ಶಿವಮೊಗ್ಗದಲ್ಲಿ ಸ್ಪೀಡ್ ಆಗಲಾರಂಭಿಸಿದೆ 'ಸ್ಮಾರ್ಟ್ ಸಿಟಿ' ಕೆಲಸಗಳು
2 ನೇ ಹಂತದಲ್ಲಿ 490 ಕೋಟಿ ರೂ. ವೆಚ್ಚದಲ್ಲಿ 21 ಕಾಮಗಾರಿಗಳಿಗೆ ಟೆಂಡರ್
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಡಿ. 5: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕಾರಾವದಿ ಪೂರ್ಣಗೊಳ್ಳುವ ಹಂತಕ್ಕೆ ಬಂದರೂ, ಅವರ ಮಹತ್ವಾಕಾಂಕ್ಷೆಯ 'ಸ್ಮಾರ್ಟ್ ಸಿಟಿ' ಯೋಜನೆ ಮಾತ್ರ ದೇಶಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಕಳೆದೆರೆಡು ವರ್ಷಗಳಿಂದ ಶಿವಮೊಗ್ಗ ನಗರದಲ್ಲಿಯೂ ಕೂಡ ಇದೇ ಸ್ಥಿತಿಯಿತ್ತು. ಆದರೆ ಆಮೆಗತಿಯಲ್ಲಿ ಸಾಗುತ್ತಿದ್ದ 'ಸ್ಮಾರ್ಟ್ ಸಿಟಿ' ಕೆಲಸಕಾರ್ಯಗಳು, ಕಳೆದ ಕೆಲ ತಿಂಗಳಿನಿಂದ ವೇಗ ಪಡೆದುಕೊಳ್ಳಲಾರಂಭಿಸಿದೆ.
ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂ. ವೆಚ್ಚದ ಯೋಜನೆಗಳ ಅನುಷ್ಠಾನಕ್ಕೆ, 'ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್'ನ ಅಧಿಕಾರಿಗಳು ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ಕೆಲ ತಿಂಗಳಲ್ಲಿ ನಗರದಲ್ಲಿ 'ಸ್ಮಾರ್ಟ್ ಸಿಟಿ' ಯೋಜನೆಯಡಿ ಅಭಿವೃದ್ದಿ ಹೊಳೆಯೇ ಹರಿಯುವ ಸಾಧ್ಯತೆಗಳು ಕಂಡುಬರುತ್ತಿವೆ.
'ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟಾರೆ 1184.13 ಕೋಟಿ ರೂ. ವೆಚ್ಚದಲ್ಲಿ 63 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ಸಿಕ್ಕಿದೆ. ಹಾಗೆಯೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ 348.67 ಕೋಟಿ ರೂ. ವೆಚ್ಚದಲ್ಲಿ 6 ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 257.57 ಕೋಟಿ ರೂ. ವೆಚ್ಚದಲ್ಲಿ 8 ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗುತ್ತಿದೆ.
ಮೊದಲ ಹಂತದಲ್ಲಿ 33.35 ಕೋ.ರೂ. ವೆಚ್ಚದಲ್ಲಿ 5 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನೆಹರೂ ಕ್ರೀಡಾಂಗಣದ ಸೌಂದರ್ಯೀಕರಣ, ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಆಲ್ಕೋಳ ವೃತ್ತದ ನಡುವಿನ ಬಿ.ಹೆಚ್.ರಸ್ತೆ ಅಗಲೀಕರಣ, ಬಾಪೂಜಿ ನಗರ, ಮಲ್ಲೇಶ್ವರ ನಗರದ ಉದ್ಯಾನವನಗಳ ಅಭಿವೃದ್ದಿ ಹಾಗೂ ವಿವಿಧೆಡೆಯಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ 'ಇ-ಲೈಬ್ರರಿ' ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯ ಹಂತದಲ್ಲಿದೆ' ಎಂದು ಸ್ಮಾರ್ಟ್ ಸಿಟಿ ಲಿಮಿಟಿಡ್ನ ಮೂಲಗಳು ಮಾಹಿತಿ ನೀಡುತ್ತವೆ.
'ಇದೀಗ ಎರಡನೇ ಹಂತದಲ್ಲಿ 490.83 ಕೋ. ರೂ. ವೆಚ್ಚದಲ್ಲಿ 21 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ತಾಂತ್ರಿಕ, ಆಡಳಿತಾತ್ಮಕ ಅನುಮೋದನೆಗಳು ದೊರಕುತ್ತಿದ್ದಂತೆ ಕೆಲಸಕ್ಕೆ ಚಾಲನೆ ನೀಡಲಾಗುವುದು. ಉಳಿದಂತೆ ಡಿಪಿಆರ್ (ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್) ಹಂತದಲ್ಲಿ 8 (212.75 ಕೋ.ರೂ. ವೆಚ್ಚ) ಕಾಮಗಾರಿಗಳಿವೆ. ಹಾಗೂ 447.20 ಕೋ.ರೂ. ಮೊತ್ತದ 29 ಕಾಮಗಾರಿಗಳಿಗೆ ಇನ್ನಷ್ಟೆ ರೂಪುರೇಷೆ ಸಿದ್ದಪಡಿಸಬೇಕಾಗಿದೆ' ಎಂದು ಸ್ಮಾರ್ಟ್ ಸಿಟಿ ಮೂಲಗಳು ತಿಳಿಸುತ್ತವೆ.
ಚುರುಕು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಭಿವೃದ್ದಿಪಡಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ವಾಹಕ ಘಟಕ ರಚಿಸಲಾಗಿದೆ. ಐ.ಎ.ಎಸ್. ದರ್ಜೆಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಪ್ರತ್ಯೇಕ ಕಚೇರಿ ಹಾಗೂ ಸಿಬ್ಬಂದಿಗಳ ನಿಯೋಜಿಸಲಾಗಿದೆ. ರಾಜ್ಯಮಟ್ಟದಲ್ಲಿ ಮೇಲುಸ್ತುವಾರಿ ಸಮಿತಿ ಕೂಡ ರಚನೆ ಮಾಡಲಾಗಿದೆ.
ಈ ಹಿಂದೆ 'ಸ್ಮಾರ್ಟ್ ಸಿಟಿ'ಯಡಿ ಯಾವ್ಯಾವ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುವುದರ ಕುರಿತಂತೆ, ಪಾಲಿಕೆ ಅಧಿಕಾರಿಗಳು ಜನರ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಅಭಿಪ್ರಾಯಗಳನ್ನು ಕ್ರೋಢಿಕರಿಸಿ 63 ಯೋಜನೆಗಳ ರೂಪುರೇಷೆ ಸಿದ್ದಪಡಿಸಿದ್ದರು. ಇದಕ್ಕೆ ಸರ್ಕಾರದ ಹಂತದಲ್ಲಿ ಅನುಮತಿ ಕೂಡ ಪಡೆದುಕೊಂಡಿದ್ದರು. ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ತನ್ನ ಪಾಲಿನ ಅನುದಾನ ಕೂಡ ನೀಡಿತ್ತು. ಆದರೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು.
ಮತ್ತೊಂದೆಡೆ ನಾನಾ ತಾಂತ್ರಿಕ - ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದವು. ಪರಿಣಿತ ಅಧಿಕಾರಿ-ಸಿಬ್ಬಂದಿಗಳ ಕೊರತೆಯೂ ಉಂಟಾಗಿತ್ತು. ಸರ್ಕಾರದ ಹಂತದಲ್ಲಿ ಯೋಜನೆಗಳಿಗೆ ಅನುಮತಿ ದೊರಕುವುದು ವಿಳಂಬವಾಗುವುದು ಸೇರಿದಂತೆ ನಾನಾ ಕಾರಣಗಳಿಂದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಅನುಷ್ಠಾನ ವಿಳಂಬವಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದ ಸಾರ್ವಜನಿಕರಲ್ಲಿ, ಇದು ಭ್ರಮನಿರಸನ ಉಂಟು ಮಾಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ಆದರೆ ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಕ್ರಮೇಣ ವೇಗ ಪಡೆದುಕೊಳ್ಳಲಾರಂಭಿಸಿವೆ. ಮುಂದಿನ ದಿನಗಳಲ್ಲಿ ಯೋಜನೆಯ ಅನುಷ್ಠಾನ ಯಾವ ದಿಕ್ಕಿನಲ್ಲಿ ಸಾಗಲಿದೆ? ಯಾವ ರೀತಿಯಲ್ಲಿ ನಗರದ ಚಿತ್ರಣ ಬದಲಾಗಲಿದೆ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಇಂಜಿನಿಯರ್ ಗಳ ನೇಮಕ : ಆಯುಕ್ತೆ ಚಾರುಲತಾ ಸೋಮಲ್
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸಕಾರ್ಯಗಳು, ವಿವಿಧ ಹಂತಗಳಲ್ಲಿ ಪರಿಶೀಲನೆಗೊಳಪಡುತ್ತದೆ. ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ನಿಯಮಾನುಸಾರವೇ ಕಾಮಗಾರಿ ಅನುಷ್ಠಾನಗೊಳಿಸಬೇಕು. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಇನ್ನಷ್ಟು ಕೆಲಸಕಾರ್ಯಗಳನ್ನು ಕಾರ್ಯಗತಗೊಳಿಸಲಾಗುವುದು. ಇದಕ್ಕಾಗಿ ಸಹಾಯಕ ಹಾಗೂ ಜೂನಿಯರ್ ಇಂಜಿನಿಯರ್ ಗಳ ನೇಮಕ ಮಾಡಿಕೊಳ್ಳಲಾಗಿದೆ. ಹಂತಹಂತವಾಗಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ಪಾರದರ್ಶಕತೆಯ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ, ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಚಾರುಲತಾ ಸೋಮಲ್ರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.