ಕನಸಿನ ಲೋಕದ 'ನಿಗೂಢ ಪಯಣ'
ಶ್ಯಾಮಲಾ ಮಾಧವ
ಮುಂಬೈ ನೆಲದ ಕನ್ನಡದ ಕರುಳು ಶ್ಯಾಮಲಾ ಮಾಧವ. ಭಾಷಾಂತರ ಸಾಹಿತ್ಯಕ್ಕೆ ಇವರ ಕೊಡುಗೆ ಬಹುದೊಡ್ಡದು. ಗಾನ್ ವಿತ್ ದ ವಿಂಡ್, ಫ್ರಾಂಕಿನ್‌ಸ್ಟೈನ್‌ನಂತಹ ಕಾದಂಬರಿಗಳನ್ನು ಕನ್ನಡಕ್ಕೆ ತಂದವರು. ಉರ್ದುವಿನಿಂದ ಇವರು ಅನುವಾದಿಸಿದ ‘ಆಲಂಪನಾ’ ಕೂಡ ಭಾರೀ ಓದುಗರನ್ನು ತನ್ನೆಡೆಗೆ ಸೆಳೆದುಕೊಂಡಿತು. ಅನುವಾದಗಳಲ್ಲದೆ, ಇನ್ನೂ ಹತ್ತು ಹಲವು ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.
ನಿದ್ರೆಯಲ್ಲೋ, ಸುಷುಪ್ತಿಯಲ್ಲೋ ಮುಳುಗಿರುವ ಎಳೆಯ ಕಂದಮ್ಮಗಳ ಕಣ್ಣೆವೆಗಳಲ್ಲಿ ಕನಸು ಸಂಚರಿಸುವ ನೋಟದಷ್ಟು ಸುಂದರವಾದುದು ಬೇರೇನೂ ಇರಲಿಕ್ಕಿಲ್ಲ. ಜೊತೆಗೆ ಆ ಕದಪುಗಳಲ್ಲಿ, ತುಟಿಗಳಂಚಿನಲ್ಲಿ ಏನೋ ಮಾತುಕತೆ ನಡೆಸಿರುವಂತಹ ನವಿರಾದ, ಸವಿಯಾದ ಮಿಸುಕಾಟ! ಆಗ ಅಮ್ಮಂದಿರು ತನ್ಮಯರಾಗಿ ಮಗುವಿನ ಮುಖವನ್ನೇ ದಿಟ್ಟಿಸುತ್ತಿದ್ದರೆ, ಅವರಮ್ಮಂದಿರೋ, ಅಜ್ಜಿಯಂದಿರೋ ಎಚ್ಚರಿಸುವುದುಂಟು, ‘‘ಬಿಡ್ತು ಅನ್ನು; ಅದು ದೇವರೊಡನೆ ಮಕ್ಕಳು ಮಾತುಕತೆ ನಡೆಸಿರುವುದು, ಅಷ್ಟೇ. ಹೆತ್ತ ತಾಯಿ ಹಾಗೆ ಮಕ್ಕಳ ಮುಖವನ್ನೇ ನೋಡುತ್ತಿರ ಬಾರದು; ನೆಲ ನೋಡು’’!.
ಮಗುವಿಗೆ ಅಮ್ಮನ ಕಣ್ಣ ದೃಷ್ಟಿಯೇ ತಾಗೀತೆಂಬ ಈ ಮಾತು ನನಗಂತೂ ಎಂದೂ ಪಥ್ಯವಾಗಿರಲಿಲ್ಲ. ಆದರೆ ಇವೆಲ್ಲ ಜೀವನಾನುಭವದಲ್ಲಿ ಪರಿಪಕ್ವವಾಗಿ ಹೊರಬಂದ ಅಮೃತ ಬಿಂದುಗಳು. ದೇವಶಿಶುವಿನಂತೆ ಮಲಗಿ ನಿದ್ರಿಸಿರುವ ಮಗು, ಇದ್ದಕ್ಕಿದ್ದಂತೆ ಕನಸು ಕಂಡು ಚಿಟ್ಟನೆ ಚೀರಿಕೊಳ್ಳುವುದು, ಮರುಕ್ಷಣವೇ ಸುಮ್ಮನಾಗಿ ನಿದ್ದೆಯಲ್ಲೇ ನಗ ತೊಡಗುವುದು, ಬೆನ್ನಿಗೇ ಬಿಕ್ಕಳಿಸುವುದು ಇವೆಲ್ಲ ಮಗುವಿನ ಕನಸಿನ ಲೋಕದ, ನಮಗರಿವಾಗದ ದಿವ್ಯಾನುಭೂತಿಗಳು. ಆಸ್ಪತ್ರೆಯ ದಿನದ ಕೆಲಸದ ಕೊನೆಗೆ ದಣಿವಿನಿಂದ ಆರಾಮ ಕುರ್ಚಿಯಲ್ಲಿ ಒರಗಿ ವಿಶ್ರಮಿಸುತ್ತಿರುವಾಗ, ‘‘ಸೀಜರ್’’ ಬೊಗಳುವ ಸದ್ದು! ನಿಲ್ಲದೆ ಮತ್ತೂ ಮತ್ತೂ ಕೇಳಿ ಬರುವ ಆ ಗೊರ ಗೊರ ಸದ್ದಿನ ಕಾಟಕ್ಕೆ ಬೇಸತ್ತು, ಅದನ್ನು ಸುಮ್ಮನಿರಿಸಲು ಸೀಜರ್! ಎಂದು ಕೂಗುತ್ತಾ ಕಣ್ಣು ತೆರೆದರೆ, ಸೀಜರ್ ಎಲ್ಲಿ? ಬದಲಿಗೆ, ಅದೇ ತಾನೇ ಮಲಗಿಸಿ, ಬೆಚ್ಚಗೆ ಹೊದಿಸಿ ಬಂದ ತನ್ನ ಕಂದ, ತೀವ್ರ ಉಬ್ಬಸ ಬಾಧೆಯಿಂದ ಹೊರಡಿಸುತ್ತಿರುವ ಕಷ್ಟದ ಉಸಿರಾಟದ ದಾರುಣ ದನಿ, ಅವಳನ್ನು ಆ ಕನಸಿನಿಂದ ಥಟ್ಟನೆ ಎಬ್ಬಿಸುತ್ತದೆ. ಆ್ಯಂಬುಲೆನ್ಸ್‌ಗೆ ಕರೆ ಹೋಗುತ್ತದೆ. ಎಕೋ ಹೆರನ್ ಎಂಬ ಅಮೆರಿಕನ್ ದಾದಿಯೊಬ್ಬಳ ‘ದ ಸ್ಟೋರಿ ಆಫ್ ಎ ನರ್ಸ್’ ಎಂಬ ಬಿಡದೆ ಓದಿಸಿಕೊಳ್ಳುವ ಕಥನವು ತೆರೆದುಕೊಳ್ಳುವ ಪರಿಯಿದು.
ಅತ್ಯಂತ ಬೀಭತ್ಸ ಪ್ರೇತಕಥೆಯೊಂದನ್ನು ರಚಿಸಬೇಕೆಂಬ ಪಂಥಾಹ್ವಾನವನ್ನು ಒಪ್ಪಿಕೊಂಡು ನಿದ್ರೆಗೆ ಜಾರಿದ ಲೇಖಕಿ ಮೇರಿ ಶೆಲ್ಲಿ, ನಿದ್ರೆಯಲ್ಲಿ ಕಂಡ ಅತಿ ಭಯಾನಕ ಕನಸೊಂದರಿಂದ ವಿಶ್ವ ವಿಖ್ಯಾತ ವಿಶ್ವ ಸಾಹಿತ್ಯ ಕೃತಿ ‘ಫ್ರಾಂಕಿನ್‌ಸ್ಟೈನ್’ ರೂಪುಗೊಂಡಿತು. ಫ್ರಾಂಕಿನ್‌ಸ್ಟೈನ್ ಎಂಬ ಹೊಸ ಶಬ್ದವನ್ನೇ ಅದು ಹುಟ್ಟು ಹಾಕಿತು. ಹಾಗೂ ಈ ಕಥೆಯನ್ನಾಧರಿಸಿ 37 ಚಲನಚಿತ್ರಗಳು ತಯಾರಾಗಿ ತೆರೆ ಕಂಡವು. ಬಾಲ್ಯದ ದಿನಗಳ ‘ತಿರುಕನ ಕನಸು’ ಎಂಬ ಸರಳ, ಸುಂದರ ಭಾಷೆ, ಲಯದ ಕಿರು ಕವನವನ್ನು ಮರೆಯುವುದುಂಟೇ? ಬಾಲ್ಯದಲ್ಲಿ ಓದಿ, ರುಚಿಸಿದಂತೆ, ಈಗಲೂ ಪ್ರಿಯವಾಗಿ, ಕಂಠಪಾಠವಾಗಿರುವ ಈ ಕನಸಿನ ಕವನ! ಇಂಥ ಎಷ್ಟೊಂದು ಕನಸಿನ ಮೆರವಣಿಗೆಗಳು ನಮ್ಮ ನಿದ್ದೆಯಲ್ಲಿ ಹಾದು ಹೋಗಿಲ್ಲ?! ಸೂರ್ಯನಂತೆ ಪ್ರಜ್ವಲಿಸಿ, ಚಂದ್ರಮನಂತೆ ತಂಪಾಗಿ, ದಿವ್ಯಾನುಭೂತಿಯಾಗಿ, ಅನಿಷ್ಟದ ಹೊರೆಯಾಗಿ ಮತ್ತೆ ಮಾಯವಾಗಿಲ್ಲ?! ಕನಸಿನ ಲೋಕದ ಅನೂಹ್ಯ ಕಥೆಗಳು, ಚಿತ್ರ ವಿಚಿತ್ರ ವಿವರಗಳು, ಕನಸಿನಿಂದ ಎಚ್ಚರವಾಗುವ ಕ್ಷಣದ ಅವರ್ಣನೀಯ ಮನೋಸ್ಥಿತಿ ನನ್ನ ಬಾಳಿನುದ್ದದ ರಾತ್ರಿಗಳ ಅನನ್ಯ ಅನುಭವವೇ ಆಗಿದೆ. ಬಾಲ್ಯದಲ್ಲಿ ಪದೇ ಪದೇ ಬೀಳುವ ಕನಸೊಂದಿತ್ತು. ಹಳದಿ, ಕೆಂಪು ಹೂಗಳಿಂದ ತುಂಬಿದ ಹಚ್ಚ ಹಸುರಿನ ತೋಟ. ಈ ತೋಟದ ಮಧ್ಯೆ ದಾಪುಗಾಲಿನಿಂದ ಧಾವಿಸುತ್ತಿರುವ ಗಾಂಧೀಜಿಯವರ ಬೆನ್ನ ಹಿಂದೆ ನನ್ನ ತಂದೆಯವರೂ ಓಡುತ್ತಿದ್ದಾರೆ. ತೋಟದ ಮಧ್ಯೆ ಹುಲಿ ಯಿರುವ ಬಾವಿಯೊಳಗೆ ಅವರಿಬ್ಬರೂ ಬಿದ್ದು ಬಿಡುವರಲ್ಲಾ ಎಂಬ ಭಯ, ಆತಂಕದಿಂದ ತಂದೆಯವರನ್ನು ಕೂಗಿ ಕರೆಯುತ್ತಾ, ಹಿಂಬಾಲಿಸಿ ಓಡಲೆತ್ನಿಸುವಾಗ ಇದ್ದಕ್ಕಿದ್ದಂತೆ ಕಾಲು ಕೊಕ್ಕೆ ಹಿಡಿದು, ಅಸಾಧ್ಯ ನೋವಿನಿಂದ ಎಚ್ಚರವಾಗುತ್ತಿತ್ತು. ಮತ್ತೆ ಆ ಕೊಕ್ಕೆ ಹಿಡಿದ ಕಾಲನ್ನು ನೀವಿ, ಬಿಡಿಸುವ ತಂದೆಯವರ ವಾತ್ಸಲ್ಯ ಹಸ್ತ.! ಬೆಳೆದಂತೆ ನನ್ನ ಓದು, ಅನುಭವಗಳು ಹಿಗ್ಗಿದಂತೆ ಕನಸಾಗಿ ತೆರೆದು ಕೊಂಡ ಅನುಭಾವದ ಚಿತ್ರ ವಿಚಿತ್ರ ವಿನ್ಯಾಸಕ್ಕೆ ನಾನು ಮರುಳಾದುದಿದೆ; ಬೆಚ್ಚಿ ಬಿದ್ದುದಿದೆ; ಕಂಗಾಲಾದುದೂ ಇದೆ.
ಪ್ರಕೃತಿಯ ಮಡಿಲಲ್ಲಿ ಬೆಳೆದ ಬಾಲ್ಯದಲ್ಲಿ ಸುತ್ತ ಮುತ್ತ ಇದಿರಾದ ಹಾವುಗಳು ಅಸಂಖ್ಯ! ಅಂತೆಯೇ ನನ್ನ ಕನಸಲ್ಲಿ ಕಾಣಿಸಿಕೊಂಡ ಹಾವುಗಳಿಗೂ ಲೆಕ್ಕವಿಲ್ಲ. ಸಾಮಾನ್ಯ ಹಾವುಗಳು, ಆಕರ್ಷಕ ಹಸಿರು ಹಾವುಗಳು, ಚೆಲುವಾದ ನಾಗರ ಹಾವುಗಳು, ಕರಿನಾಗಗಳು, ಕೊನೆಗೆ ಮಹಾಶೇಷ ಕೂಡಾ ನನ್ನ ಕನಸಿನುದ್ದಕ್ಕೂ ಆಡಿ ನಲಿದುದಿದೆ. ಆದರೆ ಅವೆಂದೂ ಚಿಕ್ಕ ಕನಸುಗಳಲ್ಲ; ರಾತ್ರಿಯುದ್ದಕ್ಕೂ ಕಾಣಿಸುವ ಸುದೀರ್ಘ ಕನಸುಗಳು!
ಸಮುದ್ರ ತಡಿಯಲ್ಲಿ, ಮರಳ ಹಾಸಲ್ಲಿ, ಬಂಡೆಗಳ ನಡುವೆ ನೀರಲ್ಲಿ ಮನದಣಿಯೆ ಆಟ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ನೀರಲ್ಲಿ ಮುಳುಗುತ್ತಿರುವ, ಜೊತೆಯಲ್ಲಿದ್ದವರು ಕೈ ಹಿಡಿದೆತ್ತಲು ನೋಡಿದರೂ, ಮತ್ತೂ ಕೆಳ ಕೆಳಕ್ಕೆ ಹೋಗುವ ಕನಸು ಅಡಿಗಡಿಗೆ ಕಾಡಿದ್ದಿದೆ. ಮುಳುಗುತ್ತಿರುವೆನೆಂಬ ಭಯಕ್ಕಿಂತ, ಕನಸು ಹರಿದಾಗ, ಅಯ್ಯೋ, ಅಷ್ಟು ಚಂದದ ಸ್ಥಳ, ನನ್ನ ಪ್ರಿಯ ಕಡಲು ಮಾಯವಾಯ್ತಲ್ಲಾ, ಎಂಬ ಕಳವಳ! ಜೊತೆಗೆ, ಕನಸಲ್ಲಿ ಸಂಗ್ರಹಿಸಿದ್ದ ನನ್ನ ಪ್ರೀತಿಯ ವಿಧ ವಿಧ ವಿನ್ಯಾಸದ ಸಮುದ್ರ ಚಿಪ್ಪುಗಳೆಲ್ಲ ಮಾಯವಾದ ದುಃಖ!
ಕೆಳ ಕೆಳಗೆ ಮಾತ್ರವಲ್ಲ, ಆಡುತ್ತಿರುವಾಗ ಇದ್ದಕ್ಕಿದ್ದಂತೆ ಮೇಲು ಮೇಲಕ್ಕೆ ಹಾರಿ ಹೋಗುವ ಕನಸೂ ಅಷ್ಟೇ; ಜೊತೆಯಲ್ಲಿರುವವರು ಹಿಡಿದು ನಿಲ್ಲಿಸಲೆತ್ನಿಸಿದರೂ ಮತ್ತೂ ಮೇಲು ಮೇಲಕ್ಕೆ ಹೋಗುತ್ತಿರುವ ಅನುಭವ! ಯಾವಾಗಲೂ ಕ್ಲೈಮಾಕ್ಸ್‌ನಲ್ಲೇ ಕನಸು ಹರಿದು ಎಚ್ಚರ!
ಪತ್ತೇದಾರ ಪುರುಷೋತ್ತಮನ ಸಾಹಸಗಳನ್ನು ಒಂದೂ ಬಿಡದೆ ಓದಿದ ಆ ಬಾಲ್ಯಕಾಲದಲ್ಲಿ ಬೀಳುತ್ತಿದ್ದ ಬೀಭತ್ಸ ಕನಸುಗಳೋ!
ಬಚ್ಚಲು ಹೊಕ್ಕು ಸ್ನಾನಕ್ಕಿಳಿದು ಹಂಡೆಯ ನೀರಿಗೆ ಚೆಂಬು ಮುಳುಗಿಸ ಹೋದರೆ, ಮೇಲೆಯೇ ಮೃದುವಾಗಿ ದಪ್ಪವಾದುದೇನೋ ಚೆಂಬು ಹಾಗೂ ಕೈಗೆ ಅಡ್ಡ ಬರುತ್ತಿದೆ. ನೋಡಿದರೆ, ಹಂಡೆಯ ಬಿಸಿ ನೀರಲ್ಲಿ ಡಾ.ಸರೋಜಿನಿ ಮಹಿಷಿ ಅವರ ದೇಹ! ಎನ್.ನರಸಿಂಹಯ್ಯನವರ ‘ಅದೃಶ್ಯ ಮನುಷ್ಯ’ ಓದಿದ ದಿನವದು! ಮತ್ತು ಅಂದೇ ವರ್ತಮಾನ ಪತ್ರಿಕೆಯಲ್ಲಿ ಡಾ. ಸರೋಜಿನಿ ಮಹಿಷಿ ಸಚಿವರಾಗಿ ನೇಮಕವಾದ ಸಮಾಚಾರ ಬಂದಿತ್ತು. ಆ ಅಹಿತಕರ ಕನಸಿನಿಂದ ಎಚ್ಚರಾದ ಅಂದಿನ ಕಸಿವಿಸಿ ಇಂದೂ ಹಸಿಯಾಗಿದೆ. ನನ್ನ ಪ್ರಿಯ ಜೀವಗಳನ್ನೂ ಹೀಗೆ ಏನೇನೋ ಮಾಡುವ ನನ್ನ ಕನಸಿನ ಲೋಕ ರೇಜಿಗೆಯನ್ನೇ ಹುಟ್ಟಿಸಿದೆ.
ಒಂದು ಮಧ್ಯಾಹ್ನ ಶಾಲೆಯಿಂದ ಊಟಕ್ಕೆಂದು ಬಂದು ಮನೆ ಹೊಕ್ಕರೆ, ಚಾವಡಿಯಲ್ಲೇ ಕುರ್ಚಿಯಲ್ಲಿ, ಅಜ್ಜ ಕುಳಿತಿದ್ದಾರೆ. ಅಜ್ಜ ಮುಂಬೈಯಿಂದ ಯಾವಾಗ ಬಂದರೆಂದು ಸಂಭ್ರಮದಿಂದ ಬಳಿ ಹೋಗಿ ‘ಅಜ್ಜಾ’ ಎಂದು ಕರೆದರೆ ಉತ್ತರವಿಲ್ಲ. ಕಣ್ಣುಗಳು ಮುಚ್ಚಿವೆ; ಕುತ್ತಿಗೆ, ತಲೆ ಇದ್ದಕ್ಕಿದ್ದಂತೆ ಮೆಲ್ಲಗೆ ತೂಗತೊಡಗುತ್ತದೆ. ಆಗ ಅಲ್ಲಿಗೆ ಬಂದ ಅಮ್ಮ, ಅನ್ನುತ್ತಾರೆ, ‘ನೀನು ಈಚೆ ಬಾ; ಅಜ್ಜ ಸತ್ತಿದ್ದಾರೆ’. ಅಷ್ಟರಲ್ಲಿ ಎಲ್ಲ ಮಾಯ; ಎಚ್ಚರ! ಮೈ ಬೆವರಿತ್ತು. ‘ಭಯಂಕರ ಬೈರಾಗಿ’ ಓದಿ ಮುಗಿಸಿದ ದಿನವದು!
ಶ್ರಮ ಪಟ್ಟು ಎಲ್ಲ ತಯಾರಿ ನಡೆಸಿ ಪರೀಕ್ಷೆಗೆಂದು ಹೊರಟು ತಡವಾಯ್ತೆಂದು ಬೇಗ ಬೇಗ ದಾರಿ ನಡೆದರೆ, ಅರ್ಧದಾರಿ ನಡೆವಾಗಲೇ ರೈಲಿನ ಸಿಳ್ಳು ಕೇಳಿಸುತ್ತದೆ. ದೂರದಲ್ಲಿ ಸ್ಟೇಶನ್ ಕಾಣಿಸುತ್ತಿದೆ. ಓಡಲೆತ್ನಿಸಿದರೆ ಕಾಲ್ಗಳೇ ಬರುತ್ತಿಲ್ಲ; ಓಡುವ ಬದಲಿಗೆ ಕುಂಟಿದಂತಾಗುತ್ತಿದೆ. ರೈಲು ಪುನಃ ಸಿಳ್ಳೆ ಹಾಕುತ್ತಾ, ಧಾವಿಸುತ್ತಾ ಬಂದು ದಾಟಿಯೂ ಹೋಗುತ್ತದೆ. ನನ್ನ ಓಟ ನನ್ನನ್ನು ಮುಂದಕ್ಕೊಯ್ಯುವುದೇ ಇಲ್ಲ; ಸ್ಟೇಶನ್ ತಲುಪಿ ನಿಂತ ರೈಲು ವಿಸಿಲ್ ಹಾಕಿ ಹಾಕಿ ಕೊನೆಗೆ ಹೊರಟೂ ಬಿಡುತ್ತದೆ. ಎಚ್ಚರಾಗಿ ಕಣ್ಣು ತೆರೆದರೆ ಎದೆಯೆಲ್ಲ ಡವ ಡವ! ಕಾಲೇಜ್ ಮುಗಿದು ಇಪ್ಪತ್ತೈದು ವರ್ಷಗಳವರೆಗೂ ಈ ಕನಸು ನನ್ನನ್ನು ಅಡಿಗಡಿಗೆ ಕಾಡುತ್ತಿತ್ತು. ಇಪ್ಪತ್ತೈದು ವರ್ಷಗಳ ಬಳಿಕ ಭೇಟಿಯಾದ ನನ್ನ ನೆಚ್ಚಿನ ಪ್ರಾಧ್ಯಾಪಕಿಯೊಡನೆ ಈ ಕನಸನ್ನು ಪತ್ರ ಮುಖೇನ ತೋಡಿಕೊಂಡಾಗ, ಅಮೆರಿಕದಿಂದ ಪ್ರೀತಿಯ ಮಿಸ್ ಬರೆದ ವಾತ್ಸಲ್ಯದ ಉತ್ತರ ಈ ಕನಸನ್ನು ಸಂಪೂರ್ಣ ಹುಟ್ಟಡಗಿಸಿ ಬಿಟ್ಟಿತು. ಮತ್ತೆಂದೂ ಆ ಕನಸು ಬಳಿ ಸುಳಿಯಲಿಲ್ಲ. ಅಜ್ಜಿಮನೆಯಲ್ಲಿ ಏನೋ ಸಂಭ್ರಮ! ನಾವೆಲ್ಲರೂ ಒಂದಾಗಿದ್ದೇವೆ. ಗೌಜಿ, ಗದ್ದಲ, ಊಟ; ಗದ್ದೆ ಹುಣಿ, ಕೇದಿಗೆ ಮೆಳೆ, ತಾವರೆ ಕೊಳದ ಬಳಿ ಅಲೆದಾಡಿ ಕೊನೆಯಲ್ಲಿ ನೋಡಿದರೆ ಊಟ ನಡೆಯುತ್ತಿರುವುದು ಮುಂಬೈ ಮನೆಯಲ್ಲಿ! ಎಚ್ಚರಾದಾಗ ಏನೋ ಕಳಕೊಂಡಂತಹ ನಿರಾಸೆಯ ಭಾವ! ಗೆಳತಿಯೊಡನೆ ರಸ್ತೆಯಲ್ಲಿ ನಡೆದಿರುವಾಗ, ಹಿಂದಿನಿಂದ ಸೈಕಲ್‌ನಲ್ಲಿ ವೇಗವಾಗಿ ಬಂದ ಮಗು, ನಮ್ಮನ್ನು ದಾಟಿ ಮುಂದೆ ಹೋಗಿ ಮ್ಯಾನ್‌ಹೋಲ್‌ನೊಳಗೆ ಬಿದ್ದು ಬಿಟ್ಟ! ‘ಅಯ್ಯೋ’, ಎಂದು ಚೀರಿ ಓಡಿ ಹೋಗಿ ಅವನನ್ನೆತ್ತಿದರೆ, ಕೈ ಎಲ್ಲ ಅಂಟಂಟು ರಕ್ತ! ಆ ಭಯಾನಕ ಕನಸಿನಿಂದ ಎಚ್ಚತ್ತಾಗಲೂ ಕೈಯಲ್ಲಿ ಆ ಅಂಟಂಟು ಹಸಿ ಬಿಸಿ ಅನುಭವ ದಿಕ್ಕೆಡಿಸಿತ್ತು. ಅಗಲಿದ ಪ್ರಿಯ ಜೀವಗಳನ್ನು ಪುನಃ ಕನಸಲ್ಲಿ ಕಾಣುವುದು ಕೆಲವೊಮ್ಮೆ ಖುಷಿ ಅನಿಸಿದರೆ ಮತ್ತೆ ಕೆಲವೊಮ್ಮೆ ತೀವ್ರವಾಗಿ ಕಾಡುವಂತಹವೂ ಸಹ. ಅಗಲಿದ ನಮ್ಮ ನಾಯಿ ವಿಂಟರ್, ಕನಸಲ್ಲಿ ರಾತ್ರಿಯಿಡೀ ನನ್ನೊಂದಿಗಿದ್ದ. ಹೋದಲ್ಲಿ ಬಂದಲ್ಲೆಲ್ಲ ಜೊತೆಗಿದ್ದು, ತನ್ನ ಮುಖವನ್ನು ನನ್ನ ಮಡಿಲಿಗೊತ್ತುತ್ತಿದ್ದ.
ಪುನರ್ವಿವಾಹದ ಕನಸು! ಅಯ್ಯೋ, ಇವರು ಇರುವಾಗ ಅದು ಹೇಗೆ ಪುನಃ ಮದುವೆಯಾಗುವುದು ಎಂದು ಕಳವಳಿಸುವಾಗ, ಅದು ಅನಿವಾರ್ಯ; ಎಲ್ಲರಿಗೂ ಆಗುವದೇ ಎಂಬ ಸಾಂತ್ವನ ಬೇರೆ! ಇಂತಹ ಅರ್ಥಹೀನ ಕನಸುಗಳಂತೂ ನೂರಾರು! ಸಣ್ಣಂದಿನಲ್ಲಿ ಅರ್ಧದಲ್ಲಿ ಕಡಿದು ಹೋದ ಅತ್ಯಾಸಕ್ತಿಕರ ಕನಸುಗಳು ಪುನಃ ಮುಂದುವರಿಯಲೆಂದು ಎಷ್ಟು ಬಯಸಿದರೂ, ಕಣ್ಣು ಮುಚ್ಚಿ ಪುನಃ ಬೇಗನೇ ನಿದ್ದೆಗೆ ಜಾರಿದರೂ, ಅವು ಮತ್ತೆ ಮುಂದುವರಿಯುತ್ತಿರಲಿಲ್ಲ. ನಿರಾಸೆಯಿಂದ ಮನಸು ಭಾರವಾಗುತ್ತಿತ್ತು. ಕನಸು ಕಡಿದ ಮೇಲೆ ಮುಂದುವರಿಯುವುದೆಂದೇ ಇಲ್ಲ, ಎಂದೇ ನಂಬಿಕೆಯಾಗಿತ್ತು. ಆದರೀಗ, ವರ್ಷಾನುವರ್ಷ ಎಲ್ಲ ಬಗೆಯ ಕನಸುಗಳನ್ನೂ ಕಂಡ ಬಳಿಕ, ಈಗ ಕನಸುಗಳು ಕಡಿದರೂ, ಮತ್ತೆ ಮುಂದುವರಿಯುವುದೂ ಇದೆ. ಈಗ ಬಹುಪಾಲು ರಾತ್ರಿಗಳು ನಿದ್ದೆಯಿರದೆ ಕಳೆದು, ಬೆಳಗಿನ ಜಾವ ನಿದ್ದೆ ಹತ್ತಿ ಕೊಳ್ಳುವ ಕಾರಣವೋ ಏನೋ! ಅಥವಾ, ಹಿಂದೆ ಇದ್ದ ಸೀಮಿತ ದೃಶ್ಯ ಮಾಧ್ಯಮಕ್ಕೆ ತದ್ವಿರುದ್ಧವಾದ ಅಪರಿಮಿತ ದೃಶ್ಯ ಸಂಪತ್ತು ಟಿ.ವಿ., ಕಂಪ್ಯೂಟರ್, ಇಂಟರ್‌ನೆಟ್ ಎಂದು ನಮ್ಮದಾದ ಕಾರಣವೋ ಏನೋ, ಈಗ ಕನಸುಗಳ ಪರಿಯೂ ಬದಲಾಗಿದೆ. ರಾತ್ರಿಯಿಡೀ ಕಣ್ಣಿಗೆ ಸುಳಿಯದ ನಿದ್ದೆ, ಬೆಳಗನ್ನು ರಾತ್ರಿಯಾಗಿಸಿದೆ. ಉಷಃಕಾಲ, ಅರುಣೋದಯವನ್ನು ಕಾಣದ ಕಣ್ಗಳು, ಸ್ವಪ್ನಲೋಕದಲ್ಲೇ ಮುಳುಗಿರುತ್ತವೆ. ನಿದ್ದೆ ಹರಿದು ಎಚ್ಚರಾಗಲು ಈ ಕನಸುಗಳು ಬಿಡುವುದೇ ಇಲ್ಲ. ಹೀಗಾಗಿ ತಡವಾಗಿ ಏಳುವ ದೋಷ ನನ್ನದಲ್ಲ; ನನ್ನ ಕನಸೇ ಅದಕ್ಕೆ ಹೊಣೆ. ಓದಿದ ಕಥಾಪಾತ್ರಗಳೊಡನೆ ಕನಸಲ್ಲಿ ಸಂವಹನ, ಸುತ್ತಾಟವೂ ನಡೆದಿರುತ್ತದೆ. ಕನಸು ಆ ಕಥೆಗಳನ್ನು ಹಿಗ್ಗಿಸುತ್ತದೆ. ಕೆಲವೊಮ್ಮೆ ಕಥಾ ನಾಯಕಿಯ ಸ್ಥಳದಲ್ಲಿ ಅವಳ ಬದಲಿಗೆ ನನ್ನನ್ನೇ ಕಾಣುವುದೂ ಇದೆ. ನನ್ನ ‘ಗಾನ್ ವಿದ್ ದ ವಿಂಡ್’ನ ನಾಯಕಿ ಸ್ಕಾರ್ಲೆಟ್‌ಳನ್ನು ಅಮೆರಿಕ ಅಂತರ್ಯುದ್ಧ ಹಾಗೂ ಪತನದ ದಿನಗಳಲ್ಲಿ ತೊಡಗಿ, ಮತ್ತೆ ಪುನರುಜ್ಜೀವನದ ಐಸಿರಿ, ಸಂತೃಪ್ತಿಯ ಕಾಲದಲ್ಲೂ ನಿಲ್ಲದೆ ಆಗಾಗ ಕಾಡಿದ ಕನಸು - ಹಬ್ಬಿದ ದಟ್ಟ ಮಂಜಿನ ನಡುವೆ ಎಷ್ಟು ಓಡಿದರೂ ದಾರಿ ಕಾಣದೆ, ಗಮ್ಯ ತಲುಪದೆ ಕಂಗೆಡುವ ಕನಸು! ‘‘ಜೇನ್ ಏರ್’’ನ ಜೇನ್, ತನ್ನ ಅನಿಶ್ಚಿತ, ಅಸುರಕ್ಷಿತ ಬಾಳಿನಲ್ಲಿ, ಆಗಾಗ ಕಾಣುವ ಕನಸು - ಶೈತ್ಯ ತುಂಬಿದ ಇರುಳ ದಾರಿಯಲ್ಲಿ ಯಾವುದೋ ಅಪರಿಚಿತ, ಕ್ಷೀಣಕಾಯದ ಮಗುವಿನ ಭಾರವನ್ನು ಹೊತ್ತು, ಅದನ್ನೆಲ್ಲೂ ಇಳಿಸಲಾಗದೆ, ತಾನೊಬ್ಬಳೇ ಜರ್ಝರಿತಳಾಗಿ ಸಾಗುವ ಕನಸು! ಕಥಾಲೋಕದಲ್ಲಿ ಇಂತಹ ಕನಸುಗಳು ಅದೆಷ್ಟೋ !
ಮುಂಬೈ ಮೆರೀನ್ ಲೈನ್ಸ್‌ನೆದುರು ಪ್ರಚ್ಛನ್ನ ಬೆಳಕಿನಲ್ಲಿ ಹೊಳೆವ ನೀಲ ಸಾಗರ! ದಡದ ಅಚ್ಚುಕಟ್ಟಾದ ಸುವಿಶಾಲ ರಸ್ತೆ; ನಮ್ಮೂರ ಕಡಲದಡದಂತೆ ಆಳವಿಟ್ಟ ಮರಳದಂಡೆ; ರಿಕ್ಲಮೇಶನ್ ಬಂಡೆಗಳೇನೂ ಇರದ ಸ್ವಚ್ಛ ಸುಂದರ ತೀರ! ಮೇಲೆ ರಸ್ತೆಯಂಚಿನಿಂದ ಕೆಳಗಿನ ಆಳ ಸಮುದ್ರಕ್ಕೆ ಹಾರುಹೊಡೆದವನೊಬ್ಬ, ಮತ್ತೆ ನೀರಮೇಲೆ ಎಲೆಯಂತಹ ತುಂಡು ಚಾಪೆಯಲ್ಲಿ ಕುಳಿತು ಸಮುದ್ರದಲ್ಲಿ ಸಾಗುವಾಗ, ಹೇಗೂ ಹಾರಿ ಒದ್ದೆಯಾಗಿದ್ದೀ; ಮತ್ತೆ ಅದು ಯಾಕೆ? ಎಂದು ಕೇಳುತ್ತಾ ನಾನೂ ಅವನೊಡನೇ ಸಾಗುತ್ತಿದ್ದೇನೆ. ಕರೆಗುಂಟ ನೀರಲ್ಲೇ ಸಾಗಿ ಆ ಕೊನೆಯಲ್ಲಿ ಕೊಲಬಾ ಪ್ರದೇಶದಲ್ಲಿ ಮೇಲೇರಿ ಬಂದರೆ ರಸ್ತೆಯಾಚೆ ಇದುರಿಗೆ ಸಿಮೆಂಟ್ ಸೀಟಲ್ಲಿ ಸಮುದ್ರಾಭಿಮುಖವಾಗಿ ಸಂಜೆ ಬೆಳಕಲ್ಲಿ ಕುಳಿತವರು. ನಮ್ಮಮ್ಮ, ಅಣ್ಣ ಎಲ್ಲರೂ ಇದ್ದಾರೆ. ಜೊತೆಗೊಬ್ಬ ನೇವಿಯ ತರುಣ. ಅಲ್ಲೇ ಹಿಂದುಗಡೆ ಅವನ ಚೆಲುವಾದ ಹೂತೋಟ, ಕ್ರಾಸ್, ಕ್ರಿಬ್ ಎಲ್ಲ ಇರುವ ಆಕರ್ಷಕ ಮನೆ. ಕ್ರಿಸ್‌ಮಸ್ ಟ್ರೀ, ಐವಿ ಬಳ್ಳಿಗಳು, ಹಾಲಿಹಾಕ್ಸ್, ಪಾಂಶೆಟಿಯಾ, ಡೇಲಿಯಾ, ಗುಲಾಬಿಗಳಿಂದ ಕಣ್ಸೆಳೆವ ಹೂತೋಟ! ಕತ್ತಲು ಮುಸುಕುತ್ತಾ ಬಂದು ಎಲ್ಲರೂ ಹೊರಡುವಾಗ, ಅಯ್ಯೋ, ಫೋಟೊ ತೆಗೆಯಲೇ ಇಲ್ಲವಲ್ಲಾ ಎಂದು ಗಡಿಬಿಡಿಯಿಂದ ಕ್ಲಿಕ್ ಮಾಡಲು ಹೋದರೆ ಚಿತ್ರ ಸರಿಯಾಗಿ ಮೂಡುತ್ತಿಲ್ಲ; ಇಷ್ಟು ಹೊತ್ತೇ? ಇಷ್ಟರೊಳಗೆ ಅದು ಪೇಸ್‌ಬುಕ್‌ನಲ್ಲಿ ಪ್ರಪಂಚಾದ್ಯಂತ ತಲುಪಿ ಆಗಬೇಕಿತ್ತು, ಎಂದು ನಗುವ ನೇವಿಯಾತ! ನಿದ್ದೆ ಹರಿದು ಕನಸು ಮಾಯವಾದಾಗಲೂ ಇನಿತೂ ಮಾಸದ, ಪ್ರಜ್ಞೆಯಲ್ಲಿ ಅಚ್ಚೊತ್ತಿ ನಿಂತ ಆ ದೃಶ್ಯಾವಳಿ! ಇಷ್ಟೊಂದು ಸ್ಫುಟವಾದ, ಸಿನೆಮಾ ಪರದೆಯಲ್ಲಿ ಮೂಡುವುದಕ್ಕಿಂತಲೂ ಪ್ರಖರವೂ, ಚೆಲುವೂ ಆದ ಕನಸನ್ನು ನಾನು ಅದುವರೆಗೆ ಕಂಡಿರಲಿಲ್ಲ. ಬೆಳಗ್ಗೆ ಆರು ಗಂಟೆಗೆ ಕಣ್ಬಿಟ್ಟಿದ್ದರೂ, ಪುನಃ ಕಣ್ಮುಚ್ಚಿ ನಿದ್ದೆಹೋಗಿ ಬೆಳಗಿನ ಕನಸಲ್ಲಿ ಕಂಡ ನನ್ನ ಅಮೂಲ್ಯ ಸಿರಿಯದು.
ರುಚಿಕಟ್ಟಾಗಿ ಸವಿಯುತ್ತಿದ್ದ ಕನಸೊಂದರಿಂದ ಎಚ್ಚರವಾದಾಗ ರುಚಿಯ ಭಾಸ ಮಾತ್ರ ಉಳಿದು, ಕನಸೇನೆಂದು ನೆನಪಾಗದೆ, ನೆನಪಿಗೆ ತರಲೆತ್ನಿಸಿದಷ್ಟೂ ಅದು ಅಡಗುತ್ತಾ, ಕೈ ಜಾರಿ ಹೋಗುವ ಅನುಭವ ಅದೆಷ್ಟೋ ಬಾರಿ! ಅಂತೆಯೇ ಏನೋ ಕೆಡುಕೆಂಬ ಭಾಸ ಮಾತ್ರ ಉಳಿವಂತೆ ಕನಸಿನಿಂದ ಎಚ್ಚರಾಗಿ, ಮನಸು ಕಲಕಿ, ಏನೆಂದರಿಯದ ಗೋಜಲು, ಹಳಹಳಿ ಮತ್ತೆಷ್ಟೋ ಬಾರಿ. ಪ್ರಿಯ ಓದುಗಾ, ನಿಮ್ಮ ಕನಸುಗಳ ಲೋಕವನ್ನೂ ಕಾಣುವಾಸೆ; ತೆರೆದಿಡುವಿರೇನು?
ಪುನರ್ವಿವಾಹದ ಕನಸು! ಅಯ್ಯೋ, ಇವರು ಇರುವಾಗ ಅದು ಹೇಗೆ ಪುನಃ ಮದುವೆಯಾಗುವುದು ಎಂದು ಕಳವಳಿಸುವಾಗ, ಅದು ಅನಿವಾರ್ಯ; ಎಲ್ಲರಿಗೂ ಆಗುವದೇ ಎಂಬ ಸಾಂತ್ವನ ಬೇರೆ! ಇಂತಹ ಅರ್ಥಹೀನ ಕನಸುಗಳಂತೂ ನೂರಾರು! ಸಣ್ಣಂದಿನಲ್ಲಿ ಅರ್ಧದಲ್ಲಿ ಕಡಿದು ಹೋದ ಅತ್ಯಾಸಕ್ತಿಕರ ಕನಸುಗಳು ಪುನಃ ಮುಂದುವರಿಯಲೆಂದು ಎಷ್ಟು ಬಯಸಿದರೂ, ಕಣ್ಣು ಮುಚ್ಚಿ ಪುನಃ ಬೇಗನೇ ನಿದ್ದೆಗೆ ಜಾರಿದರೂ, ಅವು ಮತ್ತೆ ಮುಂದುವರಿಯುತ್ತಿರಲಿಲ್ಲ. ನಿರಾಸೆಯಿಂದ ಮನಸು ಭಾರವಾಗುತ್ತಿತ್ತು.
ಶ್ರಮ ಪಟ್ಟು ಎಲ್ಲ ತಯಾರಿ ನಡೆಸಿ ಪರೀಕ್ಷೆಗೆಂದು ಹೊರಟು ತಡವಾಯ್ತೆಂದು ಬೇಗ ಬೇಗ ದಾರಿ ನಡೆದರೆ, ಅರ್ಧದಾರಿ ನಡೆವಾಗಲೇ ರೈಲಿನ ಸಿಳ್ಳು ಕೇಳಿಸುತ್ತದೆ. ದೂರದಲ್ಲಿ ಸ್ಟೇಶನ್ ಕಾಣಿಸುತ್ತಿದೆ. ಓಡಲೆತ್ನಿಸಿದರೆ ಕಾಲ್ಗಳೇ ಬರುತ್ತಿಲ್ಲ; ಓಡುವ ಬದಲಿಗೆ ಕುಂಟಿದಂತಾಗುತ್ತಿದೆ. ರೈಲು ಪುನಃ ಸಿಳ್ಳೆ ಹಾಕುತ್ತಾ, ಧಾವಿಸುತ್ತಾ ಬಂದು ದಾಟಿಯೂ ಹೋಗುತ್ತದೆ. ನನ್ನ ಓಟ ನನ್ನನ್ನು ಮುಂದಕ್ಕೊಯ್ಯುವುದೇ ಇಲ್ಲ; ಸ್ಟೇಶನ್ ತಲುಪಿ ನಿಂತ ರೈಲು ವಿಸಿಲ್ ಹಾಕಿ ಹಾಕಿ ಕೊನೆಗೆ ಹೊರಟೂ ಬಿಡುತ್ತದೆ. ಎಚ್ಚರಾಗಿ ಕಣ್ಣು ತೆರೆದರೆ ಎದೆಯೆಲ್ಲ ಡವ ಡವ!