ಗ್ರಾ.ಪಂ-ನಾಡ ಕಚೇರಿಗಳಲ್ಲಿ 'ಸರ್ವರ್ ಡೌನ್' ಕಾಟ: ಹೊರೆಯಾಗಿ ಪರಿಣಮಿಸುತ್ತಿರುವ ಆನ್ಲೈನ್ ಆಧಾರಿತ ಸೇವೆಗಳು
ಗಮನಹರಿಸುವುದೆ ರಾಜ್ಯ ಸರ್ಕಾರ?
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಡಿ. 5: ಗ್ರಾಮ ಪಂ.ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ, ಗ್ರಾಮೀಣ ಭಾಗದವರಿಗೆ ತ್ವರಿತ ಸೌಲಭ್ಯ ಕಲ್ಪಿಸಲು ಕೇಂದ್ರ-ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಕೋಟ್ಯಾಂತರ ರೂ. ಖರ್ಚು ಮಾಡುತ್ತಿವೆ. ಆನ್ಲೈನ್ ಆಧಾರಿತ ಸೇವೆ ಕಾರ್ಯಗತಗೊಳಿಸುತ್ತಿವೆ. ಆದರೆ ಹಲವು ಗ್ರಾ.ಪಂ.ಗಳಲ್ಲಿ 'ಆನ್ಲೈನ್' ಆಧಾರಿತ ಸೇವೆಯೇ ಗ್ರಾಮಸ್ಥರಿಗೆ ಹೊರೆಯಾಗಿ ಪರಿಣಮಿಸಿದೆ.
ಹೌದು. ಒಂದೆಡೆ, ಆನ್ಲೈನ್ ಆಧಾರಿತ ವ್ಯವಸ್ಥೆಯಿಂದ ನಾಗರೀಕರಿಗೆ ತ್ವರಿತಗತಿಯಲ್ಲಿ ಸರ್ಕಾರದ ಸೌಲಭ್ಯಗಳು ದೊರಕುತ್ತಿವೆ. ಕಾಮಗಾರಿಗಳ ಅನುಷ್ಠಾನ ಸುಲಭವಾಗುತ್ತಿವೆ. ಮತ್ತೊಂದೆಡೆ ಕೆಲ ಗ್ರಾಮೀಣ ಭಾಗಗಳಲ್ಲಿ 'ಸರ್ವರ್ ಡೌನ್' ಸಮಸ್ಯೆಯಿಂದ, ಆನ್ಲೈನ್ ಆಧಾರಿತ ಸೇವೆಗಳು ದುಬಾರಿಯಾಗಿ ಪರಿಣಮಿಸುತ್ತಿವೆ. ಕಾಮಗಾರಿಗಳ ಅನುಷ್ಠಾನ ಕೂಡ ವಿಳಂಬವಾಗುವಂತಾಗಿದೆ.
ಇದರಿಂದ ಗ್ರಾಮ ಪಂ, ನಾಡ ಕಚೇರಿಗಳಿಗೆ ಸಾರ್ವಜನಿಕರು ದಿನನಿತ್ಯ ಅಲೆಯುವಂತಾಗಿದೆ. ಗಂಟೆಗಟ್ಟಲೆ ಕಚೇರಿಯಲ್ಲಿ ಬೀಡುಬಿಡುವಂತಾಗಿದೆ. ತಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡಿಕೊಳ್ಳುವಂತಾಗಿದೆ. ಈ ಕುರಿತಂತೆ ವ್ಯಾಪಕ ದೂರುಗಳು ಗ್ರಾಮಸ್ಥರಿಂದ ಕೇಳಿಬರುತ್ತಿದ್ದರೂ, ಸಂಬಂಧಿಸಿದ ಇಲಾಖೆಗಳು 'ಸರ್ವರ್ ಡೌನ್' ಕಾಟದ ಸಮಸ್ಯೆ ಪರಿಹಾರದತ್ತ ಗಂಭೀರ ಚಿತ್ತ ಹರಿಸಿಲ್ಲ.
ಇದರಿಂದ ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಮ್ಮರವಾಗಿ ಬೆಳೆಯಲಾರಂಭಿಸಿದೆ. ಕಾಲಮಿತಿಯಲ್ಲಿ ಕೆಲಸ ಕಾರ್ಯ ಮಾಡಿಸಿಕೊಳ್ಳಲು ಸಾಧ್ಯವಾಗದೆ, ಗ್ರಾಮಸ್ಥರು ಪರದಾಡುವಂತಾಗಿದೆ. ಅಭಿವೃದ್ದಿ ಯೋಜನೆಗಳ ಅನುಷ್ಠಾನದ ಮೇಲೂ ಪರಿಣಾಮ ಬೀರುವಂತಾಗಿದೆ ಎಂದು ನಾಗರೀಕರು ದೂರುತ್ತಾರೆ.
ಕೆಲ ಗ್ರಾ.ಪಂ. ಹಾಗೂ ನಾಡ ಕಚೇರಿ ಅಧಿಕಾರಿ-ಸಿಬ್ಬಂದಿಗಳು 'ಸರ್ವರ್ ಡೌನ್' ನೆಪ ಮುಂದಿಟ್ಟುಕೊಂಡು, ನಾಗರೀಕರಿಗೆ ಸಕಾಲದಲ್ಲಿ ಸೇವೆ ನೀಡದೆ ಸತಾಯಿಸುತ್ತಿರುವ ಗಂಭೀರ ಸ್ವರೂಪದ ದೂರುಗಳು ಕೂಡ ಕೇಳಿಬರುತ್ತಿದೆ. 'ಸರ್ವರ್ ಡೌನ್' ಆಗಿದೆ ಎಂದು ಹೇಳಿ ನಾಗರೀಕರನ್ನು ಸಾಗ ಹಾಕುತ್ತಿದ್ದಾರೆ. ತಮಗೆ ಬೇಕಾದವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಜೊತೆಗೆ ಹಣ ಮಾಡುವ ದಂಧೆಯಾಗಿ ಮಾಡಿಕೊಂಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸುತ್ತಾರೆ.
'ಸರ್ಕಾರಗಳು ಲಕ್ಷ ಲಕ್ಷ ರೂ. ವೆಚ್ಚ ಮಾಡಿ ಗ್ರಾ.ಪಂ. ಹಾಗೂ ನಾಡ ಕಚೇರಿಗಳಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಮತ್ತಿತರ ಉಪಕರಣಗಳನ್ನು ದೊರಕಿಸಿಕೊಟ್ಟಿದೆ. ಬ್ರ್ಯಾಡ್ಬ್ಯಾಂಡ್ ಅಂತರ್ಜಾಲ ಸೌಲಭ್ಯ ಕಲ್ಪಿಸಿದೆ. ವಿದ್ಯುತ್ ಕಡಿತಗೊಂಡ ವೇಳೆ ಕಂಪ್ಯೂಟರ್ ಗಳ ಬಳಕೆಗೆ ಬ್ಯಾಟರಿ ವ್ಯವಸ್ಥೆ ಮಾಡಿದೆ. ಈ ಮೂಲಕ ನಾಗರೀಕರಿಗೆ ಆನ್ಲೈನ್ ಆಧಾರಿತ ಸೇವೆಗಳು ಸುಲಭವಾಗಿ ದೊರಕುವ ವ್ಯವಸ್ಥೆ ಮಾಡಿದೆ. ಜೊತೆಗೆ ಗ್ರಾ.ಪಂ. ಕೆಲಸ ಕಾರ್ಯಗಳನ್ನು ಸುಲಭವಾಗಿಸಿದೆ. ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಕಾಮಗಾರಿಗಳ ಅನುಷ್ಠಾನಕ್ಕೂ ವೇಗ ಕಲ್ಪಿಸಿದೆ.
ಆದರೆ ಕೆಲವೆಡೆ ಅಂತರ್ಜಾಲದ ನ್ಯೂನ್ಯತೆಯಿಂದ ತೊಂದರೆ ಎದುರಿಸುವಂತಾಗಿದೆ. ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ. ಕೆಲವೊಮ್ಮೆ ಈ ಸಮಸ್ಯೆ ನೈಜವಾಗಿದ್ದರೆ, ಮತ್ತೆ ಕೆಲವೊಮ್ಮೆ ಕೃತಕವಾಗಿರುತ್ತದೆ. ಸಮಸ್ಯೆಯಿಲ್ಲದಿದ್ದರೂ ಕೆಲ ಅಧಿಕಾರಿ-ಸಿಬ್ಬಂದಿಗಳು 'ಸರ್ವರ್ ಡೌನ್' ಆಗಿದೆ ಎಂಬ ಕುಂಟು ನೆಪ ಹೇಳುತ್ತಿದ್ದಾರೆ.
ಇದು ಸುಳ್ಳೋ? ಸತ್ಯವೋ? ಎಂಬುವುದನ್ನು ಖಚಿತಪಡಿಸಿಕೊಳ್ಳಲು ನಾಗರೀಕರಿಗೆ ಆಗದಂತಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಸರ್ವರ್ ಡೌನ್ ಸಮಸ್ಯೆಯ ಕುಂಟು ನೆಪ ಹೇಳುವವರ ವಿರುದ್ದ ಕಠಿಣ ಕ್ರಮಜರುಗಿಸಬೇಕಾಗಿದೆ ಎಂದು ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮ ಪಂ. ಸದಸ್ಯ ದೂದ್ಯನಾಯ್ಕ್ ರವರು ಆಗ್ರಹಿಸುತ್ತಾರೆ.
'ಘಟ್ಟ ಪ್ರದೇಶ ವ್ಯಾಪ್ತಿ ಹಾಗೂ ಕುಗ್ರಾಮಗಳಲ್ಲಿ ಸಮರ್ಪಕವಾಗಿ ಅಂತರ್ಜಾಲ ಪೂರೈಕೆಯಾಗುವುದಿಲ್ಲ, ಸರ್ವರ್ ಡೌನ್ ಸಮಸ್ಯೆಯಿದೆ ಎಂದರೆ ಒಪ್ಪಿಕೊಳ್ಳಬಹುದು. ಆದರೆ ನಗರ-ಪಟ್ಟಣದಂಚಿನಲ್ಲಿರುವ ಗ್ರಾಮಗಳಲ್ಲಿನ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಸರ್ವರ್ ಡೌನ್ ಸಮಸ್ಯೆಯಿದೆ ಎಂದರೆ ಅನುಮಾನ ಮೂಡಿಸುತ್ತದೆ. ಇದೆಲ್ಲ ಏನೇ ಇರಲಿ. ನಾಗರೀಕರಿಗೆ ಕಾಲಮಿತಿಯಲ್ಲಿ ಸೌಲಭ್ಯಗಳು ದೊರಕಬೇಕು. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಗಮನಹರಿಸಬೇಕು ಎಂದು ಬಸವನಗಂಗೂರು ಗ್ರಾಮದ ಕೆಹೆಚ್ಬಿ ಬಡಾವಣೆ ನಿವಾಸಿ ನಾಗರತ್ನ ಎಂಬುವರು ಆಗ್ರಹಿಸುತ್ತಾರೆ.
ಒಟ್ಟಾರೆ 'ಸರ್ವರ್ ಡೌನ್' ಎಂಬ ಪದವು, ಇತ್ತೀಚೆಗೆ ಗ್ರಾಮಸ್ಥರಿಗೆ ಕಿರಿಕಿರಿಯಾಗಿ ಪರಿಣಮಿಸುತ್ತಿರುವುದಂತೂ ಸತ್ಯವಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಬೇಕು. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಬಹುತೇಕ ಗ್ರಾಮಸ್ಥರ ಆಗ್ರಹವಾಗಿದೆ.
ಕುಂಟು ನೆಪ ಹೇಳುತ್ತಾರೆ: ಕೋಟೆಗಂಗೂರು ಗ್ರಾ.ಪಂ. ಸದಸ್ಯ ದೂದ್ಯನಾಯ್ಕ್
ಕೆಲ ಗ್ರಾ.ಪಂ., ನಾಡ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳು, 'ಸರ್ವರ್ ಡೌನ್' ಆಗಿದೆ ಎಂಬ ಕುಂಟು ನೆಪ ಮುಂದೊಡ್ಡಿ ನಾಗರೀಕರ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿಕೊಡದೆ ಸತಾಯಿಸುತ್ತಾರೆ. ಇಂತಹ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕಾಗಿದೆ. ಆಗ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಎದುರಾಗುವ ಸರ್ವರ್ ಡೌನ್ ಕಾಟದಿಂದ ನಾಗರೀಕರಿಗೆ ಮುಕ್ತಿ ಸಿಗುತ್ತದೆ. ಇಲ್ಲದಿದ್ದರೆ ಇದು ನಿರಂತರ ಸಮಸ್ಯೆಯಾಗುತ್ತದೆ' ಎಂದು ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಸದಸ್ಯ ದೂದ್ಯನಾಯ್ಕ್ರವರು ತಿಳಿಸುತ್ತಾರೆ.
ವಿಪರೀತ ಮಟ್ಟಕ್ಕೆ ತಲುಪಿದೆ : ಕಡೇಕಲ್ಲು ಗ್ರಾ.ಪಂ. ಸದಸ್ಯ ಸಲೀಂಖಾನ್
ಗ್ರಾಮೀಣ ಭಾಗದ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಡೌನ್ ಕಾಟದ ಸಮಸ್ಯೆ ವಿಪರೀತ ಮಟ್ಟಕ್ಕೆ ತಲುಪಿದೆ. ಸಕಾಲದಲ್ಲಿ ಕೆಲಸಕಾರ್ಯಗಳು ಆಗುತ್ತಿಲ್ಲ. ಜನರಿಂದ ಚುನಾಯಿತರಾಗಿರುವ ನಾವು ಕೂಡ ಈ ವಿಷಯದಲ್ಲಿ ನಾಗರೀಕರಿಗೆ ಸಹಾಯ ಮಾಡದ ಸ್ಥಿತಿಯಲ್ಲಿದ್ದೇವೆ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೆಲವೊಮ್ಮೆ ಸರ್ವರ್ ಡೌನ್ ಸಮಸ್ಯೆ ನೈಜವೋ? ಅಥವಾ ಕೃತಕವೋ? ಎಂಬ ಅನುಮಾನ ಕೂಡ ವ್ಯಕ್ತವಾಗುತ್ತದೆ. ಈ ಬಗ್ಗೆ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಬೇಕು. ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು' ಎಂದು ಶಿವಮೊಗ್ಗ ತಾಲೂಕಿನ ಕಡೇಕಲ್ಲು ಗ್ರಾಮ ಪಂ. ಸದಸ್ಯ ಸಲೀಂಖಾನ್ರವರು ಆಗ್ರಹಿಸಿದ್ದಾರೆ.
ನಾಗರೀಕರ ಅಲೆದಾಟ ತಪ್ಪಿಸಿ : ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು
ಗ್ರಾಮೀಣ ಭಾಗದ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತ ಸರ್ವರ್ ಡೌನ್ ಸಮಸ್ಯೆ ಇದೆ. ಇದರಿಂದ ಹಲವು ಗ್ರಾಮಸ್ಥರಿಗೆ ಅಂತರ್ಜಾಲ ಸೇವೆಗಳು ಹೊರೆಯಾಗಿ ಪರಿಣಮಿಸಿದೆ. ಈ ಕಾರಣದಿಂದ ಗ್ರಾಮೀಣ ಭಾಗದ ಸರ್ಕಾರಿ ಕಚೇರಿಗಳಿಗೆ ಗುಣಮಟ್ಟದ ಅಂತರ್ಜಾಲ ಪೂರೈಕೆ ಮಾಡಬೇಕು. ವಿದ್ಯುತ್ ಪೂರೈಕೆ ಸ್ಥಗಿತಗೊಂಡ ವೇಳೆ ಕಂಪ್ಯೂಟರ್ ಗಳ ಕಾರ್ಯನಿರ್ವಹಣೆ ಮುಂದುವರಿಸಲು ಯುಪಿಎಸ್-ಬ್ಯಾಟರಿ ವ್ಯವಸ್ಥೆ ಮಾಡಬೇಕು. ಈ ಮೂಲಕ ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು' ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್ನ ಕಾಂಗ್ರೆಸ್ ಅಧ್ಯಕ್ಷ ಸಿ. ಹನುಮಂತುರವರು ಆಗ್ರಹಿಸುತ್ತಾರೆ.