varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ತ್ರಿಕೋನ

ವಾರ್ತಾ ಭಾರತಿ : 7 Dec, 2018
ಎಂ.ಎಸ್. ಶ್ರೀರಾಮ್

ಬೆಂಗಳೂರಿನಲ್ಲಿ 16 ಮೇ, 1962ರಲ್ಲಿ ಜನಿಸಿದ ಇವರು, ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದರು. ನಂತರ ಗುಜರಾತಿನ ಆನಂದ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕತೆ ಮತ್ತು ಲೇಖನಗಳ ಮೂಲಕ ಗುರುತಿಸಿಕೊಂಡವರು. ‘ಗ್ರಾಮೀಣ ಅಭಿವೃದ್ಧಿ’ ಇವರ ಪರಿಣತಿಯ ವಿಷಯ. ಸಹಕಾರಿ ಕ್ಷೇತ್ರದ ಬಗೆಗೆ ಒಲವು. ಸಮಕಾಲೀನ ರಂಗಭೂಮಿ, ಸಿನೆಮಾ ಇವರ ಆಸಕ್ತಿಯ ವಿಷಯಗಳು. ಪತ್ರಿಕೆಗಳಿಗೆ ಅಂಕಣ ಬರೆಯುವ, ಸಾಹಿತ್ಯಕ ಉಪನ್ಯಾಸ ನೀಡುವ ಜೊತೆಗೆ ಕಥೆ ಕಟ್ಟುವ ರೀತಿ, ಶೈಲಿಯ ಬಗ್ಗೆ ಅದಮ್ಯ ಕುತೂಹಲವುಳ್ಳವರು. ರೂಮಿ ಟೋಪಿ ಪ್ರಕಟಗೊಳ್ಳಲಿರುವ ಇವರ ಪ್ರಬಂಧ ಸಂಕಲನ. ಸದ್ಯ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿವಾನಿ ಮತ್ತು ಚಿನ್ಮಯರ ಗೆಳೆತನ ಪ್ಯಾರಿಸ್‌ನಲ್ಲಿ ಆರಂಭವಾಗಿ, ಅಲ್ಲಿಯೇ ಬೆಳೆದಿದ್ದರೂ ಭಾರತದಲ್ಲಿ - ಮುಖ್ಯವಾಗಿ ಮುಂಬೈಯಲ್ಲಿ? ಅದಕ್ಕೊಂದು ಸ್ಪಷ್ಟವಾದ ರೂಪಕಲ್ಪನೆಯಾಗಿತ್ತು. ಶಿವಾನಿಯ ಬದುಕಿನಲ್ಲಿಯೂ ಮತ್ತು ಈ ಕಂಪೆನಿಯಲ್ಲಿಯೂ ಚಿನ್ಮಯ ದೊಡ್ಡ ಪಾತ್ರ ವಹಿಸುವುದರ ಬಗ್ಗೆ ತುಂಬಾ ಕಾತರತೆಯನ್ನು ಶಿವಾನಿಯೂ ಅವಳ ತಂದೆಯೂ ತೋರಿಸಿದ್ದರು. ಈಗ ಮುಕುಂದಸಾಗರ ತೀರಿಕೊಂಡ ನಂತರ ಶಿವಾನಿಯ ತಂದೆಯೇ ಈ ಕಂಪೆನಿಯ ಅಧ್ಯಕ್ಷರಾಗುವುದೆಂದೂ ನಿರ್ಧರಿಸಲಾಗಿತ್ತು. ಚಿನ್ಮಯನ ಪಾತ್ರದ ಚರ್ಚೆ ತನ್ನ ಎದುರಿನಲ್ಲಿ ಅಲ್ಲದೇ ತನ್ನ ಬೆನ್ನ ಹಿಂದೆಯೂ ನಡೆಯುತ್ತಿರುವುದು ಹಾಗೂ ಶಿವಾನಿ ಮತ್ತವಳ ತಂದೆ ತನ್ನ ಪ್ರತಿಭೆಯ ಮೌಲ್ಯಮಾಪನ ಮಾಡುತ್ತಿದ್ದುದು ಚಿನ್ಮಯನಿಗೆ ಹಿಡಿಸಿರಲಿಲ್ಲ. ಗೆಳೆತನ, ಸಂಬಂಧ, ವೃತ್ತಿ ಈ ಮೂರನ್ನೂ ಮೇಳೈಸಬೇಕೇ ಎನ್ನುವ ಪ್ರಶ್ನೆ ಚಿನ್ಮಯನನ್ನು ಕಾಡುತ್ತಿತ್ತು.

ತಾನಿದ್ದ ಪರಿಸ್ಥಿತಿಯಲ್ಲಿ ಮೈಸೂರಿಗೆ ಹೋಗಬೇಕೋ ಅಥವಾ ಮುಂಬೈಯಲ್ಲಿದ್ದೇ ಹೋರಾಡಬೇಕೋ ಎನ್ನುವ ದ್ವಂದ್ವ ಸುಜಾತಾಳನ್ನು ಕಾಡಿತು. ತನ್ನ ಕಾಲಿನ ಕೆಳಗಿನ ನೆಲ ಕ್ರಮಕ್ರಮೇಣ ಕುಸಿಯುತ್ತಿದ್ದರೂ ಅವಳು ಮಾತ್ರ ಅಲುಗಾಡದೇ ನಿಂತಿದ್ದಳು. ತನ್ನ ಜೀವನಸಾಥಿ ಮುಕುಂದಸಾಗರ ತಾನೇರಿದ ಎತ್ತರದಲ್ಲಿ ನಿಲ್ಲಲಾರದೇ ಹಾರಿಬಿದ್ದು ಪ್ರಾಣಕಳೆದುಕೊಂಡಿದ್ದ. ಹೀಗೆ ಒಂಟಿಯಾಗಿದ್ದವಳಿಗೆ ತಾವಿಬ್ಬರೂ ನಡೆಸುತ್ತಿದ್ದ ವ್ಯಾಪಾರದ ಹಲವು ಗುಟ್ಟುಗಳು ಬಯಲಾಗುತ್ತಾ ಹೋಗಿದ್ದುವು. ಒಂದು - ಆ ವ್ಯಾಪಾರದಲ್ಲಿ ತನ್ನ ಭಾಗಸ್ವಾಮ್ಯವಾದ 25 ಪ್ರತಿಶತ ಬಂಡವಾಳ ಬಿಟ್ಟರೆ ಬೇರೇನೂ ಇಲ್ಲ ಎನ್ನುವ ವಿಚಾರ. ಎರಡು - ಶಿವಾನಿ ಮತ್ತು ಅವಳ ತಂದೆ ಪಡೆದುಕೊಂಡ ಪಾಲಿನ ಜೊತೆಗೆ ನಿರ್ವಹಣೆಯ ಹಕ್ಕನ್ನೂ ಪಡೆದಾಗ, ಮಾರುಕಟ್ಟೆ ವಿಭಾಗದ ಮುಖ್ಯಸ್ಥೆಯ ನೌಕರಿಯನ್ನೂ ಕಳೆದುಕೊಂಡಿರುವ ವಿಚಾರ. ಮೂರು- ತಮ್ಮ ಲೋಖಂಡವಾಲಾದ ಪೆಂಟ್ ಹೌಸ್ ಕಂಪೆನಿಯ ಹೆಸರಿನಲ್ಲಿದ್ದುದರಿಂದ ಅದನ್ನೂ ಖಾಲಿ ಮಾಡಬೇಕೆಂದು ವಕೀಲರ ನೋಟಿಸ್ ಸ್ವೀಕರಿಸಿ ನಿರಾಗೃಹಳಾಗಬಹುದಾದ ವಿಚಾರ. ಹೀಗೆ ಗಂಡ, ನೌಕರಿ, ಮನೆ ಮೂರನ್ನೂ ಕಳೆದುಕೊಂಡ ಸುಜಾತಾ ಮುಂದೇನು ಮಾಡಬೇಕು ಎನ್ನುವ ವಿಚಾರದ ಬಗ್ಗೆ ಗಹನವಾಗಿ ಯೋಚಿಸಬೇಕಿತ್ತು. ಇಷ್ಟು ವರ್ಷಕಾಲ ತಾನು ತನ್ನ ಗಂಡನ ಜೊತೆಗೆ ನಿರ್ವಹಿಸಿದ್ದ ಅನ್-ಆಕ್ಸಸರಿ ಡಿಸೈನ್ಸ್ ಕಂಪೆನಿಯಲ್ಲಿ ತನಗೇ ಸ್ಥಾನವಿಲ್ಲ ಎನ್ನುವ ವಿಚಾರ ಒಂದು ವಿಚಿತ್ರ ಅಸಹಾಯಕತೆಯನ್ನೂ, ಅಸಹನೆಯನ್ನೂ ಅವಳಿಗೆ ನೀಡಿತ್ತು. ತನ್ನ ಕೆಳಗೆ ಕೆಲಸ ಮಾಡುತ್ತಿದ್ದವರಲ್ಲಿ ಈಗ ಯಾರನ್ನು ನಂಬುವುದು ಯಾರನ್ನು ನಂಬದೇ ಇರುವುದು ಎನ್ನುವ ದ್ವಂದ್ವಕ್ಕಿಂತ ದೊಡ್ಡ ಹಿಂಸೆ ಬೇರೊಂದಿಲ್ಲ. ಅವರ ದೃಷ್ಟಿಯಿಂದ ನೋಡಿದರೆ ಅದು ಸಹಜವೂ ಆಗಿತ್ತು? ತಮ್ಮ ನೌಕರಿ-ವೃತ್ತಿ ಬೆಸೆದಿದ್ದು ಕಂಪೆನಿಯ ಜೊತೆ? ಒಂದು ವ್ಯಕ್ತಿತ್ವದ ಜೊತೆಯಲ್ಲ. ಹೀಗಾಗಿ ಈಗ ಇದ್ದಕ್ಕಿದ್ದ ಹಾಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರಿಂದ ವೈಯಕ್ತಿಕ ವಿಧೇಯತೆಯನ್ನು ನಿರೀಕ್ಷಿಸುವುದು ಎಷ್ಟು ಸಮಂಜಸ? ಮತ್ತು ಎಷ್ಟು ನ್ಯಾಯಯುತ ಎನ್ನುವುದನ್ನು ವಿಚಾರ ಮಾಡಿದಾಗ ತನ್ನ ಒಂಟಿತನದ ಮಹತ್ವ ಅವಳಿಗರ್ಥವಾಯಿತು. ಮುಕುಂದಸಾಗರ ಮತ್ತು ತಾನು ಸೇರಿ ತಮ್ಮ ಸರ್ವಸ್ವವನ್ನೂ ಹಾಕಿ ಬೆಳೆಸಿದ್ದ ಕಂಪೆನಿ ಅನ್-ಆಕ್ಸಸರಿ (ಅಆ) ಡಿಸೈನ್ಸ್. ಅ-ಆ-ಕಂಪೆನಿಯಲ್ಲಿದ್ದದ್ದು ಎರಡೇ ಮುಖ್ಯ ಅಂಶಗಳು. ಮುಕುಂದಸಾಗರನ ಪ್ರತಿಭೆ ಮತ್ತು ತಮ್ಮ ಹೆಸರಿನಲ್ಲಿದ್ದ ಬಂಡವಾಳ. ಬಂಡವಾಳ ಮಾರಿದರೂ ತನ್ನ ಪ್ರತಿಭೆಯ ಬಲದಿಂದಲೇ ಈ ಕಂಪೆನಿಯನ್ನು ನಡೆಸಬಹುದು, ಆ ಪ್ರತಿಭೆ ಕಂಪೆನಿಗೆ ಅನಿವಾರ್ಯ ಎಂದು ಮುಕುಂದಸಾಗರ ಯೋಚಿಸಿದ್ದನೇನೋ. ಆದರೆ ಈಗ ಅವನೂ ಇಲ್ಲ, ಬಂಡವಾಳವೂ ಇಲ್ಲ ಎಂದ ಮೇಲೆ ಯಾವ ಬಡಾಯಿ ಸುಜಾತಾಳಿಗಿದ್ದೀತು? ಎಷ್ಟಾದರೂ ಸುಜಾತಾ ಡಿಸೈನ್ ಕಲಿತವಳಲ್ಲ. ಮುಕುಂದಸಾಗರನ ಡಿಸೈನುಗಳ ಮಾರಾಟವನ್ನಷ್ಟೇ ಅವಳು ಮಾಡುತ್ತಿದ್ದಳು. ಈಗ ಆ ಡಿಸೈನರೇ ಇಲ್ಲವಾದರೆ ತನ್ನ ಸ್ಥಾನವೇನು? ವ್ಯವಹಾರದ ಕ್ಷಣಭಂಗುರತೆಯನ್ನು ಅರಿಯಲು ಸುಜಾತಾಳ 20 ವರ್ಷಗಳಿಗೂ ಮಿಂಚಿದ ಅನುಭವ ಕೈಕೊಟ್ಟಿತ್ತು.

‘ಶಿವಾನಿ. ಮೀಟ್ ದ ನ್ಯೂ ಬಾಸ್ ಎಟ್ ಅನ್-ಆಕ್ಸೆಸರಿ ಡಿಸೈನ್ಸ್’ ಹೀಗೊಂದು ಶೀರ್ಷಿಕೆಯ ಲೇಖನವು ಪ್ರಮುಖ ವಾಣಿಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅನ್-ಆಕ್ಸೆಸರಿ...ಅದೊಂದು ವಿಲಕ್ಷಣ ಹೆಸರು. ಮುಕುಂದಸಾಗರ ಹಾಗೇನೇ. ಅವನ ಡಿಸೈನುಗಳೆಷ್ಟು ವಿಚಿತ್ರ ವಿಲಕ್ಷಣವಾಗಿ ಕಾಣುತ್ತಿತ್ತೋ, ಅವನ ಡಿಸೈನುಗಳಿಗೆ-ವಸ್ತುಗಳಿಗೆ ಕೊಡುತ್ತಿದ್ದ ಹೆಸರೂ ಹಾಗೇ ಇರುತ್ತಿತ್ತು. ಅನವಶ್ಯಕ ಎನ್ನುವ ಅರ್ಥಬರುವಂತಿದ್ದ ಅನ್-ಆಕ್ಸೆಸರಿಯೆಂದು ಹೆಸರಿಟ್ಟಾಗ ಇಬ್ಬರೂ ಎರಡು ದಿನಗಳ ಕಾಲ ಚರ್ಚಿಸಿದ್ದನ್ನು ಸುಜಾತಾ ನೆನಪು ಮಾಡಿಕೊಂಡಳು. ನಮ್ಮ ಡಿಸೈನು ಎಷ್ಟು ಭಿನ್ನ ಹಾಗೂ ಎಷ್ಟು ಮಿನಿಮಲಿಸ್ಟ್ ಎನ್ನುವುದನ್ನು ಸೂಚಿಸಲೇ ಈ ಅನ್-ಆಕ್ಸೆಸರಿ ಎನ್ನುವ ಹೆಸರನ್ನು ಯೋಚಿಸಿರುವುದಾಗಿ ಮುಕುಂದಸಾಗರ ಹೇಳಿದ್ದ. ಮೊದಲಿಗೆ ಇದನ್ನು ಸುಜಾತಾ ಒಪ್ಪಿರಲಿಲ್ಲವಾದರೂ ಈ ವಿಷಯದಲ್ಲಿ ಮುಕುಂದಸಾಗರನಿಗೇ ಹೆಚ್ಚು ಒಳನೋಟಗಳಿರಬಹುದೆಂದು ಆಕೆ ಸುಮ್ಮನಾಗಿದ್ದಳು. ಮಕ್ಕಳಿಲ್ಲದ ಡಿಂಕ್ (ಡಬಲ್ ಇನ್ಕಮ್ ನೋ ಕಿಡ್ಸ್) ದಂಪತಿಯಾದ ಇಬ್ಬರೂ ಈ ಸಂಸ್ಥೆಯನ್ನು ಒಂದು ರೀತಿಯಿಂದ ತಮ್ಮ ಕೂಸಿನಂತೆಯೇ ಪೋಷಿಸಿ ಬೆಳೆಸಿದ್ದರು. ಕೂಸು ಬೆಳೆದು ಮನೆ ಬಿಟ್ಟು ಹೋಗುವುದು ಸಹಜವಾದ ಮಾತು. ಆದರೆ ಇಲ್ಲಿ ಮುಕುಂದಸಾಗರ ಕೂಸನ್ನೇ ಮಾರಾಟಮಾಡಿಬಿಟ್ಟಿದ್ದ.

ಅ-ಆ ಕಂಪೆನಿಯಲ್ಲಿ ಬಂಡವಾಳ ಹೂಡಿ, ಮುಕುಂದನ ಭಾಗಸ್ವಾಮ್ಯವನ್ನು ಪಡೆದಿದ್ದ ಶಿವಾನಿ ಮತ್ತು ಅವಳ ತಂದೆ ಈಗ ಸಂಪೂರ್ಣವಾಗಿ ಸಂಸ್ಥೆಯ ನಿರ್ವಹಣೆಯನ್ನು ಕೈವಶ ಮಾಡಿಕೊಂಡಿದ್ದರು. ಸುಜಾತಾ ಪತ್ರಿಕೆಯಲ್ಲಿ ಬಂದಿದ್ದ ಲೇಖನವನ್ನು ಗಮನವಿಟ್ಟು ಓದಿದಳು. ಆ ಲೇಖನದಲ್ಲಿ ಶಿವಾನಿ ಅ-ಆ-ಕಂಪೆನಿಯ ಗತವೈಭವದ ಬಗ್ಗೆ ಮಾತನಾಡಿದ್ದಳು. ಮುಕುಂದಸಾಗರನ ಬಗ್ಗೆ ತುಂಬಾ ಗೌರವದ ಮಾತುಗಳನ್ನು ಆಡಿದ್ದಳು. ಅ-ಆ-ಕಂಪೆನಿಯನ್ನು ಮುಂದಿನ ಹಂತಕ್ಕೆ ಒಯ್ಯುವ, ವಿದೇಶಿ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುವ, ಎರಡು ವರ್ಷಗಳಲ್ಲಿ ಸಾವಿರದಷ್ಟು ಅನ್-ಆಕ್ಸೆಸರಿ ಮಳಿಗೆಗಳನ್ನು ದೇಶ ವಿದೇಶಗಳಲ್ಲಿ ತೆರೆಯುವ ಯೋಜನೆಯ ಬಗ್ಗೆ ವಿಸ್ತಾರವಾಗಿ ಮಾತಾಡಿದ್ದಳು. ತಮ್ಮ ಕಂಪೆನಿಯಲ್ಲಿ ಡಿಸೈನಿನ ವಿಷಯದಲ್ಲಿ ಅಪರಿಮಿತ ಪ್ರತಿಭೆಯಿತ್ತಾದರೂ ಮಾರುಕಟ್ಟೆಯ ವಿಭಾಗದಲ್ಲಿ ದೌರ್ಬಲ್ಯವಿತ್ತು. ಈಗ ಮಾರುಕಟ್ಟೆಯ ವಿಭಾಗಕ್ಕೆ ಹೊಸ ಮತ್ತು ಯುವ ಪ್ರತಿಭೆಗಳನ್ನು ನೇಮಿಸುವುದರಿಂದ ಕಂಪೆನಿ ತನ್ನ ವ್ಯಾಪಾರವನ್ನು ಒಂದೇ ವರ್ಷದಲ್ಲಿ ದುಪ್ಪಟ್ಟು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಿದ್ದಳು. ಜೊತೆಗೆ ಕಂಪೆನಿಯ ಆಡಳಿತ ಮಂಡಲಿಯಲ್ಲೂ ಈಗ ವಿಸ್ತೃತವಾದ ಪ್ರತಿಭೆಯಿರುವುದರಿಂದ ತಮಗೆ ಅಲ್ಲಿಂದಲೂ ಮಾರ್ಗದರ್ಶನ ಸಿಗುತ್ತದೆಂದು ಹೇಳಿದ್ದಳು.

ವ್ಯಾಪಾರದ ಶಿಖರಕ್ಕೆ ಹೊಸ ಮುಖ್ಯಸ್ಥರು ಬಂದಾಗ ನೀಡುವ ಸಂದರ್ಶನದಂತೆ ಇದು ಕಂಡಿತು. ಆದರೆ ಕಂಪೆನಿಯನ್ನು ಶಿವಾನಿ ಮತ್ತವಳ ತಂದೆ ಆಕ್ರಮಿಸಿದ ರೀತಿಯ ಹಿನ್ನೆಲೆಯನ್ನು ಅರಿತ ಸುಜಾತಾಳಿಗೆ ಇದು ಆಳವಾದ, ತುಂಬಲಾರದ ಘಾತವನ್ನು ಉಂಟುಮಾಡಿತು. ಮಾರಾಟ ವಿಭಾಗದ ಮುಖ್ಯಸ್ಥೆ ತಾನಾಗಿದ್ದಳಲ್ಲವೇ... ತನಗೂ ತನ್ನ ದಿವಂಗತ ಪತಿಯಾದ ಮುಕುಂದಸಾಗರನಿಗೂ ನಡುವಿದ್ದ ಪ್ರತಿಭೆಯ ಅಂತರವನ್ನು ಅವಳು ಬಿಚ್ಚಿ ತೋರಿಸಿ, ತನ್ನ ಪತಿಯ ವ್ಯಾಪಾರ ಬೆಳೆಯದಿರಲು ತಾನೇ ಕಾರಣವೆಂಬಂತೆ ಚಿತ್ರಿಸಿದ್ದಳು. ಆ ಅಂತರವನ್ನು ಶಿವಾನಿ ತುಂಬುತ್ತಿದ್ದಂತೆ ಕಂಡರೂ, ಅವಳು ಈಗಾಗಲೇ ಛಿದ್ರವಾಗಿದ್ದ ಸುಜಾತಾಳ ಬದುಕನ್ನು ನುಚ್ಚುನೂರು ಮಾಡುವಂತೆ ಕಾಣುತ್ತಿತ್ತು. ಬಹುಶಃ ಇದರಲ್ಲಿ ವೈಯಕ್ತಿಕ ದ್ವೇಷ ಇರಲಿಲ್ಲವೇನೋ. ಬಹುಶಃ ತನ್ನ ಪ್ರತಿಭೆಯ ವಾಸ್ತವದ ಕನ್ನಡಿಯನ್ನು ಶಿವಾನಿ ತೋರಿಸುತ್ತಿದ್ದಾಳೇನೋ. ಬಹುಶಃ ತಾನು ತನ್ನ ಬಂಡವಾಳದ ಪಾಲನ್ನು ಮಾರದೇ ಕಾಪಿಟ್ಟುಕೊಂಡರೆ, ಅದರಲ್ಲೇ ಯಶಸ್ಸಿದೆಯೇನೋ.... ಹೀಗೆಲ್ಲಾ ಸುಜಾತಾ ಯೋಚಿಸಿದಳು. ಎರಡೇ ತಿಂಗಳ ಹಿಂದೆ ಎಸ್ಸೆಮ್ಮೆಸ್ ಎನ್ನುವ ಹೆಸರಿನೊಂದಿಗೆ - ಸುಜಾತಾ ಮುಕುಂದ ಸಾಗರ - ಮುಂಬೈಯ ಥಳುಕಿನ ಲೋಕದಲ್ಲಿ ಮೆರೆಯುತ್ತಿದ್ದವಳಿಗೆ ಅದೆಲ್ಲವೂ ಮಾಯೆ ಮತ್ತು ಭ್ರಮೆ ಅನ್ನಿಸತೊಡಗಿತು. ಅದು ಕೇವಲ ಮುಕುಂದಸಾಗರನ ಪ್ರಭಾವಳಿಯಿಂದ ತನ್ನ ಮೇಲೆ ಬಿದ್ದ ಕ್ಷಣಿಕ ಬೆಳಕು ಮಾತ್ರವಾಗಿತ್ತೇನೋ......ಎನ್ನುವ ಕೀಳರಿಮೆ ಕಾಡಿತು. ಆದರೆ ಈಗ, ಈ ಅ-ಆ-ಕಂಪೆನಿಯನ್ನು ಇಷ್ಟು ವರ್ಷಗಳ ಕಾಲ ಬೆಳೆಸಿದ ನಂತರ - ಈಗಲೂ ಅವಳನ್ನು ಫ್ಯಾಮಿಲಿ ಓನ್ಡ್ ಬಿಸಿನೆಸ್ ನಲ್ಲಿ ಪಾಲುದಾರಳಾಗಿ ಪತ್ನಿಯ ಸ್ಥಾನವನ್ನಾಕ್ರಮಿಸಿಕೊಳ್ಳ ಬೇಕಿತ್ತೋ, ಅಥವಾ ಮಾರುಕಟ್ಟೆ ವಿಭಾಗವನ್ನು ಇಷ್ಟು ವರ್ಷಕಾಲ ನಿಭಾಯಿಸಿದ ಮ್ಯಾನೇಜರ್ ಆಗಿ ನೋಡಬೇಕಿತ್ತೋ ಎನ್ನುವ ಪ್ರಶ್ನೆ ಸುಲಭದ್ದೇನೂ ಅಲ್ಲ. ಮುಕುಂದಸಾಗರ ಬದುಕಿದ್ದಷ್ಟೂ ದಿನ ಅವನ ನೆರಳಿನಲ್ಲಿಯೇ ಇದ್ದಳು. ಅ-ಆ-ಕಂಪೆನಿಯ ಮಟ್ಟಿಗೆ ತನ್ನದೇ ಭಿನ್ನ ವ್ಯಕ್ತಿತ್ವವನ್ನು ಅವಳು ರೂಪಿಸಿಕೊಂಡಿರಲಿಲ್ಲ. ಜೊತೆ ಜೊತೆಯಲೇ ಇದ್ದುದರಿಂದ ಹಾಗೂ ಇದು ತನ್ನ ವಿಸ್ತೃತ ಸಂಸಾರ ಎಂದು ಭಾವಿಸಿದ್ದರಿಂದ ಹಾಗಾಗಿರಬಹುದು. ಅಂದರೆ ತನ್ನ ಪ್ರತಿಭೆ ಈ ವ್ಯಾಪಾರವನ್ನು ಬೆಳೆಸುವುದರಲ್ಲಿ ಮುಂಚಿನಿಂದಲೂ ಇರಲಿಲ್ಲವೇ... ತಾನು ಅಷ್ಟು ನಿಷ್ಪ್ರಯೋಜಕಳೇ... ಅನ್-ವರ್ಥಿಯೇ....ತಾನೂ ಮುಕುಂದ ಸಾಗರನಿಗೆ ಒಂದು ಅನ್-ಆಕ್ಸೆಸರಿಯಾಗಿ ಅಂಟಿದ್ದಳೇ..... ಹೀಗೆ ಸುಜಾತಾಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿದ್ದುವು.

****

ಇತ್ತ ಶಿವಾನಿಯ ಗೆಳೆಯ ಚಿನ್ಮಯನಿಗೆ ತನ್ನ ಪರಿಸ್ಥಿತಿಯ ಬಗ್ಗೆ ಅನುಮಾನಗಳು ಬರತೊಡಗಿದುವು. ಮೊದಲಿಗೆ ಮಾರಾಟ ವಿಭಾಗಕ್ಕೆ ಚಿನ್ಮಯ ಮುಖ್ಯಸ್ಥನಾದರೆ ಚೆನ್ನಾಗಿರುತ್ತದೆ ಎಂದು ಶಿವಾನಿ ಹೇಳಿದ್ದಳು. ಆದರೆ ಈ ಕಂಪೆನಿಯನ್ನು ಇಂಟರ್ನ್ ಆಗಿ ಸೇರಿದಾಗಿನಿಂದ ಮತ್ತು ಅದರ ಮಾಲಕತ್ವವನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾಗ ಶಿವಾನಿಯೇ ಮಾರುಕಟ್ಟೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಳು. ಈಚಿನ ಸಂದರ್ಶನದಲ್ಲೂ ಅವಳು ಡಿಸೈನಿಗಿಂತ ಹೆಚ್ಚು ಮಾರುಕಟ್ಟೆಯ ಮೇಲೆಯೇ ತನ್ನ ಮಾತುಗಳನ್ನೂ ಕೇಂದ್ರೀಕರಿಸಿದ್ದನ್ನು ಚಿನ್ಮಯ ಗಮನಿಸಿದ್ದ. ಫ್ಯಾರಿಸ್‌ನಲ್ಲಿ ಕೋರ್ಸ್ ಮಾಡಿದ್ದು ಡಿಸೈನಿಗೆ ಸಂಬಂಧಿಸಿದಂತೆ. ಅಲ್ಲಿಯೇ ಶಿವಾನಿಯ ಪರಿಚಯವೂ ಸ್ನೇಹವೂ ಸಿಕ್ಕು ಅವಳು ತನ್ನ ಆಪ್ತ ಗೆಳತಿಯೂ ಆಗಿದ್ದಳು. ಆದರೂ ಈ ಕಲೆ ಮತ್ತು ವ್ಯಾಪಾರದ ಮಿಲನದಲ್ಲಿ ತನ್ನ ಪಾತ್ರ ಕಲೆಯದ್ದೇ ಅಂತ ಚಿನ್ಮಯನಿಗೆ ಅನ್ನಿಸಿತ್ತು. ಈಗ ಶಿವಾನಿ ಮಾರಾಟದ ವಿಭಾಗದ ಮುಖ್ಯಸ್ಥನಾಗು ಅನ್ನುತ್ತಿದ್ದಾಳೆ....

ಶಿವಾನಿ ಮತ್ತು ಚಿನ್ಮಯರ ಗೆಳೆತನ ಪ್ಯಾರಿಸ್‌ನಲ್ಲಿ ಆರಂಭವಾಗಿ, ಅಲ್ಲಿಯೇ ಬೆಳೆದಿದ್ದರೂ ಭಾರತದಲ್ಲಿ - ಮುಖ್ಯವಾಗಿ ಮುಂಬೈಯಲ್ಲಿ? ಅದಕ್ಕೊಂದು ಸ್ಪಷ್ಟವಾದ ರೂಪಕಲ್ಪನೆಯಾಗಿತ್ತು. ಶಿವಾನಿಯ ಬದುಕಿನಲ್ಲಿಯೂ ಮತ್ತು ಈ ಕಂಪೆನಿಯಲ್ಲಿಯೂ ಚಿನ್ಮಯ ದೊಡ್ಡ ಪಾತ್ರ ವಹಿಸುವುದರ ಬಗ್ಗೆ ತುಂಬಾ ಕಾತರತೆಯನ್ನು ಶಿವಾನಿಯೂ ಅವಳ ತಂದೆಯೂ ತೋರಿಸಿದ್ದರು. ಈಗ ಮುಕುಂದಸಾಗರ ತೀರಿಕೊಂಡ ನಂತರ ಶಿವಾನಿಯ ತಂದೆಯೇ ಈ ಕಂಪೆನಿಯ ಅಧ್ಯಕ್ಷರಾಗುವುದೆಂದೂ ನಿರ್ಧರಿಸಲಾಗಿತ್ತು. ಚಿನ್ಮಯನ ಪಾತ್ರದ ಚರ್ಚೆ ತನ್ನ ಎದುರಿನಲ್ಲಿ ಅಲ್ಲದೇ ತನ್ನ ಬೆನ್ನ ಹಿಂದೆಯೂ ನಡೆಯುತ್ತಿರುವುದು ಹಾಗೂ ಶಿವಾನಿ ಮತ್ತವಳ ತಂದೆ ತನ್ನ ಪ್ರತಿಭೆಯ ಮೌಲ್ಯಮಾಪನ ಮಾಡುತ್ತಿದ್ದುದು ಚಿನ್ಮಯನಿಗೆ ಹಿಡಿಸಿರಲಿಲ್ಲ. ಗೆಳೆತನ, ಸಂಬಂಧ, ವೃತ್ತಿ ಈ ಮೂರನ್ನೂ ಮೇಳೈಸಬೇಕೇ ಎನ್ನುವ ಪ್ರಶ್ನೆ ಚಿನ್ಮಯನನ್ನು ಕಾಡುತ್ತಿತ್ತು. ಇದರಲ್ಲಿ ಒಂದು ವಿಚಿತ್ರ ವಿಲಕ್ಷಣತೆಯಿತ್ತು. ಮುಕುಂದಸಾಗರ ತನ್ನ ಕಂಪೆನಿಯನ್ನು ಸ್ಥಾಪಿಸಿದಾಗ ಸುಜಾತಾ ಅಲ್ಲಿನ ಮಾರುಕಟ್ಟೆಯ ವಿಭಾಗ ಸೇರಿದ್ದು ಪ್ರತಿಭೆ-ತಾಲೀಮು-ವೃತ್ತಿಪರತೆಗಿಂತ ಹೆಚ್ಚಾಗಿ ಅವಳ ಸಂಬಂಧದಿಂದಾಗಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಹಾಗೆ ನೋಡಿದರೆ ಕಂಪೆನಿಯ ಕಾಲು ಭಾಗದಷ್ಟು ಮಾಲಕತ್ವ ಅವಳ ಬಳಿ ಇನ್ನೂ ಇತ್ತು. ನಿಜಕ್ಕೂ ಮುಕುಂದಸಾಗರನ ಪತ್ನಿಯೆನ್ನುವ ಪಟ್ಟವೇ ಅಲ್ಲಿನ ಮಾರಾಟವಿಭಾಗಕ್ಕೆ ಅವಳನ್ನು ಕರೆತಂದಿತ್ತು. ಆದರೆ ತನ್ನ ಪರಿಸ್ಥಿತಿ ಏನೆಂದು ಚಿನ್ಮಯ ಯೋಚಿಸಿದ. ಸುಜಾತಾಳ ಸ್ಥಿತಿಗೂ ತನ್ನ ಸ್ಥಿತಿಗೂ ತನಗೊಂದು ಡಿಸೈನಿನ ಡಿಗ್ರಿ ಇದೆ ಅನ್ನುವುದನ್ನು ಬಿಟ್ಟರೆ ಬೇರೇನಾದರೂ ವ್ಯತ್ಯಾಸವಿರಬಹುದೇ? ಎಂದು ಚಿನ್ಮಯ ಯೋಚಿಸಿದ. ತನ್ನ ಪಾತ್ರವನ್ನು ಮತ್ತು ಅಸ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು? ಇಲ್ಲಿ ಶಿವಾನಿಯ ಧನಬಲದ ಕೆಳಗೆ ಕೆಲಸ ಮಾಡಿದರೆ ಬರುವ ಶ್ರೇಯಸ್ಸು ಎಲ್ಲವೂ ಶಿವಾನಿಗೇ ಸಲ್ಲುತ್ತದೆ. ಗೆದ್ದರೆ ಅಮ್ಮಾವ್ರ ಗಂಡ. ಸೋತರೆ ಅಮ್ಮಾವ್ರ ನಾಲಾಯಕ್ ಗಂಡ. ಯಾವ ರೀತಿಯಿಂದಲೂ ಇದು ತನ್ನ ಅಹಮ್ಮಿಗೆ ಪೂರಕವಾದ ತನ್ನ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಸಾಧ್ಯವಾದ ಕೆಲಸ ಅಂತಲೂ ಅವನಿಗೆ ಅನ್ನಿಸಿತ್ತಿತ್ತು. ಮೇಲಾಗಿ ಸುಜಾತಾಳನ್ನು ಇಷ್ಟು ತುರ್ತಿನಲ್ಲಿ, ಅವಳ ಗಂಡ ತೀರಿಕೊಂಡ ದುಃಖದಿಂದ ಚೇತರಿಸಿಕೊಳ್ಳುವ ಮುನ್ನವೇ ಕೆಲಸದಿಂದ ತೆಗೆದು, ಅವಳು ಗಂಡನ ಜೊತೆ ಆಕ್ರಮಿಸಿಕೊಂಡಿದ್ದ ಮನೆಯಿಂದಲೂ ಹೊರಹಾಕುವ ಹುನ್ನಾರ ಅವನಿಗೆ ತುಸುವೂ ಹಿಡಿಸಲಿಲ್ಲ. ಇದರಲ್ಲಿ ಶಿವಾನಿಯು ತೋರಬೇಕಾದ ಘನತೆಯನ್ನು ತೋರಲಿಲ್ಲ ಎಂದು ಚಿನ್ಮಯನಿಗೆ ಅನ್ನಿಸಿತ್ತು. ಅಷ್ಟೇ ಅಲ್ಲ, ತಾನು ಬಹುವಾಗಿ ಪ್ರೀತಿಸುತ್ತಿದ್ದ ಶಿವಾನಿಯ ಮಾನವೀಯ ಮೌಲ್ಯಗಳ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದುವು. ಅವಳು ಹೀಗೆ ಜನರನ್ನು ಬಳಸಿ ಬಿಸಾಕುವ ರೀತಿಯನ್ನು ಕಂಡು ಚಿನ್ಮಯ ಅವಾಕ್ಕಾಗಿದ್ದ. ತಮ್ಮ ಪ್ರೀತಿಯ ಸಂಬಂಧ ನಿಜಕ್ಕೂ ಉತ್ಕಟ ಪ್ರೀತಿಯೋ ಅಥವಾ ಅವಳ ವ್ಯವಹಾರಕ್ಕೆ ಅನುಕೂಲವಾದ ವ್ಯವಸ್ಥೆಯೋ ಎಂದೂ ಯೋಚಿಸಿದ. ತನ್ನ ಮಟ್ಟಿಗೆ ಈ ಸಂಬಂಧ ಸ್ಪಷ್ಟವಾಗಿದೆ ಅನ್ನಿಸಿದರೂ ಶಿವಾನಿ ಅದನ್ನು ಹೇಗೆ ನೋಡುತ್ತಿರಬಹುದು ಎನ್ನುವ ಅನುಮಾನದಲ್ಲಿ ತನ್ನ ಅಭಿಪ್ರಾಯವನ್ನು ಮರುರೂಪಿಸಿಕೊಳ್ಳಲು ಅವನು ಪ್ರಯತ್ನಿಸಿದ. ಮುಖ್ಯವಾಗಿ ಸುಜಾತಾಳ ಗಂಡ ಅಸುನೀಗಿದ ದಿನದಿಂದಲೇ ಅವಳ ಸಂಬಳವನ್ನು ಕತ್ತರಿಸಿ, ಮನೆ ಖಾಲಿ ಮಾಡಲು ಕಳುಹಿಸಿದ್ದ ಕಾನೂನು ಪತ್ರವನ್ನು ಕಂಡಾಗ ಶಿವಾನಿಯಲ್ಲಿರಬಹುದಾದ ತಣ್ಣನೆಯ ಭಾವನಾಹೀನತೆ ಕ್ರೌರ್ಯದ ಮಟ್ಟವನ್ನು ತುಲುಪಿದೆ ಎಂದು ಅವನಿಗೆ ಅನ್ನಿಸಿತ್ತು. ಇಲ್ಲ. ಅವಳ ಈ ವ್ಯಕ್ತಿತ್ವದ ಈ ಮಜಲು ಪರಿಚಯವಾದ ಮೇಲೆ ಈ ಸ್ನೇಹ, ಈ ವ್ಯಾಪಾರ, ಈ ಭಾಗಸ್ವಾಮ್ಯ ಮತ್ತು ಈ ಕನಸನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಅನ್ನಿಸಿತ್ತು. ಹೀಗಾಗಿಯೇ ಶಿವಾನಿಯನ್ನು ಖಾಸಗಿಯಾಗಿ ಭೇಟಿಯಾಗಬೇಕು - ಮಾತಾಡಬೇಕು ಎಂದು ಹೇಳಿ ಒಂದು ಸಂಜೆಯ ಏಕಾಂತಕ್ಕೆ ನಾಂದಿ ಹಾಡಿದ್ದ.

ನಾಂದಿ ಹಾಡಿದ್ದಲ್ಲದೇ ಸುಜಾತಾಳ ಬಗ್ಗೆ ತನ್ನ ಸಹಾನುಭೂತಿ ವ್ಯಕ್ತಪಡಿಸುತ್ತಾ ಅವಳ ಪರ ತಾನಿರುವ ಅರ್ಥ ಬರುವ ಹಾಗೆ ಒಂದು ಮೆಸೇಜನ್ನೂ ಸುಜಾತಾಳಿಗೆ ಕಳುಹಿಸಿದ್ದ. ಅವನಿಗೆ ಸುಜಾತಾಳ ಜೊತೆ ಮಾತನಾಡಬೇಕು ಅನ್ನಿಸಿತ್ತು. ಆದರೆ ಸುಜಾತಾ ಅವನ ಬಗ್ಗೆ ನಂಬಿಕೆಯನ್ನೂ ಆಸಕ್ತಿಯನ್ನೂ ತೋರಿರಲಿಲ್ಲ. ಸುಜಾತಾ ಈಗಿರುವ ಪರಿಸ್ಥಿತಿಗೂ, ತಾನು ಶಿವಾನಿಯ ಜೊತೆ ಮಾಡುತ್ತಿರುವ ಸಂಬಂಧ-ಒಪ್ಪಂದಗಳ ಜಾಲಕ್ಕೂ ಒಂದು ವಿಚಿತ್ರ ಕಾಕತಾಳೀಯ ಸಾಮ್ಯತೆ ಇದೆ ಅಂತ ಅವನಿಗನ್ನಿಸಿತ್ತು. ಅಂದು ಸಂಜೆ, ಸುಜಾತಾಳ ಪರಿಸ್ಥಿತಿ, ತನ್ನ ಪರಿಸ್ಥಿತಿ, ತನ್ನ ಭವಿಷ್ಯ ಎಲ್ಲದರ ಬಗ್ಗೆ ಶಿವಾನಿಯ ಜೊತೆ ಚರ್ಚೆ ಆಗುವುದರಲ್ಲಿತ್ತು.

****

ಶಿವಾನಿಗೆ ಈ ಗೋಜಲು ಅರ್ಥವಾಗುತ್ತಿಲ್ಲ ಎನ್ನಿಸಿತ್ತು. ಯಾಕೆ ತನ್ನ ಕಡೆಯಿರಬೇಕಾದ ಚಿನ್ಮಯ ಸುಜಾತಳ ಕಡೆಗೆ ವಾಲುತ್ತಿದ್ದಾನೆ? ಅವನಿಗೆ ಯಾಕೆ ವ್ಯವಹಾರದ ತರ್ಕ ಅರ್ಥವಾಗುತ್ತಿಲ್ಲ? ಯಾಕೆ ವ್ಯವಹಾರದ ನಡುವೆ ಮಾನವೀಯ ಮತ್ತು ಭಾವನಾತ್ಮಕ ದುಗುಡಗಳನ್ನು ತಂದು ಹಾಕುತ್ತಿದ್ದಾನೆ? ಯಾವ ಪ್ರಯೋಜನಕ್ಕೂ ಬರದ, ಕೇವಲ ಮುಕುಂದಸಾಗರನ ಹೆಂಡತಿ ಎನ್ನುವ ಕಾರಣಕ್ಕಾಗಿಯೇ ಇಷ್ಟು ದಿನ ಮೆರೆದ ಸುಜಾತಾಳನ್ನು ಯಾತಕ್ಕಾಗಿ ಕಾಪಾಡಬೇಕು, ಹೀಗೆಲ್ಲಾ ಅವಳು ಯೋಚಿಸಿದಳು. ಇಷ್ಟು ದಿನ ಸುಜಾತಾ ತನ್ನ ಗಂಡನ ಆಕ್ಸೆಸರಿಗಳನ್ನು ತನಗೆ ಬಂದ ರೀತಿಯಲ್ಲಿ ಮಾರಾಟಮಾಡುತ್ತಾ ಓಡಾಡುತ್ತಿದ್ದಳು. ಈ ಕಂಪೆನಿಯಲ್ಲಿ ಯಾವುದೇ ರೀತಿಯ ವೃತ್ತಿಪರತೆ ಕಂಡುಬಂದಿರಲಿಲ್ಲ. ಎಲ್ಲವೂ ಯಾರಿ-ದೋಸ್ತಿಯಲ್ಲಿಯೇ ನಡೆಯುತ್ತಿತ್ತು. ಈ ಮಟ್ಟದ ವ್ಯಾಪಾರಕ್ಕೆ ಈಗಿನ ಲಾಭದ ದುಪ್ಪಟ್ಟು ಲಾಭ ಬರಬೇಕಿತ್ತು. ಈಗಿರುವ ಡಿಸೈನ್ ಪ್ರತಿಭೆಯ ಆಧಾರದ ಮೇಲೆ ವ್ಯಾಪಾರದ ಮಟ್ಟ ಈಗಿನದ್ದಕ್ಕಿಂತ ದುಪ್ಪಟ್ಟು ಇರಬೇಕಿತ್ತು. ಅಂದರೆ ಲಾಭ ನಾಲ್ಕುಪಟ್ಟು. ತಮ್ಮದೇ ದುಡ್ಡು ಹಾಕಿ ಯಾರಿಗೂ ಜವಾಬ್ದಾರಿಯುತವಾಗಿರದ ವ್ಯಾಪಾರಿಗಳ ಹಣೆಬರಹವೇ ಇಷ್ಟು. ಕೂತಲ್ಲೇ ಎಷ್ಟು ಸಂಪಾದಿಸಬಹುದೋ ಅದರ ಅಲ್ಪಭಾಗವನ್ನಷ್ಟೇ ಸಾಧಿಸಿ ಮಹಾತೃಪ್ತರಾಗುವ ಇವರಿಗೆ ವ್ಯಾಪಾರದ ಕಿಡಿ ಹಚ್ಚುವುದು ಹೇಗೆ? ಮಿಕ್ಕ ಕ್ಷೇತ್ರಗಳಿಗಿಂತ ತಮ್ಮ ಡಿಸೈನು ಪರಿವಾರದಲ್ಲಿ ಈ ರೋಗ ಹೆಚ್ಚೇ ಇತ್ತು. ಕಲೆಗಾಗಿ ಕಲೆ. ಸದುದ್ದೇಶಕ್ಕೆ ಕಲೆ. ರಾಜಕೀಯ ಸಂದೇಶಕ್ಕೆ ಕಲೆ. ಕ್ರಾಂತಿಗಾಗಿ ಕಲೆ.... ಅರೇ... ವ್ಯಾಪಾರವನ್ನೊಂದು ಬಿಟ್ಟು ಮಿಕ್ಕೆಲ್ಲದಕ್ಕೂ ಕಲೆಯನ್ನು ಉಪಯೋಗಿಸುವ ಕ್ರಾಂತಿಕಾರಿಗಳಾಗಿ ತನ್ನ ಪರಿವಾರ ಓಡಾಡುತ್ತದಲ್ಲಾ.. ಯಾಕೆ ಕಲೆಯಿಂದ ಮೊದಲು ಸಂಪಾದಿಸಿ, ನಂತರ ಯಾವುದೇ ಕ್ರಾಂತಿಯನ್ನು ಬಗೆಯಬಾರದು ಎಂದು ಅವಳಿಗೆ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಮುಕುಂದಸಾಗರ ತನ್ನ ಮನೆಯಲ್ಲಿ ಒಗ್ಗರಣೆ ಹಾಕಬೇಕಿದ್ದ ಧರ್ಮಪತ್ನಿಯನ್ನು ಇಲ್ಲಿ ಮಾರಾಟದ ಕುರ್ಚಿಯಲ್ಲಿ ಕೂಡಿಸಿ ಸಾಧಿಸಿದ್ದಾದರೂ ಏನು? ಎಂಪವರ್ಮೆಂಟೇ, ಈಕ್ವಾಲಿಟಿಯೇ, ಪ್ರೊಫೆಷನಲಿಸಮ್ಮೇ, ಪರ್ಪಸ್ಸೇ... ಯಾವುದೂ ಅಲ್ಲ. ತನ್ನ ಗಂಡ ತೀರಿಕೊಂಡ ನಂತರ ತನ್ನ ಸಂಸ್ಥೆಯನ್ನ ಹದ್ದುಬಸ್ತಿನಲ್ಲಿಟ್ಟುಕೊಂಡು ವ್ಯಾಪಾರದ ಕಮಾನನ್ನು ಕೈಹಿಡಿಯಲಾರದ ಈ ಹೆಣ್ಣಿನ ವಿಷಯದಲ್ಲಿ ಮಹಿಳಾ ಸಶಕ್ತೀಕರಣದ ಮಾತೂ ವರ್ತಿಸದಷ್ಟು ಪ್ರತಿಭಾಹೀನಳಾಗಿರುವ ಸುಜಾತಾಳ ಬಗ್ಗೆ ಯಾಕೆ ಯಾವುದೇ ಸಹಾನುಭೂತಿಯಿರಬೇಕು...

ಶಿವಾನಿಗೆ ಸುಜಾತಾಳ ಬಗ್ಗೆ ಯಾವುದೇ ರೀತಿಯ ಅನುಕಂಪವಿರಲಿಲ್ಲ. ಹಾಗೆ ನೋಡಿದರೆ, ಅತ್ಯಂತ ಪ್ರತಿಭಾನ್ವಿತನಾದ ಚಿನ್ಮಯನ ವ್ಯಾಪಾರಿ ಮನೋಧರ್ಮದ ಬಗ್ಗೆಯೂ ಅವಳಿಗೆ ಅಂತರಂಗದಲ್ಲಿ ಅನುಮಾನಗಳು ಬರತೊಡಗಿದ್ದುವು. ಪ್ಯಾರಿಸ್‌ನಲ್ಲಿ ಅವನು ಹೀಗಿರಲಿಲ್ಲ. ತಮ್ಮ ವ್ಯಾಸಂಗದ ದಿನಗಳಲ್ಲಿ ಎಷ್ಟು ಬಾರಿ ಇಬ್ಬರೂ ಸೇರಿ ಹೊಸ ಸ್ಟಾರ್ಟಪ್ಪಿನ ಮಾತಾಡಿದ್ದು ಉಂಟು? ಅಲ್ಲಿದ್ದಾಗ ಒಂದೆರಡು ಬಿಝಿನೆಸ್ ಪ್ಲಾನುಗಳನ್ನೂ ತಯಾರಿಸಿದ್ದರು. ಅದರಲ್ಲಿ ಸಹಭಾಗಿಗಳಾಗಿ, ಸಹ ಸಂಸ್ಥಾಪಕರಾಗಿ ಹೇಗೆ ವ್ಯಾಪಾರವನ್ನು ಮಾಡಬಹುದು ಎನ್ನುವ ಒಂದು ದೊಡ್ಡ ಕನಸನ್ನು ತಾವು ಹೆಣೆದಿದ್ದರು. ಎಲ್ಲಿಂದ ಹೂಡಿಕೆ ತರಬೇಕು, ಹೇಗೆ ಅದನ್ನು ಬೆಳೆಸಬೇಕು ಎಂದಲ್ಲಾ ಯೋಚಿಸಿದ್ದರು. ಈಗ ನೋಡಿದರೆ ಇವನು ಚಪಾತಿ ಹಿಟ್ಟಿನಂತೆ ಮೆತ್ತಗಾಗಿ ಕೂತಿದ್ದಾನೆ. ಸಂಜೆಯ ವೇಳೆಗೆ ಸಿಕ್ಕಾಗ ಈ ವಿಷಯವನ್ನು ದೀರ್ಘವಾಗಿ ಚರ್ಚಿಸಿ ಇತ್ಯರ್ಥ ಮಾಡಬೇಕಿದೆ. ಈ ಕೆಳ ಮಧ್ಯಮವರ್ಗದವರ ಆಲೋಚನಾ ಸರಣಿಯೇ ಹೀಗೆ. ವ್ಯಾಪಾರ ಯಾವುದು, ಸಂಬಂಧ ಯಾವುದು, ನೈತಿಕತೆ ಯಾವುದು, ಲಾಭ ಯಾವುದು, ಯುದ್ಧ ಯಾವುದು, ಪ್ರೇಮ ಯಾವುದು? ಇವನ್ನು ಭಿನ್ನವಾಗಿ ನೋಡಲಾರದೇ ಎಲ್ಲವನ್ನೂ ಕಲಸುಮೇಲೋಗರ ಮಾಡಿಬಿಡುತ್ತಾರೆ. ಬರೇ ಒಳ್ಳೆ ಬಟ್ಟೆ ತೊಟ್ಟು, ಉತ್ತಮ ವೈನ್ ಕುಡಿಯುವುದಲ್ಲ. ಹೊಟೇಲ್‌ನಲ್ಲಿ ಸರಿಯಾಗಿ ಫೋರ್ಕ್ ಹಿಡಿದು ಊಟದ ಮಜಲುಗಳ ಬಗ್ಗೆ ಅರಿಯುವುದಲ್ಲ. ಅದು ತಾಲೀಮಿನಿಂದ ಪಡೆಯಬಹುದು. ಆದರೆ ವ್ಯಾಪಾರಿ ಮನೋವೃತ್ತಿ ರಕ್ತಗತವಾಗಿ ಬರಬೇಕು. ಇದು ಚಿನ್ಮಯನಲ್ಲಿ ಇಲ್ಲವೇ - ಮೊದಲ ಬಾರಿಗೆ ಶಿವಾನಿಗೆ ಅವನ ಬಗ್ಗೆ ಅನುಮಾನಗಳು ಬರತೊಡಗಿದವು.

*****

ಮುಕುಂದಸಾಗರನ ಸಾವಿನ ನಂತರ ತಾನು ಆಶಿಸುತ್ತಿರುವುದು ಏನೆಂದು ಸುಜಾತಾಳಿಗೆ ನಿಜಕ್ಕೂ ಗೊತ್ತಿರಲಿಲ್ಲ. ಒಂದು ಮಟ್ಟದಲ್ಲಿ ಇರುವುದೆಲ್ಲವನ್ನೂ ಬಿಟ್ಟು ತನ್ನೂರು- ಮೈಸೂರಿಗೆ ಹೋಗುವುದು ಎಂದು ನಿರ್ಧರಿಸಿಯಾಗಿತ್ತು. ಅದಕ್ಕೆ ಪೂರಕವಾಗಿ ಮೈಸೂರಿನಲ್ಲಿದ್ದ ತನ್ನ ಕಾಲೇಜಿನ ದಿನಗಳ ಗೆಳೆಯನಾದ ಅನಿರುದ್ಧನೊಂದಿಗೆ ಮಾತುಕತೆಯೂ ಆಗಿತ್ತು. ತಾವು ಸಂಪಾದಿಸಿದ ಸಂಪತ್ತಿನ ಬಹಳಷ್ಟು ಭಾಗವನ್ನು ಮುಕುಂದಸಾಗರ ಕೊನೆಯ ಹಂತದಲ್ಲಿ ಕಳೆದುಕೊಂಡಿದ್ದನಾದರೂ ಕಂಪೆನಿಯಲ್ಲಿ ತನ್ನ ಕಾಲು ಭಾಗದ ಪಾಲು ಇದ್ದೇ ಇತ್ತು. ಮುಕುಂದ ಸಾಗರ ತನಗೆ ತಿಳಿಯದಂತೆ ಬೇರೆಲ್ಲೂ ಸಾಲಗಳನ್ನು ಮಾಡಿಲ್ಲವೇನೋ. ಹೀಗಾಗಿ ಈಗಿರುವ ಹಣ ಮತ್ತು ತನ್ನ ಹೆಸರಿನಲ್ಲಿರುವ ಆಸ್ತಿಯಿಂದ ಉಂಟಾಗಿರುವ ತನ್ನ ಆರ್ಥಿಕ ಮಟ್ಟದಲ್ಲಿ ಮಿಕ್ಕ ಜೀವನವನ್ನು ಸರಳವಾಗಿ ಯಾವ ತೊಂದರೆಯೂ ಇಲ್ಲದೇ ಕಳೆಯಬಹುದು ಎಂದು ಅವಳಿಗನ್ನಿಸಿತ್ತು. ಆದರೆ ನಲವತ್ತೈದು ನಿವೃತ್ತಿಯ ವಯಸ್ಸೇನೂ ಅಲ್ಲ. ಇಪ್ಪತ್ತು ವರ್ಷಗಳಿಗೂ ಹೆಚ್ಚು ದುಡಿಮೆಯ ಓಡಾಟದಲ್ಲಿ ಕಳೆದ ತನಗೆ ಅನುಭವದ ಬಲವಿದೆ. ಇದೇ ಸಂಸ್ಥೆಯಲ್ಲಾಗಿದ್ದರೆ ಕೆಲಸವನ್ನು ಮುಂದುವರಿಸಿಕೊಂಡು ಹೋಗಬಹುದಿತ್ತು. ಬೇರೆಲ್ಲಾದರೂ ಕೆಲಸ ಹುಡುಕಬಹುದೇ... ಬೇರೇನನ್ನಾದರೂ ಮಾಡಬಹುದೇ... ಈ ಎಲ್ಲ ಪ್ರಶ್ನೆಗಳೂ ಸುಜಾತಾಳನ್ನು ಕಾಡುತ್ತಿದ್ದುವು. ಒಂಟಿಯಾಗಿ, ಕೆಲಸವೂ ಇಲ್ಲದೆ, ಹಳೆಯ ನೆನಪನ್ನು ಅರಸಿ ಮೈಸೂರಿಗೆ ಹೋಗಿ ಏನೂ ತೋಚದ ರಾಜವಿಧವೆಯಾಗಿ ಕೂರುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ. ಶಿವಾನಿಗೆ ಶರಣಾಗಬೇಕೋ ಅಥವಾ ಹೋರಾಡಬೇಕೋ ಅದೂ ತಿಳಿಯಲಿಲ್ಲ. ಯಾವುದಕ್ಕೂ ಈ ವಿಷಯದಲ್ಲಿ ಒಮ್ಮೆ ಅನಿರುದ್ಧನ ಜೊತೆ ಮತ್ತು ತಮ್ಮ ಲೆಕ್ಕಪತ್ರ ನೋಡುತ್ತಿದ್ದ ಆಡಿಟರ್ ರಂಗರಾಜನ್ ಮತ್ತು ವಕೀಲ ಸೂನಾವಾಲಾ ಜೊತೆ ಮಾತನಾಡುವುದು ಒಳಿತೆಂದು ಅವಳು ಅಂದುಕೊಂಡು ಅವರಿಬ್ಬರಿಗೂ ಫೋನ್ ಹಚ್ಚಿದಳು. ಈಗ ತನಗೆ ಬೇಕಿರುವುದು ಪ್ರಾಮಾಣಿಕ ಮತ್ತು ಖಾಸಗಿ ಸಲಹೆ. ಇದನ್ನು ಒಂದು ಕಾಫಿ ಶಾಪ್‌ನಲ್ಲಿ ಚರ್ಚಿಸಬಹುದು ಎಂದೂ, ಈ ಭೇಟಿಗೆ ಇಬ್ಬರೂ ಜೊತೆಯಾಗಿ ಬರಬೇಕೆಂದೂ, ಫೀಸು ಕೇಳಬಾರದೆಂದೂ ತಾಕೀತು ಮಾಡಿ, ಮೀಟಿಂಗಿನ ಸಮಯವನ್ನು ನಕ್ಕಿ ಮಾಡಿದಳು.

ಇನ್ನು ಚಿನ್ಮಯನ ಕರೆ ಮತ್ತು ಮೆಸೇಜಿನ ಬಗ್ಗೆಯೂ ಅವಳು ಯೋಚಿಸಿದಳು. ಅವನು ಎಷ್ಟಾದರೂ ಶಿವಾನಿಯ ಸಹಪಾಠಿ. ಅವನನ್ನು ನಂಬಬಹುದೇ. ಈ ವ್ಯಾಪಾರಿ ಜಗತ್ತಿನಲ್ಲಿ ಬ್ಲೋ ಹಾಟ್, ಬ್ಲೋ ಕೋಲ್ಡ್... ಗುಡ್ ಕಾಪ್ ಬ್ಯಾಡ್ ಕಾಪ್ ಆಟಗಳನ್ನು ಸುಜಾತಾ ಹಿಂದೆಯೂ ಕಂಡಿದ್ದಳು. ಹೀಗಾಗಿ ಚಿನ್ಮಯನನ್ನು ತಾನು ನಂಬಬಹುದು ಎಂದು ಅವಳಿಗೆ ಅನ್ನಿಸಲಿಲ್ಲ. ಆದರೆ ತನ್ನ ಭವಿಷ್ಯದ ದಿಕ್ಕಿಗೆ ಒಂದು ಅರ್ಥವನ್ನು ಅವಳು ಕಂಡುಕೊಳ್ಳಬೇಕಿತ್ತು. ಅವಳಿಗೆ ಆವಶ್ಯಕತೆಗಿಂತ ಹೆಚ್ಚು ದುಡ್ಡು ಮಾಡುವ-ವ್ಯಾಪಾರವನ್ನು ಬೆಳೆಸುವ ಆಸಕ್ತಿಯಿರಲಿಲ್ಲ. ಆ ಬಗ್ಗೆ ಅವಳು ಅನೇಕ ಬಾರಿ ಮುಕುಂದಸಾಗರನ ಮಹತ್ವಾಕಾಂಕ್ಷೆಯನ್ನೇ ಪ್ರಶ್ನಿಸಿದ್ದುಂಟು. ಯಾರಿಗಾಗಿ ಇದೆಲ್ಲಾ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದ ತನಗೆ ಈಗ ಧುತ್ತನೆ ಒದಗಿದ ದ್ವಂದ್ವದಿಂದ ಏನೂ ದಾರಿಕಾಣದಾಗಿತ್ತು. ಅಂದು ಸಂಜೆಗೆ ರಂಗರಾಜನ್ ಮತ್ತು ಸೂನಾವಾಲಾ ಇಬ್ಬರನ್ನು ಅಂಧೇರಿ-ಲೋಖಂಡವಾಲಾದ ಸ್ಟಾರ್-ಬಕ್ಸ್ ಗೆ ಬರಲು ಹೇಳಿದಳು. ಸೌತ್ ಬಾಂಬೆಯಿಂದ ಇಬ್ಬಿಬ್ಬರು ಬರುವುದಕ್ಕೆ ಬದಲು ಸುಜಾತಾಳೇ ಯಾಕೆ ತಾಜ್ ಸೀಲೌಂಜ್‌ಗೆ ಬರಬಾರದೆಂದು ಸೂನಾವಾಲಾ ಹೇಳಿದ. ದ ಈವಿನಿಂಗ್ ಇಸ್ ಆನ್ ಮಿ. ಎಂದ. ಅಲ್ಲಿಯೇ ಕೂತು ಒಂದೆರಡು ತಾಸು ಮಾತಾಡಬಹುದು. ಅವರು ಹೇಳಿದ್ದನ್ನು ಸಾವಧಾನವಾಗಿ ಅವಳು ಕೇಳಲೂ ತಯಾರಿದ್ದಳು. ಒಂದು ರೀತಿಯಿಂದ ಇದೂ ಸರಿಯೆಂದು ಸುಜಾತಾಳಿಗೆ ಅನ್ನಿಸಿತು. ಮುಕುಂದಸಾಗರನ ಅಸ್ವಾಭಾವಿಕ ಸಾವು ಮತ್ತು ಟಿವಿಯಲ್ಲಿ ಅದರ ಚರ್ಚೆಯ ಫಲವಾಗಿ ತನ್ನ ಮುಖಪರಿಚಯ ಅಪರಿಚಿತರಿಗೂ ಆಗಿತ್ತು. ಹೀಗಾಗಿ ಯಾರೇ ಬಂದು ಇದ್ದಕ್ಕಿದ್ದ ಹಾಗೆ ತಲೆಹರಟೆಯ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯೂ ಇತ್ತು. ಮುಕುಂದಸಾಗರನ ಸಾವಿನ ಕೆಲವು ದಿನಗಳ ನಂತರವಷ್ಟೇ ತನಗೆ ಸಾಂತ್ವನ ಹೇಳಲು ಬಂದಿದ್ದ ಅನಿರುದ್ಧನನ್ನು ಭೇಟಿಯಾಗಲು ಲ್ಯಾಂಡ್ಸ್ ಎಂಡಿಗೆ ಹೋದಾಗ ಆದ ಅನುಭವವನ್ನು ಸುಜಾತಾ ಮರೆತಿರಲಿಲ್ಲ. ಸಾಲದ್ದಕ್ಕೆ ಅನೇಕ ಪತ್ರಕರ್ತರು ತನಗೂ ಪರಿಚಯವಿದ್ದವರೇ. ಸೀ ಲೌಂಜ್ ಒಂದು ರೀತಿಯ ಸುರಕ್ಷಿತ ಜಾಗ. ಅಲ್ಲಿ ಒಂದು ಮೂಲೆಯಲ್ಲಿ ಕೂಡಬಹುದಿತ್ತು. ಜೊತೆಗೆ ಸೂನಾವಾಲಾಗೆ ತಾಜ್‌ನ ಜನರ ಪರಿಚಯವಿರುವುದರಿಂದ ‘ಪ್ಲೀಸ್ ಎನ್ಷೂರ್ ಪ್ರೈವಸಿ’ ಎಂದು ಹೇಳಿದರೆ ಯಾರೂ ತಮ್ಮ ಮೇಜಿನ ಕಡೆ ತಲೆ ಹಾಕದಂತೆ ನೋಡಿಕೊಳ್ಳುತ್ತಿದ್ದರು.

ಸಂಜೆಗೆ ಹೊರಡುವಾಗ ಸಾಮಾನ್ಯವಾಗಿ ಕೆಳಗಿನ ಪಾರ್ಕಿಂಗ್‌ನಿಂದ ಕಪ್ಪುಹಳದಿಯ ಟ್ಯಾಕ್ಸಿ ಕರೆಯುತ್ತಿದ್ದವಳು ಅಂದೇಕೋ ಮುಕುಂದನ ಔಡಿಯಲ್ಲಿ ಹೋಗಬೇಕೆಂದು ನಿರ್ಧರಿಸಿದಳು. ತನ್ನ ಸಣ್ಣ ಸ್ಯಾಂಟ್ರೋ ಅಥವಾ ಟ್ಯಾಕ್ಸಿ ಬಿಟ್ಟು ದೊಡ್ಡ ಕಾರನ್ನು ತಾನೇ ಚಲಾಯಿಸುವುದೆಂದೂ - ತಾಜ್‌ನಲ್ಲಾದರೆ ವ್ಯಾಲೇ ಪಾರ್ಕಿಂಗ್ ಇರುವುದರಿಂದ ತೊಂದರೆ ಇಲ್ಲವೆಂದುಕೊಳ್ಳುತ್ತಾ - ಸೀಲಿಂಕ್ ಮೂಲಕ ಗೇಟ್ ವೇ ಬಳಿಗೆ ಬಂದಳು. ಸೀಲೌಂಜಿನಲ್ಲಿ ಕೂತು ಮೆನು ಕಾರ್ಡು ಬಂದಾಗ ರಂಗರಾಜನ್ ‘‘ಜಸ್ಟ್ ಗೆಟ್ ಮೀ ಮಸಾಲಾ ಟೀ’’ ಅಂದ. ಸೂನಾವಾಲಾ ಸಹ ಮೆನು ಕಾರ್ಡನ್ನು ನೋಡಲಿಲ್ಲ. ಬರೇ ಗ್ರೀನ್ ಟೀ ಅಂದ. ಆದರೆ ಎಸ್ಸೆಮ್ಮೆಸ್ ಮೆನು ಕಾರ್ಡನ್ನು ತಿರುತಿರುವಿ ಹಾಕಿ, - ‘‘ಗೆಟ್ ಮೀ ಆರ್ಗಾನಿಕ್ ರಾಯ್ಬೆಸ್ ಟೀ ಅಂಡ್ ಓಪನ್ ಫೆಟಾ, ಸೌರ್ ಡೋ ಬ್ರೆಡ್’’ ಅಂದಳು. ತಾನು ಮಸಾಲಾ ಚಹಾ ಅಥವಾ ಕಾಪುಚಿನೋ ಹೇಳದೇ ಈ ರೀತಿಯಾಗಿ ಆರ್ಡರ್ ಮಾಡಿದ್ದು ಎಸ್ಸೆಮ್ಮಸ್‌ಗೆ ಹೊಸತೆನ್ನಿಸಿತು. ಹೋದಬಾರಿ ಮುಕುಂದಸಾಗರನ ಜೊತೆಗೆ ಊಟಕ್ಕೆ ಹೋಗಿದ್ದಾಗ ನಡೆದ ಸಂಭಾಷಣೆ ಅವಳ ತಲೆಯಲ್ಲಿ ಮತ್ತೆ ರಿಂಗಣಿಸಿತು. ವೈನ್ ವಿಷಯ ಬಂದಾಗ - ‘‘ಲೆಟ್ ಮೀ ಹ್ಯಾವ್ ಎ ಕ್ಯಾಬರ್ನೇ ಸೋವಿಯಾ...’’ ಎಂದು ಸ್ಟೈಲಾಗಿ ಹೇಳಿದ್ದ. ‘‘ನಿನಗೂ ರೆಡ್ ವೈನ್ ಹೇಳಲಾ ಅಥವಾ ವಿಲ್ ಯು ಹ್ಯಾವ್ ಎ ಷಾರ್ಡನೇ?’’ ಎಂದು ಹೊಸ ವಿದ್ಯೆಯನ್ನು ಕಲಿತವನ ಹಾಗೆ ತನ್ನ ಜ್ಞಾನವನ್ನು ತೋರಿಸಿಕೊಂಡಿದ್ದ. ‘‘ನನಗೆ ಬೇಕಾದ್ದನ್ನು ನಾನು ಹೇಳುತ್ತೇನೆ. ಸ್ವಲ್ಪ ತೋರಿಕೆ ಬಿಟ್ಟು ತೆಪ್ಪಗಿರು’’ ಎಂದ ಸುಜಾತಾ ತನಗೆ ಬಕಾರ್ಡಿ ಮತ್ತು ಕೋಕ್ ಹೇಳಿದ್ದಳು. ಆದರೆ ಈಗ.... ಇವಳೇ ಸಾವಿರ ರೂ.ನ ನಾಷ್ಟಾ, ಐನೂರೈವತ್ತು ರೂಪಾಯಿಯ ಚಹಾಕ್ಕೆ ಆರ್ಡರ್ ಮಾಡಿ ಸೂನಾವಾಲಾನ ತಲೆಯ ಮೇಲೆ ಕೈಯಿಟ್ಟದ್ದರ ಮಹತ್ವ ಅವಳಿಗೇ ತಿಳಿಯದ್ದಾಗಿತ್ತು.

ರಂಗರಾಜನ್ ಜೊತೆಗಿನ ಮಾತುಕತೆಯಲ್ಲಿ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತ್ತು. ಅದೃಷ್ಟವಶಾತ್ ತಾನು ಏನು ಮಾಡುತ್ತಿದ್ದಾನೋ ಎಲ್ಲವನ್ನೂ ಮುಕುಂದಸಾಗರ ರಂಗರಾಜನ್ ಗೆ ಹೇಳುತ್ತಿದ್ದ. ಅವನ ತೆರಿಗೆಯ ಪತ್ರಗಳನ್ನು ರಂಗರಾಜನ್ ನೋಡುತ್ತಿದ್ದ. ‘‘ಮುಕುಂದ ಸಾಗರ ನನ್ನ ಅಭಿಪ್ರಾಯವನ್ನು ಕೇಳುತ್ತಿರಲಿಲ್ಲ, ಆದರೆ ತೆರಿಗೆಯ ಮಟ್ಟಿಗೆ ತನ್ನ ವ್ಯವಹಾರಗಳನ್ನು ಬಿಚ್ಚಿಡುತ್ತಿದ್ದ ಮತ್ತು ಕೇಳಿದ ಮಾಹಿತಿಯಷ್ಟನ್ನೂ ಕೊಡುತ್ತಿದ್ದ’’ ಎಂದು ರಂಗರಾಜನ್ ಹೇಳಿದ. ಜೊತೆಗೆ ಮುಕುಂದಸಾಗರ ಕಳೆದೆರಡು ವರ್ಷಗಳಲ್ಲಿ ಒಂದು ಹೊಸ ಕಂಪೆನಿ ಡಿ-ಡಿಸೈನ್ಸ್ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದ್ದನೆಂದೂ, ಅದರಲ್ಲಿ ಸಂಪೂರ್ಣ ಬಂಡವಾಳ ಅವನದ್ದೇ ಇತ್ತೆಂದು ಹೇಳಿದ. ಎಸ್ಸೆಮ್ಮೆಸ್ ಅವಾಕ್ಕಾದಳು. ‘‘ರಿಯಲಿ? ವಾಟ್ ವಸ್ ದ ಕಂಪೆನಿ ಡೂಯಿಂಗ್?’’ ಎಂದು ಕೇಳಿದಳು. ಹೆಚ್ಚೇನೂ ಇಲ್ಲವೆಂದು ರಂಗರಾಜನ್ ಹೇಳಿದ. ಅಂತರ್‌ರಾಷ್ಟ್ರೀಯವಾಗಿ ಬೆಳೆಯುವ ಆಲೋಚನೆಯಿಂದ ವಿದೇಶದಲ್ಲಿ ಬೆಳೆಯುವ ಸಲುವಾಗಿ ಒಂದಷ್ಟು ಮಳಿಗೆಗಳನ್ನು ತೆಗೆಯಲು ಯೋಚಿಸಿದ್ದನೆಂದು, ಈ ಮಾಹಿತಿ ಅತ್ಯಂತ ಗುಪ್ತವಾಗಿತ್ತೆಂದೂ ಹೇಳಿದ. ಸುಜಾತಾಳಿಗೂ ಈ ವಿಷಯ ಹೇಳಿರಲಿಲ್ಲ ಎನ್ನುವುದು ರಂಗರಾಜನ್-ಸೂನಾವಾಲಾ ಇಬ್ಬರಿಗೂ ಆಶ್ಚರ್ಯ ತಂದಿತ್ತಾದರೂ, ಈಗ ಯೋಚಿಸಿದರೆ ಅದಕ್ಕೊಂದು ಅರ್ಥಬರುತ್ತದೆಂದು ರಂಗರಾಜನ್ ಅಂದ. ಅನೇಕ ಬಾರಿ ಎಸ್ಸೆಮ್ಮೆಸ್ ಳನ್ನು ಭಾಗಸ್ವಾಮಿಯನ್ನಾಗಿ ಏಕೆ ಮಾಡುತ್ತಿಲ್ಲ ಎಂದು ಕೇಳಿದ್ದಕ್ಕೆ ತನ್ನ ವ್ಯಾಪಾರದಲ್ಲಿನ ಬದಲಾವಣೆ-ವಿಸ್ತಾರದ ಬಗ್ಗೆ ಸುಜಾತಾಳಿಗೆ ಹೆಚ್ಚಿನ ಆಸಕ್ತಿಯಿಲ್ಲ; ಅವಳು ಇದನ್ನು ವಿರೋಧಿಸುತ್ತಾಳೆ, ಆದರೆ ಇರೋ ಅವಕಾಶವನ್ನು ಕಳೆದುಕೊಳ್ಳಬಾರದು ಎನ್ನುವುದು ಅವನ ನಂಬಿಕೆಯಾಗಿತ್ತು. ಅನ್-ಆಕ್ಸೆಸರಿಯಲ್ಲಿ ಮಾರಾಟಮಾಡಿದ್ದ ತನ್ನ ಪಾಲಿನ ಸಕಲವನ್ನೂ ಈ ಕಂಪೆನಿಯಲ್ಲಿ ಅವನು ಹೂಡಿದ್ದ. ಆದರೆ ಗುಪ್ತವಾಗಿ ವ್ಯವಹಾರಗಳನ್ನು ಒಬ್ಬೊಂಟಿಯಾಗಿ ನಡೆಸುತ್ತಿದ್ದುದರಿಂದ ಡಿ-ಡಿಸೈನ್ ನಲ್ಲಿ ಮಾಡಿದ್ದ ಅಷ್ಟೂ ವ್ಯಾಪಾರ ಕೈಕಚ್ಚಿತ್ತು. ಡಿ-ಡಿಸೈನ್ ನಷ್ಟದಲ್ಲಿತ್ತಲ್ಲದೇ, ಅದರ ತಲೆಯಮೇಲೆ ಸಾಲವೂ ಇತ್ತು. ‘‘ಐ ಥಿಂಕ್ ದಿ ಫಾಲ್ ಆಫ್ ದಿಸ್ ಕಂಪೆನಿ ವಸ್ ದಿ ರೀಸನ್ ಫರ್ ಹಿಸ್ ಫಾಲ್’’ ಎಂದು ರಂಗರಾಜನ್ ಹೇಳಿದ. ಈ ವಿಷಯಗಳನ್ನು ಯಾವತ್ತೋ ಒಂದು ದಿನ ಪ್ರಸ್ತಾಪಿಸಲೇಬೇಕಾಗಿತ್ತು, ಅದಕ್ಕೆ ಇಂದು ಅವಕಾಶ ಒದಗಿಬಂತು ಎಂದ. ‘‘ಸೋ ನೆಟ್-ನೆಟ್ ವಾಟ್?’’ ಎಸ್ಸೆಮ್ಮೆಸ್ ಕೇಳಿದಳು.

ಒಟ್ಟಾರೆ ಅವಳ ಆರ್ಥಿಕ ಸ್ಥಿತಿ ಖಂಡಿತವಾಗಿಯೂ ಉತ್ತಮವಾಗಿಲ್ಲವೆಂದು, ಆದರೆ ಮುಕುಂದಸಾಗರನ ಡಿ-ಡಿಸೈನ್ ಕಂಪೆನಿಯನ್ನು ದಿವಾಳಿ ಎಂದು ಘೋಷಿಸಿ ಮುಚ್ಚುವ ಪ್ರಯತ್ನ ಮಾಡಿ ಸುಜಾತಾಳ ಮೇಲೆ ಬೀಳಬಹುದಾದ ಭಾರವನ್ನು ಕಡಿಮೆ ಮಾಡಬಹುದೆಂದು ರಂಗರಾಜನ್ ಹೇಳಿದ.

‘‘ಆಲ್ಟರ್ನೇಟಿವ್?’’ ಎಂದು ಎಸ್ಸೆಮ್ಮೆಸ್ ಕೇಳಿದಳು.

ಅದಕ್ಕೆ ರಂಗರಾಜನ್ ಹೇಳಿದ್ದಿಷ್ಟು. ಎಸ್ಸೆಮ್ಮೆಸ್‌ಗೆ ಆಸಕ್ತಿ ಮತ್ತು ತಾಳ್ಮೆಯಿದ್ದರೆ ಈ ವ್ಯವಹಾರವನ್ನು ಉಳಿಸಿ ಮುಂದುವರಿಸಬಹುದು. ಆದರೆ ಅದಕ್ಕೆ ಸಾಕಷ್ಟು ಸಮಯ, ನಿರ್ವಹಣಾ ಚಾತುರ್ಯ, ಮತ್ತು ವ್ಯವಹಾರ ನೈಪುಣ್ಯ ಬೇಕಾಗುತ್ತದೆ. ರಿವೈವ್ ಮಾಡುವುದು ಸುಲಭವಾದರೂ, ಸರ್ವೈವ್ ಆಗುವುದು ಕಷ್ಟವೆಂದ. ತಾನು ವ್ಯಾಪಾರವನ್ನು ಮುಂದುವರಿಸುವುದಾದರೆ ಅದಕ್ಕೆ ಏನೆಲ್ಲಾ ಬೇಕಾಗಬಹುದು, ಮುಚ್ಚಬೇಕಾದರೆ ಏನೆಲ್ಲಾ ಮಾಡಬೇಕು ಅನ್ನುವುದರ ವಿವರವನ್ನು ವಿಶ್ಲೇಷಿಸಿ ಒಂದು ಡಾಕ್ಯುಮೆಂಟ್ ತಯಾರಿಸಿ ಕೊಡುವುದಾಗಿ ರಂಗರಾಜನ್ ಹೇಳಿದ. ಹಾಗೇ ಮಾಡಿ, ಆದಷ್ಟೂ ಬೇಗ ತನಗೆ ಕಳುಹಿಸಿಕೊಡಬೇಕೆಂದು ಎಸ್ಸೆಮ್ಮೆಸ್ ಹೇಳಿದಳು.

ಇತ್ತ ಸೂನಾವಾಲಾ ಮೂರು ವಿಷಯಗಳನ್ನು ಚರ್ಚಿಸಿದ. ಒಂದು - ಅನ್-ಆಕ್ಸೆಸರಿಯಲ್ಲಿ ಸುಜಾತಾಳ ಪಾಲು-ಪಾತ್ರ-ಪೆಂಟ್ ಹೌಸಿನ ನೋಟಿಸು. ಎರಡು ಡಿ-ಡಿಸೈನ್ ಕಂಪೆನಿಯಲ್ಲಿರಬಹುದಾದ ಕಾನೂನಿನ ಸೂಕ್ಷ್ಮಗಳು. ಮೂರು ಉಯಿಲು ಬರೆಯದೇ ಪ್ರಾಣ ಕಳೆದುಕೊಂಡ ಮುಕುಂದಸಾಗರನ ಆಸ್ತಿಬಾಧ್ಯತೆಗಳನ್ನು ಸುಜಾತಾಳ ಹೆಸರಿಗೆ ಮಾಡಬಹುದಾದ ಸೂಕ್ಷ್ಮಗಳು. ಈ ಕಥೆ ಸರಳವಾಗೇನೂ ಇರಲಿಲ್ಲ. ಆದರೆ, ಪೆಂಟ್ ಹೌಸಿನ ವಿಷಯಕ್ಕೆ ಹೋರಾಡುವುದರಲ್ಲಿ ಅರ್ಥವಿಲ್ಲ ಎಂದು ಸೂನಾವಾಲಾ ಹೇಳಿದ್ದು ಸ್ಪಷ್ಟವಾಗಿತ್ತು. ತನ್ನ ಗಮನ-ಹಣ-ಸಮಯವನ್ನು ಚಿಲ್ಲರೆ ಹೋರಾಟಕ್ಕೆ ಬಳಸದೇ, ದೊಡ್ಡ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಒಳ್ಳೆಯದೆಂದೂ, ತಕ್ಷಣಕ್ಕೆ ಅವಳು ಪೆಂಟ್ ಹೌಸ್‌ನ ಖಾಲಿ ಮಾಡಿದರೆ ಬಾಂದ್ರಾದಲ್ಲಿ ತನ್ನದೇ ಒಂದು ಫ್ಲಾಟನ್ನು ರೆಡಿ ಮಾಡಿಸಿ ಬಾಡಿಗೆಗೆ ಕೊಡುವುದಾಗಿಯೂ ಸೂನಾವಾಲಾ ಹೇಳಿದ. ಮುಖ್ಯವಾಗಿ ಇಲ್ಲಿದ್ದದ್ದು ಅನ್-ಆಕ್ಸೆಸರಿಯಲ್ಲಿನ ತನ್ನ ಪಾಲು. ಆ ಪಾಲಿಗೆ ಯಾವರೀತಿ ಬೆಲೆಕಟ್ಟಬಹುದು; ಅದನ್ನು ಮಾರಾಟ ಮಾಡಬೇಕೇ - ಅಥವಾ ಹಾಗೇ ಇರಿಸಿಕೊಳ್ಳಬೇಕೇ; ಕಾಲುಭಾಗದ ಭಾಗಸ್ವಾಮಿಯಾಗಿ ತನ್ನ ಹಕ್ಕುಗಳೇನು ? ಈ ಎಲ್ಲವನ್ನು ಸೂನಾವಾಲಾ ವಿವರಿಸಿದ. ‘‘ವಿ ಆರ್ ಆಲ್ ಓವರ್ ದ ಪ್ಲೇಸ್ ರೈಟ್ ನೌ. ಲೆಟ್ಸ್ ಕನ್ಸಾಲಿಡೇಟ್ ಆ್ಯಂಡ್ ಟೇಕ್ ಎ ಕಾಲ್’’ ಎಂದದ್ದು ಎಸ್ಸೆಮ್ಮೆಸ್ ಗೆ ಸರಿ ಅನ್ನಿಸಿತು. ಇಷ್ಟರ ಮೇಲೆ ಬಿಲ್ ಕಟ್ಟಿ ಹೊರಡುತ್ತಿದ್ದಾಗ ಚಿನ್ಮಯನ ಮಾತು ಬಂತು. ಅವನನ್ನು ಭೇಟಿಯಾಗವುದರಲ್ಲಿ ಯಾವುದೇ ಅಪಾಯವಿಲ್ಲ ಎಂದು ಇಬ್ಬರೂ ಹೇಳಿದ್ದರಿಂದ ಎಸ್ಸೆಮ್ಮೆಸ್‌ಗೆ ತುಸು ಧೈರ್ಯ ಬಂತು.

****

ಇದ್ದಕ್ಕಿದ್ದ ಹಾಗೆ ಸುಜಾತಾಳಿಂದ ಬಂದ ಮೆಸೇಜು ಕಂಡ ಚಿನ್ಮಯನಿಗೆ ಸ್ವಲ್ಪ ಗೋಜಲಾಯಿತು. ನಾಲ್ಕು ದಿನಗಳ ಹಿಂದೆ ಕಳುಹಿಸಿದ್ದ ಮೆಸೇಜಿಗೆ ಸುಜಾತಾ ಪ್ರತಿಕ್ರಿಯಿಸಿ, ತನ್ನನ್ನು ಭೇಟಿಯಾಗುವ ಇಷ್ಟವನ್ನು ವ್ಯಕ್ತ ಪಡಿಸಿದ್ದಳು. ಈ ನಡುವೆ ಶಿವಾನಿಯ ಜೊತೆ ಅವನ ಭೇಟಿಯಾಗಿತ್ತು. ಈಗ ಸುಜಾತಾಳನ್ನು ಭೇಟಿಯಾಗುವ ವಿಷಯ ಶಿವಾನಿಗೆ ಹೇಳಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿ ಚಿನ್ಮಯ ಬಿದ್ದ. ಈ ಇಬ್ಬರು ಹೆಣ್ಣುಗಳ ನಡುವೆ ತಾನು ಅಸಹಾಯಕನಾಗಿ ಸಿಲುಕಿಕೊಳ್ಳುತ್ತಿರುವನೇ? ತಾನೀಗ ಏನು ಮಾಡಬೇಕು ಎನ್ನುವುದು ಚಿನ್ಮಯನಿಗೆ ತೋಚಲಿಲ್ಲ. ಶಿವಾನಿ ಅನ್-ಆಕ್ಸೆಸರೀಸನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಂಡು ದಿನನಿತ್ಯದ ವ್ಯವಹಾರಗಳನ್ನು ನೋಡುತ್ತಿದ್ದಳು. ಚಿನ್ಮಯನ ಪಾತ್ರವನ್ನು ಅವರು ಚರ್ಚಿಸಿದ್ದರಾದರೂ, ಚಿನ್ಮಯ ತನ್ನ ನಿಲುವನ್ನು ಸ್ಪಷ್ಟಪಡಿಸಲು ಒಂದು ವಾರ ಕಾಲ ಸಮಯ ಕೇಳಿದ್ದ. ಇದಕ್ಕೆ ಒಂದು ವಾರಕಾಲ ಯಾಕೆ ಬೇಕೆಂದು ಶಿವಾನಿಗೆ ಅರ್ಥವಾಗಿರಲಿಲ್ಲವಾದರೂ ಅವಳು ಮುಜುಗರದಿಂದಲೇ ಒಪ್ಪಿದ್ದಳು.

ಅಂದು ಸಂಜೆ 7:30ಕ್ಕೆ ಇಬ್ಬರೂ ಬಿಕೆಸಿಯಲ್ಲಿನ ಸೋಫಿಟೆಲ್ ಹೊಟೇಲ್‌ನ ಶುದ್ಧ ಸಸ್ಯಾಹಾರಿ ರೆಸ್ಟುರಾ ಟಸ್ಕರ್ಸ್‌ನಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದ್ದರು. ಸಾಮಾನ್ಯವಾಗಿ ಕಾಂಟಿನೆಂಟಲ್ ಇರುವ ಜಾಗಕ್ಕೆ ಕರೆದೊಯ್ಯುವ ಶಿವಾನಿ ಇಂದು ಭಾರತೀಯ ಹಾಗೂ ಸಸ್ಯಾಹಾರಿ ಜಾಗಕ್ಕೆ ಕರೆದೊಯ್ಯುತ್ತಿರುವುದು ಚಿನ್ಮಯನಿಗೆ ಆಶ್ಚರ್ಯ ಉಂಟುಮಾಡಿತ್ತು. ಇದೊಂದು ವಿಲಕ್ಷಣ ಆಯ್ಕೆಯೇ. ಅವನು ಸೋಫಿಟೆಲ್‌ಗೆ ಸಂಜೆ 7:15ಕ್ಕೆ ತಲುಪಿದ. ಅಲ್ಲೇ ಲೌಂಜಿನಲ್ಲಿ ಕೂತು ಸುತ್ತಮುತ್ತ ನೋಡುತ್ತಿದ್ದ. ಪ್ಯಾರಿಸ್‌ಗೆ ಹೋಗುವುದಕ್ಕೆ ಮೊದಲು ಯಾವುದೇ ಪಂಚತಾರಾ ಹೊಟೇಲನ್ನು ಅವನು ಪ್ರವೇಶಿಸಿದ್ದೇ ಇಲ್ಲ. ಹೆಚ್ಚಾಗಿ ಮರಾಠಿ ಊಟವನ್ನು ಇಷ್ಟಪಡುತ್ತಿದ್ದ ಚಿನ್ಮಯ ಮಿಸಲ್ ಪಾವ್, ವಡಾ ಪಾವ್ ಸಾಬೂದಾನಾ ವಡಾದ ಭಕ್ತನಾಗಿದ್ದ. ಇದನ್ನೇ ಸ್ಟ್ರೀಟ್ ಫುಡ್ ಎಂದು ಸಾವಿರಾರು ರೂಪಾಯಿಗೆ ಇಲ್ಲಿ ಮಾರಾಟಮಾಡುತ್ತಿದ್ದರು.

ಹೀಗೆ ಒಂದು ಕಡೆ ಕೂರುವುದು, ಕ್ಯಾಂಡಲ್ ಹಚ್ಚಿದ ನಂತರ ವೈನ್ ಗೆ ಆರ್ಡರ್ ಮಾಡುವುದು, ನ್ಯಾಪ್ಕಿನ್ನನ್ನು ತೊಡೆಯ ಮೇಲೆ ಹರಡಿ ಊಟ ಮಾಡುವುದು. ಊಟದ ನಂತರ ಕೈಯನ್ನು ಫಿಂಗರ್ ಬೌಲಿನಲ್ಲಿ ಅದ್ದುವುದನ್ನೆಲ್ಲಾ ಕಲಿತು ? ಅದರಲ್ಲೂ ಒಂದು ಕಲೆಯಿದೆಯೆಂದು ಮನಗಂಡಿದ್ದ. ಆದರೆ ತಮ್ಮದೇ ಊಟವನ್ನು ಸಾವಿರಾರು ರೂಪಾಯಿ ಕೊಟ್ಟು ಈ ಭಿನ್ನ ರೀತಿಯಲ್ಲಿ ಸೇವಿಸುವ ಶ್ರೀಮಂತ ಕುಟುಂಬಗಳ ರೋಗ ಅವನಿಗಿನ್ನೂ ಅರ್ಥವಾಗಿರಲಿಲ್ಲ. ಆದರೂ ಅವನು ಇದ್ಯಾವುದನ್ನೂ ಪ್ರತಿಭಟಿಸುತ್ತಿರಲಿಲ್ಲ. ಇದೂ ಒಂದು ಅನುಭವ, ಇದರಿಂದಲೂ ತಲೆಗೆ ಏನಾದರೂ ಹೊಳೆಯುತ್ತದೆ ಎಂದುಕೊಳ್ಳುತ್ತಿದ್ದ. ಕೂತು ಸೋಫಿಟೆಲ್ ಹೊಟೇಲ್‌ನ ಒಳಾಂಗಣವನ್ನು ರೂಪಿಸಿರುವ ಪರಿಯನ್ನು ಗಮನಿಸುತ್ತಿದ್ದಾಗ ಶಿವಾನಿ ಬಂದಿದ್ದಳು.

ಸಂಜೆ 7:30ಕ್ಕೆ ಸರಿಯಾಗಿ ಇಬ್ಬರೂ ಟಸ್ಕರ್ ಹೊಕ್ಕರು. ಅವರಿಗಾಗಿ ಶಿವಾನಿ ಒಂದು ಮೂಲೆಯ ಟೇಬಲ್ ಬುಕ್ ಮಾಡಿದ್ದಳು. ‘‘ಟುಡೇ ದ ಥೀಮ್ ಈಸ್ ಇಂಡಿಯನ್’’ ಎಂದು ಸುಳಾ ವೈಟ್ ವೈನ್ ಹೇಳಿದಳು. ಚಿನ್ಮಯನೂ ಅದನ್ನೇ ಕುಡಿಯುವುದಾಗಿ, ಊಟದ ವಿಷಯಕ್ಕೂ ಅವಳ ಆಯ್ಕೆಯನ್ನೇ ತಾನೂ ಪಾಲಿಸುವುದಾಗಿ ಹೇಳಿದ. ಅಂದು ಅವಳು ಖಾರದ ಮೂಡಿನಲ್ಲಿದ್ದಳು ಅನ್ನಿಸುತ್ತದೆ ಹೀಗಾಗಿ ರಾಜಸ್ಥಾನಿ ಖಾದ್ಯಗಳನ್ನು ಹೇಳಿದಳು. ಮಥಾನಿಯ ಮಿರ್ಚ್ ಪನೀರ್ ಮತ್ತು ಜೋಧಪುರಿ ಮಿರ್ಚ್ ಪಕೋಡಾ ಆರ್ಡರ್ ಮಾಡಿದಳು. ಚಿನ್ಮಯ ಲೆಕ್ಕ ಹಾಕಿದ. ಈಗಾಗಲೇ ಅವಳು ಆರು ಸಾವಿರದಷ್ಟು ಬಿಲ್ ಮಾಡಿಬಿಟ್ಟಿದ್ದಳು. ಈ ಖರ್ಚು ನೋಡಿ ಅವನಿಗೆ ಏನೋ ಕುಟುಕುತ್ತಿತ್ತು. ಇದರಿಂದಾಗಿ ಅನ್ಯಮನಸ್ಕನಾಗುವುದು ಸಹಜವೇ ಇತ್ತಾದರೂ ಶಿವಾನಿ ಯಾವುದಕ್ಕೂ ಅವಕಾಶ ನೀಡಲಿಲ್ಲ.

ಅವಳು ನೇರವಾಗಿ ಅನ್-ಆಕ್ಸೆಸರೀಸ್ ವಿಷಯಕ್ಕೆ ಬಂದು ‘‘ವಾಟ್ಸ್ ಯುವರ್ ಪ್ರಾಬ್ಲಮ್’’ ಎಂದು ಕೇಳಿದಳು.

ಚಿನ್ಮಯನ ಮನಸ್ಸಿನಲ್ಲಿ ತಮ್ಮ ಹಿಂದಿನ ಸಂಭಾಷಣೆ ಮತ್ತೆ ಮರುಕಳಿಸಿತು. ‘‘ನೈತಿಕವಾಗಿ ನಿನಗಿದು ಸರಿ ಅನ್ನಿಸುತ್ತಾ? ಇನ್ನಷ್ಟು ದಿನ ಕಾಯುವುದು ಒಳ್ಳೆಯದಲ್ಲವಾ?’’

‘‘ಇದರಲ್ಲಿ ನೈತಿಕತೆಯ ಪ್ರಶ್ನೆ ಏನು ಬಂತು ಚಿನ್ನೂ? ಇದು ವಾಸ್ತವದ ಪ್ರಶ್ನೆಯಲ್ಲವೇ? ಈ ವ್ಯವಹಾರಗಳನ್ನೆಲ್ಲಾ ಮುಕುಂದಸಾಗರ ಕಣ್ತೆರದೇ ಮಾಡಿದ್ದ. ಅವನೇನು ವ್ಯಾಪಾರ ಅರಿಯದ ಕೂಸೇ. ಇಪ್ಪತ್ತೈದು ವರ್ಷಗಳಿಂದ ವ್ಯವಹಾರದಲ್ಲಿದ್ದ. ಹಾಗೆಂದು ಅವನು ಹಾರಿ ಅಥವಾ ಜಾರಿ ಜೀವ ಕೊಟ್ಟರೆ ವಾಸ್ತವವು ಬದಲಾಗುತ್ತದಾ ಹೇಳು!’’

‘‘ಅಲ್ಲ ಸಂದರ್ಭ ಸರಿಯಲ್ಲವೇನೋ. ಆಕೆ ನೋವಿನಲ್ಲಿರುವಾಗ...’’

‘‘ಸಂದರ್ಭ ಯಾವತ್ತಿಗೂ ಸರಿಯಿರುವುದಿಲ್ಲ. ಯಾಕೆಂದರೆ ಇದು ಅಹಿತಕರವಾದ ಮಾತೇ. ಆದರೆ ಯಾವಾಗಲಾದರೂ ಆಡಬೇಕಾದ ಮಾತನ್ನು ಮುಂದೂಡುವುದರಿಂದ ಯಾರೂ ಏನೂ ಗಳಿಸುವುದಿಲ್ಲವಲ್ಲವೇ. ಜೊತೆಗೆ ಇದು ಸಂಬಂಧದ ಮಾತೇನೂ ಅಲ್ಲವಲ್ಲ. ಇದು ವ್ಯಾಪಾರದ ಮಾತು. ಇಲ್ಲಿ ಲೇನ್ ದೇನ್ ಮಾತ್ರ ಇರುತ್ತದೆ ಎಂದು ಅರ್ಥಮಾಡಿಕೋ.’’

‘‘ಇದೇ ಸಂದರ್ಭ ನಿನಗೇ ಒದಗಿದರೆ ಏನನ್ನಿಸುತ್ತೆ ಶಿವಾನಿ?’’

‘‘ನನಗೆ ಹಾಗಾಗದಿರಲಿ ಅಂತ ಆ ಇಲ್ಲದ ದೇವರನ್ನು ಪ್ರಾರ್ಥಿಸುತ್ತೇನೆ. ಆದರೆ ಇನ್ ದ ಅನ್ಲೈಕ್ಲೀ ಇವೆಂಟ್ - ಅದರ ಜವಾಬ್ದಾರಿಯನ್ನು ನಾನೇ ಹೊರಬೇಕಲ್ಲವಾ..’’

ಈ ರೀತಿ ಮಾತನಾಡಿದ್ದ ಶಿವಾನಿಯ ತರ್ಕವನ್ನು ತಾನು ಒಪ್ಪುತ್ತಿಲ್ಲ. ಆ ತರ್ಕ ಒಪ್ಪಲು ತನ್ನ ಬಳಿ ಯಾವುದೇ ಬಲವಾದ ತಾರ್ಕಿಕ ವಾದವಿಲ್ಲ -ಬದಲಿಗೆ ತನ್ನಲ್ಲಿದ್ದದ್ದು ನೈತಿಕ ವಾದ. ಆದರೆ ನೈತಿಕವಾದ ವಾದ ಅವರವರ ಖಾಸಗಿ ನೈತಿಕತೆಯ ಓರಗಲ್ಲಿನ ಮೇಲೆ ಉಜ್ಜಲ್ಪಡುತ್ತಿತ್ತು. ಹೀಗಾಗಿ ಆ ನೆಲೆಯಲ್ಲಿ ಇಬ್ಬರೂ ಒಂದು ತೀರ್ಮಾನಕ್ಕೆ ಬರುವುದು ಸಾಧ್ಯವಿರಲಿಲ್ಲ. ಹೀಗಾದರೂ ತಡವರಿಸುತ್ತಾ ತನಗನ್ನಿಸಿದ್ದನ್ನು ಬೆಳೆಸಿ ಹೇಳಿದ. ‘‘ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಶಿವಾನಿ. ನಾನು ಈ ಅನ್-ಆಕ್ಸೆಸರೀಸ್ ಜೊತೆ ಗುರುತಿಸಿಕೊಳ್ಳಲು ತಯಾರಿಲ್ಲ. ಇದು ನಮ್ಮಿಬ್ಬರ ಸ್ನೇಹದ ನಡುವೆಯೂ ಬರುತ್ತಿದೆಯಾದ್ದರಿಂದ, ಲೆಟ್ಸ್ ಬ್ರೇಕ್ ಅಪ್. ಇದು ನಾನು ಬೆಳೆದು ಬಂದ ಮೌಲ್ಯಗಳು, ವ್ಯಾಪಾರದ ಚೌಕಟ್ಟಿಗೆ ಸಂಬಂಧಿಸಿದ್ದು. ನಾಟ್ ವಿಲ್ಲಿಂಗ್’’

ತಮ್ಮಿಬ್ಬರ ನಡುವೆ ಇರುವ ಕಂದರದ ಆಳ-ಅಗಲಗಳನ್ನು ಅವನು ವಿವರಿಸಿ ಹೇಳಿದ. ಆದರೆ ಶಿವಾನಿಯ ತರ್ಕ ಮುಂದುವರಿಯಿತು. ಅವಳು ಇದನ್ನು ಬಡಪಟ್ಟಿಗೆ ಬಿಡುವವಳಾಗಿರಲಿಲ್ಲ.

‘‘ಲೆಟ್ಸ್ ಬ್ರೇಕ್ ದಿಸ್ ಅಪ್. ಇದರಲ್ಲಿ ನೀನು ಅನೇಕ ಸಮಸ್ಯೆಗಳನ್ನು ಒಟ್ಟಿಗೆ ಖಿಚಡಿ ಮಾಡಿದ್ದೀಯ. ನಾವು ಒಂದೊಂದಾಗೇ ಚರ್ಚಿಸೋಣ, ಫಸ್ಟ್ಲಿ, ಡು ಯು ಲವ್ ಮಿ?’’ ‘‘ಅಫ್ ಕೋರ್ಸ್. ಆದರೆ ಅದರ ಜೊತೆಗೆ ಬರುತ್ತಿರುವ ನೈತಿಕತೆಯ ಬ್ಯಾಗೇಜು....’’

‘‘ಓಕೆ. ನನ್ನನ್ನ ಪ್ರೀತಿಸುತ್ತೀಯ. ಸೋ, ಅದು ಒಂದು ಬದಿಗಿಡೋಣ. ನನ್ನ ಜೊತೆಗಾರನಾಗಿ ವ್ಯಾಪಾರದಲ್ಲಿರಲು ನಿನಗೆ ಯಾವ ಅಭ್ಯಂತರವೂ ಇರಲಿಲ್ಲ ಅಲ್ಲವೇ. ನಾವು ಜೊತೆಗೂಡಿ ಸ್ಟಾರ್ಟಪ್ಪಿನ ಯೋಜನೆಗಳನ್ನು ಹಾಕಿದ್ದೆವು. ಸರೀನಾ?’’

‘‘ಯಸ್. ಆದರೆ ಅದರಲ್ಲಿ ನಾವು ಸಮಾನ ಭಾಗಸ್ವಾಮಿಗಳಾಗಿದ್ದೆವು. ಜೊತೆಜೊತೆಗೆ ಯೋಚಿಸಿದ್ದೆವು. ಇಲ್ಲಿ ಇದು ಒಂದು ಸ್ಥಾಪಿತ ವ್ಯಾಪಾರವನ್ನು ನಾವು ಬೇರೊಬ್ಬರಿಂದ ಕಸಿಯುತ್ತಿದ್ದೇವೆ.’’ ಚಿನ್ಮಯನಂದ. ವೈನ್ ಬಾಟಲಿಯಿಂದ ಮತ್ತೊಂದು ಗುಟುಕು ಇಬ್ಬರೂ ಬಗ್ಗಿಸಿಕೊಂಡರು. ಲಸೂನಿ ಪಾಲಕ್ ಮತ್ತು ಜೋಧಪುರಿ ಗಟ್ಟಾ, ಮಾಲ್ವಾ ಚನಾಮಸಾಲಾ ಹೇಳಿ, ಒಂದಿಷ್ಟು ಲಚ್ಚಾ ಪರಾಠ ಮತ್ತು ಜೀರಾ ರೈಸ್ ಹೇಳಿದಳು. ‘‘ವೇಟ್..ನನ್ನ ಜೊತೆಗೆ ವ್ಯಾಪಾರ ಸ್ಥಾಪಿಸುವುದಾದರೆ ಸಿದ್ಧ, ಆದರೆ ಬೇರೊಂದು ವ್ಯಾಪಾರವನ್ನು ಕೊಳ್ಳುವುದಕ್ಕೆ ಸಿದ್ಧನಿಲ್ಲ.. ಹೌದಾ? ಇದು ಮಾಲಕತ್ವದ ಪ್ರಶ್ನೆಯಾ ಅಥವಾ ಘನತೆಯ ಪ್ರಶ್ನೆಯಾ ಅಥವಾ ಸಂಸ್ಥೆಯಲ್ಲಿ ಹೈಯರಾರ್ಕಿಯ ? ಯಾರು ಯಾರ ಬಾಸ್ ಎನ್ನುವ ಪ್ರಶ್ನೆಯಾ... ಯಾಕೆಂದರೆ ನಾವು ಹಿಂದೆ ಪ್ಯಾರಿಸ್‌ನಲ್ಲಿ ಚರ್ಚಿಸಿದ್ದಾಗಲೂ ಇಬ್ಬರೂ ಸಮಾನ ಪಾತ್ರವಿರುವಂತಹ ಒಂದು ವ್ಯಾಪಾರವನ್ನು ಮಾಡುವ ಕನಸನ್ನು ಕಂಡಿದ್ದೆವು ಅಲ್ಲವಾ?’’ ಶಿವಾನಿ ಕೇಳಿದಳು

‘‘ಯಸ್. ಆದರೆ ಇದು ನಿನ್ನ ಫ್ಯಾಮಿಲಿ ಬಿಸಿನೆಸ್ ಆಗುತ್ತಿದೆ. ನಿಮ್ಮಪ್ಪ ದುಡ್ಡು ಹಾಕಿದ್ದಾರೆ. ಇದರಲ್ಲಿ ನನ್ನ ಪಾತ್ರ ಯಾವತ್ತಿದ್ದರೂ ದ್ವಿತೀಯ ದರ್ಜೆಯ ಪ್ರಜೆಯದ್ದಾಗುತ್ತದಲ್ಲವಾ?’’ ಚಿನ್ಮಯ ಕೇಳಿದ

‘‘ಬಟ್, ಹೊಸ ವ್ಯಾಪಾರ ಪ್ರಾರಂಭಿಸುವಾಗಲೂ, ಹೆಚ್ಚಿನ ಹೂಡಿಕೆಯನ್ನು ನಾನು ಹೂಡುತ್ತೇನೆ, ನೀನು ಭಾಗಸ್ವಾಮ್ಯವನ್ನು ಸ್ವೆಟ್ ಈಕ್ವಿಟಿಯ ಮೂಲಕ ಕ್ರಮಕ್ರಮೇಣ ಹೆಚ್ಚಿಸುವುದು ಎಂದು ಮಾತಾಡಿದ್ದೆವು. ಯು ವರ್ ಒಕೆ ವಿಥ್ ಇಟ್. ನನ್ನ ಹೂಡಿಕೆ ನಮ್ಮಪ್ಪನಿಂದ ಬರುತ್ತೆ ಅಂತ ನಿಂಗೆ ಗೊತ್ತಿತ್ತು. ಅಲ್ಲವಾ?’’ ಮಿರ್ಚಿ ಪಕೋಡಾದ ಖಾರ ಸವಿಯುತ್ತಾ, ಬೆವರನ್ನು ಒರೆಸಲು ನ್ಯಾಪ್ಕಿನ್ನನ್ನು ಮುಖದಮೇಲೆ ತಟ್ಟಿಕೊಳ್ಳುತ್ತಾ ಶಿವಾನಿ ಕೇಳಿದಳು.

ಚಿನ್ಮಯ ಒಂದೊಂದು ಪ್ರಶ್ನೆಯ ಜವಾಬು ನೀಡುತ್ತಿದ್ದಂತೆ ತನ್ನ ವಾದ ಕುಸಿಯುತ್ತಿದೆ ಅನ್ನಿಸಿತ್ತು. ಈ ರೀತಿಯ ಇಂಟರಾಗೇಷನ್ನಿನಲ್ಲಿ ತಾನು ಸೋಲುವುದು ಖಚಿತ ಎನ್ನಿಸಿ ವಾದದ ಸರಣಿಯನ್ನು ಬದಲಿಸಿದ. ‘‘ಲೆಟ್ಸ್ ನಾಟ್ ಬ್ರೇಕ್ ಇಟ್. ನನ್ನ ದುಗುಡವನ್ನು ನಾನು ನಿನ್ನ ಮುಂದಿಡುತ್ತೇನೆ. ನೀನು ಒಂದು ಒಟ್ಟಾರೆ ಜವಾಬು ಕೊಡು. ನನ್ನ ಅಂಶಗಳು ಇವು - ಒಂದು: ನಾವು ಯೋಚಿಸಿದ್ದು ಹೊಸ ವ್ಯಾಪಾರದ ವಿಷಯ, ಇದು ಬೇರೊಬ್ಬರ ವ್ಯಾಪಾರ; ಎರಡು: ಇಲ್ಲಿ ನಿನ್ನ ಮತ್ತು ನಿನ್ನ ತಂದೆಯ ಪಾತ್ರದ ಮುಂದೆ ನನ್ನ ಪಾತ್ರ ಚಿಕ್ಕದಾಗಿಯೂ, ಗೌಣವಾಗಿಯೂ, ಅಸಮಾನವಾಗಿಯೂ ಕಾಣಿಸುತ್ತದೆ; ಮೂರು: ಈ ವ್ಯಾಪಾರವನ್ನು ನೀನು ಕೈವಶ ಮಾಡಿಕೊಂಡಿರುವ ರೀತಿ ನನಗೆ ಇಷ್ಟವಾಗಿಲ್ಲ. ದಿಸ್ ಇಸ್ ಸರ್ಟನ್ಲೀ ನಾಟ ಎ ಸ್ಟಾರ್ಟಪ್; ನಾಲ್ಕು: ಜೀವನವಿಡೀ ನಾನು ನಿನ್ನ ವ್ಯಾಪಾರದಲ್ಲಿ ಒಬ್ಬ ಉದ್ಯೋಗಿಯ ರೀತಿಯಲ್ಲೇ ಎಲ್ಲರೂ ನೋಡುತ್ತಾರೆ - ನೀನು ಎಷ್ಟೇ ಸಮಾನ ಭಾಗಸ್ವಾಮಿ ಎಂದು ಹೇಳಿದರೂ ನಂಬುವವರು ಯಾರೂ ಇಲ್ಲ. ಇಟ್ ಡಸ್ ನಾಟ್ ಹೆಲ್ಪ್ ಮೈ ಈಗೋ; ಐದು: ನಮ್ಮ ಸ್ನೇಹ, ಗೆಳೆತನ, ಸಂಬಂಧ ಮುಂದಿನ ಮದುವೆ ಈ ಒಂದು ವ್ಯಾಪಾರಕ್ಕೆ ತಗುಲಿಕೊಂಡಿದೆ. ಐ ಡೋಂಟ್ ಲೈಕ್ ಇಟ್... ಆ್ಯಂಡ್ ಅಫ್ ಕೋರ್ಸ್ ಐ ಡೋಂಟ್ ಲೈಕ್ ದ ವೇ ಸುಜಾತಾ ಇಸ್ ಬೀಯಿಂಗ್ ಟ್ರೀಟೆಡ್’’ ಚಿನ್ಮಯ ತನ್ನಲ್ಲಿದ್ದದ್ದನ್ನು ಕಕ್ಕಿಬಿಟ್ಟ.

‘‘ಗುಡ್. ಲೆಟ್ಸ್ ಸಾರ್ಟ್ ದಿಸ್. ಒಂದು: ನೀನು ನಿನಗೆ ಬೇಕಾದ ಪಾತ್ರವನ್ನು ಆಯ್ದುಕೋ. ಯು ವಾಂಟ್ ಟು ಬಿ ಸಿಇಒ, ಸೋ ಬಿ ಇಟ್..ನಾನು ನಂಬರ್ ಟೂ ಆಗುತ್ತೇನೆ; ಎರಡು: ನೀನು ಡಿಸೈನ್ ನೋಡಿಕೊಳ್ಳುತ್ತೀಯ? ಫೈನ್, ನಾನು ಮಾರಾಟ ನೋಡುತ್ತೇನೆ; ಮೂರು: ನಿನ್ನ ಭಾಗಸ್ವಾಮ್ಯ ಹೇಗೆ ಬೆಳೆಯಬಹುದು ಅನ್ನುವುದಕ್ಕೆ ಒಂದು ಒಪ್ಪಂದವನ್ನು ಮಾಡಿಕೊಳ್ಳೋಣ; ನಾಲ್ಕು: ನಿನಗೆ ಇಷ್ಟ ಬಂದವರನ್ನು ಅಧ್ಯಕ್ಷರ ಸ್ಥಾನಕ್ಕೆ ಸೂಚಿಸು, ನನ್ನ ಪಪ್ಪಾ ತಕ್ಷಣ ರಾಜೀನಾಮೆ ಕೊಡುವ ಹಾಗೆ ನಾನು ನೋಡಿಕೊಳ್ಳುತ್ತೇನೆ; ಐದು: ಆ ಸುಜಾತಾಳನ್ನು ಹೇಗೆ ಟ್ರೀಟ್ ಮಾಡಬೇಕೋ ತಿಳಿಸು, ಹಾಗೆ ಮಾಡೋಣ...ಬಟ್ ನಾಟ್ ಫಾರ್ಮಲಿ, ಇನ್ಫಾರ್ಮಲಿ. ಆರು: ತಡಮಾಡದೇ ಮದುವೆಯಾಗೋಣ. ಇನ್ನೇನು ಬೇಕು ಹೇಳು’’ ಎಂದು ಒಂದೇ ಏಟಿಗೆ ಶರಣಾಗತಿಯ ಆಕ್ರಮಣವನ್ನು ಮಾಡಿದಳು. ‘‘ಬಟ್ ಲೆಟ್ ಮಿ ಬಿ ಕ್ಲಿಯರ್. ವ್ಯಾಪಾರದಲ್ಲಿ ನಮ್ಮದು ಏನೇ ತಕರಾರುಗಳಿದ್ದರೂ, ಮತ್ತೆಂದೂ ಬ್ರೇಕಪ್ ಮಾತಾಡಬೇಡ. ನಿನ್ನ ಬಗೆಗಿನ ಪ್ರೀತಿ ಮತ್ತು ಅಭಿಮಾನಕ್ಕೂ ವ್ಯಾಪಾರಕ್ಕೂ ಗಂಟು ಹಾಕಬೇಡ. ವಿ ವಿಲ್ ಆಲ್ವೇಸ್ ಬಿ ಟುಗೆದರ್, ಆ್ಯಂಡ್ ಲೆಟ್ ದ ಬಿಸಿನೆಸ್ ನಾಟ್ ಕಂ ಬಿಟ್ವೀನ್ ಅಸ್.’’

ಚಿನ್ಮಯನಿಗೆ ಏನು ಹೇಳಬೇಕೋ ತೋರಲಿಲ್ಲ. ಅವನು ಚರ್ಚೆಯ ನೆಲೆಯಲ್ಲಿ ಮಾತಾಡುತ್ತಿದ್ದ. ಅವಳು ವ್ಯಾಪಾರದ ನೆಲೆಯಲ್ಲಿ ಮಾತಾಡುತ್ತಿದ್ದಳು. ತನ್ನನ್ನು ಅವಳು ಬಿಟ್ಟುಕೊಡಲು ತಯಾರಿರಲಿಲ್ಲ. ಆದರೆ ತನ್ನ ನೈತಿಕತೆಯನ್ನು ಅಪ್ಪಲೂ ಒಪ್ಪುತ್ತಿಲ್ಲ. ಅವನ ದುಗುಡಗಳನ್ನು ಬಗೆಹರಿಸುವ ರೀತಿಯೂ ಕೂಡುಕೊಳ್ಳುವಿಕೆಯ ನೆಲೆಯಲ್ಲಿ ಇರಿಸಿದ್ದು ನೋಡಿ ಅವನು ಅವಾಕ್ಕಾದ. ‘‘ಒಂದು ವಾರ ಟೈಂ ಕೊಡು. ಇದು ಅವಸರದಲ್ಲಿ ತೀರ್ಮಾನಿಸುವ ವಿಷಯವಲ್ಲ’’ ಎಂದ. ಅಲ್ಲಿಯವರೆಗೆ ತಾನು ವ್ಯಾಪಾರವನ್ನು ಇದೇ ರೀತಿಯಲ್ಲಿ ಮುಂದುವರಿಸುತ್ತಿರುವುದಾಗಿ ಶಿವಾನಿ ಹೇಳಿದಳು.

ಎಲ್ಲ ಮುಗಿಯುತ್ತಿದ್ದಂತೆ. ‘‘ಡೆಸರ್ಟ್... ಲೆಟ್ಸ್ ಹ್ಯಾವ್ ಚುರ್ಮಾ’’ ಎಂದು ಅಂದಿನ ಚರ್ಚೆಯನ್ನು ಮುಗಿಸಿದ್ದಳು. ಹೊರಡುವಾಗ ತಾನು ಹಾಕಿದ್ದ ಸುಗಂಧ ಅವನ ಮೂಗಿಗೆ ಅಡರುವಷ್ಟು ಸಮೀಪಕ್ಕೆ ಬಂದು ‘‘ಚಿನ್ನೂ ಆರ್ ಯು ಷೂರ್ ಯು ವಾಂಟ್ ಟು ಗೋ ಹೋಮ್. ಬೇಕಿದ್ದರೆ ನನ್ನ ಜೊತೆ ಬಾ, ವಿ ಕ್ಯಾನ್ ಕಂಟಿನ್ಯೂ, ಈ ಮಾತುಕತೆಯನ್ನು ನಾವು ಮತ್ತೊಂದು ಡ್ರಿಂಕ್ - ನೈಟ್ ಕ್ಯಾಪಿನ ಜೊತೆ ಮುಂದುವರಿಸಬಹುದು’’ ಅಂದಳು.

ಚಿನ್ಮಯನಿಗೆ ಈ ಊಟ ಮತ್ತು ಮಾತು ಎರಡೂ ಹೆಚ್ಚೇ ಆಯಿತು. ಅವನು ಇದನ್ನು ಯೋಚಿಸಲು ಪ್ರತ್ಯೇಕ ಸಮಯ ಮತ್ತು ಖಾಸಗಿ ಕ್ಷಣಗಳು ಬೇಕೆಂದು ತನ್ನ ದಾರಿ ಹಿಡಿದ. ಇದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಂತಲೂ ಅನ್ನಿಸಿತು. ಇಷ್ಟೊಂದು ಶ್ರೀಮಂತಿಕೆಯ ಊಟ ಅರಗುವುದು ಕಷ್ಟವೇ. ಹತ್ತು ಸಾವಿರದಾಸುಪಾಸಿನ ಬಿಲ್ಲಿನಲ್ಲಿ ಎಷ್ಟು ಕೊಬ್ಬ್ಬು-ಕ್ಯಾಲೋರಿಗಳಿರಬಹುದು. ಇದನ್ನು ಕರಗಿಸಲು ಎಷ್ಟು ಕಸರತ್ತಿನ ಆವಶ್ಯಕತೆಯಿಬಹುದು.....

***

‘‘ನಾನು ಒಂದು ವಾರದಲ್ಲಿ ಮನೆಯನ್ನು ಖಾಲಿ ಮಾಡುತ್ತಿದ್ದೇನೆ, ಈ ಮನೆಯಲ್ಲಿರುವ ಫರ್ನಿಷಿಂಗ್ ಬಿಟ್ಟು ಮಿಕ್ಕವೆಲ್ಲಾ ನಮ್ಮ ಖಾಸಗಿ ವಸ್ತುಗಳೆಂದು ಭಾವಿಸಿದ್ದೇನೆ. ಯುವರ್ ಆಫಿಸ್ ಕ್ಯಾನ್ ಮೇಕ್ ಎನ್ ಇನ್ವೆಂಟರಿ’’ ಎನ್ನುವ ಮೆಸೇಜು ಸುಜಾತಾಳಿಂದ ಬಂದದ್ದು ಶಿವಾನಿಯನ್ನು ದಿಗ್ಭ್ರಮೆಗೊಳಿಸಿತ್ತು. ಇದು ತಾನು ಊಹಿಸಿದ ದಿಕ್ಕಿನಲ್ಲಿ ಹೋಗುತ್ತಿಲ್ಲ -ಮನೆ ಖಾಲಿಮಾಡುವುದರಲ್ಲಿರುವ ಈ ವೇಗ ಸಹಜದ್ದಾಗಿರಲಿಲ್ಲ. ಸುಜಾತಾಳನ್ನು ತನ್ನ ಆಕ್ರಮಣದಿಂದ ಮೆತ್ತಗಾಗಿಸುವುದೇ ಶಿವಾನಿಯ ಯೋಚನೆಯಾಗಿತ್ತು. ಸುಜಾತಾಳಿಗೆ ಈ ವ್ಯಾಪಾರ ಮತ್ತು ಅದಕ್ಕೆ ಸಂಬಂಧಿಸಿದ ವಲಯದಲ್ಲಿ ಯಾವುದೇ ಮಹತ್ವದ ಪಾತ್ರ ಪ್ರಾಪ್ತವಾದರೂ ಅದು ಸಂಸ್ಥೆಯಲ್ಲಿ ಒಳರಾಜಕೀಯವನ್ನು ಉಂಟು ಮಾಡುತ್ತದೆ ಎನ್ನುವುದು ಶಿವಾನಿಯ ನಂಬಿಕೆಯಾಗಿತ್ತು. ಒಂದು ಸಂಸ್ಥೆಯಲ್ಲಿ ಎರಡು ಬಣಗಳಿರುವುದು ಎಂದಿಗೂ ವ್ಯಾಪಾರದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಸುಜಾತಾಳನ್ನು ಸಂಪೂರ್ಣವಾಗಿ ನಿಶ್ಶಸ್ತ್ರಗೊಳಿಸಿ, ಮುಂಬೈಯಿಂದ ದೂರ - ಅವಳಿಗಿಷ್ಟವಾದ ಮೈಸೂರಿಗೆ ಕಳುಹಿಸಿದ ಹೊರತೂ ತಾನು ಈ ಸಂಸ್ಥೆಯ ಮೇಲೆ ಪೂರ್ಣವಾದ ಹತೋಟಿಯನ್ನು ಪಡೆಯುವುದು ಸಾಧ್ಯವಿರಲಿಲ್ಲ. ವೈಯಕ್ತಿಕವಾಗಿ ಅವಳಿಗೆ ಬೇಕಾದ ಯಾವುದೇ ಸಹಾಯವನ್ನು ಒಂದು ಮಾನವೀಯ ನೆಲೆಯಲ್ಲಿ ಮಾಡಲು ಶಿವಾನಿ ತಯಾರಾಗಿದ್ದಳಾದರೂ, ವ್ಯಾಪಾರದ ಮಟ್ಟಿಗೆ ಬಂದಾಗ ಅವಳು ಎರಡು ಗುಣಗಳನ್ನು ತೋರುತ್ತಿದ್ದಳು - ಒಂದು ಖಚಿತತೆ, ಎರಡು ನಿರ್ದಯಿಯಾಗಿರುವುದು. ಹೀಗಾಗಿ ಸುಜಾತಾಳಿಗೆ ಸಹಾಯ ಮಾಡುತ್ತಲೇ ಅವಳನ್ನು ಈ ವ್ಯಾಪಾರದಿಂದ ಕಿತ್ತೊಗೆಯುವುದು ಹೇಗೆಂದು ಯೋಚಿಸುತ್ತಿದ್ದಳು. ಈಗ ಈ ಮೆಸೇಜ್ ಬಂದಾಗ ಇದರ ಅರ್ಥ ಏನೆಂದು ಯೋಚಿಸಿನೋಡುವುದರ ಆವಶ್ಯಕತೆಯಿತ್ತು. ತಾನು ಈ ವಿಷಯಕ್ಕೆ ತನ್ನ ಪಪ್ಪಾ ಜೊತೆ ಮಾತಾಡುವುದು ಒಳಿತೆನ್ನಿಸಿತು.

ಹಿಂದಿನ ದಿನ ನಡೆದ ಚಿನ್ಮಯನ ಜೊತೆಗಿನ ಮಾತುಕತೆಯೂ ತಾನು ನಿರೀಕ್ಷಿಸಿದಂತೆ ಮುಂದುವರಿದಿರಲಿಲ್ಲ. ಎಲ್ಲ ವಿಷಯದಲ್ಲೂ ತಮ್ಮಲ್ಲಿ ಒಂದು ಮಟ್ಟದ ಸಹಭಾಗಿತ್ವ, ಸಮ-ಆಲೋಚನೆ, ಹೊಂದಾಣಿಕೆ ಇದೆ ಎಂದು ಪ್ಯಾರಿಸ್‌ನಲ್ಲಿ ಅನ್ನಿಸಿತ್ತು. ಆದರೆ ಮುಕುಂದಸಾಗರನ ವಿಷಯಕ್ಕೆ ಬಂದಾಗ ಮಾತ್ರ ಈ ಅಂತರ ಬಂದದ್ದು ಹೇಗೆ ? ಇದು ವಿಚಾರಧಾರೆಯ ವಿಷಯವೋ, ಅಥವಾ ಕೆಳಮಧ್ಯಮವರ್ಗದ ಯೋಚನಾಲಹರಿಯ ವಿಷಯವೋ ಅವಳಿಗೆ ತಿಳಿಯಲಿಲ್ಲ. ಸರಕಾರಿ ನೌಕರಿಮಾಡುತ್ತಿರುವ ಕೆಳಮಧ್ಯಮ ವರ್ಗದ ಮನೆಗಳಲ್ಲಿ ಬೆಳೆದವರಿಗೆ ವ್ಯಾಪಾರಿ ಮನೋಧರ್ಮ, ವ್ಯಾಪಾರದಲ್ಲಿರಬೇಕಾದ ನಿರ್ಭಿಡೆ ಮತ್ತು ನಿರ್ಮಮತೆ ಇರುವುದಿಲ್ಲ... ಇದೂ ಒಂದು ತೊಂದರೆಯೇನೋ ಅನ್ನಿಸಿತು. ಸ್ಟಾರ್ಟಪ್ ಚರ್ಚೆಗಳು ಎಷ್ಟು ಹಸನಾಗಿ ನಡೆಯುತ್ತಿದ್ದವಾದರೂ ಈ ಟೇಕೋವರ್ ಮಾತ್ರ ಚಿನ್ಮಯನಿಗೆ ಯಾಕೋ ಒಪ್ಪಿತವಾಗಿರಲಿಲ್ಲ. ಇದನ್ನು ತಾನು ಪರಿಹರಿಸಲು ಪ್ರಯತ್ನಿಸಿದ ರೀತಿ ಅವಳಿಗೆ ಸಮಾಧಾನ ತಂದಿರಲಿಲ್ಲ. ನಾಳೆ ಚಿನ್ಮಯ ತನ್ನ ಮಾತುಗಳಿಗೆ ಒಪ್ಪಿ ಈ ಸಂಸ್ಥೆಯ ಕಮಾನು ಹಿಡಿದರೆ ನಿಭಾಯಿಸಬಲ್ಲ ಅನ್ನುವ ನಂಬಿಕೆಯೂ ಅವಳಿಗಿರಲಿಲ್ಲ. ತನಗೆ ಚಿನ್ಮಯ ತನ್ನೊಂದಿಗೆ ಈ ವ್ಯಾಪಾರದಲ್ಲಿರುವುದು ಬೇಕಿತ್ತು. ಅವನನ್ನು ಅವಳು ನಿಜಕ್ಕೂ ಪ್ರೀತಿಸುತ್ತಿದ್ದುದಲ್ಲದೇ ಅವನ ಪ್ರತಿಭೆಯ ಬಗ್ಗೆಯೂ ಅವಳಿಗೆ ಅಪಾರ ನಂಬಿಕೆಯಿತ್ತು. ತೊಂದರೆಯಿದ್ದದ್ದು ಖಾಸಗಿ ಮೌಲ್ಯಗಳಲ್ಲಿ. ಚಿನ್ಮಯ ಎಳೆಯುತ್ತಿದ್ದ ನೈತಿಕತೆಯ ಗೆರೆ ವ್ಯಾಪಾರಕ್ಕೆ ಪೂರಕವಾಗಿರಲಿಲ್ಲ. ವ್ಯಾಪಾರವನ್ನೂ ಮಾನವೀಯ ಮೌಲ್ಯಗಳನ್ನೂ ಭಿನ್ನವಾಗಿ ನೋಡುವ ಕ್ರಮ ಅವನಿಗಿನ್ನೂ ಪ್ರಾಪ್ತವಾಗಿರಲಿಲ್ಲ. ವ್ಯಾಪಾರದಲ್ಲಿ ಮುಂದುವರಿಯುತ್ತಾ ಈ ಗುಣವನ್ನು ಅವನು ಮೈಗೂಡಿಸಿಕೊಳ್ಳದಿದ್ದರೆ ವ್ಯಾಪಾರ ತಾನು ಅಂದುಕೊಂಡ ಗತಿಯಲ್ಲಿ ಬೆಳೆಯುವುದಿಲ್ಲ ಎಂದು ಶಿವಾನಿಗೆ ಅನ್ನಿಸಿತ್ತು.

ಅದೇ ಕಾಲಕ್ಕೆ ಸುಜಾತಾಳ ಬಗ್ಗೆ ಯಾರಿಗೆಲ್ಲಾ ಈ ಸಂಸ್ಥೆಯಲ್ಲಿ ಸಹಾನುಭೂತಿಯಿರಬಹುದು ಎನ್ನುವುದನ್ನೂ ಶಿವಾನಿ ಕಂಡುಕೊಳ್ಳಬೇಕಿತ್ತು. ವ್ಯಾಪಾರ ಬೆಳೆಯಬೇಕಾದರೆ - ಒಂದು ನಾಯಕತ್ವ, ಒಂದೇ ಗುರಿ ಇರಬೇಕು. ಒಳರಾಜಕೀಯಗಳನ್ನು ಹತ್ತಿಕ್ಕಿ ಮುಂದುವರಿಯಬೇಕಿತ್ತು. ಇದಕ್ಕಾಗಿ ಜನರ ಪ್ರತಿಭೆಯ ಜೊತೆಗೆ ನಿಷ್ಠೆಯೂ ಬೇಕಿತ್ತು. ಹೀಗಾಗಿ ಸುಜಾತಾ-ಮುಕುಂದಸಾಗರನ ಹೆಸರಿನಲ್ಲಿ ಆಗಬಹುದಾದ ಅಡೆತಡೆಯ ರಾಜಕೀಯವನ್ನು ಮಟ್ಟ ಹಾಕಬೇಕಿತ್ತು.

ತನ್ನ ಆಲೋಚನೆ ಮತ್ತು ವ್ಯೆಹಗಳು ಹೆಚ್ಚಿನ ಜನಕ್ಕೆ ತಿಳಿಯದಿರುವಂತೆ ತನ್ನ ವ್ಯಾಪಾರಿ ಪಟ್ಟುಗಳನ್ನು ಹಾಕಬೇಕಿತ್ತಲ್ಲದೆ, ವ್ಯಾಪಾರವನ್ನೂ ತೀವ್ರಗತಿಯಲ್ಲಿ ವಿಸ್ತರಿಸಬೇಕಿತ್ತು. ಈಗಾಗಲೇ ತಾನು ಬಹಳಷ್ಟು ನಿರೀಕ್ಷೆಗಳನ್ನುಂಟುಮಾಡಿದ್ದಳು. ಈ ವ್ಯಾಪಾರ ತೀವ್ರಗತಿಯಲ್ಲಿ ಬೆಳೆಯದಿದ್ದರೆ ತನ್ನ ಬಗ್ಗೆ ತಾನೇ ಸೃಷ್ಟಿಸಿದ್ದ ನಿರೀಕ್ಷೆಯನ್ನು ತಲುಪಲಾರದೇ ಹೋಗಬಹುದು. ಹೀಗಾಗಿ ಈ ವ್ಯಾಪಾರ ಒಂದು ವರ್ಷದಲ್ಲಿ ದುಪ್ಪಟ್ಟಾಗಬೇಕಾದ ತುರ್ತು ಇದ್ದೇ ಇತ್ತು. ಬೇರೆ ಏನೇ ಜಗಳಗಳಿದ್ದರೂ, ಈ ಗುರಿಯಿಂದ ತನ್ನ ಗಮನವನ್ನು ಬೇರೆಡೆಗೆ ತಿರುಗಿಸಬಾರದೆಂದು ಶಿವಾನಿ ತನಗೆ ತಾನೇ ಹೇಳಿಕೊಂಡಳು. ಹೀಗೆ ಯೋಚಿಸುತ್ತಿದ್ದಾಗ ಶಿವಾನಿಗೊಂದು ವಿಷಯ ಕುಟುಕಿತು. ಹಾಗೆ ನೋಡಿದರೆ ಆಲೋಚನಾ ವಿಧಾನದಲ್ಲಿ ಚಿನ್ಮಯನಿಗೂ ಸುಜಾತಾಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಇಬ್ಬರೂ ಕೆಳಮಧ್ಯಮವರ್ಗದ ಮನೋಭಾವದವರು. ವ್ಯಾಪಾರಿ ಮನೋವೃತ್ತಿಯವರಲ್ಲ. ವ್ಯಾಪಾರ ಮಾಡಬೇಕು ಅನ್ನುವ ತುಡಿತ ಚಿನ್ಮಯನಲ್ಲಿದೆ. ವ್ಯಾಪಾರ ಮಾಡಿರುವ ಒಂದು ರೀತಿಯಾದ ಅನುಭವ ಸುಜಾತಾಳಲ್ಲಿದೆ. ಚಿನ್ಮಯನಿಗೆ ತಾನು ನೀಡಿರುವ ಆಫರ್ ಅವನು ಒಪ್ಪಿದರೆ ವ್ಯಾಪಾರಕ್ಕೆ ಒಳಿತಾಗುವುದೇ ಎಂದು ಯೋಚಿಸಿದಳು. ಚಿನ್ಮಯನೇ ಕಂಪೆನಿಯ ನಾಯಕತ್ವ ವಹಿಸಿದರೆ ಏನು ಮಾಡಿಯಾನು? ಹೇಗೆ ಈ ಕಂಪೆನಿಯ ಬೆಳವಣಿಗೆಯನ್ನು ನೋಡಿಕೊಂಡಾನು? ಅವನಿಗೊಂದು ಸ್ಪರ್ಧಾತ್ಮಕ ಮನೋಭಾವವೇ ಇಲ್ಲದಂತೆ ಕಾಣುತ್ತಿರುವಾಗ ಕಂಪೆನಿಯ ವ್ಯಾಪಾರವನ್ನು ದುಪ್ಪಟ್ಟು-ನಾಲ್ಕು ಪಟ್ಟು ಮಾಡುವ ಮಹತ್ವಾಕಾಂಕ್ಷಿ ಗುರಿಯನ್ನು ನಿಭಾಯಿಸಬಲ್ಲನೇ... ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ಅವಳಿಗೆ ಅನುಮಾನ ಬರಲು ಪ್ರಾರಂಭವಾಯಿತು. ತನಗೆ ತಾನೇ ಹೇಳಿಕೊಂಡಳು.... ‘‘ಲೆಟ್ ಮಿ ಬ್ರೇಕ್ ಇಟ್ ಅಪ್. ನನ್ನ ಚಿನ್ಮಯನ ಗೆಳೆತನ - ಪ್ರೀತಿ ಒಂದೆಡೆ. ವ್ಯಾಪಾರ ಮತ್ತೊಂದೆಡೆ. ಇಬ್ಬರೂ ಕೂಡಿ ಹೊಸವ್ಯಾಪಾರವನ್ನು ಪ್ರಾರಂಭಿಸಿದ್ದರೆ ಅದರ ವಿಕಸನದ ದಾರಿಗೂ, ಈಗ ವಶಕ್ಕೆ ತೆಗೆದುಕೊಂಡಿರುವ ವ್ಯಾಪಾರವನ್ನು ಬೆಳೆಸುವ ದಾರಿಗೂ ವ್ಯತ್ಯಾಸವಿದೆ. ಹೀಗಾಗಿ ಅವನ ಮನೋಧರ್ಮಕ್ಕೆ ಈ ವ್ಯಾಪಾರ ಒಗ್ಗುವುದಿಲ್ಲ. ಅವನನ್ನು ಇದರಿಂದ ದೂರವಿಡುವುದೇ ಒಳ್ಳೆಯದು’’ ಅನ್ನಿಸಿತು. ಹೀಗೆ ಯೋಚಿಸುತ್ತಿದ್ದಾಗ ಸುಜಾತಾಳ ವಿಷಯದಲ್ಲಿ ಹೆಚ್ಚು ತೆಲೆಕೆಡಿಸಿಕೊಳ್ಳಬೇಕು ಅಂತ ಅವಳಿಗೇನೂ ಅನ್ನಿಸಲಿಲ್ಲ. ಆದರೆ ಈ ಕಂಪೆನಿಯ ವಿಷಯದಲ್ಲಿ ತಾನು ಎಷ್ಟು ಮುಂದುವರಿದಿದ್ದಳೆಂದರೆ ಇದನ್ನು ಈಗ ಬಿಟ್ಟುಕೊಡುವ ಹಾಗೂ ಇರಲಿಲ್ಲ. ಇದರ ಜೊತೆಜೊತೆಗೇ ಚಿನ್ಮಯನಿಗಾಗಿಯೇ ಮತ್ತೊಂದು ವ್ಯಾಪಾರವನ್ನು ಹುಟ್ಟುಹಾಕುವುದಕ್ಕೂ ಬೇಕಾದ ಆರ್ಥಿಕ ಮತ್ತು ನಿರ್ವಹಣಾ ಸಂಸಾಧನಗಳೂ ಇರಲಿಲ್ಲ. ಇದು ನಿಜಕ್ಕೂ ಕಷ್ಟದ ಪರಿಸ್ಥಿತಿಯೇ ಅಂತ ಶಿವಾನಿಗೆ ಅನ್ನಿಸಿತು. ವ್ಯಾಪಾರಕ್ಕಾಗಿ ಚಿನ್ಮಯನನ್ನು ಬಿಟ್ಟುಕೊಡಲು ಅವಳು ತಯಾರಿರಲಿಲ್ಲ. ಪ್ರೀತಿಯ ವಿಷಯದಲ್ಲಿ ಯಾವ ರಾಜಿಯೂ ಇಲ್ಲ - ನಿಜಕ್ಕೂ ಚಿನ್ಮಯ ತನಗೆ ತುಂಬಾ ಹಿಡಿಸಿದ್ದ. ಆದ್ದರಿಂದ ಬ್ರೇಕಪ್ಪಿನ ಪ್ರಶ್ನೆಯೇ ಇಲ್ಲವೆಂದು ಶಿವಾನಿ ತನಗೆ ತಾನೇ ಹೇಳಿಕೊಂಡಳು. ಇನ್ನು ಚಿನ್ಮಯನಿಗಾಗಿ ವ್ಯಾಪಾರವನ್ನು ಬಿಡಲು ತಯಾರಿದ್ದಾಳೆಯೇ ಅಂದರೆ - ಅದರಲ್ಲಿ ತನಗಿರುವ ತನ್ಮಯತೆಯನ್ನು ಕಡಿಮೆ ಮಾಡುವ ಸಾಧ್ಯತೆಯೂ ಅವಳಿಗೆ ಕಾಣಿಸಲಿಲ್ಲ. ದ್ವಂದ್ವ ಎಂದರೆ ಇದೇ ಏನೋ.

****

ಸುಜಾತಾ ತಾನೇನು ಮಾಡಬೇಕೆಂದು ತೀರ್ಮಾನಿಸುವುದು ಕಷ್ಟವಾಗುತ್ತಾ ಹೋಯಿತು. ಅನಿರುದ್ಧನ ಬಳಿ ದಿನವೂ ಮಾತನಾಡುತ್ತಿದ್ದರೂ, ಮೈಸೂರಿನಲ್ಲಿ ಫ್ಲಾಟೊಂದನ್ನು ಖರೀದಿಸುವ ಯೋಜನೆಯನ್ನು ತುಸು ಮುಂದೂಡಿದಳು. ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರ ಉಂಟಾದ ಮೇಲೆ ಅವನ ಜೊತೆ ಫ್ಲಾಟಿನ ವಿಷಯ ಚರ್ಚಿಸುವುದಾಗಿ ಹೇಳಿದ್ದಳು. ಅನಿರುದ್ಧನ ಅಭಿಪ್ರಾಯದಂತೆ ಈ ವಿಷಯಕ್ಕೆ ಹೋರಾಡುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಶಿವಾನಿ ಮತ್ತವಳ ತಂದೆ ಶ್ರೀಮಂತರು. ವ್ಯವಹಾರವನ್ನು ಅರಿತವರು. ಒಳ್ಳೆಯ ವಕೀಲರನ್ನು ನಿಯಮಿಸಿಕೊಳ್ಳಬಲ್ಲವರು. ಎಂದಿದ್ದರೂ ಅವರ ಶಕ್ತಿ ಸುಜಾತಾಳ ಬಲಕ್ಕಿಂತ ಪ್ರಬಲವಾದದ್ದು. ಆದಷ್ಟು ಬೇಗ, ಆದಷ್ಟು ಹಣವನ್ನು ಅವರಿಂದ ಪಡೆದು ಕೈ ತೊಳೆದುಕೊಳ್ಳುವುದೇ ಒಳ್ಳೆಯದು ಅನ್ನಿಸಿತ್ತು. ಅನಿರುದ್ಧ ಹೇಳಿದ್ದರಲ್ಲಿ ಸುಜಾತಾಳಿಗೆ ಅರ್ಥ ಕಂಡಿತ್ತಾದರೂ, ತನ್ನ ಮೇಲೆ ಆಕ್ರಮಣ ನಡೆಸಿರುವ ಶಿವಾನಿಯ ಜೀವನವನ್ನು ಸುಗಮ ಮಾಡುವುದರಲ್ಲಿ ಅವಳಿಗೆ ಯಾವುದೇ ಆಸಕ್ತಿಯಿರಲಿಲ್ಲ. ಸಾಧ್ಯವಾದಷ್ಟೂ ಹೋರಾಡಬೇಕು, ಆದರೆ ಎಷ್ಟರವರೆಗೆ ಹೋರಾಡಬೇಕು ಎನ್ನುವುದನ್ನು ನಿರ್ಧರಿಸಬೇಕಿತ್ತು. ‘‘ವಿ ಕ್ಯಾನ್ ಮೀಟ್ ದಿಸ್ ಈವಿನಿಂಗ್’’ ಎಂಬ ಮೆಸೇಜನ್ನು ಸುಜಾತಾ ಉರುಫ್ ಎಸ್ಸೆಮ್ಮೆಸ್ ಚಿನ್ಮಯನಿಗೆ ಕಳುಹಿಸಿದಳು. ರಂಗರಾಜನ್ ನಿಂದ ಒಂದು ಇ-ಮೇಲ್ ಮತ್ತು ತಮ್ಮ ಆರ್ಥಿಕ ಸ್ಥತಿಯ ಬಗೆಗೆ ದೀರ್ಘವಾದ ಒಂದು ವಿವರಣೆಯೂ ಬಂದಿತ್ತು. ಎಸ್ಸೆಮ್ಮೆಸ್ ಮಧ್ಯಾಹ್ನದ ವೇಳೆಗೆ ರಂಗರಾಜನ್ ಕಾರ್ಯಾಲಯಕ್ಕೆ ಹೋಗಿ ಸುದೀರ್ಘ ಚರ್ಚೆಯನ್ನು ಕೈಗೊಳ್ಳವವಳಿದ್ದಳು. ಹಾಗೆಯೇ ಸೂನಾವಾಲಾನ ಭೇಟಿಯೂ ಇತ್ತು. ಇವೆರಡೂ ಮುಗಿಸಿ, ಚಿನ್ಮಯ ಒಪ್ಪಿದರೆ ಸಂಜೆಯ ವೇಳೆಗೆ ಅವನನ್ನೂ ಭೇಟಿಮಾಡಿ ಅವನ ಕಥೆಯೇನೋ ಕೇಳಬಹುದಿತ್ತು. ಶಿವಾನಿಗೆ ತಾನು ಮನೆ ಖಾಲಿಮಾಡುವುದಾಗಿ ಮೆಸೇಜ್ ಕಳುಹಿಸಿ ತನ್ನ ಪ್ರಹಾರವನ್ನು ಮಾಡಿದ್ದಳು. ಸೂನಾವಾಲಾ ಹೇಳಿದಂತೆ ಆ ಮನೆಯನ್ನು ಖಾಲಿ ಮಾಡಿ ಶರಣಾಗುತ್ತಿರುವಂತೆ - ಗೆಲ್ಲಲಾರದ ಯುದ್ಧಗಳನ್ನು ಕೈಗೊಳ್ಳದೇ ಇರುವಂತೆ ನೋಡಿಕೊಳ್ಳುವುದೇ ಉತ್ತಮ ಉಪಾಯ ಎನ್ನುವ ಮಾತು ಎಸ್ಸೆಮ್ಮೆಸ್ ಗೆ ಹಿಡಿಸಿತ್ತು.

ರಂಗರಾಜನ್ ಜೊತೆಗಿನ ಭೇಟಿ ಸಿಹಿ ಸುದ್ದಿಯನ್ನೇನೂ ತರಲಿಲ್ಲ. ಎಸ್ಸೆಮ್ಮೆಸ್‌ಳ ಒಟ್ಟಾರೆ ಆರ್ಥಿಕ ಸ್ಥಿತಿ ತಾನಂದುಕೊಂಡಷ್ಟು ಮಜಬೂತಾಗಿರಲಿಲ್ಲ. ಮುಕುಂದಸಾಗರನ ಆಸ್ತಿಗಳಿಗಿಂತ ಹೆಚ್ಚು ಅವನ ಬಾಧ್ಯತೆಗಳೇ ಇದ್ದುವು. ನಿಜಕ್ಕೂ ಸ್ಪಷ್ಟವಾಗಿ ಎಸ್ಸೆಮ್ಮೆಸ್ ಬಳಿ ಇದ್ದದ್ದು ಅನ್-ಆಕ್ಸಸರೀಸ್ ನ ಕಾಲು ಭಾಗ ಮಾಲಕತ್ವ ಅಷ್ಟೇ. ಆ ಕಾಲು ಭಾಗದ ಮಾಲಕತ್ವಕ್ಕೆ ಎಷ್ಟು ಹಣ ಬರಬಹುದು ಎನ್ನುವುದರ ಬಗ್ಗೆ ಖಚಿತತೆ ಇರಲಿಲ್ಲ. ಮಿಕ್ಕ ಮೂರನೇ ಭಾಗ ಶಿವಾನಿ ಮತ್ತವಳ ತಂದೆಯ ಬಳಿಯಿತ್ತಾದ್ದರಿಂದ ಈ ಕಂಪೆನಿಯನ್ನು ಅವರೇ ನಡೆಸುವರು ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಹೀಗಾಗಿ ಈ ಕಾಲು ಭಾಗದ ಸ್ವಾಮ್ಯದಲ್ಲಿ ಅವರಿಗೆ ಬಿಟ್ಟರೆ ಇನ್ಯಾರಿಗೂ ಹೆಚ್ಚಿನ ಆಸಕ್ತಿಯಿರುವುದು ಶಕ್ಯವಿರಲಿಲ್ಲ. ಒಟ್ಟಾರೆ ತನ್ನ ಪಾಲಿಗೆ ಎಷ್ಟು ಹಣ ಬರುತ್ತದೆ ಎನ್ನುವುದು ಮಾತುಕತೆ ಮತ್ತು ಚೌಕಾಶಿಯ ಮೂಲಕ ಪರಿಹರಿಸಿಕೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಎಸ್ಸೆಮ್ಮೆಸ್ ಬಲವಾದ ಸ್ಥಾನದಲ್ಲಿ ಇರಲಿಲ್ಲ.

ಇನ್ನು ಮುಕುಂದಸಾಗರ ಹುಟ್ಟು ಹಾಕಿದ್ದ ಡಿ-ಡಿಸೈನ್ ಕಂಪೆನಿಯ ಆರ್ಥಿಕ ಸ್ಥಿತಿ ನಷ್ಟದ್ದೇ ಆಗಿತ್ತು. ರಂಗರಾಜನ್ ಅಭಿಪ್ರಾಯದಂತೆ ಡಿ-ಡಿಸೈನ್ ಕಂಪೆನಿಯನ್ನು ದಿವಾಳಿ ಎಂದು ಘೋಷಿಸುವುದೇ ಒಳಿತು. ಅದರಲ್ಲಿ ಎಸ್ಸೆಮ್ಮೆಸ್‌ಳ ಪಾಲು ಇಲ್ಲದ್ದರಿಂದ ಅವಳು ಹೆಚ್ಚಿನಂಶ ಇದನ್ನು ಬಿಟ್ಟುಕೊಡುವುದರಿಂದ ಅವಳಿಗೆ ವೈಯಕ್ತಿಕವಾಗಿ ಯಾವುದೇ ನಷ್ಟವಾಗುವುದಿಲ್ಲ. ಹೀಗಾಗಿ ಆ ಕಂಪೆನಿಯನ್ನು ಬಿಟ್ಟು ಕೊಡುವುದೇ ಒಳಿತು ಎನ್ನುವುದು ರಂಗರಾಜನ್ ಅಭಿಪ್ರಾಯವಾಗಿತ್ತು. ಯಾವುದಕ್ಕೂ ಇದರಲ್ಲಿ ಕಾನೂನಿನ ಆಯಾಮಗಳಿರುವುದರಿಂದ ಒಮ್ಮೆ ಸೂನಾವಾಲಾನ ಜೊತೆ ಚರ್ಚಿಸುವುದು ಒಳಿತು ಎಂದು ರಂಗರಾಜನ್ ಹೇಳಿದ.

ಇತ್ತ ಸೂನಾವಾಲಾನ ಭೇಟಿಯಲ್ಲಿ ಅನೇಕ ವಿಷಯಗಳು ಬಂದಿದ್ದುವು. ಮುಕುಂದಸಾಗರನ ಸಾವು ಸಹಜದ್ದಲ್ಲ, ಇದರಲ್ಲಿ ಪೊಲೀಸು ವಿಚಾರಣೆ ನಡೆಯುತ್ತಿದೆ ಎನ್ನುವುದನ್ನು ಮರೆಯಬಾರದೆನ್ನುವ ವಿಚಾರದಿಂದ ಸೂನಾವಾಲಾ ಪ್ರಾರಂಭಿಸಿದ. ಮುಕುಂದಸಾಗರ ಉಯಿಲನ್ನು ಬಿಟ್ಟಿಲ್ಲ. ಆದರೆ ಅವನ ಆಸ್ತಿಗೆ ಅವಳು ಕೈ ಹಾಕಬೇಕೆಂದಿದ್ದರೆ, ಅವನ ಬಾಧ್ಯತೆಗಳನ್ನೂ ಪರಿಗಣಿಸಬೇಕಾಗುತ್ತದೆ. ಅವನ ಮಾಲಕತ್ವದ ಹಾಗೂ ನಷ್ಟದಲ್ಲಿರುವ ಡಿ-ಡಿಸೈನ್ ಕಂಪೆನಿಯನ್ನು ದಿವಾಳಿ ಎಂದು ಘೋಷಿಸಿ, ಮಿಕ್ಕ ಆಸ್ತಿಯನ್ನು ಪಡೆಯುವುದು ಸರಳವಾದ ವಿಚಾರವಲ್ಲವೆಂದೂ- ಆ ಕಂಪೆನಿಗೆ ಸಾಲ ನೀಡಿರುವ ಬ್ಯಾಂಕುಗಳು ಕಾನೂನಿನ ಮೊರೆ ಹೋಗುವುದರಿಂದ ಅದು ಖರ್ಚಿನ, ಸಮಯ ಮತ್ತು ಕಿರಿಕಿರಿಯ ವಿಷಯವೆಂದು ಅವನು ಹೇಳಿದ. ಜೊತೆಗೆ ಅನ್-ಆಕ್ಸೆಸರೀಸ್ ನಲ್ಲಿನ ಅವಳ ಪಾಲಿನ ಬಗ್ಗೆ ಯಾವುದೇ ಅವಸರದ ನಿರ್ಧಾರ ಮಾಡುವುದು ಸರಿಯಲ್ಲವೆಂದೂ ಸೂನಾವಾಲಾ ಹೇಳಿದ.

ಅವಳು ಇನ್ನೇನು ಹೊರಡಬೇಕು ಎನ್ನುವಾಗ ಸೂನಾವಾಲಾ ಮತ್ತೊಂದು ಮಹತ್ವದ ಮಾಹಿತಿಯನ್ನು ಅವಳಿಗೆ ಕೊಟ್ಟ. ಅವನ ದೃಷ್ಟಿಯಲ್ಲಿ ಅದು ಅಷ್ಟು ಮಹತ್ವದಲ್ಲ ಅನ್ನಿಸಿದ್ದರೂ ಅದೊಂದು ಕೀಲಕ ಮಾಹಿತಿಯಾಗಿತ್ತು. ಅದೆಂದರೆ ಶಿವಾನಿ ಮತ್ತು ಅವಳ ತಂದೆಯ ಜೊತೆಗೆ ಮುಕುಂದಸಾಗರ ಮಾಡುತ್ತಿದ್ದ ವ್ಯವಹಾರದ ಮಾತಕತೆ ಹೆಚ್ಚಿನಂಶ ಮುಗಿದಿತ್ತಾದರೂ ಅದರ ಕಾನೂನಿನ ಪ್ರಕ್ರಿಯೆಯಲ್ಲಿ ಕೆಲವು ಭಾಗಗಳು ಉಳಿದುಕೊಂಡಿದ್ದುವು. ಉದಾಹರಣೆಗೆ ಸೂನಾವಾಲಾನ ಸಲಹೆಯ ಮೇರೆಗೆ ಅನ್-ಆಕ್ಸಸರೀಸ್ ನ ಹೆಸರು - ಬ್ರಾಂಡನ್ನು ಈ ಹೊಸ ಕಂಪೆನಿಯ ಹೆಸರಿಗೆ ಅದರ ಆರಂಭದ ದಿನಗಳಲ್ಲಿಯೇ ವರ್ಗಾವಣೆ ಮಾಡಿದ್ದರು. ಇದಕ್ಕೆ ಕಾರಣವೂ ಇತ್ತು. ಕಂಪೆನಿಯನ್ನು ಮಾರಾಟ ಮಾಡುವಾಗ, ಅದರ ಭೌತಿಕ ಆಸ್ತಿಗಳಿಗೆ ಒಂದು ಬೆಲೆಯನ್ನೂ, ಅದರ ಕೀರ್ತಿಗೆ ಬೇರೆಯದೇ ಬೆಲೆಯನ್ನು ಕಟ್ಟುವುದು ಒಳಿತೆಂದು ಇಬ್ಬರೂ ಯೋಚಿಸಿದ್ದರು. ಅನ್-ಆಕ್ಸೆಸರೀಸ್ ಕಂಪೆನಿಯನ್ನು ಶಿವಾನಿ ಮತ್ತವಳ ತಂದೆಗೆ ಮಾರಾಟ ಮಾಡಿದ್ದಾಗ ಬ್ರಾಂಡಿನ ಮಾಲಕತ್ವದ ಮಾತಿನ ಬಗ್ಗೆ ಹೆಚ್ಚಿನ ಚರ್ಚೆಯಾಗಿರಲಿಲ್ಲ. ಅದನ್ನು ಅನ್ ಆಕ್ಸೆಸರೀಸ್ ಕಂಪೆನಿ (ಅದರಲ್ಲಿ ಮುಕುಂದಸಾಗರನೇ ಇದ್ದನಾದ್ದರಿಂದ) ಸಹಜವಾಗಿ ಉಪಯೋಗಿಸಿಕೊಳ್ಳತ್ತಾ ಮುಂದುವರಿದಿತ್ತು. ಇದು ಶಿವಾನಿಗೆ ತಿಳಿದಿಲ್ಲವೆಂದೇನೂ ಅಲ್ಲವಾದರೂ ಈ ಎಲ್ಲ ಭರಾಟೆಯಲ್ಲಿ ಬ್ರಾಂಡು ಇನ್ನೂ ಮುಕುಂದಸಾಗರನ ಸಂಪೂರ್ಣ ಸ್ವಾಮ್ಯದ ಡಿ-ಡಿಸೈನ್ ಕಂಪೆನಿಯಲ್ಲಿಯೇ ಮುಂದುವರಿದಿದೆ ಎನ್ನುವ ವಿವರವನ್ನು ಸದ್ಯಕ್ಕೆ ಮರೆತಿರಲಿಕ್ಕೆ ಸಾಕು. ಶಿವಾನಿಯ ಜೊತೆ ವ್ಯವಹರಿಸಬೇಕಾದರೆ ಈ ಅಸ್ತ್ರವನ್ನು ಉಪಯೋಗಿಸಬಹುದು ಎಂದು ಸೂನಾವಾಲಾ ಹೇಳಿದ್ದ. ಬ್ರಾಂಡನ್ನು ಶಿವಾನಿ ನಡೆಸುತ್ತಿದ್ದ ಕಂಪೆನಿಗೆ ವರ್ಗಾಯಿಸುವ ಬಗ್ಗೆ ಲಿಖಿತ ರೂಪದಲ್ಲಿ ಏನಾದರೂ ದಾಖಲೆಗಳಿದ್ದುವೇ ಎಂದು ಎಸ್ಸೆಮ್ಮೆಸ್ ಕೇಳಿದಳು. ‘‘ಒಪ್ಪಂದದ ಕರಡು ಕಳುಹಿಸಿದ್ದೆ. ಆದರೆ ಅದರ ಮೇಲೆ ಯಾವ ತೀರ್ಮಾನವೂ, ಹಸ್ತಾಕ್ಷರವೂ ಆಗಿರಲಿಲ್ಲ’’ ಎಂದು ಸೂನಾವಾಲಾ ಹೇಳಿದ. ‘‘ಆದರೆ ಆ ಬ್ರಾಂಡಿಗೆ ಬೆಲೆ ಕಟ್ಟಿ ಅದರ ಹಣ ನಿನಗೆ ಬರಬೇಕಾದರೆ ಮೊದಲಿಗೆ ಡಿ-ಡಿಸೈನ್ ಕಂಪೆನಿಯ ಸಾಲಗಾರರ ಸಾಲವನ್ನು ತೀರಿಸಬೇಕಾಗುತ್ತದೆ. ಅದು ಸರಳವಾದ ವಿಷಯವೇನೂ ಅಲ್ಲ ಅನ್ನುವುದು ನೆನಪಿನಲ್ಲಿಟ್ಟುಕೋ’’

‘‘ಅದಿರಲಿ. ಆದರೆ ನಾನೇ ಡಿ-ಡಿಸೈನ್ ಕಂಪೆನಿಯನ್ನು ನಡೆಸುವುದಾದರೆ ಆ ಬ್ರಾಂಡನ್ನು ಉಪಯೋಗಿಸಬಹುದಲ್ಲವೇ? ಜೊತೆಗೆ ಶಿವಾನಿ ಆ ಬ್ರಾಂಡನ್ನು ಉಪಯೋಗಿಸುವುದನ್ನು ತಡೆಯಬಹುದಲ್ಲವೇ?’’ ಎಂದು ಎಸ್ಸೆಮ್ಮೆಸ್ ಕೇಳಿದಳು. ಅದಕ್ಕೆ ಸೂನಾವಾಲಾ ಹೇಳಿದ್ದು: ‘‘ನೀನು ಹೇಳಿದ್ದು ಒಟ್ಟಾರೆ ಸರಿಯಾದರೂ, ನೀನು ಹೇಳಿದಷ್ಟು ಸರಳ ಪ್ರಕ್ರಿಯೆಯಲ್ಲ. ಇನ್ ಸಬ್ಸಟೆಂಸ್ ಯು ಆರ್ ರೈಟ್, ಬಟ್ ಅದರ ದಾರಿ ಕಡಿದಾದದ್ದು’’ ಅಂದ.

‘‘ಇಲ್ಲ. ನನಗೆ ಇಷ್ಟು ಮಾಹಿತಿ ಸಾಕು. ನನ್ನ ರಕ್ತವನ್ನು ಶಿವಾನಿ ಮತ್ತವಳ ತಂದೆ ಹೀರದಿರುವಂತೆ ನೋಡಿಕೊಳ್ಳಲು ಇದಿಷ್ಟೇ ಸಾಕು’’ ಎಂದಷ್ಟೇ ಹೇಳಿದಳು. ಅಲ್ಲಿಂದ ಹೊರಡುತ್ತಿದ್ದಂತೆ ಅವಳಿಗೆ ಚಿನ್ಮಯನ ಮೆಸೇಜೂ ಬಂತು. ಅಂದು ಸಂಜೆ ಸಾಧ್ಯವಿಲ್ಲವಾದರೂ, ಮಾರನೆಯ ಸಂಜೆ ಅವನು ಬಂದು ಅವಳನ್ನು ಭೇಟಿಯಾಗುವುದಾಗಿ, ಈ ವಿಷಯಕ್ಕೆ ಒಂದು ಗೌರವಯುತ ಪರಿಹಾರ ಅವನ ಮನಸ್ಸಿನಲ್ಲಿರುವುದನ್ನು ಹಂಚಿಕೊಳ್ಳುವುದಕ್ಕೆ ತಾನು ಕಾತರನಾಗಿರುವುದಾಗಿ ಹೇಳಿದ. ಮಾರನೆಯ ದಿನ ಇಬ್ಬರೂ ಅಂಧೇರಿ-ಲೋಖಂಡವಾಲಾದ ಸ್ಟಾರ್-ಬಕ್ಸ್ ನಲ್ಲಿ ಭೇಟಿಯಾಗುವುದಕ್ಕೆ ಒಪ್ಪಿ ಸಂಜೆಯ 5 ಗಂಟೆಯ ಸಮಯವನ್ನು ನಿಗದಿ ಪಡಿಸಿಕೊಂಡರು.

***

‘‘ಗೋ ಟು ಹೆಲ್’’ ಈ ಮಾತನ್ನು ಅವನು ಒಂದೇ ದಿನದಲ್ಲಿ ಎರಡೆರಡು ಬಾರಿ ಇಬ್ಬರು ಮಹಿಳೆಯರಿಂದ ಕೇಳಬೇಕಾಗಿ ಬರಬಹುದು ಅಂದುಕೊಂಡಿರಲಿಲ್ಲ. ಇಷ್ಟಕ್ಕೂ ತಾನು ಮಾಡದೇ ಇರದ ತಪ್ಪಿಗೆ, ಹಾಗೂ ಮಾಡಹೊರಟಿದ್ದ ಸಂಧಾನಕ್ಕೆ ಈ ರೀತಿಯ ಪ್ರತಿಕ್ರಿಯೆ ಬರಬಹುದು ಎಂದು ಅವನಿಗೆ ನಿಜಕ್ಕೂ ಅನ್ನಿಸಿರಲಿಲ್ಲ. ಆದರೆ ಆದದ್ದು ಅದೇನೇ.

ಶಿವಾನಿ ನೀಡಿದ ಆರು ಸೂತ್ರಗಳನ್ನು ನೆನಪುಮಾಡಿಕೊಂಡ. ಅವಳು ಹೇಳಿದ್ದದ್ದು ಈ ಮಾತುಗಳು ‘‘ಒಂದು: ನೀನು ನಿನಗೆ ಬೇಕಾದ ಪಾತ್ರವನ್ನು ಆಯ್ದುಕೋ. ಯು ವಾಂಟ್ ಟು ಬಿ ಸಿಇಒ, ಸೋ ಬಿ ಇಟ್..ನಾನು ನಂಬರ್ ಟೂ ಆಗುತ್ತೇನೆ; ಎರಡು: ನೀನು ಡಿಸೈನ್ ನೋಡಿಕೊಳ್ಳುತ್ತೀಯ? ಫೈನ್, ನಾನು ಮಾರಾಟ ನೋಡುತ್ತೇನೆ; ಮೂರು: ನಿನ್ನ ಭಾಗಸ್ವಾಮ್ಯ ಹೇಗೆ ಬೆಳೆಯಬಹುದು ಅನ್ನುವುದಕ್ಕೆ ಒಂದು ಒಪ್ಪಂದವನ್ನು ಮಾಡಿಕೊಳ್ಳೋಣ; ನಾಲ್ಕು: ನಿನಗೆ ಇಷ್ಟ ಬಂದವರನ್ನು ಅಧ್ಯಕ್ಷರ ಸ್ಥಾನಕ್ಕೆ ಸೂಚಿಸು, ನನ್ನ ಪಪ್ಪಾ ತಕ್ಷಣ ರಾಜೀನಾಮೆ ಕೊಡುವ ಹಾಗೆ ನಾನು ನೋಡಿಕೊಳ್ಳುತ್ತೇನೆ; ಐದು: ಆ ಸುಜಾತಾಳನ್ನು ಹೇಗೆ ಟ್ರೀಟ್ ಮಾಡಬೇಕೋ ತಿಳಿಸು, ಹಾಗೆ ಮಾಡೋಣ...ಬಟ್ ನಾಟ್ ಫಾರ್ಮಲಿ, ಇನ್ಫಾರ್ಮಲಿ. ಆರು: ತಡಮಾಡದೇ ಮದುವೆಯಾಗೋಣ. ಇನ್ನೇನು ಬೇಕು ಹೇಳು’’

ಈ ಸೂತ್ರಗಳನುಸಾರ ಚಿನ್ಮಯ ಸಂಸ್ಥೆಯ ನಾಯಕತ್ವವನ್ನು ಶಿವಾನಿಗೆ ಬಿಟ್ಟುಕೊಡುವುದು ಎಂದುಕೊಂಡ. ತಾನು ಡಿಸೈನ್ ನೋಡಿಕೊಳ್ಳಬಹುದು. ತನ್ನ ಭಾಗಸ್ವಾಮ್ಯದ ಬಗ್ಗೆ ಸದ್ಯಕ್ಕೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದು ಬೇಡ ಅದರ ವಿಚಾರ ಒಂದೆರಡು ವಾರಗಳಲ್ಲಿ ಮಾಡಬಹುದು. ಆದರೆ ನಾಲ್ಕನೆಯ ಮತ್ತು ಐದನೆಯ ಸೂತ್ರಕ್ಕೆ ಚಿನ್ಮಯನಿಗೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಹೇಗಾದರೂ ಸುಜಾತಾಳಿಗೆ ಕಂಪೆನಿಯಲ್ಲಿ ಕಾಲು ಭಾಗದಷ್ಟು ಮಾಲಕತ್ವ ಇತ್ತು. ಹೀಗಾಗಿ ಅವಳಿಗೆ ಕಂಪೆನಿಯ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ, ಅವಳು ಕಂಪೆನಿಯ ಜೊತೆಗೆ ಇದ್ದಂತೆ ಆಗುವುದು, ಮುಕುಂದಸಾಗರನ ಬಗ್ಗೆ ನಿಷ್ಠೆ ತೋರುತ್ತಿದ್ದ ಉದ್ಯೋಗಿಗಳಿಗೂ ಖುಷಿಯಾಗುತ್ತದೆ. ಈ ಅಧ್ಯಕ್ಷ ಸ್ಥಾನ ಆಲಂಕಾರಿಕವಾಗಿದ್ದು ಯಾವುದೇ ದಿನನಿತ್ಯದ ಅಧಿಕಾರಗಳಿರುವುದಿಲ್ಲ. ಹೀಗೆ ಸುಜಾತಾಳಿಗೆ ಗೌರವ ನೀಡಿದಂತೆಯೂ ಆಗುತ್ತದೆ, ಹಾಗೂ ನಿಧಾನವಾಗಿ ಅವಳ ಭಾಗವನ್ನು ಖರೀದಿಸಲು, ಅವಳನ್ನು ಗೌರವದಿಂದಲೇ ಬೀಳ್ಕೊಡಲು ಸಾಧ್ಯವಾಗುತ್ತದೆ. ಹಳೆಯ ಯಾವುದೇ ವ್ಯವಹಾರಗಳಿದ್ದರೂ ಅವಳು ಒಂದು ಕೊಂಡಿಯಾಗಿ ಇರುತ್ತಾಳೆ. ಇದು ಎಲ್ಲರಿಗೂ ಒಪ್ಪಿತವಾಗಬಹುದಾದ ಒಂದು ಏರ್ಪಾಟು ಎಂದು ಅವನಿಗನ್ನಿಸಿತ್ತು. ಶಿವಾನಿಯ ವ್ಯಾಪಾರಕ್ಕೂ, ಸುಜಾತಾಳ ಬಗೆಗಿನ ತನ್ನ ನೈತಿಕತೆಯ ಪ್ರಶ್ನೆಗೂ ಇದೇ ಸರಿಯಾದ ನಡು ಮಾರ್ಗದ ಪರಿಹಾರ ಎಂದು ಅವನಿಗನ್ನಿಸಿತ್ತು.

ಅವನು ಈ ಮಾತು ಸುಜಾತಾಳಿಗೆ ಹೇಳಿದಾಗ ಅವಳು ಏನೂ ಹೇಳಲಿಲ್ಲ. ಇದು ಇವನು ಪ್ರಾಮಾಣಿಕವಾಗಿ ಹೇಳುತ್ತಿರುವುದೋ ಅಥವಾ ಶಿವಾನಿಯ ಪರವಾಗಿ ನಾಟಕವಾಡುತ್ತಿದ್ದಾನೋ ತಿಳಿಯಲಿಲ್ಲ. ಆದರೆ ಅವನ ಮೊದಲ ಮೆಸೇಜಿನಲ್ಲಿ ಅವಳೊಂದಿಗಿನ ಬ್ರೇಕಪ್ಪಿನ ಮಾತಾಡಿದ್ದರಿಂದ ಮತ್ತು ಈಗ ಹೆಚ್ಚೂ-ಕಡಿಮೆ ಅವಳ ಪರವಾಗಿ ಎನ್ನುವಂತೆ ತನ್ನಲ್ಲಿ ಮಾತುಕತೆ ನಡೆಸುತ್ತಿರುವುದರಿಂದ ಇದು ಅವಳ ಪಿತೂರಿಯೇ ಇರಬಹುದು ಅನ್ನಿಸಿತ್ತು. ಅವಳನ್ನೆಷ್ಟು ನಂಬಬಹುದೋ, ಇವನನ್ನು ಅದಕ್ಕಿಂತ ಹೆಚ್ಚು ನಂಬಬಾರದು ಎಂದು ಎಸ್ಸೆಮ್ಮೆಸ್ಸಿಗೆ ಅನ್ನಿಸಿತ್ತು. ಜೊತೆಗೆ ಬ್ರಾಂಡು ಡಿ-ಡಿಸೈನ್ ಕಂಪೆನಿಯಲ್ಲಿಯೇ ಕಾನೂನುಬದ್ಧವಾಗಿರುವುದು ತಿಳಿದಾಗಿನಿಂದ ಅವಳಿಗೆ ಹೊಸ ಹುರುಪೂ, ಆತ್ಮ ವಿಶ್ವಾಸವೂ ಬಂದಿತ್ತು. ಅವಳು ಈಗ ಯಾವುದೇ ಚಿಲ್ಲರೆ ರಾಜಿಗೆ ತಯಾರಿರಲಿಲ್ಲ. ಹೀಗಾಗಿಯೇ ದನಿಯೇರಿಸಿ ಗೋ ಟು ಹೆಲ್ ಅಂದು ತಾನೂ ಸ್ಟಾರ್ ಬಕ್ಸ್ ನಿಂದ ಹೊರಬಿದ್ದಳು.

ಚಿನ್ಮಯನಿಗೆ ಏನೂ ತೋಚಲಿಲ್ಲ. ತಾನು ಆಡಿದ ಮಾತಿಗೆ ಬೇರಾವುದೇ ಪ್ರತಿಕ್ರಿಯೆ ನೀಡದೇ ಈ ಮೂರು ಪದಗಳನ್ನು ಮಾತ್ರ ಉಚ್ಚರಿಸಿ ಹೋದಳು. ಗೋ ಟು ಹೆಲ್... ಎಂದುಕೊಳ್ಳುತ್ತಲೇ ಅವನು ಶಿವಾನಿಯ ಮನೆಗೆ ಹೊರಟ.

ಶಿವಾನಿಗೆ ತನ್ನ ಆಲೋಚನೆಯ ಬಗ್ಗೆ ಹೇಳಿದ. ತಾನು ಸುಜಾತಾಳಿಗೆ ಒಡ್ಡಿದ ಒಪ್ಪಂದದ ಬಗ್ಗೆಯೂ ಹೇಳಿದ. ಶಿವಾನಿ ‘‘ನನ್ನ ಷರತ್ತು ನೆನಪಿದೆಯಾ? ‘ನಾನು ಹೇಳಿದ್ದು ಆ ಸುಜಾತಾಳನ್ನು ಹೇಗೆ ಟ್ರೀಟ್ ಮಾಡಬೇಕೋ ತಿಳಿಸು, ಹಾಗೆ ಮಾಡೋಣ...ಬಟ್ ನಾಟ್ ಫಾರ್ಮಲಿ, ಇನ್ಫಾರ್ಮಲಿ’ ಎಂದಿದ್ದೆ. ಅಧ್ಯಕ್ಷ ಸ್ಥಾನ ಫಾರ್ಮಲ್ ಅನ್ನೊದೂ ಗೊತ್ತಿಲ್ಲವಾ ಚಿನ್ನೂ.’’ ಎಂದು ತಣ್ಣಗೆ ಕೇಳಿ ತಾನೂ ಗೋ ಟು ಹೆಲ್ ಅಂದಳು.

ಈಗಾಗಲೇ ನರಕದಲ್ಲಿರುವಂತೆ ಅನ್ನಿಸುತ್ತಿದ್ದ ಚಿನ್ಮಯ ನಿಂತಲ್ಲೇ ನಿಂತಿದ್ದ.

ಶಿವಾನಿಗೆ ಸುಜಾತಾಳ ಬಗ್ಗೆ ಯಾವುದೇ ರೀತಿಯ ಅನುಕಂಪವಿರಲಿಲ್ಲ. ಹಾಗೆ ನೋಡಿದರೆ, ಅತ್ಯಂತ ಪ್ರತಿಭಾನ್ವಿತನಾದ ಚಿನ್ಮಯನ ವ್ಯಾಪಾರಿ ಮನೋಧರ್ಮದ ಬಗ್ಗೆಯೂ ಅವಳಿಗೆ ಅಂತರಂಗದಲ್ಲಿ ಅನುಮಾನಗಳು ಬರತೊಡಗಿದ್ದುವು. ಪ್ಯಾರಿಸ್‌ನಲ್ಲಿ ಅವನು ಹೀಗಿರಲಿಲ್ಲ. ತಮ್ಮ ವ್ಯಾಸಂಗದ ದಿನಗಳಲ್ಲಿ ಎಷ್ಟು ಬಾರಿ ಇಬ್ಬರೂ ಸೇರಿ ಹೊಸ ಸ್ಟಾರ್ಟಪ್ಪಿನ ಮಾತಾಡಿದ್ದು ಉಂಟು? ಅಲ್ಲಿದ್ದಾಗ ಒಂದೆರಡು ಬಿಝಿನೆಸ್ ಪ್ಲಾನುಗಳನ್ನೂ ತಯಾರಿಸಿದ್ದರು. ಅದರಲ್ಲಿ ಸಹಭಾಗಿಗಳಾಗಿ, ಸಹ ಸಂಸ್ಥಾಪಕರಾಗಿ ಹೇಗೆ ವ್ಯಾಪಾರವನ್ನು ಮಾಡಬಹುದು ಎನ್ನುವ ಒಂದು ದೊಡ್ಡ ಕನಸನ್ನು ತಾವು ಹೆಣೆದಿದ್ದರು.

ಮುಕುಂದಸಾಗರನ ಸಾವಿನ ನಂತರ ತಾನು ಆಶಿಸುತ್ತಿರುವುದು ಏನೆಂದು ಸುಜಾತಾಳಿಗೆ ನಿಜಕ್ಕೂ ಗೊತ್ತಿರಲಿಲ್ಲ. ಒಂದು ಮಟ್ಟದಲ್ಲಿ ಇರುವುದೆಲ್ಲವನ್ನೂ ಬಿಟ್ಟು ತನ್ನೂರು- ಮೈಸೂರಿಗೆ ಹೋಗುವುದು ಎಂದು ನಿರ್ಧರಿಸಿಯಾಗಿತ್ತು. ಅದಕ್ಕೆ ಪೂರಕವಾಗಿ ಮೈಸೂರಿನಲ್ಲಿದ್ದ ತನ್ನ ಕಾಲೇಜಿನ ದಿನಗಳ ಗೆಳೆಯನಾದ ಅನಿರುದ್ಧನೊಂದಿಗೆ ಮಾತುಕತೆಯೂ ಆಗಿತ್ತು. ತಾವು ಸಂಪಾದಿಸಿದ ಸಂಪತ್ತಿನ ಬಹಳಷ್ಟು ಭಾಗವನ್ನು ಮುಕುಂದಸಾಗರ ಕೊನೆಯ ಹಂತದಲ್ಲಿ ಕಳೆದುಕೊಂಡಿದ್ದನಾದರೂ ಕಂಪೆನಿಯಲ್ಲಿ ತನ್ನ ಕಾಲು ಭಾಗದ ಪಾಲು ಇದ್ದೇ ಇತ್ತು.

‘‘ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಶಿವಾನಿ. ನಾನು ಈ ಅನ್-ಆಕ್ಸೆಸರೀಸ್ ಜೊತೆ ಗುರುತಿಸಿಕೊಳ್ಳಲು ತಯಾರಿಲ್ಲ. ಇದು ನಮ್ಮಿಬ್ಬರ ಸ್ನೇಹದ ನಡುವೆಯೂ ಬರುತ್ತಿದೆಯಾದ್ದರಿಂದ, ಲೆಟ್ಸ್ ಬ್ರೇಕ್ ಅಪ್. ಇದು ನಾನು ಬೆಳೆದು ಬಂದ ಮೌಲ್ಯಗಳು, ವ್ಯಾಪಾರದ ಚೌಕಟ್ಟಿಗೆ ಸಂಬಂಧಿಸಿದ್ದು. ನಾಟ್ ವಿಲ್ಲಿಂಗ್’’

ತಮ್ಮಿಬ್ಬರ ನಡುವೆ ಇರುವ ಕಂದರದ ಆಳ-ಅಗಲಗಳನ್ನು ಅವನು ವಿವರಿಸಿ ಹೇಳಿದ. ಆದರೆ ಶಿವಾನಿಯ ತರ್ಕ ಮುಂದುವರಿಯಿತು. ಅವಳು ಇದನ್ನು ಬಡಪಟ್ಟಿಗೆ ಬಿಡುವವಳಾಗಿರಲಿಲ್ಲ.

ಅಂದು ಸಂಜೆಗೆ ರಂಗರಾಜನ್ ಮತ್ತು ಸೂನಾವಾಲಾ ಇಬ್ಬರನ್ನು ಅಂಧೇರಿ-ಲೋಖಂಡವಾಲಾದ ಸ್ಟಾರ್-ಬಕ್ಸ್‌ಗೆ ಬರಲು ಹೇಳಿದಳು. ಸೌತ್ ಬಾಂಬೆಯಿಂದ ಇಬ್ಬಿಬ್ಬರು ಬರುವುದಕ್ಕೆ ಬದಲು ಸುಜಾತಾಳೇ ಯಾಕೆ ತಾಜ್ ಸೀಲೌಂಜ್‌ಗೆ ಬರಬಾರದೆಂದು ಸೂನಾವಾಲಾ ಹೇಳಿದ. ದ ಈವಿನಿಂಗ್ ಇಸ್ ಆನ್ ಮಿ. ಎಂದ. ಅಲ್ಲಿಯೇ ಕೂತು ಒಂದೆರಡು ತಾಸು ಮಾತಾಡಬಹುದು. ಅವರು ಹೇಳಿದ್ದನ್ನು ಸಾವಧಾನವಾಗಿ ಅವಳು ಕೇಳಲೂ ತಯಾರಿದ್ದಳು. ಒಂದು ರೀತಿಯಿಂದ ಇದೂ ಸರಿಯೆಂದು ಸುಜಾತಾಳಿಗೆ ಅನ್ನಿಸಿತು.

ಇತ್ತ ಸೂನಾವಾಲಾ ಮೂರು ವಿಷಯಗಳನ್ನು ಚರ್ಚಿಸಿದ. ಒಂದು - ಅನ್-ಆಕ್ಸೆಸರಿಯಲ್ಲಿ ಸುಜಾತಾಳ ಪಾಲು-ಪಾತ್ರ-ಪೆಂಟ್ ಹೌಸಿನ ನೋಟಿಸು. ಎರಡು ಡಿ-ಡಿಸೈನ್ ಕಂಪೆನಿಯಲ್ಲಿರಬಹುದಾದ ಕಾನೂನಿನ ಸೂಕ್ಷ್ಮಗಳು. ಮೂರು ಉಯಿಲು ಬರೆಯದೇ ಪ್ರಾಣ ಕಳೆದುಕೊಂಡ ಮುಕುಂದಸಾಗರನ ಆಸ್ತಿಬಾಧ್ಯತೆಗಳನ್ನು ಸುಜಾತಾಳ ಹೆಸರಿಗೆ ಮಾಡಬಹುದಾದ ಸೂಕ್ಷ್ಮಗಳು. ಈ ಕಥೆ ಸರಳವಾಗೇನೂ ಇರಲಿಲ್ಲ. ಆದರೆ, ಪೆಂಟ್ ಹೌಸಿನ ವಿಷಯಕ್ಕೆ ಹೋರಾಡುವುದರಲ್ಲಿ ಅರ್ಥವಿಲ್ಲ ಎಂದು ಸೂನಾವಾಲಾ ಹೇಳಿದ್ದು ಸ್ಪಷ್ಟವಾಗಿತ್ತು.

ಸುಜಾತಾ ತಾನೇನು ಮಾಡಬೇಕೆಂದು ತೀರ್ಮಾನಿಸುವುದು ಕಷ್ಟವಾಗುತ್ತಾ ಹೋಯಿತು. ಅನಿರುದ್ಧನ ಬಳಿ ದಿನವೂ ಮಾತನಾಡುತ್ತಿದ್ದರೂ, ಮೈಸೂರಿನಲ್ಲಿ ಫ್ಲಾಟೊಂದನ್ನು ಖರೀದಿಸುವ ಯೋಜನೆಯನ್ನು ತುಸು ಮುಂದೂಡಿದಳು. ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರ ಉಂಟಾದ ಮೇಲೆ ಅವನ ಜೊತೆ ಫ್ಲಾಟಿನ ವಿಷಯ ಚರ್ಚಿಸುವುದಾಗಿ ಹೇಳಿದ್ದಳು. ಅನಿರುದ್ಧನ ಅಭಿಪ್ರಾಯದಂತೆ ಈ ವಿಷಯಕ್ಕೆ ಹೋರಾಡುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಶಿವಾನಿ ಮತ್ತವಳ ತಂದೆ ಶ್ರೀಮಂತರು. ವ್ಯವಹಾರವನ್ನು ಅರಿತವರು. ಒಳ್ಳೆಯ ವಕೀಲರನ್ನು ನಿಯಮಿಸಿಕೊಳ್ಳಬಲ್ಲವರು.

ಹಿಂದಿನ ದಿನ ನಡೆದ ಚಿನ್ಮಯನ ಜೊತೆಗಿನ ಮಾತುಕತೆಯೂ ತಾನು ನಿರೀಕ್ಷಿಸಿದಂತೆ ಮುಂದುವರಿದಿರಲಿಲ್ಲ. ಎಲ್ಲ ವಿಷಯದಲ್ಲೂ ತಮ್ಮಲ್ಲಿ ಒಂದು ಮಟ್ಟದ ಸಹಭಾಗಿತ್ವ, ಸಮ-ಆಲೋಚನೆ, ಹೊಂದಾಣಿಕೆ ಇದೆ ಎಂದು ಪ್ಯಾರಿಸ್‌ನಲ್ಲಿ ಅನ್ನಿಸಿತ್ತು. ಆದರೆ ಮುಕುಂದಸಾಗರನ ವಿಷಯಕ್ಕೆ ಬಂದಾಗ ಮಾತ್ರ ಈ ಅಂತರ ಬಂದದ್ದು ಹೇಗೆ ? ಇದು ವಿಚಾರಧಾರೆಯ ವಿಷಯವೋ, ಅಥವಾ ಕೆಳಮಧ್ಯಮವರ್ಗದ ಯೋಚನಾಲಹರಿಯ ವಿಷಯವೋ ಅವಳಿಗೆ ತಿಳಿಯಲಿಲ್ಲ.

ಇತ್ತ ಸೂನಾವಾಲಾನ ಭೇಟಿಯಲ್ಲಿ ಅನೇಕ ವಿಷಯಗಳು ಬಂದಿದ್ದುವು. ಮುಕುಂದಸಾಗರನ ಸಾವು ಸಹಜದ್ದಲ್ಲ, ಇದರಲ್ಲಿ ಪೊಲೀಸು ವಿಚಾರಣೆ ನಡೆಯುತ್ತಿದೆ ಎನ್ನುವುದನ್ನು ಮರೆಯಬಾರದೆನ್ನುವ ವಿಚಾರದಿಂದ ಸೂನಾವಾಲಾ ಪ್ರಾರಂಭಿಸಿದ. ಮುಕುಂದಸಾಗರ ಉಯಿಲನ್ನು ಬಿಟ್ಟಿಲ್ಲ. ಆದರೆ ಅವನ ಆಸ್ತಿಗೆ ಅವಳು ಕೈ ಹಾಕಬೇಕೆಂದಿದ್ದರೆ, ಅವನ ಬಾಧ್ಯತೆಗಳನ್ನೂ ಪರಿಗಣಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)