varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಒಲಿದ ಸ್ವರಗಳು: ಮೈತ್ರೆಯ ಕವಿತೆಗಳು

ವಾರ್ತಾ ಭಾರತಿ : 5 Dec, 2018
ಯೋಗೇಶ್ ಮೈತ್ರೆಯ, ಕನ್ನಡಾನುವಾದ: ಸಂವರ್ತ ‘ಸಾಹಿಲ್’

►1

ಪಿತ್ರಾರ್ಜಿತವಾಗಿ 

ಗತಕಾಲದಿಂದ ದಕ್ಕಿದ್ದು

ಅಪರಾಧದ ಇತಿಹಾಸ

ಅಲ್ಲಿ ನನ್ನ ಪೂರ್ವಜರು

ಪ್ರೀತಿಸುವ ಮತ್ತು ಪ್ರೀತಿಪಾತ್ರರಾಗುವ

ಅವಕಾಶಗಳಿಂದ ವಂಚಿತರಾಗಿದ್ದರು

ಇಂದು ನೋಡಿದರೆ

ಭಾರತದಲ್ಲಿ ಪ್ರತಿ ದಗಾಕೋರನು

ಕ್ರಾಂತಿಯ ಕುರಿತು ಮಾತನಾಡುತ್ತಿದ್ದಾನೆ.

ನಾನು ಪ್ರೀತಿಯ ಕುರಿತು ಮಾತಾಡಬೇಕು.

►2

ನನ್ನ ತಲೆಮಾರಿನ ಸೊಬಗು

ಏನೆಂದರೆ

ನಾವು ಹಂಚಿಕೊಂಡಿದ್ದೇವೆ

ಒಬ್ಬರೊಬ್ಬರ ಎಂಜಲನ್ನು

ಸಿಗರೆಟ್ ಹಂಚಿಕೊಳ್ಳುತ್ತಾ

ಅದೇ

ದುರಂತ ಏನೆಂದರೆ

ನಾವು ಅರಳಲಿಲ್ಲ

ನಮ್ಮ ನಮ್ಮ ರಕ್ತ ಹೊತ್ತು

ಒಬ್ಬರೊಬ್ಬರ ಗರ್ಭದಲ್ಲಿ.

►3

ಇನ್ನೂ ನೆನಪಿದೆ

ನಿನ್ನ ಬಾಲ್ಯದ ಫೋಟೊ

ನನಗೆ ನೀನು ತೋರಿಸಿದ ದಿನ:

ತನ್ನ ಹೆಸರಿನಲ್ಲಿ ಹೂವಿನ ಘಮ ಹೊತ್ತ

ರಾತ್ರಿಗೇ ಕಪ್ಪನ್ನು ನೀಡುವ

ಆಫ್ರಿಕನ್ ಗುಂಗುರು ಕೂದಲಿನ

ಹುಡುಗಿ

ತನ್ನ ಜೀವವೇ ಎಂಬಂತೆ

ಕೈಯಲ್ಲಿ ಬೊಂಬೆಯನ್ನು ಅಪ್ಪಿಕೊಂಡಿರುವುದು.

ಮುಂದಿನ ನಾಲ್ಕು ವರ್ಷ ನಾವು

ಜೊತೆಜೊತೆಯಾಗಿ ಬೆಳೆದೆವು

ನೀನು ಸಿಟ್ಟನ್ನು

ಅಳವಡಿಸಿಕೊಳ್ಳುತ್ತ

ನಾನು ಪ್ರೀತಿಯನ್ನು

ಆದರೂ ನಾವು ಕಷ್ಟ ಪಟ್ಟು ಸಂಪಾದಿಸಿದ

ಆತ್ಮೀಯತೆಯನ್ನು ನಾವೇ ತಪ್ಪಾಗಿ ಗ್ರಹಿಸುತ್ತಿದ್ದೆವು

ನಿನ್ನ ನಗು ಮತ್ತೆ ಮತ್ತೆ ಹೇಳುತ್ತಿತ್ತು

ನಿನಗೆ ಬದುಕ ನಡೆಸುವುದು ಗೊತ್ತು

ನನಗೇ ಆ ಜಾಣ್ಮೆ ಇರಲಿಲ್ಲ.

ಬಹುಶಃ ಹಸಿವು

ನನಗೆ ಪ್ರೀತಿಗಿಂತ ಹೆಚ್ಚು

ಹತ್ತಿರವಾಗಿದ್ದದ್ದೇ ಅದಕ್ಕೆ ಕಾರಣ.

ಆದರೆ ನೀನು ಹೊರಟು ನಿಂತ ದಿನ

ನಿನ್ನ ಮುಖದಲ್ಲಿ ಆ ನಗು ಕಾಣಲಿಲ್ಲ.

ಬಹುಶಃ ದೊಡ್ಡವಳಾಗಿದ್ದೆ ನೀನು.

ಬೆಳೆದು ನಿಂತಾಗ

ನಾವು ನಾವಾಗಿರುವುದಿಲ್ಲ 

ಮರೆತಿರುತ್ತೇವೆ

ಮಗುವಿನಂತೆ

ಬಿಗಿದಪ್ಪಿಕೊಳ್ಳುವುದು

ತನ್ನ ಜೀವವೇ ಎಂಬಂತೆ.

►4

ಭಯಭೀತನಾಗಿ

ಅಂದುಕೊಳ್ಳುತ್ತೇನೆ

ಕಾವ್ಯ ನಿರುಪಯುಕ್ತ

ಜನ, ನನ್ನ ಜನ

ಅತ್ಯಾಚಾರಗಳಲ್ಲಿ

ಬರೆ ಹೆಸರು ಮಾತ್ರ ಆಗುತ್ತಿರಲು.

ಒಂದಿಷ್ಟು ಧೈರ್ಯ ತಂದುಕೊಂಡು

ಹಿಂದಿರುಗಿ ನೋಡುತ್ತೇನೆ

ನಮ್ಮ ಭೀಷಣ ಗತವನ್ನು

ನನ್ನ ಧೀರ ಪೂರ್ವಜರು

ಉಸಿರಾಡುತ್ತಿರುವಾಗಲೂ

ಹಿಂದೂಸ್ಥಾನದ ಪಾಲಿಗೆ ಸತ್ತಿರುವುದನ್ನು

ತಮ್ಮ ಒರಟು ಕೈಗಳಿಂದ ಬರೆದ

ಮೊದಲ ಅಕ್ಷರಗಳ ಮೂಲಕವೇ

ಮೇಲೆದ್ದು ಅವರು

ಸೂರ್ಯನ ಕಿರಣವನ್ನು ಸ್ಪರ್ಶಿಸಿದ್ದರು

ಭೂಮಿಯನ್ನು ಸಾಕುವ, ಪೋಷಿಸುವ

ಎಲ್ಲದರ ಪ್ರತಿ

ತಮ್ಮ ಪ್ರೀತಿಯನ್ನು

ಮೊಟ್ಟಮೊದಲ ಬಾರಿಗೆ ವ್ಯಕ್ತಪಡಿಸಿದ್ದರು

ಬದುಕಿನ ಈ ಅನುಬಂಧದಲ್ಲಿ

ಅವರ ಚರಿತ್ರೆ

ನನ್ನ ವರ್ತಮಾನ ಭೇಟಿಯಾಗುತ್ತದೆ

ಇಲ್ಲೇ ನನಗೊಂದು ಸಂದೇಶ

ರವಾನೆಯಾಗುತ್ತದೆ:

ನೀನು ಬರೆಯಬೇಕು

ಯಾಕೆಂದರೆ

ನೀನು ಇಲ್ಲವಾದಾಗ

ನಿನ್ನ ಅಕ್ಷರಗಳ ಮೂಲಕ

ನೀನು ಮೇಲೇಳುವೆ

ಎಂದೂ ನಿನ್ನದಾಗ

ನಿನಗೆ ನಿರಾಕರಿಸಲ್ಪಟ್ಟ

ಮಾತೃಭೂಮಿಗಾಗಿ

ನಿನ್ನ ಪ್ರೀತಿಯನ್ನು ಬಹಿರಂಗಪಡಿಸಲು.

►5

ಅಲ್ಲಾಹುವಿನ ನಾಮಸ್ಮರಣೆ ಮಾಡಲಿಲ್ಲ ಎಂಬುದಕ್ಕೆ ನನ್ನನ್ನು ಧರ್ಮಭ್ರಷ್ಟ ಎನ್ನುತ್ತಿದ್ದಾರೆ

ಗೊತ್ತಿಲ್ಲ ಅವರಿಗೆ

ದೇವರು ಒಂದು ಅಪೂರ್ಣ ಕಾವ್ಯವಾಗಿ

ನೆಲೆಸಿರುವ ಕಣ್ಣು ಮತ್ತು ತುಟಿಗಳನ್ನು

ಚುಂಬಿಸಿದ್ದೇನೆ ನಾನು.

►6

ಬತ್ತಿಹೋಗುತ್ತಿದೆ ಭಾಷೆ ನನ್ನೊಳಗೆ

ನಿನ್ನೊಂದಿಗೆ ಮಾತು ಅಸಾಧ್ಯವಾಗುತ್ತಿದೆ

ಬಾ, ಸ್ಪರ್ಶದ ಮೂಲಕ ಸಂವಾದಿಸೋಣ

ವ್ಯಭಿಚಾರಿ ಭಾಷೆಯಿಂದ ಪ್ರೀತಿಯ ರಕ್ಷಿಸೋಣ.

►7

ನಾನು ಜನಿಸಿದ್ದು

ಅಸ್ವಸ್ಥ ಸಮಾಜದ ಅನುಭಾವಿ ಕೊಚ್ಚೆಯಲ್ಲಿ

ಇಲ್ಲಿ ಕೊಳೆತ ಇತಿಹಾಸದ ಪುಟದ ನಡುವೆ

ಗುಲಾಬಿಯ ದಳದಂತೆ ನನ್ನ ಪೂರ್ವಜರು ಅಸ್ಪೃಶ್ಯರಾಗಿ ಉಳಿದರು

ಆದರೂ ತಮ್ಮ ಅನಂತ ಸ್ಮತಿಯಲ್ಲಿ ಅಡಗಿದ ಅಚಲ ಸುಗಂಧದಿಂದ

ನಾ ಅರಳಲೇಬೇಕು ಕಮಲದ ಹಾಗೆ

ಎಂದು ತಿಳಿಹೇಳಿದರು.

ಬೆಳೆಯುವಾಗ ನಾನು ಘಾಸಿಗೊಂಡಿದ್ದೇನೆ

ಈ ಲೋಕ ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವ

ನಾರುವ ಅಲೆಗಳ ಅಬ್ಬರಕ್ಕೆ.

ಗಂಡಸರು ತಮ್ಮ ಬುದ್ಧಿಯ ಮೂಲಕ

ಹೆಂಗಸರು ತಮ್ಮ ಭಾವದ ಮೂಲಕ

ನನ್ನ ಶುಶ್ರೂಷೆ ನಡೆಸಿದ್ದಾರೆ.

ನನಗೀಗ ಅರಿವಾಗಿದೆ

ಗಂಡಸರು ಭಾವನಾತ್ಮಕವಾಗಿ

ತುಂಬಾ ಹಸಿ ಮತ್ತು

ಹೆಂಗಸರು ಬೌದ್ಧಿಕವಾಗಿ ಅತ್ಯಂತ ಸುಂದರ ಎಂದು.

►8

ನಿನಗಾಗಿ ಗುಲಾಬಿ ಬದಲು

ಸಿಗರೆಟ್ ತಂದದ್ದು ಒಳ್ಳೇದೇ ಆಯಿತು!

ಗುಲಾಬಿ ಹೂವು ಈಗ ಅದೆಷ್ಟು ದುಬಾರಿ

ಹಿಂದೆಂದಿಗಿಂತಲೂ.

ಅದೂ ಅಲ್ಲದೆ ಈಗ ಗುಲಾಬಿ ಹಿಡಿದವರನ್ನು

ಕೊಂದುಬಿಡುವ ಕೆಲಸಗಳೂ ನಡೆಯುತ್ತಿವೆ.

(ಹಾಗಾಗಿ ನನ್ನ ಪ್ರೀತಿಯ ರೂಪಕ ಬದಲಾಯಿಸಿದ್ದೇನೆ.)

ಗುಲಾಬಿ ಬಾಡಿಹೋಗುತ್ತದೆ, ಬಾಡಿ ಉದುರಿಹೋಗುತ್ತದೆ, ಸಾವನ್ನಪ್ಪುತ್ತದೆ.

ಒಳ್ಳೆದಾಯಿತು ನಿನಗಾಗಿ ನಾನು ಸಿಗರೆಟ್ ತೆಗೆದುಕೊಂಡು ಬಂದೆ

ಈಗ ನಾವು ಮಾತಿಲ್ಲದೆ ಕೂತಾಗಲೂ

ಪ್ರತಿ ಧಮ್ಮಿನೊಂದಿಗೆ

ಒಬ್ಬರೊಳಗೊಬ್ಬರು ಉರಿಯಬಹುದು.

►9

ಸನ್ನಡತೆಯ ಬೇಟೆಗಾರರು

ನನಗೆ ತಿಳಿದಿದೆ ನನ್ನ ಅನುಭವಕ್ಕೆ ಬಂದಿದೆ

ಏಕಾಂತ ಬೇಡುವ ಒಂಟಿ ಬಯಕೆಗಳು.

ಆದರೂ ನಾನು ಪ್ರಯತ್ನಿಸಬೇಕು

ಶ್ರಮಿಸಬೇಕು

ನೆನಪಿನ ಒಂದು ನಕಾಶೆ ಬರೆಯಲು

ವರ್ತಮಾನ ನಮಗಲ್ಲ

ಅದು ಬೇಡುತ್ತದೆ ದೇಹ ಮತ್ತು ಕಾಮೋದ್ರೇಕದ

ವಿಚ್ಛೇದನೆ

ಆದರೂ ನಾವು ನೆನಪಿನಲ್ಲಿ ಜನಿಸಬಲ್ಲೆವು

ಕನಸಿನಲ್ಲಿ ಬದುಕವಲ್ಲೆವು

ಆ ನೆಲದಲ್ಲಿ ಒಬ್ಬರನ್ನೊಬ್ಬರು ನೋಯಿಸದೆ

ಪ್ರೇಮಿಸಬಲ್ಲೆವು ದ್ವೇಷಿಸಬಲ್ಲೆವು

ನಮ್ಮ ಕಾಮಾತುರದ ಬಗ್ಗೆ ನಾಚಿಕೊಳ್ಳದೆ

ನಮ್ಮ ದ್ರೋಹಿ ದೃಷ್ಟಿಯ ಬಗ್ಗೆ ಲಜ್ಜೆ ಬಿಟ್ಟು:

ಸನ್ನಡತೆಯ ಬೇಟೆಗಾರರೇ

ಆದರೆ ನೀವು ಇಂದು ರಾತ್ರಿ ಮಲಗುವ ಮುನ್ನ

ಕೋಣೆಯ ಬಾಗಿಲನ್ನು ಭದ್ರವಾಗಿ ಮುಚ್ಚಿಬಿಡಿ.

ನೀವು ಕನಸುವ ಹೆಣ್ಣಿನ ಕುರಿತು ನೀವು ಬಿಚ್ಚಿ ಹೇಳಲಾಗದ ಕಲ್ಪನೆಗಳನ್ನು

ನಾನು ಕೆದಕಲಾರೆ.

►10

ಮೊದಲು ನಿನ್ನೊಳಗಿನ ಹೆಣ್ಣನ್ನು

ಆಮೇಲೆ ನಿನ್ನೊಳಗಿನ ಮಾನವಳನ್ನು

ಈ ದೇಶ ಕೊಂದು ಹಾಕಿತು.

ಐತಿಹಾಸಿಕವಾಗಿ ನಾನು ಮನುಷ್ಯನೇ ಅಲ್ಲ

ಅವರ ಕಣ್ಣಲ್ಲಿ ನಾನು ಜನ್ಮಭೂಮಿ ಇಲ್ಲದವರ

ಘೋಷಣೆಯ ನವೀನ ಸಂತತಿ ಅಷ್ಟೇ

ಇಂದು ನಿನ್ನ ನನ್ನ ಪರಿಸ್ಥಿತಿ ಹೆಚ್ಚೇನು ಭಿನ್ನವಲ್ಲ

ನೀನು ನಾನು ಪ್ರಾರ್ಥಿಸುವ ದೇವರು

ಬೇರೆ ಬೇರೆಯಾದರೂ ಅವರ್ಯಾರೂ ನಮ್ಮ ಕಡೆ ಕಿವಿಗೊಡುತ್ತಿಲ್ಲ.

ಅದೆಷ್ಟೋ ವರ್ಷಗಳಿಂದ ಅತ್ಯಾಚಾರ ಸಹಿಸಿಕೊಂಡು ಬಂದ ನಾವು

ಇತ್ತೀಚೆಗಷ್ಟೇ ಯಾವುದೇ ದೇವರ ಆಶೀರ್ವಾದ ಇಲ್ಲದೆಯೂ

ಒಬ್ಬರನ್ನೊಬ್ಬರು ಮುಟ್ಟಿ ಮಾತನಾಡಿಸಿದ್ದೇವೆ.

ನಮ್ಮ ಅಪವಿತ್ರ ನಗು ಮತ್ತದು ಹರಡುತ್ತಿರುವ

ಪ್ರೀತಿಯ ಕಂಪು ಈ ದರಿದ್ರ ದೇಶದಲ್ಲಿ

ಭಯ ಹುಟ್ಟಿಸಿದೆ ಆತಂಕ ಮೂಡಿಸಿದೆ

ಆದರೆ ಇಷ್ಟು ಮಾತ್ರವಾದರೆ ಸಾಲದು

ನಿನ್ನ ನನ್ನ ಪ್ರಾಣ ತಿಂದ ಈ ದೇಶದ ವಿರುದ್ಧ

ಸೇಡು ತೀರಿಸಿಕೊಳ್ಳಬೇಕು ನಾವು

ಬಾ ನಾನು ಭಂಗಿ ಹೊತ್ತಿಸುತ್ತೇನೆ

ನೀನು ದೇವರ ಮುಂದೆ

ನಯವಾಗಿ ನನ್ನನ್ನು ಅಪ್ಪಿಕೊಂಡು

ಉತ್ಕಟವಾಗಿ ಚುಂಬಿಸು.

►11

ನೀ ದೂರಾದಾಗ ನಿನ್ನನ್ನು ನಾನು ದ್ವೇಷಿಸುವುದಿಲ್ಲ.

ಬದಲಾಗಿ ಕಾಪಾಡುತ್ತೇನೆ ಬರೆಯದ ಕವಿತೆಯ ಹಾಗೆ.

ಮರಳುತ್ತೇನೆ ಮತ್ತದೇ ಕಾಲಕ್ಕೆ ಪ್ರೇಮಾಂಕುರವಾದ ಆ ಕ್ಷಣಕ್ಕೆ

ಮತ್ತೆ ಅಲ್ಲಿಂದ ಮರಳುವುದಿಲ್ಲ ನೀನು ಹೊರಟು ನಿಂತ ಹೊತ್ತಿಗೆ.

ಹುಚ್ಚುತನ. ಹೌದು.

ಆದರೆ ನಿನ್ನ ಸ್ಪರ್ಶವೇ ನಿಜವಾದ ಹುಚ್ಚುತನ.

ನನ್ನ ಮಾಂಸವನ್ನು ಕೊರೆದು ನನ್ನ ರಕ್ತದಲ್ಲಿ

ಕರಗಿಹೋಗುವ ನಿನ್ನ ಪ್ರತಿ ಸ್ಪರ್ಶವೂ ನನ್ನನ್ನು ಛಿದ್ರಗೊಳಿಸುತ್ತದೆ.

ನಿನ್ನನ್ನು ನೆನಪಿಸಿಕೊಂಡಾಗ

ಇರುವ ನನ್ನೊಂದು ‘ಸ್ವ’ಕ್ಕೆ ಅದೆಷ್ಟು ಅರ್ಥಗಳು!

ನಿನ್ನನ್ನೊಮ್ಮೆ ಬರೆದು ನೋಡಬೇಕು

ತಿಳಿಯಲು ಬರೆಯಲಾರಂಭಿಸಿದ ಕವಿತೆಗೆ

ಕೊನೆ ಹಾಡಲು ಮನಸಾಗದೆ ಇರುವುದು

ಹೇಗೆಂದು, ಯಾಕೆಂದು.

►12

ಆಕೆಯನ್ನು ಪ್ರೀತಿಸುತ್ತೇನೆ

ಭಿಕ್ಷುಕನ ಮನಸ್ಸಿನಿಂದ

ತನ್ನ ಕೈಯಲಿಲ್ಲದ ರೊಟ್ಟಿಯ

ಘಮವನ್ನು ಕಲ್ಪಿಸಿಕೊಳ್ಳುವಂತೆ ಪ್ರೀತಿಸುತ್ತೇನೆ

ಆಕೆಯನ್ನು ಜ್ವರ ಹಿಡಿದು ಮಲಗಿದಾತನಿಗೆ

ತಣ್ಣನೆಯ ನೀರು ಕುಡಿಯಲು ಇರುವ ಅಗತ್ಯದಂತೆ

ಆಕೆಯನ್ನು ಪ್ರೀತಿಸುತ್ತೇನೆ ನನ್ನ ಪೂರ್ವಜರು ಧೂಳಿನಿಂದ ಮೇಲೆದ್ದು ಅರಳಿದ ಗುಲಾಬಿಯಂತೆ

ಅದೇ ಸ್ವಭಾವದಲ್ಲಿ ಪ್ರೀತಿಸುತ್ತೇನೆ

ಆಕೆಯನ್ನು ಸ್ವಂತಕ್ಕೆ ಮಾತ್ರ ಅರ್ಥವಾಗುವ ಮರುಳನ ಭಾಷೆಯಲ್ಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)