ಕರಾವಳಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿಯಿಂದ ಕಾರ್ಯಾಚರಣೆ ಸಿದ್ಧತೆಯ ಪರಿಶೀಲನೆ
ಮಂಗಳೂರು, ಡಿ.5: ಕರ್ನಾಟಕ ರಾಜ್ಯದ ಕರಾವಳಿ ತೀರಗಳ ರಕ್ಷಣೆಗೆ ಸಂಬಂಧಿಸಿ ಕರಾವಳಿ ರಕ್ಷಣಾ ಪಡೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಕೋಸ್ಟ್ ಗಾರ್ಡ್ (ಪಶ್ಚಿಮ) ಪ್ರಾಂತ್ಯದ ಕಮಾಂಡರ್, ಇನ್ಸೆಪ್ಟಕರ್ ಜನರಲ್ ವಿ.ಡಿ. ಚಪೇರ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.
ನಿನ್ನೆ ಮಂಗಳೂರು ಕೋಸ್ಟ್ ಗಾರ್ಡ್ ಕಚೇರಿಗೆ ಭೇಟಿ ನೀಡಿರುವ ಅವರು ಇಂದು ಕೂಡಾ ಮಂಗಳೂರಿನಲ್ಲಿ ಕರಾವಳಿ ತಟ ರಕ್ಷಣಾ ಪಡೆಯ ಸುರಕ್ಷಾ ಕಾರ್ಯಗಳ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸಿದರು. ಪಶ್ಚಿಮ ಕರಾವಳಿ ತೀರದಲ್ಲಿ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯದ ವಿವಿಧ ಸರಕಾರಿ ಸಂಸ್ಥೆಗಳ ಜತೆ ಸಹಕಾರದೊಂದಿಗೆ ಕರಾವಳಿಯ ಭದ್ರತೆಯನ್ನು ಬಲಪಡಿಸುವುದು ಅವ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜತೆ ಸಂವಾದ ನಡೆಸಿದ ಅವರು, ಮಂಗಳೂರಿನಲ್ಲಿರುವ ಕರಾವಳಿ ರಕ್ಷಣಾ ಪಡೆಯ ವಿವಿಧ ಕಚೇರಿಗೆ ಭೇಟಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಕರಾವಳಿ ರಕ್ಷಣಾ ಪಡೆಯು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಸಮುದ್ರದಲ್ಲಿ 189 ಜನರನ್ನು ಅಪಾಯದಿಂದ ರಕ್ಷಿಸಿದ ಬಗ್ಗೆ ಅವರು ಈ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.