varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಕೆಂಡವ ನುಂಗಿ ಬೂದಿಯಾಗಲೊಲ್ಲದವನ ಕತೆ...

ಮಿಷ್ಕಿನ್

ವಾರ್ತಾ ಭಾರತಿ : 7 Dec, 2018
ಕೆ.ಎಲ್.ಚಂದ್ರಶೇಖರ್ ಐಜೂರ್

ಕೆ.ಎಲ್.ಚಂದ್ರಶೇಖರ್ ಐಜೂರ್

2007-08ರ ಅವಧಿಯಲ್ಲಿ ಪ್ರಕಟಗೊಂಡ ಕನ್ನಡ ಟೈಮ್ಸ್ ವಾರಪತ್ರಿಕೆಯ ಸಂಪಾದಕ. ಕ್ರಿಮಿನಲ್ ಕಾನೂನು, ಕ್ರಿಮಿನಾಲಜಿ, ರಾಜ್ಯಶಾಸ್ತ್ರ, ಕನ್ನಡ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಐಜೂರ್ ಈಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ 1989ರ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯಗಳ ತಡೆ) ಕಾಯ್ದೆಯ ಕುರಿತ ಪಿಎಚ್.ಡಿ. ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ. ಸಮಾಜ, ಸಾಹಿತ್ಯ, ಸಿನೆಮಾ ಮತ್ತು ಕಾನೂನು ಆಸಕ್ತ ಕ್ಷೇತ್ರಗಳು. ಅದರಲ್ಲೂ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸಿನೆಮಾಗಳ ಕಡುಮೋಹಿ; ಆ ಕುರಿತು ಬರೆಯುವುದು, ಮಾತಿಗಿಳಿಯುವುದು ಗೀಳಿನಂತೆ ಅಂಟಿಕೊಂಡಿದೆ. ಈಗ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾ ಅಲ್ಲೇ ನೆಲೆಗೊಂಡಿದ್ದಾರೆ.

ಮೊದಲ ಮಾತು...

ಹದಿನೈದು ವರ್ಷಗಳ ಹಿಂದೆ ಟಿವಿಯಲ್ಲೊಂದು ಕಾರ್ಯಕ್ರಮ ನೋಡಿದ್ದೆ. ಈಗದರ ಹೆಸರನ್ನು ಮರೆತಿರುವೆ. ಆಕಸ್ಮಿಕವಾಗಿ ಕಾಣೆಯಾದ ತಮ್ಮ ಮಗಳನ್ನು ನೆನೆದು ಮುಪ್ಪಿನ ಹೆತ್ತವರು ಒತ್ತರಿಸಿಕೊಂಡು ಬರುವ ಅಳುವನ್ನು, ದುಃಖವನ್ನು ಯಾರೊಂದಿಗಾದರೂ ಹೇಳಿಕೊಳ್ಳಲೇಬೇಕೆಂಬ ಒತ್ತಡಕ್ಕಿ ಸಿಕ್ಕಿ ರೋದಿಸುತ್ತಿದ್ದ ಅತ್ಯಂತ ಕರುಣಾಜನಕ ಕಾರ್ಯಕ್ರಮವದು. ಎಪ್ಪತ್ತು ದಾಟಿದ ಆ ಕಾಣೆಯಾದ ಮಗಳ ತಂದೆ ಯಾತನೆಯ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮಾತನಾಡುತ್ತಿದ್ದದ್ದು ಎಂಥವರನ್ನು ಕಲಕುವಂತಿತ್ತು. ‘‘ಅದ್ಯಾವ ಕೆಟ್ಟ ಘಳಿಗೆಯೋ ಏನೋ, ಎರಡು ವರ್ಷಗಳ ಹಿಂದೆ ನನ್ನ ಮಗಳು ಮನೆಯಲ್ಲಿ ತನ್ನ ತಾಯಿಯೊಂದಿಗೆ ಸಣ್ಣದೊಂದು ಜಗಳ ಮಾಡಿಕೊಂಡು ತನ್ನ ಗೆಳತಿಯೊಂದಿಗೆ ಮನೆಬಿಟ್ಟು ಹೋದವಳು ಇನ್ನೂ ಮನೆಗೆ ಹಿಂದಿರುಗಿಲ್ಲ. ಅವಳನ್ನು ಹುಡುಕದ ಊರಿಲ್ಲ, ಜಗತ್ತಿಲ್ಲ. ನನ್ನ ಇಡೀ ಪೆನ್ಶನ್ ದುಡ್ಡನ್ನು ನನ್ನ ಮಗಳ ಹುಡುಕಾಟಕ್ಕೆ ಸುರಿದಿದ್ದೇನೆ; ಅವಳು ಮಾತ್ರ ಸಿಕ್ಕಿಲ್ಲ. ಇದೇ ಕೊರಗಲ್ಲಿ ಹಾಸಿಗೆ ಹಿಡಿದಿರುವ ಹೆಂಡತಿ ತನ್ನ ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ. ಯಾರೋ ಹೇಳಿದರು ನಿನ್ನ ಮಗಳು ಬಹುಶಃ ಬಾಂಬೆ ರೆಡ್‌ಲೈಟ್ ಏರಿಯಾದಲ್ಲಿರಬಹುದು ಅಂಥ. ನಾನು ಸ್ವಲ್ಪಕೂಡ ತಡಮಾಡದೆ ಬಾಂಬೆಯ ಕಾಮಾಟಿಪುರ, ಬುಧವಾರಪೇಟೆಗಳಲ್ಲಿ ತಿಂಗಳುಗಟ್ಟಲೇ ಹುಡುಕಿದೆ, ಆದರೆ, ಅಲ್ಲೆಲ್ಲೂ ನನ್ನ ಮಗಳು ಸಿಗಲಿಲ್ಲ. ಅವಳು ಎಲ್ಲಾದರೂ ಸೂಳೆಮನೆಯಲ್ಲಿ ವೇಶ್ಯೆಯಾಗಿದ್ದರೂ ಪರವಾಗಿಲ್ಲ ಸಾಯುವ ಮುನ್ನ ಅವಳನ್ನೊಂದು ಸಲ ನೋಡಬೇಕು. ಅವಳು ಎಲ್ಲಾದರೂ ಇರಲಿ, ಬದುಕಿದ್ದೀನಿ ಅಂಥ ಒಂದೇ ಒಂದು ಮಾತು ಹೇಳಿದರೂ ಸಾಕು, ನಾವಿಬ್ಬರು ನೆಮ್ಮದಿಯಾಗಿ ಪ್ರಾಣಬಿಡ್ತೀವಿ...’’ ಎಂದು ಬಿಕ್ಕುತ್ತಲೇ ತನ್ನ ಮಗಳನ್ನು ಹೇಗಾದರೂ ಮಾಡಿ ಹುಡುಕಿಕೊಡುವಂತೆ ಆ ಟಿ.ವಿ. ಚಾನೆಲ್‌ನ ವರದಿಗಾರನ ಬಳಿ ಆ ತಂದೆ ಪರಿಪರಿಯಾಗಿ ಮಗಳ ಫೋಟೊ ತೋರಿಸುತ್ತಾ ಅಂಗಲಾಚಿ ಕೇಳಿಕೊಳ್ಳುತ್ತಿದ್ದ. ಮಗಳನ್ನು ಕಳೆದುಕೊಂಡ ಆ ತಂದೆಯ ಅಸಹಾಯಕ ಚಿತ್ರ ಇನ್ನೂ ಯಾಕೋ ನನ್ನ ಕಣ್ಣಲ್ಲಿ ಉಳಿದುಬಿಟ್ಟಿದೆ.

ಇದಾದ ಮೇಲೆ ನನಗೆ ಗೌರಿ ಲಂಕೇಶರು ರೂಪಿಸುತ್ತಿದ್ದ ‘ಲಂಕೇಶ್’ ಪತ್ರಿಕೆಯಲ್ಲಿ ಹಿರಿಯ ಲೇಖಕಿ ಸಾರಾ ಅಬೂಬಕರ್ ಅವರು ಕೇರಳದ ಪ್ರೊ.ಈಚರ್ ವಾರಿಯರ್ ಅವರ ಅತ್ಮಕಥನ ‘ತುರ್ತುಪರಿಸ್ಥಿತಿಯ ಕರಾಳ ಮುಖ’ ಎಂಬ ಹೆಸರಲ್ಲಿ ಒಂದಷ್ಟು ವಾರಗಳ ಕಾಲ ಅಂಕಣದ ರೂಪದಲ್ಲಿ ಬರೆದರು. ಇದೂ ಅಷ್ಟೇ, ಮಗನನ್ನು ಕಳೆದುಕೊಂಡ ತಂದೆಯ ಕತೆಯಾಗಿತ್ತು. ತುರ್ತುಪರಿಸ್ಥಿತಿಯ ಕ್ರೂರ ಮುಖವೊಂದನ್ನು ಈಚರ್ ವಾರಿಯರ್ ತಮ್ಮ ದುಃಖವನ್ನು ಅದುಮಿಟ್ಟುಕೊಂಡು ಅತ್ಯಂತ ದಗ್ಧ ದನಿಯಲ್ಲಿ ಈ ಕೃತಿಯುದ್ದಕ್ಕೂ ಹೇಳಿಕೊಂಡಿದ್ದಾರೆ. ತಮ್ಮ ಮಗ ರಾಜನ್‌ನನ್ನು ಪೊಲೀಸರು ಬಂಧಿಸಿ ಬರ್ಬರ ಹಿಂಸೆ ಕೊಟ್ಟು ಕೊಂದಿದ್ದಾರೆನ್ನುವ ಯಾವ ಮಾಹಿತಿಯೂ ಇಲ್ಲದ ತಂದೆ ಈಚರ್ ವಾರಿಯರ್ ಪ್ರತಿರಾತ್ರಿ ತಮ್ಮ ಹೆಂಡತಿಗೆ ‘‘ಮಗ ಯಾವ ಹೊತ್ತಿನಲ್ಲಿ ಬೇಕಾದರೂ ಮನೆಗೆ ಬರಬಹುದು. ಆತ ಗೆಳೆಯರೊಂದಿಗೆ ಇಲ್ಲೇ ಎಲ್ಲೋ ಹೋಗಿರಬಹುದು. ಅವನು ಸರಿರಾತ್ರಿಯಲ್ಲಿ ಬಂದು ಕದ ಬಡಿಯಬಹುದು. ಯಾವ ಕಾರಣಕ್ಕೂ ಅವನ ಪಾಲಿನ ಅಡುಗೆ ಮಾಡುವುದನ್ನು ಮಾತ್ರ ನಿಲ್ಲಿಸಬೇಡ. ಅವನು ಹಸಿವು ತಡೆದುಕೊಳ್ಳಲಾರ ಎಂದು ನಿನಗೆ ಗೊತ್ತು. ಅವನ ಪಾಲಿನ ಊಟ ಸದಾ ಮೇಜಿನ ಮೇಲಿರಲಿ. ಅವನು ಹಸಿವು ತಡೆಯಲಾರ...’’ ತಮ್ಮ ಮಗನ ಸಾವಿನ ಅರಿವಿಲ್ಲದ ಈಚರ್ ಬರೆಯುತ್ತಲೇ ಹೋಗುತ್ತಾರೆ.

ಈಚರ್ ವಾರಿಯರ್ ಅವರ ಮಗನನ್ನು ಕೇರಳದ ಪೊಲೀಸರು ಚಿತ್ರಹಿಂಸೆ ಕೊಟ್ಟ ಕೊಂದು, ಕೊಂದಾದ ಮೇಲೆ ಆತನ ಛಿದ್ರಗೊಂಡ ದೇಹವನ್ನು ಹಂದಿಗಳಿಗೆ ಆಹಾರವಾಗಿಸಿದ್ದರು.

ಈ ಎರಡೂ ಹೃದಯ ಛೇದಕ ಘಟನೆಗಳು ನನ್ನನ್ನು ಕರೆದೊಯ್ದು ನಿಲ್ಲಿಸಿದ್ದು ದೇವನೂರ ಮಹಾದೇವರ ‘ಕುಸುಮಬಾಲೆ’ಯ ಕೊನೆಯ ಪುಟಗಳಿಗೆ. ಹೊಲೆಯರ ಚನ್ನ ಕೊಲೆಯಾಗಿರುವ ಬಗ್ಗೆ ಇಲ್ಲೂ ಕೂಡ ಆತನ ಹೆತ್ತವರಿಗೆ ಯಾವುದೇ ಮಾಹಿತಿಯಿಲ್ಲ. ಊರವರ ಮಾತಿನಂತೆಯೇ ಆತನ ಹೆತ್ತವರಿಗೂ ಚನ್ನ ಮುಂಬೈಯಲ್ಲಿದ್ದಾನೆಂದಷ್ಟೆ ಗೊತ್ತು. ಅಂಥ ದೊಡ್ಡೂರು ಮುಂಬೈಯಲ್ಲಿರುವ ಚನ್ನನನ್ನು ನೋಡಲು ‘‘ತಲ್ಗ ನೂರ್ ರೂಪಾಯ್ ಬಿದ್ದದಂತಲ್ಲಾ!’’ ಎಂಬ ಚನ್ನನ ಅಪ್ಪನ ಮಾತು ಕೇಳಿಸಿಕೊಂಡು ಚನ್ನನ ಅವ್ವ ‘‘ಅದಿಯಾ ಇನ್ನೊಂದು ಗಂಡ್ನೂ ಜೀತ್ಕ ಇರುಸ್‌ಬುಡಾವು. ಹೊಲ್ವ ಭೋಗ್ಯಕ್ಕ ಹಾಕ್‌ಬುಡಾವು...’’ ಎನ್ನುವಳು. ಅದಕ್ಕೆ ಚನ್ನನ್ನ ಅಪ್ಪ ‘‘ಅಯ್ಯೆ ಪೆಚ್‌ಬಡ್ಡೀ..... ಇಸ್ಟಾದ್ರೂ ಸಾಕಾಯ್ತದ ಅಂದ್ಕಬುಟ್ಯ. ಆಯ್ತೂ, ನಿನ್ ಮಾತ್ನ ಪರಕಾರವಾಗಿ ಕಾಸಿದ್ದವರ ಕಾಲ್ಕಟ್ಗಂಡು ಸಾಲ್ವೊ ಸೋಲ್ವೊ ಮಾಡ್ಕಂಡೂ ಅವುನ್ನ ನೋಡ್ದು ಅಂತ್ಲೇನೇ ಇಟ್ಗ. ನಂ ನೋಡ್ದೇಟ್ಗೆ ಆ ಕಡ್ದು ದೊರ, ಓಹೊ ಈ ಚನ್ನ ಹೊಲಾರವ್ನ ಅಂತ ತಿಳ್ಕಂಡು ನಂ ಕೂಸಿನ ತಲ ಕಡ್ದು ಆ ಊರಾಚ್ಗೆಲ್ಲಾ ಇರಾದು ಬರೀ ನೀರಂತಲ್ಲಾ..... ಅಲ್ಲಿಗ ಎಸೀಸ್‌ಬುಟ್ರ ನೀನೂವಿ ನಾನೂವಿ ಅಲ್ಲಿ ಏನ್ ತಾನೇ ಮಾಡಾಗಿದ್ದವು?’’ ಎಂದು ಹೇಳಿ ಚನ್ನನನ್ನು ನೋಡಲೇಬೇಕೆಂಬ ತೀವ್ರ ಆಸೆಯಲ್ಲಿರುವ ಅವನ ಅವ್ವನ ಕನಸನ್ನು ಚನ್ನನ ಅಪ್ಪ ಅಲ್ಲೇ ಮುರುಟುವನು.‘ಕುಸುಮಬಾಲೆ’ಯನ್ನು ಹತ್ತಾರು ಸಲ ಓದಿರುವ ನನಗೆ, ಈ ಕಾದಂಬರಿಯ ಕೊನೆಯ ಪುಟಗಳಿಗೆ ಬಂದಾಗ ಇಲ್ಲೊಂದು ನಿಟ್ಟುಸಿರಿನ ಹೊರತಾಗಿ ಮತ್ತೇನೂ ಹೇಳಬೇಕೆಂದು ತೋಚುವುದೇ ಇಲ್ಲ.

ನಂದಲಾಲ ಚಿತ್ರದ ದೃಶ್ಯ

*****

ಇದಿಷ್ಟು ಇಲ್ಲಿ ಈ ಲೇಖನದ ಪೀಠಿಕೆಯ ರೂಪದಲ್ಲಿ ಹೇಳಲು ಮುಖ್ಯಕಾರಣ ‘ಮಿಷ್ಕಿನ್’. ಸದಾ ಹೊಸ ಗಮ್ಯವೊಂದರ ಹುಡುಕಾಟದ, ಮನುಷ್ಯನ ಒಳಬೇಗುದಿಗಳಿಗೆ, ಕಿಚ್ಚು ಸಂಕಟಗಳಿಗೆ ಎದೆಕೊಟ್ಟು, ಮನುಷ್ಯ ಸಂಬಂಧಗಳ ತಲ್ಲಣಗಳಿಗೆ ಸೆಲ್ಯುಲಾಯ್ಡಿ ರೂಪದಲ್ಲಿ ಹೃದಯವಂತಿಕೆಯ ಹೊಸಭಾಷ್ಯ ಬರೆದವನು ಮಿಷ್ಕಿನ್. ತಮಿಳು ಸಿನಿಜಗತ್ತಿಗೆ ವಿಶ್ವದರ್ಜೆಯ ತೊಗಲು ತೊಡಿಸಲು ಯತ್ನಿಸಿದವನು ಇದೇ ಮಿಷ್ಕಿನ್. ಗಡಿಯಾರ, ಕ್ಯಾಲೆಂಡರುಗಳ ಹಂಗಿಲ್ಲದೆ ಬದುಕುವವರ ಪಾಲಿನ ಗಾಡ್‌ಫಾದರ್ ಈ ಮಿಷ್ಕಿನ್.

ನಂದಲಾಲ: ದಾರಿ ಯಾವುದಯ್ಯ ತಾಯಿ ಮನೆಗೆ?

ನಾನು ಓದಿದ ಓದಿಗೂ, ಮಾಡುತ್ತಿದ್ದ ಕೆಲಸಕ್ಕೂ, ಬದುಕುತ್ತಿದ್ದ ರೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನಿಸುವಂತೆ ಮಾಡಿದ್ದು ಮಿಷ್ಕಿನ್ ಮತ್ತು ಆತನ ಸಿನೆಮಾಗಳು. ಅದರಲ್ಲೂ ಮಿಷ್ಕಿನ್‌ನ ‘ನಂದಲಾಲ’. 2010ರಲ್ಲಿ ತೆರೆಕಂಡ ‘ನಂದಲಾಲ’ ನೋಡಿ ಈ ಚಿತ್ರದ ಗುಂಗಿನಿಂದ ಸುಲಭಕ್ಕೆ ಹೊರಬರಲಾಗದೆ ತೀವ್ರವಾಗಿ ಚಡಪಡಿಸಿ ನಾನು ನನ್ನ ಬದುಕಿನ ಸಹಜ ಸ್ಥಿತಿಗೆ ಮರಳಲು ಮೂರು ತಿಂಗಳು ಬೇಕಾಯಿತು. ಆ ಮೂರು ತಿಂಗಳ ಅವಧಿ ನನ್ನ ಪಾಲಿಗೆ ಸ್ವರ್ಗ ನರಕ ಎರಡನ್ನೂ ದರ್ಶನ ಮಾಡಿಸಿದವು. ಯಾರೊಂದಿಗೂ ಹೆಚ್ಚು ಮಾತಿಲ್ಲ, ಸದಾ ಒಂಟಿಯಾಗಿರಲು ಮನಸ್ಸು ತಹತಹಿಸುತ್ತಿತ್ತು. ಎಲ್ಲಿಯಾದರೂ ಓಡಿಹೋಗಬೇಕು ಅನ್ನಿಸುತ್ತಿತು. ಆದರೆ, ಎಲ್ಲಿಗೆ? ಈ ಚಿತ್ರದಲ್ಲಿ ಬರುವ ಆ ಮುಗ್ಧ ಹುಡುಗ, ಆ ಹುಚ್ಚ, ಅವೆಲ್ಲ ಪಾತ್ರಗಳು, ಸ್ಥಳ, ಸನ್ನಿವೇಶಗಳು, ಆ ಇಳಯರಾಜ ಕಟ್ಟಿಕೊಟ್ಟ ಚರಮಗೀತೆ ಇಡೀ ದಿನ ನನ್ನ ಮೈಯೆಲ್ಲ ಇರಿಯುತ್ತಿದ್ದವು. ಯಾವುದೋ ಕಾಲಾಂತರದ ಜಗತ್ತಲ್ಲಿ ನಾನೇ ಬದುಕಿರಬಹುದಾದ ಬದುಕನ್ನು, ನಡೆದಾಡಿರಬಹುದಾದ ರಸ್ತೆಯನ್ನು ನನ್ನ ಕಣ್ಣಮುಂದೆ ಉದ್ದಕ್ಕೂ ಚೆಲ್ಲಿ ಮರೆಯಲ್ಲಿ ನಿಂತು ಮಿಷ್ಕಿನ್ ನಗಾಡುತ್ತಿರುವಂತೆ ನನಗೆ ಕಂಡಿತು.

ಮೂವತ್ತರ ಪ್ರಾಯದ ಅದೇ ಆಗಷ್ಟೆ ಬರೀ ಮಾನಸಿಕ ರೋಗಿಗಳೆ ತುಂಬಿಕೊಂಡ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಮಾನಸಿಕ ಅಸ್ವಸ್ಥನೊಬ್ಬ ಎಂಟರ ಹರೆಯದ ಪುಟ್ಟ ಬಾಲಕನ ಜತೆಗೂಡಿ ತಮ್ಮ ತಮ್ಮ ತಾಯಂದಿರನ್ನು ಹುಡುಕಲು ಹೆದ್ದಾರಿಯೊಂದನ್ನು ಆಶ್ರಯಿಸುವ ಕತೆಯೇ ‘ನಂದಲಾಲ’. ತಾನು ಹುಟ್ಟಿದ ಕೂಡಲೇ ತನ್ನನ್ನು ತೊರೆದು ಮರೆಯಾಗಿರುವ ತಾಯಿಯನ್ನು ನೋಡಲೇಬೇಕೆಂಬ ತೀವ್ರ ತಹತಹದಲ್ಲಿರುವ ಆ ಪುಟ್ಟ ಬಾಲಕನಿಗೆ ತನ್ನ ತಾಯಿಯ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಬಾಲ್ಯದಲ್ಲಿ ತನ್ನನ್ನು ಹುಚ್ಚಾಸ್ಪತ್ರೆ ಪಾಲುಮಾಡಿ ತನ್ನಿಂದ ದೂರವಾಗಿರುವ ತಾಯಿಯನ್ನು ನೆನೆ ನೆನೆದು ಆ ಮಾನಸಿಕ ಅಸ್ವಸ್ಥ ಕ್ಷಣಕ್ಷಣಕ್ಕೂ ಕ್ರೋಧಗೊಳ್ಳುತ್ತಾನೆ. ಸಿಟ್ಟಿನಿಂದ ಕುದಿಯುತ್ತಾನೆ; ಕೊಲ್ಲುವ ಮಾತಾಡುತ್ತಾನೆ.

ತಮ್ಮ ತಮ್ಮ ತಾಯಂದಿರನ್ನು ಹುಡುಕುವ ಈ ದೀರ್ಘ ಪ್ರಯಾಣದ ಹಾದಿಯಲ್ಲಿ ಈ ಇಬ್ಬರು ಅನೇಕ ಸವಾಲಿಗೆ, ಹಠಾತ್ ಎರಗುವ ಸಂದಿಗ್ಧಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಅದೇ ಆಗಷ್ಟೇ ಕಣ್ಣಮುಂದೆ ಘಟಿಸುವ ಎಲ್ಲಾ ಕೃತ್ಯಗಳಲ್ಲೂ ಇವರು ಪಾಲುಗೊಳ್ಳಬೇಕಾಗುತ್ತದೆ ಅಥವಾ ಆ ಎಲ್ಲದಕ್ಕೂ ಮೌನದ ಮುದ್ರೆ ಒತ್ತಿ ಸಾಕ್ಷಿಗಳಾಗಬೇಕಾದ ಅನಿವಾರ್ಯಕ್ಕೆ ಮುಖವೊಡ್ಡುವಂತೆ ಬದುಕು ಇವರನ್ನು ತಂದು ನಡುರಸ್ತೆಯಲ್ಲಿ ನಿಲ್ಲಿಸಿದೆ. ಸದಾ ಸಿಟ್ಟಿಗೆ ಕುದಿಯುವ ಆ ಹುಚ್ಚನಿಗಂತೂ ತನ್ನ ತಾಯಿಯನ್ನು ಈ ಹಿಂದೆ ನೋಡಿದ ನೆನಪುಗಳೇ ಇಲ್ಲ.

ಲೋಕನಿಂದಿತರು, ಕಳ್ಳರು, ಮುಗ್ಧರು, ವಂಚಕರು, ಹೆಳವರು, ಕಪಟಿಗಳು, ವೇಶ್ಯೆ, ಕರುಣಾಳುಗಳು... ಹೀಗೆ ಅನೇಕರು ಈ ಹಾದಿಯುದ್ದಕ್ಕೂ ಇವರಿಬ್ಬರ ಜತೆಗೂಡುತ್ತಾರೆ. ಮತ್ತೂ ಈ ಎಲ್ಲರೂ ಇವರಿಬ್ಬರು ತಲುಪಬೇಕಿರುವ ‘ತಾಯ್‌ವಾಸಲ್’ ಮತ್ತು ‘ಅಣ್ಣೈವೇಲ್’ ಎಂಬ ಎರಡು ಗಮ್ಯಗಳತ್ತ ಇವರನ್ನು ತಲುಪಿಸಿ ತಮ್ಮ ತಮ್ಮ ಬದುಕಿನ ದಾರಿ ಹಿಡಿದು ಹಿಂದಿರುಗುತ್ತಾರೆ. ಹಾಗೇ ಕ್ರಮಿಸುವ ಹಾದಿಯಲ್ಲಿ ಬೀದಿ ವೇಶ್ಯೆಯೊಬ್ಬಳು ಇವರ ಜತೆಗೂಡುತ್ತಾಳೆ. ಒಮ್ಮೆ ಇವರು ಗಲಭೆಯೊಂದರಲ್ಲಿ ಸಿಕ್ಕಿ ಗಾಯಗೊಂಡ ಕುಂಟನೊಬ್ಬನನ್ನು ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ನಿರ್ಗಮಿಸುವಾಗ ಸುತ್ತಲೂ ಸರಿರಾತ್ರಿಯ ಕತ್ತಲು ಆವರಿಸಿಕೊಂಡಿರುತ್ತದೆ. ಆಗ ಅವರ ನೆರವಿಗೆ ಬರುವುದು ಬಾಲ ಯೇಸು ಮತ್ತು ಆತನ ತಾಯಿ ಮೇರಿಯ ಎದುರು ಉರಿಯುತ್ತಿರುವ ಬುಡ್ಡಿ ದೀಪಗಳು. ಆ ದೀಪಗಳನ್ನು ಅಲ್ಲಿಂದ ಕದ್ದೊಯ್ಯುವಾಗಲೂ ಆ ಹುಚ್ಚ ‘ಪಾಪ ನಮ್ಮಿಂದಾಗಿ ಅವರಿಬ್ಬರಿಗೆ ಕತ್ತಲಾಯಿತಲ್ಲ’ ಎಂದು ಮರುಗುತ್ತಾನೆ.

ಕಡೆಗೆ, ‘ತಾಯ್‌ವಾಸಲ್’ ಮತ್ತು ‘ಅಣ್ಣೈವೇಲ್’ ತಲುಪಿದ ಈ ಇಬ್ಬರ ಹೃದಯ ಛಿದ್ರಗೊಳ್ಳುವ ಸನ್ನಿವೇಶಗಳು ಎದುರಾಗುತ್ತವೆ. ಎಂಟರ ಆ ಮುಗ್ಧಬಾಲಕನ ತಾಯಿ ತನ್ನ ಮೊದಲ ಮದುವೆ ಮತ್ತು ಮಗು ಹುಟ್ಟಿರುವ ಸತ್ಯವನ್ನು ಮರೆಮಾಚಿ ಇನ್ನೊಬ್ಬನೊಂದಿಗೆ ಮದುವೆಯಾಗಿ ಆರಾಮದ ಬದುಕು ನಡೆಸುತ್ತಿದ್ದರೆ, ಆ ಹುಚ್ಚನ ತಾಯಿ ಈತನನ್ನು ಹುಚ್ಚಾಸ್ಪತ್ರೆಯ ಪಾಲುಮಾಡಿದ ದಿನವೇ ತಾನು ಹುಚ್ಚಿಯಾಗಿ ಮನೆಯ ಹಿತ್ತಲಲ್ಲಿ ಬಂದಿಯಾಗಿರುತ್ತಾಳೆ.

ಇತ್ತ ಆ ಮುಗ್ಧ ಬಾಲಕನ ಕೋಮಲ ಜಗತ್ತನ್ನು ಸತ್ಯದ ಮೂಲಕ ಇರಿಯಲು ಬಯಸದ ಆ ಹುಚ್ಚ ಆತನ ತಾಯಿ ಇನ್ನೊಬ್ಬನೊಂದಿಗೆ ಮದುವೆಯಾಗಿರುವ ಸತ್ಯವನ್ನು ಹೇಳದೆ ಖುದ್ದು ತಾನೇ ಆತನಿಗೆ ತಾಯ್ತನದಿಂದ ಪೊರೆಯಲು ಯತ್ನಿಸುತ್ತಾನೆ. ಆ ಮುಗ್ಧ ಬಾಲಕನೂ ಈ ಹುಚ್ಚನ ತಾಯಿಯ ನಿಜಬದುಕಿನ ದಾರುಣ ಮುಖವನ್ನು ಕಂಡು ಈ ಹುಚ್ಚನೆಡೆಗೆ ಕನಿಕರದ ಮಳೆಗೆರೆಯುತ್ತಾನೆ.

ಇದಿಷ್ಟನ್ನು ಯಾವ ಸೇಡುಕೇಡು ಇಲ್ಲದೆ, ಕ್ರೌರ್ಯಕಥನದ ಬಿಗಿ ನಿರೂಪಣೆಯಿಲ್ಲದೆ ತಣ್ಣಗೆ ಮಂಡಿಸುವ ಮಿಷ್ಕಿನ್ ಬದುಕು ಕೂಡ ಹೆಚ್ಚೂಕಮ್ಮಿ ‘ನಂದಲಾಲ’ದಂತೆಯೇ ಇದೆ. ಅತಿಹೆಚ್ಚು ಮೌನ, ಸಂಕೇತ ಮತ್ತು ರೂಪಕದ ಭಾಷೆಯನ್ನು ದಂಡಿಯಾಗಿ ಬಳಸಿಕೊಂಡು ತೆರೆಗೆ ಬಂದು ಯಶಸ್ವಿಯಾದ ಚಿತ್ರವಿದು. ಸತ್ಯವನ್ನು ಕಾಣುವ, ಕಂಡದ್ದನ್ನು ಇನ್ನೊಂದು ಕಣ್ಣಿಗೆ ದಾಟಿಸಲು ಯತ್ನಿಸಿರುವ ರೀತಿಯೇ ಈ ಚಿತ್ರದ ಹೆಚ್ಚುಗಾರಿಕೆ.

20 ಸೆಪ್ಟಂಬರ್ 1971ರಂದು ತಮಿಳುನಾಡಿನಲ್ಲಿ ಜನಿಸಿದ ಮಿಷ್ಕಿನ್ ಮೂಲ ಹೆಸರು ಶಣ್ಮುಗಾ ರಾಜ. ದಾಸ್ತೋವಸ್ಕಿಯ ಕಾದಂಬರಿ ‘ದಿ ಈಡಿಯಟ್’ನಲ್ಲಿ ಬರುವ ಅತ್ಯಂತ ವಿಕ್ಷಿಪ್ತ ಮತ್ತು ವಿಲಕ್ಷಣ ಪಾತ್ರವಾದ ‘ಪ್ರಿನ್ಸ್ ಮಿಷ್ಕಿನ್’ನ ಪ್ರಭಾವಳಿಗೆ ಸಿಕ್ಕಿ ಕಡೆಗೆ ಅದೇ ಹೆಸರನ್ನು ತನಗೆ ತಾನೇ ಕೊಟ್ಟುಕೊಂಡವನು ಮಿಷ್ಕಿನ್.

ಮಿಷ್ಕಿನ್: ಹಾದಿಗುಂಟ ವ್ಯಾಕುಲದ ಮುಳ್ಳುಗಳು...

ಈ ಮಿಷ್ಕಿನ್ ಬದುಕು ಕೂಡ ಅನೇಕ ಕತೆಗಳಿಗೆ, ಸಿನೆಮಾಗೆ ವಸ್ತುವಾಗಬಲ್ಲದು. ತಮಿಳುನಾಡಿನ ಚೆಟ್ಟಿನಾಡು ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಮಿಷ್ಕಿನ್ ತನ್ನ ಕಾಲೇಜು ದಿನಗಳಲ್ಲಿ ಟಾಲ್‌ಸ್ಟಾಯ್ ಮತ್ತು ದಾಸ್ತೋವಸ್ಕಿಯ ಬರಹಗಳಿಗೆ ಮಾರುಹೋದರೆ, ಅಕಿರ ಕುರೋಸಾವಾ, ರಾಬರ್ಟ್ ಬ್ರೆಸ್ಸನ್ ಮತ್ತು ತಕೇಶಿ ಕಿಟ್ಯಾನೋ ಸಿನೆಮಾಗಳು ಮಿಷ್ಕಿನ್‌ಗೆ ಜಾಗತಿಕ ಸಿನೆಮಾಗಳ ಕಡುಮೋಹಿಯಾಗುವಂತೆ ಮಾಡಿದವು. ತನ್ನ ಓದು ಮುಗಿದ ಮೇಲೆ ಮಿಷ್ಕಿನ್ ಬೀದಿಬದಿ ಟೀ ಶರ್ಟ್ ಮಾರುವ, ಮಕ್ಕಳಿಗೆ ಗೊಂಬೆ, ಟೆಡ್ಡಿ ಬೇರ್‌ಗಳನ್ನು ಮಾರುವ, ಶಾಲಾ ಮಕ್ಕಳಿಗೆ ಕರಾಟೆ ಹೇಳಿಕೊಡುವ ಗುರುವಾಗಿ, ದೊಡ್ಡವರಿಗೆ ಮಾರ್ಷಲ್ ಆರ್ಟ್ಸ್ ಕಲಿಸುವ ಮೇಷ್ಟ್ರಾಗಿ, ಟಿ.ವಿ. ರಿಪೇರಿ ಮಾಡುವ, ಖಾಸಗಿ ಕಂಪೆನಿಗಳ ನೌಕರರಿಗೆ ಮಧ್ಯಾಹ್ನದ ಬಿಸಿಯೂಟ ತಲುಪಿಸುವ, ದೊಡ್ಡ ಕಾರ್ಖಾನೆಗಳ ಯಂತ್ರಕ್ಕೆ ಬಿಡಿಭಾಗಗಳನ್ನು ಸರಬರಾಜು ಮಾಡುವ, ಪತ್ರಿಕೆ ಮತ್ತು ಸಿನೆಮಾಗಳಿಗೆ ಅರೆಕಾಲಿಕ ಬರಹಗಾರನಾಗಿ... ಇವೇ ಮೊದಲಾದ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಕೆಲಸಗಳನ್ನು ಮಾಡಿದ. ಯಾವುದರಲ್ಲೂ ಖುಷಿ, ಯಶಸ್ಸು ಕಾಣದ, ತೃಪ್ತಿ ಹೊಂದದ ಮಿಷ್ಕಿನ್ ತಮಿಳು ಸಿನೆಮಾ ಜಗತ್ತಿನ ಜಗಲಿಯೇರುವಂತೆ ಮಾಡಿದ್ದು ಜಪಾನಿನ ಕುರೋಸಾವಾ, ಬ್ರೆಸ್ಸನ್ ಮತ್ತು ತಕೇಶಿ ಕಿಟ್ಯಾನೋ ಸಿನೆಮಾಗಳು.

ಜಗತ್ತಿನ ಎಲ್ಲಾ ಯಶಸ್ವಿ ನಿರ್ದೇಶಕರಂತೆ ತನ್ನಿಷ್ಟಕ್ಕೆ ಸರಿಹೊಂದುವ ಸ್ವಂತ ಕತೆ ಮಾಡಿಕೊಂಡು ನಿರ್ಮಾಪಕರ ಬಳಿ ಮಿಷ್ಕಿನ್ ಹೋದಾಗ ಸಿಕ್ಕ ಉತ್ತರ ಪ್ರಶ್ನೆಗಳ ರೂಪದಲ್ಲಿತ್ತು: ‘ಇಲ್ಲಿ ನಿನ್ನ ಗುರು ಯಾರು? ಯಾರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೇ? ಎಷ್ಟು ಸಿನೆಮಾಗಳಲ್ಲಿ ಕೆಲಸಮಾಡಿರುವೆ?’ ಬೇರೆ ದಾರಿಕಾಣದೆ ಮಿಷ್ಕಿನ್ ಮನಸ್ಸಿಲ್ಲದಿದ್ದರೂ ನಿರ್ದೇಶಕ ವಿನ್ಸೆಂಟ್ ಸೆಲ್ವಾ ಬಳಿ ‘ಯೂತ್’ ಮತ್ತು ‘ಜಿತ್ತಾನ್’ ಎಂಬೆರಡು ಸಿನೆಮಾಗಳ ಸಹನಿರ್ದೇಶಕನಾಗಿ ಕೆಲಸ ಮಾಡಬೇಕಾಯಿತು. ಈ ಎರಡೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಸಿನೆಮಾಗಳೇ. ಈ ಎರಡೂ ಸಿನೆಮಾಗಳ ಶೂಟಿಂಗ್ ಸಂದರ್ಭದಲ್ಲಿ ತನ್ನ ಸ್ವಂತದ ಕತೆ ಸಿನೆಮಾ ಆಗಲಾರದೇನೋ ಎಂಬ ಭಯದಲ್ಲಿ ಮಿಷ್ಕಿನ್ ಖಿನ್ನತೆಗೆ ಒಳಗಾದದ್ದೂ ಇದೆ. ಆದರೆ, ಈ ಸಿನೆಮಾಗಳಿಂದ ಮಿಷ್ಕಿನ್ ಏನೂ ಕಲಿತನೋ ಬಿಟ್ಟನೋ ಗೊತ್ತಿಲ್ಲ. ಸಿನೆಮಾ ಗ್ರಹಿಕೆಯ ಪ್ರಾಥಮಿಕ ವ್ಯಾಕರಣಗಳನ್ನು ಕುರೋಸಾವಾ, ಬ್ರೆಸ್ಸನ್ ಮತ್ತು ತಕೇಶಿ ಕಿಟ್ಯಾನೋರಿಂದ ಹೆಚ್ಚು ಕಲಿತಂತಿರುವ ಮಿಷ್ಕಿನ್ ಅದನ್ನು ‘ಚಿತ್ತಿರಮ್ ಪೇಸುದಡಿ’, ‘ಅಂಜಾದೆ’, ‘ನಂದಲಾಲ’ ಮತ್ತು ‘ಓನಾಯುಮ್ ಆಟ್ಟುಕುಟ್ಟಿಯುಮ್’ ಚಿತ್ರಗಳಲ್ಲಿ ಢಾಳಾಗಿ ಕಾಣಿಸಿದ್ದಾನೆ.

ಮಿಷ್ಕಿನ್ ಸಿನೆಮಾಗಳು ಎಷ್ಟು ವಿಲಕ್ಷಣವೆಂದರೆ ಈ ಸಿನೆಮಾಗಳ ಪಾತ್ರಗಳು ನಿಮ್ಮನ್ನು ಬೇತಾಳದಂತೆ ಅಟ್ಟಿಸಿಕೊಂಡು ಬರುತ್ತವೆ. ನೀವು ಒಂಟಿಯಾಗಿದ್ದಾಗ ನಿಮ್ಮ ಹೆಗಲೇರುತ್ತವೆ, ನೀವು ಉಣ್ಣಲು ಕೂತಾಗ ನಿಮ್ಮ ಅನ್ನದ ತಟ್ಟೆಗೆ ಕೈಹಾಕುತ್ತವೆ. ಎಂಥಾ ಸಂಭ್ರಮದಲ್ಲೂ ನಿಮ್ಮನ್ನು ತಬ್ಬಲಿಯನ್ನಾಗಿಸುತ್ತವೆ. ಗೆಳೆಯರ ಗುಂಪಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತವೆ. ಕಡೆಗೆ ನಿಮ್ಮನ್ನು ಯಾವುದೋ ಬುರುಜಿನ ನೆತ್ತಿಯ ತನಕ ಕೊಂಡೊಯ್ದು ರಪ್ಪನೆ ಎತ್ತಿ ಬಿಸಾಡುತ್ತವೆ. ನೆಲಕ್ಕೆ ಬಿದ್ದು ನೀವು ಚಿಂದಿಯಾಗುವುದು ಖಚಿತ ಅನ್ನುವ ಕ್ಷಣದಲ್ಲೇ ಇನ್ಯಾರೋ ಬಂದು ನಿಮ್ಮನ್ನು ಮತ್ತದೇ ಬುರುಜಿನ ತುದಿ ತಲುಪಿಸಿ ಕಾಣೆಯಾಗುತ್ತಾರೆ. ಮಿಷ್ಕಿನ್ ಸಿನೆಮಾಗಳೆಂದರೆ ಶವದಮನೆಯಿಂದ ಕೇಳಿಬರುತ್ತಿರುವ ವಿಚಿತ್ರ ನರಳಾಟವೆಂದಾಗಲೀ ಅಥವಾ ಲೇಬರ್ ವಾರ್ಡಿನಿಂದ ಕೇಳಿಬರುತ್ತಿರುವ ಪ್ರಸವ ವೇದನೆಯೆಂದಾಗಲೀ ತೆಳು ರೂಪಕದಲ್ಲಿ ಹೇಳಲು ಆಗುವುದಿಲ್ಲ. ಗಾಯದ ಮೂಲಕ್ಕೆ ಮದ್ದು ಹಚ್ಚುವ ಮಿಷ್ಕಿನ್ ಸಿನೆಮಾಗಳು ನೋಡುಗರಿಗೆ ಸತ್ಯದ ಒಳಗೂ ಹೊರಗೂ ಅಂಟಿಕೊಂಡಿರುವ ರಕ್ತಮಾಂಸ ಎಲುಬುಗಳನ್ನು ಮುಟ್ಟುವ ಅನುಭೂತಿಗೆ ಈಡು ಮಾಡಬಲ್ಲವು.

ಇಂಥಾ ವಿಲಕ್ಷಣ ಸಿನೆಮಾಗಳನ್ನಷ್ಟೇ ಹೆರುವ ಮಿಷ್ಕಿನ್ ಬದುಕಿನ ಪುಟಗಳನ್ನು ಓದಲು ಕುಳಿತರೆ, ಅಯ್ಯಿ ಅದು ಬದುಕಲ್ಲ! ಕೆಂಡವ ನುಂಗಿ ಬೂದಿಯಾಗಲೊಲ್ಲದವನ ಕತೆ ಹೇಳುತ್ತದೆ.

‘ನಂದಲಾಲ’ ಚಿತ್ರಕ್ಕೆ ತಕೇಶಿ ಕಿಟ್ಯಾನೋ ನಿರ್ದೇಶನದ ‘ಕಿಕುಜಿರೋ’ ಚಿತ್ರದ ದಟ್ಟವಾದ ನೆರಳಿದೆ. ಇದನ್ನೇ ಪತ್ರಿಕೆಗಳು ಬರೆದವು. ‘ನಂದಲಾಲ’ ಜಪಾನಿನ ಕದ್ದ ಸರಕೆಂದರು. ಈ ಎರಡೂ ಚಿತ್ರಗಳನ್ನು ನೋಡಿರುವ ನನಗೆ ‘ನಂದಲಾಲ’ ನನ್ನದು ಅನ್ನಿಸಿತು. ಈಗಲೂ ಮಿಷ್ಕಿನ್‌ನನ್ನು ಭೇಟಿಯಾಗುವ ಅನೇಕರು ನಂದಲಾಲದ ಚಿತ್ರದ ಕತೆಯನ್ನು ತಮ್ಮ ಬದುಕಿನೊಂದಿಗೆ ಹೋಲಿಸಿ, ತೂಗಿ ಬಿಕ್ಕುವುದು ಇದೆ. ಇದೊಂದು ರೋಡ್ ಮೂವಿ ಎಂದು ಒಂದು ಸಾಲಿನ ಷರಾ ಬರೆಯುವ ಪತ್ರಕರ್ತರಿಗೆ ಮಿಷ್ಕಿನ್ ಈ ಚಿತ್ರಕ್ಕಾಗಿ ಮಾಡಿಕೊಂಡ 1,500 ಪುಟಗಳ ಹೋಮ್‌ವರ್ಕ್ ಕಾಣಲೇ ಇಲ್ಲ.

ಚಿತ್ರದುದ್ದಕ್ಕೂ ಸೊಂಟದಲ್ಲಿ ಬೆಲ್ಟ್ ಇಲ್ಲದೇ, ಪ್ಯಾಂಟಿನ ತುದಿಯನ್ನು ಕೈಯಲ್ಲಿ ಹಿಡಿದು, ಎಡಗಾಲಿನ ಶೂ ಬಲಗಾಲಿಗೆ, ಬಲಗಾಲಿನದ್ದು ಎಡಗಾಲಿಗೆ ಧರಿಸಿ ಮಿಷ್ಕಿನ್ ಮಾನಸಿಕ ಅಸ್ವಸ್ಥನ ಪಾತ್ರವನ್ನು ಆವಾಹಿಸಿಕೊಂಡಂತೆ ನಟಿಸಿದ್ದಾನೆ. ಎಂಟರ ಆ ಮುಗ್ಧ ಬಾಲಕನ ರೂಪದಲ್ಲಿ ಅಶ್ವಥ್ ರಾಮ್ ಕೂಡ ಪಾತ್ರವನ್ನೇ ಜೀವಿಸಿದ್ದಾನೆ. ನಂದಲಾಲದ ವಿಶಿಷ್ಟವೆಂದರೆ ಇಡೀ ಚಿತ್ರದ ದೃಶ್ಯಗಳನ್ನು ಮಿಷ್ಕಿನ್ ಸ್ಥಿರಚಿತ್ರಗಳಂತೆ ಕಡೆದು ತೆರೆಗೆ ತಂದಿರುವುದು. ನೆಲದ ಮೂಲಕ, ಮನಷ್ಯರ ಕಾಲುಗಳ ಮೂಲಕ ದೃಶ್ಯ ಚಿತ್ರೀಕರಿಸಿರುವ, ಕತೆ ಹೇಳಹೊರಟಿರುವ ಮಿಷ್ಕಿನ್ ತಂತ್ರ ತೆರೆಯ ಮೇಲೆಯೇ ಅನೇಕ ಮೆಟಫರ್‌ಗಳನ್ನು ಸೃಜಿಸಿದೆ.

ಬಾಲ್ಯದಲ್ಲಿ ತನ್ನ ತಾಯಿಯಿಂದ ದೂರಾಗಿ ಖಿನ್ನತೆಗೊಳಗಾಗಿ ನರಳಿದ್ದು ನಂದಲಾಲದ ಚಿತ್ರಕಥೆ ಕಟ್ಟುವಲ್ಲಿ ನೆರವಿಗೆ ಬಂತು ಎಂದು ಮಿಷ್ಕಿನ್ ಹೇಳಿಕೊಂಡದ್ದು ಉಂಟು. ‘‘ನಂದಲಾಲ ನನ್ನದೇ ಬದುಕು; ಮತ್ತೆ ದೊಡ್ಡತೆರೆಗೆ ತಂದು ನನ್ನನ್ನು ನಾನು ನೋಡಿಕೊಂಡಿದ್ದೇನೆ, ಅಷ್ಟೇ’’ ಎಂದು ಮಿಷ್ಕಿನ್ ಹೇಳಲು ಮರೆಯುವುದಿಲ್ಲ.

*****

ವೃತ್ತಿಯಿಂದ ಕಟುಕರಾದ ಕರುಣಾಳುಗಳಿದ್ದಾರೆ...

2013ರಲ್ಲಿ ಮಿಷ್ಕಿನ್‌ನ ಮತ್ತೊಂದು ಸಿನೆಮಾ ‘ಓನಾಯುಮ್ ಆಟ್ಟುಕುಟ್ಟಿಯುಮ್’ (ತೋಳವೂ ಕುರಿಮರಿಯೂ) ತೆರೆಕಂಡಿತು. ಮಿಷ್ಕಿನ್ ನಟಿಸಿ ನಿರ್ದೇಶಿಸಿದ್ದ ಓನಾಯುಮ್ ಆಟ್ಟುಕುಟ್ಟಿಯುಮ್ ಸಿನೆಮಾ ನೋಡಿ ಗೆಳೆಯ ಮಂಜುನಾಥ್ ಲತಾ ಸರಿಹೊತ್ತಲ್ಲಿ ಕಾಲ್ ಮಾಡಿ ಒಂದೇ ಒಂದು ಸಲ ಮಿಷ್ಕಿನ್ ಸಿಕ್ಕರೇ ಸಾಕು, ಅವನ ಪಾದಕ್ಕೆ ಹಣೆಹಚ್ಚಿ ನಮಸ್ಕರಿಸಿ ಬಿಡಬೇಕು ಎಂದು ದಗ್ಧಸ್ವರದಲ್ಲಿ ಹೇಳಿದ್ದು ಈಗಲೂ ನನ್ನೊಳಗೆ ಉಳಿದುಬಿಟ್ಟಿದೆ.

ಓನಾಯುಮ್ ಆಟ್ಟುಕುಟ್ಟಿಯುಮ್ ನೋಡಿ ನನಗೂ ಚೇತರಿಸಿಕೊಳ್ಳಲು ತುಂಬಾ ದಿನಗಳು ಬೇಕಾದವು. ಮಿಷ್ಕಿನ್ ಸೃಷ್ಟಿಸಿದ ‘ಕಪ್ಪುರಾತ್ರಿ’ಯ ಅಗಾಧ ಕ್ಯಾನ್ವಾಸ್ ಮತ್ತು ಇಳಯರಾಜರ ಹಾಡುಗಳಿಲ್ಲದ ಸಂಗೀತ ಉಳಿದ ತಮಿಳು ಸಿನೆಮಾಗಳಿಗಿಂತ ಈ ಚಿತ್ರವನ್ನು ಬೇರೆಯದೆ ಸಾಲಿನಲ್ಲಿ ನಿಲ್ಲಿಸಿತು. ನಟನೆ ಮತ್ತು ನಿರ್ದೇಶನದಲ್ಲಿ ಮಿಷ್ಕಿನ್ ಇನ್ನಷ್ಟು ಮಾಗಿದ ಎಲ್ಲ ಕುರುಹುಗಳು ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡವು. ಸೇಡುಕೇಡಿನ ಗ್ಯಾಂಗ್‌ಸ್ಟರ್ ಸಿನೆಮಾಗಳಿಗೆ ಮುಡಿಪು ಅರ್ಪಿಸುವ ರೂಪದಲ್ಲಿ ‘ಓನಾಯುಮ್ ಆಟ್ಟುಕುಟ್ಟಿಯುಮ್’ ಕಂಡಿತು. ‘ದಿ ಹಿಂದೂ’ ಪತ್ರಿಕೆಯಂತೂ ಈ ಚಿತ್ರವನ್ನು ವಿಶ್ವದರ್ಜೆಯ ಸಿನೆಮಾವೆಂದು ಬಣ್ಣಿಸಿ ಕೊಂಡಾಡಿತು. ಮಿಷ್ಕಿನ್ ಪ್ರತಿಭೆ ಇನ್ನಷ್ಟು ಎತ್ತರದ ಜಿಗಿತ ಕಂಡ ಸಿನೆಮಾ ಇದು.

ಮುಗ್ಧ ಮಗುವೊಂದನ್ನು ಕೊಂದ ಪಾಪದ ಹೊರೆ ಇಳಿಸಿಕೊಳ್ಳಲು, ಆ ಮಗುವಿನ ಹೆತ್ತವರನ್ನು ತನ್ನ ದುಷ್ಟ ಧಣಿಯಿಂದ ಪಾರುಮಾಡಲು ಹೊರಟು ತಾನೇ ಆತ್ಮಾಹುತಿಗೆ ಈಡಾಗುವ ಪಾಪಿಯೊಬ್ಬನ ಚಿತ್ರವಿದು. ಇಡೀ ಚಿತ್ರ ಸಾವು-ಬದುಕಿನ ನಡುವಿನ ಕೂದಲೆಳೆಯ ಅಂತರದಲ್ಲಿ ಘಟಿಸುವ ಸಂಘರ್ಷದ, ಕೊಲ್ಲುವ, ಕೊಂದುಕೊಳ್ಳುವ ಕ್ರೂರ ಚಿತ್ರಣದ ಮಹಾದರ್ಶನವನ್ನು ಮಾಡಿಸುತ್ತದೆ. ಚಿತ್ರಕ್ಕೆ ಹೇಳಿಮಾಡಿಸಿದಂತಿರುವ ಇಳಯರಾಜರ ಚರಮಗೀತೆ ಹಿನ್ನೆಲೆ ಸಂಗೀತವಾಗಿ ಇಲ್ಲೂ ಮುಂದುವರಿದಿದೆ. ‘ನಂದಲಾಲ’ದ ನಂತರ ಮಿಷ್ಕಿನ್ ಮೈದುಂಬಿ ನಟಿಸಿರುವ ಚಿತ್ರವಿದು. ಮಿಷ್ಕಿನ್ ಸಿನೆಮಾಗಳೇ ಹಾಗೇ ನಿಮ್ಮನ್ನು ಹೆದ್ದಾರಿಯ ಸದ್ದಲ್ಲಿ, ಸ್ಮಶಾನದ ಮೌನ ದಲ್ಲಿ, ಜನಜಾತ್ರೆಯ ಸಂಭ್ರಮದಲ್ಲಿ ಒಂಟಿಯಾಗಿಸಿ ಹೋಗಿಬಿಡುತ್ತವೆ. ಯಥಾಸ್ಥಿತಿಗೆ ಮರಳುವುದು ಅಷ್ಟು ಸಲೀಸಲ್ಲ.

ಮಿಷ್ಕಿನ್ ಸಿನೆಮಾಗಳ ಬಹುತೇಕ ಸಮಾರೋಪದ ದೃಶ್ಯಗಳು ಹೆಗಲ ಮೇಲಿನ ಹೆಣ ಇಳಿಸಿ ಹಗುರಾದವರ ಮುಖಗಳನ್ನು ಕಾಣಿಸುತ್ತವೆ. ಮಿಷ್ಕಿನ್ ಸಿನೆಮಾಗಳಲ್ಲಿ ಪಳಗಿದ ನಟನಟಿಯರೆ ಕಾಣುವುದಿಲ್ಲ. ನಂದಲಾಲ, ಪಿಸಾಸು, ಚಿತ್ತಿರಂ ಪೇಸುದಡಿ, ಅಂಜಾದೆ ತರಹದ ಚಿತ್ರ ಗಳಲ್ಲಿ ಕ್ಯಾಮರಾಗೆ ದಕ್ಕಿದ ದಾರಿಹೋಕರು, ಬೀದಿಬದಿಯ ಅಂಗವಿಕಲರು, ಕಣ್ಣಿಲ್ಲದವರು, ತೃತೀಯ ಲಿಂಗಿಗಳು ಆ ಸನ್ನಿವೇಶಕ್ಕೆ ಒಪ್ಪುವ ಹಠಾತ್ ಪಾತ್ರಗಳಾಗುತ್ತಾರೆ. ಚಿತ್ರದುದ್ದಕ್ಕೂ ಮಿಷ್ಕಿನ್ ಸಾವನ್ನು ಬೆನ್ನಿಗಂಟಿಸಿಕೊಂಡು ಓಡುತ್ತಲೇ ಇರುತ್ತಾನೆ; ಜೊತೆ ಗೊಂದು ಕಣ್ಣಿಲ್ಲದ ಮಗು ಮತ್ತು ಆ ಮಗುವಿನ ಕಣ್ಣಿಲ್ಲದ ತಾಯಿ.

‘ಓನಾಯುಮ್ ಆಟ್ಟುಕುಟ್ಟಿಯುಮ್’ ಇನ್ನೇನೂ ಮುಗಿಯಬೇಕು ಅನ್ನುವ ಕ್ಷಣದಲ್ಲಿ ನನಗೆ ಬಿಟ್ಟುಬಿಡದೆ ನೆನಪಾದದ್ದು ಎಚ್.ಎನ್.ಶುಭದಾ ಅವರು ಕನ್ನಡಕ್ಕೆ ತಂದಿರುವ ಖಲೀಲ್ ಗಿಬ್ರಾನ್:

ಕೊಲೆಗಾರನೊಬ್ಬ ಅಂತರಂಗದೊಳಗೆ ತಾನೇ ವಧೆಯಾಗಿರಬಹುದು. ಸತ್ಯವನ್ನೇ ಹೇಳುತ್ತೇನೆನ್ನುವ ಸುಳ್ಳುಗಾರರೂ ಇದ್ದಾರೆ. ಯಾವ ಕ್ಷಣದಲ್ಲಾದರೂ ಕೊಲೆ ಮಾಡಬಲ್ಲ ಸಂತರಿದ್ದಾರೆ. ಪಾಪಕ್ಕೆ ಸೋಲುವ ಸನ್ಯಾಸಿಗಳಿದ್ದಾರೆ. ಹಾಗೆಯೇ ವೃತ್ತಿಯಿಂದ ಕಟುಕರಾದ ಕರುಣಾಳುಗಳಿದ್ದಾರೆ...

ಕೊನೆಯ ಮಾತು...

‘‘2019ರ ನವೆಂಬರ್ ತಿಂಗಳಿನ ತನಕ ಸಹಾಯಕ ನಿರ್ದೇಶಕ ಅಕಾಂಕ್ಷಿಗಳಿಗೆ ಪ್ರವೇಶವಿಲ್ಲ’’ ಎಂದು ತನ್ನ ಕಚೇರಿಯೆದುರು ಬೋರ್ಡು ತಗುಲಿ ಹಾಕಿರುವ ಮಿಷ್ಕಿನ್ ‘‘ನಾನು ಇನ್ನು ಇನ್ನೂರು ವರ್ಷ ಬದುಕಿದರೂ ರಾಬರ್ಟ್ ಬ್ರೆಸ್ಸನ್‌ನ ‘ಪಿಕ್‌ಪಾಕೆಟ್’ ಆಗಲೀ ಕುರೋಸಾವನ ‘ಸೆವೆನ್ ಸಮುರಾಯ್’ ಆಗಲೀ ತೆಗೆಯಲು ಸಾಧ್ಯವಿಲ್ಲ’’ ಎಂದು ದಿಟ್ಟವಾಗಿ ಹೇಳಬಲ್ಲ. ತನ್ನ ಅಂಜಾದೆ, ಚಿತ್ತಿರಂ ಪೇಸುದಡಿ, ನಂದಲಾಲ, ಓನಾಯುಮ್ ಆಟ್ಟುಕುಟ್ಟಿಯುಮ್, ಯುದ್ಧಂ ಸೈ, ಪಿಸಾಸು ಚಿತ್ರಗಳಲ್ಲಿ ಮಾತಿನಷ್ಟೇ ಮೌನಕ್ಕೂ ಭೂಮಿಕೆ ಕೊಟ್ಟವನು ಮಿಷ್ಕಿನ್. ಕ್ಲೋಸಪ್ ಶಾಟ್‌ಗಳನ್ನು ಎಂದಿಗೂ ಒಪ್ಪದ ಮಿಷ್ಕಿನ್ ರಂಗಭೂಮಿ ಕಲಾವಿದರು ಇಡೀ ವೇದಿಕೆಯನ್ನು ಬಳಸಿಕೊಳ್ಳುವಂತೆ ರೆಕ್ಟಾಂಗ್ಯುಲರ್ ಶೇಪಿನ ಎರಡು ತುದಿಯಲ್ಲೂ ಕಲಾವಿದರನ್ನು ನಿಲ್ಲಿಸಿ ತನಗೆ ಬೇಕಾದ ಸನ್ನಿವೇಶವನ್ನು ತನ್ನಿಷ್ಟದ ರೀತಿಯಲ್ಲಿಯೇ ಪಡೆದೇ ತೀರುವ ನಿಸ್ಸೀಮ. ಈ ಕಾರಣಕ್ಕಾಗಿಯೇ ಅದೆಷ್ಟೋ ಸಲ ಅರವತ್ತು ದಿನಗಳಲ್ಲಿ ಮುಗಿಯಬೇಕಿದ್ದ ಮಿಷ್ಕಿನ್ ಚಿತ್ರಗಳ ಚಿತ್ರೀಕರಣ ನೂರಕ್ಕೂ ಹೆಚ್ಚು ದಿನಗಳು ದಾಟಿವೆ.

ಇವೆಲ್ಲವೂ ಮಿಷ್ಕಿನ್ ಸಿನಿಬದುಕಿನ ಕಥನವಾದರೆ, ಅಸಲಿ ಬದುಕು ಆತನಿಂದಲೇ ಮುಂದೊಂದು ದಿನ ಬರಬಹುದಾದ ಸಿನೆಮಾದಂತಿದೆ. ಸೋಲಿನ ಕಡುಕಷ್ಟದ ದಿನಗಳಲ್ಲಿ ಜತೆಯಲ್ಲಿದ್ದ ಹೆಂಡತಿ ಈಗ ಮಿಷ್ಕಿನ್ ಗೆಲುವಿನ ಹಳಿ ತಲುಪಿದಾಗ ದೂರಾಗಿದ್ದಾಳೆ. ‘‘ಕಾನೂನು ನಮ್ಮ ದಾಂಪತ್ಯಕ್ಕಿನ್ನು ಅಧಿಕೃತವಾಗಿ ಡಿವೋರ್ಸ್ ಮುದ್ರೆಯನ್ನು ಒತ್ತಿಲ್ಲ; ಆದರೂ ನಾವು ಮಾನಸಿಕವಾಗಿ, ದೈಹಿಕವಾಗಿ ದೂರದೂರವೇ’’ ಎಂದು ಹೇಳುವ ಮಿಷ್ಕಿನ್ ತನ್ನ ಖಾಸಗಿ ಜಗತ್ತಿನಲ್ಲಿ ಸದಾ ಒಬ್ಬಂಟಿ ಹಕ್ಕಿಯಂತಿರಲು ಬಯಸುವ ವ್ಯಕ್ತಿ. ಸಾವಿರಾರು ಪುಸ್ತಕಗಳ ನಡುವೆ ಆಗಾಗ ಕಳೆದು ಹೋಗುವ ಮಿಷ್ಕಿನ್, ತನ್ನ ಚಿತ್ರದ ಚಿತ್ರಕತೆಯ ಕರಡನ್ನು ತಿದ್ದಿತೀಡಿ ಅಂತಿಮಗೊಳಿಸುವುದು ಮಾತ್ರ ಚೆನ್ನೈನ ಟಿ.ನಗರದ ಸ್ಮಶಾನವೊಂದರಲ್ಲಿ.

*****

ಮಿಷ್ಕಿನ್ ಸಿನೆಮಾ ಎಂದಿಗೂ ಇಂಡಿಯಾದ ಇತರ ಭಾಷೆಗಳ ಅಥವಾ ತನ್ನದೇ ನೆಲದ ತಮಿಳು ಸಿನೆಮಾದಂತೆಯೂ ಇರುವುದಿಲ್ಲ. ತಮಿಳು ಸಿನೆಮಾಗಳಿಗೆ ಹೊಸ ವ್ಯಾಕರಣ ಮತ್ತು ಹೊಸ ನುಡಿಗಟ್ಟು ಕಟ್ಟಿಕೊಟ್ಟ ಕೆಲವೇ ಕೆಲವು ಮಂದಿಯಲ್ಲಿ ಮಿಷ್ಕಿನ್ ಮೊದಲ ಸಾಲಿನಲ್ಲಿ ನಿಲ್ಲುತ್ತಾನೆ. ಅವಮಾನ, ಯಾತನೆ, ಸಂಕಟಗಳನ್ನು ಮೀರುವ ಘಳಿಗೆಗಳಲ್ಲಿ ಮಿಷ್ಕಿನ್ ನಾವೆಂದೂ ನೋಡಿರದ ಸಣ್ಣಸಣ್ಣ ಸಂಗತಿಗಳಿಂದಲೂ ಬದುಕಿಗೆ ಬೇಕಿರುವ ದೊಡ್ಡಪಾಠಗಳನ್ನು ಹೆಕ್ಕಿ ತೆಗೆಯಬಲ್ಲ. ಮಿಷ್ಕಿನ್ ಸಿನೆಮಾವೊಂದು ನೋಡಿಯಾದ ಮೇಲೆ ಯಾರೊಂದಿಗೂ ಮಾತು ಬೇಕು ಅನ್ನಿಸುವುದಿಲ್ಲ. ಮೌನವಷ್ಟೇ ನಮ್ಮನ್ನು ತೀವ್ರವಾಗಿ ಆವರಿಸಿಕೊಳ್ಳುವುದು. ಸುಲಭಕ್ಕೆ ಹೇಳಿಕೊಳ್ಳಲಾಗದ ಈ ವಿಚಿತ್ರ ಸಂಕಟ ಒಂದೆರಡು ದಿನಗಳಲ್ಲಿ ಮಾಯವಾಗುವಂಥದ್ದಲ್ಲ.ಮಿಷ್ಕಿನ್ ತನ್ನನ್ನು ತಾನೇ ಸುಟ್ಟುಕೊಂಡು ದಗ್ಧ ಕತೆಗಳನ್ನು ದಿಟ್ಟವಾಗಿ ಹೇಳಬಲ್ಲ ಗಟ್ಟಿಗ.

ನಾನು ಓದಿದ ಓದಿಗೂ, ಮಾಡುತ್ತಿದ್ದ ಕೆಲಸಕ್ಕೂ, ಬದುಕುತ್ತಿದ್ದ ರೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನಿಸುವಂತೆ ಮಾಡಿದ್ದು ಮಿಷ್ಕಿನ್ ಮತ್ತು ಆತನ ಸಿನೆಮಾಗಳು. ಅದರಲ್ಲೂ ಮಿಷ್ಕಿನ್‌ನ ‘ನಂದಲಾಲ’. 2010ರಲ್ಲಿ ತೆರೆಕಂಡ ‘ನಂದಲಾಲ’ ನೋಡಿ ಈ ಚಿತ್ರದ ಗುಂಗಿನಿಂದ ಸುಲಭಕ್ಕೆ ಹೊರಬರಲಾಗದೆ ತೀವ್ರವಾಗಿ ಚಡಪಡಿಸಿ ನಾನು ನನ್ನ ಬದುಕಿನ ಸಹಜ ಸ್ಥಿತಿಗೆ ಮರಳಲು ಮೂರು ತಿಂಗಳು ಬೇಕಾಯಿತು. ಆ ಮೂರು ತಿಂಗಳ ಅವಧಿ ನನ್ನ ಪಾಲಿಗೆ ಸ್ವರ್ಗ ನರಕ ಎರಡನ್ನೂ ದರ್ಶನ ಮಾಡಿಸಿದವು. ಯಾರೊಂದಿಗೂ ಹೆಚ್ಚು ಮಾತಿಲ್ಲ, ಸದಾ ಒಂಟಿಯಾಗಿರಲು ಮನಸ್ಸು ತಹತಹಿಸುತ್ತಿತ್ತು.

ಜಗತ್ತಿನ ಎಲ್ಲಾ ಯಶಸ್ವಿ ನಿರ್ದೇಶಕರಂತೆ ತನ್ನಿಷ್ಟಕ್ಕೆ ಸರಿಹೊಂದುವ ಸ್ವಂತ ಕತೆ ಮಾಡಿಕೊಂಡು ನಿರ್ಮಾಪಕರ ಬಳಿ ಮಿಷ್ಕಿನ್ ಹೋದಾಗ ಸಿಕ್ಕ ಉತ್ತರ ಪ್ರಶ್ನೆಗಳ ರೂಪದಲ್ಲಿತ್ತು: ‘ಇಲ್ಲಿ ನಿನ್ನ ಗುರು ಯಾರು? ಯಾರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೇ? ಎಷ್ಟು ಸಿನೆಮಾಗಳಲ್ಲಿ ಕೆಲಸಮಾಡಿರುವೆ?’ ಬೇರೆ ದಾರಿಕಾಣದೆ ಮಿಷ್ಕಿನ್ ಮನಸ್ಸಿಲ್ಲದಿದ್ದರೂ ನಿರ್ದೇಶಕ ವಿನ್ಸೆಂಟ್ ಸೆಲ್ವಾ ಬಳಿ ‘ಯೂತ್’ ಮತ್ತು ‘ಜಿತ್ತಾನ್’ ಎಂಬೆರಡು ಸಿನೆಮಾಗಳ ಸಹನಿರ್ದೇಶಕನಾಗಿ ಕೆಲಸ ಮಾಡಬೇಕಾಯಿತು. ಈ ಎರಡೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಸಿನೆಮಾಗಳೇ. ಈ ಎರಡೂ ಸಿನೆಮಾಗಳ ಶೂಟಿಂಗ್ ಸಂದರ್ಭದಲ್ಲಿ ತನ್ನ ಸ್ವಂತದ ಕತೆ ಸಿನೆಮಾ ಆಗಲಾರದೇನೋ ಎಂಬ ಭಯದಲ್ಲಿ ಮಿಷ್ಕಿನ್ ಖಿನ್ನತೆಗೆ ಒಳಗಾದದ್ದೂ ಇದೆ.

ನಂದಲಾಲದ ವಿಶಿಷ್ಟವೆಂದರೆ ಇಡೀ ಚಿತ್ರದ ದೃಶ್ಯಗಳನ್ನು ಮಿಷ್ಕಿನ್ ಸ್ಥಿರಚಿತ್ರಗಳಂತೆ ಕಡೆದು ತೆರೆಗೆ ತಂದಿರುವುದು. ನೆಲದ ಮೂಲಕ, ಮನುಷ್ಯರ ಕಾಲುಗಳ ಮೂಲಕ ದೃಶ್ಯ ಚಿತ್ರೀಕರಿಸಿರುವ, ಕತೆ ಹೇಳಹೊರಟಿರುವ ಮಿಷ್ಕಿನ್ ತಂತ್ರ ತೆರೆಯ ಮೇಲೆಯೇ ಅನೇಕ ಮೆಟಫರ್‌ಗಳನ್ನು ಸೃಜಿಸಿದೆ. ಬಾಲ್ಯದಲ್ಲಿ ತನ್ನ ತಾಯಿಯಿಂದ ದೂರಾಗಿ ಖಿನ್ನತೆಗೊಳಗಾಗಿ ನರಳಿದ್ದು ನಂದಲಾಲದ ಚಿತ್ರಕಥೆ ಕಟ್ಟುವಲ್ಲಿ ನೆರವಿಗೆ ಬಂತು ಎಂದು ಮಿಷ್ಕಿನ್ ಹೇಳಿಕೊಂಡದ್ದು ಉಂಟು. ‘‘ನಂದಲಾಲ ನನ್ನದೇ ಬದುಕು; ಮತ್ತೆ ದೊಡ್ಡತೆರೆಗೆ ತಂದು ನನ್ನನ್ನು ನಾನು ನೋಡಿಕೊಂಡಿದ್ದೇನೆ, ಅಷ್ಟೇ’’ ಎಂದು ಮಿಷ್ಕಿನ್ ಹೇಳಲು ಮರೆಯುವುದಿಲ್ಲ.

ಮೂವತ್ತರ ಪ್ರಾಯದ ಅದೇ ಆಗಷ್ಟೆ ಬರೀ ಮಾನಸಿಕ ರೋಗಿಗಳೆ ತುಂಬಿಕೊಂಡ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಮಾನಸಿಕ ಅಸ್ವಸ್ಥನೊಬ್ಬ ಎಂಟರ ಹರೆಯದ ಪುಟ್ಟ ಬಾಲಕನ ಜತೆಗೂಡಿ ತಮ್ಮ ತಮ್ಮ ತಾಯಂದಿರನ್ನು ಹುಡುಕಲು ಹೆದ್ದಾರಿಯೊಂದನ್ನು ಆಶ್ರಯಿಸುವ ಕತೆಯೇ ‘ನಂದಲಾಲ’. ತಾನು ಹುಟ್ಟಿದ ಕೂಡಲೇ ತನ್ನನ್ನು ತೊರೆದು ಮರೆಯಾಗಿರುವ ತಾಯಿಯನ್ನು ನೋಡಲೇಬೇಕೆಂಬ ತೀವ್ರ ತಹತಹದಲ್ಲಿರುವ ಆ ಪುಟ್ಟ ಬಾಲಕನಿಗೆ ತನ್ನ ತಾಯಿಯ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಬಾಲ್ಯದಲ್ಲಿ ತನ್ನನ್ನು ಹುಚ್ಚಾಸ್ಪತ್ರೆ ಪಾಲುಮಾಡಿ ತನ್ನಿಂದ ದೂರವಾಗಿರುವ ತಾಯಿಯನ್ನು ನೆನೆ ನೆನೆದು ಆ ಮಾನಸಿಕ ಅಸ್ವಸ್ಥ ಕ್ಷಣಕ್ಷಣಕ್ಕೂ ಕ್ರೋಧಗೊಳ್ಳುತ್ತಾನೆ. ಸಿಟ್ಟಿನಿಂದ ಕುದಿಯುತ್ತಾನೆ; ಕೊಲ್ಲುವ ಮಾತಾಡುತ್ತಾನೆ.

ಓನಾಯುಮ್ ಆಟ್ಟುಕುಟ್ಟಿಯುಮ್ ನೋಡಿ ಚೇತರಿಸಿಕೊಳ್ಳಲು ತುಂಬಾ ದಿನಗಳು ಬೇಕಾದವು. ಮಿಷ್ಕಿನ್ ಸೃಷ್ಟಿಸಿದ ‘ಕಪ್ಪುರಾತ್ರಿ’ಯ ಅಗಾಧ ಕ್ಯಾನ್ವಾಸ್ ಮತ್ತು ಇಳಯರಾಜರ ಹಾಡುಗಳಿಲ್ಲದ ಸಂಗೀತ ಉಳಿದ ತಮಿಳು ಸಿನೆಮಾಗಳಿಗಿಂತ ಈ ಚಿತ್ರವನ್ನು ಬೇರೆಯದೆ ಸಾಲಿನಲ್ಲಿ ನಿಲ್ಲಿಸಿತು. ನಟನೆ ಮತ್ತು ನಿರ್ದೇಶನದಲ್ಲಿ ಮಿಷ್ಕಿನ್ ಇನ್ನಷ್ಟು ಮಾಗಿದ ಎಲ್ಲ ಕುರುಹುಗಳು ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡವು. ಸೇಡುಕೇಡಿನ ಗ್ಯಾಂಗ್‌ಸ್ಟರ್ ಸಿನೆಮಾಗಳಿಗೆ ಮುಡಿಪು ಅರ್ಪಿಸುವ ರೂಪದಲ್ಲಿ ‘ಓನಾಯುಮ್ ಆಟ್ಟುಕುಟ್ಟಿಯುಮ್’ ಕಂಡಿತು. ‘ದಿ ಹಿಂದೂ’ ಪತ್ರಿಕೆಯಂತೂ ಈ ಚಿತ್ರವನ್ನು ವಿಶ್ವದರ್ಜೆಯ ಸಿನೆಮಾವೆಂದು ಬಣ್ಣಿಸಿ ಕೊಂಡಾಡಿತು. ಮಿಷ್ಕಿನ್ ಪ್ರತಿಭೆ ಇನ್ನಷ್ಟು ಎತ್ತರದ ಜಿಗಿತ ಕಂಡ ಸಿನೆಮಾ ಇದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)