varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

2019 ರಲ್ಲಿ ನಡೆಯುವುದು 1992ರ ಚುನಾವಣೆ !

ವಾರ್ತಾ ಭಾರತಿ : 4 Dec, 2018
ರವೀಶ್ ಕುಮಾರ್, ಕನ್ನಡಕ್ಕೆ: ನೂರ್ ಜಹಾನ್ ಅಬೂಬಕ್ಕರ್

ಬಿಹಾರ ಮೂಲದ ದಿಲ್ಲಿಯಲ್ಲಿ ಬೆಳೆದ ರವೀಶ್ ಕುಮಾರ್ ಇಂದು ದೇಶದ ಮಾಧ್ಯಮ ರಂಗದ ಅತ್ಯಂತ ಚಿರಪರಿಚಿತ ಹೆಸರು. ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ. ಪ್ರತಿರಾತ್ರಿ ಇವರು ನಡೆಸಿಕೊಡುವ ಪ್ರೈಮ್ ಟೈಮ್ ಶೋ ದೇಶದ ಪ್ರಮುಖ ರಾಜಕೀಯ, ಸಾಮಾಜಿಕ, ಆರ್ಥಿಕ ವಿದ್ಯಮಾನಗಳ ಕುರಿತ ಅತ್ಯಂತ ನಿಖರ ಮಾಹಿತಿ ಮತ್ತು ಪ್ರಖರ ವಿಶ್ಲೇಷಣೆಗೆ ಮನೆಮಾತಾಗಿದೆ. ಅನುಭವೀ ವರದಿಗಾರ, ಆಕರ್ಷಕ ಹಿಂದಿ ನಿರೂಪಕ, ಸತ್ಯ ಹೊರಗೆಳೆಯುವ ಸಂದರ್ಶಕ, ಕಟುಸತ್ಯವನ್ನು ಮುಂದಿಡುವ ವಿಶ್ಲೇಷಕ, ಖ್ಯಾತ ಲೇಖಕ, ನೇರ ಮಾತುಗಳ ರಾಜಕೀಯ ಚಿಂತಕರಾಗಿ ಸರಕಾರಗಳ ನಿದ್ದೆಗೆಡಿಸಿದವರು, ಜನರನ್ನು ಬಡಿದು ಎಚ್ಚರಿಸಿದವರು ಮತ್ತು ಸರಕಾರದ ಅಂಧ ಭಕ್ತರ ಕೆಂಗಣ್ಣಿಗೆ ಗುರಿಯಾದವರು ರವೀಶ್ ಕುಮಾರ್. ಹಾಗಾಗಿ ಈ ಕಾಲದಲ್ಲೂ ಪತ್ರಕರ್ತರಾಗಿಯೇ ಉಳಿದಿದ್ದಾರೆ. naisadak.org ನಲ್ಲಿ ಇವರ ಬರಹಗಳಿವೆ.

ಎಲ್ಲರ ಕಣ್ಣಿರುವುದು ಜಾಹೀರಾತುಗಳ ಮೇಲೆ. ಇಲ್ಲಿ ರಾಜಕೀಯ ಒಂದು ಉತ್ಪನ್ನವಾಗಿಬಿಟ್ಟಿದೆ. ಹಾಗಾಗಿ ಈಗ ರಾಜಕಾರಣಿಗಳು ಯಾವಾಗಲೂ ಜಾಹೀರಾತುಗಳಲ್ಲೇ ಇರುತ್ತಾರೆ. ಹೀಗೆ ಜಾಹೀರಾತುಗಳಲ್ಲಿ ನೋಡಿ ನೋಡಿ ರಾಜಕಾರಣಿಗಳ ಮೇಲೆ ಜನರಿಗೆ ಒಂದು ರೀತಿಯ ಮೋಹ ಬೆಳೆದುಬಿಡುತ್ತಿದೆ. ಯಾವತ್ತಾದರೂ, ಎಲ್ಲಾದರೂ ಸಿಗಬಹುದು ಆ ಭ್ರಮಾಲೋಕದ ಸ್ವರ್ಗ ಎಂಬ ಅವಸ್ಥೆ ಇದು.

ಭಾರತದ ರಾಜಕಾರಣ ಈಗ ತನ್ನ ರಾಜಧರ್ಮವನ್ನು ಬಿಟ್ಟುಬಿಟ್ಟಿದೆ. ಹಾಗಾಗಿ ಇಲ್ಲೀಗ ರಾಜನೀತಿ ಎಂಬುದಿಲ್ಲ. ಜನರ ನಡುವೆ ಧರ್ಮವನ್ನು ಎತ್ತಿ ಹಿಡಿದು ಗಾಳಿಪಟದಂತೆ ಹಾರಿಸುವುದೊಂದೇ ಈಗ ಜನರ ಬಳಿ ಹೋಗಲು ನಮ್ಮ ರಾಜಕಾರಣಿಗಳಿಗೆ ಉಳಿದಿರುವ ಏಕೈಕ ದಾರಿ. ರಾಜಕಾರಣದಲ್ಲಿ ಧರ್ಮ ವಿಜೃಂಭಿಸಿದರೆ ಅದಕ್ಕಿರುವುದು ಎರಡೇ ಅರ್ಥ. ಒಂದೋ, ಅಲ್ಲಿ ಎಲ್ಲವೂ ಖಾಲಿಯಾಗಿದೆ ಅಥವಾ ಯಾವುದು ಅಲ್ಲಿ ಉಳಿದಿದೆಯೋ ಅದಕ್ಕೂ ಮುಗಿದು ಹೋಗುವ ಸರದಿ ಬಂದಿದೆ. ಇಂದಿನ ರಾಜಕಾರಣಿಗಳನ್ನು ನೋಡಿದರೆ ರಾಜಕಾರಣಿಗಳಂತೆ ಕಡಿಮೆ ಕಾಣುತ್ತಾರೆ, ಯಾವುದೋ ಮಂದಿರ - ಮಸೀದಿಯ ಪುರೋಹಿತ - ವೌಲ್ವಿಗಳಂತೆ ಹೆಚ್ಚು ಕಾಣುತ್ತಾರೆ. ಚುನಾವಣೆ ಸಮೀಪಿಸುವಾಗ ಸಂತರ ಸಮಾಗಮಗಳು ಹೆಚ್ಚೆಚ್ಚು ನಡೆಯುತ್ತವೆ. ನೇತಾಗಳು ಸಂತರ ಬಳಿ ಹೋಗುವುದು ಹೆಚ್ಚಾಗುತ್ತದೆ. ಈಗ ಸಂತರ ಮಠಗಳಿಗೆ ಬರುವ ಭಕ್ತರು ಕೇವಲ ಭಕ್ತರಾಗಿ ಉಳಿದಿಲ್ಲ. ಅವರನ್ನು ರಾಜಕೀಯ ಪಕ್ಷದ ಭಕ್ತರಾಗಿ ಪರಿವರ್ತಿಸುವ ಗ್ಯಾರಂಟಿ ನೀಡಲಾಗುತ್ತಿದೆ. ಚುನಾವಣೆ ಈಗ ಚುನಾವಣೆಯಂತೆ ಕಾಣುವುದಿಲ್ಲ. ಯಾವುದೋ ಪವಿತ್ರ ನದಿಯ ದಡದಲ್ಲಿ ನಡೆಯುತ್ತಿರುವ ಅಗಲಿದ ಹಿರಿಯರ ಶ್ರಾದ್ಧದಂತೆ ಕಾಣುತ್ತಿದೆ. ಈಗ ಚುನಾವಣೆಯಲ್ಲಿ ಇಂದಿನ ನೀತಿಗಳ ಚರ್ಚೆ ಆಗುವುದೇ ಇಲ್ಲ. ಅಗಲಿ ಹೋದವರ ಕರ್ಮಗಳ ಲೆಕ್ಕಾಚಾರದ ಮೇಲೆ ಚುನಾವಣೆಗಳು ನಡೆಯುತ್ತಿವೆ. ಅಲ್ಲೀಗ ಚರ್ಚೆಯಾಗುವುದು ಗತಕಾಲ ಮಾತ್ರ.

ರಾಜಕಾರಣದೊಳಗೆ ಧರ್ಮ ನುಸುಳಿಬಿಟ್ಟರೆ ಅದು ಬೇರೆಯೇ ಲೋಕವೊಂದನ್ನು ಸೃಷ್ಟಿಸುವ ಭ್ರಮೆಯನ್ನು ಬಿತ್ತುತ್ತದೆ. ಅದು ವರ್ತಮಾನದೊಳಗೆ ಗತಕಾಲವನ್ನು ತುಂಬಿ ಬಿಡುತ್ತದೆ. ಹಾಗಾಗಿ ಇವತ್ತು ಜನರ ವರ್ತಮಾನದಲ್ಲಿ ನಾಲ್ಕೂ ಕಡೆಯಿಂದಲೂ ಈ ಗತಕಾಲದ ತ್ಯಾಜ್ಯ ತುಂಬಿ ಹೋಗಿದೆ. ರಸ್ತೆಗಳು ಜಾಮ್ ಆಗಿ ಬಿಟ್ಟಿವೆ, ಎಲ್ಲೆಡೆ ಹಾರ್ನ್‌ಗಳ ಕರ್ಕಶ ಸದ್ದು ಆವರಿಸಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಶಾಲೆಗಳ ಗುಣಮಟ್ಟ ಪಾತಾಳ ತಲುಪುತ್ತಿದೆ. ಅಲ್ಲಿ ಶಿಕ್ಷಕರೇ ಇಲ್ಲ. ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಜನಸಾಮಾನ್ಯರ ಜೀವನ ಸಂಕಷ್ಟದಲ್ಲಿದೆ. ಸಾಮಾಜಿಕ ಆರ್ಥಿಕ ಸುರಕ್ಷತೆಯ ಮಟ್ಟ ಕುಸಿಯುತ್ತಾ ಸಾಗಿದೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಕೇವಲ ಒಂದು ಶೇಕಡಾ ಶ್ರೀಮಂತರು ಮತ್ತೆ ಸಂಪತ್ತು ಬಾಚಿಕೊಳ್ಳುತ್ತಿದ್ದಾರೆ. ಚುನಾವಣೆ ಗೆಲ್ಲಲು ಬಡವರ ನಡುವೆ ಬರುವ ರಾಜಕಾರಣಿಗಳು ಗೆದ್ದ ಮೇಲೆ ಶ್ರೀಮಂತರ ನಡುವೆ ಸೇರಿಕೊಳ್ಳುತ್ತಾರೆ. ಹೀಗೆ ಗೆದ್ದವನು ಆಗಾಗ ಅಚ್ಛೇ ದಿನ್ ಬರಲಿದೆ ಎಂದು ಬಡವರ ಬಳಿ ಹೋಗಲು ಸಾಧ್ಯವಿಲ್ಲ. ಹಾಗಾಗಿ ಆತ ಕೆಲವೊಮ್ಮೆ ಗತಕಾಲದ ‘ಅಚ್ಛೇ ದಿನ್’ಗಳ ಕನಸು ಬಿತ್ತುತ್ತಾನೆ. ಈಗ ಹಿಂದೂ ಸ್ವಾಭಿಮಾನ ಅಥವಾ ಹಿಂದಿ ಸಹನೆಯ ಮಾತುಗಳು ಜೋರಾಗಿವೆ.

1992ರಲ್ಲಿ ಹೀಗೆ ಆಗಿದೆ. ಈಗ 2019ರಲ್ಲೂ ಅದನ್ನೇ ಪುನರಾವರ್ತಿಸುವ ತಯಾರಿ ನಡೆದಿದೆ. ನಮ್ಮ ದೇಶದ ಒಂದು ವರ್ಗದೊಳಗೆ ಸುವರ್ಣ ಯುಗ ಮತ್ತೆ ಬರಬೇಕೆಂಬ ಬಯಕೆ ಸುಪ್ತವಾಗಿದೆ. ಆದರೆ ವಿಶ್ವದಲ್ಲಿ ಎಲ್ಲೂ ಈವರೆಗೆ ಈ ಸುವರ್ಣ ಯುಗವನ್ನು ಯಾರೂ ಪಡೆದಿಲ್ಲ. ಎಲ್ಲರಿಗೂ ಅವರವರದ್ದೇ ಸುವರ್ಣ ಯುಗಗಳಿರುತ್ತವೆ. ಆ ಬಗ್ಗೆ ಅವರದ್ದೇ ಕಲ್ಪನೆಗಳಿವೆ. ಮಿಥ್ಯೆಗಳಿವೆ. ಈ ಎಲ್ಲ ಕಲ್ಪನೆಗಳನ್ನು ಗೌರವಿಸಲಾಗುತ್ತದೆ. ಆದರೆ ಆ ಸುವರ್ಣ ಯುಗವನ್ನು ಈವರೆಗೆ ಪಡೆದವರು ಮಾತ್ರ ಯಾರೂ ಇಲ್ಲ. ಈಗ ಅಮೆರಿಕವನ್ನು ಮತ್ತೆ ‘ಶ್ರೇಷ್ಠ’ ದೇಶ ಮಾಡುವ ಮಾತು ಕೇಳಿ ಬರುತ್ತಿದೆ, ಇಲ್ಲಿ ಭಾರತ ವನ್ನು ವಿಶ್ವಗುರು ಮಾಡುವ ಬಗ್ಗೆ ಮಾತಾಡಲಾಗುತ್ತಿದೆ. ಆದರೆ ಇವುಗಳೆಲ್ಲ ಬಂಡವಾಳವಿಲ್ಲದ ಬಡಾಯಿಗಳು, ಅಷ್ಟೇ. ಶಾಲೆಗಳಲ್ಲಿ ಹತ್ತು ಲಕ್ಷ ಶಿಕ್ಷಕರ ಕೊರತೆಯಿರುವ, ವಿಶ್ವವಿದ್ಯಾನಿಲಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು ಕಡಿಮೆಯಿರುವ ಭಾರತ ವಿಶ್ವಗುರು ಆಗುವುದು ಹೇಗೆ ಸ್ವಾಮಿ? ಈ ವಿಶ್ವಗುರುವಿನ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಇಲ್ಲಿ ಜನರು ಸ್ವತಃ ತಮ್ಮ ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳುವ ಬದಲು ಟಿವಿ ಮೂಲಕ ತಮ್ಮ ಸ್ಥಿತಿ ತಿಳಿದುಕೊಳ್ಳುತ್ತಿದ್ದಾರೆ. ಎಲ್ಲರ ಕಣ್ಣಿರುವುದು ಜಾಹೀರಾತುಗಳ ಮೇಲೆ. ಇಲ್ಲಿ ರಾಜಕೀಯ ಒಂದು ಉತ್ಪನ್ನವಾಗಿಬಿಟ್ಟಿದೆ. ಹಾಗಾಗಿ ಈಗ ರಾಜಕಾರಣಿಗಳು ಯಾವಾಗಲೂ ಜಾಹೀರಾತುಗಳಲ್ಲೇ ಇರುತ್ತಾರೆ. ಹೀಗೆ ಜಾಹೀರಾತುಗಳಲ್ಲಿ ನೋಡಿ ನೋಡಿ ರಾಜಕಾರಣಿಗಳ ಮೇಲೆ ಜನರಿಗೆ ಒಂದು ರೀತಿಯ ಮೋಹ ಬೆಳೆದುಬಿಡುತ್ತಿದೆ. ಯಾವತ್ತಾದರೂ, ಎಲ್ಲಾದರೂ ಸಿಗಬಹುದು ಆ ಭ್ರಮಾಲೋಕದ ಸ್ವರ್ಗ ಎಂಬ ಅವಸ್ಥೆ ಇದು. ಇದಕ್ಕಾಗಿಯೇ ಧರ್ಮದ ಮಾತಾಡಲಾಗುತ್ತಿದೆ. ಧರ್ಮದ ಬೆಂಬಲದೊಂದಿಗೆ ಜನರಲ್ಲಿ ಗತಕಾಲದ ಸುವರ್ಣಯುಗವನ್ನು ತರುವ ಕನಸು ಬಿತ್ತಲಾಗುತ್ತಿದೆ.

ರಾಜಕಾರಣಿಗಳನ್ನು ಯಾವುದೋ ಧರ್ಮಯುಗದ ನಾಯಕ ಬಂದಂತೆ ತೋರಿಸಲಾಗುತ್ತಿದೆ. ಸರ್ದಾರ್ ಪಟೇಲರ ಆ ಬೃಹತ್ ಪ್ರತಿಮೆಯ ಕೆಳಗೆ ಕೇವಲ ಪ್ರಧಾನ ಮಂತ್ರಿಗಳೊಬ್ಬರೇ ತಿರುಗಾಡುವುದನ್ನು ನೀವು ನೋಡಿದ್ದೀರಿ. ಅಲ್ಲಿ ಬೇರೆ ಯಾರೂ ಇಲ್ಲ. ಏಕತೆಯ ಪ್ರತೀಕವಾದ ಪಟೇಲರ ಪ್ರತಿಮೆಯ ಕೆಳಗೆ ಮೋದಿ ಅವರೊಬ್ಬರೇ ಇದ್ದಾರೆ. ಫೋಟೊಗಳ ಎಲ್ಲ ಫ್ರೇಮ್ ಗಳಲ್ಲೂ ಪ್ರತಿಮೆಯ ಜೊತೆ ಕಾಣುವುದು ಒಬ್ಬರೇ ವ್ಯಕ್ತಿ. ಅವರು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಕೆಲವೇ ದಿನಗಳ ಹಿಂದೆ ಅವರು ದಿಲ್ಲಿಯಲ್ಲಿ ‘ಮೈ ನಹೀ ಹಮ್ (ನಾನಲ್ಲ ನಾವು)’ ಎಂದು ನಮಗೆಲ್ಲ ಬೋಧನೆ ಮಾಡುತ್ತಿದ್ದರು. ಅದಾದ ಕೆಲವೇ ದಿನಗಳಲ್ಲಿ ಪಟೇಲರ ಪ್ರತಿಮೆಯ ಕೆಳಗೆ ‘ಮೈ ಹೀ ಮೈ (ನಾನು ಮಾತ್ರ)’ ಆಗಿಬಿಟ್ಟರು. ಅಲ್ಲಿ ಎಲ್ಲವೂ ಕ್ಯಾಮರಾಕ್ಕಾಗಿ ನಡೆಯಿತು. ಭಾರತೀಯರ ಒಂದು ವರ್ಗದಲ್ಲಿ ಸುಪ್ತವಾಗಿದ್ದ ಪಟೇಲರ ವಿರುದ್ಧದ ಅಸಹನೆ ಅಂದು ಕ್ಯಾಮರಾ ಮೂಲಕ ಅವರ ವರ್ಚಸ್ಸು ಕುಂದಿಸುವ ಪ್ರಯತ್ನದಲ್ಲಿ ಕೊನೆಯಾಯಿತು. ಅಲ್ಲಿ ಪ್ರಧಾನಮಂತ್ರಿ ಯಾವುದೋ ಪೌರಾಣಿಕ ಪಾತ್ರದಂತೆ ವರ್ತಿಸುತ್ತಿದ್ದರು. ಈಗ ಪ್ರಧಾನಿ ಎದುರು ರಾಹುಲ್ ಗಾಂಧಿ ತನ್ನ ಧಾರ್ಮಿಕ ವ್ಯಕ್ತಿತ್ವ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಅವರೂ ಶಿವಭಕ್ತನ ನಿಲುವಂಗಿಯನ್ನು ಹೊದ್ದುಕೊಂಡಿದ್ದಾರೆ. ಅವರ ಬೆಂಬಲಿಗರು ಅವರನ್ನು ಜನಿವಾರಧಾರಿ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಅವರ ವಿರೋಧಿಗಳು ಅವರ ಗೋತ್ರ ಯಾವುದು ಎಂದು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಯೇ ವರ್ಣಭೇದ ನೀತಿಯ ನಿದರ್ಶನವಾಗಿದೆ.

ಗಾಂಧಿ ಮತ್ತು ಅಂಬೇಡ್ಕರ್‌ರ ಭಾರತದಲ್ಲಿ ಗೋತ್ರ ಯಾವುದು ಎಂದು ಕೇಳಲಾಗುತ್ತಿದೆ ಎಂದರೆ ಇದು ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾರತವೇ ಅಲ್ಲ. ರಾಹುಲ್ ಗಾಂಧಿ ಕೂಡ ದೇವಸ್ಥಾನಗಳಿಗೆ ಸುತ್ತು ಬಂದು ತನ್ನ ಧಾರ್ಮಿಕ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಮೂಲಕ ತಮ್ಮ ವಿರೋಧಿಗಳಿಗೆ ಅವರೇ ಅವಕಾಶ ಮಾಡಿಕೊಡುತ್ತಿದ್ದಾರೆ. ಅವರ ಧೋರಣೆಯ ಕುರಿತು ಇನ್ನೂ ಜನರಲ್ಲಿ ಜಾಗೃತಿ ಬಂದಿಲ್ಲ. ಅವರ ಕೆಲವು ಮಾತುಗಳಲ್ಲಿ ಪಕ್ವತೆ ಇದೆ. ವಿನಯ ಕಾಣುತ್ತದೆ. ಆದರೆ ಅವರು ಹೇಗೆ ವಿಭಿನ್ನ ಎಂಬುದು ಜನರಿಗೆ ಇನ್ನೂ ಸ್ಪಷ್ಟವಾಗಿ ಕಂಡುಬಂದಿಲ್ಲ. ಈಗ ಜನರಿಗೆ ಎಲ್ಲವೂ ಕಲಸುಮೇಲೋಗರವಾಗಿ ಕಾಣುತ್ತಿದೆ. ತಾರ್ಕಿಕತೆಯ ಆಧಾರದಲ್ಲಿ ರಾಜಕಾರಣಕ್ಕೆ ಹೊಸ ವ್ಯಾಖ್ಯೆ ನೀಡುವ ಮೂಲಕ ಜನರನ್ನು ತಲುಪುವ ಹೊಸ ಹಾದಿಯನ್ನು ತಾನೇ ಸೃಷ್ಟಿಸಿಕೊಂಡು ಮುಂದುವರಿಯಬೇಕಾಗಿದ್ದ ರಾಹುಲ್ ಗಾಂಧಿ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಒತ್ತಡಕ್ಕೆ ಒಳಗಾಗಿ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅವರು ತನ್ನ ವೈರಿಯಂತೆಯೇ ತಾನೂ ಆಗುವ ಮೂಲಕ ವೈರಿಯನ್ನು ಎದುರಿಸಲು ಹೊರಟಿದ್ದಾರೆ. ತನ್ನ ವಿರೋಧಿಗಳ ಅತಿ ಧಾರ್ಮಿಕತೆಯಿಂದ ಒಂದಷ್ಟು ಧಾರ್ಮಿಕತೆಯನ್ನು ಪಡೆದುಕೊಂಡು ರಾಮನಾಮದ ಶಾಲು ಧರಿಸಿಕೊಳ್ಳಲು ಹೊರಟಿದ್ದಾರೆ. ರಾಹುಲ್ ಹೊಸ ಹಾದಿ ತುಳಿಯುತ್ತಿಲ್ಲ. ಅದಕ್ಕೆ ಬದಲಾಗಿ ಯಾವ ಹಾದಿಯನ್ನು ಮುಚ್ಚಬೇಕಾಗಿತ್ತೋ ಅದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅದೇ ಬೇಸರದ ವಿಷಯ. ಹೀಗೆ ಆಗಲು ಕಾರಣ ಬಿಜೆಪಿಯ ರಾಜಕೀಯ ಈಗ ದೇಶದ ರಾಜಕೀಯದ ದಾರಿಯನ್ನೇ ಬದಲಿಸಿದೆ. ಎಲ್ಲೆಡೆ ಬಿಜೆಪಿಗೆ ಸಿಗುತ್ತಿರುವ ಚುನಾವಣಾ ಜಯ ಅದರ ಧಾರ್ಮಿಕತೆಯಿಂದಾಗಿಯೇ ಅದಕ್ಕೆ ಸಿಕ್ಕಿದೆ ಎಂಬ ಒಂದು ಫಾರ್ಮುಲಾ ಸಿದ್ಧಮಾಡಿದೆ. ಬಿಜೆಪಿ ನಾಯಕರು ಗತಿಸಿ ಹೋದ ಧಾರ್ಮಿಕ ವಿಷಯಗಳ ಬಗ್ಗೆಯೇ ಮಾತಾಡುವುದರಿಂದ ಜನರು ಅವರ ಜೊತೆಗಿದ್ದಾರೆ ಎಂಬಂತೆ ಕಾಣುತ್ತಿದೆ. ಈ ಧಾರ್ಮಿಕತೆಯ ಸ್ಪರ್ಧೆಯಲ್ಲಿ ವಿಪಕ್ಷ ನಾಯಕರೂ ತಮ್ಮ ಪಾಲು ಹುಡುಕುತ್ತಿದ್ದಾರೆ. ಎರಡು ದೊಡ್ಡ ಪಕ್ಷಗಳು ಒಂದೇ ಧರ್ಮವನ್ನು ಹಿಡಿದುಕೊಂಡು ಪರಸ್ಪರ ಸ್ಪರ್ಧೆಗಿಳಿವೆ ಎಂದರೆ ಈಗ ಜನರು ಮೂರ್ಖರಾಗಲಿದ್ದಾರೆ ಎಂದರ್ಥ. ನಮ್ಮ ರಾಜಕೀಯ ಪಕ್ಷಗಳು ಈಗಾಗಲೇ ದುರ್ಬಲಗೊಂಡಿವೆ. ಅವುಗಳು ತಾರ್ಕಿಕತೆಯ ಆಧಾರದಲ್ಲಿ ಜನರನ್ನು ತಲುಪಲು ಪ್ರಯತ್ನ ಪಡಲು ಸಿದ್ಧರಿಲ್ಲ. ಪಕ್ಷದ ಸಿದ್ಧಾಂತವನ್ನು ಮುಂದಿಟ್ಟು ಜನರನ್ನು ಎದುರಿಸಲು ಸಿದ್ಧರಿಲ್ಲ. ‘ನೀವು ನಮ್ಮನ್ನು ಸೋಲಿಸಿದರೂ ಪರವಾಗಿಲ್ಲ. ಆದರೆ ರಾಜಕಾರಣಿ ಧರ್ಮದ ಮಾತಾಡಿದರೆ ಅದರಿಂದ ಆತನಿಗೆ ಮಾತ್ರ ಲಾಭ, ನಿಮಗಲ್ಲ ಎಂಬುದನ್ನು ತಿಳಿದುಕೊಳ್ಳಿ ’ ಎಂದು ಜನರ ನಡುವೆ ಹೋಗಿ ಧೈರ್ಯದಿಂದ ಹೇಳಲು ಈಗ ರಾಜಕಾರಣಿಗಳು ಸಿದ್ಧರಿಲ್ಲ. ಗತಕಾಲದ ಧಾರ್ಮಿಕತೆ ಮತ್ತು ಪೌರಾಣಿಕ ಪಾತ್ರಗಳನ್ನು ಮರುಸ್ಥಾಪಿಸಲು ಚುನಾವಣೆ ನಡೆಯಬೇಕೇ ?

ಈಗ ನಾವು ಅತ್ಯಂತ ದುರ್ಬಲ ರಾಜಕೀಯಕ್ಕೆ ಸಾಕ್ಷಿಯಾಗಿದ್ದೇವೆ. ರಾಜಕೀಯದ ಆದರ್ಶವನ್ನು ಧರ್ಮಗುರು ತೀರ್ಮಾನಿಸಬಾರದು. ಅದು ಜನರ ಭಾಗೀದಾರಿಕೆ ಮತ್ತು ರಾಜಕಾರಣಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಆಗಬೇಕು. ಈಗ ರಾಜಕೀಯ ಪಕ್ಷಗಳ ಕಾರ್ಯಕರ್ತರು ಧಾರ್ಮಿಕ ವಿಷಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ ಅಥವಾ ಯಾವುದೇ ಮಠದ ಅರ್ಚಕರ ನಡುವೆ ಯಾವುದೇ ವ್ಯತ್ಯಾಸ ಇಲ್ಲವಾಗುವ ದಿನಗಳು ಇನ್ನು ದೂರವಿಲ್ಲ. ಇದು ಧರ್ಮದ ಮಟ್ಟಿಗೆ ಸರಿಯಿರಬಹುದು, ಆದರೆ ರಾಜಕೀಯಕ್ಕೆ ಇದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲರೂ ಸಂವಿಧಾನ ತೋರಿಸಿರುವ ದಾರಿಯಲ್ಲಿ ನಡೆಯಬೇಕಾಗಿದೆ. ಅಲ್ಲಿ ಧರ್ಮದ ಲೋಟ ಅಥವಾ ಕಮಂಡಲಕ್ಕೆ ಜಾಗವಿಲ್ಲ. ನಮ್ಮ ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಾಗಾಗಿ ಜನರೇ ಇದನ್ನು ಅರ್ಥಮಾಡಿಕೊಳ್ಳಬೇಕು. ಜನರೇ ತಮ್ಮ ಕಾಲಿಗೆ ಕೊಡಲಿ ಏಟು ಹೊಡೆದುಕೊಳ್ಳಲು ಹೊರಟರೆ ಅದು ಅವರ ಹಣೆಬರಹ ಅಷ್ಟೇ.

ಜನರು ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಚುನಾವಣೆಯ ಬಳಿಕ ಅವರ ಸಮಸ್ಯೆಗಳನ್ನು ಆಲಿಸಲು ಧರ್ಮಗುರುಗಳು ಬರುವುದಿಲ್ಲ . ಜನರ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರತಿಭಟಿಸಲು ಧರ್ಮಗುರುಗಳು ಇರುವುದಿಲ್ಲ. ಜನರು ಧರ್ಮಗುರು ಎಂದು ಗುರುತಿಸುತ್ತಿರುವವರು ಈಗ ರಾಜಕಾರಣಿಗಳ ಏಜೆಂಟ್‌ಗಳಾಗಿದ್ದಾರೆ. ಆ ಗುರುಗಳು ಹಿಂದೂ ಆಗಿರಲಿ ಅಥವಾ ಮುಸಲ್ಮಾನರಾಗಿರಲಿ, ಅವರೀಗ ಧರ್ಮದ ಪ್ರತಿನಿಧಿಗಳಾಗಿ ಉಳಿದಿಲ್ಲ. ಎರಡೂ ಧರ್ಮಗಳ ಪುರೋಹಿತರು ಮತ್ತು ಮೌಲ್ವಿಗಳ ಬಗ್ಗೆ ಎಚ್ಚರಿಕೆ ವಹಿಸುವ ಸಮಯ ಬಂದಿದೆ ಈಗ. ಅವರನ್ನು ರಾಜಕೀಯದಿಂದ ತೊಲಗಿಸಿ ಬಿಡುವ ಸಮಯ ಇದು. ಈಗಲೇ ಜನರು ಆ ಕೆಲಸ ಮಾಡದಿದ್ದರೆ ಇನ್ನೆಂದೂ ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಪುಸ್ತಕಗಳಲ್ಲಿ ತೋರಿಸಿರುವ ಸುವರ್ಣ ಯುಗ ಅಥವಾ ನೈತಿಕ ಯುಗವನ್ನು ರಾಜಕಾರಣಿಗಳು ನಿಮಗೆ ತಂದು ಕೊಡುವುದಿಲ್ಲ. ಈಗ ಜನರೇ ನೈತಿಕತೆ ಬೆಳೆಸಿಕೊಳ್ಳಬೇಕಾಗಿದೆ. ನೈತಿಕತೆ ಅಂದರೆ ಧಾರ್ಮಿಕತೆ. ಜನರೇ ಅನೈತಿಕತೆಯಲ್ಲಿದ್ದು ರಾಜಕಾರಣಿಗಳಲ್ಲಿ ಧಾರ್ಮಿಕತೆ ನಿರೀಕ್ಷಿಸುವುದು ಅಸಾಧ್ಯ. ಜನರ ಅನೈತಿಕತೆಯ ಲಾಭವನ್ನು ರಾಜಕಾರಣಿಗಳು ಪಡೆಯುತ್ತಾರೆ. ಆ ಮೂಲಕ ರಾಜಕಾರಣಿಗಳು ದೇಶ ಮತ್ತು ದೇಶದ ಸಂಸ್ಥೆಗಳಿಗೆ ದೊಡ್ಡ ನಷ್ಟ ತಂದೊಡ್ಡುತ್ತಾರೆ.

ರಾಜಕೀಯದಲ್ಲಿ ಕೇವಲ ಜನರ ನಾಗರಿಕತೆಯೇ ಏಕೆ ಗುರುತಾಗಬೇಕು? ಧಾರ್ಮಿಕತೆ ಬಿಟ್ಟು ಹೀಗೆ ಜನರ ನಾಗರಿಕತೆಯನ್ನು ಮಾತ್ರ ಗುರುತಿಸಿದರೆ ವಿಫಲರಾಗುವುದೇ ಇಲ್ಲ ಎಂದಿಲ್ಲ. ಆದರೆ ಇದಕ್ಕೆ ಹೆದರಿ ಎಲ್ಲಿಯವರೆಗೆ ಜನರು ದ್ವೇಷಿಸುವುದನ್ನೇ ಕಲಿಸುವ ಉಗ್ರ ಬಲಪಂಥೀಯವಾದದತ್ತ ಹೋಗುತ್ತಿರಬೇಕು? ಬಲಪಂಥೀಯತೆ ಜನರ ಯೋಚನೆಯನ್ನು ಸಂಕೀರ್ಣಗೊಳಿಸುತ್ತದೆ. ಜನರು ಜನರ ವಿರುದ್ಧವೇ ತಿರುಗಿ ಬೀಳುವಂತೆ ಮಾಡುತ್ತದೆ. ಒಂದಲ್ಲ ಒಂದು ದಿನ ಜನರು ನಾಗರಿಕತೆಯತ್ತ ತಿರುಗಿ ಬರಲೇ ಬೇಕು. ಹಾಗಾದರೆ ಈಗ ಏಕೆ ಅದನ್ನು ಅಳವಡಿಸಿಕೊಳ್ಳದೆ ಜನರು ನಷ್ಟ ಮಾಡಿಕೊಳ್ಳುತ್ತಿದ್ದಾರೆ? ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳನ್ನು ಕಂಡರೆ ಜನರು ತಕ್ಷಣ ಜಾಗೃತರಾಗಬೇಕು. ಈ ಧಾರ್ಮಿಕ ರಾಜಕೀಯದಿಂದ ಜನರ ಭವಿಷ್ಯ ಇನ್ನಷ್ಟು ಹಾಳಾಗಲಿದೆ. ಧರ್ಮಗುರುಗಳು ಜನರನ್ನು ವಂಚಿಸುತ್ತಲೇ ಬಂದಿದ್ದಾರೆ. ಅವರ ಮಹಲುಗಳು ಎದ್ದು ನಿಂತಿವೆ. ಅವರ ಆಶ್ರಮಗಳು ವಿಲಾಸಿ ತಾಣಗಳಾಗಿವೆ. ಅವರಿಂದ ಜನರಿಗೆ ಏನು ಸಿಕ್ಕಿದೆ, ಯಾವ ಸಮಸ್ಯೆ ಪರಿಹಾರವಾಗಿದೆ? ಎಂದು ಈಗ ಯೋಚಿಸಬೇಕಾಗಿದೆ. 

2019ನ್ನು 1992 ಆಗುವುದರಿಂದ ತಡೆಯಬೇಕಾಗಿದೆ. ಆಗ ಗತಕಾಲದ ಸುವರ್ಣಯುಗ ಮತ್ತು ಧಾರ್ಮಿಕತೆಯ ಸ್ವಾಭಿಮಾನದ ಹೆಸರಲ್ಲಿ ರಾಜಕೀಯ, ಜನರಲ್ಲಿ ಭ್ರಮೆ ಯನ್ನು ಸೃಷ್ಟಿಸಿಬಿಟ್ಟಿತು. ಜನರು ಒಂದು ಮಸೀದಿಯ ಮೇಲೇರಿ ಅದನ್ನು ಧ್ವಂಸಗೊಳಿಸಿಬಿಟ್ಟರು. ಬಳಿಕ ಕಂಡಕಂಡಲ್ಲಿ ಒಬ್ಬರನ್ನೊಬ್ಬರು ಕೊಲ್ಲತೊಡಗಿದರು. ಆ ಬಿರುಗಾಳಿಯಲ್ಲಿ ಒಂದು ಒಳ್ಳೆಯ ವಿಷಯವೂ ನಡೆಯಿತು. ಜನರಿಗೆ ಬಹಳ ಬೇಗ ತಮ್ಮ ಭ್ರಮೆಯ ಅರಿವಾಯಿತು. ಆ ಭ್ರಮೆಯನ್ನು ರಾಜಕೀಯದಲ್ಲಿ ಬಹಳ ಕಾಲ ಜನರು ಉಳಿಸಿಕೊಳ್ಳಲಿಲ್ಲ. ಈಗ ಮತ್ತೆ ಆ ಭ್ರಮೆಯನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸಲಾಗುತ್ತಿದೆ. ರಾಜಕಾರಣ ಸಂಪೂರ್ಣ ವಿಫಲವಾದಾಗ , ಸರಕಾರಕ್ಕೆ ಜನರ ಬಳಿ ಹೋಗಲು ಸುಳ್ಳು ಅಂಕಿ ಅಂಶಗಳ ಹೊರತು ಬೇರೇನೂ ಇಲ್ಲದಾಗ ಈ ಪ್ರಯತ್ನ ನಡೆಯುತ್ತದೆ. ಹಾಗಾಗಿಯೇ ಈಗ ಮೋದೀಜಿಯ ಸಚಿವರು ಹಿಂದೂ ತಾಳ್ಮೆಯ ಮಾತಾಡುತ್ತಿದ್ದಾರೆ. ಅವರೀಗ 20 ಕೋಟಿ ನಿರುದ್ಯೋಗಿಗಳ ಕುರಿತು ಮಾತಾಡುತ್ತಿಲ್ಲ. ಈಗ ಭಾರತದ ರಾಜಕಾರಣಕ್ಕೆ ಭೂತಕಾಲದ ಅಗತ್ಯ ಬಿದ್ದಿದೆ. ಧರ್ಮದ ಅಗತ್ಯವೂ ಬಂದಿದೆ. ಮತದಾರರು ಅಥವಾ ಜನರಲ್ಲಿ ಈಗಾಗಲೇ ಹಲವು ರೀತಿಯ ಧರ್ಮಗಳಿವೆ. ಮತದಾರರು ಭೂತಕಾಲದಿಂದ ಹೊರಬರಲು ಬಯಸಿದ್ದಾರೆ. ಆದರೆ ರಾಜಕಾರಣಿಗಳು ಅವರನ್ನು ಮತ್ತೆ ಆ ಗತಕಾಲಕ್ಕೆ ನೂಕಲು ಬಯಸಿದ್ದಾರೆ. ಜನರು ರಾಜಕೀಯದ ಬದಲು ಧರ್ಮವನ್ನೇ ರಾಜಕೀಯ ಎಂದು ಪರಿಗಣಿಸಿದರೆ ಅವರು ತಮ್ಮ ಗುರುತನ್ನೇ ಕಳೆದುಕೊಳ್ಳುತ್ತಾರೆ. ಜನರು ಮತ್ತೆ ಜನರಾಗಿ ಉಳಿಯುವುದಿಲ್ಲ. ಅಧ್ಯಾತ್ಮದ ಮಾರ್ಗ ಧರ್ಮವೇ ಹೊರತು ರಾಜಕೀಯ ಅಲ್ಲ. ರಾಜಕೀಯದಿಂದ ಮಾತ್ರ ರಾಜಕೀಯದ ಮಾರ್ಗ ನಿರ್ಧರಿತವಾಗುತ್ತದೆ.

2019 ರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಯಾರು ಸೋಲುತ್ತಾರೆ ಎಂದು ಯಾರೂ ಚರ್ಚೆ ಮಾಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಧರ್ಮದ ಭ್ರಮೆ ಹಬ್ಬಿದರೆ ಜನರು ಸೋಲುತ್ತಾರೆ. ಧರ್ಮದ ಉನ್ಮಾದದಲ್ಲಿ ಜನರು ಮುಗಿದೇ ಹೋಗುತ್ತಾರೆ. ಹೀಗೆ ಒಮ್ಮೆ ಜನರೇ ತಮ್ಮ ಸಮಾಪ್ತಿ ಘೋಷಿಸಿಕೊಂಡರೆ ಮತ್ತೆ ರಾಜಕೀಯಕ್ಕೆ ಧರ್ಮದ ಅಗತ್ಯವೂ ಬೀಳುವುದಿಲ್ಲ. ಪ್ರಜೆಗಳೇ ಅಳಿದು ಹೋದರೆ ಮತ್ತೆ ಪ್ರಭುತ್ವ ಯಾರ ಕೆಲಸಕ್ಕೆ ಬರುತ್ತದೆ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ 2019ರ ಚುನಾವಣೆ ಜನರು ಜನರಾಗಿ ಮಾರ್ಪಾಡಾಗಬೇಕಾದ ಚುನಾವಣೆ. ಜನರು ಜನರ ರೂಪದಲ್ಲೇ ಉಳಿದುಕೊಳ್ಳುತ್ತಾರೆ ಎಂದು ಅವರು ಸಾಬೀತುಪಡಿಸಬೇಕಾಗಿದೆ. ಈ ಬಾರಿ ಜನರು ತಮಗಾಗಿ ಹೋರಾಡಲು ಅಣಿಯಾಗದಿದ್ದರೆ ಮುಂದಿನ ಬಾರಿ ಅವರ ಪರವಾಗಿ ಹೋರಾಡುವವರು ಯಾರೂ ಉಳಿಯುವುದಿಲ್ಲ. ಹಾಗಾಗಿ ಈ ಯುದ್ಧ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರದ್ದಲ್ಲ, ಇದು ಜನರ ಯುದ್ಧ.

2019ನ್ನು 1992 ಆಗುವುದರಿಂದ ತಡೆಯಬೇಕಾಗಿದೆ. ಆಗ ಗತಕಾಲದ ಸುವರ್ಣಯುಗ ಮತ್ತು ಧಾರ್ಮಿಕತೆಯ ಸ್ವಾಭಿಮಾನದ ಹೆಸರಲ್ಲಿ ರಾಜಕೀಯ, ಜನರಲ್ಲಿ ಭ್ರಮೆಯನ್ನು ಸೃಷ್ಟಿಸಿಬಿಟ್ಟಿತು. ಜನರು ಒಂದು ಮಸೀದಿಯ ಮೇಲೇರಿ ಅದನ್ನು ಧ್ವಂಸಗೊಳಿಸಿಬಿಟ್ಟರು. ಬಳಿಕ ಕಂಡಕಂಡಲ್ಲಿ ಒಬ್ಬರನ್ನೊಬ್ಬರು ಕೊಲ್ಲತೊಡಗಿದರು. ಆ ಬಿರುಗಾಳಿಯಲ್ಲಿ ಒಂದು ಒಳ್ಳೆಯ ವಿಷಯವೂ ನಡೆಯಿತು. ಜನರಿಗೆ ಬಹಳ ಬೇಗ ತಮ್ಮ ಭ್ರಮೆಯ ಅರಿವಾಯಿತು. ಆ ಭ್ರಮೆಯನ್ನು ರಾಜಕೀಯದಲ್ಲಿ ಬಹಳ ಕಾಲ ಜನರು ಉಳಿಸಿಕೊಳ್ಳಲಿಲ್ಲ. ಈಗ ಮತ್ತೆ ಆ ಭ್ರಮೆಯನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸ ಲಾಗುತ್ತಿದೆ. ರಾಜಕಾರಣ ಸಂಪೂರ್ಣ ವಿಫಲವಾದಾಗ, ಸರಕಾರಕ್ಕೆ ಜನರ ಬಳಿ ಹೋಗಲು ಸುಳ್ಳು ಅಂಕಿ ಅಂಶಗಳ ಹೊರತು ಬೇರೇನೂ ಇಲ್ಲದಾಗ ಈ ಪ್ರಯತ್ನ ನಡೆಯುತ್ತದೆ. ಹಾಗಾಗಿಯೇ ಈಗ ಮೋದೀಜಿಯ ಸಚಿವರು ಹಿಂದೂ ತಾಳ್ಮೆಯ ಮಾತಾಡುತ್ತಿದ್ದಾರೆ. ಅವರೀಗ 20 ಕೋಟಿ ನಿರುದ್ಯೋಗಿಗಳ ಕುರಿತು ಮಾತಾಡುತ್ತಿಲ್ಲ.

ಈಗ ನಾವು ಅತ್ಯಂತ ದುರ್ಬಲ ರಾಜಕೀಯಕ್ಕೆ ಸಾಕ್ಷಿಯಾಗಿದ್ದೇವೆ. ರಾಜಕೀಯದ ಆದರ್ಶವನ್ನು ಧರ್ಮಗುರು ತೀರ್ಮಾನಿಸಬಾರದು. ಅದು ಜನರ ಭಾಗೀದಾರಿಕೆ ಮತ್ತು ರಾಜಕಾರಣಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಆಗಬೇಕು. ಈಗ ರಾಜಕೀಯ ಪಕ್ಷಗಳ ಕಾರ್ಯಕರ್ತರು ಧಾರ್ಮಿಕ ವಿಷಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ ಅಥವಾ ಯಾವುದೇ ಮಠದ ಅರ್ಚಕರ ನಡುವೆ ಯಾವುದೇ ವ್ಯತ್ಯಾಸ ಇಲ್ಲವಾಗುವ ದಿನಗಳು ಇನ್ನು ದೂರವಿಲ್ಲ. ಇದು ಧರ್ಮದ ಮಟ್ಟಿಗೆ ಸರಿಯಿರಬಹುದು, ಆದರೆ ರಾಜಕೀಯಕ್ಕೆ ಇದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲರೂ ಸಂವಿಧಾನ ತೋರಿಸಿರುವ ದಾರಿಯಲ್ಲಿ ನಡೆಯ ಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)