varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಓದುಗರಿಂದಲೇ ಹಣ ಸಂಗ್ರಹಿಸುವುದು ಸ್ವತಂತ್ರ ಮಾಧ್ಯಮಗಳ ದೊಡ್ಡ ಸವಾಲು: ಸಿದ್ಧಾರ್ಥ ವರದರಾಜನ್

ವಾರ್ತಾ ಭಾರತಿ : 4 Dec, 2018
ಸಂದರ್ಶನ: ನಾದಿಯಾ ನಿಸಾಫ್

ದೇಶದ ಹಿರಿಯ ಪತ್ರಕರ್ತ, ಖ್ಯಾತ ರಾಜಕೀಯ ವಿಶ್ಲೇಷಕ, ಮೊನಚು ಮಾತುಗಾರ, ಲೇಖಕ ಸಿದ್ಧಾರ್ಥ ವರದರಾಜನ್ thewire.in) ಸುದ್ದಿ, ವಿಶ್ಲೇಷಣೆ ಜಾಲತಾಣದ ಸ್ಥಾಪಕ ಸಂಪಾದಕ. ಅಂತರ್‌ರಾಷ್ಟ್ರೀಯ ರಾಜಕೀಯವನ್ನು ಆಳವಾಗಿ ಅಧ್ಯಯನ ಮಾಡಿದವರು.

thewire.in ಮೂಲಕ ದೇಶದ ಮುಖ್ಯವಾಹಿನಿಯ ಬೃಹತ್ ಮಾಧ್ಯಮ ಸಂಸ್ಥೆಗಳು ಪ್ರಭುತ್ವಕ್ಕೆ ಕೇಳಲು ಹಿಂಜರಿಯುವ ಪ್ರಶ್ನೆಗಳನ್ನು ಕೇಳುವ, ಅವುಗಳು ಬಚ್ಚಿಡಲು ಶ್ರಮಿಸುವ ಕಟು ಸತ್ಯಗಳನ್ನು ಬಯಲಿಗೆಳೆಯುವ ಮೂಲಕ ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರಾದವರು. ‘ದಿ ಹಿಂದೂ’ ಪತ್ರಿಕೆಯ ಮಾಜಿ ಸಂಪಾದಕ. ನ್ಯೂಯಾರ್ಕ್ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮದ ಪಾಠ ಮಾಡಿದವರು. ಪ್ರತಿಷ್ಠಿತ ರಾಮನಾಥ ಗೋಯೆಂಕಾ ಮತ್ತು ಸ್ಟಾನ್ಫೋರ್ಡ್ ವಿವಿಯ ಶೋರೆನ್ಸ್ಟೀನ್ ಅವಾರ್ಡ್ ಸಹಿತ ಹಲವು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರು. 2002ರ ಗುಜರಾತ್ ಹತ್ಯಾಕಾಂಡದ ಕುರಿತು ‘ಗುಜರಾತ್-ದಿ ಮೇಕಿಂಗ್ ಆಫ್ ಎ ಟ್ರಾಜೆಡಿ’ ಎಂಬ ಪ್ರಮುಖ ಪುಸ್ತಕವನ್ನು ಸಂಪಾದಿಸಿದ್ದಾರೆ.

ಸೋಷಿಯಲ್ ಮೀಡಿಯಾ ವೃತ್ತಿಪರ ಮಾಧ್ಯಮಗಳಿಗೆ ಪರ್ಯಾಯ ಆಗಲಾರದು. ಏಕೆಂದರೆ ಮಾಧ್ಯಮ ಗಳಲ್ಲಿ ಸಂಪಾದಕರ ಪಾತ್ರ ಬಹಳ ಮುಖ್ಯ. ಮಾಧ್ಯಮಗಳಲ್ಲಿ ಬರುವ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳು ಸಮಾನ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತವೆ. ಇನ್ನು ದೊಡ್ಡ ಮಾಧ್ಯಮ ಸಂಸ್ಥೆಗಳು ನಿರ್ಲಕ್ಷಿಸುವ ಅಥವಾ ಬಚ್ಚಿಡುವ ಮಾಹಿತಿಗಳನ್ನೂ ಈ ಸಾಮಾಜಿಕ ಜಾಲತಾಣಗಳು ಬಯಲಿಗೆಳೆಯುತ್ತವೆ. ಆದರೆ ವೃತ್ತಿಪರ ಮಾಧ್ಯಮ ವರದಿಗಾರಿಕೆ ಮತ್ತು ಸುದ್ದಿ ಸಂಗ್ರಹ ಹಾಗೂ ಹಂಚಿಕೆಗೆ ಸಾಮಾಜಿಕ ಜಾಲತಾಣಗಳು ಪರ್ಯಾಯವಲ್ಲ.

ವಾರ್ತಾಭಾರತಿ: ದೇಶದ ಸಾಮಾಜಿಕ ರಾಜಕೀಯ ಬೆಳವಣಿಗೆಗಳನ್ನು ನೀವು ಗಮನಿಸುತ್ತಾ ಬಂದವರು. ಸದ್ಯದ ದೇಶದ ಸ್ಥಿತಿಗತಿಗಳ ಕುರಿತು ನಿಮಗಿರುವ ಪ್ರಮುಖ ಕಾಳಜಿಗಳೇನು? ಈಗ ದೇಶ ಮುಂದುವರಿಯುತ್ತಿರುವ ಹಾದಿಯ ಬಗ್ಗೆ ಏನು ಹೇಳುತ್ತೀರಿ?

ಸಿದ್ಧಾರ್ಥ ವರದರಾಜನ್: ನನ್ನನ್ನು ಈಗ ಅತ್ಯಂತ ಹೆಚ್ಚು ಕಾಡುತ್ತಿರುವುದು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ನಡೆಸುತ್ತಿರುವ ವ್ಯವಸ್ಥಿತ ಪ್ರಯತ್ನಗಳು. ಇದರ ಮೂಲಕ ಜನರ ಬದುಕನ್ನು ಸುಭದ್ರಗೊಳಿಸುವಲ್ಲಿನ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಅದರ ಬಗ್ಗೆ ಜನತೆಗೆ ಉತ್ತರಿಸುವುದನ್ನು ತಪ್ಪಿಸಲು ಅದು ಪ್ರಯತ್ನಿಸುತ್ತಿದೆ. ಈ ವಿಭಜನೆ ಅಜೆಂಡಾದಂತೆ ಬಿಜೆಪಿ ಸರಕಾರ ಜಾರಿಗೆ ತರುತ್ತಿರುವ ನೀತಿ ನಿಯಮಗಳು ಇಲ್ಲಿ ಶ್ರೀಮಂತರು, ಬಡವರು, ಇರುವವರು, ಇಲ್ಲದವರ ನಡುವೆ ಈಗಾಗಲೇ ಇರುವ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ.

ವಾರ್ತಾಭಾರತಿ: ನೀವು ಗುಜರಾತ್ ಹತ್ಯಾಕಾಂಡದ ಎಲ್ಲ ಆಯಾಮಗಳ ಕುರಿತು ಆಳವಾಗಿ ಅಧ್ಯಯನ ಮಾಡಿ ಪುಸ್ತಕ ಬರೆದವರು. ಅಲ್ಲಿಂದ ಇಲ್ಲಿಯವರೆಗೆ ದೇಶದ ರಾಜಕಾರಣ ಬೆಳೆದು ಬಂದ ಬಗೆಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

ಸಿದ್ಧಾರ್ಥ ವರದರಾಜನ್: 1984ರ ಹತ್ಯಾಕಾಂಡದ ಅಪರಾಧಿಗಳನ್ನು ಶಿಕ್ಷಿಸದೇ ಬಿಟ್ಟಿದ್ದು 2002ರ ಹತ್ಯಾಕಾಂಡವನ್ನು ಆಯೋಜಿಸಿದ ಪೊಲೀಸರಿಗೆ ಮತ್ತು ರಾಜಕಾರಣಿಗಳಿಗೆ ಬಲ ತುಂಬಿತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ 2002ರ ಹತ್ಯಾಕಾಂಡದ ಕೆಲವು ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ ಆ ಅಪರಾಧಿಗಳ ಹಿಂದಿದ್ದ ರಿಂಗ್ ಲೀಡರ್‌ಗಳು ಇನ್ನೂ ಯಾವುದೇ ಬೆಲೆ ತೆತ್ತಿಲ್ಲ.

ವಾರ್ತಾಭಾರತಿ: ದೇಶದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಗುಂಪು ಕೊಲೆ, ಹಿಂಸಾಚಾರಗಳು ಹಾಗೂ ಅವುಗಳ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಭಾರೀ ಕಳವಳ ಮೂಡಿಸಿದೆ. ಇದು ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿಯೇಟು ಹಾಕುತ್ತಿದೆ ಎಂಬ ಆತಂಕವಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

ಸಿದ್ಧಾರ್ಥ ವರದರಾಜನ್: ಈ ದಾಳಿಗಳ ಹಿಂದಿರುವುದು ಕೇವಲ ಅಲ್ಪಸಂಖ್ಯಾತರನ್ನು ಹೆದರಿಸುವ ಉದ್ದೇಶ ಮಾತ್ರವಲ್ಲ. ದೇಶದ ಎಲ್ಲ ಪ್ರಜ್ಞಾವಂತ ನಾಗರಿಕರೂ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಸಂಘಪರಿವಾರದ ವಿಭಜನಕಾರಿ ರಾಜಕೀಯವನ್ನು ಒಪ್ಪಿಕೊಳ್ಳಬೇಕು ಎಂಬ ಗುರಿ ಇವುಗಳ ಹಿಂದಿದೆ. ಇದೊಂದು ಬಹಳ ಜಾಗರೂಕತೆಯಿಂದ ಜಾರಿಗೆ ತರಲಾಗುತ್ತಿರುವ ಕಾರ್ಯತಂತ್ರ. ಅಂದರೆ ರಾಷ್ಟ್ರಮಟ್ಟದಲ್ಲಿ ತೆಳುವಾಗಿ ಕೋಮುವಾದವನ್ನು ಹರಡುವುದು, ಅದಕ್ಕೆ ಪೂರಕವಾಗಿ ಅಲ್ಲಲ್ಲಿ ಸ್ಥಳೀಯವಾಗಿ ಮಾತ್ರ ದೊಡ್ಡ ಮಟ್ಟದ ಕೋಮು ಹಿಂಸಾಚಾರಗಳನ್ನು ನಡೆಸುವುದು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಮೇಲಾಗುವ ಋಣಾತ್ಮಕ ಪರಿಣಾಮವನ್ನು ನಿಯಂತ್ರಿಸುವುದು.

ವಾರ್ತಾಭಾರತಿ: ಮುಂದಿನ ಲೋಕಸಭಾ ಚುನಾವಣೆ ಭಾರತದ ಪಾಲಿಗೆ ಎಷ್ಟು ಮುಖ್ಯ? ಅದರ ಫಲಿತಾಂಶ ದೇಶದ ಒಟ್ಟು ವ್ಯವಸ್ಥೆಯ ಮೇಲೆ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ನಿಮಗೆ ಅನಿಸುತ್ತಿದೆಯೇ?

ಸಿದ್ಧಾರ್ಥ ವರದರಾಜನ್: ಮುಂದಿನ ಚುನಾವಣೆಯಲ್ಲಿ ಜನರು ಕಾನೂನು ಪರಿಪಾಲನೆ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಜನರ ಮೂಲಭೂತ ಹಕ್ಕುಗಳ ರಕ್ಷಣೆ, ಕಾರ್ಮಿಕರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಯುವಜನತೆಯ ಹಕ್ಕುಗಳ ರಕ್ಷಣೆ- ಇವೆಲ್ಲವುಗಳ ಪರವಾಗಿ ಮತ ಚಲಾಯಿಸಬೇಕಾದ್ದು ಅತ್ಯಗತ್ಯ.

ವಾರ್ತಾಭಾರತಿ: ಜಾತ್ಯತೀತ ಪಕ್ಷಗಳ ಮಹಾ ಮೈತ್ರಿಕೂಟ ಅಥವಾ ತೃತೀಯ ರಂಗ ರಚನೆಯ ಸಾಧ್ಯತೆ ಹಾಗೂ ಅವುಗಳಿಗಿರುವ ಅವಕಾಶದ ಬಗ್ಗೆ ನಿಮ್ಮ ಅನಿಸಿಕೆ ಏನು?

ಸಿದ್ಧಾರ್ಥ ವರದರಾಜನ್: 2019ರಲ್ಲಿ ಬಿಜೆಪಿ ಗೆದ್ದರೆ ವಿಪಕ್ಷಗಳ ಅಸ್ತಿತ್ವಕ್ಕೇ ಅಪಾಯ ಬರಲಿದೆ. ಹಾಗಾಗಿ ಎಲ್ಲ ಪಕ್ಷಗಳು ಅಲ್ಲದಿದ್ದರೂ ಬಹುತೇಕ ಪಕ್ಷಗಳು ಈ ಅಪಾಯವನ್ನು ಅರ್ಥ ಮಾಡಿಕೊಂಡಿವೆ. ಹಾಗಾಗಿ ಅವುಗಳು 2019ರ ಚುನಾವಣೆಗೆ ಒಗ್ಗಟ್ಟಾಗಿ ಹೋರಾಡಲು ಅಣಿಯಾಗಬಹುದು.

ವಾರ್ತಾಭಾರತಿ: ಈಗ ಮಾಧ್ಯಮಗಳಲ್ಲಿ ಜನರ ಬದುಕು ಮತ್ತು ಸರಕಾರದ ಕಾರ್ಯವೈಖರಿಯ ಕುರಿತು ಚರ್ಚೆಯಾಗುವುದು ತೀರಾ ಕಡಿಮೆಯಾಗಿ ಸರಕಾರ ಚರ್ಚೆಗೆ ನೀಡಿದ ವಿಷಯಗಳೇ ಬಿಸಿಬಿಸಿ ಚರ್ಚೆಯಲ್ಲಿವೆ. ಹೀಗಿರುವಾಗ ಸರಕಾರದ ವಸ್ತುನಿಷ್ಠ ವಿಶ್ಲೇಷಣೆ ಹಾಗೂ ಅದರ ವೈಫಲ್ಯಗಳನ್ನು ಬಯಲಿಗೆಳೆಯಲು ಜನರು ಯಾರನ್ನು ಅವಲಂಬಿಸಬೇಕು?

ಸಿದ್ಧಾರ್ಥ ವರದರಾಜನ್: ದೇಶದ ಬೃಹತ್ ಮಾಧ್ಯಮ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿ ವಾಸ್ತವ ಸ್ಥಿತಿಗತಿಗಳ ಕುರಿತು ವರದಿ ಮಾಡಲು ಹಿಂಜರಿಯುವ ಪರಿಸ್ಥಿತಿ ಇರುವುದನ್ನು ನೋಡಿ ನಾವು The Wire  ಸುದ್ದಿ ತಾಣವನ್ನು ಪ್ರಾರಂಭಿಸಿದೆವು. ಅದೇ ರೀತಿ ಇಂದು ಇಂಗ್ಲಿಷ್‌ನಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಹಲವಾರು ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಪ್ರಾರಂಭವಾಗಿ ನಡೆಯುತ್ತಿವೆ. ಹಾಗಾಗಿ ಈಗ ಓದುಗರು ಮತ್ತು ವೀಕ್ಷಕರೂ ಈ ವಸ್ತುನಿಷ್ಠ, ವಿಶ್ವಾಸಾರ್ಹ ಮಾಧ್ಯಮಗಳತ್ತ ತಿರುಗುತ್ತಿದ್ದಾರೆ.

ವಾರ್ತಾಭಾರತಿ: ನಮ್ಮ ದೇಶದಲ್ಲಿ ಮುಖ್ಯವಾಹಿನಿಯ ಪತ್ರಿಕೆಗಳು, ಟಿವಿ ಚಾನೆಲ್‌ಗಳಿಗೆ ಹೋಲಿಸಿದರೆ ಸಾಮಾಜಿಕ ಜಾಲತಾಣಗಳು ಸರಕಾರದ ವೈಫಲ್ಯಗಳನ್ನು ಬಯಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಪರ್ಯಾಯ ಮಾಧ್ಯಮಗಳಾಗಿ ಸಾಮಾಜಿಕ ಜಾಲತಾಣಗಳ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

ಸಿದ್ಧಾರ್ಥ ವರದರಾಜನ್: ಸೋಷಿಯಲ್ ಮೀಡಿಯಾ ವೃತ್ತಿಪರ ಮಾಧ್ಯಮಗಳಿಗೆ ಪರ್ಯಾಯವಾಗಲಾರದು. ಏಕೆಂದರೆ ಮಾಧ್ಯಮಗಳಲ್ಲಿ ಸಂಪಾದಕರ ಪಾತ್ರ ಬಹಳ ಮುಖ್ಯ. ಮಾಧ್ಯಮಗಳಲ್ಲಿ ಬರುವ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳು ಸಮಾನ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತವೆ. ಇನ್ನು ದೊಡ್ಡ ಮಾಧ್ಯಮ ಸಂಸ್ಥೆಗಳು ನಿರ್ಲಕ್ಷಿಸುವ ಅಥವಾ ಬಚ್ಚಿಡುವ ಮಾಹಿತಿಗಳನ್ನೂ ಈ ಸಾಮಾಜಿಕ ಜಾಲತಾಣಗಳು ಬಯಲಿಗೆಳೆಯುತ್ತವೆ. ಆದರೆ ವೃತ್ತಿಪರ ಮಾಧ್ಯಮ ವರದಿಗಾರಿಕೆ ಮತ್ತು ಸುದ್ದಿ ಸಂಗ್ರಹ ಹಾಗೂ ಹಂಚಿಕೆಗೆ ಸಾಮಾಜಿಕ ಜಾಲತಾಣಗಳು ಪರ್ಯಾಯವಲ್ಲ.

ವಾರ್ತಾಭಾರತಿ: ಇಂದು ದೇಶದಲ್ಲಿ ಮಾಧ್ಯಮಗಳ ಎದುರಿರುವ ಬಹುದೊಡ್ಡ ಸವಾಲು ಯಾವುದು?

ಸಿದ್ಧಾರ್ಥ ವರದರಾಜನ್: ಸ್ವತಂತ್ರ ಮಾಧ್ಯಮ ನಡೆಸಲು ಓದುಗರಿಂದ ಹಣ ಸಂಗ್ರಹಿಸುವುದು ಮತ್ತು ಆ ಹಣವನ್ನು ಪ್ರಾಮಾಣಿಕ, ನಿರ್ಭೀತ ವರದಿಗಾರಿಕೆಗೆ ಬಳಸುವುದು ಹೇಗೆ ಎಂಬುದೇ ಇಂದಿನ ಮಾಧ್ಯಮಗಳ ಮುಂದಿರುವ ಸವಾಲು.

ವಾರ್ತಾಭಾರತಿ: The Wire ದೇಣಿಗೆ ಕೊಡುವ ಸಿರಿವಂತರು ಹಾಗೂ ಓದುಗರ ಕೊಡುಗೆ ನೆಚ್ಚಿಕೊಂಡ ವೆಬ್‌ಸೈಟ್. ಇಂತಹ ಮಾಧ್ಯಮಗಳಿಗೆ ಇಲ್ಲಿ ಭವಿಷ್ಯವಿದೆಯೇ?

ಸಿದ್ಧಾರ್ಥ ವರದರಾಜನ್: ಓದುಗರೇ ಹಣ ಕೊಟ್ಟು ಓದುವ ಸುದ್ದಿಮಾಧ್ಯಮಗಳಿಗೆ ಮಾತ್ರ ಭವಿಷ್ಯ ಎಂದು ನಮಗೆ ಮನವರಿಕೆಯಾಗಿದೆ. The Wire ಕೂಡ ಓದುಗರ ಬೆಂಬಲವನ್ನೇ ನೆಚ್ಚಿಕೊಂಡು ಮುನ್ನಡೆಯಲಿದೆ.

ವಾರ್ತಾಭಾರತಿ: ವಾರ್ತಾಭಾರತಿ ಪತ್ರಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅದರ ಓದುಗರಿಗೆ ನಿಮ್ಮ ಸಂದೇಶವೇನು ?

ಸಿದ್ಧಾರ್ಥ ವರದರಾಜನ್: ನನಗೆ ಕನ್ನಡ ಓದಲು ಬರುವುದಿಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಆದರೆ ಇಂದು ಸ್ವತಂತ್ರ ಮಾಧ್ಯಮಗಳಿಗೆ ಎಲ್ಲ ಭಾಷೆಗಳಲ್ಲೂ ಅವಕಾಶವಿದೆ. ಕನ್ನಡ ದಲ್ಲಿ ‘ವಾರ್ತಾಭಾರತಿ’ ವಸ್ತುನಿಷ್ಠವಾಗಿ, ವೃತ್ತಿಪರವಾಗಿ, ಜವಾಬ್ದಾರಿಯುತವಾಗಿ ಹಾಗೂ ಆರ್ಥಿಕವಾಗಿಯೂ ಸ್ವಾವಲಂಬಿಯಾಗಿ ಆ ಅವಕಾಶವನ್ನು ಬಳಸಿಕೊಳ್ಳಲಿ ಎಂದು ಆಶಿಸುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)