varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಶಾಂತವೇರಿ ಗೋಪಾಲಗೌಡ ಮತ್ತು ಕನ್ನಡ ಸಂಸ್ಕೃತಿ

ವಾರ್ತಾ ಭಾರತಿ : 8 Dec, 2018
ನಟರಾಜ್ ಹುಳಿಯಾರ್

ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿರುವ ನಟರಾಜ್ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ವಿಷಯದ ಕುರಿತು ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮತ್ತೊಬ್ಬ ಸರ್ವಾಧಿಕಾರಿ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಎಂಬ ಕಥಾಸಂಕಲನಗಳನ್ನು; ‘ರೂಪಕಗಳ ಸಾವು’ ಎಂಬ ಕವಿತೆಗಳು; ‘ಶೇಕ್ಸ್ಪಿಯರ್ ಮನೆಗೆ ಬಂದ’ ಎಂಬ ನಾಟಕ; ‘ಗಾಳಿಬೆಳಕು’ ಎಂಬ ಲೇಖನಗಳ ಸಂಗ್ರಹ; ಇಂತಿ ನಮಸ್ಕಾರಗಳು-ಲಂಕೇಶ್ ಮತ್ತು ಡಿಆರ್ ನಾಗರಾಜ್ ಸೃಜನಶೀಲ ಕಥಾನಕ; ತೆರೆದ ಪಠ್ಯ, ಹಸಿರು ಸೇನಾನಿ, ಟೀಕೆಟಿಪ್ಪಣಿ ಭಾಗ-1 ಮತ್ತು 2, ಶೇಕ್ಸ್ಪಿಯರ್ ಸ್ಪಂದನ ಎಂಬ ಸಂಪಾದಿತ ಕೃತಿಗಳು; ಡಾ.ರಾಮಮನೋಹರ ಲೋಹಿಯಾ ಕೃತಿಗಳ ಕನ್ನಡಾನುವಾದಗಳ ಸಂಪಾ ದಿತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ನಟರಾಜ್ ಹುಳಿಯಾರ್

ಐವತ್ತು-ಅರವತ್ತರ ದಶಕಗಳಲ್ಲಿ ಕರ್ನಾಟಕದ ಅನನ್ಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಈ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಗಳ ಜೊತೆಗೆ ಇರಿಸಿಕೊಂಡಿದ್ದ ಅಪೂರ್ವ ಸಂಬಂಧ ಕುರಿತ ಸಾಂಸ್ಕೃತಿಕ ಬರಹ...

ಅರವತ್ತರ ದಶಕದಲ್ಲಿ ಒಮ್ಮೆ ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಸಾಗರಕ್ಕೆ ಬಂದರು. ಅಷ್ಟೊತ್ತಿಗಾಗಲೇ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಜೊತೆ ಕವಿ ಚಂದ್ರಶೇಖರ ಕಂಬಾರರು ಲೋಹಿಯಾ ಅವರನ್ನು ಭೇಟಿ ಮಾಡಲು ಹೋದರು. ಸಾಗರದಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕಂಬಾರರು ಅದೇ ಆಗ ತಮ್ಮ ‘ಹೇಳತೇನ ಕೇಳ’ ಎಂಬ ಖಂಡಕಾವ್ಯ ಬರೆದಿದ್ದರು. ಆ ಪದ್ಯವನ್ನು ಲೋಹಿಯಾರ ಎದುರು ಓದುವಂತೆ ಗೌಡರು ಕಂಬಾರರಿಗೆ ಹೇಳಿದರು. ಕಂಬಾರರು ತಮ್ಮ ‘ಹೇಳತೇನ ಕೇಳ’ ಖಂಡಕಾವ್ಯವನ್ನು ಓದುತ್ತಾ, ಹಾಡುತ್ತಾ ಮಂಡಿಸುತ್ತಿದ್ದಾಗ, ಈ ಪದ್ಯ ವಸಾಹತುಶಾಹಿಯ ಆಗಮನದ ಸಂದರ್ಭವನ್ನು, ವಸಾಹತುಶಾಹಿಯ ಪರಿಣಾಮಗಳನ್ನು ಕುರಿತು ಹೇಳುತ್ತಿದೆ ಎಂದು ಗೋಪಾಲಗೌಡು ಲೋಹಿಯಾಗೆ ವಿವರಿಸತೊಡಗಿದರು.

ಕೆಲವು ವರ್ಷಗಳ ಕೆಳಗೆ ಆ ಪ್ರಸಂಗವನ್ನು ನೆನಪಿಸಿಕೊಂಡ ಕಂಬಾರರು ಹೇಳಿದರು: ‘ವಸಾಹತುಶಾಹಿ ಎನ್ನುವ ಶಬ್ದ ಮೊದಲು ನನ್ನ ಕಿವಿಗೆ ಬಿದ್ದಿದ್ದು ಆಗ. ಆ ತನಕ ನನ್ನ ಪದ್ಯ ವಸಾಹತುಶಾಹಿಯನ್ನು ಟೀಕಿಸುತ್ತದೆ ಎಂಬುದು ನನಗೇ ಗೊತ್ತಿರಲಿಲ್ಲ!’ ಗೋಪಾಲಗೌಡರ ರಾಜಕೀಯ ದೃಷ್ಟಿಕೋನ ಕಂಬಾರರ ಮಹತ್ವದ ಖಂಡಕಾವ್ಯವೊಂದಕ್ಕೆ ರಾಜಕೀಯ ಅರ್ಥಗಳನ್ನು ಕೊಡುವುದರ ಜೊತೆಗೆ ಕವಿಗೂ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದ ಅರ್ಥಪೂರ್ಣ ಸಂದರ್ಭ ಇದು.

ಅದು ಗೋಪಾಲಗೌಡರು ಕನ್ನಡ ಕಾವ್ಯವನ್ನು ಬಳಸಿ ಸಮಕಾಲೀನ ರಾಜಕೀಯವನ್ನು ವಿಶ್ಲೇಷಿಸಲು ಯತ್ನಿಸುತ್ತಿದ್ದ ಕಾಲವೂ ಆಗಿತ್ತು. ಆ ಕಾಲದಲ್ಲಿ ನವ್ಯ ಲೇಖಕರು ಗೌಡರ ರಾಜಕೀಯ ಕ್ರಿಯಾಶೀಲತೆ ಹಾಗೂ ಹರಿತವಾದ ಚಿಂತನೆಗಳಿಂದ ಪ್ರೇರಣೆ ಪಡೆದಂತೆ ಕಾಣುತ್ತದೆ. ಆರಂಭದಲ್ಲಿ ವ್ಯಕ್ತಿಪರೀಕ್ಷೆಗೆ ಒತ್ತು ಕೊಟ್ಟಿದ್ದ ನವ್ಯ ಸಾಹಿತಿಗಳ ಬರವಣಿಗೆಯ ಚೌಕಟ್ಟು ಹಾಗೂ ವ್ಯಾಪ್ತಿ ಗೋಪಾಲಗೌಡರ ಸಖ್ಯ ಹಾಗೂ ಲೋಹಿಯಾ ಅವರ ಚಿಂತನೆಗಳಿಂದಲೂ ಬದಲಾಗಿರುವ ಸಾಧ್ಯತೆಗಳಿವೆ. ಸಮಾಜವಾದಿ ಯುವಜನ ಸಭಾ, ಶೂದ್ರ ಬರಹಗಾರರ ಒಕ್ಕೂಟ ಮೊದಲಾದ ವೇದಿಕೆಗಳು ಮುಂದೆ ಸಮಾಜ, ಸಂಸ್ಕೃತಿಗಳ ವಿಶ್ಲೇಷಣೆಯಲ್ಲಿ ಬಳಸಿದ ರಾಜಕೀಯ ಆಯಾಮಗಳ ಹಿನ್ನೆಲೆಯಲ್ಲಿ ಗೋಪಾಲಗೌಡರ ಸಮಾಜವಾದಿ ರಾಜಕಾರಣ, ಹೋರಾಟ ಹಾಗೂ ಚಿಂತನೆಗಳ ಪ್ರೇರಣೆಗಳೂ ಇವೆ. ಶಿವಮೊಗ್ಗ ಜಿಲ್ಲೆಯಿಂದಲೇ ಬಂದಿದ್ದ ಪಿ. ಲಂಕೇಶರಿಗೆ ಗೋಪಾಲಗೌಡರ ಬಗ್ಗೆ ಅಪಾರ ಮೆಚ್ಚುಗೆಯಿತ್ತು. ಅರವತ್ತು,ಎಪ್ಪತ್ತರ ದಶಕದ ನಡುವೆ ನವ್ಯ ಲೇಖಕರಾಗಿ ತಮ್ಮ ಬರಹಗಳಲ್ಲಿ ವ್ಯಕ್ತಿಯ ತೀವ್ರಪರೀಕ್ಷೆಯಲ್ಲಿ ತೊಡಗಿದ್ದ ಲಂಕೇಶರ ಪ್ರಜ್ಞೆ ಗೋಪಾಲಗೌಡರಿಂದ, ಸಮಾಜವಾದಿ ಪಕ್ಷದ ಇನ್ನಿತರರಿಂದ ಹಾಗೂ ಅವರೆಲ್ಲ ಭಾಗಿಯಾದ ಸಮಾಜವಾದಿ ಸಂಜೆಗಳಿಂದ ನಿಧಾನವಾಗಿ ಸೂಕ್ಷ್ಮವಾದ ಸಮುದಾಯ ಪ್ರಜ್ಞೆಯಾಗಿ ಬದಲಾಗಿರಬಹುದು ಎಂಬ ಸೂಚನೆಗಳು ಲಂಕೇಶರ ಆತ್ಮಥನ ‘ಹುಳಿ ಮಾವಿನಮರ’ದಲ್ಲಿವೆ:

‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗು ತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು- ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿ ಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗನ್ನಿಸುತ್ತದೆ’.

ಹೀಗೆ ಗೋಪಾಲಗೌಡರಿಂದ ಹಲಬಗೆಯ ಸಾಮಾಜಿಕ-ರಾಜಕೀಯ ಪ್ರಜ್ಞೆಗಳನ್ನು ಪಡೆದ ಕನ್ನಡ ಲೇಖಕರಿದ್ದಾರೆ. ಸ್ವತಃ ಗೋಪಾಲಗೌಡರೇ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯ ವಿಭಿನ್ನ ಘಟ್ಟಗಳಾದ ನವೋದಯ, ಪ್ರಗತಿಶೀಲ, ನವ್ಯ- ಈ ಮೂರೂ ಘಟ್ಟಗಳ ಅವಧಿಯಲ್ಲಿ ರೂಪುಗೊಂಡಿದ್ದ ಸಮಾಜವಾದಿ ರಾಜಕಾರಣಿಯಾಗಿದ್ದರು. ಗೋಪಾಲಗೌಡರು ತೀರಿಕೊಂಡ ನಂತರ ಕನ್ನಡ ಸಾಹಿತ್ಯದಲ್ಲಿ ವಿಕಾಸಗೊಂಡ ದಲಿತ, ಬಂಡಾಯ ಘಟ್ಟಗಳ ಲೇಖಕರಿಗೂ ಗೋಪಾಲಗೌಡರ ಬಗ್ಗೆ ಅಪಾರ ಗೌರವವಿತ್ತು. ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳ ಲೇಖಕರೂ ಒಂದಲ್ಲ ಒಂದು ಘಟ್ಟದಲ್ಲಿ ಗೋಪಾಲಗೌಡರನ್ನು ನೆನೆದಿದ್ದಾರೆ. ನವೋದಯ ಘಟ್ಟದ ಕುವೆಂಪು, ಶಿವರಾಮ ಕಾರಂತ, ಪುತಿನ; ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್; ಪ್ರಗತಿಶೀಲ ಸಾಹಿತಿಗಳಾದ ಬಸವರಾಜ ಕಟ್ಟೀಮನಿ, ಅ.ನ.ಕೃ., ತ.ರಾ.ಸು., ಬೀಚಿ; ನವ್ಯ ಘಟ್ಟದ ಯು.ಆರ್.ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ವೀಚಿ, ಸಿದ್ಧಲಿಂಗ ಪಟ್ಟಣಶೆಟ್ಟಿ; ಬಂಡಾಯ ಲೇಖಕರಾದ ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ; ನಂತರದ ನಾ. ಡಿಸೋಜ, ಕಿ.ರಂ.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಮುಂತಾಗಿ ಹಲವು ಘಟ್ಟಗಳ, ಹಲವು ಮಾರ್ಗಗಳ ಲೇಖಕರು ಅಭಿಮಾನ, ಮೆಚ್ಚುಗೆ, ಆರಾಧನೆಗಳಿಂದ ಗೋಪಾಲಗೌಡರನ್ನು ನೆನೆದಿದ್ದಾರೆ. ಹೀಗೆ ಕನ್ನಡ ಸಾಹಿತ್ಯದ ಹಲವು ಘಟ್ಟಗಳ ಅಭಿಮಾನಕ್ಕೆ ಪಾತ್ರರಾಗಿರುವ ಕರ್ನಾಟಕದ ಏಕಮಾತ್ರ ರಾಜಕಾರಣಿಯೆಂದರೆ ಶಾಂತವೇರಿ ಗೋಪಾಲಗೌಡರೇ ಇರಬೇಕು. ಕನ್ನಡ ಸಾಹಿತ್ಯದ ನಾಲ್ಕು ಘಟ್ಟಗಳ ಲೇಖಕರು ಗೋಪಾಲಗೌಡರನ್ನು ಕುರಿತು ಹೆಚ್ಚುಕಡಿಮೆ ಒಂದೇ ಬಗೆಯ ಮೆಚ್ಚುಗೆಯ ಧ್ವನಿಯಲ್ಲಿ ಬರೆದಿರುವುದು ಕೂಡ ಗೋಪಾಲಗೌಡರು ಕನ್ನಡನಾಡಿನ ರಾಜಕೀಯದಲ್ಲಿ ರೂಪಿಸಿಕೊಂಡಿದ್ದ ಅನನ್ಯ ನಾಯಕತ್ವದ ಮಾದರಿಯನ್ನು ಒತ್ತಿ ಹೇಳಿದಂತಿದೆ. ಹಾಗೆಯೇ, ಕರ್ನಾಟಕದ ದಲಿತ ಚಳವಳಿಯ ಸ್ಫೂರ್ತಿಮೂಲಗಳಲ್ಲೊಬ್ಬರಾದ ಬಿ. ಬಸವಲಿಂಗಪ್ಪನವರು ಕೂಡ ಗೋಪಾಲಗೌಡರ ನಿಲುವುಗಳನ್ನು ಒಪ್ಪಿ, ಬೆಂಬಲಿಸಿದ್ದ ಒಡನಾಡಿಯಾಗಿದ್ದರು.

................................. 2 ................................

ಗೋಪಾಲಗೌಡರು ತಮ್ಮ ತಾರುಣ್ಯದಲ್ಲಿ, ತೀರ್ಥಹಳ್ಳಿ ತಾಲೂಕಿನ ಆರಗದ ಮನೆಯಲ್ಲಿ ಬೆಳಗಿನ ಹೊತ್ತು ರಾಗವಾಗಿ ಕಾವ್ಯವಾಚನ ಮಾಡುತ್ತಿದ್ದಾಗ, ಅತ್ತಿತ್ತ ಹೋಗುವ ರೈತರು ಬಂದು ಅಲ್ಲಿ ಕೂತು ಈ ವಾಚನವನ್ನು ಕೇಳಿಸಿಕೊಂಡು ಹೋಗುತ್ತಿದ್ದರು. ಬಸವಣ್ಣನವರ ವಚನಗಳು, ಭಗವದ್ಗೀತೆ, ಉಪನಿಷತ್ತುಗಳನ್ನು ಕೂಡ ಗೌಡರು ಓದಿಕೊಂಡಿದ್ದರು. ಗೌಡರ ಹತ್ತಿರದ ಮಿತ್ರರಾಗಿದ್ದ ಗಾಯಕ ಪಿ. ಕಾಳಿಂಗರಾವ್ ಹೇಳುವಂತೆ ಗೋಪಾಲಗೌಡ ‘ಪಂಪ ರನ್ನರಂಥವರ ಕಾವ್ಯಗಳನ್ನು ಚೆನ್ನಾಗಿ ಅರಗಿಸಿಕೊಂಡಿದ್ದ. ರನ್ನ ಕವಿಯ ಬಗ್ಗೆ ಆತನಿಗೆ ಅಪಾರ ಹೆಮ್ಮೆ’. ಇದೆಲ್ಲದರ ಜೊತೆಗೆ, ಹಾಡಿಗೆ ಒಗ್ಗುವ ಕನ್ನಡದ ಕವಿತೆಗಳ ಕಡೆಗೆ ಗೌಡರ ಮನಸ್ಸು ಒಲಿಯತೊಡಗಿದಂತೆ, ಸಾಹಿತ್ಯ ಗೌಡರ ಸಹಜ ಸಂಗಾತಿಯಾಗತೊಡಗಿತು. ‘ಕುವೆಂಪು, ಬೇಂದ್ರೆ ಕವನಗಳ ಭಾವಪೂರ್ಣ ಹಾಡುಗಾರಿಕೆ ಮಾಡಬಲ್ಲವರಾಗಿದ್ದ ಗೌಡರಿಗೆ ಯಕ್ಷಗಾನದ ಅಭಿರುಚಿ’ಯೂ ಇತ್ತು. ‘ಬಿಸಿಲು, ಕಾಲಿಟ್ಟರೆ ಹಾರುತ್ತಿದ್ದ ನುಣ್ಣನೆಯ ಮಣ್ಣು, ಬೆವರು ಇಳಿಯುತ್ತಾ ಸಾಗುವಾಗ ಗೌಡರಿಗೆ ಸಾಹಿತ್ಯಸ್ಫೂರ್ತಿ ಬರುತ್ತಿತ್ತು’ ಎನ್ನುವ ಸಮಾಜವಾದಿ ಎಸ್.ಎಸ್.ಕುಮಟಾ, ಕಾಡಿನ ನಡುವೆ ಎತ್ತರದ ದನಿಯಲ್ಲಿ ಗೌಡರು ಡಿ.ವಿ.ಜಿ.ಯವರ ‘ವನಸುಮ’ ಪದ್ಯದ ‘ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ’ ಸಾಲುಗಳನ್ನು ಹಾಡಿದ್ದನ್ನು, ಬೇಂದ್ರೆಯವರ ‘ಭಾವಗೀತ’ ಪದ್ಯದ ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’ ಮೊದಲಾದ ಸಾಲುಗಳನ್ನು ಹಾಡಿದ್ದನ್ನು ಕುರಿತು ಒಂದೆಡೆ ಬರೆಯುತ್ತಾರೆ. ಕಾಗೋಡು ಸತ್ಯಾಗ್ರಹದ ನಂತರ ಪೊಲೀಸರ ಕಣ್ಣು ತಪ್ಪಿಸಿಕೊಂಡು ಯಾರದೋ ಮನೆಯಲ್ಲಿ ತಂಗಿದ್ದ ಗೋಪಾಲಗೌಡರು ತಾವು ಪೊಲೀಸರಿಗೆ ಸಿಕ್ಕಿಬಿದ್ದ ದಿನದ ಬೆಳಗಿನ ಗಳಿಗೆಗಳನ್ನು ಕುರಿತು ಆನಂತರದ ದಿನಗಳಲ್ಲಿ ಬರೆದಿದ್ದಾರೆ: ‘‘ಬೇಂದ್ರೆಯವರ ‘ಬೆಳಗು’ ಪದ್ಯದ ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾ ಹೊಯ್ದಿ’ ರಾಗ ಎಳೆಯುತ್ತಾ, ಪ್ರಕೃತಿಯೊಂದಿಗೆ ಬೆರೆತು ಕೆಲ ಹೊತ್ತು ಕಳೆದು, ಸಾಗರಕ್ಕೆ ಕಳಿಸಬೇಕಾಗಿದ್ದ ದಿನದ ಟಪ್ಪಾಲನ್ನು ಸಿದ್ಧಪಡಿಸತೊಡಗಿದ್ದೆ. ಕವಿದಿದ್ದ ಮೋಡಗಳನ್ನು ಸೀಳಿ ಎಳೆ ಬಿಸಿಲು ನನ್ನನ್ನು ನೆಕ್ಕತೊಡಗಿತ್ತು’’.

ಗೋಪಾಲಗೌಡರು ಆಧುನಿಕಪೂರ್ವ ಕನ್ನಡ ಸಾಹಿತ್ಯ ಕೃತಿಗಳಾದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯಗಳನ್ನು ರೈತರಿಗೆ ಹೇಳುತ್ತಿದ್ದ ರೀತಿಯಲ್ಲೇ, ತಾವು ಓದಿಕೊಂಡಿದ್ದ ಮಾರ್ಕ್ಸ್, ರಸೆಲ್, ಗಾಂಧಿ, ಲೋಹಿಯಾ ಮುಂತಾದವರನ್ನು ಕೂಡ ಹಳ್ಳಿಗರಿಗೆ, ರೈತರಿಗೆ ಸರಳವಾಗಿ ವಿವರಿಸಬಲ್ಲವರಾಗಿದ್ದರು. ಆಧುನಿಕ ಪದ್ಯಗಳನ್ನೂ ಹೊಸ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲವರಾಗಿದ್ದರು. ಗೋಪಾಲಕೃಷ್ಣ ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಪದ್ಯ ನೆಹರೂ ವ್ಯಕ್ತಿತ್ವವನ್ನು ಹಾಗೂ ನೆಹರೂ ರಾಜಕಾರಣವನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತದೆ. ಅಷ್ಟೊತ್ತಿಗಾಗಲೇ, ಗೋಪಾಲ ಗೌಡರ ನೆಚ್ಚಿನ ನಾಯಕರಾಗಿದ್ದ ಲೋಹಿಯಾ ಅವರು ನೆಹರೂ ರಾಜಕಾರಣದ ಕಟು ವಿಮರ್ಶಕರಾಗಿದ್ದರು. ನೆಹರೂ ರಾಜಕಾರಣ ಕುರಿತ ಅಡಿಗರ ಪದ್ಯವನ್ನು ಗೋಪಾಲಗೌಡರ ಬಾಯಲ್ಲಿ ಹತ್ತಾರು ಸಲ ಕೇಳಿದ್ದನ್ನು ಕಾದಂಬರಿಕಾರ ತ.ರಾ.ಸು. ನೆನಸಿಕೊಳ್ಳುತ್ತಾರೆ. ಅಂದರೆ, ಗೋಪಾಲಗೌಡರ ಒಡನಾಟ ಕೂಡ ಕವಿ ಅಡಿಗರನ್ನು ಈ ಬಗೆಯ ಸೂಕ್ಷ್ಮ ರಾಜಕೀಯ ಚಿಂತನೆಯ ಕಡೆ ಒಯ್ದಿರಬಹುದೆಂದು ಅನ್ನಿಸುತ್ತದೆ.

ಈ ಬಗೆಯ ವಿವರಗಳನ್ನು ನೋಡುತ್ತಿದ್ದರೆ, ವಿಧಾನಸಭೆಯಲ್ಲಿ ಗೋಪಾಲಗೌಡರು ಕನ್ನಡ ಭಾಷೆಯನ್ನು ಬಳಸುತ್ತಿದ್ದ ವಿಶಿಷ್ಟ ರೀತಿಗೆ ಅವರು ಬಗೆಬಗೆಯ ಉತ್ತಮ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದುದೂ ಒಂದು ಮುಖ್ಯ ಕಾರಣವಾಗಿತ್ತು ಎಂಬುದು ಹೊಳೆಯುತ್ತದೆ. ಆಗ ವಿಧಾನಸಭೆಯಲ್ಲಿ ಶೀಘ್ರ ಲಿಪಿಕಾರರಾಗಿದ್ದ ಕವಿ ಪು.ತಿ.ನ. ಗೋಪಾಲಗೌಡರು 1957ರ ಚುನಾವಣೆಯಲ್ಲಿ ಸೋತಾಗ ಗೌಡರಿಗೆ ಒಂದು ಪತ್ರ ಬರೆದಿದ್ದರು. ಈ ಪತ್ರ ಓದಿದ ಗೌಡರು ಕಣ್ಣಲ್ಲಿ ನೀರು ತುಂಬಿಕೊಂಡು ಆ ಪತ್ರವನ್ನು ಕೋಣಂದೂರು ಲಿಂಗಪ್ಪನವರಿಗೆ ಓದಲು ಕೊಟ್ಟರು: ‘ನಿಮ್ಮಂಥ ಸ್ವಚ್ಛ ಹೃದಯದ, ವಿಶಾಲ ಮನಸ್ಸಿನ, ಅಷ್ಟೇ ಅಚ್ಚಗನ್ನಡದಲ್ಲಿ ಮನೋಹರವಾಗಿ ವೈಚಾರಿಕ ಭಾಷಣ ಮಾಡುವ ಇನೊಬ್ಬರನ್ನು ನಾನು ಈವರೆಗೆ ಕಂಡಿಲ್ಲ. ಕೇಳಿಲ್ಲ. ನೀವು ಮತ್ತೊಮ್ಮೆ ಶಾಸಕರಾಗಿ ಬರಬೇಕೆಂದು ನನ್ನ ಬಯಕೆ’. ಆ ಪತ್ರದಲ್ಲಿದ್ದ ಈ ಮಾತುಗಳ ಕೆಳಗೆ ಪಿ.ಟಿ. ನರಸಿಂಹಾಚಾರ್ ಎಂಬ ಸಹಿ ಇತ್ತು.

ಈ ಚುನಾವಣೆಯ ಸೋಲಿನ ನಂತರ ಗೋಪಾಲ ಗೌಡರು ಮತ್ತೆ ಎರಡು ಅವಧಿಗೆ ವಿಧಾನಸಭೆಯ ಶಾಸಕರಾದರು. ಕನ್ನಡ ಸಾಹಿತ್ಯದ ಓದಿನಿಂದ ಸಂಪನ್ನವಾದ ಹಾಗೂ ತಮ್ಮ ಆಲೋಚನೆಯನ್ನು ಮಂಡಿಸಲು ತಕ್ಕ ಸ್ಪಷ್ಟ ಕನ್ನಡವನ್ನು ರೂಪಿಸಿಕೊಂಡು, ತಮ್ಮ ವಾದಗಳಿಗೆ ಮೊನಚು ತರಲು ಅಲ್ಲಲ್ಲಿ ಕನ್ನಡ ಕಾವ್ಯವನ್ನೂ ಉಲ್ಲೇಖಿಸುತ್ತಿದ್ದ ಗೋಪಾಲಗೌಡರು ಬಳಸುತ್ತಿದ್ದ ಕನ್ನಡ ಭಾಷೆ ಕನ್ನಡದ ದೊಡ್ಡ ಕವಿಗಳಲ್ಲೊಬ್ಬರಾದ ಪು.ತಿ.ನ. ಅವರಿಂದ ಇಂಥ ಪ್ರೀತಿಯ ಮೆಚ್ಚುಗೆ ಗಳಿಸಿದ್ದು ಅಚ್ಚರಿಯಲ್ಲ. ಗೋಪಾಲಗೌಡರು ವಿಧಾನಸೌಧದಲ್ಲಿ ಕುಮಾರವ್ಯಾಸನ ಕಾವ್ಯಭಾಗವನ್ನು ಕೂಡ ಉಲ್ಲೇಖಿಸಬಲ್ಲವರಾಗಿದ್ದರು:

ಅರಸು ರಾಕ್ಷಸ ಮಂತ್ರಿಯೆಂಬುವ

ಮೊರೆವ ಹುಲಿ ಪರಿವಾರ ಹದ್ದಿನ

ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು

ಉರಿವುರಿವುತಿದೆ ದೇಶನಾವಿ

ನ್ನಿರಲು ಬಾರದೆನುತ ಜನ ಬೇ

ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ

ಈ ಬಗೆಯ ಕಾವ್ಯಭಾಗಗಳನ್ನು ಉಲ್ಲೇಖಿಸಿ ಸಮಕಾಲೀನ ರಾಜಕಾರಣಿಗಳನ್ನು ಟೀಕಿಸಬಲ್ಲವರಾಗಿದ್ದ ಗೌಡರು ತಮ್ಮ ವಾದಕ್ಕೆ ಪುಷ್ಟಿ ಕೊಡಬಲ್ಲ ಕ್ಷಿಪ್ರ ಆಶುಕವಿತೆಗಳನ್ನು ಕೂಡ ಸದನದಲ್ಲಿ ಪ್ರಯೋಗಿಸಬಲ್ಲವರಾಗಿದ್ದರು.

ಗೋಪಾಲಗೌಡರ ಸಾಹಿತ್ಯ ಗ್ರಹಿಕೆಯಲ್ಲಿ ಹಾಗೂ ಅವರು ಸಾಹಿತ್ಯ ಕೃತಿಗಳಿಂದ ಆಯ್ದ ಚಿಂತನೆಗಳು, ರೂಪಕಗಳನ್ನು ಬಳಸುತ್ತಿದ್ದ ರೀತಿಯಲ್ಲಿ ವಿಶಿಷ್ಟವಾದ ಸದ್ಯತನ ಹಾಗೂ ರಾಜಕೀಯ ಆಯಾಮಗಳಿದ್ದವು. ಅವರು ಕನ್ನಡ ಸಾಹಿತ್ಯದ ಒಳನೋಟಗಳನ್ನು ವಿಶಾಲ ಜನಸಮುದಾಯದ ಅನುಭವದ ಜೊತೆ ಬೆಸೆಯುವ ರೀತಿಯಲ್ಲಿ ಚರ್ಚಿಸುತ್ತಿದ್ದರು. ಚುನಾವಣಾ ಸಭೆಗಳಲ್ಲಿ ಹಾಗೂ ರಾಜಕೀಯ ಸಭೆಗಳಲ್ಲಿ ಸಾಹಿತ್ಯಪಠ್ಯಗಳನ್ನು ತೀರಾ ಸಹಜವಾಗಿ ಬಳಸಬಲ್ಲವರಾಗಿದ್ದರು. ಸಾಹಿತಿಗಳ ಜೊತೆಗಿನ ಚರ್ಚೆಯಲ್ಲಿ ವಿಶಾಲ ರಾಜಕೀಯ ದೃಷ್ಟಿಕೋನದಿಂದ ಸಾಹಿತ್ಯ ಕೃತಿಗಳನ್ನು ವಿವರಿಸಬಲ್ಲವರಾಗಿದ್ದರು. ಗೋಪಾಲಗೌಡರ ಭಾಷಣಗಳು ವೈಚಾರಿಕವೂ, ಜೀವಂತವೂ ಆಗಿರುತ್ತಿದ್ದವು; ಜನರ ಜೊತೆಗಿನ ನಿತ್ಯದ ಮಾತುಕತೆಗಳಂತೆಯೂ ಇರುತ್ತಿದ್ದವು. ಜವಳಿ ನಾಗೇಂದ್ರನಾಥ್ ನೆನಸಿಕೊಳ್ಳುವಂತೆ, ಗೋಪಾಲಗೌಡರ ಭಾಷಣ ‘ಅಂದರೆ ಅದೊಂದು ಯಕ್ಷಗಾನದ ಹಾಗೆ: ವ್ಯಂಗ್ಯ, ತಮಾಷೆ, ಸಾಹಿತ್ಯ, ಕಲೆ, ರಾಜಕಾರಣ ಎಲ್ಲವೂ ಇರುತ್ತಿತ್ತು.’ ಗೋಪಾಲಗೌಡರ ‘ಭಾಷಣದ ವೈಖರಿಯೆಂದರೆ, ಮೊದಲು ಕೆಲವು ನಿಮಿಷ ನಿಧಾನಗತಿ; ಅವರು ಶಬ್ದಗಳನ್ನು ತೂಗಿ ತೂಗಿ ಬಳಸುತ್ತಿದ್ದರು’ ಎನ್ನುವ ಸಮಾಜವಾದಿ ಪಕ್ಷದ ಕಾರ್ಯಕರ್ತ ಉಳ್ಳೂರು ಸುಬ್ಬರಾವ್ ಒಂದು ಚುನಾವಣೆಯ ಸಂದರ್ಭದಲ್ಲಿ, ‘ಕನ್ನಡದ ಆದಿ ಕವಿ ಪಂಪನ ಬನವಾಸಿಯ ವರ್ಣನೆಯಿಂದ ಗೌಡರ ಭಾಷಣದ ಪ್ರಾರಂಭ’ವಾದುದನ್ನು ನೆನೆಯುತ್ತಾರೆ. ಚುನಾವಣೆಯ ಭಾಷಣಗಳಲ್ಲಿ ನಿತ್ಯದ ಸೀಮೆಎಣ್ಣೆಯ ಸಮಸ್ಯೆಗೂ ಜಗತ್ತಿನ ರಾಜಕಾರಣದ ಒಳಸುಳಿಗಳಿಗೂ ಇರುವ ಸಂಬಂಧವನ್ನು ಕುರಿತು ಜನರಿಗೆ ಹೇಳುತ್ತಿದ್ದ ಗೋಪಾಲಗೌಡರು, ಜಗತ್ತಿನ ಅನೇಕ ವಿಷಯಗಳನ್ನು ಸಾಮಾನ್ಯ ಜನಕ್ಕೆ ಮುಟ್ಟಿಸುತ್ತಿದ್ದ ರೀತಿ ಕುರಿತು ಕಿ.ರಂ. ನಾಗರಾಜ್ ಆಗಾಗ ಹೇಳುತ್ತಿದ್ದರು.

ಗೋಪಾಲಗೌಡರು ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಸಾಲುಗಳನ್ನು, ನಿಸಾರರ ‘ಕುರಿಗಳು ಸಾರ್ ಕುರಿಗಳು’ ಪದ್ಯದ ಸಾಲುಗಳನ್ನು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ, ರಾಜಕೀಯ ಸಭೆಗಳಲ್ಲಿ ಬಳಸುತ್ತಿದ್ದರು. ಹೀಗೆ ರಾಜಕೀಯ ಸಭೆಗಳಲ್ಲಿ ಚುರುಕಾಗಿ ಕವನಗಳನ್ನು ಬಳಸುವ ಕ್ರಮ ಗೋಪಾಲಗೌಡರ ಶಿಷ್ಯ ಕೋಣಂದೂರು ಲಿಂಗಪ್ಪನವರಲ್ಲೂ ಮುಂದುವರಿಯಿತು. ಮುಂದೊಮ್ಮೆ ಕೋಣಂದೂರು ಲಿಂಗಪ್ಪ ಚುನಾವಣಾ ಸಭೆಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಎದುರಾಳಿಯನ್ನು ಟೀಕಿಸಲು ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಶ್ಯಾ’ ಪದ್ಯವನ್ನು ಮತದಾರರಿಗೆ ವಿವರಿಸಿ ಹೇಳುತ್ತಿದ್ದರು; ಆ ಮೂಲಕ, ಕಮ್ಯುನಿಸ್ಟ್ ವ್ಯವಸ್ಥೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತದೆ ಎಂಬ ಈ ಪದ್ಯದ ತಾತ್ಪರ್ಯವನ್ನು ಹೇಳುತ್ತಾ, ಕಮ್ಯುನಿಸ್ಟ್ ಪಕ್ಷದ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದರು.

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ’ ಎಂದು ಆರಂಭವಾಗುವ ಕುವೆಂಪು ಅವರ ‘ಸೋಮನಾಥಪುರದ ದೇವಾಲಯ’ ಕವನವನ್ನು ಆಗಾಗ ಗುನುಗುತ್ತಿದ್ದ ಗೋಪಾಲಗೌಡರು, ‘ಇಲ್ಲಿ ಕೇವಲ ಸೋಮನಾಥ ದೇವಾಲಯದ ಬಗ್ಗೆ ಮಾತ್ರವಲ್ಲ, ಇಡೀ ಕರ್ನಾಟಕದ ಬಗೆಗೇ’ ಕುವೆಂಪು ಹೇಳುತ್ತಿದ್ದಾರೆ ಎಂದು ಗೋಪಾಲಗೌಡರು ವ್ಯಾಖ್ಯಾನಿಸುತ್ತಿದ್ದುದನ್ನು ಕೋಣಂದೂರು ಲಿಂಗಪ್ಪ ನೆನಸಿಕೊಳ್ಳುತ್ತಾರೆ. ಸ್ವತಃ ಗೋಪಾಲಗೌಡರು ಕವನಗಳನ್ನು ಬರೆಯುತ್ತಿದ್ದುದನ್ನೂ ಕೋಣಂದೂರು ನೆನೆಯುತ್ತಾರೆ: ‘‘ಗೌಡರು ಕವನಗಳನ್ನು ಬರೆದು, ಒಂದು ಸಿಗರೇಟು ಸೇದಿ, ಆ ಕವನಗಳನ್ನು ಓದಿ, ನಕ್ಕು ಅವನ್ನು ಹರಿದು ಹಾಕುತ್ತಿದ್ದರು. ‘ಅಯ್ಯೋ! ಹಾಗೆ ಹರಿಯಬೇಡಿ’ ಎಂದು ಕೇಳಿಕೊಂಡರೆ, ...‘ಅದು ಕೇವಲ ಬರವಣಿಗೆ ಅಷ್ಟೆ. ಅದು ಕವನವೂ ಅಲ್ಲ, ಸಾಹಿತ್ಯವೂ ಅಲ್ಲ. ಅದಕ್ಕೆಲ್ಲ ಬಹಳ ಪರಿಶ್ರಮ, ತಪಸ್ಸು ಬೇಕು’ ಎನ್ನುತ್ತಿದ್ದರು’’. ಗೌಡರು ತೀರಿಕೊಂಡ ನಂತರ, ಅವರ ಕೈ ಬರಹದಲ್ಲಿದ್ದ ಅಪೂರ್ಣ ಪದ್ಯವೊಂದನ್ನು ಡಾ. ಎಂ.ಸಿ. ವಿಷ್ಣುಮೂರ್ತಿ ಪ್ರಕಟಿಸಿದ್ದಾರೆ.

ಆ ಪದ್ಯದ ಕೆಲವು ಸಾಲುಗಳು:

ವಂಚಿಸಲಾರೆ ಈ ಕಳ್ಳ ಕಾಲನ

ಅವಗೆ ಗೊತ್ತಿರುವುದನೆ ಹೇಳಿಕೊಳ್ಳುವೆ ಮತ್ತೆ

ಆದೀತು ನನ್ನ ಈ ಎದೆಭಾರ ಹಗುರ

. ................................ 3 ................................

ಗೋಪಾಲಗೌಡರು ಕನ್ನಡ ಕವಿಗಳ ಕವನಗಳ ಸಾಲುಗಳನ್ನೂ, ಆಶಯಗಳನ್ನೂ ತಮ್ಮ ಸಮಾಜವಾದಿ ರಾಜಕಾರಣದಲ್ಲಿ ಬಳಸುತ್ತಿದ್ದಾರೆಂದು ಹಲವು ಕನ್ನಡ ಲೇಖಕರು ಹೆಮ್ಮೆಪಡುತ್ತಿದ್ದರೆ, ಹಾಗೆ ಬಳಸುವುದನ್ನು ಆಕ್ಷೇಪಿಸುತ್ತಿದ್ದ ಜನರೂ ಆ ಕಾಲದಲ್ಲಿದ್ದರು! ಈ ಕುರಿತು ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದ ಅಧ್ಯಾಯವೊಂದರಲ್ಲಿ ಕುತೂಹಲಕರ ವಿವರವೊಂದು ಬರುತ್ತದೆ. ತೇಜಸ್ವಿ ಒಮ್ಮೆ ಕುವೆಂಪು ಅವರ ಜೊತೆ ಕುಪ್ಪಳಿ ಬಳಿಯ ಇಂಗ್ಲಾದಿಗೆ ಹೋಗುತ್ತಾರೆ. ಆಗಿನ್ನೂ ತೇಜಸ್ವಿಯವರಿಗೆ ಗೋಪಾಲಗೌಡರ ಪರಿಚಯ ಇರಲಿಲ್ಲ. ಇಂಗ್ಲಾದಿಯಲ್ಲಿ ಕುವೆಂಪು ಅವರ ಇಬ್ಬರು ಹತ್ತಿರದ ಸಂಬಂಧಿಗಳಿಂದ ಗೋಪಾಲಗೌಡರ ಬಗ್ಗೆ ಕೇಳಿ ಬಂದ ಒಂದು ‘ದೂರು’ ತೇಜಸ್ವಿಯವರಲ್ಲಿ ಗೋಪಾಲಗೌಡರ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಈ ಕುರಿತು ತೇಜಸ್ವಿ ಬರೆಯುತ್ತಾರೆ: ‘‘ಅಲ್ಲಿ ಶ್ರೀ ಮಾನಪ್ಪನವರೂ ವಿಜಯದೇವ ಅವರೂ ಅಣ್ಣನ ಜೊತೆ ಮಾತಾಡುತ್ತಾ, ಗೋಪಾಲಗೌಡ ಚಳವಳಿಯಲ್ಲಿ ಹಾಗೂ ಇತರೆಡೆಗಳಲ್ಲಿ ಭಾಷಣ ಮಾಡುತ್ತಾ ನಿಮ್ಮ ‘ಕಲ್ಕಿ’, ‘ನೇಗಿಲಯೋಗಿ’ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಏಕೆಂದರೆ, ಇದರಿಂದ ನನಗೆ ಗೋಪಾಲಗೌಡರ ಬಗ್ಗೆ ಕುತೂಹಲವೂ ಸ್ವಲ್ಪ ಸದಭಿಪ್ರಾಯವೂ ಪ್ರಾರಂಭವಾಯ್ತು... ಗೋಪಾಲಗೌಡ ಕಥೆ, ಕವನಗಳನ್ನು ಓದುವ ಮನುಷ್ಯನಾದರೆ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಸರಿ ಎಂದು ಅನ್ನಿಸಿತ್ತು.’’

ಮುಂದೆ ಸಮಾಜವಾದಿ ಚಳವಳಿಯಲ್ಲಿ ಭಾಗಿಯಾದ ತೇಜಸ್ವಿ ಗೋಪಾಲಗೌಡರಿಗೆ ಹತ್ತಿರವಾದರು ಹಾಗೂ ಗೌಡರ ಜೊತೆಗೆ ಪ್ರತಿಭಟನೆ, ಚಳವಳಿ, ಚುನಾವಣೆಗಳು ಮುಂತಾಗಿ ಹಲ ಬಗೆಯ ರಾಜಕಾರಣದಲ್ಲಿ ಭಾಗಿಯಾದರು. ತೇಜಸ್ವಿ ತಮ್ಮ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ಬರೆದ ‘ಹೊಸ ದಿಗಂತದ ಕಡೆಗೆ’ ಎನ್ನುವ ವಿಶಾಲ ಸಮಾಜವಾದಿ ಆಶಯದ ಮುನ್ನುಡಿಯನ್ನು ಕೂಡ ಆ ಸರಿಸುಮಾರಿನಲ್ಲೇ ಬರೆದಂತಿದೆ. ತೇಜಸ್ವಿಯವರ ಬಗ್ಗೆ ಗೋಪಾಲಗೌಡರ ವಿಶ್ವಾಸ ಎಲ್ಲಿಯತನಕ ಬೆಳೆಯಿತೆಂದರೆ, ಮುಂದೆ ಗೌಡರು ತಮಗೆ ಕಾಯಿಲೆಯಾದಾಗ, ತೇಜಸ್ವಿಯವರೇ ತೀರ್ಥಹಳ್ಳಿ ವಿಧಾನಸಭಾ ಕೇತ್ರದಿಂದ ಸ್ಪರ್ಧಿಸಬೇಕು ಎಂದು ಕೂಡ ಬಯಸಿದ್ದರು. ಗೌಡರ ಈ ಸಂದೇಶ ಹೊತ್ತು ಕೋಣಂದೂರು ಲಿಂಗಪ್ಪ ಈ ಚುನಾವಣಾ ಸ್ಪರ್ಧೆಗೆ ಅಗತ್ಯವಿದ್ದ ತೇಜಸ್ವಿಯವರ ಹೆಸರಿರುವ ಅಧಿಕೃತ ಮತದಾರ ಪಟ್ಟಿಯೊಂದನ್ನು ಹಿಡಿದುಕೊಂಡು ಮೂಡಿಗೆರೆಗೆ ಹೋದರು. ಚುನಾವಣೆಗೆ ಸ್ಪರ್ಧಿಸಲು ತೇಜಸ್ವಿ ಸುತರಾಂ ಒಪ್ಪಲಿಲ್ಲ. ಅಷ್ಟೇ ಅಲ್ಲ! ಲಿಂಗಪ್ಪನವರ ಕೈಯಲ್ಲಿದ್ದ ಪಟ್ಟಿಯನ್ನು ನೋಡುತ್ತಾ, ‘ಎಲ್ಲಿ ಲಿಂಗಪ್ಪ! ಏನು ತಂದಿದ್ದೀರಿ ತೋರ್ಸಿ?’ ಎಂದು ಕೇಳಿದ ತೇಜಸ್ವಿ, ಕೋಣಂದೂರು ಲಿಂಗಪ್ಪ ಆ ಪಟ್ಟಿಯನ್ನು ಅವರ ಕೈಗೆ ಕೊಡುತ್ತಿದ್ದಂತೆ ಅದನ್ನು ಹರಿದು ತುಂಡು ತುಂಡು ಮಾಡಿದರಂತೆ!

................................ 4 ................................

ಗೋಪಾಲಗೌಡರು ಕವನಗಳನ್ನು ವಿವರಿಸುತ್ತಿದ್ದ ಕ್ರಮ ಕೂಡ ಕನ್ನಡದಲ್ಲಿ ರಾಜಕೀಯ ಓದಿನ ಕ್ರಮವೊಂದನ್ನು ರೂಪಿಸಲೆತ್ನಿಸಿದೆ. ‘ಬೇಂದ್ರೆಯವರ ‘ಅನ್ನ ದೇವರು’, ‘ಕುರುಡು ಕಾಂಚಾಣ’, ಕುವೆಂಪು ಅವರ ‘ನೀನಂದು ಕನಕ ರಥವನು ತಂದು’ ಈ ಪದ್ಯಗಳು ನನ್ನ ಅನುಭವಕ್ಕೆ ಬಂದಿದ್ದು ಗೋಪಾಲಗೌಡರ ಮೂಲಕ’ ಎನ್ನುವ ಅನಂತಮೂರ್ತಿ, ಅಡಿಗರ ಕಾವ್ಯವನ್ನು ಹೊಸ ರೀತಿಯಲ್ಲಿ ನೋಡುವ ರೀತಿಯನ್ನು ಗೋಪಾಲಗೌಡರು ತೋರಿಸಿಕೊಟ್ಟಿದ್ದನ್ನು ನೆನೆಯುತ್ತಾರೆ: ‘ಒಂದು ಕವಿ ಸಮ್ಮೇಳನದ ಕೊನೆಯಲ್ಲಿ ನವ್ಯ ಕಾವ್ಯ, ಅಡಿಗರ ಕವನಗಳ ಬಗ್ಗೆ ಗೊೀಪಾಲಗೌಡರು ಮಾತಾಡಿದರು. ನಾವೆಲ್ಲ ಉಪಯೋಗಿಸುವ ಒಂದೇ ಒಂದು ಸಾಹಿತ್ಯ ವಿಮರ್ಶೆಯ ಕ್ಲೀಷೆಯೂ ಅವರ ಮಾತಿನಲ್ಲಿರಲಿಲ್ಲ. ಆದರೆ ತನ್ನ ಅಂತರಂಗ ಜೀವನ, ಹೊರಗಿನ ರಾಜಕೀಯ, ಈ ಒಳ ಹೊರಗಿನ ತಿಕ್ಕಾಟದಲ್ಲಿರುವ ತನ್ನ ಮನಸ್ಸು ಈ ಹೊಸ ಕಾವ್ಯದ ತಿರುವುಮುರುವುಗಳಲ್ಲಿ ಓಡಾಡಿ ಪಟ್ಟ ಅನುಭವ- ಎಲ್ಲವನ್ನೂ ಒಂದಕ್ಕೊಂದು ಹೆಣೆದು ಎಷ್ಟು ಚೆನ್ನಾಗಿ ಮಾತಾಡಿದರೆಂದರೆ ನಮ್ಮಲ್ಲಿ ಅನೇಕರಿಗೆ ನಾವು ಎಷ್ಟೋ ಸಾರಿ ಓದಿದ ಅಡಿಗರನ್ನು ಮತ್ತೆ ಹೊಸ ಕಣ್ಣಿಂದ ನೋಡಿದ ಅನುಭವ ಅವತ್ತು ಆಯಿತು’. ಗೋಪಾಲಗೌಡರಂಥ ಪೂರ್ಣಾವಧಿ ಹೋರಾಟಗಾರ-ರಾಜಕಾರಣಿ ಓದಿ ವ್ಯಾ್ಯಾನಿಸುತ್ತಿದ್ದ ನವ್ಯ ಕಾವ್ಯ ತಮಗೆ ‘ಅರ್ಥವಾಗುವುದಿಲ್ಲ’ವೆಂದು ಹೇಳುವ ಆನಂತರದ ಉಡಾಫೆಯ ವಿಮರ್ಶಕರು ನವ್ಯ ಕಾವ್ಯದ ಪೊಲಿಟಿಕಲ್ ಹೇಳಿಕೆಗಳನ್ನು ಗ್ರಹಿಸಲಾರದಷ್ಟು ಜಡರಾಗಿದ್ದರೇನೋ ಎಂದು ಈಗ ಅನ್ನಿಸುತ್ತದೆ!

ಒಮ್ಮೆ ತಮ್ಮ ಕ್ಷೇತ್ರದ ಜನ ರಸ್ತೆ ಇತ್ಯಾದಿಗಳ ಬಗ್ಗೆ ಬೇಡಿಕೆ ಸಲ್ಲಿಸಿದಾಗ ಗೌಡರು ಕೊಟ್ಟ ಉತ್ತರ ಕುರಿತು ಕೆ.ವಿ. ಸುಬ್ಬಣ್ಣ ಬರೆಯುತ್ತಾರೆ. ‘ಈ ಕೆಲಸಗಳಿಗೆ ಅವುಗಳದೇ ಆದ ಬೇರೆ ಇಲಾಖೆಯಿದೆ; ಅದರ ಮೇಲೆ ಒತ್ತಡ ತರಬೇಕು’ ಎಂದ ಗೋಪಾಲಗೌಡರು ಜನರಿಗೆ ಹೇಳಿದರು: ‘ಕುಮಾರವ್ಯಾಸ ಹೇಳ್ತಾನೆ ಕಣಯ್ಯಾ, ‘ಬೇರು ನೀರುಂಡಾಗ ತಣಿಯವೆ ಭೂರುಹದ ಶಾಖೋಪಶಾಖೆಗಳು’ ಅಂತ. ನೀವೆಲ್ಲ ಅಂಥಾ ದೊಡ್ಡ ಕಾವ್ಯಗಳನ್ನು ಓದಬೇಕು ಕಣ್ರಯ್ಯಾ. ನಾವು ವಿಧಾನಸಭೆಯಲ್ಲಿ ಕೂತು ಯಾವುದೋ ಊರಿನ ರಸ್ತೆ, ಕೆರೆ ಮಾಡಿಸೋದಲ್ಲ... ಕರ್ನಾಟಕ ಅಂತನ್ನೋ ದೊಡ್ಡ ಮರ ಇದೆಯಲ್ಲ, ಅದರ ಬೇರಿಗೆ ನೀರು ಹಣಿಸೋ ದಾರಿ ಹುಡುಕಬೇಕು. ಇದನ್ನು ಮಾಡಬೇಕು. ಹಾಗೆ ಮಾಡಿದ್ರೆ ಇಂಥಾ ದೊಡ್ಡ ಮರದ ರೆಂಬೆ ಚಿಗುರು ಎಲೆ ಎಲ್ಲಾ ಒಂದೇ ಸಲಕ್ಕೆ ನಳನಳಿಸಿ ಬೆಳೀತವೆ’.

ಗೋಪಾಲಗೌಡರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃತಿಗಳು, ಇಂಗ್ಲಿಷಿಗೆ ಅನುವಾದಗೊಂಡ ಇನ್ನಿತರ ಭಾಷೆಗಳ ಕೃತಿಗಳು, ಗದ್ಯ ಬರಹಗಳು, ಕನ್ನಡಕ್ಕೆ ಅನುವಾದಗೊಂಡ ಸಾಹಿತ್ಯ ಕೃತಿಗಳು ಎಲ್ಲವನ್ನೂ ಓದುತ್ತಿದ್ದರು. ಇದೆಲ್ಲದರ ನಡುವೆ ಗೌಡರು ಕನ್ನಡ ಮಕ್ಕಳು ಓದುತ್ತಿರುವ ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕಗಳು ಹೇಗಿವೆ ಎಂದು ಓದಿ ಅವುಗಳ ಬಗ್ಗೆ ವಿಶ್ಲೇಷಣೆ ಬರೆದ ವಿವರ ಕೂಡ ಅವರ ದಿನಚರಿಯಲ್ಲಿದೆ. ಈ ಕುರಿತ ಮತ್ತಷ್ಟು ವಿವರಗಳು ಕೋಣಂದೂರು ಲಿಂಗಪ್ಪನವರ ದಾಖಲೆಯಲ್ಲಿವೆ: ‘ಎರಡನೇ ಚುನಾವಣೆಯಲ್ಲಿ (1957) ಸೋತ ಮೇಲೆ ಒಮ್ಮೆ ಗೋಪಾಲಗೌಡರಿಗೆ ಪ್ರಾಥಮಿಕ ಶಾಲೆಗಳ ಪಠ್ಯಗಳು ಸಿಕ್ಕವು. ಆಗ ಅವರು ನಾಲ್ಕನೇ ತರಗತಿಗೆ ಪಠ್ಯಪುಸ್ತಕವಾಗಿಟ್ಟಿದ್ದ ‘ನಮ್ಮ ರಾಜ್ಯ ಮತ್ತು ಸಮುದಾಯ’ ಎಂಬ ಪುಸ್ತಕದ ಪ್ರತಿ ಸಾಲಿನಲ್ಲೂ ಇರುವ ತಪ್ಪುಗಳನ್ನು ಪಟ್ಟಿ ಮಾಡಿ ‘ಪ್ರಜಾವಾಣಿ’ ಪತ್ರಿಕೆಗೆ ತಮ್ಮ ಟೀಕೆ ಸಮೇತ ಕಳಿಸಿದ್ದರು. ಅವರ ಲೇಖನ ‘ಪ್ರಜಾವಾಣಿ’ಯ ಮಧ್ಯಪುಟದಲ್ಲಿ ಪ್ರಕಟವಾಯಿತು. ಇದನ್ನು ಅಂದಿನ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿಯವರು ಓದಿ ನೋಡಿ ಕೂಡಲೇ ಆ ಪುಸ್ತಕವನ್ನು ರದ್ದು ಮಾಡಿದ್ದಲ್ಲದೆ, ಮಿತ್ರರೊಡನೆ ಮಾತನಾಡುತ್ತಾ, ‘ಗೋಪಾಲಗೌಡರಿಗೆ ಪ್ರಾಥಮಿಕ ಶಾಲೆಯ ಮಕ್ಕಳ ಪುಸ್ತಕ ಓದಲು ಪುರಸೊತ್ತು ಹೇಗೆ ಸಿಕ್ಕಿತು?’ ಎಂದು ಕೇಳಿದ್ದರಂತೆ. ಇದು ಗೌಡರಿಗೆ ತಿಳಿದು, ‘ಬುನಾದಿಯೇ ಭದ್ರ ಇಲ್ಲದಿದ್ದರೆ ಅವರು ಹೇಗೆ ವಿಧಾನಸಭೆಯಲ್ಲಿ ಕೂರುತ್ತಾರಂತೆ!’ ಎಂದಿದ್ದರು’. ಪ್ರಾಥಮಿಕ ಶಿಕ್ಷಣದ ಈ ಬುನಾದಿ ಕುರಿತು ಅವತ್ತು ಗೋಪಾಲಗೌಡರು ವಿಧಾನಸೌಧದ ಹೊರಗೆ ಹೇಳಿದ ಮಾತುಗಳನ್ನು ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಮೇಲೆ ವಿಧಾನಸಭೆಯಲ್ಲಿಯೂ ಹೇಳಿದರು; ಪ್ರಾಥಮಿಕ ಶಾಲೆಯ ಪಠ್ಯಗಳನ್ನು ಕುರಿತು ಹಾಗೂ ಪಠ್ಯಪುಸ್ತಕಗಳನ್ನು ರಚಿಸಬೇಕಾದವರಿಗೆ ಇರಬೇಕಾದ ಜವಾಬ್ದಾರಿ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚಿಸಿದರು.

ಗೋಪಾಲಗೌಡರ ಕೊನೆಯ ವರ್ಷಗಳಲ್ಲಿ ಅವರ ರಕ್ತದೊತ್ತಡ ಏರುತ್ತಿದ್ದಾಗ ಗೆಳೆಯ ಡಾ. ವಿಷ್ಣು ಮೂರ್ತಿಯವರ ಸಲಹೆಯ ಮೇರೆಗೆ ತೀರ್ಥಹಳ್ಳಿಯ ಗೆಳೆಯರೊಬ್ಬರ ಮನೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ಕಾಲದಲ್ಲಿ ವಿಷ್ಣುಮೂರ್ತಿ ಗೋಪಾಲಗೌಡರಿಗೆ ಚಂದ್ರಶೇಖರ ಪಾಟೀಲರ ನಾಟಕಗಳನ್ನು ಓದಲು ಕೊಟ್ಟಿದ್ದರು. ಅವುಗಳಲ್ಲಿ ‘ಟಿಂಗರ ಬುಡ್ಡಣ್ಣ ’ಹಾಗೂ ‘ಕುಂಟಾ ಕುಂಟಾ ಕುರುವತ್ತಿ’ ಅಸಂಗತ ನಾಟಕಗಳನ್ನು ಓದಿದ್ದ ಗೌಡರು ಆ ನಾಟಕಗಳ ಬಗ್ಗೆ ಪುಳಕಗೊಂಡು ಪ್ರತಿಕ್ರಿಯಿಸಿದ್ದನ್ನು ವಿಷ್ಣುಮೂರ್ತಿ ದಾಖಲಿಸಿದ್ದಾರೆ: ‘ನಾನು ರೂಮಿನೊಳಗೆ ಹೋಗುವುದರೊಳಗೆ ಗೌಡರು ಹಾಸಿಗೆಯಿಂದ ಏಳುತ್ತಾ, ‘ನಿನ್ನ ಪಾಟೀಲ...’ ಎಂದು ಮತ್ತೆ ನಗಲಾರಂಭಿಸಿದರು, ‘ಟಿಂಗರ ಬುಡ್ಡಣ್ಣ... ಕುಂಟಾ ಕುಂಟಾ ಕುರುವತ್ತಿ... ಆ ಶಬ್ದಗಳ ಫೋರ್ಸ್ ಎಷ್ಟಪ್ಪ! ಬೇಂದ್ರೇನೂ ಮೀರಿಸ್ತಾನೇನೋ ಈತ ಹೀಗೇ ಮುಂದುವರಿದರೆ...!’

ಅದೇ ದಿನ ಹಾಸಿಗೆಯಲ್ಲಿ ಮಲಗಿಕೊಂಡೇ, ಬುದ್ಧಿಜೀವಿಗಳು ಹಾಗೂ ರಾಜಕಾರಣಿಗಳ ನಡುವೆ ಸಂಪರ್ಕವೇ ತಪ್ಪಿ ಹೋಗುತ್ತಿರುವುದರ ಬಗ್ಗೆ ಗೌಡರು ವಿಷಾದದಿಂದ ಡಾ.ವಿಷ್ಣುಮೂರ್ತಿಯವರಿಗೆ ಹೇಳುತ್ತಾರೆ: ‘...ಎಲ್ಲ ಹರಿದು ಹಂಚಿ ಹೋಗಿದೀವಿ ಡಾಕ್ಟ್ರೇ, ನಾನೊಂದು ಮೂಲೆ, ನೀವೊಂದು ವೃತ್ತಿ, ಅವರೆಲ್ಲ ಎಲ್ಲೆಲ್ಲೋ...ಈ ನಡುವೆ ನಿಲುವೇ ಇಲ್ಲದ ರಾಜಕೀಯ, ತಾತ್ವಿಕ ನಿಲುವೇ ಇಲ್ಲದ ಸಾಹಿತಿ, ಪ್ರಾಮಾಣಿಕತೆಯೇ ಇಲ್ಲದ ಸರಕಾರಿ ನೌಕರ... ಒಟ್ಟಿನಲ್ಲಿ ಪರಿಸ್ಥಿತಿ ನಮ್ಮ ಕೈ ತಪ್ಪಿದೆ ಡಾಕ್ಟ್ರೆ...’

ಸಾಹಿತಿಗಳ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅಪಾರ ಭರವಸೆಯಿಟ್ಟುಕೊಂಡಿದ್ದ ಗೋಪಾಲಗೌಡರು ತಮ್ಮ ಕೊನೆಯ ಘಟ್ಟದಲ್ಲಿ ಹೀಗೆ ವಿಷಾದದಿಂದ ಮಾತಾಡಿದ್ದರ ಹಿಂದೆ ಸಾಹಿತ್ಯ, ರಾಜಕಾರಣ ಮುಂತಾಗಿ ಎಲ್ಲ ಕ್ಷೇತ್ರ ಗಳಲ್ಲೂ ಆಳವಾದ ಸಾಮಾಜಿಕ ಬದ್ಧತೆ ಇಬೇಕೆಂಬ ಅವರ ನಿರಂತರ ಕನಸು ಕಣ್ಮರೆಯಾಗುತ್ತಿದ್ದುದನ್ನು ಕುರಿತ ನೋವಿದೆ. ಅವರು ಹಿಂದೊಮ್ಮೆ ಪ್ರಗತಿಶೀಲ ಸಾಹಿತಿಗಳ ಬಗೆಗೆ ಭರವಸೆ ಇಟ್ಟುಕೊಂಡಿದ್ದ ಕಾಲದಲ್ಲಿ ಜನರ ಮೇಲೆ ಸಾಹಿತ್ಯ ಹಾಗೂ ಸಾಹಿತಿಗಳ ಪ್ರಭಾವದ ಬಗೆಗೆ ಅವರಿಗಿದ್ದ ನಿರೀಕ್ಷೆ ಹೇಗಿತ್ತೆಂಬುದನ್ನು ತ.ರಾ.ಸು. ಗುರುತಿಸಿದ್ದಾರೆ. ಒಂದು ಸಂಜೆ ಗೆಳೆಯರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಗೋಪಾಲಗೌಡರ ಜೊತೆ ನಡೆದ ಒಂದು ಗಂಭೀರ ತಾತ್ವಿಕ ಚಕಮಕಿಯ ಬಗ್ಗೆ ತ.ರಾ.ಸು. ಬರೆಯುತ್ತಾರೆ: ಗತಿಸಿದ ಮೈಸೂರು ಮಹಾರಾಜರ ಕಲಾಪ್ರಜ್ಞೆಯ ಬಗ್ಗೆ ನಾನು ಮಾತಾಡುತ್ತಿದ್ದೆ. ನಾನು ಈ ಮಾತಾಡುತ್ತಿರುವಾಗಲೇ ಗೋಪಾಲಗೌಡರು ಪಿ. ಕಾಳಿಂಗರಾಯರೊಡನೆ ಅಲ್ಲಿಗೆ ಬಂದರು. ರಾಜಶಾಹಿ ಎಂದರೆ ಗೋಪಾಲಗೌಡರ ರಕ್ತ ಕುದಿಯುತ್ತಿತ್ತು. ಅಂಥವರಿಗೆ ನಾನು ಮಹಾರಾಜರ ಬಗ್ಗೆ ಮೆಚ್ಚಿಗೆಯ ಮಾತನ್ನಾಡಿದ್ದನ್ನು ಕೇಳಿ ವಿಪರೀತ ಸಿಟ್ಟು ಬಂತು. ಎಲ್ಲ ಹಂಗು ಬಿಟ್ಟು ನನ್ನನ್ನು ಮೂದಲಿಸಿದರು. ‘ನೀನೂ ಒಬ್ಬ ಹಿಪೋಕ್ರೈಟ್’ ಎನ್ನುವವರೆಗೂ ಮಾತು ಬೆಳೆಯಿತು. ಕೈ ಕೈ ಕಲೆಯಬೇಕಾಗಿತ್ತು. ಮಧ್ಯದ ಸ್ನೇಹಿತರ ಪ್ರಯತ್ನದಿಂದ ಅದು ತಪ್ಪಿ, ನನ್ನ ಮೇಲೆ ಕೋಪ ಮಾಡಿಕೊಂಡೇ ಗೋಪಾಲಗೌಡರು ಶಾಸಕರ ಭವನಕ್ಕೆ ಹೋದರು...’

ಆದರೆ ಗೋಪಾಲಗೌಡರು ಮಾರನೆಯ ದಿನ ಬೆಳಗ್ಗೆಯೇ ತ.ರಾ.ಸು. ಅವರ ಬಳಿ ಬಂದು, ‘ನಿನ್ನೆ ರಾತ್ರಿ ಆದದ್ದನ್ನು ಮರೆತುಬಿಡಿ’ ಎನ್ನುತ್ತಲೇ ಹೇಳಿದ ಗಂಭೀರ ವಾದ ಮಾತುಗಳು ಎಲ್ಲ ಕಾಲದ ಸಾಹಿತಿಗಳಿಗೂ ಅನ್ವಯವಾಗುವಂತಿವೆ: ‘ಮಾಮೂಲಿ ಜನ ಯಾರ ಬಗ್ಗೆ ಏನು ಮಾತಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಯೋಚನೆ ಇಲ್ಲ. ನೀವು ಸಾಹಿತಿಗಳು. ನಿಮ್ಮ ಮಾತಿಗೆ ಜನ ಬೆಲೆ ಕೊಡುತ್ತಾರೆ. ಹಾಗಿರುವಾಗ ಒಂದು ಕಡೆ ರಾಜಶಾಹಿಯ ವಿರುದ್ಧ ಮಾತನಾಡಿ, ಮತ್ತೊಂದು ಕಡೆ ಅವರನ್ನು ಹೊಗಳಿದರೆ ನಮ್ಮ ದಡ್ಡ ಜನ ನೀವು ಹೊಗಳಿದ್ದನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಬೈದುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಈ ಕೆಟ್ಟ ಪದ್ಧತಿಗಳ ಬಗ್ಗೆ ನೀವು ಯಾವತ್ತೂ ಒಳ್ಳೆಯ ಮಾತನ್ನು ಆಡಬಾರದು. ಸತ್ತ ಮೇಲಷ್ಟೇ ಅದಕ್ಕೆ ಬೊಜ್ಜ ಮಾಡಬೇಕು. ನೀವು ಸಾಹಿತಿಗಳು ಭಾರೀ ಅಪಾಯದ ಜನ; ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ನಗೆ ಎಷ್ಟು ಪ್ರೀತಿಯೋ, ಅಷ್ಟೇ ಭಯ’.

ಸಾಹಿತ್ಯದಂತೆ ಸಂಗೀತದಲ್ಲೂ ಒಲವಿದ್ದ ಗೋಪಾಲ ಗೌಡರು ಬೇಂದ್ರೆಯವರ ‘ಕುರುಡು ಕಾಂಚಾಣ’ ಪದ್ಯವನ್ನು ಭಾವ ತುಂಬಿ ಹಾಡುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಾ ಪಿ. ಕಾಳಿಂಗರಾವ್ ‘ನನಗಿಂತ ನೀನೇ ಚೆನ್ನಾಗಿ ಹಾಡುತ್ತೀಯ’ ಎನ್ನುತ್ತಿದ್ದರು. ಗೌಡರಿಗೆ ಹುಯಿಲಗೋಳ ನಾರಾಯಣರಾಯರ ‘...ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ಬೇಂದ್ರೆಯವರ ‘ಗಂಗಾವತರಣ’ ಪದ್ಯಗಳು ಪ್ರಿಯವಾಗಿದ್ದುದನ್ನು, ಹಾಗೂ ಗೌಡರಿಗೆ ‘ಸಂಗೀತದ ಎಲ್ಲ ಪ್ರಕಾರಗಳ ಪರಿಜ್ಞಾನವಿತ್ತು’ ಎಂಬುದನ್ನು ನೆನೆಯುವ ಕಾಳಿಂಗರಾವ್, ಗೌಡರು ಸಾಹಿತ್ಯ ಹಾಗೂ ಸಂಗೀತಗಳನ್ನು ಕ್ರಿಯಾಶೀಲ ರಾಜಕಾರಣದ ಜೊತೆ ಬೆಸೆಯಬಯಸಿದ್ದನ್ನು ಕುರಿತು ಬರೆಯುತ್ತಾರೆ: ‘ಆತ ಸಾಹಿತ್ಯ, ಸಂಗೀತ ಪ್ರೇಮದಿಂದ ಬದುಕನ್ನು ಅರಳಿಸಿಕೊಂಡಿದ್ದು ಮಾತ್ರವಲ್ಲ, ಅದರಿಂದ ಕ್ರಾಂತಿಯನ್ನೂ ತರಬಯಸಿದ್ದ. ನಾಡಿನಲ್ಲಿ ಕ್ರಾಂತಿ ಕಹಳೆ ಮೊಳಗಬೇಕು; ಹಳೆ ಮತ ತೊಲಗಿ ಹೊಸ ಮನುಜ ಮತ ಉದಯವಾಗಬೇಕು ಎನ್ನುತ್ತಾ, ಹೊಸ ನಾಡು ಕಟ್ಟುವ ಬಯಕೆಯ ಬೀಜ ಬಿತ್ತರಿಸುವ ಬಯಕೆ ಹೊಂದಿದ್ದ. ಬದುಕಿನ ವಿಕಾಸಪಥಕ್ಕೆ ಸಾಹಿತ್ಯ, ಸಂಗೀತವನ್ನು ಬಳಸಿಕೊಳ್ಳುವ ಹುಚ್ಚು ಅವನದು. ಸಮಾಜದಲ್ಲಿ ಬದಲಾವಣೆಗೆ, ಬಂಡಾಯಕ್ಕೆ ಕ್ರಾಂತಿಕಾರಿ ಭಾವನೆಯ ಕವಿತೆಗಳನ್ನು ಹಾಡಿಸುತ್ತಿದ್ದನು. ಯಾವಾಗಲೂ ಸೋಹನ ಕುಮಾರಿ- ಮೋಹನಕುಮಾರಿಯವರಿಂದ ಕುವೆಂಪು ಅವರ ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಎಂದು ಶುರುವಾಗುವ ‘ಪಾಂಚಜನ್ಯ’ ಕವನವನ್ನು ಹಾಡಿಸುತ್ತಿದ್ದನು. ಅವನ ಪ್ರಿಯವಾದ ಕ್ರಾಂತಿಕಾರಿ ಕವನ ಎಂದರೆ ಕಯ್ಯಾರ ಕಿಂಞಣ್ಣರೈ ಕವಿಯ, ‘ಎನ್ನೆದೆಯ ಬಿಸಿ ರಕ್ತ ಕುದಿಕುದಿಸಿ ಮಸಿ ಮಾಡಿ ನಾ ಬರೆಯಬಲ್ಲೆ ನಾನು ಕವಿಯು’ ಎಂದು ಶುರುವಾಗುವ ಕವಿತೆ; ‘ಭಾರತೀಯರು ನಾವು ಎಂದೆಂದೂ ಒಂದೆ, ಭಾವೈಕ್ಯದಲಿ ಕೂಡಿ ನಡೆಯುವೆವು ಮುಂದೆ ಮುಂದೆ’ ಎಂಬ ಸಾಲುಗಳು, ಪು.ತಿ.ನ. ಅವರ ಗೀತ ರೂಪಕಗಳ ತುಣುಕುಗಳು ಕೂಡ ಅವನ ಮೆಚ್ಚುಗೆಯ ಕವನಗಳಾಗಿದ್ದವು’. ಗೋಪಾಲಗೌಡರ ಕೊನೆಯ ದಿನಗಳಲ್ಲಿ, ಇನ್ನೂ ಗೌಡರ ಮಾತು ನಿಂತು ಹೋಗದ ಮುನ್ನ, ಕಾಳಿಂಗರಾಯರು ಅನಾಥರಂತೆ ಅವರೆದುರು ನಿಂತು ಹಾಡಿದ್ದನ್ನು ಶೂದ್ರ ಶ್ರೀನಿವಾಸ್ ನೆನೆಯುತ್ತಾರೆ.

ಗೋಪಾಲಗೌಡರ ವೈವಿಧ್ಯಮಯ ಸಾಂಸ್ಕೃತಿಕ ಆಸಕ್ತಿಗಳನ್ನು ಸಮಾಜವಾದಿ ನಾಯಕ ಮಧು ಲಿಮಯೆಯವರೂ ಗುರುತಿಸಿದ್ದರು: ‘ಗೋಪಾಲನ ಜೀವನ ಹೋರಾಟದಿಂದಲೇ ತುಂಬಿದ್ದರೂ ಆತ ಕೇವಲ ರಾಜಕೀಯ ಜೀವಿಯಾಗಿರಲಿಲ್ಲ. ಅವನ ವ್ಯಕ್ತಿತ್ವ ವೈವಿಧ್ಯದಿಂದ ಕೂಡಿತ್ತು. ಆತ ಸಂಗೀತಪ್ರಿಯ. ಸಾಹಿತ್ಯ, ಶಿಲ್ಪದಲ್ಲಿ ಆತನಿಗೆ ಅಪಾರ ಆಸಕ್ತಿ. ಸಂಗೀತವನ್ನು ಅಭ್ಯಾಸ ಮಾಡಿದ್ದನೋ ಇಲ್ಲವೋ, ಆದರೆ ಆತನ ದನಿ ತುಂಬಾ ಇಂಪಾಗಿತ್ತು. ಅವನ ಕಂಠದಿಂದ ಮನ ಮಿಡಿಸುವ ಸ್ವರ ಹೊರಡುತ್ತಿತ್ತು...ಗೋಪಾಲ್ ಹಳೆಯ ಮೈಸೂರಿನ ಉದಾತ್ತ ಸಂಸ್ಕೃತಿಯ ನಿಜವಾದ ಪ್ರತಿನಿಧಿಯಾಗಿದ್ದ’.

ಗೋಪಾಲಗೌಡರಿಗೆ ಸಾಹಿತ್ಯ, ಸಂಗೀತಗಳ ಜೊತೆಗೆ ಇದ್ದ ನಂಟನ್ನು ಕುರಿತಂತೆ ಹಲವು ಮಂದಿ ಸೂಕ್ಷ್ಮಜ್ಞರು ಬರೆದ ವೈವಿಧ್ಯಮಯವಾದ ಅನುಭವ ಕಥನಗಳನ್ನು ನೋಡುತ್ತಿದ್ದರೆ, ಗೋಪಾಲಗೌಡರನ್ನು ಕನ್ನಡ ಸಾಂಸ್ಕೃತಿಕ ಲೋಕ ಯಾಕೆ ಅಷ್ಟು ತೀವ್ರವಾಗಿ ಹಚ್ಚಿಕೊಂಡಿತ್ತು ಎಂಬುದರ ಅರಿವಾಗುತ್ತದೆ. ಅದರಲ್ಲೂ ಸಾಹಿತ್ಯ ಎನ್ನುವುದು ಗೋಪಾಲಗೌಡರಿಗೆ ತಮ್ಮ ಸಂವೇದನೆಯ ಭಾಗವೂ, ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವ ಮಾರ್ಗವೂ, ಜೀವನದ ಹಲವು ಮುಖಗಳ ಗ್ರಹಿಕೆಯ ಸಾಧನವೂ ಆಗಿತ್ತೆಂದು ಕಾಣುತ್ತದೆ. ಗೋಪಾಲಗೌಡರ ಗೆಳೆಯ ಎ.ವಿ. ಶ್ರೀನಿವಾಸ ಗೋಪಾಲಗೌಡರ ಕನಸೊಂದನ್ನು ನೆನಸಿಕೊಳ್ಳುತ್ತಾರೆ: ‘ಹಳ್ಳಿಯೊಂದರಲ್ಲಿ ಎರಡು ಎಕರೆ ಭೂಮಿ ಪಡೆದು ಅಲ್ಲಿ ಒಳ್ಳೆಯ ಪುಸ್ತಕ ಭಂಡಾರ ಸ್ಥಾಪಿಸಿ, ಜೀವನ ಕಳೆಯುವ ಆಸೆಯನ್ನು ಗೌಡರು ನನ್ನ ಹತ್ತಿರ ವ್ಯಕ್ತಪಡಿಸಿದ್ದುಂಟು. ಇದು ಕೈಗೂಡದ ಕನಸಾಗಿಯೇ ಉಳಿಯಿತು’.

................................ 5 ................................

ಗೋಪಾಲಗೌಡರು ತಮ್ಮ ಪ್ರಜ್ಞೆಯನ್ನು ರೂಪಿಸಿದ ಕಾಗೋಡು ಸತ್ಯಾಗ್ರಹ ಕುರಿತು ಕಾದಂಬರಿ ಬರೆಯಿರಿ ಎಂದು ಪ್ರಗತಿಶೀಲ ಸಾಹಿತಿ, ಗೆಳೆಯ ಬಸವರಾಜ ಕಟ್ಟೀಮನಿಯವರಿಗೆ ಆಗಾಗ ಹೇಳುತ್ತಿದ್ದರು. ‘ನಾನು ಮುಂದೆ ವಿಧಾನ ಪರಿಷತ್ತಿನ ಸದಸ್ಯನಾದ ಮೇಲೆ ನಮ್ಮಿಬ್ಬರ ನಡುವಣ ಸ್ನೇಹದ ಕೊಂಡಿ ಇನ್ನಷ್ಟು ಬೆಸೆಯಿತು. ಅವರನ್ನು ಕಂಡಾಗಲೆಲ್ಲ ಕಾಗೋಡು ಸತ್ಯಾಗ್ರಹದ ಬಗ್ಗೆ ಕಾದಂಬರಿ ಬರೆಯುವಂತೆ ನನ್ನನ್ನು ಆಗ್ರಹಪಡಿಸುತ್ತಿದ್ದರು. ಗೌಡರ ಪ್ರೀತಿಪೂರ್ವಕ ಆಗ್ರಹಕ್ಕೆ ಮಣಿದು ಕಾಗೋಡಿಗೂ ಹೋಗಿ ಬಂದೆ. ಆದರೆ ಕಾದಂಬರಿ ಮಾತ್ರ ಬರಲಿಲ್ಲ’ ಎಂದು ಕಟ್ಟೀಮನಿ ಬರೆಯುತ್ತಾರೆ.

ಅಕಸ್ಮಾತ್ ಕಟ್ಟೀಮನಿಯವರು ಆ ಕಾದಂಬರಿ ಬರೆದಿದ್ದರೆ, ಅದರಲ್ಲಿ ಗೋಪಾಲಗೌಡರ ಪಾತ್ರ ಹೆೀಗೆ ಬರುತ್ತಿತ್ತೋ ತಿಳಿಯದು. ಆದರೆ, ಗೋಪಾಲಗೌಡರು ‘ಅನಂತು’ ಎಂದು ಕರೆಯುತ್ತಿದ್ದ ಯು. ಆರ್. ಅನಂತ ಮೂರ್ತಿ, ಗೋಪಾಲಗೌಡರು ತೀರಿಕೊಂಡ ಆರು ವರ್ಷಗಳ ನಂತರ ಹಲವು ಕಡೆ ಗೋಪಾಲಗೌಡರನ್ನು ಹೋಲುವ ಕೃಷ್ಣಪ್ಪಗೌಡ ಎಂಬ ಕೇಂದ್ರ ಪಾತ್ರವುಳ್ಳ ‘ಅವಸ್ಥೆ’ ಎಂಬ ರಾಜಕೀಯ ಕಾದಂಬರಿಯನ್ನು ಪ್ರಕಟಿಸಿದರು. ಒಂದು ಕಾದಂಬರಿಗೆ ಸ್ವಾಯತ್ತ ಅಸ್ತಿತ್ವವಿರುವುದರಿಂದ ಆ ಕೃತಿಯಲ್ಲಿ ಗೋಪಾಲಗೌಡರ ಜೀವನವಿವರಗಳನ್ನು ಬಳಸಿದ್ದಕ್ಕೆ ಅನಗತ್ಯ ಆಕ್ಷೇಪಣೆ ಎತ್ತುವ ಅಗತ್ಯವಿಲ್ಲ. ಆದರೆ ಈ ಕಾದಂಬರಿಯನ್ನು ಇವತ್ತು ಓದುತ್ತಿದ್ದರೆ, ಇಲ್ಲಿ ಕೃಷ್ಣಪ್ಪಗೌಡರ ಪಾತ್ರವನ್ನು ಹೀರೋ ಪಾತ್ರದ ಪ್ರತಿಷ್ಠಾಪನೆಗೆ ತಕ್ಕಂತೆ ಕೊಂಚ ಪುರಾಣೀಕರಿಸಿ, ನವ್ಯ ಕಾದಂಬರಿಯ ಒತ್ತಾಯಗಳಿಗೆ ಅನುಗುಣವಾಗಿ ಕೇಂದ್ರ ಪಾತ್ರವನ್ನು ಅಲ್ಲಲ್ಲಿ ವಿಮರ್ಶೆಗೆ ಒಡ್ಡಿ, ಡಿ.ಎಚ್.ಲಾರೆನ್ಸ್ನ ಕಾದಂಬರಿಗಳ ಮಾದರಿಯಲ್ಲಿ ನಾಯಕನ ಕಾಮಮೂಲ ವರ್ತನೆಗಳನ್ನು ಶೋಧಿಸಲೆತ್ನಿಸಿದಂತೆ ಕಾಣತೊಡಗುತ್ತದೆ. ಇದೆಲ್ಲದರ ಜೊತೆಗೆ, ದುರಂತ ನಾಯಕನ ಪಾತ್ರಕ್ಕೆ ತಕ್ಕಂತೆ ಘಟನಾವಳಿಗಳನ್ನು ಜೋಡಿಸಿ, ಕತೆಯ ಓಟಕ್ಕೆ ತಕ್ಕ ತಿರುವುಗಳನ್ನು ಸೃಷ್ಟಿಸಿ ಕಾದಂಬರಿಯನ್ನು ಹೆಣೆದಂತೆ ಕೂಡ ಕಾಣುತ್ತದೆ.

‘ಅವಸ್ಥೆ’ ಕಾದಂಬರಿ ಓದುಗರಲ್ಲಿ ಗೋಪಾಲಗೌಡರ ನೆನಪನ್ನು ಕೆದಕುವುದರಿಂದ ಆ ಕಾದಂಬರಿಯ ಬಗ್ಗೆ ಹಾಗೂ ಈ ಕಾದಂಬರಿಯನ್ನಾಧರಿಸಿದ ಸಿನೆಮಾದ ಬಗ್ಗೆ ಕೆಲವು ವಿವಾದಗಳಾದವು. ‘ಅವಸ್ಥೆ’ ಕಾದಂಬರಿ ಒಂದು ಕಾಲದ ಇಂಡಿಯಾದ ಒಟ್ಟು ಸಮಾಜವಾದಿ ರಾಜಕಾರಣದ ಏಳುಬೀಳುಗಳನ್ನು ಶೋಧಿಸುವಲ್ಲಿ ಒಂದು ಮಟ್ಟದಲ್ಲಿ ಯಶಸ್ವಿಯಾಗಿದೆಯೆನ್ನುವುದು ನಿಜ. ಅನಂತಮೂರ್ತಿಯವರೇ ಒಮ್ಮೆ ನನಗೆ ಹೇಳಿದಂತೆ, ‘ಕಾದಂಬರಿಯ ಕೇಂದ್ರ ಪಾತ್ರದಲ್ಲಿ ಜಯಪ್ರಕಾಶ ನಾರಾಯಣರೂ ಸೇರಿದಂತೆ ಹಲವು ರಾಜಕೀಯ ನಾಯಕರು ಬೆರೆತು ಆ ಪಾತ್ರ ಹುಟ್ಟಿದೆ’ ಎನ್ನುವುದೂ ನಿಜ. ಆದರೂ ಕೇಂದ್ರ ಪಾತ್ರದ ಹೆಸರಿನಿಂದಾಗಿಯೇ ಅದು ಗೋಪಾಲಗೌಡರನ್ನು ಮತ್ತೆ ಮತ್ತೆ ನೆನಪಿಗೆ ತರುವುದರಿಂದಾಗಿ ಕಾದಂಬರಿಯ ಸಂದೇಹವಾದಿ ನಿರೂಪಕನ ಮೂಲಕ ಸಾಧಿತವಾಗಬಹುದಾದ ಕೇಂದ್ರ ಪಾತ್ರದ ಮುಕ್ತ ಶೋಧಕ್ಕೂ ಧಕ್ಕೆಯಾದಂತಿದೆ; ಅದರ ಜೊತೆಗೆ, ಕಾದಂಬರಿಯ ಮೂಲಕ ಗೋಪಾಲಗೌಡರ ಜೀವನ ಮತ್ತು ಹೋರಾಟಗಳನ್ನು ಗ್ರಹಿಸಲು ಹೊರಡುವವರಿಗೆ ಈ ಕಾದಂಬರಿಯ ಗ್ರಹಿಕೆಗಳು, ಇಲ್ಲಿನ ಸಹಜ ಜೋಡಣೆಗಳು ಹಾಗೂ ಜಾಣ ಜೋಡಣೆಗಳು ಕೆಲ ಬಗೆಯ ತೊಡಕುಗಳನ್ನೂ ಉಂಟು ಮಾಡುತ್ತವೆ. 1979ರ ಫೆಬ್ರವರಿ ತಿಂಗಳಲ್ಲಿ, ಪಿ.ಲಂಕೇಶ್ ಅವರು ‘ಅವಸ್ಥೆ’ ಕಾದಂಬರಿ ಓದಿ ಅನಂತಮೂರ್ತಿಯವರಿಗೆ ಬರೆದ ಒಂದು ಪತ್ರದಲ್ಲಿ ಈ ಸಮಸ್ಯೆಗಳನ್ನು ಚರ್ಚಿಸಲೆತ್ನಿಸಿದ್ದಾರೆ. ‘ಶೂದ್ರ’ ಪತ್ರಿಕೆಯಲ್ಲಿ ಪ್ರಕಟವಾದ ಆ ಪತ್ರದ ಕೆಲವು ಭಾಗಗಳು:

‘ಅವಸ್ಥೆ’ ಕುರಿತು ಲಂಕೇಶ್ ಪತ್ರ

ಪ್ರಿಯ ಅನಂತಮೂರ್ತಿ,

...ನಿಮ್ಮ ಕಾದಂಬರಿ ಚೆನ್ನಾಗಿದೆ. ಕೃಷ್ಣಪ್ಪಗೌಡನ ಖಾಸಗಿ ಬದುಕನ್ನು ಸೃಷ್ಟಿಸುತ್ತಲೇ ಆತ ಸಾರ್ವಜನಿಕ ವ್ಯಕ್ತಿಯಾಗಿ ಬೆಳೆದು ಈ ವಾತಾವರಣದಲ್ಲಿ ದ್ವಿದಳನಾಗುವ ದುರಂತ ನಮ್ಮ ಸಮಾಜದ ಸದ್ಯದ ವಾತಾವರಣದಲ್ಲಿ ನಮ್ಮ ಸೋಷಲಿಸ್ಟರು ಛಿದ್ರರಾದ ವಿಷಾದದ ಕತೆ ಕೂಡ ಹೌದು. ನಿಮ್ಮ ವ್ಯಕ್ತಿತ್ವ ಈ ಕಾದಂಬರಿಯಲ್ಲಿ ತುಂಬ ಗಾಢವಾಗಿ ಮತ್ತು ಸಾರ್ಥಕವಾಗಿ ತೊಡಗಿದೆ; ನಿಮ್ಮ ಚಿಂತನೆ, ಕಾಳಜಿಗಳು, ಆಶೆ ಆಕಾಂಕ್ಷೆಗಳು, ನಿರಾಶೆ- ಎಲ್ಲ ಬಂದಿವೆ. ಕೃಷ್ಣಪ್ಪನ ಮೊದಲ ಭಾಗ ಮತ್ತು ಕೊನೆಯ ಭಾಗ-ಗೌರಿ ದೇಶಪಾಂಡೆಯ ವಿವರಣೆಗಳನ್ನು ಬಿಟ್ಟು- ನನಗೆ ತುಂಬ ಹಿಡಿಸಿದವು. ಕೃಷ್ಣಪ್ಪ ಎಡವನ್ನು ಹಿಡಿದುಕೊಂಡೇ ಬಲವನ್ನು ಆಸ್ವಾದಿಸುವ, ಬಲಿಯಾಗುವ ರೀತಿ ಸಮರ್ಥವಾಗಿದೆ. ಮಹೇಶ್ವರಯ್ಯ, ವೀರಣ್ಣ, ನಾಗರಾಜ ಅಚ್ಚಳಿಯದೆ ನಿಲ್ಲುತ್ತಾರೆ; ಎಲ್ಲಕ್ಕಿಂತ ಮುಖ್ಯವಾಗಿ ಆ ನಾಗೇಶ; ಸೋಷಲಿಸ್ಟ್ ಹುಡುಗರ ಮುಗ್ಧ ಆದರ್ಶ ಮತ್ತು ಮನಸ್ಸು ಕರಗಿಸಬಲ್ಲ ಬದ್ಧತೆ ಈತನಲ್ಲಿ ವ್ಯಂಗ್ಯವಾಗಿ, ಸೂಕ್ಷ್ಮವಾಗಿ ವ್ಯಕ್ತವಾಗಿದೆ. ಇವರೆಲ್ಲ ತಮ್ಮ ತಮ್ಮ ದಾರಿಗಳನ್ನು ಹಿಡಿದು ಬದುಕುವ ರೀತಿಗಳಿಂದಲೇ ಕೃಷ್ಣಪ್ಪ ದಿಗ್ಬಂಧನ ಪಡೆವ ಸ್ಥಿತಿ ಮಾರ್ಮಿಕವಾಗಿದೆ. ನಮ್ಮ ವಿಮರ್ಶೆಯ ಬೇಳೆಕಾಳಿನ ಮಾತುಗಳಿಗೆ ಇಳಿಯದೆ ಹೇಳುವುದಾದರೆ ಮಹೇಶ್ವರಯ್ಯನ ಪ್ರಕರಣ ನನ್ನ ಮನಸ್ಸು ಮೀಟಿತು.

ಪಿ. ಲಂಕೇಶ್

ಬಂಡೇಳುವ ಕೃಷ್ಣಪ್ಪ ಕ್ರಮೇಣ ಕರಗುತ್ತಾನೆ, ಗೋಡೆಯಂತೆ ನಿಂತ ಈ ಕ್ರೂರ ಕಿವುಡ ವ್ಯವಸ್ಥೆಯೆದುರು ಸೂಕ್ಷ್ಮಮತಿ ಕೃಷ್ಣಪ್ಪ ವಿಹ್ವಲನಾಗುತ್ತಾನೆ. ಸಾರ್ವಜನಿಕ ಎಚ್ಚರಕ್ಕೆ ಹೋರಾಡಿ ವ್ಯವಸ್ಥೆಯನ್ನು ಬದಲಾಯಿಸಲಾರದ ಆತ ಕ್ರಮೇಣ ಶರಣು ಹೊಡೆಯುತ್ತಾನೆ. ನಮ್ಮ ಈ ಸಂಕ್ರಮಣ ಕಾಲದ ವಿಷಣ್ಣ ಸ್ಥಿತಿ ಸತ್ಯಕ್ಕೆ ಹತ್ತಿರವಾಗಿದೆ. ನಿಮ್ಮ ಕಾರ್ಯಕ್ಷಮತೆ, ಜಾಣತನ, ತಾದಾತ್ಮ್ಯ, ನಂಬಿಕೆ ಎಲ್ಲ ಹೊರಹೊಮ್ಮಿದೆ. ಇದು ನಿಮ್ಮ ‘ಸಂಸ್ಕಾರ’ದಷ್ಟೇ ಕ್ರಿಯಾಶಾಲಿಯಾದ ಬರವಣಿಗೆ ಇರಬಹುದೇ...

ಈ ಕಾದಂಬರಿಯನ್ನು ಓದುವವ ಇದನ್ನು ತೆಗೆದುಕೊಳ್ಳಬೇಕಾದ ಒಂದು ರೀತಿ- ಇದು ಈ ಕೃತಿಯ ಮೂಲ ರೂಪಗಳಾದ ಗೋಪಾಲಗೌಡ, ನಾರಾಯಣ ರೆಡ್ಡಿ ಮುಂತಾದವರಿಗೆ ಎಷ್ಟು ಹತ್ತಿರ, ಎಷ್ಟು ದೂರ ಎಂದು ನೋಡುವುದು. ಈ ಪ್ರಶ್ನೆ ಅಷ್ಟು ಅಪ್ರಸ್ತುತವಲ್ಲ- ಯಾಕೆಂದರೆ ಗೋಪಾಲ್ ಗೊತ್ತಿಲ್ಲದವರಿಗೆ ಈ ಕಾದಂಬರಿಯ ಹಂದರ ಗೊಂದಲಕ್ಕೆಡೆಮಾಡುತ್ತದೆ. ಗೋಪಾಲ್ ತಮ್ಮ ಬದುಕು, ಬೆಳವಣಿಗೆ ಆರಂಭಿಸಿದ್ದು, ರಾಜಕೀಯ ಪ್ರವೇಶಿಸಿದ್ದು ಅಲ್ಲಿ ಅವರ ಚಟುವಟಿಕೆ, ಅವರಿಗೆ ಸ್ಟ್ರೋಕ್ ಆದದ್ದು (ನನಗೇನೋ ‘ಲಕ್ವ’ ಹೆಚ್ಚು ಶಕ್ತವಾದ ಪದ)- ಇವೆಲ್ಲ ಈ ಕಾದಂಬರಿಯ ಬೆನ್ನೆಲುಬಾಗಿವೆ. ನಿಜಜೀವನದ ಈ ಸಂಗತಿಗಳು ಗೊತ್ತಿಲ್ಲದವರಿಗೆ ಕಾದಂಬರಿಯಲ್ಲಿ ದೊಡ್ಡ ಜಂಪ್ ಕಾಣಿಸುತ್ತದೆ. ಕೃಷ್ಣಪ್ಪಗೌಡ ಹೇಗೆ ತನ್ನ ಚಿಕ್ಕಂದು ಕಳೆದ, ಹೇಗೆ ಆತ ನಿಧಾನಕ್ಕೆ ಸಾರ್ವಜನಿಕ ವ್ಯಕ್ತಿಯಾದ, ಹೇಗೆ ನಿರಾಶನಾದ, ಹೇಗೆ ಸಂಘಟಿಸಲು ಯತ್ನಿಸಿ ಸೋತ, ಇದಕ್ಕೂ ಅವನ ಲಕ್ವಕ್ಕೂ ಸಂಬಂಧವಿದೆಯೇ ಅಥವಾ ಯಾವುದೋ ಖಾಸಗಿ ಕಾರಣವಿದೆಯೇ- ಇದಕ್ಕೆ ಕಾದಂಬರಿಯಲ್ಲಿ ಕೊಂಡಿ ಇಲ್ಲ. ನಾನು ಬಲ್ಲಂಥ ಗೋಪಾಲಗೌಡರ ಕಟುತ್ವ ಮತ್ತು ಮೃದುತ್ವ ಹೆಚ್ಚು ಹೊಂದಿಕೊಂಡಿದ್ದವು; ಆದರೆ ಬಂಡಾಯ ಹೆಚ್ಚು ಆಳವಾಗಿತ್ತು ಮತ್ತು ಸುತ್ತಣ ಬದುಕಿನಲ್ಲಿ ಬೇರುಬಿಟ್ಟಿತ್ತು. ಅಲ್ಲದೆ ಗೋಪಾಲ್ ಎಷ್ಟು ಗಾಢ ಪ್ರೇಮಿಯೋ ಅಷ್ಟೇ ಗಾಢ ದ್ವೇಷಿಯೂ ಹುಂಬನೂ ಆಗಿದ್ದು, ಎಲ್ಲ ಹಳ್ಳಿಗರಲ್ಲಿ ಕಾಣಬರುವ ಶಾಣ್ಯಾತನದ ಜೊತೆಗೆ ಹತ್ತಿಗನೂ ಆಗಿದ್ದ. ಗೋಪಾಲ್ ಹೊಂದಿದ್ದ ವಿಚಿತ್ರ ವಿಲಕ್ಷಣ ಶೈಲಿಯೇ ಆತನ ಬದುಕೂ ಆಗಿತ್ತು. ಈ ತರಹದ ಥಟ್ಟನೆ ಹೊಳೆಯುವ ದ್ವಂದ್ವಗಳು, ವಿರೋಧಗಳು ಕಾದಂಬರಿಯಲ್ಲಿ ಅಷ್ಟಾಗಿ ಇಲ್ಲ-ಅಂದರೆ ಅಷ್ಟರ ಮಟ್ಟಿಗೆ ಕೃತಿ ಅವಾಸ್ತವವಾಗಿದೆ; ನಾನೆನ್ನುವುದು, ಗೋಪಾಲ್ ಬದುಕಿದ ಬದುಕನ್ನು ಸೃಷ್ಟಿಸುವಲ್ಲಿ ಅವಾಸ್ತವವಾಗಿದೆ.

ಅದು ಗೋಪಾಲ್ ಬದುಕೇ ಆಗಬೇಕಾದ್ದಿಲ್ಲ ಎಂಬ ಉತ್ತರವಿದೆ. ನಾನು ಬಲ್ಲೆ; ಆದರೆ ಗೋಪಾಲ್ಗೆ ತೀರಾ ಹತ್ತಿರ ಹೋದಾಗ, ತೀರಾ ದೂರ ಹೋದಾಗ ಅನುಭವ patchy ಆದಂತೆ ಕಾಣುತ್ತದೆ. ಇನ್ನೊಂದು ಕಷ್ಟವೆಂದರೆ, ನಮಗೆ ಗೊತ್ತಿರುವ ವ್ಯಕ್ತಿಗಳ ಬಗ್ಗೆ ಬರೆದಾಗ, ಅದರಲ್ಲೂ ಆ ವ್ಯಕ್ತಿ ಅನ್ಯೋನ್ಯವಾಗಿದ್ದಾಗ, ಅವನನ್ನು ಆರಾಧಿಸುವ, ಆ ಮೂಲಕ ನಮ್ಮ, ಅಂದರೆ ಲೇಖಕನ, ಗುಣಗಳನ್ನು ಮೆಚ್ಚಿಕೊಳ್ಳುವ ಚಾಳಿ ಬರುತ್ತದೆ. ಆ ಅಂಶ ಕೂಡ ಈ ಕಾದಂಬರಿಯಲ್ಲಿದೆ. ಆತ ಒಳ್ಳೆಯ ಹುಡುಗ, ಒಳ್ಳೆಯ ಪ್ರೇಮಿ, ಒಳ್ಳೆಯ ರಾಜಕಾರಣಿ, ಅಷ್ಟೇನೂ ಕೆಟ್ಟವನಲ್ಲದ ಗಂಡ, ಒಳ್ಳೆಯ ಮಜ ಮಾಡಿ ದೇಹದ ಆಶೆಗಳನ್ನು ನೀಗಿಸಿಕೊಂಡವ... ಹೀಗೆ ಕಾದಂಬರಿ ಒಟ್ಟಿನ glorification ಆಗುತ್ತದೆ.

ಯು.ಆರ್. ಅನಂತಮೂರ್ತಿ

...ಎರಡನೆಯದಾಗಿ, ಕೃಷ್ಣಪ್ಪನ ಜೀವನದ ಜಂಪ್ ನೋಡಿ: ಆತನ ಜೈಲು ಅನುಭವವಾದ ಮೇಲೆ ನಿಜಕ್ಕೂ ಏನಾದರೂ ಆಗುತ್ತದೆ ಎಂದುಕೊಂಡಿದ್ದೆ. ಆತನ ನೆನಪುಗಳು ಅಥವಾ ಅನಿಸಿಕೆಗಳು, ಅಪೇಕ್ಷೆಗಳು-ಇವುಗಳ ಮಧ್ಯೆ ಅವನಿಗಾದ ಆಘಾತದ ಚಿತ್ರ ಮಸುಕಾಗಿದೆ. ಆತ ಆ ಜೈಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವಷ್ಟು ಅಣ್ಣಾಜಿಯನ್ನು ಪ್ರೀತಿಸಿದನೆ? ಮೆಚ್ಚಿದನೆ? ಇಲ್ಲ. ನಿಮಗೆ ಅಣ್ಣಾಜಿಯ ವ್ಯಕ್ತಿತ್ವ ಸಂಪೂರ್ಣವಾಗಿ ಸಿಕ್ಕಿಲ್ಲ. ಅಂದ ಮೇಲೆ ಕೃಷ್ಣಪ್ಪನ ಜೈಲುವಾಸವೊಂದು ಸಂಕೇತವಾಗುತ್ತದೆಯೇ ಹೊರತು ಅವನ ಜೀವನದೊಂದಿಗೆ ಹೊಂದುವುದಿಲ್ಲ...

...ಕೃಷ್ಣಪ್ಪನ ನೆನಪುಗಳು ಮತ್ತು ಆಗುತ್ತಿರುವ ಘಟನೆಗಳು ಸೊಗಸಾಗಿ ಹೆಣೆದುಕೊಂಡಿವೆ. ಆತ ಕಾಣದ ದಾರಿಯಲ್ಲಿ ದೂರ ಹೋಗಿ ಬಳಲಿದವನಂತಿದ್ದಾನೆ. ಇಲ್ಲಿ ನಿಮ್ಮ (free soul) ತಾನೇ ತಾನಾಗಿ ಬರೆಯುತ್ತಿರುವುದಾಗಿ ನನಗನ್ನಿಸಿದೆ. ಇದೆಲ್ಲ ಹೋಗಲೆಂದರೆ ಕೇವಲ ನಿಮ್ಮ ‘ಅಮೃತ’ ವಾಕ್ಯಗಳ ಮಟ್ಟದಲ್ಲೇ ಈ ಕಾದಂಬರಿ ತಲೆದೂಗಿಸುವಷ್ಟು ಚೆನ್ನಾಗಿದೆ. ನಿಜವಾಗಿಯೂ ವಿದ್ಯಾವಂತನಾದ ವ್ಯಕ್ತಿಯೊಬ್ಬ ಬರೆದಂತೆ ಕಂಡುಬರುತ್ತದೆ. ಇದನ್ನು (left handed) ಮೆಚ್ಚುಗೆಯಾಗಿ ತಿಳಿದುಕೊಳ್ಳಬೇಡಿ. ಕಾದಂಬರಿ, ನೀವೇ ಬಲ್ಲಂತೆ, ಭರಿಸುತ್ತದೆ-ಹೊರುವ ಚಾಳಿಯೇ ಅದಕ್ಕಿದೆ. ಅದು ಅದರ ಗುಣ ಮತ್ತು ವೈಶಿಷ್ಟ್ಯ ಕೂಡಾ...

ಫೆಬ್ರವರಿ 1979 ಇತೀ, ಲಂಕೇಶ್

‘ಅವಸ್ಥೆ’ ಕಾದಂಬರಿಯ ಬಗ್ಗೆ ಲಂಕೇಶರು ಎತ್ತಿದ ಪ್ರಶ್ನೆಗಳಲ್ಲಿ ಕೆಲವನ್ನು ಗೋಪಾಲ ಗೌಡರನ್ನು ಬಲ್ಲ ಓದುಗರು ಬೇರೆ ಬೇರೆ ರೀತಿಯಲ್ಲಿ ಎತ್ತುವ ಸಾಧ್ಯತೆ ಇದ್ದೇ ಇರುತ್ತದೆ. ಕಾದಂಬರಿಕಾರ ಅನಂತಮೂರ್ತಿಯವರು ತಮ್ಮ ಕಾದಂಬರಿಯ ಕೇಂದ್ರ ಪಾತ್ರ ಗೋಪಾಲ ಗೌಡರೇ ಎನ್ನುವುದು ಓದುಗರಿಗೆ ಹೊಳೆಯಲೆಂಬಂತೆ ಕೇಂದ್ರ ಪಾತ್ರಕ್ಕೆ ಕೃಷ್ಣಪ್ಪಗೌಡ ಎಂಬ ಹೆಸರನ್ನಿಟ್ಟಿರುವಂತೆ ಕಾಣುತ್ತದೆ. ಈ ಕಾರಣದಿಂದ ಕೂಡ ಗೋಪಾಲಗೌಡರನ್ನು ಬಲ್ಲ ಓದುಗರು ಇಂಥ ಪ್ರಶ್ನೆಗಳನ್ನು ಎತ್ತುವ ಸಾಧ್ಯತೆ ಇನ್ನಷ್ಟು ಇರುತ್ತದೆ. ಆದ್ದರಿಂದಲೇ ಈ ಪ್ರಶ್ನೆ ‘ಅವಸ್ಥೆ’ ಕಾದಂಬರಿ ಸಿನೆಮಾ ಆದಾಗ ಮತ್ತೆ ಮುನ್ನೆಲೆಗೆ ಬಂತು.

ಈ ಕಾದಂಬರಿ ಬಂದು ಕೆಲ ವರ್ಷಗಳಾದ ನಂತರ ನಿರ್ದೇಶಕ ಕೃಷ್ಣ ಮಾಸಡಿ ‘ಅವಸ್ಥೆ’ ಕಾದಂಬರಿುನ್ನು ಸಿನೆಮಾ ಮಾಡಿದರು. ಅದರಲ್ಲಿ ಗೋಪಾಲಗೌಡರ ಸಮಾಜ ವಾದಿ ಗೆಳೆಯ ಜೆ.ಎಚ್. ಪಟೇಲರೂ ನಟಿಸಲೆತ್ನಿಸಿದ್ದರು. ಈ ಸಿನೆಮಾ ಬಗ್ಗೆ ಒಂದು ವಿವಾದವೆದ್ದಿತು. ಈ ಸಿನೆಮಾ ಗೋಪಾಲಗೌಡರ ವ್ಯಕ್ತಿತ್ವಕ್ಕೆ, ಅವರ ಕುಟುಂಬದವರ ಹಾಗೂ ಹತ್ತಿರದ ಗೆಳೆಯರ ಗೌರವಕ್ಕೆ ಹಾನಿಯುಂಟು ಮಾಡಿದೆಯೆಂದು ಗೋಪಾಲಗೌಡರ ಪತ್ನಿ ಸೋನಕ್ಕ ಈ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿ ಕೋರ್ಟಿನ ಮೊರೆ ಹೋದರು. ಖ್ಯಾತ ವಕೀಲರಾದ ರವಿವರ್ಮಕುಮಾರ್ ಹಾಗೂ ಎಂ.ಆರ್.ಜನಾದರ್ನ್ ಸೋನಕ್ಕನವರ ಪರವಾಗಿ ವಾದಿಸಿದರು. ಸಿನೆಮಾದ ಪರವಾಗಿ ವಾದಿಸಲು ಲೇಖಕ-ವಕೀಲರಾದ ಕೋ.ಚೆನ್ನಬಸಪ್ಪನವರೂ ೇರಿದಂತೆ ಆರು ಜನ ವಕೀಲರಿದ್ದರು.

ರಾಜ್ಯ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಬೋಪಯ್ಯ ನವರ ಎದುರು ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ರವಿವರ್ಮಕುಮಾರ್ ಅವರು ಗೋಪಾಲಗೌಡರನ್ನು ಹತ್ತಿರದಿಂದ ಬಲ್ಲ ಸಮಾಜವಾದಿ ನಾಯಕರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಹೊಸನಗರದ ಶಾಸಕರಾಗಿದ್ದ ಸ್ವಾಮಿರಾವ್, ಕೊನೆಯ ವರ್ಷಗಳಲ್ಲಿ ಗೋಪಾಲ ಗೌಡರನ್ನು ನೋಡಿಕೊಳ್ಳುತ್ತಿದ್ದ ಡಾ. ಎಂ.ಸಿ. ವಿಷ್ಣುಮೂರ್ತಿ ಮೊದಲಾದವರಿಂದ ಅಫಿದಾವಿತ್ ಹಾಕಿಸಿದ್ದರು. ಅಪಾರ ಶ್ರಮವಹಿಸಿ ಹಲ ಬಗೆಯ ಪುರಾವೆಗಳನ್ನು ಕಲೆ ಹಾಕಿ ಕಾದಂಬರಿಯ ಅನೇಕ ಪಾತ್ರಗಳಿಗೂ, ಗೋಪಾಲಗೌಡರಿಗೆ ಹತ್ತಿರವಿದ್ದ ಹಾಗೂ ಇನ್ನೂ ಬದುಕಿರುವ ಹಲವರಿಗೂ ಇರುವ ಸಾಮ್ಯವನ್ನು ರವಿವರ್ಮಕುಮಾರ್ ಕರಾರುವಾಕ್ಕಾಗಿ ತೋರಿಸಿದ್ದರು. ‘ಅವಸ್ಥೆ’ ಕಾದಂಬರಿ ಹಾಗೂ ಅದನ್ನು ಆಧರಿಸಿದ ಸಿನೆಮಾದಿಂದ ನಿಜಕ್ಕೂ ಗೋಪಾಲಗೌಡ ಹಾಗೂ ಇನ್ನಿತರರ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆಯೆಂದು ಆಧಾರಸಹಿತ ವಾದಿಸಿದ್ದರು. ಇದೆಲ್ಲದರ ಜೊತೆಗೆ, ‘ಅವಸ್ಥೆ’ ಸಿನೆಮಾ ಗೋಪಾಲಗೌಡರ ಜೀವನವನ್ನು ಆಧರಿಸಿದೆ ಎಂದು ಪತ್ರಿಕೆಗಳಲ್ಲಿ ಈಗಾಗಲೇ ಪ್ರಚಾರ ಮಾಡಿದ್ದುದನ್ನೂ ಕೋರ್ಟಿನ ಗುನಕ್ಕೆ ತಂದರು.

ಸಮಾಜವಾದಿ ಪಕ್ಷದ ಸಭೆಯಲ್ಲಿ ಗೋಪಾಲಗೌಡರು

‘ಅವಸ್ಥೆ’ ಸಿನೆಮಾ ಕುರಿತಂತೆ ವಾದ-ಪ್ರತಿವಾದಗಳನ್ನು ಆಲಿಸುತ್ತಿದ್ದ ಜಸ್ಟಿಸ್ ಬೋಪಯ್ಯ ಕೊಡಗಿನವರು. ಅವರ ಆವರೆಗಿನ ಸೇವೆಯೆಲ್ಲ ಮದರಾಸಿನಲ್ಲಿ ಕಳೆದಿತ್ತು. ಹೀಗಾಗಿ ಅವರಿಗೆ ಶಾಂತವೇರಿ ಗೋಪಾಲಗೌಡರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಜಸ್ಟಿಸ್ ಬೋಪಯ್ಯನವರ ಎದುರು ಸಿನೆಮಾಕ್ಕೆ ತಡೆಯಾಜ್ಞೆ ನೀಡಬೇಕೆಂದು ವಾದಿಸುತ್ತಿದ್ದ ರವಿವರ್ಮಕುಮಾರ್ ಅವರ ಮಾತು ಗಳಿಂದ ಬೋಪಯ್ಯನವರಿಗೆ ಗೋಪಾಲಗೌಡರು ಕರ್ನಾಟಕದ ಬಹು ದೊಡ್ಡ ನಾಯಕರೆಂಬುದು ಮನವರಿಕೆಯಾದರೂ, ಆ ಬಗ್ಗೆ ಇನ್ನೂ ಅವರಿಗೆ ಸ್ಪಷ್ಟತೆ ಬಂದಿರಲಿಲ್ಲ; ಆದ್ದರಿಂದಲೋ ಏನೋ ಅವರು ಈ ಕುರಿತು ತೀರ್ಪು ಕೊಟ್ಟಿರಲಿಲ್ಲ. ಒಂದು ದಿನ ಈ ವಿಚಾರಣೆ ನಡೆಯುತ್ತಿದ್ದಾಗ, ಬೋಪಯ್ಯ ಇದ್ದಕ್ಕಿದ್ದಂತೆ ಕೇಳಿದರು: ‘ಮಿಸ್ಟರ್ ರವಿವರ್ಮಕುಮಾರ್, ನೀವು ಹೇಳುತ್ತಿರುವುದು ನಾವು ನಿತ್ಯ ಹೈಕೋರ್ಟಿಗೆ ಬರುವಾಗ ವಿಧಾನಸೌಧದ ಮೂಲೆಯಲ್ಲಿ ಹಾದು ಬರುವ ಸರ್ಕಲ್ಗೆ ಶಾಂತವೇರಿ ಗೋಪಾಲಗೌಡ ಎಂದು ಹೆಸರಿಟ್ಟಿದ್ದಾರಲ್ಲಾ, ಅವರ ವಿಚಾರವನ್ನೇ?’

ತಕ್ಷಣ ರವಿವರ್ಮಕುಮಾರ್, ‘ಎಸ್ ಮೈ ಲಾರ್ಡ್! ಆ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವಕ್ಕೇ ಈ ಸಿನೆಮಾದಿಂದ ಹಾನಿಯಾಗಿರೋದು’ ಎಂದರು. ಇದಾದ ಕೆಲ ದಿನಗಳ ನಂತರ ನ್ಯಾಯಮೂರ್ತಿಗಳು ಸಿನೆಮಾದ ಪ್ರದರ್ಶನಕ್ಕೆ ತಡೆಯಾಜ್ಞೆ ಕೊಟ್ಟರು. ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಯಿತು. ಅಲ್ಲಿ ಕೆಲವೆಡೆ ಕತ್ತರಿ ಹಾಕಿಸಿಕೊಂಡು ಸಿನೆಮಾ ಬಿಡುಗಡೆಯಾಯಿತು. ಕಲಾತ್ಮಕ ಚಿತ್ರಗಳ ಪಟ್ಟಿಯಲ್ಲಿರುವ ಈ ಸಿನೆಮಾ ಅಂಥ ಯಶಸ್ಸನ್ನೇನೂ ಕಾಣಲಿಲ್ಲ.

ಅದೇನೇ ಇದ್ದರೂ, ನಾಡಿನಲ್ಲಿ ಒಂದು ದೊಡ್ಡ ಮಾರ್ಗವನ್ನೇ ತೆರೆದ ಧೀಮಂತ ವ್ಯಕ್ತಿಯೊಬ್ಬರ ಜೀವನವನ್ನು ಕಾದಂಬರೀಕರಣ ಮಾಡಹೊರಡುವ ಸೃಜನಶೀಲ ಲೇಖಕನೊಬ್ಬ ಕೊನೆಯ ಪಕ್ಷ ತನಗೆ ತಾನೇ ಉತ್ತರ ಹೇಳಿಕೊಳ್ಳಬೇಕಾದ ಬಹು ಸೂಕ್ಷ್ಮ ಪ್ರಶ್ನೆಗಳು ಈ ಪ್ರಕರಣದ ಮೂಲಕ ಮತ್ತೆ ಮುನ್ನೆಲೆಗೆ ಬಂದಿವೆ. ಕಾದಂಬರಿ ಪ್ರಕಾರದ ಅಗತ್ಯಗಳಿಗೆ ತಕ್ಕ ವಿವರಗಳನ್ನು ಬಳಸಿ, ‘ಕಲಾತ್ಮಕ’ ಎನ್ನಲಾಗುವ ಘರ್ಷಣೆಗಳನ್ನು ಜೋಡಿಸಿ, ಒಬ್ಬ ಧೀಮಂತ ವ್ಯಕ್ತಿಯ ಜೀವನವನ್ನು ವಿಕೃತಗೊಳಿಸುವುದು ಎಷ್ಟು ಸರಿ ಎಂಬ ಸಂಕೀರ್ಣ ನೈತಿಕ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಕಾದಂಬರಿ ಬರವಣಿಗೆಯ ಸ್ವಾಯತ್ತತೆಯನ್ನು ಒಪ್ಪಿದಾಗಲೂ, ಈ ಪ್ರಶ್ನೆಯನ್ನು ಬಹು ಸೂಕ್ಷ್ಮವಾಗಿ ನೋಡಿದಾಗ ಈ ಬಗೆಯ ಬರವಣಿಗೆ ಮೂಲತಃ ಅನೈತಿಕ ಎನ್ನಿಸುತ್ತದೆ. ಗಾಂಧೀಜಿಯವರಂಥ ಧೀಮಂತರ ವ್ಯಕ್ತಿತ್ವಗಳನ್ನು ವಿಕೃತಗೊಳಿಸಿ ಬರೆಯಲಾದ ನಾಟಕ, ಕಾದಂಬರಿ ಇತ್ಯಾದಿಗಳ ಬಗ್ಗೆ ನಾವು ಎತ್ತುವ ಸೂಕ್ಷ್ಮ ನೈತಿಕ ಪ್ರಶ್ನೆಗಳು ‘ಅವಸ್ಥೆ’ ಕಾದಂಬರಿಯ ಸಂದರ್ಭದಲ್ಲೂ ಅನ್ವಯವಾಗುತ್ತವೆ.

ಇದೆಲ್ಲ ಆಗಿ ದಶಕಗಳೇ ಉರುಳಿವೆ. ಈ ನಡುವೆ ಗೋಪಾಲಕೃಷ್ಣ ಅಡಿಗರ ‘ಶಾಂತವೇರಿಯ ಅಶಾಂತ ಸಂತ’, ವೀ.ಚಿಕ್ಕವೀರಯ್ಯನವರ ‘ಅಪರಂಜಿ’ ಮುಂತಾದ ವಿಶಿಷ್ಟ ಪದ್ಯಗಳ ಜೊತೆಗೆ, ಬೆಸಗರಹಳ್ಳಿ ರಾಮಣ್ಣ, ಸಿ.ಪಿ.ಕೆ., ಲಂಕೇಶ್, ಕ.ವೆಂ.ರಾಜಗೋಪಾಲ, ಕೋಣಂದೂರು ಲಿಂಗಪ್ಪ ಮೊದಲಾದವರು ಗೋಪಾಲಗೌಡರನ್ನು ಕುರಿತ ಕುತೂಹಲಕರ ಕಾವ್ಯಚಿತ್ರಗಳನ್ನು ಕೊಟ್ಟಿದ್ದಾರೆ. ಇವತ್ತಿಗೂ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವ ಹಾಗೂ ಚಿಂತನೆಗಳನ್ನು ಕುರಿತ ನೆನಪು ಕನ್ನಡ ಸಾಹಿತ್ಯ, ಸಂಸ್ಕೃತಿಯಲ್ಲಿ ಆಗಾಗ ಸುಳಿಯತ್ತಲೇ ಇರುತ್ತದೆ. ಈ ಅಂಶ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಶಾಂತವೇರಿ ಗೋಪಾಲಗೌಡರಂಥ ಜವಾಬ್ದಾರಿಯುತವಾದ ಸೂಕ್ಷ್ಮ ರಾಜಕಾರಣಿಯ ಆದರ್ಶ ರಾಜಕಾರಣದ ಹುಡುಕಾಟವನ್ನು ಹಾಗೂ ಸಾಹಿತ್ಯ ಮತ್ತು ರಾಜಕಾರಣಗಳನ್ನು ಅರ್ಥಪೂರ್ಣವಾಗಿ ಬೆಸೆಯುವ ಕನಸನ್ನು ಇನ್ನೂ ಬಿಟ್ಟುಕೊಟ್ಟಿಲ್ಲವೆನ್ನುವುದನ್ನೂ ಸೂಚಿಸುತ್ತದೆ.

(ಈ ಬರಹ ಕೋಣಂದೂರು ವೆಂಕಪ್ಪಗೌಡರು ಶಾಂತವೇರಿ ಗೋಪಾಲಗೌಡರನ್ನು ಕುರಿತು ಸಂಪಾದಿಸಿದ ‘ಜೀವಂತ ಜ್ವಾಲೆ’ ಎಂಬ ಪುಸ್ತಕದಿಂದ ಹಿಡಿದು ಅನೇಕ ಬರಹಗಳು, ಮಾತುಕತೆಗಳು, ಪುಸ್ತಕಗಳು ಹಾಗೂ ದಾಖಲೆಗಳನ್ನು ಆಧರಿಸಿದೆ.)

ಕುವೆಂಪು ಅವರ ‘ಸೋಮನಾಥಪುರದ ದೇವಾಲಯ’ ಪದ್ಯವನ್ನು ಆಗಾಗ ಗುನುಗುತ್ತಿದ್ದ ಗೋಪಾಲಗೌಡರು, ಇಲ್ಲಿ ಕೇವಲ ಸೋಮನಾಥ ದೇವಾಲಯದ ಬಗ್ಗೆ ವಾತ್ರವಲ್ಲ, ಇಡೀ ಕರ್ನಾಟಕದ ಬಗ್ಗೆ ಕುವೆಂಪು ಹೇಳುತ್ತಿದ್ದಾರೆ ಎಂದು ವ್ಯಾಖ್ಯಾನಿಸುತ್ತಿದ್ದರು...

‘...ಎಲ್ಲ ಹರಿದು ಹಂಚಿ ಹೋಗಿದೀವಿ ಡಾಕ್ಟ್ರೇ, ನಾನೊಂದು ಮೂಲೆ, ನೀವೊಂದು ವೃತ್ತಿ, ಅವರೆಲ್ಲ ಎಲ್ಲೆಲ್ಲೋ...ಈ ನಡುವೆ ನಿಲುವೇ ಇಲ್ಲದ ರಾಜಕೀಯ, ತಾತ್ವಿಕ ನಿಲುವೇ ಇಲ್ಲದ ಸಾಹಿತಿ, ಪ್ರಾಮಾಣಿಕತೆಯೇ ಇಲ್ಲದ ಸರಕಾರಿ ನೌಕರ... ಒಟ್ಟಿನಲ್ಲಿ ಪರಿಸ್ಥಿತಿ ನಮ್ಮ ಕೈ ತಪ್ಪಿದೆ ಡಾಕ್ಟ್ರೇ...’

‘ನೀವು ಸಾಹಿತಿಗಳು. ನಿಮ್ಮ ಮಾತಿಗೆ ಜನ ಬೆಲೆ ಕೊಡುತ್ತಾರೆ. ಹಾಗಿರುವಾಗ ಒಂದು ಕಡೆ ರಾಜಶಾಹಿಯ ವಿರುದ್ಧ ಮಾತನಾಡಿ, ಮತ್ತೊಂದು ಕಡೆ ಅವರನ್ನು ಹೊಗಳಿದರೆ ನಮ್ಮ ದಡ್ಡ ಜನ ನೀವು ಹೊಗಳಿದ್ದನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಬೈದುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಈ ಕೆಟ್ಟ ಪದ್ಧತಿಗಳ ಬಗ್ಗೆ ನೀವು ಯಾವತ್ತೂ ಒಳ್ಳೆಯ ಮಾತನ್ನು ಆಡಬಾರದು... ನೀವು ಸಾಹಿತಿಗಳು ಭಾರೀ ಅಪಾಯದ ಜನ; ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ನನಗೆ ಎಷ್ಟು ಪ್ರೀತಿಯೋ, ಅಷ್ಟೇ ಭಯ!’

‘ಕುಮಾರವ್ಯಾಸ ಹೇಳ್ತಾನೆ, ‘ಬೇರು ನೀರುಂಡಾಗ ತಣಿಯವೆ ಭೂರುಹದ ಶಾಖೋಪಶಾಖೆಗಳು’ ಅಂತ... ನಾವು ವಿಧಾನಸಭೆಯಲ್ಲಿ ಕೂತು ಯಾವುದೋ ಊರಿನ ರಸ್ತೆ, ಕೆರೆ ಮಾಡಿಸೋದಲ್ಲ... ಕರ್ನಾಟಕ ಅಂತನ್ನೋ ದೊಡ್ಡ ಮರ ಇದೆಯಲ್ಲ, ಅದರ ಬೇರಿಗೆ ನೀರು ಹಣಿಸೋ ದಾರಿ ಹುಡುಕಬೇಕು. ಅದನ್ನು ಮಾಡಬೇಕು. ಹಾಗೆ ಮಾಡಿದ್ರೆ ಇಂಥಾ ದೊಡ್ಡ ಮರದ ರೆಂಬೆ ಚಿಗುರು ಎಲೆ ಎಲ್ಲಾ ಒಂದೇ ಸಲಕ್ಕೆ ನಳನಳಿಸಿ ಬೆಳೀತವೆ.’

‘ನವ್ಯ ಕಾದಂಬರಿಯ ಅಗತ್ಯಗಳಿಗೆ ತಕ್ಕ ವಿವರಗಳನ್ನು ಬಳಸಿ, ಕಲಾತ್ಮಕ ಎನ್ನಲಾಗುವ ಘರ್ಷಣೆಗಳನ್ನು ಜೋಡಿಸಿ, ಗೋಪಾಲಗೌಡರಂಥ ಧೀಮಂತ ವ್ಯಕ್ತಿಯ ಜೀವನವನ್ನು ವಿಕೃತಗೊಳಿಸುವುದು ಎಷ್ಟು ಸರಿ ಎಂಬ ಸಂಕೀರ್ಣ ನೈತಿಕ ಪ್ರಶ್ನೆ ಇವತ್ತು ಅನಂತಮೂರ್ತಿಯವರ ಅವಸ್ಥೆ ಕಾದಂಬರಿ ಓದುವಾಗ ಎದುರಾಗುತ್ತದೆ’.

ಶಾಂತವೇರಿ ಗೋಪಾಲಗೌಡರು ‘ಗಿರಿಧಾರಿ’ ಎಂಬ ಕಾವ್ಯನಾಮದಲ್ಲಿ ತಮ್ಮ ಕೈಬರಹದಲ್ಲಿ ಬರೆದು ಇಟ್ಟಿದ್ದ ಕವನ

ಕಾಲಾಯ ತಸ್ಮೈ ನಮಃ

ಬಂದೆ ಬಿಟ್ಟನೆ ಶಾರ್ವರಿ

ಬಡವನ ಈ ಬಾಗಿಲಿಗು,

ಬಂದಂತೆ ಹಿಂದೆ ರಾಯಭಾರಿ ವಿಧುರನ ಮನೆಗೆ?

ಹೇಗೆ ಎದುರುಗೊಳ್ಳಲಿ,

ಎಂತು ಸತ್ಕರಿಸಲೀ ಕಾಲಪುರುಷನ?

ಇಲ್ಲ ಮನೆಯೊಳಗೊಂದಿನಿತು ಅವಲಕ್ಕಿ ಕೂಡ

ವಂಚಿಸಿದೆ ತಂದೆ ತಾಯಿ ಮಡದಿ ಮಕ್ಕಳ

ನಾಳೆ ತರುವೆ, ನಾಳೆ ಕೊಡುವೆ ಎಂದು

ಬರಲಿಲ್ಲ ಆ ನಾಳೆ, ನನ್ನನೇ ವಂಚಿಸಿಕೊಂಡೆ

ನೆಮ್ಮಿ ಎಂದೂ ಬರದ ಆ ನಂಬುಗೆಯ ನಾಳೆಯನು;

ವಂಚಿಸಲಾರೆ ಈ ಕಳ್ಳಕಾಲನ

ಅವಗೆ ಗೊತ್ತಿರುವುದನೆ ಹೇಳಿಕೊಳ್ಳುವೆ ಮತ್ತೆ

ಆದೀತು ಈ ಎದೆ ಭಾರ ಹಗುರ

ಎಷ್ಟಾದರೂ ಜಗಕೆ ಮಿತ್ರನಲ್ಲವೆ ಅವನು?

ಬೇಗನೆೀ ಉಣಬಡಿಸಿ ಆಡುವೆನು ಬೆಲ್ಲದ ಮಾತ.

ಶಾರ್ವರಿ, ಇಗೋ ಇತ್ತೆ ನಿನಗೆ ಸ್ವಾಗತ!

-ಗಿರಿಧಾರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)