ಪ್ರತೀ ಗುಡಿಸಲಿನಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಹುಟ್ಟುತ್ತಾನೆ!
ಇಂದು ಅಂಬೇಡ್ಕರ್ ಪರಿನಿರ್ವಾಣ ದಿನ
ಇದು ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದ ಮಾತು. ‘ನಿಮ್ಮ ನಿರಂತರ ಅರಿವಿನ ಪರಿಶ್ರಮದ ಫಲವಾಗಿ ಭಾರತೀಯ ಶೋಷಿತ ಸಮುದಾಯ, ನೀವು ಬಯಸಿದಂತೆ ಉದ್ಧಾರವಾಗಿಲ್ಲ ಅವರ ಉದ್ಧಾರಕ್ಕೆ ಮತ್ತೊಮ್ಮೆ ನೀವೇ ಹುಟ್ಟಿ ಬರಬೇಕೇ? ಎಂಬ ಪತ್ರಕರ್ತರ ಪ್ರಶ್ನೆಗೆ, ಡಾ.ಅಂಬೇಡ್ಕರ್ ಅವರು ಉತ್ತರಿಸುತ್ತಾ ‘‘ಇಲ್ಲ ಈ ದೇಶದಲ್ಲಿ ಮತ್ತೊಮ್ಮೆ ನಾನೇ ಹುಟ್ಟುವ ಅಗತ್ಯವಿಲ್ಲ ಆದರೆ ಈ ದೇಶದ ಪ್ರತಿ ಗುಡಿಸಲಿನಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಹುಟ್ಟುತ್ತಾನೆ.’’ ಎಂದು ಹೇಳಿದರು. ಈ ಮಾತನ್ನು ಹೇಳುವಾಗ ಅವರು ನಾಲ್ಕು ರೀತಿಯಲ್ಲಿ ಆಲೋಚಿಸಿರಬಹುದು, ಒಂದು: ಈ ದೇಶದ ಪ್ರತಿ ಗುಡಿಸಲಿನಲ್ಲಿ ಜ್ಞಾನಿಗಳು ಉದಯಿಸುತ್ತಾರೆ. ಎರಡು:ಅವರು ನನ್ನಂತೆಯೇ ಶೋಷಿತ ಸಮುದಾಯದ ಪರ ಜೀವಪರ ಕಾಳಜಿಯನ್ನು ಹೊಂದುತ್ತಾರೆ. ಮೂರು: ನನ್ನಂತೆಯೇ ಮಾನವ ಹಕ್ಕ ಹಕ್ಕುಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಾರೆ ಹಾಗೆಯೇ ನನ್ನಂತೆಯೇ ನಿಸ್ವಾರ್ಥ ತ್ಯಾಗಿಗಳಾಗಿ ದುಡಿಯುತ್ತಾರೆ ಎಂದು.
ಸ್ವತಃ ಡಾ.ಅಂಬೇಡ್ಕರ್ ಉರಿಯುವ ಛಲವಾಗಿದ್ದರೂ ಕೂಡ ಅವರು ಬಯಸಿದ್ದು ಸಮಾಜದೊಳಗೆ ಪರಸ್ಪರ ದೈಹಿಕ ಸಂಘರ್ಷಣೆಯಿಂದ ಉಂಟಾಗುವ ಜ್ವಾಲೆಯನ್ನಲ್ಲ. ಸಮಾಜದೊಳಗೆ ಪರಸ್ಪರ ಬೌದ್ಧಿಕ ಸಂಘರ್ಷಕ್ಕಿಳಿದು ಅದರಿಂದ ಹೊತ್ತಿಸುವ ಜ್ಯೋತಿಯನ್ನು. ಅವರು ತಮ್ಮ ಬದುಕಿನುದ್ದಕ್ಕೂ ಶತಮಾನಗಳಿಂದ ಬೋಧಿಸಲ್ಪಟ್ಟ ಜ್ಞಾನದೊಂದಿಗೆ ಬೌದ್ಧಿಕ ಸಂಘರ್ಷಕ್ಕಿಳಿದು ಭಾರತದ ಅಂತರಂಗದ ಆಳವನ್ನು ತಟ್ಟಿದರು. ಆ ಮೂಲಕ ಪ್ರತಿ ಬಡವನ ಮನೆಯ ಜ್ಯೋತಿಯಾದರು. ಅವರ ಆಶಯದಂತೆ ಗುಡಿಸಲಿನೊಳಗೆ ಅಕ್ಷರ ಜ್ಞಾನಿಗಳೇನೊ ಉದಯಿಸಿದರು, ಆದರೆ ಅದರ ನಂತರದ ಆಶಯಗಳು ಏನಾದವು ? ಅವರನ್ನು ಕಳೆದುಕೊಂಡು ಅರುವತ್ತೆರಡು ವರ್ಷಗಳು ಕಳೆದರೂ ನಾವೇನು ಮಾಡಿದೆವು ?ಅಂಬೇಡ್ಕರರ ಬಗ್ಗೆ ಅದ್ಭುತವಾಗಿ ಮಾತನಾಡುವುದನ್ನು ಕಲಿತೆವು. ಆದರೆ ಅಂಬೇಡ್ಕರರಂತೆ ಕೆಲಸ ಮಾಡುವುದನ್ನು ಕಲಿಯಲಿಲ್ಲ. ಇದರ ಪರಿಣಾಮವಾಗಿಯೇ ಇಂದು ನಾವು ಸತ್ತಂತೆ ಬದುಕುತ್ತಿದ್ದೇವೆ. ಅನ್ಯಾಯ, ಶೋಷಣೆ, ನೋವು, ಬಡತನ, ಕಂಬನಿ, ಆಕ್ರಂದನಗಳನ್ನು ಸಹಿಸಿಕೊಂಡು, ಇದ್ದೂ ಇಲ್ಲದಂತೆ- ಕಂಡೂ ಕಾಣದಂತೆ ಜೀವಿಸುವ ಹಂತಕ್ಕೆ ನಮ್ಮನ್ನೇ ನಾವು ನಿಗ್ರಹಿಸಿಕೊಂಡಿದ್ದೇವೆ.
ಅವರ ಬದುಕಿನ ಸಂಧ್ಯಾ ಕಾಲಕ್ಕೆ ಮೂರು ವಿಚಾರಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದರು. ಒಂದು: ಬುದ್ಧ ಮತ್ತು ಆತನ ದಮ್ಮ ಕೃತಿಯನ್ನು ಆವಿರ್ಭವಿಸಿ ಕೊಂಡಿದ್ದರು. ಎರಡು: ಬುದ್ಧನ ದಮ್ಮದೆಡೆಗೆ ಶೋಷಿತ ಸಮುದಾಯದ ಪಯಣವನ್ನು ಆರಂಭಿಸಿದರು. ಮೂರು: ತಳ ಸಮು ದಾಯಗಳಲ್ಲಿ ಮುಖಂಡತ್ವಕ್ಕಾಗಿ ಕಿತ್ತಾಡುವ ಯಾತನೆ ಗಂಭೀರವಾಗಿ ಅವರನ್ನು ಗಾಯಗೊಳಿಸಿತ್ತು. ಇವುಗಳ ಪರಿಣಾಮವಾಗಿಯೇ ಅವರು ಅತ್ಯಂತ ನೀರವ ಮೌನಿಯಾಗಿ, ತನ್ನ ಕೊನೆಯ ಕ್ಷಣಗಳಲ್ಲಿ ಅತ್ಯಂತ ದುಃಖತಪ್ತರಾಗಿದ್ದರು. ತನ್ನ ಜೀವಿತದ ಅವಧಿಯಲ್ಲಿಯೇ ಬುದ್ಧ ಮತ್ತು ಆತನ ದಮ್ಮ ಕೃತಿಯನ್ನು ಪ್ರಕಟಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ 1956 ಜೂನ್ನಲ್ಲ್ಲಿ ಪತ್ರಬರೆದು ಈ ಪುಸ್ತಕ ಪ್ರಕಟನೆಗೆಂದು ತಗಲುವ ವೆಚ್ಚ 20 ಸಾವಿರ ಧನಸಹಾಯ ನೀಡಬೇಕೆಂದು ನೆಹರೂರವರನ್ನು ಕೋರಿದ್ದರು. ಆದರೆ ನೆಹರೂ ಸರಕಾರ ಹಣವನ್ನು ಹೊಂದಿಸುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಹಾಗೆಯೇ ಈ ಗ್ರಂಥದ ಪರಿಷ್ಕರಣೆಗಾಗಿ ಎಸ್. ರಾಧಾಕೃಷ್ಣ ಅವರಿಗೆ ಕಳುಹಿಸಿಕೊಡುವುದಾಗಿ ಹೇಳಿತ್ತು. ಆಗ ರಾಧಾಕೃಷ್ಣನ್ ಬುದ್ಧನ ಪರಿನಿರ್ವಾಣದ 2,500ನೇ ವರ್ಷಾಚರಣೆಯ ಸಮಿತಿಯ ಮುಖ್ಯಸ್ಥರಾಗಿದ್ದರು. ಕೊನೆಗೂ ನೆಹರೂ ಮತ್ತು ರಾಧಾಕೃಷ್ಣರಿಂದ ಈ ಕೃತಿ ತಿರಸ್ಕರಿಸಲ್ಪಟ್ಟಿತ್ತು. ಆದರೆ ಮುಂದೆ ಆ ಕೃತಿ ನಿಷ್ಠಾವಂತ ಅನುಯಾಯಿಗಳ ಪರಿಶ್ರಮದಿಂದ ಪ್ರಕಟವಾದದ್ದು ಇತಿಹಾಸವಾಗಿ ಉಳಿಯಿತು. ಅಂದಿಗೆ ಭಾರತೀಯ ಸಂವಿಧಾನದಷ್ಟೇ ಈ ಕೃತಿಯು ಚರ್ಚೆಗೆ ಪಾತ್ರವಾಯಿತು. ಆದರೆ ಅದು ವಿದ್ವಾಂಸರ ಪಾಳೆಯದಲ್ಲಿ ಮಾತ್ರ ಉಳಿಯಿತು. ಇಂದು ಅಂಬೇಡ್ಕರರ ಅನುಯಾಯಿಗಳು ಮತ್ತು ಅಭಿಮಾನಿಗಳು ಈ ಕೃತಿಯ ಆಶಯವನ್ನು ಜನಮಾನಸದಲ್ಲಿ ಬಿತ್ತರಿಸದಿರುವುದು ಕೂಡ ಒಂದು ದುರಂತವೇ.
ಇನ್ನು ಬುದ್ಧನತ್ತ
ಬುದ್ಧ ಈ ನೆಲದ ಅಂತರಂಗ. ಬುದ್ಧನನ್ನು ಅವಿರ್ಭಿಸಿಕೊಂಡಿದ್ದ ಬಾಬಾ ಸಾಹೇಬರು ಅಂದು ತೀರಿಕೊಂಡಾಗ ಆ ಸ್ಮಶಾನದಲ್ಲಿ ನಡೆದ ಒಂದು ರೋಚಕ ಪ್ರಸಂಗವನ್ನು ಅವರ ಈ ಪರಿನಿರ್ವಾಣ ದಿನದಲ್ಲಿ ನಾವು ನೆನೆಯಬೇಕಾಗಿದೆ. ಡಾ.ಬಾಬಾ ಸಾಹೇಬರ ನೇತೃತ್ವದಲ್ಲಿ ಬಾಂಬೆಯಲ್ಲಿ 1956 ಡಿಸೆಂಬರ್ 16ರಂದು ಹತ್ತು ಲಕ್ಷ ಜನರು ಬೌದ್ಧ ದಮ್ಮಕ್ಕೆ ಮತಾಂತರ ಹೊಂದುವ ಎಲ್ಲ ಸಿದ್ಧತೆಗಳು ನಡೆದಿತ್ತು. ಅದರೆ ಅಚಾನಕ್ ಬಾಬಾ ಸಾಹೇಬರು ಈ ಕಾರ್ಯಕ್ರಮದ ಹತ್ತು ದಿನದ ಮುಂಚೆಯೇ ತೀರಿಕೊಂಡಿದ್ದು ಅವರ ಆಪ್ತ ಬಿ.ಕೆ.ಗಾಯಕ್ವಾಡರನ್ನು ಇನ್ನಿಲ್ಲದ ಶೋಕಕ್ಕೆ ತಳ್ಳಿತ್ತು. ಆದರೆ ಗಾಯಕವಾಡರು ಬಾಬಾ ಸಾಹೇಬರ ಇಂಗಿತವನ್ನು ನೆರೆದಿದ್ದ ಜನಸಾಗರದ ಮುಂದೆ ಇಟ್ಟು ಬಾಬಾ ಸಾಹೇಬರ ಈ ಅತೀವ ಆಸೆಯನ್ನು ಈಡೇರಿಸಬಲ್ಲಿರಾ? ಎಂದಾಗ ಆ ಮಾನವ ಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿಯನ್ನು ಸೂಚಿಸಿತು.ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಎಂದೆಂದೂ ಅಳಿಸಲಾಗದ ಸ್ಮತಿ ಸ್ಮರಣೆಯಾಯಿತು. ಇದು ತಮ್ಮ ನಾಯಕನಿಗೆ ತೋರಿದ ಅತಿಹಿರಿಮೆಯ ಗೌರವವಾಯಿತು. ಹಿರಿಯ ಭಿಕ್ಕು ಆನಂದ ಕೌಶಲಯನ್ ಚಿತೆಯ ಮುಂದೆ ನಿಂತು ಅತ್ಯಂತ ದುಃಖದಿಂದ ಗದ್ಗದಿತ ಧ್ವನಿಯಲ್ಲಿ ಬುದ್ಧನ ಶ್ಲೋಕವನ್ನು ಆರಂಭಿಸಿದರು. ಅದು ನೀರ್ ಜರಿಯು ಆಕಾಶವನ್ನು ಆವರಿಸಿದಂತಾಯಿತು.
ಜನಸಾಗರದ ಈ ಧ್ವನಿಯು ಆ ಸ್ಮಶಾನವನ್ನು ಆವರಿಸಿತು. ಸ್ಮಶಾನದ ಒಳಗೂ ಇಂತಹ ಅಪರೂಪದ ಕಾರ್ಯ ನೆರವೇರಿತು. ಬಹುಶಃ ಅನುಯಾಯಿಗಳ ಜನಸ್ತೋಮವೊಂದು ತಮ್ಮ ಅಗಲಿದ ನಾಯಕನಿಗೆ ಹೀಗೆ ಗೌರವ ಸಲ್ಲಿಸಬಹುದೆಂದು, ತಮ್ಮ ನಾಯಕನ ಅನುಪಸ್ಥಿತಿಯಲ್ಲಿಯೂ ಬಾಬಾ ಸಾಹೇಬರ ಪ್ರತಿಜ್ಞೆಯನ್ನು ಪೂರೈಸುವ ನಿಟ್ಟಿನಲ್ಲಿ ತೆಗೆದುಕೊಂಡ ಈ ಪರಿ ನಿರ್ಧಾರ ಐತಿಹಾಸಿಕವೇ ಸರಿ. ಚೈತ್ಯಭೂಮಿಯಲ್ಲಿ ಬಾಬಾ ಸಾಹೇಬರಿಗೆ ನಮಿಸಿದ ಈ ಘಟನೆ ವಿಶ್ವದ ಯಾವ ಜನ ನಾಯಕನ ಪಾರ್ಥಿವ ಶರೀರದ ಮುಂದೆಯೂ ನಡೆದಿರುವುದಿಲ್ಲ ಎಂಬುದು ಈಗ ಇತಿಹಾಸ. ಶತ ಶತಮಾನಗಳಿಂದ ಬದುಕಿನಿಂದಲೇ ವಂಚಿತರಾಗಿ ಅವಮಾನವನ್ನೇ ಬದುಕಾಗಿ ಸ್ವೀಕರಿಸಿದಂತಹ ಶೋಷಿತ ಸಮುದಾಯವನ್ನು ಶೋಷಣೆಯ ತೆಕ್ಕೆಯಿಂದ ಬಿಡಿಸಿ ಕರೆದೊಯ್ಯುವ ಡಾ.ಅಂಬೇಡ್ಕರರ ಕನಸು ಚಾರಿತ್ರಿಕ ಘಟನೆಯಾಗಿ ಉಳಿಯಿತು. 1956ರ ಅಕ್ಟೋಬರ್ 14ರಲ್ಲಿ ದಮ್ಮಕ್ಕೆ ನಡೆದ 10 ಲಕ್ಷ ಜನರ ಮತಾಂತರವನ್ನು ಬಿಟ್ಟರೆ ಈ ಘಟನೆಯು ಭಾರತದ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬುದ್ಧ ಧಮ್ಮವನ್ನು ಸ್ವೀಕರಿಸಿದಂತಹ ಘಟನೆಯಾಗಿದೆ. ಅದು ಯಾವ ಸಿದ್ಧತೆಯೂ ಇಲ್ಲದೇ ಸ್ಮಶಾನದ ಒಳಗೆ ನಡೆದ ಅಪೂರ್ವವಾದ ಚಾರಿತ್ರಿಕ ಕ್ಷಣವಾಗಿದೆ.
ಅವರ ಕೊನೆಗಾಲದ ಗಂಭೀರಾತಿಗಂಭೀರ ವಿಚಾರಗಳಲ್ಲಿ ಎರಡು ನೆರವೇರಿ ದವು. ಇನ್ನು ಉಳಿದ ವಿಚಾರದಲ್ಲಿ ನಾವು ಅಂಬೇಡ್ಕರರನ್ನು ಗ್ರಹಿಸುವುದು ಹೇಗೆ?
ಅಂದಿನ ಕಾಲಕ್ಕೆ ಡಾ.ಅಂಬೇಡ್ಕರ್ ಭಾರತೀಯ ಅಂತರಂಗದ ಆಳವನ್ನು ಅಪಾರವಾಗಿ ಗ್ರಹಿಸಿದ್ದರು. ಈ ಪರಿ ಆಳದ ಶೋಧನೆಯ ಛಲವೇ ಅವರನ್ನು ಅಸಮಾನತೆಯೊಟ್ಟಿಗೆ ಸಂಘರ್ಷಕ್ಕಿಳಿಯಲು ಪ್ರೇರೇಪಿಸಿತು. ಈ ಅಂತರಂಗದ ಕ್ರೌರ್ಯದೊಟ್ಟಿಗಿನ ಸೆಣಸಾಟದ ಪರಿಣಾಮವೇ ಡಾ.ಅಂಬೇಡ್ಕರರನ್ನು ಭಾರತದ ಪ್ರತಿಯೊಬ್ಬ ಬಡವನ ಬದುಕಿನ ಬಹುದೊಡ್ಡ ಲೈಫ್ ಇನ್ಸೂರೆನ್ಸ್ ಆಗಿಸಿತು.ಬಹುಕೋಟಿ ಜನರ, ಶೋಷಿತರ ಬದುಕಿನ ಸುರಕ್ಷತೆಗೆ ಅವರನ್ನು ನೆರವಾಗಿ ನಿಲ್ಲಿಸಿತು. ಈ ದೇಶದಲ್ಲಿನ ಕಾನೂನು ಪ್ರತಿಯೊಬ್ಬ ಬಡವನನ್ನು ರಕ್ಷಿಸುತ್ತದೆ.
ಆತನಿಗೆ ಸುರಕ್ಷತೆ ನೀಡುತ್ತದೆ. ನಾವು ನಮ್ಮ ಬದುಕಿನ ಸುರಕ್ಷತೆ ಡಾ.ಅಂಬೇಡ್ಕರ್ ಎಂಬುದನ್ನು ಮರೆತಿದ್ದೇವೆ. ನಮ್ಮನ್ನು ಯಾರಾದರೂ ನಮ್ಮ ಲೈಫ್ ಇನ್ಸೂರೆನ್ಸ್ ಬಗ್ಗೆ ಕೇಳಿದರೆ ತಮ್ಮ ಸಂಬಳದಲ್ಲಿ ಕಟಾಯಿಸುವ ಹಣದ ಬಗ್ಗೆ, ಕೂಡಿಟ್ಟ ಆಸ್ತಿಯ ಬಗ್ಗೆ, ಕಟ್ಟಿದ ಮನೆಗಳ ಬಗ್ಗೆ ಮಾತನಾಡುತ್ತೇವೆ. ತುತ್ತು ಅನ್ನಕ್ಕಾಗಿ ಜೀತ ಮಾಡುವಾಗ ಜೀತವೇ ಬದುಕಾಗಿತ್ತು. ಅನ್ನಕ್ಕಾಗಿ ಕೂಲಿ ಮಾಡುವಾಗ ಕೂಲಿಯೇ ನಮ್ಮ ಬದುಕಾಗಿತ್ತು. ಇಂದು ಅನ್ನಕ್ಕಾಗಿ ಅಕ್ಷರವೇ ನಮ್ಮ ಬದುಕಾಗಿದೆ. ಅಕ್ಷರ ಕೇವಲ ಅನ್ನಕ್ಕೆ ಮಾತ್ರ ಅರಿವೆಗೆ ಅಲ್ಲ ಎಂದುಕೊಂಡರೆ ಮತ್ತೊಮ್ಮೆ ಇಲ್ಲಿ ಜೀತದ ಕ್ರೌರ್ಯದಲ್ಲೂ, ಕೂಲಿಯ ನರಕದಲ್ಲೂ ಒದ್ದಾಡಬೇಕಿದೆ ಎಂಬ ಹರಿವನ್ನು ಮರೆತಿದ್ದೇವೆ. ಭಾರತದಲ್ಲಿ ಜೀತ ಮತ್ತು ಕೂಲಿಯ ಕ್ರೌರ್ಯದಿಂದ ನಮ್ಮನ್ನು ಸುರಕ್ಷಿತ ಜೀವನದೆಡೆಗೆ ಎಳೆದು ತಂದವರ ಅಂತರಂಗದ ಅರಿವಿನ ಆಳ ನಮಗಿನ್ನೂ ಕೈಗೆಟುಕಿಲ್ಲ. ಆ ಆಳಕ್ಕೆ ಇಳಿಯುವ ಪ್ರಯತ್ನವನ್ನು ನಾವು ಕೂಡ ಗಂಭೀರವಾಗಿ ಮಾಡಿಲ್ಲ.
ಬಹುಕೋಟಿ ಶೋಷಿತರ ಬದುಕಿಗೆ ಸುರಕ್ಷತೆಯನ್ನು ನೀಡಿದ ಡಾ.ಅಂಬೇಡ್ಕರರ ಬದುಕು ಸುರಕ್ಷಿತವಾಗಿತ್ತೇ? ಎಂದು ಯೋಚಿಸಿದರೆ ಖಂಡಿತ ಇಲ್ಲ. ಈ ದೇಶದ ಬಡವನ ಬದುಕಿಗಾಗಿ ಡಾ.ಅಂಬೇಡ್ಕರರು ತಮ್ಮ ನಾಲ್ಕು ಮಕ್ಕಳನ್ನು ಕಳೆದುಕೊಂಡರು. ಅವರ ಮೊದಲನೇ ಪತ್ನಿಯನ್ನು ಬಡತನ ನುಂಗಿ ಹಾಕಿಬಿಟ್ಟಿತ್ತು. ತಮ್ಮ ಕೊನೆಯ ದಿನಗಳಲ್ಲಿ ಅವರು ಅನುಭವಿಸಿದ ಯಾತನೆಗೆ ಪರಿವೆಯೇ ಇಲ್ಲ. ಅವರ ಪಾರ್ಥಿವ ಶರೀರವನ್ನು ದಿಲ್ಲಿಯಿಂದ ಮುಂಬೈಗೆ ತರಲು ಅವರ ಸ್ನೇಹಿತರು ಪಟ್ಟ ಪಾಡು ಹೇಳತೀರದು. ಇದು ಭಾರತದ ಬಹುಕೋಟಿ ಜನರ ರಕ್ಷಣೆಗೆ ಹೋರಾಟ ಮಾಡಿದ ಬಹುದೊಡ್ಡ ಜೀವಪರ ನಾಯಕರೊಬ್ಬರು ಬದುಕಿದ ರೀತಿ. ಇದು ಬಾಬಾ ಸಾಹೇಬರಂತಹವರಿಗೆ ಮಾತ್ರ ಸಾಧ್ಯವಾಯಿತು. ಏಕೆಂದರೆ ಅವರು ಏನೂ ಇಲ್ಲದೆ ಬದುಕುವ ಭಾರತೀಯರ ಅಂತರಂಗವನ್ನು ಅರ್ಥ ಮಾಡಿಕೊಂಡಿದ್ದರು.
ಇಂತಹ ಬಹುದೊಡ್ಡ ಆದರ್ಶಬದುಕನ್ನು ಅನುಸರಿಸುವ ತಳ ಸಮುದಾಯ ಗಳಲ್ಲಿ ಮುಖಂಡತ್ವದ ಹೊಡೆದಾಟ ಅವರ ಕಾಲಕ್ಕಿಂತಲೂ ಇಂದು ಬಲಿಷ್ಠ ಜೀವಂತಿಕೆಯನ್ನು ಪಡೆದು ಕೇಕೆ ಹಾಕುತ್ತದೆ. ಇದಕ್ಕೆ ಔಷಧಿ ನೀಡಲು ಇಂದು ಅಂಬೇಡ್ಕರ್ ಅವರು ದೈಹಿಕವಾಗಿ ನಮ್ಮೆಟ್ಟಿಗೆ ಇಲ್ಲ. ಆದರೆ ಅವರು ತೋರಿದ ಮಾರ್ಗ ಇಂದು ಜೀವಂತಿಕೆಯ ಸ್ವರೂಪ. ಈ ಮಾರ್ಗದಲ್ಲಿ ನಡೆಯಬೇಕಾದರೆ ಮೊದಲ ಅರ್ಹತೆಯೇ ತ್ಯಾಗ ಮತ್ತು ನಿಸ್ವಾರ್ಥ. ಇದು ಅಂಬೇಡ್ಕರ್ ಅಭಿ ಮಾನಿಗಳಿಂದ ಸಾಧ್ಯವಿಲ್ಲ. ಇದು ಅವರ ಅನುಯಾಯಿಗಳಿಂದ ಮಾತ್ರ ಸಾಧ್ಯ. ಇದಕ್ಕಾಗಿಯೇ ಈ ನೆಲದಲ್ಲಿ ಸ್ವಾರ್ಥದ ಕಾವು ನೀಗಿ, ನಿಸ್ವಾರ್ಥ ಚಿಗುರ ಬೇಕಿದೆ. ಇದಕ್ಕಾಗಿ ಧರೆ ಕಾದು ಭಾರತ ದೇಶದ ಪ್ರತಿ ಪ್ರತಿ ಗುಡಿಸಲಿನಲ್ಲಿ ನಿಸ್ವಾರ್ಥ, ಕರುಣೆ, ಮೈತ್ರಿ ಅನುಕಂಪವನ್ನು ತುಂಬಿಕೊಂಡು ಸಮಾನತೆಗಾಗಿ ದುಡಿಯುವ ಮಗುವೊಂದು ಕಣ್ತೆರೆದರೆ ಅದೇ ನಾಳಿನ ಅಂಬೇಡ್ಕರ್ ಆದೀತು.