varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಕಲೆಯೊಳಗಿನ ಕಳೆಗಳು

ವಾರ್ತಾ ಭಾರತಿ : 8 Dec, 2018
ಜಯಲಕ್ಷ್ಮೀ ಪಾಟೀಲ್

             ಜಯಲಕ್ಷ್ಮೀ ಪಾಟೀಲ್

ರಂಗಭೂಮಿ, ಟಿವಿ, ಸಿನೆಮಾ ಮತ್ತು ಪುಸ್ತಕ ಇವುಗಳ ನಡುವೆ ಸಮನ್ವಯ ಸಾಧಿಸುತ್ತಾ, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬರುತ್ತಿರುವವರು ಜಯಲಕ್ಷ್ಮೀ ಪಾಟೀಲ್. 20ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿರುವ ಇವರು, ನಾಲ್ಕು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆರು ಸಿನೆಮಾಗಳಲ್ಲಿ ನಟಿಸಿದ್ದು, 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದವರು. ಕತೆ, ಕವಿತೆಗಳ ಮೂಲಕವೂ ಅಪಾರ ಓದುಗರನ್ನು ತನ್ನದಾಗಿಸಿಕೊಂಡವರು. ಮೀಟೂ ಚಳವಳಿ ಹಿನ್ನೆಲೆಯಲ್ಲಿ ಕಲಾವಿದೆಯಾಗಿ ತಮ್ಮ ಮನದಾಳದ ಅನಿಸಿಕೆಗಳನ್ನು ಇಲ್ಲಿ ತೋಡಿಕೊಂಡಿದ್ದಾರೆ.

ಕೇವಲ ನಟಿಯರು ಮಾತ್ರವಲ್ಲ, ಎಲ್ಲ ಉದ್ಯೋಗ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳ ಜೊತೆಗೆ ಲೈಂಗಿಕ ಕಿರುಕುಳಗಳು, ಅಸಹ್ಯ ನೋಟದ ರೂಪದಲ್ಲಿ, ಮಾತಿನ ರೂಪದಲ್ಲಿ, ಸ್ಪರ್ಶದ ರೂಪದಲ್ಲಿ ಹಿಂಸಿಸುತ್ತಲೇ ಇವೆ. ಇಲ್ಲಿಯವರೆಗೆ ಒಂದೇ ಒಂದು ಕ್ಷೇತ್ರವೂ, ‘ನಮ್ಮ ಈ ಕ್ಷೇತ್ರ ಇಂಥ ಲೈಂಗಿಕ ಕಿರುಕುಳರಹಿತವಾದುದು’ ಎಂದು ಪ್ರಮಾಣಿಕರಿಸಿ, ಘೋಷಿಸಿದ್ದನ್ನು ಕಾಣಲಿಲ್ಲ ನಾನು! ಎಲ್ಲಿ ನೋಡಿದರೂ, ಎಷ್ಟೇ ಮುಂದುವರಿದ ರಾಷ್ಟ್ರವಾದರೂ ತಾನು ‘ಲೈಂಗಿಕ ಕಿರುಕುಳ ಮುಕ್ತ ದೇಶ’ ಎಂದು ಸಾರಿಕೊಂಡಿದ್ದನ್ನಾಗಲಿ, ಮತ್ತದು ಪ್ರೂವ್ ಆಗಿದ್ದನ್ನಾಗಲಿ ಈ ಜಗತ್ತು ಕಂಡಿಲ್ಲ.

ಕಲಾ ಸೇವೆ ಸರಸ್ವತಿಯ ಸೇವೆ. ಕಲಾ ಸೇವೆ ಶ್ರೇಷ್ಠ ಸೇವೆ. ಕಲಾವಿದರಾಗಿ ಹುಟ್ಟಿ ಬರಲು ತುಂಬಾ ಪುಣ್ಯ ಮಾಡಿರಬೇಕು. ಆಹಾ! ಎಂಥಾ ಅದ್ಭುತ ಕಲಾವಿದೆ/ದ ನೀವು! ಶರಣು ನಿಮ್ಮ ಪಾದಕ್ಕೆ!

‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿನ ನನ್ನ ‘ಮಂಗಳತ್ತೆ’ ಪಾತ್ರದ ಖ್ಯಾತಿಯ ಉತ್ತುಂಗದ ದಿನಗಳವು. ಅಂದೊಮ್ಮೆ ಯಾವುದೋ ಸಿನೆಮಾ ನೋಡಲು ಕೋರಮಂಗಲದಲ್ಲಿನ ಪಿವಿಆರ್‌ಗೆ ಹೋಗಿದ್ದೆ. ಸಿನೆಮಾ ಪ್ರಾರಂಭವಾಗುವ ಮೊದಲೊಮ್ಮೆ ವಾಶ್ ರೂಮಿಗೆ ಹೋಗಿ ಬಂದರಾಯಿತು ಎಂದು ಅಲ್ಲಿನ ಸುಸಜ್ಜಿತ ಬಚ್ಚಲು ಮನೆಗಳ ಹೊರ ಆವರಣದೊಳಗೆ ಕಾಲಿಟ್ಟೆ. ಆಗಿನ ದಿನಗಳಲ್ಲಿ ಮಾಮೂಲಿನಂತೆ ಹೆಣ್ಣುಮಕ್ಕಳೆಲ್ಲ ಧಾವಿಸಿ ಬಂದು ಮಾತನಾಡಿಸಿದರು. ತಮ್ಮ ಮೆಚ್ಚುಗೆ ಮತ್ತು ಅಭಿಪ್ರಾಯಗಳನ್ನು ಹೇಳತೊಡಗಿದರು. ಎಲ್ಲರೂ ಮಾತಾಡಿಕೊಂಡೇ ಬಂದವರಂತೆ, ‘‘ಟಿವಿಯಲ್ಲಿ ನಿಮ್ಮನ್ನು ನೋಡುವಾಗ, ವಯಸ್ಸಲ್ಲಿ ನೀವು ತುಂಬಾ ದೊಡ್ಡೋರು ಅನ್ಕೊಂಡಿದ್ವಿ. ಇಲ್ಲಿ ನೋಡಿದರೆ ಎಷ್ಟು ಚಿಕ್ಕೋರು ನೀವು! ಅದು ಹೇಗೆ ಆ ರೀತಿ, ಅದೂ ಅತಿಯಾದ ಯಾವುದೇ ಮೇಕಪ್ ಇಲ್ಲದೆ, ಹಾಗೆ ರೆಡಿ ಆಗ್ತೀರಿ?’’ ಎಂದೆಲ್ಲ ಕೇಳುತ್ತಿದ್ದರು. ತೀರಾ ಚಿಕ್ಕವಳೇನೂ ಅಲ್ಲದ, ಹಾಗೆಂದು ಮಂಗಳತ್ತೆ ಪಾತ್ರದ ವಯಸ್ಸಿಗೆ ಚಿಕ್ಕವಳೇ ಆಗಿದ್ದ ನಾನು ಸುಮ್ಮನೆ ಮುಗುಳ್ನಕ್ಕೆ. ಸಿನೆಮಾ ಶುರುವಾಗಲು ಇನ್ನೂ ಸಮಯವಿತ್ತಾದ್ದರಿಂದ ಅವರ ಪ್ರೀತಿಯ ಅಭಿಮಾನದ ಸುಖವನ್ನನುಭವಿಸುತ್ತಾ ನಿಂತೆ. ಆಗ ಒಬ್ಬ ತಾಯಿ ಮತ್ತು ಅವರ ಆರೇಳು ವರ್ಷದ ಮಗ ಬಳಿಗೆ ಬಂದರು. ಆಕೆ ಎಲ್ಲರಂತೆ ನನ್ನ ಅಭಿನಯದ ಬಗ್ಗೆ ಮೆಚ್ಚುಗೆ ಸೂಸಿಸಿ, ತಮ್ಮ ಮಗನಿಗೆ, ‘‘ಇವರ್ಯಾರು ಗೊತ್ತಾಯ್ತಾ?’’ ಎನ್ನುತ್ತ ಅವನೆಡೆ ತುಸು ಬಾಗಿ ಕೇಳಿದಾಗ ನನ್ನ ಗಮನ ಮಗುವಿನತ್ತ. ಆ ಕ್ಷಣದ ದೃಶ್ಯವಿದೆಯಲ್ಲ, ಅದು ನನ್ನ ಜೀವಮಾನದಲ್ಲಿ ಎಂದೂ ಮಾಸದ ಅಚ್ಚಳಿಯದ ನೆನಪು. ಆ ಮಗು ನಿಬ್ಬೆರಗಾಗಿ ನನ್ನನ್ನು ನೋಡುತ್ತಿತ್ತು. ಆ ಮಗುವಿಗೆ ನಾನು ಪುಟ್ಟ ಪರದೆಯಾಚೆ ಬಂದು, ಅವನ ಎದುರು ಕಾಣಿಸಿಕೊಂಡಿದ್ದೇ ನಂಬಲಸಾಧ್ಯವಾದುದೇನೋ ಘಟಿಸಿಬಿಟ್ಟಿದೆ ಎಂಬಂಥ ಬೆರಗು. ಕಣ್ಣು ಪಿಳುಕಿಸುತ್ತಿಲ್ಲ ಅವನು, ಪುಟ್ಟ ಬಾಯಿ ಅರೆತೆರೆದಿದೆ. ಆ ಕಣ್ಣು, ಬಾಯಿ, ಮುಖದ ಅಣುಅಣುವಿನಲ್ಲೆಲ್ಲ ಸ್ಪಷ್ಟವಾಗಿ ಗೋಚರಿಸುತ್ತಿದ್ದುದು ಬೆರಗೊಂದೇ! ಅವನಮ್ಮ ಅವನಿಗೆ ಹೇಳುತ್ತಿರುವುದೇನೂ ಅವನಿಗೆ ಕೇಳಿಸುತ್ತಿಲ್ಲ. ಮಗುವಿನ ಆಗಿನ ಆ ನೋಟವಿದೆಯಲ್ಲ ಅದು ನನ್ನೊಳಗೆ ಇಳಿದು, ವಯೋಸಹಜವಾಗಿ ಮುಗ್ಧತೆ ಕಳೆದುಕೊಂಡ ನಾನು, ಒಮ್ಮೆಯಾದರೂ ಆ ಥರದ ಭಾವವನ್ನು ಅವನಷ್ಟೇ ತೀವ್ರವಾಗಿ ಅನುಭವಿಸಬೇಕು, ಆಗದಿದ್ದಲ್ಲಿ ಅಟ್ಲೀಸ್ಟ್ ಅಷ್ಟೇ ಸಹಜವಾಗಿ ಒಮ್ಮೆ, ಒಮ್ಮೆಯಾದರೂ ಅಭಿನಯಿಸಬೇಕು ಎನ್ನುವ ಆಸೆ ಮನಸಲ್ಲಿ ಭದ್ರವಾಗಿ ಬಿಟ್ಟಿತು. ಅವರಮ್ಮ ಮಾತು ಮುಗಿಸಿ ಅವನನ್ನೆಳೆದುಕೊಂಡು ಹೊರಟಾಗಲೂ ಅವನ ರೆಪ್ಪೆ ಅಲುಗಿದ್ದನ್ನು, ಅರೆತೆರೆದ ತುಟಿಗಳು ಒಂದಾಗಿದ್ದನ್ನು ನಾನು ಕಾಣಲಿಲ್ಲ.

                        ಮುಕ್ತ ಮುಕ್ತ ಧಾರಾವಾಹಿಯ ದೃಶ್ಯ

‘‘ನಿಮಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿದೀವಿ. ನೀವು ಉಳಿದ ಕಲಾವಿದೆಯರೊಡನೆ ಅವರಿರುವಲ್ಲಿ ಇರಬೇಕಿಲ್ಲ. ಆ ಊರಲ್ಲಿ ಇಳಿದೊಡನೆ ನೀವು ನಮ್ಮ ಜೊತೆ ಬಂದುಬಿಡಿ’’ ಬೇರೆಯೇ ವಾಸನೆ ಹೊತ್ತ ಈ ಮಾತುಗಳನ್ನು ಕೇಳಿದಾಗ ಅಂದು ನನ್ನ ಜಂಘಾಬಲವೇ ಉಡುಗಿಹೋಗಿತ್ತು? ಹೀಗೆ ಹೇಳಿದ್ದು ಅಸೋಸಿಯೇಟ್ ಡೈರೆಕ್ಟರ್. ಅವನ ಜೊತೆಯಲ್ಲಿ ನಿಂತಿದ್ದ ಕ್ಯಾಮರಾಮನ್. ಈ ಅಸೋಸಿಯೇಟ್ ಡೈರೆಕ್ಟರ್ ಇಡೀ ಚಿತ್ರೀಕರಣದ ಸಮಯದಲ್ಲಿ ತೋರುತ್ತಿದ್ದ ಮುತುವರ್ಜಿಯನ್ನು ಕಂಡು, ನನ್ನ ನಟನೆ ಇಷ್ಟವಾದ ಕಾರಣಕ್ಕೆ ಹಾಗಿರಬೇಕು ಎಂದೇ ಭಾವಿಸಿದ್ದೆ. ಆದರೆ ಚಿತ್ರೀಕರಣದ ವೇಳೆ ಕ್ಯಾಮರಾಮೆನ್‌ನ ಗಲೀಜು ನೋಟ ನನ್ನನ್ನು ಹಿಂಸಿಸುತ್ತಿತ್ತು. ಆ ಅಸಹ್ಯ ನೋಟವೇ ಮೇಲಿನ ಮಾತುಗಳನ್ನು ಆ ಅಸೋಸಿಯೇಟ್ ಡೈರಕ್ಟರ್ ಆಡಿದಾಗ ನಾನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು. ಇಲ್ಲವಾದಲ್ಲಿ, ನನಗೆ ಹಾಗೆ ಎಲ್ಲೆಂದರಲ್ಲಿ, ಸಮೂಹದಲ್ಲೆಲ್ಲ ಇರಲು ಮುಜುಗರ ಅನ್ನುವುದು ಅವರಿಗೂ ಗೊತ್ತಾಗಿದೆ ಎಂದೂ (ಯಾಕೆಂದರೆ ನಾನು ಆ ಪ್ರಾಜೆಕ್ಟನ್ನು ಒಪ್ಪಿಕೊಳ್ಳುವಾಗಲೇ ಇದನ್ನು ವ್ಯವಸ್ಥಾಪಕರಿಗೆ ಈ ಕುರಿತು ಹೇಳಿದ್ದೆನಾದರೂ ಅವರು, ತೀರಾ ಪ್ರತ್ಯೇಕ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗದಿದ್ದರೂ, ಜೊತೆಗುಳಿದುಕೊಂಡ ಹೆಣ್ಣುಮಕ್ಕಳ ಗುಂಪಲ್ಲಿ ನನಗೆ ಕಿರಿಕಿರಿಯಾಗದಂತೆ ನೋಡಿಕೊಂಡಿದ್ದರು), ನನ್ನ ಪ್ರತಿಭೆಗೆ ಅವರು ಈ ರೀತಿಯಾಗಿ ಗೌರವ ತೋರುತ್ತಿದ್ದಾರೆ ಎಂದೇ ಭಾವಿಸಿರುತ್ತಿದ್ದೆನೇನೋ! ಅಂದೊಂದು ಥರದ ಫಜೀತಿ, ಮಾತು ಆಡಿದರೊಂದು ಆಡದಿದ್ದರೊಂದು ಎಂಬಂಥ ಸ್ಥಿತಿ ನನ್ನದು. ಅಗತ್ಯವಿರುವಲ್ಲಿ ಮುಖಕ್ಕೆ ಬಾರಿಸುವಷ್ಟು ಗಟ್ಟಿ ಮಾತಾಡುವ ಛಾತಿ ಈಗಿನಷ್ಟು, ಅಥವಾ ತನುಶ್ರೀ ದತ್ತಾಳಷ್ಟು ನನಗಾಗ ಇರಲಿಲ್ಲ. ಸಹ ನಟನಟಿಯರೆದುರಿಗೆ, ‘‘ಅವರಿಬ್ಬರು ಹೀಗೆನ್ನುತ್ತಿದ್ದಾರೆ, ನನಗೆ ಹಾಗೆ ಹೋಗಲು ಇಷ್ಟವಿಲ್ಲ, ಹೆದರಿಕೆಯಾಗುತ್ತಿದೆ. ಏನು ಮಾಡಲಿ?’’ ನನ್ನ ಅಳುಕನ್ನು ತೋಡಿಕೊಂಡೆ. ಹುಡುಗರೆಲ್ಲ, ‘‘ಹೋಗ್ಬೇಡಿ ನೀವು, ಅವ್ರ ಸರಿಯಿಲ್ಲ. ನೇರ ಹೇಳಿಬಿಡಿ. ಅದಕ್ಕೂ ಮಿಕ್ಕಿ ಅವರೇನಾದ್ರು ಕಿತಾಪತಿ ಮಾಡಿದ್ರೆ ನಾವಿದೀವಿ ನಿಮ್ಜೆತೆಗೆ, ನೋಡ್ಕೋತೀವಿ ಒಂದು ಕೈನ’’ ಎಂದು ಧೈರ್ಯ ತುಂಬಿದರು. ‘ಹೆಣ್ಮಕ್ಳು ಅಂದ್ರೆ ಎಷ್ಟು ಸಸಾರ ನೋಡಿ ಇಂಥೋರಿಗೆ!’ ಎಂದು ಹೆಣ್ಣುಮಕ್ಕಳೆಲ್ಲ ಅವರಿಬ್ಬರಿಗೂ ಹಿಡಿ ಶಾಪ ಹಾಕಿದರು. ಅವರೆಲ್ಲರು ಆಗ ಬೆನ್ನಿಗೆ ನಿಂತರಾದ್ದರಿಂದ ಆಪತ್ತಿನಿಂದ ಪಾರಾದೆ.

ಕಳೆದ ವರ್ಷ ಇಂಥದ್ದೇ ಕಾರಣಕ್ಕಾಗಿ ಅಪಹರಣಕ್ಕೊಳಗಾದ ಖ್ಯಾತ ಮಲಯಾಳಂ ನಟಿ, 2012ರ ಜೂನ್ ತಿಂಗಳಲ್ಲಿ, ಚಿತ್ರರಂಗದವರಿಂದಲೇ ಅತ್ಯಾಚಾರಕ್ಕೊಳಗಾದ ಭೋಜಪುರಿ ಚಿತ್ರರಂಗದ ನಟಿ, ಎಂಟು ವರ್ಷಗಳ ಹಿಂದೆ ಖ್ಯಾತ ನಟ ನಾನಾ ಪಾಟೇಕರ್‌ನಿಂದ ಕಿರುಕುಳಕ್ಕೊಳಗಾದ ತನುಶ್ರೀ ದತ್ತ, ಆ ನೋವಿನಿಂದ ಹೊರಬರಲಾಗದೆ, ಈಗ ಮತ್ತೆ ಆ ಪ್ರಕರಣ ಜೀವ ಪಡೆದು ಪರ ವಿರೋಧಗಳ ನಡುವೆ ಆಕೆ ನಲುಗುತ್ತಿರುವ ರೀತಿ ನೋಡಿದರೆ ಮನುಷ್ಯನೊಳಗಿನ ವಿಕೃತಿ ಕಂಡು ಹೇಸಿಗೆ ಎನಿಸುತ್ತದೆ.

ಒಂದೆಡೆ ಹೆಣ್ಣೊಬ್ಬಳ ಪ್ರತಿಭೆಯನ್ನು ಕಂಡು ಮೆಚ್ಚಿ ಗೌರವಿಸುವ ಜನ ಸಮೂಹ, ಇನ್ನೊಂದೆಡೆ ಅದೇ ಪ್ರತಿಭೆಯನ್ನು ಹೆಣ್ಣೆಂಬ ಕಾರಣಕ್ಕೇ ಲೈಂಗಿಕವಾಗಿ ಶೋಷಿಸಲೆತ್ನಿಸುವ, ಸಾಧ್ಯವಾದಲ್ಲಿ ಅತ್ಯಾಚಾರವನ್ನೆಸಗಿಯೂ ಬಿಡುವ ಜನ! ಅದರಲ್ಲೂ ಆಕೆ ನಟಿಯಾಗಿದ್ದರಂತೂ ಈ ಶೋಷಣೆಯ ಪ್ರಮಾಣ ಇನ್ನೂ ಹೆಚ್ಚು ಹಾಗೂ ತೀವ್ರ! ಅದೆಷ್ಟು ಸಸಾರ ಈ ಲೋಕಕ್ಕೆ ಹೆಣ್ಣೆಂದರೆ, ಅದೆಷ್ಟು ಸಸಾರ ನಟಿ ಎಂದರೆ! ಕೇವಲ ನಟಿಯರು ಮಾತ್ರವಲ್ಲ, ಎಲ್ಲ ಉದ್ಯೋಗ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳ ಜೊತೆಗೆ ಲೈಂಗಿಕ ಕಿರುಕುಳಗಳು, ಅಸಹ್ಯ ನೋಟದ ರೂಪದಲ್ಲಿ, ಮಾತಿನ ರೂಪದಲ್ಲಿ, ಸ್ಪರ್ಶದ ರೂಪದಲ್ಲಿ ಹಿಂಸಿಸುತ್ತಲೇ ಇವೆ. ಇಲ್ಲಿಯವರೆಗೆ ಒಂದೇ ಒಂದು ಕ್ಷೇತ್ರವೂ, ‘ನಮ್ಮ ಈ ಕ್ಷೇತ್ರ ಇಂಥ ಲೈಂಗಿಕ ಕಿರುಕುಳರಹಿತವಾದುದು’ ಎಂದು ಪ್ರಮಾಣಿಕರಿಸಿ, ಘೋಷಿಸಿದ್ದನ್ನು ಕಾಣಲಿಲ್ಲ ನಾನು! ಎಲ್ಲಿ ನೋಡಿದರೂ, ಎಷ್ಟೇ ಮುಂದುವರಿದ ರಾಷ್ಟ್ರವಾದರೂ ತಾನು ‘ಲೈಂಗಿಕ ಕಿರುಕುಳ ಮುಕ್ತ ದೇಶ’ ಎಂದು ಸಾರಿಕೊಂಡಿದ್ದನ್ನಾಗಲಿ, ಮತ್ತದು ಪ್ರೂವ್ ಆಗಿದ್ದನ್ನಾಗಲಿ ಈ ಜಗತ್ತು ಕಂಡಿಲ್ಲ. ಯಾವುದೇ ಅತ್ಯಾಚಾರ ಇಲ್ಲವೇ ಲೈಂಗಿಕ ಕಿರುಕುಳ ಬಯಲಿಗೆ ಬಂದಾಗ, ಅದರ ವಿರುದ್ಧ ಏಳುವ ದನಿಗಳ ಜೊತೆಗೇನೇ ತಪ್ಪು ನಟಿಯದೇ ಇರಬೇಕು ಎನ್ನುವ ದನಿಗಳು ಮೊಳಗತೊಡಗುತ್ತವೆ. ಜೊತೆಗೆ ತಪ್ಪಿತಸ್ಥನ ಪರ ನಿಂತು, ನಟಿಯನ್ನು ಹೆದರಿಸಿ ಹಿಮ್ಮೆಟ್ಟುವಂತೆ ಮಾಡುವ, ಜೀವ ಬೆದರಿಕೆಯನ್ನೊಡ್ಡುವ, ಆಕೆಯ ಕರಿಯರ್‌ನ್ನು ಬರ್ಬಾದ್ ಮಾಡುವ ಹವಣಿಕೆಗಳು ತ್ವರಿತಗತಿಯಲ್ಲಿ ನಡೆಯತೊಡಗುತ್ತವೆ. ಅದೂ ಸಾಲದು ಎಂಬಂತೆ ಪ್ರಚಾರಕ್ಕಾಗಿ ಆಕೆ ಮಾಡುತ್ತಿರುವ ಗಿಮಿಕ್ ಇದು ಎನ್ನುವ ಆರೋಪ ಹೊರಿಸುತ್ತಾರೆ. ಶರೀರ ಮತ್ತು ಶಾರೀರಗಳವಲಂಬಿತ ಕಲೆಗಳಾದ ನಟನೆ, ಸಂಗೀತ ಮತ್ತು ನೃತ್ಯ ರಂಗಗಳನ್ನಷ್ಟೇ ನೋಡಿದಲ್ಲಿ, ನೃತ್ಯ ಮತ್ತು ಸಂಗೀತಗಳೆರಡರಲ್ಲೂ ಹೆಣ್ಣುಮಕ್ಕಳು ಶತಶತಮಾನಗಳಿಂದಲೂ ತೊಡಗಿಸಿಕೊಂಡಿದ್ದರೂ, ಅವು ಮಾನವಂತ ಹೆಣ್ಣುಮಕ್ಕಳು ಅಥವಾ ಸುಸಂಸ್ಕೃತ ಮನೆತನದ ಹೆಣ್ಣುಮಕ್ಕಳು ಭಾಗವಹಿಸಬಹುದಾದ, ತಮ್ಮದಾಗಿಸಿಕೊಳ್ಳಬಹುದಾದ ಕಲೆಗಳಲ್ಲ ಎಂದೇ ಬಿಂಬಿತವಾಗಿದ್ದಂಥ ಕಲೆಗಳು. ಇಲ್ಲಿ ಮಾನವೆಂದರೆ ಅದು ಕೇವಲ ದೇಹಕ್ಕೆ ಸಂಬಂಧಿಸಿದ್ದು ಮತ್ತು ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವಷ್ಟರ ಮಟ್ಟಿಗೆ ಮಾತ್ರ. ದೈಹಿಕ ಓಡಾಟ ಕಂಡಷ್ಟು ಸುಲಭಕ್ಕೆ ಮನಸ್ಸಿನ ಓಡಾಟ ಕಾಣುವುದಿಲ್ಲವಲ್ಲ! ಆದ್ದರಿಂದ ಮಾನವೆಂದರೆ ಮಾನವನ ದೇಹ ಅದರಲ್ಲೂ ಹೆಣ್ಣಿನ ದೇಹಕ್ಕಷ್ಟೇ ಸೀಮಿತ. ಗಂಡಿನ ಸಾಧ್ಯತೆಗಳೋ ಮಾನ ಗಣನೆಗೇ ಬಾರದಷ್ಟು ಅಪರಿಮಿತ. ನಿಧಾನಗತಿಯಲ್ಲಿ ಇವುಗಳಿಗೆ ಅಂದರೆ ನೃತ್ಯ ಮತ್ತು ಸಂಗೀತಕ್ಕೆ ಈ ‘ಮಾನ’ದಿಂದ ಮೋಕ್ಷ ದೊರೆತು, ಶಾಸ್ತ್ರೀಯ ಪಟ್ಟದ ಸನ್ಮಾನ ದೊರೆಯಿತಾದರೂ, ನಟನಾರಂಗಕ್ಕೆ ಮಾತ್ರ ಇವತ್ತಿಗೂ ಆ ಸನ್ಮಾನವಿಲ್ಲ. ಆದರೆ ಕಳೆದ ಶತಮಾನದ ಪೂರ್ವದಲ್ಲಿ ಹೆಣ್ಣುಮಕ್ಕಳು, ಅದೂ ವೇಶ್ಯೆಯರೇ ರಂಗಭೂಮಿಯಲ್ಲಿ ಸಂಕೋಚಪಡುತ್ತಾ, ಪರದೆಯ ಹಿಂದೆ ಅವಿತಿಟ್ಟುಕೊಂಡು ಹಾಡುವ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದರು. ನಂತರದಲ್ಲಿ ನಿಧಾನವಾಗಿ ನೃತ್ಯ, ಅಭಿನಯಕ್ಕೆ ಕಾಲಿಟ್ಟರು. ರಂಗಭೂಮಿಯಿಂದ ಸಿನೆಮಾ ಕ್ಷೇತ್ರಕ್ಕೆ. ಹೀಗೆ ಹೆಣ್ಣುಮಕ್ಕಳಲ್ಲಿ ಧೈರ್ಯ ಮೂಡುವಂತೆ ಮಾಡಿದ ಅಂದಿನ ವೇಶ್ಯಾವೃತ್ತಿಯಲ್ಲಿದ್ದ, ಜನರ ಹೀನ ಮಾತು ದೃಷ್ಟಿಗಳನ್ನೆದುರಿಸುತ್ತಲೇ ಕಲೆಯ ಪ್ರಪಂಚದಲ್ಲಿ ಹೆಣ್ಣುಮಕ್ಕಳಿಗೆ ಸ್ಥಾನ ದೊರೆಯುವಂತೆ ಮಾಡಿದ ಆ ಕಲಾಪ್ರತಿಭೆಗಳಿಗೆ ನಾನು ಮನಸಾರೆ ವಂದಿಸುತ್ತೇನೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ತುಸು ಧೈರ್ಯವಹಿಸಿದ, ವೇಶ್ಯೆಯರಲ್ಲದ, ಕುಟುಂಬಸ್ಥ ಹೆಣ್ಣುಮಕ್ಕಳು ಅಭಿನಯದಲ್ಲಿ ತೊಡಗಿಸಿಕೊಳ್ಳತೊಡಗಿದಂತೆಯೇ, ಅದರ ಜೊತೆ ಜೊತೆಗೇ ಆಕೆ ನಡತೆಗೆಟ್ಟವಳು ಎಂಬ ಹಣೆಪಟ್ಟಿಯನ್ನು ಅಂಟಿಸಲು ಶತಪ್ರಯತ್ನಗಳು ನಡೆಯತೊಡಗಿದವು ಮತ್ತದು ಈಗಲೂ ಮುಂದುವರಿದೇ ಇದೆಯಾದರೂ ಹೆಣ್ಣು ಅದನ್ನೀಗ ನಿರ್ಲಕ್ಷಿಸಿ, ಪರ ವಿರೋಧಗಳ ನಡುವೆಯೇ ತನ್ನ ದಾರಿಯನ್ನು ತಾನು ಕಂಡುಕೊಳ್ಳತೊಡಗಿದ್ದಾಳೆ. ಅನಾದಿಕಾಲದಿಂದಲೂ ಹೆಣ್ಣೆಂದರೆ ಭೋಗದ ವಸ್ತುವೆಂದೇ ಆಕೆಯನ್ನು ನಡೆಸಿಕೊಂಡ ಅಧಿಕಾರದಾಹದ ಮನಸ್ಸುಗಳಿಗೆ ಆಕೆಯ ವಿರೋಧ ಸಹನವಾಗುವುದಾದರೂ ಹೇಗೆ? ಅದಕ್ಕಾಗಿಯೇ ಮತ್ತೆ ಮತ್ತೆ ತನ್ನ ವಿಕೃತಿಯನ್ನು ಆಕೆಯನ್ನು ಅವಮಾನಿಸುವುದರ ಮೂಲಕ, ಆಕೆಯ ಇಚ್ಛೆಯ ವಿರುದ್ಧವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಲು ಪ್ರಯತ್ನಿಸುವುದರ ಮೂಲಕ, ಲೈಂಗಿಕ ಅತ್ಯಾಚಾರವನ್ನೆಸಗುವ ಮೂಲಕ, ಹೆಣ್ಣನ್ನು ಮತ್ತೆ ಮೂಲೆಗುಂಪಾಗಿಸುವ, ಹೊಸ್ತಿಲೊಳಗಣ ಭೋಗದ ವಸ್ತುವನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಇಲೆಕ್ಟ್ರಾನಿಕ್ ಮಾಧ್ಯಮ ಎಲ್ಲರಿಗೂ ಎಟಕುವಂತಾಗಿ, ನೂರಾರು ಥರದ ಆ್ಯಪ್‌ಗಳು ಬಂದ ಮೇಲಂತೂ ಯಾವುದೋ ದೇಹಕ್ಕೆ ಯಾರದೋ ನಟಿಯ ಮುಖವನ್ನು ಅಂಟಿಸಿ ಬದ್ನಾಮ್ ಮಾಡಲು ನೋಡುವುದು, ಸಹ ನಟನೊಬ್ಬನ ಜೊತೆಗಿನ ಯಾವುದೋ ಸಿನೆಮಾದ ಇಂಟಿಮೇಟ್ ದೃಶ್ಯವನ್ನು, ನಿಜಜೀವನದ ದೃಶ್ಯವೆಂಬಂತೆ ಬಿಂಬಿಸಿ ಅಪಪ್ರಚಾರ ಮಾಡುವುದು ನಡೆದಿದೆ.

                  ಮುಕ್ತ ಮುಕ್ತ ಧಾರಾವಾಹಿಯ ಚಿತ್ರೀಕರಣದ ದೃಶ್ಯ

ಆದರೆ? ಇಂಥ ವಿಕೃತ ಮನಸ್ಸುಗಳಿಗಿಂತ, ಸಮಾನತೆಯನ್ನು ನಂಬುವ, ಕಲಾವಿದರನ್ನು ಗೌರವಿಸುವ ವಿಚಾರವಂತ ಮನಸ್ಸುಗಳ ಸಂಖ್ಯೆ ಹೆಚ್ಚಿದೆ ಎನ್ನುವುದಕ್ಕೆ, ನಾನು ಮೊದಲ ಪ್ಯಾರಾದಲ್ಲಿ ಬರೆದ ಘಟನೆ ಒಂದು ಪುಟ್ಟ ಸಾಕ್ಷಿ ಅಷ್ಟೆ. ಆದರೂ ಈ ವಿಚಾರವಂತರಲ್ಲಿ ಅನೇಕರು, ನಟಿಯೊಬ್ಬಳ ಜೊತೆಗೆ ಅಷ್ಟೇ ಅಲ್ಲ, ಯಾವುದೇ ಹೆಣ್ಣಿನ ಜೊತೆಗಿನ ಅನುಚಿತ ವರ್ತನೆ ಬೆಳಕಿಗೆ ಬಂದಾಗ, ಬಾಯಿಗೆ ಬಟ್ಟೆ ಕಟ್ಟಿಕೊಂಡು, ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಕುಳಿತುಕೊಳ್ಳುವುದು ಪರೋಕ್ಷವಾಗಿ ಆ ಹೀನ ಕೃತ್ಯಗಳಿಗೆ ಇಂಬುಕೊಡುತ್ತಿದೆ. ಹೀಗೆ ಮಾಡುವುದರ ಮೂಲಕ ತಾವೇ ತಮ್ಮ ಮನೆಯ ಹೆಣ್ಣುಜೀವಗಳ ಪ್ರತಿಭೆಗೆ, ಪ್ರಗತಿಗೆ ಮತ್ತು ಜೀವಕ್ಕೆ ಮಾರಕವಾಗುತ್ತಿದ್ದೇವೆ ಎನ್ನುವುದನ್ನು ಜನ ಮರೆತಿದ್ದಾರೆ. ಇಂತಹ ದೌರ್ಜನ್ಯದ ವಿರುದ್ಧ ದನಿ ಎತ್ತಿ ಅದನ್ನು ನಿರ್ಮೂಲ ಮಾಡಲು ಹೊರಟಿರುವವರ ಜೊತೆಗೆ ಮನೆಮನೆಯೂ ಸಾಥ್ ನೀಡುವ ಜರೂರತ್ತಿದೆ. ನಟಿ ಎಂದರೆ ಸಹನಟನಂತೆಯೇ ಆಕೆಯೂ ಪಾತ್ರಕ್ಕೆ ತಕ್ಕಂತೆ ನಟಿಸುವವಳೇ ಹೊರತು ಕಂಡ ಕಂಡವರ ಹಾಸಿಗೆಯಾಗುವವಳಲ್ಲ ಎನ್ನುವುದನ್ನು ನೆನಪಿಡಬೇಕಿದೆ. ಹೆಣ್ಣೆಂದರೆ ತನ್ನ ಭೋಗದವಸ್ತುವಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳುವ, ಮಾಡಿಕೊಡುವ ಅಗತ್ಯವಿದೆ. ಇದನ್ನು ಮರೆತರೆ, ಮುಂದೊಂದು ದಿನ ನಿಮ್ಮನೆಯ ಪ್ರತಿಭಾವಂತ ಹೆಣ್ಣುಮಗು ಯಾರದೋ ವಿಕೃತಿಯ ದಾಹಕ್ಕೆ ತುತ್ತಾಗುವುದಿಲ್ಲ ಎಂದು ಯಾವ ಭರವಸೆ? ಎಲ್ಲವೂ ತಿಳಿದೂ ತಿಳಿದೂ ಸುಮ್ಮನಿರುವುದು ಇದ್ಯಾವ ವರಸೆ?!

ಮಾನವೆಂದರೆ ಮಾನವನ ದೇಹ ಅದರಲ್ಲೂ ಹೆಣ್ಣಿನ ದೇಹಕ್ಕಷ್ಟೇ ಸೀಮಿತ. ಗಂಡಿನ ಸಾಧ್ಯತೆಗಳೋ ಮಾನ ಗಣನೆಗೇ ಬಾರದಷ್ಟು ಅಪರಿಮಿತ. ನಿಧಾನಗತಿಯಲ್ಲಿ ಇವುಗಳಿಗೆ ಅಂದರೆ ನೃತ್ಯ ಮತ್ತು ಸಂಗೀತಕ್ಕೆ ಈ ‘ಮಾನ’ದಿಂದ ಮೋಕ್ಷ ದೊರೆತು, ಶಾಸ್ತ್ರೀಯ ಪಟ್ಟದ ಸನ್ಮಾನ ದೊರೆಯಿತಾದರೂ, ನಟನಾರಂಗಕ್ಕೆ ಮಾತ್ರ ಇವತ್ತಿಗೂ ಆ ಸನ್ಮಾನವಿಲ್ಲ.

ಒಂದೆಡೆ ಹೆಣ್ಣೊಬ್ಬಳ ಪ್ರತಿಭೆಯನ್ನು ಕಂಡು ಮೆಚ್ಚಿ ಗೌರವಿಸುವ ಜನ ಸಮೂಹ, ಇನ್ನೊಂದೆಡೆ ಅದೇ ಪ್ರತಿಭೆಯನ್ನು ಹೆಣ್ಣೆಂಬ ಕಾರಣಕ್ಕೇ ಲೈಂಗಿಕವಾಗಿ ಶೋಷಿಸಲೆತ್ನಿಸುವ, ಸಾಧ್ಯವಾದಲ್ಲಿ ಅತ್ಯಾಚಾರವನ್ನೆಸಗಿಯೂ ಬಿಡುವ ಜನ! ಅದರಲ್ಲೂ ಆಕೆ ನಟಿಯಾಗಿದ್ದರಂತೂ ಈ ಶೋಷಣೆಯ ಪ್ರಮಾಣ ಇನ್ನೂ ಹೆಚ್ಚು ಹಾಗೂ ತೀವ್ರ! ಅದೆಷ್ಟು ಸಸಾರ ಈ ಲೋಕಕ್ಕೆ ಹೆಣ್ಣೆಂದರೆ, ಅದೆಷ್ಟು ಸಸಾರ ನಟಿ ಎಂದರೆ!

 

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)