದ ದಾರಿದ್ರ್ಯ ಮತ್ತು ಅಭದ್ರತೆಯಿಂದ ನರಳುತ್ತಿದ್ದಾರೆಂಬುದು ‘ಪ್ರಧಾನ ಧಾರೆ’ಯ ಮಾಧ್ಯಮಗಳ ನಿತ್ಯ ಗ್ರಾಹಕರ ಪಾಲಿಗೆ ಗುಟ್ಟಾಗಿಯೇ ಉಳಿದಿರುತ್ತದೆ. ಅತ್ತ ದೇಶದ ಕೃಷಿಕರು ಹಾಗೂ ರೈತರ ಬವಣೆಯೂ ಅಷ್ಟೇ. ಪ್ರತಿದಿನ ಈ ನೆಲದ ಸರಾಸರಿ 45 ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 1995ರಿಂದ 2015ರವರೆಗಿನ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರೂ ಅವರ ಪರವಾಗಿ ಜಾಹೀರಾತು ಕೊಟ್ಟಿಲ್ಲವಾದ್ದರಿಂದ ಮಾಧ್ಯಮಗಳಲ್ಲಿ ಅವರ ಪೈಕಿ ಯಾರ ಬಗ್ಗೆಯೂ ಯಾವುದೇ ಶ್ರದ್ಧಾಂಜಲಿ ಪ್ರಕಟವಾಗಿಲ್ಲ. ಇನ್ನು ಸುಮಾರು 50 ಕೋಟಿಯಷ್ಟಿರುವ ನಮ್ಮ ನಾಡಿನ ಅಸಂಘಟಿತ ಕಾರ್ಮಿಕ ಸಮುದಾಯ, ಲಕ್ಷಾಂತರ ನಿರುದ್ಯೋಗಿಗಳು, ನಿರ್ವಸಿತರು, ಸೂರಿಲ್ಲದವರು, ಪೋಷಕಾಂಶಗಳ ಕೊರತೆಯಿಂದ ನರಳುತ್ತಿರುವವರು ಇವರೆಲ್ಲರೂ ನಮ್ಮ ಜನಪ್ರಿಯ ಮಾಧ್ಯಮಗಳ ಪಾಲಿಗೆ ಅಪ್ರಸ್ತುತರಾಗಿದ್ದಾರೆ. ದುರಂತವೇನೆಂದರೆ, ಮಾಧ್ಯಮಗಳು ಈ ವರ್ಗಗಳ ಅಸ್ತಿತ್ವವನ್ನು ಮತ್ತವರ ಸಮಸ್ಯೆಗಳನ್ನು ಗುರುತಿಸಲು ನಿರಾಕರಿಸಿರುವುದು ಮಾತ್ರವಲ್ಲದೆ, ಜನರ ಗಮನವು ಪುಢಾರಿಗಳ ಅಸಂಬದ್ಧ ಹೇಳಿಕೆಗಳು, ಗೋವು, ಮಂದಿರ, ಸಿನೆಮಾ ನಟರ ಖಾಸಗಿ ಬದುಕು, ವಿಲಾಸಿ ಕಾರುಗಳು, ದುಬಾರಿ ಹೋಟೆಲುಗಳು ಇತ್ಯಾದಿ ಅಸಂಗತ ವಿಷಯಗಳಲ್ಲೇ ಸಿಲುಕಿಕೊಂಡಿರುವಂತೆ ನೋಡಿಕೊಳ್ಳುತ್ತವೆ. ಇದರಿಂದಾಗಿ ಆಳುವವರ ಜನವಿರೋಧಿ ಧೋರಣೆಗಳಾಗಲಿ, ಬೃಹತ್ ಉದ್ಯಮಿಗಳ ಜನದ್ರೋಹಿ ಸಂಚುಗಳಾಗಲಿ ಜನರ ಗಮನಕ್ಕೂ ಬರುವುದಿಲ್ಲ, ಆ ಕುರಿತು ಸಮಾಜದಲ್ಲಿ ಯಾವುದೇ ಗಂಭೀರ ಚರ್ಚೆ, ಸಂವಾದಗಳೂ ನಡೆಯುವುದಿಲ್ಲ. ಸಮಸ್ಯೆಗಳ ಕುರಿತು ಚರ್ಚೆಯೇ ನಡೆಯದಿದ್ದರೆ ಅವುಗಳಿಗೆ ಪರಿಹಾರ ರೂಪುಗೊಳ್ಳುವುದಾದರೂ ಹೇಗೆ? ನೈಜ ಸಮಸ್ಯೆಗಳ ಕುರಿತು ಸಂವಾದದ ಕೊರತೆ ಅಪಾಯಕಾರಿ ಸಂಚುಗಳ ಪಾಲಿಗೆ ದಾರಿ ಸುಗಮಗೊಳಿಸಿಬಿಡುತ್ತವೆ, ಅಷ್ಟೇ.

ನಿಜವಾಗಿ ಪ್ರಸ್ತುತ ಯಾವ ವರ್ಗದ ಸಮಸ್ಯೆಯೂ ಪರಿಹಾರವಿಲ್ಲದ ಸಮಸ್ಯೆ ಅಲ್ಲ. ಅವರ ಸಮಸ್ಯೆಗಳನ್ನು ಬಗೆಹರಿಸಲು ದೇಶದ ಬಳಿ ಸಂಪನ್ಮೂಲಗಳ ಕೊರತೆಯೂ ಇಲ್ಲ. ಆದರೆ ಸಂಪನ್ಮೂಲಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ನೀತಿ, ಧೋರಣೆ ಮತ್ತು ಪ್ರಾಶಸ್ತ್ಯಗಳ ಕೊರತೆ ಇದೆ. ದೇಶವನ್ನು ಆಳುವವರು ಮತ್ತು ದೇಶದ ಸಂಪನ್ಮೂಲಗಳನ್ನು ನಿಯಂತ್ರಿಸುವವರು ದೇಶದ ನೈಜ ಪ್ರಭುಗಳಾದ ಜನಸಾಮಾನ್ಯರನ್ನು ಯಾವ ಪ್ರಾಶಸ್ತ್ಯಕ್ಕೂ ಅರ್ಹರಲ್ಲದ ದಾಸರಾಗಿ ಕಾಣುತ್ತಿರುವ ತನಕ ಮತ್ತು ಬೃಹತ್ ಉದ್ಯಮಿಗಳ ಕೈಗೊಂಬೆಗಳಾಗಿರುವ ತನಕ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇಲ್ಲ. ನಮ್ಮ ಮಾಧ್ಯಮಗಳು ಮನಸ್ಸು ಮಾಡಿದರೆ ಈ ಸನ್ನಿವೇಶವನ್ನು ಬದಲಾಯಿಸುವ ನಿಟ್ಟಿನಲ್ಲಿ ಬಹಳ ನಿರ್ಣಾಯಕ ಕೊಡುಗೆ ನೀಡಬಹುದು. ಅಂತಹ ಸಾಮರ್ಥ್ಯ ಮಾಧ್ಯಮಗಳಿಗೆ ಖಂಡಿತ ಇದೆ. ಮಾಧ್ಯಮಗಳು ಸಮಾಜದ ನೈಜ ಸಮಸ್ಯೆಗಳ ಅಸ್ತಿತ್ವವನ್ನು ಗುರುತಿಸಿ, ಅವುಗಳಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸಿ, ಅವುಗಳ ಕುರಿತು ಜನಸಾಮಾನ್ಯರು ಸದಾ ಜಾಗೃತರಾಗಿರುವಂತೆ ಹಾಗೂ ಎಲ್ಲ ವೇದಿಕೆಗಳಲ್ಲಿ ಅವು ಜೀವಂತ ಚರ್ಚೆಯಲ್ಲಿರುವಂತೆ ನೋಡಿಕೊಂಡರೆ ಸಾಕು. ಸಂಪನ್ಮೂಲಗಳನ್ನು ನಿಯಂತ್ರಿಸುವವರು ಹಾಗೂ ನೀತಿ ಧೋರಣೆಗಳನ್ನು ನಿರ್ಧರಿಸುವವರು ಜನಪರ ದಾರಿ ತುಳಿಯಲು ನಿರ್ಬಂಧಿತರಾಗುತ್ತಾರೆ.

ನಿಮ್ಮ ‘ವಾರ್ತಾ ಭಾರತಿ’ 16ನೇ ವರ್ಷವನ್ನು ಪ್ರವೇಶಿಸುತ್ತಿರುವ ಈ ಸಂದರ್ಭ ಮಾಧ್ಯಮರಂಗದ ಸಾಮರ್ಥ್ಯ ಮತ್ತು ವೈಫಲ್ಯಗಳ ಪರಾಮರ್ಶೆ ಅಗತ್ಯವೆನಿಸಿತು. ತೀರಾ ಅಭದ್ರ ಸ್ಥಿತಿಯಲ್ಲಿ ಆರಂಭಗೊಂಡ ಈ ನಿಮ್ಮ ವಾರ್ತಾಭಾರತಿ ಇಂದು ಕನ್ನಡ ಲೋಕದಲ್ಲಿ ಲಕ್ಷಾಂತರ ಅಭಿಮಾನಿ ಓದುಗರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿದೆ. ಮೌಲ್ಯನಿಷ್ಠ ಮಾಧ್ಯಮ ಎಂಬುದು ಅಳಿವಿನಂಚಿನಲ್ಲಿರುವ ಸನ್ನಿವೇಶದಲ್ಲೂ ನಮ್ಮ ತಂಡವು ‘ಸತ್ಯ ಎಲ್ಲೆಡೆಗೆ’ ಎಂಬ ತನ್ನ ಧ್ಯೇಯ ವಾಕ್ಯವನ್ನು ಎಂದೂ ಮರೆಯದೆ, ರಾಜಿಯೇ ಮರಣ ಎಂಬ ನಂಬಿಕೆಯನ್ನು ಉಳಿಸಿಕೊಂಡು ಬದುಕಿದೆ. ಜನಸಾಮಾನ್ಯರ ಆಶೋತ್ತರಗಳ ಪ್ರತಿನಿಧಿಯಾಗಿ ಈ ಪತ್ರಿಕೆ ಮುನ್ನಡೆಯುವುದಕ್ಕೆ ಎಲ್ಲ ಸಂವೇದನಾ ಶೀಲ ಓದುಗರ ಸಕ್ರಿಯ ಸಹಕಾರದ ಅಗತ್ಯವಿದೆ.

ಎ.ಎಸ್.ಪುತ್ತಿಗೆ

ಪ್ರಧಾನ ಸಂಪಾದಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)