varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಓದುಗ ಬೆಂಬಲಿತ ಪತ್ರಿಕೋದ್ಯಮಕ್ಕೆ ಮಾತ್ರ ಇನ್ನು ಭವಿಷ್ಯ: ಅಭಿನಂದನ್ ಸೇಖ್ರಿ

ವಾರ್ತಾ ಭಾರತಿ : 6 Dec, 2018
ಸಂದರ್ಶನ:ತಲ್ಹಾ ಸೈಯದ್

ವರದಿಗಾರ, ನಿರ್ದೇಶಕ, ನಿರ್ಮಾಪಕ, ಸೃಜನಶೀಲ ಬರಹಗಾರ ಅಭಿನಂದನ್ ಸೇಖ್ರಿ ಸದ್ಯ ಮಾಧ್ಯಮ ವಿಶ್ಲೇಷಣೆಗೆ ಖ್ಯಾತ ಜಾಲತಾಣ newslaundry.comನ ಸಹ ಸ್ಥಾಪಕ ಹಾಗೂ ಸಿಇಒ. ಓದುಗರ ಚಂದಾದ ಮೂಲಕವೇ ನಡೆಸುವುದು ಈ ಜಾಲತಾಣದ ವಿಶೇಷತೆ. ಭಾರೀ ಜನಪ್ರಿಯತೆ ಗಳಿಸಿದ್ದ ‘ದಿ ಗ್ರೇಟ್ ಇಂಡಿಯನ್ ತಮಾಷ’, ‘ಗುಸ್ತಾಖಿ ಮಾಫ್’ ಹಾಗೂ ‘ಹೈವೇ ಆನ್ ಮೈ ಪ್ಲೇಟ್’ ಟಿವಿ ಕಾರ್ಯಕ್ರಮಗಳ ಬರಹಗಾರ. ಖ್ಯಾತ ವಾಗ್ಮಿ ಹಾಗೂ ವಿವಿಧ ವಿಷಯಗಳಲ್ಲಿ ಟಿವಿ, ಜಾಲತಾಣಗಳಲ್ಲಿ ಆಸಕ್ತಿಕರವಾಗಿ ಚರ್ಚೆ ನಡೆಸಿ ಕೊಡುವ ನಿರೂಪಕ.

 ವಾರ್ತಾಭಾರತಿ: ಹಲವಾರು ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿ, ಇದೀಗ ‘ನ್ಯೂಸ್ ಲಾಂಡ್ರಿ’ ವೆಬ್‌ತಾಣದ ಸಹ ಸ್ಥಾಪಕ ಹಾಗೂ ಸಿಇಒ ಆಗಿ ನೀವು ದೇಶದ ಮುಖ್ಯವಾಹಿನಿಯ ಮಾಧ್ಯಮಗಳೊಳಗಿನ ಕೊಳಕನ್ನು ಬಯಲು ಮಾಡುತ್ತಿದ್ದೀರಿ. ಭಾರತೀಯ ಮಾಧ್ಯಮ ರಂಗದಲ್ಲಿ ಕಳೆದ ಕೆಲವು ದಶಕಗಳಲ್ಲಿ ನೀವು ಕಂಡ ಪ್ರಮುಖ ಬದಲಾವಣೆಗಳು, ಬೆಳವಣಿಗೆಗಳು ಯಾವುವು ?

ಅಭಿನಂದನ್ ಸೇಖ್ರಿ: ನ್ಯೂಸ್ ಲಾಂಡ್ರಿಯಲ್ಲಿ ಮಧು ಟ್ರೆಹಾನ್ ಪ್ರಧಾನ ಸಂಪಾದಕಿ. ನಾನು ಸಹ ಸ್ಥಾಪಕ ಹಾಗೂ ಸಿಇಒ. ನಾವು ಮಾಧ್ಯಮಗಳ ಕೊಳಕನ್ನು ಬಹಿರಂಗಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ನಾನು ಹೇಳುವುದಿಲ್ಲ. ಮಾಧ್ಯಮ ವಿಶ್ಲೇಷಣೆ ಹಾಗೂ ಸುದ್ದಿ ಮಾಧ್ಯಮಗಳ ಕುರಿತ ಸುದ್ದಿ ಮಾಡುವುದು ನ್ಯೂಸ್ ಲಾಂಡ್ರಿಯ ಕೆಲಸ. ನಾವು ನೋಡಿದಂತೆ ಮಾಧ್ಯಮ ಕ್ಷೇತ್ರದಲ್ಲಿ ಕೆಲವು ಕಡೆ ಅದರ ರಚನೆಯಲ್ಲೇ ಲೋಪವಿದೆ, ಇನ್ನು ಕೆಲವೆಡೆ ನೀತಿ ನಿರೂಪಣೆಯಲ್ಲಿ ಎಡವಿದ್ದರೆ, ಇನ್ನು ಕೆಲವೆಡೆ ಅನಾರೋಗ್ಯಕರ ಕಾರ್ಪೊರೇಟ್ ಆಡಳಿತದ ಸಮಸ್ಯೆಯಿದೆ ಮತ್ತು ಕೆಲವೆಡೆ ಒಳ್ಳೆಯ ಕೆಲಸ ನಡೆಯುತ್ತಿದೆ. ನಾವು ಮಾಧ್ಯಮಗಳ ಕೊಳಕು ಬಯಲು ಮಾಡುವ ಕೆಲಸವನ್ನೂ ಮಾಡುತ್ತೇವೆ. 1975ರ ಬಳಿಕ ಸುದ್ದಿ ರಂಗ ಬಹುದೂರ ಕ್ರಮಿಸಿದೆ. ಖಾಸಗಿ ಟಿವಿ ಚಾನೆಲ್‌ಗಳಿಗೆ ಅವಕಾಶವೇ ಇಲ್ಲದ ಆ ಕಾಲದಿಂದ ನೂರಾರು ಖಾಸಗಿ ಚಾನೆಲ್‌ಗಳಿರುವ ಕಾಲಕ್ಕೆ ನಾವು ತಲುಪಿದ್ದೇವೆ. ಈಗ ಸುದ್ದಿ ಕ್ಷೇತ್ರದಲ್ಲಿ ಬೊಬ್ಬೆ ಜೋರಾಗಿದೆ ಆದರೆ ಅದರ ಜೊತೆಗೆ ನಿರ್ಭಯವಾಗಿ ಸುದ್ದಿ ಮಾಡುವುದನ್ನೂ ನಾವು ನೋಡುತ್ತಿದ್ದೇವೆ. ವೀಕ್ಷಕರು ಹಾಗೂ ಜಾಹೀರಾತುದಾರರ ಸಂಖ್ಯೆ ಮಾರುಕಟ್ಟೆಯಲ್ಲಿ ತುಂಬಾ ದೊಡ್ಡದಾಗಿದೆ. ಮೊದಲು ತಮ್ಮ್ಮೆಳಗೇ ತಾವು ಎಂಬಂತಿದ್ದ ಸುದ್ದಿಗಾರರ ಗಣ್ಯರ ಗುಂಪು ಈಗ ಹಿಗ್ಗಿ ಎಲ್ಲ ವರ್ಗಗಳ, ಪ್ರದೇಶಗಳ ಪ್ರಾತಿನಿಧ್ಯ ಹಾಗೂ ವೈವಿಧ್ಯ ಈ ರಂಗದಲ್ಲಿ ಎದ್ದು ಕಾಣುತ್ತಿದೆ. ಇದು ಇನ್ನಷ್ಟು ಉತ್ತಮವಾಗಬೇಕಾಗಿದೆ. ಆದರೂ ಒಳ್ಳೆಯ ಆರಂಭವಂತೂ ಆಗಿದೆ. ಸುದ್ದಿಯನ್ನು ನಿಯಂತ್ರಿಸುವ ಸರಕಾರದ ಬಯಕೆ ಈಗಲೂ ಮೊದಲಿನಂತೆಯೇ ಇದೆ ಆದರೆ ಹಾಗೆ ನಿಯಂತ್ರಿಸುವ ಅದರ ಸಾಮರ್ಥ್ಯ ಮಾತ್ರ ಈಗ ಬಹಳ ಕಡಿಮೆಯಾಗಿದೆ. ಸುದ್ದಿ ಸಂಸ್ಥೆಗಳಿಂದ ಸುದ್ದಿಯ ಗ್ರಾಹಕರ ನಿರೀಕ್ಷೆ 1975ಕ್ಕೆ ಹೋಲಿಸಿದರೆ ಈಗ ಬಹಳಷ್ಟು ಹೆಚ್ಚಿದೆ. ಇದು ಬಹುಮುಖ್ಯ ಬದಲಾವಣೆ. 

ವಾರ್ತಾಭಾರತಿ: ಇದೇ ರೀತಿ ಮುಂದುವರಿದರೆ ಮುಂದಿನ ಒಂದೆರಡು ದಶಕಗಳಲ್ಲಿ ಭಾರತೀಯ ಮಾಧ್ಯಮ ರಂಗ ನಿಮ್ಮ ಪ್ರಕಾರ ಎಲ್ಲಿಗೆ ತಲುಪಲಿದೆ? ಮತ್ತು ಅದು ದೇಶದ ಒಟ್ಟಾರೆ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪ್ರಭಾವ, ಪರಿಣಾಮ ಬೀರಲಿದೆ?

ಅಭಿನಂದನ್ ಸೇಖ್ರಿ: ಹತ್ತಿಪ್ಪತ್ತು ವರ್ಷಗಳು ಇನ್ನೂ ಬಹುದೂರವಿದೆ. ಸದ್ಯದ ಮಟ್ಟಿಗೆ ತಂತ್ರಜ್ಞಾನ, ಮಾಧ್ಯಮಗಳ ಬಳಕೆ ಹಾಗೂ ಮಾಧ್ಯಮಗಳು ಸುದ್ದಿ ತಲುಪಿಸುತ್ತಿರುವ ಮಾರ್ಗಗಳು ಬದಲಾಗುತ್ತಿರುವ ವೇಗ ಗಮನಿಸಿದರೆ ಇದು ಎಲ್ಲಿಗೆ ತಲುಪಬಹುದು ಎಂದು ಈಗಲೇ ಊಹಿಸುವುದು ಕಷ್ಟ. ಕೆಲವು ನಿರ್ದಿಷ್ಟ ವಿಷಯಗಳಲ್ಲಿ ನಾನು ಊಹಿಸುವ ದುಸ್ಸಾಹಸ ಮಾಡುವುದಾದರೆ - ಚಂದಾದಾರಿಕೆ ಮೂಲಕ ಸುದ್ದಿ ಓದುವವರ ಸಂಖ್ಯೆ ಹೆಚ್ಚಬಹುದು, ವಿವಿಧ ಸುದ್ದಿ ತಾಣಗಳು ಜಾಹೀರಾತಿಗೆ ನೀಡುವ ಪ್ರಾಮುಖ್ಯತೆ ಕುಗ್ಗಬಹುದು, ಆಡಿಯೋ ಸುದ್ದಿಯ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಬಹುದು. ಇವುಗಳ ಜೊತೆಗೆ ಸುಳ್ಳು ಸುದ್ದಿಗಳನ್ನು ನಿಭಾಯಿಸುವುದು ಸುದ್ದಿ ಮಾಧ್ಯಮಗಳ ಪಾಲಿನ ಬಹುದೊಡ್ಡ ಸವಾಲಾಗಬಹುದು.

ವಾರ್ತಾಭಾರತಿ: ದೇಶದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರನ್ನು ತಲುಪುತ್ತಿರುವ ಹಿಂದಿ, ಇಂಗ್ಲಿಷ್ ಟಿವಿ ಚಾನೆಲ್‌ಗಳಿಗೆ ವೆಬ್ ಸೈಟ್ ಗಳು, ಯುಟೂಬ್ ಚಾನೆಲ್‌ಗಳು ಪರ್ಯಾಯವಾಗಲು ಸಾಧ್ಯವೇ?

ಅಭಿನಂದನ್ ಸೇಖ್ರಿ: ನೋಡಿ. ಯುಟೂಬ್ ಮತ್ತು ಇತರ ಆನ್‌ಲೈನ್ ಸುದ್ದಿ ತಾಣಗಳು ಖಂಡಿತ ಪ್ರಾಥಮಿಕ ಸುದ್ದಿ ಮೂಲಗಳಾಗಿ ಬೆಳೆಯಲಿವೆ. ಆದರೆ ಅವುಗಳು ಹಿಂದಿ, ಇಂಗ್ಲಿಷ್ ನ್ಯೂಸ್ ಚಾನೆಲ್‌ಗಳನ್ನು ಮೀರಿ ಬೆಳೆಯುತ್ತವೆ ಎಂದು ಹೇಳಲಾಗದು. ಈ ಚಾನೆಲ್‌ಗಳು ಈಗಿರುವ ಸ್ವರೂಪದಿಂದ ಆನ್‌ಲೈನ್‌ಗೆ ಬರಲಿವೆ. ಆದರೆ ಇದಕ್ಕೆ ಸರಕಾರದ ನೀತಿ ನಿರೂಪಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯ. ಏಕೆಂದರೆ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೆ ಇರುವ ಹಲವು ನೀತಿ, ನಿಯಮಗಳು ಆನ್‌ಲೈನ್ ಜಗತ್ತಿಗೆ ಅನ್ವಯವೇ ಆಗುವುದಿಲ್ಲ. ಅವುಗಳು ಅಲ್ಲಿ ಅಪ್ರಸ್ತುತ. ಈ ವಿಚಾರ ಹೇಗೆ ಬದಲಾಗಲಿದೆ ಎಂಬುದು ಮುಂದೆ ಸುದ್ದಿ ಕ್ಷೇತ್ರ ಹೇಗೆ ಬದಲಾಗಲಿದೆ ಎಂಬುದನ್ನು ನಿರ್ಧರಿಸಲಿದೆ.

ವಾರ್ತಾಭಾರತಿ: ನೀವು ಓದುಗರ ಬೆಂಬಲ ನೆಚ್ಚಿಕೊಂಡು ವೆಬ್ ಸೈಟ್ ನಡೆಸುತ್ತಿದ್ದೀರಿ. ಆಗಾಗ ಓದುಗರಲ್ಲಿ ಈ ಬಗ್ಗೆ ವಿನಂತಿ ಮಾಡಿ ನೆನಪಿಸುತ್ತೀರಿ. ಆದರೆ ಭಾರತೀಯ ಸ್ಥಿತಿಗತಿ, ಜನರ ಮನಸ್ಥಿತಿ ನೋಡಿದರೆ ಓದುಗರ ಬೆಂಬಲದಿಂದಲೇ ಮಾಧ್ಯಮಗಳು ನಡೆಯಲು ಸಾಧ್ಯ ಎಂದು ನಿಮಗೆ ವಿಶ್ವಾಸ ಇದೆಯೇ?

ಅಭಿನಂದನ್ ಸೇಖ್ರಿ: ಯಸ್. ನಾನು ಜನರ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದೇನೆ. ಭಾರತಕ್ಕೆ ಹೋಲಿಸಿದರೆ ಬೇರೆ ಹಲವು ( ಪಶ್ಚಿಮದ) ದೇಶಗಳಲ್ಲಿ ಜನರು ಸುದ್ದಿಗಾಗಿ ಹಣ ಪಾವತಿಸಲು ಹೆಚ್ಚು ಉತ್ಸಾಹ ತೋರಿಸುತ್ತಾರೆ. ಈ ದೃಷ್ಟಿಯಲ್ಲಿ ನೋಡಿದರೆ ನಮಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನನಗೆ ಖುಷಿಯಾಗಿದೆ. ಹಾಗಾಗಿ ಓದುಗ ಬೆಂಬಲಿತ ಪತ್ರಿಕೋದ್ಯಮಕ್ಕೆ ಇಲ್ಲಿ ಭವಿಷ್ಯವಿದೆ ಎಂದು ನನಗನಿಸುತ್ತದೆ. ನಿಜವಾಗಿ ಹೇಳಬೇಕೆಂದರೆ ಅದಕ್ಕೆ ಮಾತ್ರ ಇನ್ನು ಭವಿಷ್ಯವಿದೆ.

ವಾರ್ತಾಭಾರತಿ: ಈಗ ಸರಕಾರದ ಲೋಪಗಳನ್ನು, ದೊಡ್ಡ ವೈಫಲ್ಯಗಳನ್ನು ಎತ್ತಿ ಹಿಡಿದು ತೋರಿಸುವ ಕೆಲಸ ಮಾಡುತ್ತಿರುವುದು ಕೆಲವು ಬೆರಳೆಣಿಕೆಯ ವೆಬ್‌ಸೈಟ್‌ಗಳು. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕೆಲಸ ಮಾಡುತ್ತಿರುವವರು ಇಲ್ಲವೇ ಇಲ್ಲದಂತಹ ಪರಿಸ್ಥಿತಿ ಇದೆ. ಆದರೆ ಈ ದೊಡ್ಡ ಸ್ಟೋರಿಗಳು ಜನರ ಮೇಲೆ ಯಾವುದೇ ಪ್ರಭಾವ ಬೀರಿದಂತೆ ನಿಮಗೆ ಕಾಣುತ್ತಿದೆಯೇ ?

ಅಭಿನಂದನ್ ಸೇಖ್ರಿ: ವೆಬ್‌ಸೈಟ್‌ಗಳ ದೊಡ್ಡ ಸ್ಟೋರಿಗಳು ಜನರ ಮೇಲೆ ಎಷ್ಟು ಪರಿಣಾಮ ಬೀರುತ್ತಿವೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ನನಗೂ ಇಲ್ಲ.

ವಾರ್ತಾಭಾರತಿ: ಪ್ರಭುತ್ವದ ವಿರುದ್ಧದ ಟೀಕೆ ಹಾಗೂ ಅವರ ಹುಳುಕು ಎತ್ತಿ ತೋರಿಸುವ ಸ್ಟೋರಿಗಳಿಗಾಗಿ ನಿಮ್ಮ ಸಂಸ್ಥೆ ಈವರೆಗೆ ಯಾವ ರೀತಿಯಲ್ಲಿ ಬೆಲೆ ತೆತ್ತಿದೆ?

 ಅಭಿನಂದನ್ ಸೇಖ್ರಿ: ಸುದ್ದಿ ಮಾಧ್ಯಮದಲ್ಲಿರುವ ಹಲವು ವೃತ್ತಿಪರರು ಇತ್ತೀಚೆಗೆ ಹಾಗೂ ಈ ಹಿಂದೆ ಎದುರಿಸಿದ ಜೀವನವನ್ನೇ ಬದಲಾಯಿಸಿಬಿಡುವಂತಹ ಪರಿಣಾಮಗಳಿಗೆ ಹೋಲಿಸಿದರೆ ನಾವು ಈವರೆಗೆ ಅಂತಹ ದೊಡ್ಡ ಬೆಲೆ ತೆತ್ತಿಲ್ಲ. ಇತ್ತೀಚೆಗೆ ನಾವು ಮೀಡಿಯಾ ರಂಬಲ್ ಎಂಬ ಕಾರ್ಯಕ್ರಮ ಆಯೋಜಿಸಿದ್ದೆವು. ಅಲ್ಲಿ ನಾನು ಷಹಜಹಾನ್ ಪುರ (ಉತ್ತರ ಪ್ರದೇಶ)ದ ಪತ್ರಕರ್ತನೊಬ್ಬನನ್ನು ಭೇಟಿಯಾದೆ. ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಸತ್ಯವನ್ನು ಬಹಿರಂಗಪಡಿಸಿದ್ದಕ್ಕೆ ಜೀವವನ್ನೇ ತೆತ್ತ ಪತ್ರಕರ್ತರ ಮನೆಯವರನ್ನು ನಾನು ಭೇಟಿಯಾಗಿದ್ದೇನೆ. ಸತ್ಯ ಹೇಳಿದ್ದಕ್ಕೆ ದಿವಾಳಿಯಾದವರನ್ನು, ಕೆಲಸ ಕಳಕೊಂಡವರನ್ನು, ಜೈಲಿಗೆ ಹೋದವರನ್ನು ನಾನು ನೋಡಿದ್ದೇನೆ. ಇವುಗಳನ್ನೆಲ್ಲ ನೋಡಿದರೆ ನಾನು ಈವರೆಗೆ ಯಾವುದೇ ದೊಡ್ಡ ಬೆಲೆ ತೆತ್ತಿಲ್ಲ. ಹಾಂ, ಇದರಿಂದಾಗಿ ಕೆಲವು ಮಿತ್ರರನ್ನು ಕಳಕೊಂಡಿದ್ದೇನೆ. ಆದರೆ ಅದು ದೊಡ್ಡ ಬೆಲೆ ತೆತ್ತ ಹಾಗಲ್ಲ ಎಂದುಕೊಂಡಿದ್ದೇನೆ.

ವಾರ್ತಾಭಾರತಿ: ಭಾರತೀಯ ಮಾಧ್ಯಮಗಳು ಭ್ರಷ್ಟವಾಗಿರುವುದು ಮಾತ್ರವಲ್ಲ, ಅವುಗಳಲ್ಲಿ ಸಮಾಜದ ಎಲ್ಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವೂ ಇಲ್ಲ ಎಂಬ ಗಂಭೀರ ದೂರು ಇದೆ. ಇದು ಸರಿಯಾಗುವುದು ಯಾವಾಗ ಮತ್ತು ಹೇಗೆ?

 ಅಭಿನಂದನ್ ಸೇಖ್ರಿ: ಇದು ಈವರೆಗಿನ ಸ್ಥಾಪಿತ ಸುದ್ದಿ ಸಂಸ್ಥೆಗಳ ಕುರಿತ ದೂರು ಮಾತ್ರವಲ್ಲ. ಈ ದೂರು ಈಗಿನ ಹೆಚ್ಚಿನ ಹೊಸ ಮಾಧ್ಯಮ ಸಂಸ್ಥೆಗಳ ಮೇಲೂ ಇದೆ. ನಮ್ಮ ಸುದ್ದಿಮನೆಗಳ ಸಿಬ್ಬಂದಿಯ ಪ್ರಾತಿನಿಧ್ಯದ ಕುರಿತ ಮಾಹಿತಿಯನ್ನು ಮತ್ತು ನಮ್ಮ ರಾಷ್ಟ್ರೀಯ ಮಟ್ಟದ ಪತ್ರಿಕೆಗಳ ಸಂಪಾದಕೀಯ ಪುಟಗಳಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಎಷ್ಟು ಪ್ರಾತಿನಿಧ್ಯ ಸಿಗುತ್ತಿದೆ ಎಂಬುದನ್ನು ಬಹಿರಂಗಪಡಿಸುವುದು ಈ ಸಮಸ್ಯೆಯನ್ನು ಎದುರಿಸಲು ಇರುವ ಮೊದಲ ಹೆಜ್ಜೆಯಾಗಬೇಕು. ಈ ಕಟು ಸತ್ಯ ಎದುರಿಗೆ ಬಂದು ತಮ್ಮನ್ನು ದುರುಗುಟ್ಟಿ ನೋಡಿದರೆ ಸಂಪಾದಕರುಗಳು ನಾಚಿಕೆಯಿಂದ ತಮ್ಮ ಸುದ್ದಿಮನೆಗಳಲ್ಲಿ ಎಲ್ಲ ವರ್ಗಗಳಿಗೆ ಹಾಗೂ ತಮ್ಮ ಪತ್ರಿಕೆಯ ಪುಟಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತ್ತಾರೆ.

ವಾರ್ತಾಭಾರತಿ: ಮಾಧ್ಯಮಗಳೇ ದಾರಿ ತಪ್ಪಿ ನಡೆಯುವುದನ್ನು ನೋಡುತ್ತಿರುವ ಜನರಿಗೆ ಉಳಿದಿರುವ ಆಯ್ಕೆಗಳೇನು? ನಿಮ್ಮ ಪ್ರಕಾರ ಮಾಧ್ಯಮಗಳನ್ನು ಸರಿದಾರಿಯಲ್ಲಿ ಉಳಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು ?

ಅಭಿನಂದನ್ ಸೇಖ್ರಿ: ಈ ವಿಷಯದಲ್ಲಿ ಇಡೀ ಮಾಧ್ಯಮ ರಂಗವನ್ನು ಒಂದು ಶಿಲೆಯಂತೆ ನೋಡಲಾಗದು. ಇಲ್ಲಿ ಅತ್ಯುತ್ತಮದಿಂದ ಹಿಡಿದು ಅತ್ಯಂತ ಕೆಟ್ಟ ಮಾಧ್ಯಮ ಸಂಸ್ಥೆಗಳಿವೆ. ಇವೆರಡರ ನಡುವೆ ಇನ್ನೂ ಹಲವಾರು ರೀತಿಯ ಮಾಧ್ಯಮ ಸಂಸ್ಥೆಗಳಿವೆ. ಇವೆಲ್ಲವನ್ನೂ ಕೆಟ್ಟವು ಎಂದು ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ. ಪತ್ರಕರ್ತರು ಹಾಗೂ ವರದಿಗಾರರ ವಿಷಯದಲ್ಲೂ ಹಾಗೇನೆ. ಇನ್ನು ಓದುಗರು ಏನು ಮಾಡಬೇಕೆಂಬ ಪ್ರಶ್ನೆ. ಅವರು ತಾವು ಓದುವ, ನೋಡುವ, ಕೇಳುವ ಸುದ್ದಿಗೆ ಹಣ ನೀಡಲು ಪ್ರಾರಂಭಿಸಲು ಕಲಿಯಬೇಕು. ಏಕೆಂದರೆ ಎಲ್ಲಿಯವರೆಗೆ ಓದುಗರಿಗೆ ನೀಡುವ ಸುದ್ದಿಯ ಖರ್ಚನ್ನು ಜಾಹೀರಾತಿನ ದುಡ್ಡಿನಿಂದ ಮಾಧ್ಯಮ ಸಂಸ್ಥೆಗಳು ಭರಿಸುತ್ತವೆಯೋ ಅಲ್ಲಿಯವರೆಗೆ ಸುದ್ದಿ ಓದುಗರ ಪರವಾಗಿ ಇರಬೇಕೆಂದು ಬಯಸಲು ಸಾಧ್ಯವಿಲ್ಲ. ಇದು ಬಹಳ ಸರಳ. ಜಾಹೀರಾತುದಾರ ಹಣ ಪಾವತಿಸುವಾಗ ಸುದ್ದಿ ಅವನ ಪರವಾಗಿರುತ್ತದೆ, ಓದುಗ ಹಣ ಪಾವತಿಸಲು ಪ್ರಾರಂಭಿಸಿದರೆ ಅದು ಅವನ ಪರವಾಗಿ ಬರುತ್ತದೆ. ಸುದ್ದಿ ಜನರ ಪರವಾಗಿರಬೇಕು ಎಂದು ಅವರು ಬಯಸಿದರೆ ಅವರು ಅದಕ್ಕೆ ದುಡ್ಡು ನೀಡಲು ಸಿದ್ಧವಿರಬೇಕು. ಇದು ಎಲ್ಲಿಯವರೆಗೆ ಆಗುವುದಿಲ್ಲವೋ ಅಲ್ಲಿಯವರೆಗೆ ಸರಕಾರಿ ಮತ್ತು ಕಾರ್ಪೊರೇಟ್ ಜಾಹೀರಾತುಗಳು ಸುದ್ದಿಯ ರೂಪವನ್ನು ನಿರ್ಧರಿಸುತ್ತವೆ.

ವಾರ್ತಾಭಾರತಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳು ಯಾವ ರೀತಿಯ ಪಾತ್ರ ನಿರ್ವಹಿಸಲಿವೆ?

ಅಭಿನಂದನ್ ಸೇಖ್ರಿ: ಮಾಧ್ಯಮಗಳು ಯಾವತ್ತೂ ಬಹುಮುಖ್ಯ ಪಾತ್ರ ವಹಿಸುತ್ತಾ ಬಂದಿವೆ. ಮುಂಬರುವ ಚುನಾವಣೆಯಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಏಕೆಂದರೆ ಸುಳ್ಳು ಸುದ್ದಿ ಬಹುದೊಡ್ಡ ರೂಪ ತಾಳಿರುವುದರಿಂದ ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಗಳು ಸುದ್ದಿಯ ವಿಶ್ವಾಸಾರ್ಹತೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ.

ವಾರ್ತಾಭಾರತಿ: ಸ್ವತಂತ್ರ ಮಾಧ್ಯಮಗಳಿಗೆ ಕಷ್ಟಕಾಲದಲ್ಲಿ ವಾರ್ತಾಭಾರತಿಯಂತಹ ಮೌಲ್ಯಾಧಾರಿತ ಪತ್ರಿಕೆ ಯಶಸ್ವಿ 16ನೇ ವರ್ಷಕ್ಕೆ ಕಾಲಿಟ್ಟಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಮತ್ತು ಈ ಸಂದರ್ಭದಲ್ಲಿ ನೀವು ನೀಡುವ ಸಂದೇಶವೇನು?

ಅಭಿನಂದನ್ ಸೇಖ್ರಿ: ಜಗತ್ತನ್ನು ಬದಲಾಯಿಸುವ ಸಂಕಲ್ಪ ಇದ್ದರೆ ಮಾತ್ರ ಸುದ್ದಿ ಕ್ಷೇತ್ರದಲ್ಲಿರಿ. ಬೇರೆ ಯಾವುದೇ ಉದ್ದೇಶ ಇದ್ದರೆ ಬೇರೆ ವೃತ್ತಿ ಆಯ್ದುಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)