ಶಿವಮೊಗ್ಗ: ಪಿಡಬ್ಲ್ಯೂಡಿ ಇಲಾಖೆಯಿಂದ ಸೇತುವೆ ನಿರ್ಮಾಣ; ಪೊಲೀಸ್ ಠಾಣೆ ಮೆಟ್ಟಿಲೇರಿದ ಜಾಗದ ವಿವಾದ
ಶಿವಮೊಗ್ಗ, ಡಿ.4: ಮಹಾನಗರ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿಯ ಸಹ್ಯಾದ್ರಿ ನಗರ ಬಡಾವಣೆ ಬಳಿಯ ಶಿವಮೊಗ್ಗ-ರಾಮನಗರ ಜಿಲ್ಲಾ ಹೆದ್ದಾರಿಗೆ ನಿರ್ಮಿಸಲಾಗಿರುವ ಸೇತುವೆಯ ಜಾಗ ತನ್ನದಾಗಿದೆ ಎಂದು ಲೋಕೋಪಯೋಗಿ ಇಲಾಖೆ ವಿರುದ್ದ ವ್ಯಕ್ತಿಯೋರ್ವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪೊಲೀಸರ ಸೂಚನೆಯ ಹಿನ್ನೆಲೆಯಲ್ಲಿಯೇ, ಕಳೆದ ಕೆಲ ದಿನಗಳಿಂದ ಸೇತುವೆ ಬಳಿ ಲೋಕೋಪಯೋಗಿ ಇಲಾಖೆ ನಡೆಸುತ್ತಿದ್ದ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಮಂಗಳವಾರದಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಸದ್ಯಕ್ಕೆ ಸೇತುವೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವುದು ಅನುಮಾನವಾಗಿದೆ.
ಇದೆಲ್ಲದರ ನಡುವೆ ನಾಗರೀಕರು, ಕಾಲಮಿತಿಯಲ್ಲಿ ಸುವ್ಯವಸ್ಥಿತ ಸಂಪರ್ಕ ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗೊಂದಲ: ಸಹ್ಯಾದ್ರಿ ನಗರ ರಸ್ತೆಯ ಬಳಿಯ ಸೇತುವೆಯು ಕಿರಿದಾಗಿತ್ತು. ಹಾಗೆಯೇ ಶಿಥಿಲಾವಸ್ಥೆಯಲ್ಲಿತ್ತು. ಇದರಿಂದ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿತ್ತು. ನಾಗರೀಕರು ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಿರಂತರ ಪ್ರತಿಭಟನೆ ಕೂಡ ನಡೆಸಿದ್ದರು.
ಈ ಹಿಂದಿನ ಪಿಡಬ್ಲ್ಯೂಡಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣರವರು ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಂಡಿದ್ದರು. ಅದರಂತೆ ಗುತ್ತಿಗೆದಾರರು ಕಾಲಮಿತಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಳಿಸಿದ್ದರು. ಆದರೆ ಸಂಪರ್ಕ ರಸ್ತೆ ನಿರ್ಮಿಸದ ಕಾರಣದಿಂದ ಸೇತುವೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಇತ್ತೀಚೆಗೆ ಕೆಲ ನಾಗರೀಕರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿ, ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಈ ಕಾರಣದಿಂದ ಪಿಡಬ್ಲ್ಯೂಡಿ ಇಲಾಖೆಯು ತಾತ್ಕಾಲಿಕ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಮಣ್ಣು ಹಾಕಿ ನೆಲ ಸಮತಟ್ಟು ಕಾರ್ಯ ಕೂಡ ನಡೆಸಲಾರಂಭಿಸಿತ್ತು. 2-3 ದಿನಗಳಲ್ಲಿ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿತ್ತು.
ಆದರೆ 'ಸೇತುವೆ ನಿರ್ಮಿಸಲಾಗಿರುವ ಜಾಗ ತನ್ನದಾಗಿದೆ. ಭೂ ಸ್ವಾದೀನ ಪ್ರಕ್ರಿಯೆ ನಡೆಸದೆ, ಪರಿಹಾರ ನೀಡದೆ ಸೇತುವೆ ನಿರ್ಮಿಸಲಾಗಿದೆ. ಇದೀಗ ಸಂಪರ್ಕ ರಸ್ತೆ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತಂತೆ ತಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಈ ಕಾರಣದಿಂದ ಪಿಡಬ್ಲ್ಯೂಡಿ ಇಲಾಖೆ ನಡೆಸುತ್ತಿರುವ ಕಾಮಗಾರಿಗೆ ತಡೆ ನೀಡುವಂತೆ ವ್ಯಕ್ತಿಯೋರ್ವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಪಿಡಬ್ಲ್ಯೂಡಿ ಇಲಾಖೆಯು ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲಾಗಿರುವ ಜಾಗವು ಸರ್ಕಾರಿ ಜಾಗವಾಗಿದೆ. ನಗರಾಭಿವೃದ್ದಿ ಪ್ರಾಧಿಕಾರದ ನೀಲನಕ್ಷೆಯ ಅನುಸಾರವೇ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ಸರ್ವೇ ನಡೆಸಲಿ: ಸೇತುವೆ ನಿರ್ಮಿಸಲಾಗಿರುವ ಜಾಗವು ಖಾಸಗಿ ವ್ಯಕ್ತಿಗೆ ಸಂಬಂಧಿಸಿದ್ದೆ ಅಥವಾ ಅಲ್ಲವೇ ಎಂಬುವುದರ ಕುರಿತಂತೆ ಜಿಲ್ಲಾಡಳಿತ ಜಂಟಿ ಸರ್ವೇ ನಡೆಸಬೇಕು. ದಾಖಲಾತಿಗಳ ಪರಿಶೀಲಿಸಬೇಕು. ಹಾಗೆಯೇ ಈ ಸ್ಥಳದಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಅಭಿವೃದ್ದಿಗೊಳಿಸಿ, ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಗೊಂದಲ ಪರಿಹರಿಸಲಿ : ಮುಖಂಡ ಜಿ.ಎಂ.ಸುರೇಶ್ಬಾಬು
'ಒಂದೆಡೆ ಖಾಸಗಿ ವ್ಯಕ್ತಿಯೂ ಸೇತುವೆ ನಿರ್ಮಾಣವಾಗಿರುವ ಜಾಗ ತನ್ನದೆನ್ನುತ್ತಿದ್ದಾರೆ. ಇನ್ನೊಂದೆಡೆ ಪಿಡಬ್ಲ್ಯೂಡಿ ಇಲಾಖೆಯವರು ಪ್ರಾಧಿಕಾರದ ಮಹಾಯೋಜನೆಯ ನಕ್ಷೆಯನುಸಾರವೇ ಸೇತುವೆ ನಿರ್ಮಿಸಿರುವುದಾಗಿ ಹೇಳುತ್ತಿದ್ದಾರೆ. ಈ ಗೊಂದಲದಿಂದ ಸೇತುವೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ತತ್ಕ್ಷಣವೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ದಾಖಲಾತಿಗಳ ಪರಿಶೀಲಿಸಬೇಕು. ಸೇತುವೆ ನಿರ್ಮಾಣಗೊಂಡಿರುವ ಸ್ಥಳದ ಜಾಗದ ಮಾಲಕತ್ವ ಯಾರಿಗೆ ಸೇರಿದ್ದು ಎಂಬುವುದನ್ನು ದೃಢಪಡಿಸಬೇಕು. ಕಾಲಮಿತಿಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಪ್ರಗತಿಪರ ಹೋರಾಟಗಾರ ಜಿ.ಎಂ.ಸುರೇಶ್ಬಾಬು ಆಗ್ರಹಿಸಿದ್ದಾರೆ.
ಜಂಟಿ ಸರ್ವೇಯಾಗಲಿ : ಯುವ ಮುಖಂಡ ಸಿ.ಜೆ.ಮಧುಸೂಧನ್
'ಸೇತುವೆ ನಿರ್ಮಿಸಲಾಗಿರುವ ಜಾಗದ ಮಾಲಕತ್ವದ ಬಗ್ಗೆ ಕಂದಾಯ ಇಲಾಖೆ, ಸಿಟಿ ಸರ್ವೇ, ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಬೇಕು. ವಿಳಂಬಕ್ಕೆ ಆಸ್ಪದವಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಹಾಗೆಯೇ ಸಹ್ಯಾದ್ರಿ ನಗರದ ಬಳಿಯ ಜಿಲ್ಲಾ ಹೆದ್ದಾರಿಯನ್ನು ಅಗಲೀಕರಣಗೊಳಿಸಿ, ಮೇಲ್ದರ್ಜೆಗೇರಿಸಬೇಕು' ಎಂದು ಯುವ ಮುಖಂಡ ಸಿ.ಜೆ.ಮಧುಸೂಧನ್ರವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.