ಶಿವಮೊಗ್ಗದಲ್ಲಿ ಶೇ.10 ರಿಂದ 30 ರಷ್ಟು ಹೆಚ್ಚಾಗಲಿದೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ
ಡಿ.10 ರಿಂದ ಅಧಿಕೃತ ಜಾರಿ
ಶಿವಮೊಗ್ಗ, ಡಿ. 7: ರಾಜ್ಯಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಅದರಂತೆ ಡಿ. 10 ರಿಂದ ಶಿವಮೊಗ್ಗ ನಗರದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳ ಅಧಿಕೃತವಾಗಿ ಜಾರಿಗೆ ಬರಲಿದೆ. ಲಭ್ಯ ಮಾಹಿತಿ ಅನುಸಾರ, ಶೇ. 10 ರಿಂದ 30 ರಷ್ಟು ಮಾರ್ಗಸೂಚಿ ದರ ಏರಿಕೆಯಾಗಲಿದೆ.
ನಗರದ ಬೆಳವಣಿಗೆ, ವಾಣಿಜ್ಯ ಚಟುವಟಿಕೆ, ಜನ-ವಾಹನ ಸಂಚಾರ, ಮೂಲಸೌಕರ್ಯ ಅಭಿವೃದ್ದಿ, ಆಯಕಟ್ಟಿನ ಪ್ರದೇಶ ಮತ್ತೀತರ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಲಾಗಿದೆ. ಕನಿಷ್ಠ 10 ರಿಂದ ಗರಿಷ್ಠ ಶೇ. 30 ರವರೆಗೆ ದರ ಹೆಚ್ಚಿಸಲಾಗಿದೆ. ಯಾವ್ಯಾವ ಪ್ರದೇಶದ ದರ ಎಷ್ಟಾಗಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ, ಈಗಾಗಲೇ ಸ್ಥಳೀಯ ಸಬ್ ರಿಜಿಸ್ಟಾರ್ ಕಚೇರಿ ಅಧಿಕಾರಿಗಳು ನೂತನ ದರ ಹೆಚ್ಚಳಕ್ಕೆ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದ್ದಾರೆ. ಕೆಳಹಂತದ ಅಧಿಕಾರಿ-ಸಿಬ್ಬಂದಿಗಳಿಗೆ ಈ ಕುರಿತಂತೆ ಮಾಹಿತಿ ನೀಡಿದ್ದಾರೆ. 'ಸೋಮವಾರ ಕಚೇರಿ ಸೂಚನಾ ಫಲಕದಲ್ಲಿ ಶಿವಮೊಗ್ಗ ನಗರ ಹಾಗೂ ಗ್ರಾಮೀಣ ಭಾಗಗಳ ನಿವೇಶನ-ಕಟ್ಟಡ-ಜಮೀನುಗಳ ಮಾರ್ಗಸೂಚಿ ದರದ ವಿವರ ಪ್ರಕಟಿಸಲಾಗುವುದು. ನೂತನ ದರದಂತೆ ನೊಂದಣಿ ಪ್ರಕ್ರಿಯೆ ನಡೆಸಲಾಗುವುದು' ಎಂದು ಸ್ಥಳೀಯ ಸಬ್ ರಿಜಿಸ್ಟಾರ್ ಕಚೇರಿ ಮೂಲಗಳು ತಿಳಿಸಿವೆ.
ಆಕ್ಷೇಪ ವ್ಯಕ್ತವಾಗಿತ್ತು: ಸರ್ಕಾರವು ಕಳೆದ ಅಕ್ಟೋಬರ್ ನಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ನಿರ್ಧರಿಸಿತ್ತು. ಕೇಂದ್ರ ಮೌಲ್ಯಮಾಪನ ಸಮಿತಿ ಕೂಡ ಅನುಮತಿ ನೀಡಿತ್ತು. ಸ್ಥಳೀಯ ಸಬ್ ರಿಜಿಸ್ಟಾರ್ ಕಚೇರಿ ಹಾಗೂ ನೊಂದಣಿ-ಮುದ್ರಾಂಕ ಇಲಾಖೆಯ ಅಧಿಕಾರಿಗಳು ಕರಡು ಪರಿಷ್ಕರಣೆಯ ಪಟ್ಟಿ ಸಿದ್ದಪಡಿಸಿ, ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದ್ದರು. ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದರು. ಚುನಾವಣೆ ಮತ್ತಿತರ ಕಾರಣಗಳಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು.
ಕೆಲ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಿಸಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ಕೆಲ ಸಂಘಟನೆಗಳು ಮಾರ್ಗಸೂಚಿ ದರ ಪರಿಷ್ಕರಿಸದಂತೆ ನೊಂದಣಿ ಇಲಾಖೆಗೆ ಮನವಿ ಕೂಡ ಅರ್ಪಿಸಿದ್ದವು. ಸಾರ್ವಜನಿಕರು-ಸಂಘಸಂಸ್ಥೆಗಳ ಆಕ್ಷೇಪಣೆ ಪರಿಶೀಲಿಸಿ, ನೊಂದಣಿ ಇಲಾಖೆಯು ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿತ್ತು.
ಹೊರೆ: ಪ್ರಸ್ತುತ ಶಿವಮೊಗ್ಗ ನಗರದಲ್ಲಿ ನಿವೇಶನ-ಮನೆಗಳ ಬೆಲೆ ಗಗನಮುಖಿಯಾಗಿದೆ. ವಸತಿರಹಿತ ಜನಸಾಮಾನ್ಯರು ಸ್ವಂತ ಸೂರು ಹೊಂದುವುದು ಕಷ್ಟಕರವೆಂಬ ವಾತಾವರಣವಿದೆ. ಇದೀಗ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳವಾಗುವುದರಿಂದ ಜನಸಾಮಾನ್ಯರು ನಿವೇಶನ-ಮನೆ ಖರೀದಿಸುವುದು ಮತ್ತಷ್ಟು ದುರ್ಲಭವಾಗುವಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
'ಪ್ರಸ್ತುತ ಮಾರುಕಟ್ಟೆ ಹಾಗೂ ಸರ್ಕಾರಿ ದರಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ನಿವೇಶನ-ಮನೆ ಕ್ರಯಪತ್ರ ಮಾಡಿಸುವ ವೇಳೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಯಾರೊಬ್ಬರು ನೊಂದಣಿ ಮಾಡಿಸುವುದಿಲ್ಲ. ವೈಜ್ಞಾನಿಕವಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಕ್ರಮ ಸರಿಯಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ' ಎಂಬುವುದು ಇಲಾಖೆ ಮೂಲಗಳ ಅಭಿಪ್ರಾಯವಾಗಿದೆ.
ಲೆಕ್ಕಾಚಾರ: ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಸದ್ಯ ಶಿವಮೊಗ್ಗ ನಗರದ ರಿಯಲ್ ಎಸ್ಟೇಟ್ ಉದ್ಯಮ ಅಷ್ಟೇನೂ ಚೇತೋಹಾರಿಯಾಗಿಲ್ಲ. ಮಾರ್ಗಸೂಚಿ ದರ ಹೆಚ್ಚಳ, ಉದ್ಯಮದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಸರ್ಕಾರದ ಸೂಚನೆಯಂತೆ ಕ್ರಮ : ಹಿರಿಯ ಸಬ್ ರಿಜಿಸ್ಟಾರ್ ಡಿ.ಪಿ.ಸತೀಶ್
ಸ್ಥಿರಾಸ್ತಿ ಮಾರ್ಗ ಸೂಚಿ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು. ಡಿ. 10 ರಿಂದ ಪರಿಷ್ಕೃತ ಮಾರ್ಗಸೂಚಿ ದರದಂತೆ ನೊಂದಣಿ ಪ್ರಕ್ರಿಯೆ ನಡೆಸಲಾಗುವುದು. ಬದಲಾದ ದರಗಳ ವಿವರವನ್ನು ನಾಗರಿಕರಿಗೆ ಅವಗಾಹನೆಗೆ ತರಲಾಗುವುದು. ಸ್ಥಿರಾಸ್ತಿ ಮಾರ್ಗಸೂಚಿ ಪರಿಷ್ಕರಣೆಯ ವೇಳೆ ಈ ಹಿಂದಿದ್ದ ಸಣ್ಣಪುಟ್ಟ ವ್ಯತ್ಯಾಸ, ಲೋಪದೋಷಗಳನ್ನು ತಿದ್ದುಪಡಿ ಮಾಡಲಾಗಿದೆ. ಒಂದೇ ಏರಿಯಾದಲ್ಲಿದ್ದ ದರ ವ್ಯತ್ಯಾಸವನ್ನು ಏಕರೂಪಗೊಳಿಸಲಾಗಿದೆ. ಕೃಷಿ ಜಮೀನು, ತೋಟಗಳಲ್ಲಿದ್ದ ಪ್ರತ್ಯೇಕ ದರ ಮೌಲ್ಯವನ್ನು ತಿದ್ದುಪಡಿಗೊಳಿಸಿ ಒಂದೇ ಮೌಲ್ಯ ನಿಗದಿಗೊಳಿಸಲಾಗಿದೆ' ಎಂದು ಸಬ್ ರಿಜಿಸ್ಟಾರ್ ಕಚೇರಿಯ ಹಿರಿಯ ಉಪ ನೊಂದಣಾಧಿಕಾರಿ ಸತೀಶ್‍ರವರು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.