varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಒಳಮೀಸಲಾತಿಯ ಒಳಬಿಕ್ಕಟ್ಟು

ವಾರ್ತಾ ಭಾರತಿ : 7 Dec, 2018
ದಿನೇಶ್ ಅಮೀನ್ ಮಟ್ಟು

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ದಿನೇಶ್ ಅಮೀನ್ ಮಟ್ಟು ಅವರು ನಾಡಿನ ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿರುವವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಹೊರಹೊಮ್ಮಿದ ಅಮೀನ್ ಮಟ್ಟು, ನಾಡಿನ ಪ್ರಮುಖಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಮಾತ್ರವಲ್ಲ, ಅಂಕಣಕಾರರಾಗಿಯೂ ಗುರುತಿಸಿಕೊಂಡವರು. ಬರಹಕ್ಕಷ್ಟೇ ಸೀಮಿತವಾಗಿ ಉಳಿಯದೆ, ಪ್ರಗತಿ ವಿರೋಧಿ ಶಕ್ತಿಗಳ ವಿರುದ್ಧ ಸಂಘಟಿತವಾಗಿ ಬೀದಿಗಿಳಿದು ಮಾತನಾಡುತ್ತಿರುವವರು.

ದಿನೇಶ್ ಅಮೀನ್ ಮಟ್ಟು

ಸಾಮಾಜಿಕ ನ್ಯಾಯದ ಮೊದಲನೇ ಹಂತ ಸಾಮಾನ್ಯ ಮೀಸಲಾತಿಯಾದರೆ, ಎರಡನೇ ಹಂತ ಒಳಮೀಸಲಾತಿ. ಇದು ವೈಜ್ಞಾನಿಕವಾದುದು ಮಾತ್ರವಲ್ಲ ಸಾಮಾಜಿಕ ನ್ಯಾಯದ ಬಂಡಿಯ ಪಯಣ ನೈಸರ್ಗಿಕವಾಗಿ ಮುಂದಕ್ಕೆ ಸಾಗಲು ನೆರವಾಗುವಂತಹದ್ದು. ಆದರೆ ಅವಕಾಶಗಳ ಸಮಾನ ಹಂಚಿಕೆ ಮೂಲಕ ತಳಸಮುದಾಯಕ್ಕೆ ಬಲ ತಂದುಕೊಡಬಲ್ಲ ಒಳಮೀಸಲಾತಿ ಇತ್ತೀಚಿನ ದಿನಗಳಲ್ಲಿ ಒಳಬಿಕ್ಕಟ್ಟುಗಳಿಗೆ ಕಾರಣವಾಗುತಿ್ತರುವುದು ವಿಷಾದನೀಯ ಬೆಳವಣಿಗೆ.

ಮೀಸಲಾತಿಯನ್ನು ಯಾವುದೇ ಜಾತಿ, ವರ್ಗ, ಪಕ್ಷ ಇಲ್ಲವೇ ಪ್ರಭುತ್ವ ಇಂದು ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿ ಇಲ್ಲ. ನೇರಾನೇರ ವಿರೋಧ, ಮಂಡಲ ವಿರೋಧಿ ಚಳವಳಿಗೆ ಕೊನೆಯಾಯಿತು. ನೇರ ದಾರಿ ಕಾಣದೆ ಹೋದಾಗ ಅಡ್ಡದಾರಿಯ ಕುತಂತ್ರ-ಕುಚೇಷ್ಟೆಗಳು ಹುಟ್ಟಿಕೊಳ್ಳುತ್ತವೆ. ಮಂಡಲ ವರದಿ ಜಾರಿಯನ್ನು ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡವರು, ಆ ರೀತಿಯ ತಿಳಿಗೇಡಿ ವರ್ತನೆಗೆ ಹುರಿದುಂಬಿಸಿದ ಪಕ್ಷ ಮತ್ತು ಸಂಘಟನೆಗಳು ಕೂಡಾ ಇಂದು ಬಹಿರಂಗವಾಗಿ ಮೀಸಲಾತಿಯನ್ನು ವಿರೋಧಿಸಲಾಗದ ಅಸಹಾಯಕತೆಯಲ್ಲಿವೆ. ಇದು ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಂದಿರುವ ಮೊದಲ ಜಯ.

ಈ ಗೆಲುವಿಗೆ ನಂತರದ ದಿನಗಳಲ್ಲಿ ಇಡೀ ದೇಶದಲ್ಲಿ ನಡೆದ ರಾಜಕೀಯ ಪಲ್ಲಟಗಳು ಕಾರಣ. ಅಲ್ಲಿಯ ವರೆಗೆ ಮೀಸಲಾತಿ ಎಂದರೆ ದಲಿತರ ವಿಷಯ ಎಂದು ನಿರ್ಲಕ್ಷದಿಂದಿದ್ದ ಶೇ.27ರಷ್ಟಿರುವ ಹಿಂದುಳಿದ ಜಾತಿಗಳು ಮಂಡಲೋತ್ತರದ ದಿನಗಳಲ್ಲಿ ಪಡೆದುಕೊಂಡು ಬಂದ ರಾಜಕೀಯ ಬಲ ಈ ಬದಲಾವಣೆಗೆ ಕಾರಣ. ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲದೆ ಇದ್ದರೂ ಮಂಡಲೋತ್ತರದ ದಿನಗಳಲ್ಲಿ ಉಂಟಾದ ರಾಜಕೀಯ ಜಾಗೃತಿಯ ಮೂಲಕ ಪಡೆದುಕೊಂಡ ರಾಜಕೀಯ ಪ್ರಾತಿನಿಧ್ಯ ಮತ್ತು ನಾಯಕತ್ವ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ಶಕ್ತಿ ನೀಡಿದೆ.

ಕಮಂಡಲದ ವಿರುದ್ಧ ಉತ್ತರಭಾರತದಲ್ಲಿ ಗಟ್ಟಿಯಾಗಿ, ಅಷ್ಟೇ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ದನಿ ಎತ್ತಿದ್ದು ಮುಲಾಯಂ ಸಿಂಗ್ ಯಾದವ್ ಮತ್ತು ಲಾಲುಪ್ರಸಾದ್ ಯಾದವ್ ಎಂಬ ಮಂಡಲೋತ್ತರ ರಾಜಕೀಯ ನಾಯಕರು. ಅವರಿಗೆ ಜೊತೆಯಾದವರು ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್. ಈ ಮೂವರೂ ನಾಯಕರು ಮಂಡಲ್ ವರದಿ ಜಾರಿಯ ನಾಯಕ ವಿ.ಪಿ.ಸಿಂಗ್ ಬೆಂಬಲಿಗರು. ಬಾಬರಿ ಮಸೀದಿ ಧ್ವಂಸದ ಕಾಲದ ಕಾಂಗ್ರೆಸ್ ನಡವಳಿಕೆಯಿಂದ ಆಘಾತಕ್ಕೀಡಾಗಿದ್ದ ಮುಸ್ಲಿಮರಿಗೆ ರಥಯಾತ್ರೆಗೆ ಸವಾಲು ಹಾಕಿದ್ದ ಮುಲಾಯಂಸಿಂಗ್ ಮತ್ತು ಲಾಲುಪ್ರಸಾದ್ ತಮ್ಮ ರಕ್ಷಣೆಗೆ ಜನ್ಮವೆತ್ತು ಬಂದ ಅವತಾರ ಪುರುಷರಂತೆ ಕಂಡಿದ್ದರು. ದಲಿತ, ಹಿಂದುಳಿದ ಜಾತಿ ಮತ್ತು ಮುಸ್ಲಿಮರ ರಾಜಕೀಯ ಧ್ರುವೀಕರಣದ ಮೂಲಕ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಅಹಿಂದ ಸಂಘಟನೆ ಹರಳುಗಟ್ಟುತ್ತಿತ್ತು. ಮುಲಾಯಂಸಿಂಗ್ ಮಾಡಿದ ಒಂದು ಸಣ್ಣ ಯಡವಟ್ಟು ಈ ಚಳವಳಿಯನ್ನು ಹುಟ್ಟುವ ಮೊದಲೇ ಸಾಯಿಸಿಬಿಟ್ಟಿತು. ಮಾಯಾವತಿಯವರನ್ನು ರಾಜ್ಯ ಅತಿಥಿಗೃಹದಲ್ಲಿ ದಿಗ್ಬಂಧನದಲ್ಲಿರಿಸಿ ನೀಡಿದ ಕಿರುಕುಳದಿಂದ ಸಿಡಿದೆದ್ದ ಕಾನ್ಸಿರಾಮ್ ರಾಜಕೀಯ ತಂತ್ರದ ಭಾಗವಾಗಿ ಬಿಜೆಪಿ ಬೆಂಬಲದ ಮೂಲಕ ಮಾಯಾವತಿಯವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿಯೇ ಬಿಟ್ಟರು.

ಸೋಷಿಯಲ್ ಇಂಜಿನಿಯರಿಂಗ್

ಗೋವಿಂದಾಚಾರ್ಯ

ಮಂಡಲೋತ್ತರ ರಾಜಕೀಯ ಧ್ರುವೀಕರಣದಿಂದ ಆಘಾತಕ್ಕೀಡಾಗಿದ್ದ ಬಿಜೆಪಿ ಮತ್ತು ಸಂಘ ಪರಿವಾರ ಉತ್ತರಪ್ರದೇಶದ ಹಠಾತ್ ರಾಜಕೀಯ ಬೆಳವಣಿಗೆಯಿಂದ ದೊಡ್ಡದಾಗಿ ನಿಟ್ಟುಸಿರು ಬಿಟ್ಟಿತು. ಬಿಜೆಪಿಯ ಒಡೆದು ಆಳುವ ನೀತಿ ಪ್ರಾರಂಭವಾಗಿದ್ದೇ ಅಲ್ಲಿಂದ. ದಲಿತ, ಹಿಂದುಳಿದ- ಅಲ್ಪಸಂಖ್ಯಾತ ಸಮುದಾಯಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುತ್ತಲೇ ಬಂದಿದ್ದಾರೆ.

ಪ್ರತಿಯೊಂದು ಜಾತಿಯೊಳಗೆ ನೂರಾರು ಉಪಜಾತಿಗಳು ಮತ್ತು ವರ್ಗಗಳಿವೆ ಎಂಬ ವಾಸ್ತವ ಅರಿವಾಗುತ್ತಿದ್ದಂತೆಯೇ ರಾಜಕಾರಣಿಗಳು ಜಾಗೃತರಾದರು. ಆಗಲೇ ಸಂಘ ಪರಿವಾರದ ಐಡಲಾಗ್ ಗೋವಿಂದಾಚಾರ್ಯರು ‘’ಸೋಷಿಯಲ್ ಇಂಜನಿಯರಿಂಗ್’’ ಎನ್ನುವ ಕಾರ್ಯತಂತ್ರವನ್ನು ಸಾಮಾಜಿಕ ನ್ಯಾಯದ ಚಳವಳಿಗೆ ಎದುರಾಗಿ ಹುಟ್ಟುಹಾಕಿದರು. ಉತ್ತರಪ್ರದೇಶದಲ್ಲಿ ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಮತ್ತು ಹಿಂದುಳಿದ ಜಾತಿಗಳೆಂದು ವರ್ಗೀಕರಿಸಿ, ಯಾದವರ ವಿರುದ್ಧ ಇತರ ಹಿಂದುಳಿದ ಜಾತಿಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದರು, ಅದು ಈಗಲೂ ಮುಂದುವರಿದಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಲಾಲುಪ್ರಸಾದ್ ಅವರನ್ನು ಮಣಿಸಿದ್ದೇ ಈ ಸೂತ್ರದಿಂದ. ಹಿಂದುಳಿದ ಜಾತಿಗಳಲ್ಲಿ ಶೇ.16ರಷ್ಟಿರುವ ಯಾದವರಿಗೆ ಎದುರಾಗಿ ಕುರ್ಮಿ ಜನಾಂಗದ ನಿತೀಶ್ ಕುಮಾರ್ ಇತರ ಸಣ್ಣ ಹಿಂದುಳಿದ ಜಾತಿಗಳನ್ನು ಸಂಘಟಿಸಿ ಲಾಲುಪ್ರಸಾದ್ ಅವರನ್ನು ಮಣಿಸಿದರು. ಕರ್ನಾಟಕದಲ್ಲಿಯೂ ದಲಿತರಲ್ಲಿನ ಎಡ-ಬಲ ಗುಂಪುಗಳ ನಡುವಿನ ಸಂಘರ್ಷವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡು ಬೆಳೆದದ್ದು ಈಗ ಇತಿಹಾಸ. ಇವೆಲ್ಲವನ್ನೂ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದು ಹಿಂದುಳಿದ ಮತ್ತು ಅತಿಹಿಂದುಳಿದವರ ವರ್ಗೀಕರಣದ ಬೇಡಿಕೆ ಮೂಲಕ. ಈ ಬೇಡಿಕೆ ವೈಜ್ಞಾನಿಕವಾದುದಾದರೂ ಬಳಕೆಯಾದದ್ದು ಮಾತ್ರ ಅಹಿಂದದ ಒಗ್ಗಟ್ಟನ್ನು ಮುರಿಯಲು.

ಒಬಿಸಿ ಮೀಸಲು ವರ್ಗೀಕರಣ

ಇದರ ವಾಸನೆ ಈಗ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಮೂಗಿಗೂ ಬಡಿದಿದೆ. ತನ್ನನ್ನು ಅತೀ ಹಿಂದುಳಿದ ಗಾಣಿಗ ಸಮುದಾಯಕ್ಕೆ ಸೇರಿದವನೆಂದು ಇತ್ತೀಚೆಗೆ ಹೆಚ್ಚೆಚ್ಚು ಹೇಳಿಕೊಳ್ಳುತ್ತಿರುವ ಪ್ರಧಾನಿಯವರು ಕಳೆದ ವರ್ಷವಷ್ಟೇ ಹಿಂದುಳಿದ ಜಾತಿಗಳ ಮೀಸಲಾತಿ ವರ್ಗೀಕರಣದ ಅಧ್ಯಯನಕ್ಕಾಗಿ ನ್ಯಾಯಮೂರ್ತಿ ರೋಹಿಣಿ ಸಿಂಗ್ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿದ್ದಾರೆ. ಇದರ ನಂತರ ಬಹಳ ದಿನಗಳಿಂದ ಮೀಸಲಾತಿ ವರ್ಗೀಕರಣದ ಬೇಡಿಕೆ ಮಂಡಿಸುತ್ತಿದ್ದ ಮುಸ್ಲಿಮ್ ಸಮುದಾಯ ಕೂಡಾ ಜಾಗೃತವಾಗಿದೆ.

ರೋಹಿಣಿ ಸಿಂಗ್ ಆಯೋಗವನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಸ್ಲಿಮ್ ನಿಯೋಗ, ಹಿಂದುಳಿದ ಜಾತಿಗಳಿಗಾಗಿ ಕೇಂದ್ರ ಸರಕಾರ ನೀಡುತ್ತಿರುವ ಶೇ.27 ಮೀಸಲಾತಿಯನ್ನು ವರ್ಗೀಕರಿಸಿ ಹಿಂದುಳಿದ ಮುಸ್ಲಿಮರಿಗೆ ಶೇ.5ರಷ್ಟು ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿದೆ. ಕೇಂದ್ರ ಸರಕಾರದ ಇತರ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಹಿಂದುಳಿದ ಮುಸ್ಲಿಮರನ್ನು ಸೇರಿಸಲಾಗಿದ್ದರೂ ಅವರಿಗೆ ಸರಕಾರಿ ಉದ್ಯೋಗ ಮತ್ತು ಸರಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುತ್ತಿರುವ ಪ್ರಾತಿನಿಧ್ಯ ಶೇ.1ಕ್ಕಿಂತಲೂ ಕಡಿಮೆ ಎಂಬ ವಾದವನ್ನು ನಿಯೋಗ ಮುಂದಿಟ್ಟಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ 14 ಮುಸ್ಲಿಮ್ ಜಾತಿಗಳಿಗೆ ಶೇ.4ರಷ್ಟು ಪ್ರತ್ಯೇಕ ಮೀಸಲಾತಿ ನೀಡುತ್ತಿರುವುದನ್ನು ನಿಯೋಗ ಉಲ್ಲೇಖಿಸಿದೆ. ಕರ್ನಾಟಕದಲ್ಲಿನ ಹಿಂದುಳಿದ ಜಾತಿಗಳ ಮೀಸಲಾತಿಯಲ್ಲಿ 2ಬಿ ಗುಂಪಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗುತ್ತಿದೆ. ಇದೇ ರೀತಿ ಆಂಧ್ರಪ್ರದೇಶ, ಹರ್ಯಾಣ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಕೂಡಾ ಹಿಂದುಳಿದ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕನಿಷ್ಠ ಮೂರು ತೀರ್ಪುಗಳಲ್ಲಿ ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ವರ್ಗೀಕರಣವನ್ನು ಎತ್ತಿ ಹಿಡಿದಿದೆ.

ಹಿಂದುಳಿದ ಜಾತಿಗಳ ಒಳಮೀಸಲಾತಿಯ ಚರ್ಚೆ ಮೊದಲು ಪ್ರಾರಂಭವಾಗಿದ್ದು ಮಂಡಲ್ ವರದಿಯ ಜಾರಿಯ ಸಂದರ್ಭದಲ್ಲಿ. ಮಂಡಲ್ ಆಯೋಗದ ಸದಸ್ಯರಾಗಿದ್ದ ಕರ್ನಾಟಕದ ಎಲ್.ಆರ್. ನಾಯಕ್ ಅವರು ವರದಿಯಲ್ಲಿ ಭಿನ್ನಮತದ ಅಭಿಪ್ರಾಯ ದಾಖಲಿಸಿದ್ದರು. ಹಿಂದುಳಿದ ಜಾತಿಗಳನ್ನು ಒಟ್ಟಾಗಿ ಒಂದೇ ಗುಂಪಿಗೆ ಸೇರಿಸದೆ ಅದರಲ್ಲಿ ಭೂಮಾಲಕ ಮಧ್ಯಮ ಜಾತಿಗಳು ಮತ್ತು ಡಿಪ್ರೆಸ್ಡ್ ಜಾತಿಗಳೆಂಬ ವರ್ಗೀಕರಣ ಮಾಡಿ ಒಳಮೀಸಲಾತಿ ನೀಡಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಈ ಭಿನ್ನಾಭಿಪ್ರಾಯ ಮಂಡಲ್ ವರದಿಯ ಮೊದಲ ಪುಟದಲ್ಲಿಯೇ ದಾಖಲಾಗಿದ್ದರೂ ಅದರ ಬಗ್ಗೆ ಹೆಚ್ಚಿನ ಚರ್ಚೆ ನಡೆದೇ ಇರಲಿಲ್ಲ. ಇತ್ತೀಚಿನ ಹಲವಾರು ಬೆಳವಣಿಗೆಗಳಿಂದಾಗಿ ಒಳಮೀಸಲಾತಿ ಎನ್ನುವುದು ಈಗ ಅಹಿಂದ ವರ್ಗದ ಮಡಿಲಲ್ಲಿರುವ ಸುಡು ಸುಡು ಕೆಂಡ.

ಮೊದಲು ಪಂಜಾಬ್ನಲ್ಲಿ

ರಾಜ್ಯದಲ್ಲಿ ಈಗ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯೊಳಗೆ ಸಂಘರ್ಷ ಪ್ರಾರಂಭವಾಗಿದೆ. ಈ ವಿವಾದ ಹೊಸದೇನಲ್ಲ. ಒಳಮೀಸಲಾತಿ ವಿಷಯ ಚರ್ಚೆಗೆ ಬಂದಾಗೆಲ್ಲ ಅದು ವಿವಾದ ರೂಪು ಪಡೆಯುತ್ತಲೇ ಬಂದಿದೆ.

ಒಳಮೀಸಲಾತಿಯ ಬೇಡಿಕೆ ಮೊದಲು ಕೇಳಿಬಂದದ್ದು ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಪರಿಶಿಷ್ಟ ಜಾತಿಯ ಜನಸಂಖ್ಯೆ (ಶೇ.29.1) ಇರುವ ಪಂಜಾಬ್ನಲ್ಲಿ. 37 ಜಾತಿಗಳನ್ನೊಳಗೊಂಡ ಅಲ್ಲಿನ ಪರಿಶಿಷ್ಟ ಜಾತಿಯೊಳಗೆ ಮುಖ್ಯವಾಗಿ ಮೂರು ಗುಂಪುಗಳಿವೆ 1. ಶೇ.42ರಷ್ಟಿರುವ ಮಜಬಿ ಸಿಖ್ಖ್ ಮತ್ತು ವಾಲ್ಮೀಕಿ/ಭಂಗಿಗಳು, 2. ಶೇ.41.59 ಇರುವ ಅದ್-ಧರ್ಮಿ ಮತ್ತು ಚಮ್ಮಾರ್ ಸಿಖ್ಖ್ಗಳು, 3. ಕೇವಲ ಶೇ.51 ಇರುವ ಉಳಿದ 33 ಜಾತಿಗಳು. ಆ ರಾಜ್ಯದಲ್ಲಿ ಪ್ರಾರಂಭದಿಂದಲೂ ಎರಡನೇ ಗುಂಪು ರಾಜಕೀಯ ಮತ್ತು ಆರ್ಥಿಕವಾಗಿ ಮುನ್ನಡೆಯಲ್ಲಿದೆ.

ಈ ಹಿನ್ನೆಲೆಯಲ್ಲಿ ಅಲ್ಲಿನ ವಾಲ್ಮೀಕಿ ಮತ್ತು ಮಜಬಿ ಸಿಖ್ಖ್ ಗಳ ಹೋರಾಟಕ್ಕೆ ಮಣಿದ ಪಂಜಾಬ್ ಸರಕಾರ ಮೀಸಲು ಹುದ್ದೆಗಳ ಶೇ.50ರಷ್ಟನ್ನು ಮಜಬಿ ಮತ್ತು ವಾಲ್ಮೀಕಿ ಸಿಖ್ಖರಿಗೆ ನೀಡಬೇಕೆಂದು 1975ರಲ್ಲಿಯೇ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಕಳುಹಿಸುವ ಮೂಲಕ ಒಳಮೀಸಲಾತಿಯನ್ನು ಜಾರಿಗೆ ತಂದಿತ್ತು. ಇದೇ ಮಾದರಿಯನ್ನು ಅನುಸರಿಸಿ 1994ರಲ್ಲಿ ಹರ್ಯಾಣ ಸರಕಾರ ಚಮ್ಮಾರ ಮತ್ತು ಚಮ್ಮಾರೇತರರಿಗೆ ತಲಾ ಶೇ. 50ರಷ್ಟು ಮೀಸಲಾತಿಯನ್ನು ವರ್ಗೀಕರಿಸಿತು. ಈ ವ್ಯವಸ್ಥೆ ಸುಮಾರು 30 ವರ್ಷ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯಿತು. ಆದರೆ ಯಾವಾಗ ಆಂಧ್ರಪ್ರದೇಶ ಸರಕಾರದ ಒಳಮೀಸಲಾತಿಯನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತೋ, ತಕ್ಷಣ ಪಂಜಾಬ್ -ಹರ್ಯಾಣಗಳಲ್ಲಿಯೂ ವಿರೋಧದ ಕೂಗು ಕೇಳತೊಡಗಿತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಂಜಾಬ್-ಹರ್ಯಾಣದ ಒಳಮೀಸಲಾತಿಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸ ಲಾಯಿತು. ಇದಕ್ಕೆ ತ್ವರಿತ ಗತಿಯಲ್ಲಿ ಪ್ರತಿಕ್ರಿಯಿಸಿದ ಪಂಜಾಬ್ ಸರಕಾರ ಒಳಮೀಸಲಾತಿ ನೀಡಿಕೆಯ 1975ರ ಸರಕಾರಿ ಆದೇಶವನ್ನು ಕಾಯ್ದೆಯಾಗಿ ಅಂಗೀಕರಿಸಿತು.

ಮಾದಿಗ ದಂಡೋರಾ

ಅದೇ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿಯೂ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮಾದಿಗ ದಂಡೋರಾ ಚಳವಳಿ ಪ್ರಾರಂಭಿಸಿತ್ತು. ಅವರ ಬೇಡಿಕೆಯನ್ನು ಪರಿಶೀಲಿಸಲು ಆಂಧ್ರಪ್ರದೇಶ ಸರಕಾರ 1996ರಲ್ಲಿ ನ್ಯಾಯಮೂರ್ತಿ ರಾಮಚಂದ್ರ ರಾಜು ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ಪರಿಶಿಷ್ಟ ಜಾತಿಯೊಳಗಿನ ಯಾವುದಾದರೂ ಒಂದು ಉಪಜಾತಿಗೆ ಜನಸಂಖ್ಯಾ ಪ್ರಮಾಣ ಮೀರಿ ಸೌಲಭ್ಯಗಳು ದಕ್ಕಿದೆಯೇ? ಹಾಗೆ ಆಗಿದ್ದರೆ ಅದನ್ನು ಸರಿಪಡಿಸುವ ಕಾರ್ಯವಿಧಾನಗಳನ್ನು ಶಿಫಾರಸು ಮಾಡಬೇಕೆಂಬ ಕಾರ್ಯಸೂಚಿಯನ್ನು ಆ ಆಯೋಗಕ್ಕೆ ನೀಡಲಾಗಿತ್ತು.

ನ್ಯಾ.ರಾಮಚಂದ್ರರಾಜು ಆಯೋಗ ಪರಿಶಿಷ್ಟ ಜಾತಿಯನ್ನು ನಾಲ್ಕು ಪಂಗಡಗಳಾಗಿ ವಿಂಗಡಿಸಿ ಮಾದಿಗ ಮತ್ತು ಮಲ್ಹಾರಿಗೆ ಶೇ.7, ಮಾಲಾಗಳಿಗೆ ಶೇ.6 ಮತ್ತು ರೆಲ್ಲಿ ಹಾಗೂ ಆದಿಗಳಿಗೆ ತಲಾ ಶೇ.1ರ ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸು ಮಾಡಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ‘‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಜತೆ ಸಮಾಲೋಚನೆ ನಡೆಸಿ ವರ್ಗೀಕರಣ ನಡೆಸಬೇಕು’’ಎಂದು ಹೈಕೋರ್ಟ್ ಆದೇಶ ನೀಡಿತು. ತಕ್ಷಣ ಆಂಧ್ರ ಸರಕಾರ ನ್ಯಾ. ರಾಮಚಂದ್ರರಾಜು ಆಯೋಗದ ಶಿಫಾರಸನ್ನು ಒಪ್ಪಿಕೊಂಡು ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳ ವರ್ಗೀಕರಣ ಮತ್ತು ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಎಡು ಆದೇಶಗಳನ್ನು ಹೊರಡಿಸಿತು.

ಈ ಆದೇಶಗಳನ್ನು ರದ್ದುಪಡಿಸಿದ ಆಂಧ್ರಪ್ರದೇಶ ಹೈಕೋರ್ಟ್ ಸಂವಿಧಾನದ 338(9) ಪರಿಚ್ಛೇದದ ಪ್ರಕಾರ ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿಯ ವರ್ಗೀಕರಣವನ್ನು ರಾಷ್ಟ್ರೀಯ ಪರಿಶಿಷ್ಟಜಾತಿಗಳ ಆಯೋಗದ ಜತೆ ಸಮಾಲೋಚನೆಯೊಂದಿಗೆ ನಡೆಸಬೇಕೆಂದು ಆದೇಶ ನೀಡಿತು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ ಆಂಧ್ರ ಸರಕಾರ ಜತೆಯಲ್ಲಿ ರಾಷ್ಟ್ರೀಯ ಆಯೋಗದ ಮುಂದೆಯೂ ಅರ್ಜಿ ಸಲ್ಲಿಸಿತು. ಆದರೆ ಈ ವರ್ಗೀಕರಣ ವೈಜ್ಞಾನಿಕವಾಗಿ ಮತ್ತು ತರ್ಕಸಮ್ಮತವಾಗಿ ನಡೆದಿಲ್ಲ ಮತ್ತು ಇದಕ್ಕಾಗಿ 1981ರ ಜನಗಣತಿಯನ್ನು ಬಳಸಲಾಗಿದೆ ಎಂಬ ಕಾರಣ ನೀಡಿ ಮೀಸಲು ವರ್ಗೀಕರಣವನ್ನು ತಿರಸ್ಕರಿಸಿತು. ಪರಿಶಿಷ್ಟ ಜಾತಿಯೊಳಗಿನ ಅಸಮಾನ ಹಂಚಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶವನ್ನು ನೀಡಿತು.

ಒಳಮೀಸಲಾತಿಗೆ ಹಿನ್ನಡೆ

ಈ ಆದೇಶಕ್ಕೆ ಸವಾಲು ಹಾಕುವ ರೀತಿಯಲ್ಲಿ ಆಂಧ್ರಪ್ರದೇಶ ಸರಕಾರ 2000ನೇ ವರ್ಷದಲ್ಲಿ ಸುಗ್ರೀವಾಜ್ಞೆಯ ಮೂಲಕ ಮೀಸಲಾತಿ ವರ್ಗೀಕರಣದ ಕಾಯ್ದೆಯನ್ನು ರಚಿಸಿತು. ಈ ಕಾಯ್ದೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ತಿರಸ್ಕರಿಸಿದಾಗ, ರಾಜ್ಯ ಸರಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು. ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನೊಳಗೊಂಡ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಮೂರು ಪ್ರಮುಖವಾದ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ವಿಚಾರಣೆ ನಡೆಸಿತು. 1. ಆಂಧ್ರಪ್ರದೇಶ ಸರಕಾರ ರಚಿಸಿದ ಕಾನೂನಿನಿಂದ ಸಂವಿಧಾನದ 341 (2)ರ ಉಲ್ಲಂಘನೆಯಾಗಿದೆಯೇ? 2. ಇಂತಹ ಕಾನೂನು ರಚಿಸುವ ಅಧಿಕಾರ ವಿಧಾನಮಂಡಲಕ್ಕೆ ಇಲ್ಲದೆ ಇರುವುದರಿಂದ ವಿವಾದಿತ ಕಾನೂನು ಅನೂರ್ಜಿತವಾಗುತ್ತದೆಯೇ? 3. ಈ ವಿವಾದಿತ ಕಾನೂನಿನಿಂದ ಸಂವಿಧಾನದ ಪರಿಚ್ಛೇದ 14 ರ ಉಲ್ಲಂಘನೆಯಾಗಿದೆಯೇ?

ಈ ಎಲ್ಲ ಪ್ರಶ್ನೆಗಳಿಗೆ ‘ಹೌದು’ ಎಂಬ ಉತ್ತರದ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್, ಪ್ರಶ್ನಿಸಲಾದ ಕಾಯ್ದೆಯನ್ನು ರದ್ದುಗೊಳಿಸಿತು. ಸಂವಿಧಾನದ 341ನೇ ಪರಿಚ್ಛೇದಡಿಯಲ್ಲಿ ತಯಾರಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಯ ಬದಲಾವಣೆಗೆ ಸಂಬಂಧಿಸಿದ ಕಾನೂನು ರಚಿಸುವ ಅಧಿಕಾರ ಸಂಸತ್ಗೆ ಮಾತ್ರ ಇರುತ್ತದೆ ಎಂದು ನ್ಯಾಯಾಲಯ ಹೇಳಿತು.

2005ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಈ ತೀರ್ಪು ಒಳಮೀಸಲಾತಿಯ ಹೋರಾಟದಲ್ಲಿ ಬಹುದೊಡ್ಡ ಹಿನ್ನಡೆ. ಒಳಮೀಸಲಾತಿಯನ್ನು ಅಂತರಂಗದಲ್ಲಿ ವಿರೋಧಿಸಿ, ಬಹಿರಂಗವಾಗಿ ಬೆಂಬಲಿಸುವವರಿಗೆ ಮತ್ತು ಇದರಲ್ಲಿ ಮತಬ್ಯಾಂಕಿನ ಛಿದ್ರೀಕರಣದ ರಾಜಕೀಯವನ್ನು ಕಾಣುವವರಿಗೆ ಈ ತೀರ್ಪು ಖುಷಿ ನೀಡಿದ್ದು ಕೂಡಾ ಸುಳ್ಳಲ್ಲ. ಕಳೆದ ಹದಿಮೂರು ವರ್ಷಗಳಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ವಿವಾದ ಈ ತೀರ್ಪಿನ ವ್ಯೆಹದಿಂದ ಹೊರಬರಲು ಸಾಧ್ಯವಾಗಿಲ್ಲ.

ನ್ಯಾ.ಉಷಾ ಮೆಹ್ರಾ ಸಮಿತಿ

ಇದರ ನಂತರ ಕೇಂದ್ರ ಸರಕಾರಕ್ಕೆ ಪತ್ರವೊಂದನ್ನು ಬರೆದ ಆಂಧ್ರಪ್ರದೇಶ ಸರಕಾರ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿರುವ ಕಾರಣ ಈ ವಿಷಯವನ್ನು ಕೇಂದ್ರ ಸರಕಾರ ಎತ್ತಿಕೊಂಡು ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡಿತು. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರಕಾರ 2006ರಲ್ಲಿ ದಿಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯಮೀಸಲು ವರ್ಗೀಕರಣ ಅಧ್ಯಯನ ಆಯೋಗವನ್ನು ರಚಿಸಿತು.

ಉಷಾ ಮೆಹ್ರಾ ಸಮಿತಿ ‘‘ಪರಿಶಿಷ್ಟ ಜಾತಿಯ ಮೀಸಲಾತಿಯ ವರ್ಗೀಕರಣ ಮಾಡಲು ಅನುಕೂಲವಾಗುವಂತಹ ಕಾಯ್ದೆ ರಚನೆಗಾಗಿ ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿ ಕಲಮ್ (3) ಸೇರಿಸಬೇಕು’’ ಎಂದು 2008ರ ಮೇ ಒಂದರಂದು ಶಿಫಾರಸು ಮಾಡಿತು. ಹತ್ತು ವರ್ಷಗಳು ಕಳೆದಿವೆ. ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ. ವಿವಾದ ಮುಂದುವರಿದಿದೆ, ಪ್ರತಿ ಚುನಾವಣೆಯ ಕಾಲದಲ್ಲಿ ವಿವಾದಕ್ಕೆ ಜೀವ ತುಂಬಲಾಗುತ್ತದೆ, ಮತ್ತೆ ಮೂಲೆಗೆ ತಳ್ಳಲಾಗುತ್ತದೆ.

ಕರ್ನಾಟಕದಲ್ಲಿ ಒಳಮೀಸಲಾತಿ

ಕರ್ನಾಟಕದಲ್ಲಿ ಒಳಮೀಸಲಾತಿಯ ಕೂಗು ಪರಿಶಿಷ್ಟ ಜಾತಿಯೊಳಗೆ ಕೇಳಲಾರಂಭಿಸಿದ್ದು ಆಂಧ್ರಪ್ರದೇಶದ ಮಾದಿಗ ದಂಡೋರಾದ ಹೋರಾಟದ ಸ್ಫೂರ್ತಿಯಿಂದ. ಆದರೆ ಇಲ್ಲಿನ ಸರಕಾರಗಳು ಪಂಜಾಬ್ ಮತ್ತು ಆಂಧ್ರ ಪ್ರದೇಶದ ಸರಕಾರಗಳಂತೆ ಒಳಮೀಸಲಾತಿ ಬಗ್ಗೆ ಸ್ಪಷ್ಟ ನಿಲುವನ್ನು ಕೈಗೊಳ್ಳಲು ಹಿಂಜರಿಯುತ್ತಲೇ ಬಂದಿವೆ. ಪ್ರಾರಂಭದ ದಿನಗಳಲ್ಲಿ ಎದುರಾದ ಸಹಜವಾದ ಅಡೆತಡೆಗಳು ಕೂಡಾ ಆಯೋಗ ಕಾರ್ಯಾರಂಭ ವಿಳಂಬವಾಗಲು ಕಾರಣಗಳಾದವು.

2004ರ ಜನವರಿ ತಿಂಗಳಲ್ಲಿಯೇ ಎನ್.ವೈ.ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಯಿತು, ನ್ಯಾ.ಹನುಮಂತಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾರಣ ಕಾರ್ಯಾರಂಭ ಮಾಡಲಿಲ್ಲ. ಅದರ ನಂತರ ನೂತನ ಆಯೋಗ ರಚನೆಗೆ ರಾಜ್ಯ ಸರಕಾರ ಎಂಟು ತಿಂಗಳ ಅವಧಿ ತೆಗೆದುಕೊಂಡಿತು. ಕೊನೆಗೂ ನ್ಯಾಯಮೂರ್ತಿ ಎಚ್.ಜಿ.ಬಾಲಕೃಷ್ಣ ಅವರ ನೇತೃತ್ವದ ಆಯೋಗ ರಚನೆಯಾದರೂ ಒಂದೇ ವರ್ಷದಲ್ಲಿ ಅವರೂ ನಿಧನರಾದರು. ಕೊನೆಗೂ 2005ರ ಸೆಪ್ಟಂಬರ್ ನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗ ರಚನೆಯಾಯಿತು.

ಈ ನಡುವೆ ಒಳಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯವಾದ ಬೆಳವಣಿಗೆಯೊಂದು ನಡೆದುಹೋಯಿತು. ಆಂಧ್ರಪ್ರದೇಶ ಸರಕಾರ ಒಳಮೀಸಲಾತಿ ಜಾರಿಗೊಳಿಸಿ ಸುಗ್ರೀವಾಜ್ಞೆಯ ಮೂಲಕ ರಚಿಸಿದ ಕಾಯ್ದೆಯನ್ನು 2004ರ ನವೆಂಬರ್ನಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. (ಇ.ವಿ.ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರಕಾರದ ನಡುವಿನ ಮೊಕದ್ದಮೆ) ಈ ಕಾರಣದಿಂದಾಗಿ ನ್ಯಾ.ಸದಾಶಿವ ಆಯೋಗದ ಕಾರ್ಯಸೂಚಿಯಲ್ಲಿ ಬದಲಾವಣೆ ಮಾಡಲಾಯಿತು. ಹಿಂದಿನ ಎರಡು ಆಯೋಗದ ಅಧ್ಯಯನದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆರಡನ್ನೂ ಸೇರಿಸಲಾಗಿತ್ತು, ಆದರೆ ಸದಾಶಿವ ಆಯೋಗದ ಕಾರ್ಯೋದ್ದೇಶದಲ್ಲಿ ಪರಿಶಿಷ್ಟ ಪಂಗಡವನ್ನು ಕೈ ಬಿಡಲಾಯಿತು.( ಮೂಲ ಕಾರ್ಯಸೂಚಿಯನ್ನೇ ಮುಂದುವರಿಸಿದ್ದರೆ ರಾಜ್ಯದಲ್ಲಿ ಇನ್ನಷ್ಟು ಅಲ್ಲೋಲಕಲ್ಲೋಲವಾಗುತ್ತಿತ್ತೋ ಏನೋ)

ದಾರಿ ತಪ್ಪಿಸುವ ವಿಶ್ಲೇಷಣೆ

ನ್ಯಾ.ಎ.ಜೆ.ಸದಾಶಿವ ಆಯೋಗ ಏಳು ವರ್ಷಗಳ ನಂತರ ತನ್ನ ವರದಿ ನೀಡಿತು. ರಾಜ್ಯ ಸರಕಾರ ವರದಿಯನ್ನು ಬಿಡುಗಡೆ ಮಾಡದೆ ಇರುವ ಕಾರಣ ವಿವಿಧ ಮೂಲಗಳಿಂದ ಸೋರಿಕೆಯಾಗುತ್ತಿರುವ ವರದಿಯ ಆಧಾರದಲ್ಲಿಯೇ ಇದಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ಚರ್ಚಿಸುತ್ತಿರುವ ಹಲವರು ಅಜ್ಞಾನದಿಂದ, ಕೆಲವೊಮ್ಮೆ ದುರುದ್ದೇಶದಿಂದ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.

ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕಾನಾಥ್ ಅವರು ಜಾಲತಾಣ ಮಾಧ್ಯಮದಲ್ಲಿ ಬರೆಯುತ್ತಾ, ‘‘200 ಪುಟಗಳ ವರದಿ’’ ಎಂದು ಹೇಳಿ ಅದರ ಆಧಾರದಲ್ಲಿಯೇ ವಿಶ್ಲೇಷಣೆ ನಡೆಸಿದರು. ಇದರ ಜತೆಗೆ 368 ಪುಟಗಳ ಎರಡು ವರದಿಗಳು ಹರಿದಾಡುತ್ತಿವೆ. ಒಂದರಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣವಷ್ಟೇ ಇದೆ, ಇನ್ನೊಂದು ವರದಿಯಲ್ಲಿ ಜಾತಿ ವರ್ಗೀಕರಣದ ಜತೆ ಮೀಸಲಾತಿ ವರ್ಗೀರಣವನ್ನು ಪೆನ್ನಿನಿಂದ ಬರೆಯಲಾಗಿದೆ.

ಲಭ್ಯ ಇರುವ ನ್ಯಾ.ಸದಾಶಿವ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.15ರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಇದರ ಪ್ರಕಾರ ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ) ಶೇ.ಆರು, ಶೇ.32ರಷ್ಟಿರುವ (ಬಲಗೈ) ಎರಡನೇ ಗುಂಪಿಗೆ ಶೇ.ಐದು, ಶೇ.23.64ರಷ್ಟಿರುವ ( ಸ್ಪರ್ಶ್ಯ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.ಮೂರು ಮತ್ತು ಶೇ.4.65 ರಷ್ಟಿರುವ ಇತರ ಪರಿಶಿಷ್ಟ ಜಾತಿಯವರಿಗೆ ಶೇ.ಒಂದರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಇದೇ ವೇಳೆ ಸ್ಪರ್ಶ್ಯ ಜಾತಿಗಳಾದ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿನಿಂದ ಹೊರಗಿಡಬೇಕೆಂಬ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ.

ಈ ವರ್ಗೀಕರಣವನ್ನು ಜಾರಿಗೊಳಿಸಲಿಕ್ಕಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮೂಲಕ ಕಾಯ್ದೆಯೊಂದನ್ನು ರಚಿಸುವಂತೆ ವಿಧಾನಮಂಡಲದಲ್ಲಿ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವಂತೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ.

ಈ ವರದಿಯ ಪ್ರಕಾರ ನಾಲ್ಕೂ ಗುಂಪಿನವರು ಮೀಸಲಾತಿ ಸೌಲಭ್ಯ ಸಮನಾಗಿ ಹಂಚಿಯಾಗಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪರಿಹಾರವನ್ನು ಸೂಚಿಸು ವಾಗ ಒಂದನೇ ಗುಂಪಿನವರು ಉಪಜಾತಿಗಳ ವರ್ಗೀಕರಣವಾಗಬೇಕು, ಸ್ಪಶ್ಯರನ್ನು ಪರಿಶಿಷ್ಟ ಜಾತಿಗುಂಪಿನಿಂದ ಹೊರಗಿಡಬೇಕು, ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ಪ್ರತಿಕುಟುಂಬಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಹೇಳಿದೆ.

ಎರಡನೇ ಗುಂಪಿನವರು ವರ್ಗೀಕರಣವನ್ನು ವಿರೋಧಿಸಿದ್ದಾರೆ, ಸ್ಪಶ್ಯರನ್ನು ಪರಿಶಿಷ್ಟ ಜಾತಿಗುಂಪಿನಿಂದ ಹೊರಗಿಡಬೇಕೆಂದು ಹೇಳಿರುವುದರ ಜತೆಗೆ ಈಗಿನ ಮೀಸಲಾತಿಯನ್ನು ಶೇ.15ರಿಂದ 30ಕ್ಕೆ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ಮೂರನೇ ಗುಂಪಿನವರು ವರ್ಗೀಕರಣವನ್ನು ವಿರೋಧಿಸಿದ್ದಾರೆ ಮತ್ತು ತಾಂಡಾಗಳನ್ನು ರೆವಿನ್ಯೂ ಗ್ರಾಮಗಳಾಗಿ ಪರಿವರ್ತಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ನಾಲ್ಕನೇ ಗುಂಪಿನವರು ತಮ್ಮ ಸಾಂಪ್ರದಾಯಿಕ ವೃತ್ತಿಗಳಿಗೆ ಹೆಚ್ಚಿನ ನೆರವು ನೀಡಬೇಕೆಂದು ಕೋರಿದ್ದಾರೆ.

ಕೆನೆಪದರ ನೀತಿಗೆ ಶಿಫಾರಸು

ಇವೆಲ್ಲಕ್ಕಿಂತಲೂ ಮುಖ್ಯವಾಗಿ ನ್ಯಾ.ಸದಾಶಿವ ಆಯೋಗ ಉದ್ಯೋಗಕ್ಕೆ ಸಂಬಂಧಿಸಿದಂತೆ ಬಹಳ ಅಪಾಯಕಾರಿಯಾದ ಶಿಫಾರಸು ಮಾಡಿದ್ದು ಅದು ಹೀಗಿದೆ:

1. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹಂಚಿಕೆ ಮಾಡುವಾಗ ಕೆನೆಪದರ ನೀತಿಯನ್ನು ಅನ್ವಯಿಸಬೇಕು.

2. ಈ ಮೀಸಲಾತಿ ಸೌಲಭ್ಯ ಸರಕಾರಿ ಸೇವೆಯ ಪ್ರಥಮ ಮತ್ತು ದ್ವಿತೀಯ ದರ್ಜೆಯ ಸರಕಾರಿ ಹುದ್ದೆಗಳಲ್ಲಿರುವವರ ಒಂದು ತಲೆಮಾರಿಗೆ ಮತ್ತು ಮೂರನೇ ದರ್ಜೆಯ ಸರಕಾರಿ ಹುದ್ದೆಗಳಲ್ಲಿರುವ ಎರಡನೇ ತಲೆಮಾರಿಗಷ್ಟೇ ಮೀಸಲಾತಿಯನ್ನು ಸೀಮಿತಗೊಳಿಸಬೇಕು.

3. ಐಎಎಸ್, ಐಪಿಎಸ್, ಐಎಫ್ಎಸ್ ಮತ್ತು ಇದಕ್ಕೆ ಸಮನಾದ ಹುದ್ದೆಗಳಲ್ಲಿರುವವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡಬಾರದು.

ತನ್ನ ಕಾರ್ಯಸೂಚಿಯಲ್ಲಿ ಇಲ್ಲದೆ ಇದ್ದರೂ ಸ್ವಯಂಪ್ರೇರಣೆಯಿಂದ ಮಾಡಿರುವ ಈ ಶಿಫಾರಸು ಅತ್ಯಂತ ವಿವಾದಾತ್ಮಕವಾದುದು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಹುದ್ದೆಗಳಿಗೆ ಸಂಬಂಧಿಸಿದ ಕೆನೆಪದರ ನೀತಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರಕಾರಿ ನೌಕರರಿಗೆ ಭಡ್ತಿ ನೀಡುವಾಗ ಕೆನೆಪದರವನ್ನು ಪರಿಗಣಿಸಬೇಕೆಂದು 2006ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಕಳೆದ ಸೆಪ್ಟಂಬರ್ನಲ್ಲಿ ಈ ವಿಷಯವನ್ನು ಎತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಹಿಂದುಳಿದ ಜಾತಿಗಳಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೂ ಕೆನೆಪದರವನ್ನು ವಿಸ್ತರಿಸಬಹುದಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ. ಇದನ್ನು ದೇಶದ ದಲಿತ ಸಮುದಾಯ ಒಕ್ಕೊರಲಿನಿಂದ ವಿರೋಧಿಸುತ್ತಿದೆ. ಮೀಸಲಾತಿಯನ್ನು ದಲಿತರಲ್ಲಿ ಆರ್ಥಿಕವಾಗಿ ಬಲಾಢ್ಯರ ಗುಂಪು ಕಬಳಿಸುತ್ತಿದೆ ಎಂಬ ಆರೋಪ ಮೇಲ್ನೋಟಕ್ಕೆ ನಿಜ ಎಂಬಂತೆ ಕಂಡರೂ ಭರ್ತಿಯಾಗದೆ ಉಳಿದಿರುವ ಮೀಸಲು ಹುದ್ದೆಗಳ ಸಂಖ್ಯೆ ವಿವಾದದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳೊಳಗಿನ ಸಾಕ್ಷರತೆಯ ಪ್ರಮಾಣವನ್ನು ಕೆದಕಿದರೆ ಕೆನೆಪದರ ನೀತಿಯ ಪ್ರತಿಪಾದನೆ ಎಷ್ಟೊಂದು ಅರ್ಥಹೀನ ಎಂದು ಅನಿಸದೆ ಇರದು.

ಈಗಾಗಲೇ ಒಳಮೀಸಲಾತಿಯನ್ನು ಜಾರಿಗೊಳಿಸಿದ ಪಂಜಾಬ್, ಹರ್ಯಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಆದೇಶಗಳಲ್ಲಿಯೂ ಕೆನೆಪದರದ ಉಲ್ಲೇಖ ಇಲ್ಲ. ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ಮಾಡಲು ಕೇಂದ್ರ ಸರಕಾರವೇ ನೇಮಿಸಿರುವ ನ್ಯಾಯಮೂರ್ತಿ ಉಷಾ ಮೆಹ್ರಾ ಸಮಿತಿ ಕೂಡಾ ಕೆನೆಪದರದ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಸಂವಿಧಾನದಲ್ಲಿಯೂ ಇದರ ಬಗ್ಗೆ ಉಲ್ಲೇಖ ಇಲ್ಲ. ಹೀಗಿದ್ದಾಗ ನ್ಯಾ.ಸದಾಶಿವ ಆಯೋಗ ಈ ವಿವಾದವನ್ನು ಮೈಮೇಲೆ ಯಾಕೆ ಎಳೆದುಕೊಂಡಿತು ಎನ್ನುವ ಪ್ರಶ್ನೆಗೆ ಸಂಬಂಧಿತರೇ ಉತ್ತರಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿಗೆ ಸೇರಿದ ಸಾಮಾನ್ಯ ಜನಸಮೂಹಕ್ಕೆ ಈ ವರದಿಯನ್ನು ಓದಿ ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ. ಆದರೆ ಕಳೆದ ಏಳುವರ್ಷಗಳಿಂದ ನ್ಯಾ.ಸದಾಶಿವ ಆಯೋಗದ ಜಾರಿಗೆ ಹೋರಾಟ ನಡೆಸುತ್ತಿರುವವರು ಕೂಡಾ ಈ ವಿವಾದಾತ್ಮಕ ಶಿಫಾರಸನ್ನು ಗಮನಿಸದೆ ಹೋದುದು ವಿಷಾದನೀಯ.

ಈ ಅಂಶವನ್ನು ಮೊದಲ ಬಾರಿಗೆ ಬಹಿರಂಗವಾಗಿ ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದಾಗ, ಇದು ಒಳಮೀಸಲಾತಿ ಹೋರಾಟದ ದಿಕ್ಕು ತಪ್ಪಿಸುವ ಯತ್ನ ಎಂದು ಕೆಲವರು ನನ್ನ ಮೇಲೇರಿ ಬಂದದ್ದೂ ಉಂಟು. ಇದರ ಬಗ್ಗೆ ಸ್ಪಷ್ಟೀಕರಣವೆಂಬಂತೆ ಬರೆದ ಸಿ.ಎಸ್.ದ್ವಾರಕಾನಾಥ್ ಅವರು ಸೋರಿಕೆಯಾಗಿರುವ ನ್ಯಾ.ಸದಾಶಿವ ಆಯೋಗದ ವರದಿಯ ಪರಿವಿಡಿಯನ್ನು ಉಲ್ಲೇಖಿಸಿ ಕೆನೆಪದರ ನೀತಿಯ ಶಿಫಾರಸು ಅಧಿಕೃತವಾದುದಲ್ಲ ಇದೊಂದು ಜ್ಞಿಜ ್ಕಛಿಞಚ್ಟ ಎಂದು ತಳ್ಳಿಹಾಕಿದ್ದಾರೆ. ಇದು ದಾರಿ ತಪ್ಪಿಸುವ ಇನ್ನೊಂದು ಪ್ರಯತ್ನವೆಂದಷ್ಟೇ ಹೇಳಬಲ್ಲೆ.

ಸೋರಿಕೆಯಾಗಿರುವ 368 ಪುಟಗಳ ವರದಿಯಲ್ಲಿ 318ನೇ ಪುಟದಿಂದ 364 ಪುಟದ ವರೆಗಿನ 46 ಪುಟಗಳಲ್ಲಿ ಆಯೋಗದ ‘’ಕಾರ್ಯಸೂಚಿಯ ಪರಿಗಣನೆ’’ ಎಂಬ ತಲೆಬರಹದ ಕೊನೆಯ ಅಧ್ಯಾಯ ಇದೆ. ಇದರಲ್ಲಿ ಶಿಕ್ಷಣ, ಸಫಾಯಿ ಕರ್ಮಚಾರಿ, ವಿಶೇಷ ಘಟಕ ಯೋಜನೆ, ಸಾಮಾಜಿಕ, ಉದ್ಯೋಗ ಮತ್ತು ಮೀಸಲು ವರ್ಗೀಕರಣದ ಬಗ್ಗೆ ಆಯೋಗ ಶಿಫಾರಸುಗಳನ್ನು ಮಾಡಿದೆ. ಇವೆಲ್ಲವೂ ಅಧಿಕೃತ ಶಿಫಾರಸುಗಳೇ ಆಗಿದ್ದು ಯಾವುದೂ ಜ್ಞಿಜ ್ಕಛಿಞಚ್ಟ ಅಲ್ಲ. ಇದರಲ್ಲಿ ‘’ಉದ್ಯೋಗ’’ ಎಂಬ ತಲೆಬರಹದಡಿಯಲ್ಲಿ ಆಯೋಗ ಕೆನೆಪದರ ನೀತಿಯನ್ನು ಪರಿಗಣಿಸಬೇಕೆಂಬ ಶಿಫಾರಸು ಮಾಡಿದೆ. ಪರಿಶಿಷ್ಟ ಸಮುದಾಯ ತಪ್ಪು ವಿಶ್ಲೇಷಣೆಯಿಂದ ಹಾದಿ ತಪ್ಪಬಾರದು ಎನ್ನುವ ಕಾರಣಕ್ಕೆ ಈ ವಿವರಣೆ ನೀಡಿದ್ದೇನೆ.

ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಈ ವಿವಾದ ತಾರಕಕ್ಕೇರಿತ್ತು.. ವಿಪರ್ಯಾಸವೆಂದರೆ ನ್ಯಾ.ಸದಾಶಿವ ಆಯೋಗದ ಪರ-ವಿರುದ್ಧ ಮಾತನಾಡುವ ಬಹಳಷ್ಟು ನಾಯಕರು ವರದಿಯನ್ನು ಓದಿ ಅರ್ಥಮಾಡಿಕೊಂಡಿಲ್ಲ. ಅನೇಕ ದಲಿತ ನಾಯಕರು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ದಲಿತೇತರ ನಾಯಕರು ಮತ್ತು ಬೆಂಬಲಿಗರು ಕೂಡಾ ‘‘ವರದಿಯನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಹೊತ್ತು ಹಾಕಲು’’ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕುತ್ತಿದ್ದದ್ದು ಕೂಡಾ ನಿಜ.

ಅಂತಿಮವಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿ ರುವುದು ಕೇಂದ್ರ ಸರಕಾರವಾದ ಕಾರಣ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಿ ಆ ಮೇಲೆ ಅವರನ್ನು ದೂರುತ್ತಾ ಕೂರಬಹುದು ಎನ್ನುವುದು ಅವರ ರಾಜಕೀಯ ಪ್ರೇರಿತ ಅಭಿಪ್ರಾಯ. ಸಿದ್ದರಾಮಯ್ಯನವರು ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದರೆ ಚುನಾವಣೆಯಲ್ಲಿ ಒಂದಿಷ್ಟು ಲಾಭವಾಗುತ್ತಿತ್ತೋ ಏನೋ? ಆ ರೀತಿಯ ರಾಜಕೀಯವನ್ನು ಒಪ್ಪದೆ ಅವರು ವಿಷಕಂಠರಾಗಿಬಿಟ್ಟರು.

ನ್ಯಾ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಮೊದಲು ಅಧಿಕೃತವಾಗಿ ಬಿಡುಗಡೆಗೊಳಿಸಿ ಸಾರ್ವಜನಿಕವಾಗಿ ಚರ್ಚೆಗೆ ಬಿಡಬೇಕಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿರುವ ಎಡ-ಬಲದ ದಲಿತ ನಾಯಕರು ತಮ್ಮೆದೆಯನ್ನು ಸ್ವಲ್ಪ ಹಿರಿದುಗೊಳಿಸಿ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ್ದರೆ ಈಗಿನ ವಿವಾದ ಈ ಮಟ್ಟಕ್ಕೆ ಖಂಡಿತ ಹೋಗುತ್ತಿರಲಿಲ್ಲ.

ಒಂದು ಸಮುದಾಯದ ಜೀವನ್ಮರಣ ಪ್ರಶ್ನೆಯಂತಿರುವ ಒಳಮೀಸಲಾತಿಯ ಪರವಾಗಿರುವವರು ಮತ್ತು ವಿರೋಧಿಗಳು ಭಾವೋದ್ವೇಗದಿಂದ ಪರಸ್ಪರರ ವಿರುದ್ಧ ಕಾದಾಟಕ್ಕೆ ನಿಂತಿದ್ದಾರೆ. ಇದನ್ನು ತಪ್ಪಿಸಿ ಸಹಮತ ಮೂಡಬೇಕಾಗಿದ್ದರೆ ಪರಸ್ಪರರ ನಡುವೆ ಚರ್ಚೆಯೊಂದು ನಡೆಯಬೇಕಾದ ಅಗತ್ಯ ಖಂಡಿತ ಇದೆ.

ಇದಕ್ಕಾಗಿ ರಾಜ್ಯ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆಮಾಡಬೇಕು ಇಲ್ಲವೇ ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆ ನಡೆಸಿ ಸೂಕ್ತ ತಿದ್ದುಪಡಿ ಮಾಡಬೇಕು. ಇದರ ನಂತರ ಆಯೋಗವೇ ಸೂಚನೆ ನೀಡಿದಂತೆ ಮೀಸಲಾತಿ ವರ್ಗೀಕರಣ ಸಾಧ್ಯವಾಗುವಂತೆ ಸಂವಿಧಾನದ ತಿದ್ದುಪಡಿ ಮೂಲಕ ಕಾಯ್ದೆಯನ್ನು ರಚಿಸಬೇಕೆಂಬ ಒಮ್ಮತದ ಗೊತ್ತುವಳಿಯನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು.

ಕೇಂದ್ರ ಸರಕಾರ ಇದೇ ಉದ್ದೇಶಕ್ಕಾಗಿ ರಚಿಸಿದ್ದ ನ್ಯಾ.ಉಷಾಮೆಹ್ರಾ ಆಯೋಗದ ವರದಿಯನ್ನು ಅಂಗೀಕರಿಸುವಂತೆ ನಾಲ್ಕೂ ಬಾಧಿತ ರಾಜ್ಯಗಳಾದ ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಸಂಘಟಿತಗೊಂಡು ಒತ್ತಡ ಹೇರಬೇಕಾಗಿದೆ. ಸಾಂವಿಧಾನಿಕ ರಕ್ಷಣೆ ಇಲ್ಲದೆ ಇರುವುದೇ ಒಳಮೀಸಲಾತಿ ಜಾರಿಗೆ ಇರುವ ಪ್ರಮುಖ ಅಡ್ಡಿ. ಮೂಲಭೂತವಾದ ಈ ಸಮಸ್ಯೆಯನ್ನು ಬಗೆಹರಿಸದೆ ಒಳಮೀಸಲಾತಿಯ ಬಗ್ಗೆ ನಡೆಸುವ ಯಾವ ಹೋರಾಟವೂ ತಾರ್ಕಿಕ ಅಂತ್ಯ ಕಾಣುವುದು ಕಷ್ಟ.

ಒಳಮೀಸಲಾತಿಯ ಬೇಡಿಕೆ ಮೊದಲು ಕೇಳಿಬಂದದ್ದು ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಪರಿಶಿಷ್ಟ ಜಾತಿಯ ಜನಸಂಖ್ಯೆ (ಶೇ.29.1) ಇರುವ ಪಂಜಾಬ್ನಲ್ಲಿ. 37 ಜಾತಿಗಳನ್ನೊಳಗೊಂಡ ಅಲ್ಲಿನ ಪರಿಶಿಷ್ಟ ಜಾತಿಯೊಳಗೆ ಮುಖ್ಯವಾಗಿ ಮೂರು ಗುಂಪುಗಳಿವೆ 1. ಶೇ.42ರಷ್ಟಿರುವ ಮಜಬಿ ಸಿಖ್ಖ್ ಮತ್ತು ವಾಲ್ಮೀಕಿ/ಭಂಗಿಗಳು, 2. ಶೇ.41.59 ಇರುವ ಅದ್-ಧರ್ಮಿ ಮತ್ತು ಚಮ್ಮಾರ್ ಸಿಖ್ಖ್ ಗಳು, 3. ಕೇವಲ ಶೇ.51 ಇರುವ ಉಳಿದ 33 ಜಾತಿಗಳು. ಆ ರಾಜ್ಯದಲ್ಲಿ ಪ್ರಾರಂಭದಿಂದಲೂ ಎರಡನೇ ಗುಂಪು ರಾಜಕೀಯ ಮತ್ತು ಆರ್ಥಿಕವಾಗಿ ಮುನ್ನಡೆಯಲ್ಲಿದೆ.

ಒಂದು ಸಮುದಾಯದ ಜೀವನ್ಮರಣ ಪ್ರಶ್ನೆಯಂತಿರುವ ಒಳಮೀಸಲಾತಿಯ ಪರವಾಗಿರುವವರು ಮತ್ತು ವಿರೋಧಿಗಳು ಭಾವೋದ್ವೇಗದಿಂದ ಪರಸ್ಪರರ ವಿರುದ್ಧ ಕಾದಾಟಕ್ಕೆ ನಿಂತಿದ್ದಾರೆ. ಇದನ್ನು ತಪ್ಪಿಸಿ ಸಹಮತ ಮೂಡಬೇಕಾಗಿದ್ದರೆ ಪರಸ್ಪರರ ನಡುವೆ ಚರ್ಚೆಯೊಂದು ನಡೆಯಬೇಕಾದ ಅಗತ್ಯ ಖಂಡಿತ ಇದೆ. ಇದಕ್ಕಾಗಿ ರಾಜ್ಯ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆಮಾಡಬೇಕು ಇಲ್ಲವೇ ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆ ನಡೆಸಿ ಸೂಕ್ತ ತಿದ್ದುಪಡಿ ಮಾಡಬೇಕು. ಇದರ ನಂತರ ಆಯೋಗವೇ ಸೂಚನೆ ನೀಡಿದಂತೆ ಮೀಸಲಾತಿ ವರ್ಗೀಕರಣ ಸಾಧ್ಯವಾಗುವಂತೆ ಸಂವಿಧಾನದ ತಿದ್ದುಪಡಿ ಮೂಲಕ ಕಾಯ್ದೆಯನ್ನು ರಚಿಸಬೇಕೆಂಬ ಒಮ್ಮತದ ಗೊತ್ತುವಳಿಯನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು.

ಉಷಾ ಮೆಹ್ರಾ ಸಮಿತಿ ‘‘ಪರಿಶಿಷ್ಟ ಜಾತಿಯ ಮೀಸಲಾತಿಯ ವರ್ಗೀಕರಣ ಮಾಡಲು ಅನುಕೂಲವಾಗುವಂತಹ ಕಾಯ್ದೆ ರಚನೆಗಾಗಿ ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿ ಕಲಮ್ (3) ಸೇರಿಸಬೇಕು’’ ಎಂದು 2008ರ ಮೇ ಒಂದರಂದು ಶಿಫಾರಸು ಮಾಡಿತು. ಹತ್ತು ವರ್ಷಗಳು ಕಳೆದಿವೆ. ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ. ವಿವಾದ ಮುಂದುವರಿದಿದೆ, ಪ್ರತಿ ಚುನಾವಣೆಯ ಕಾಲದಲ್ಲಿ ವಿವಾದಕ್ಕೆ ಜೀವ ತುಂಬಲಾಗುತ್ತದೆ, ಮತ್ತೆ ಮೂಲೆಗೆ ತಳ್ಳಲಾಗುತ್ತದೆ.

ಈಗಾಗಲೇ ಒಳಮೀಸಲಾತಿಯನ್ನು ಜಾರಿಗೊಳಿಸಿದ ಪಂಜಾಬ್, ಹರ್ಯಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಆದೇಶಗಳಲ್ಲಿಯೂ ಕೆನೆಪದರದ ಉಲ್ಲೇಖ ಇಲ್ಲ. ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ಮಾಡಲು ಕೇಂದ್ರ ಸರಕಾರವೇ ನೇಮಿಸಿರುವ ನ್ಯಾಯಮೂರ್ತಿ ಉಷಾ ಮೆಹ್ರಾ ಸಮಿತಿ ಕೂಡಾ ಕೆನೆಪದರದ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಸಂವಿಧಾನದಲ್ಲಿಯೂ ಇದರ ಬಗ್ಗೆ ಉಲ್ಲೇಖ ಇಲ್ಲ. ಹೀಗಿದ್ದಾಗ ನ್ಯಾ.ಸದಾಶಿವ ಆಯೋಗ ಈ ವಿವಾದವನ್ನು ಮೈಮೇಲೆ ಯಾಕೆ ಎಳೆದುಕೊಂಡಿತು ಎನ್ನುವ ಪ್ರಶ್ನೆಗೆ ಸಂಬಂಧಿತರೇ ಉತ್ತರಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)