ದಿಲ್ಲಿ ದರ್ಬಾರ್
ರಾಥೋಡ್‌ರನ್ನೂ ಬಿಡದ ಬಿಜೆಪಿ
ರಾಜಸ್ಥಾನ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂದರೆ, ರಾಜಸ್ಥಾನ ಮೂಲದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರಿಗೆ ಗೋವಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಭಾಗವಹಿಸಲು ಕೂಡಾ ಅವಕಾಶ ನೀಡಲಿಲ್ಲ. ಚಲನಚಿತ್ರೋತ್ಸವ ಇತಿಹಾಸದಲ್ಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಗೈರುಹಾಜರಾದ ನಿದರ್ಶನ ಇಲ್ಲ. ಮೊಟ್ಟಮೊದಲ ಬಾರಿ ಮಾಹಿತಿ ಸಚಿವರ ಗೈರುಹಾಜರಿಗೆ ಬಿಜೆಪಿ ಕಾರಣವಾಗಿದೆ. ಏಕೆಂದರೆ ಅದು ರಾಜಸ್ಥಾನದಲ್ಲಿ ಹಿನ್ನಡೆಯ ಭೀತಿಯಲ್ಲಿದೆ. ಪ್ರಸಾರಖಾತೆ ಸಚಿವರ ಬದಲು ಚಿತ್ರೋತ್ಸವ ಸಮಾರೋಪದಲ್ಲಿ ಕೇಂದ್ರ ಸಚಿವರಾದ ಕೆ.ಜೆ.ಅಲ್ಫೋನ್ಸ್ ಮತ್ತು ಶ್ರೀಪಾದ ನಾಯಕ್ ಪಾಲ್ಗೊಂಡರು. ಗೋವಾ ಮತ್ತು ಪಂಜಾಬ್ ರಾಜ್ಯಪಾಲರಾದ ಮೃದುಲಾ ಸಿನ್ಹಾ ಮತ್ತು ವಿ.ಪಿ.ಸಿಂಗ್ ಬಡ್ನೋರೆ, ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಖಾತೆ ರಾಜ್ಯ ಸಚಿವ ವಿಜಯ್ ಸರ್‌ದೇಸಾಯಿ ಅವರೂ ಭಾಗವಹಿಸಿದ್ದರು. ಬಿಜೆಪಿ ಸಂಸದ ಮನೋಜ್ ತಿವಾರಿ ಅವರೂ ಇತರ ಗಣ್ಯರ ಜತೆ ವೇದಿಕೆ ಹಂಚಿಕೊಂಡರು. ರಾಜಸ್ಥಾನದ ರಜಪೂತರು, ಅದರಲ್ಲೂ ಮುಖ್ಯವಾಗಿ ಸಮುದಾಯದ ಮುಖಂಡರು ಹೇಳುವಂತೆ ತಮ್ಮ ವಿವಿಧ ಸಂಕಷ್ಟಗಳಿಗೆ ಕಾರಣವಾದ ವಸುಂಧರ ರಾಜೇ ಅವರಿಗೆ ಪಾಠ ಕಲಿಸಲು ಸಮುದಾಯ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಜಪೂತ ಸಮುದಾಯಕ್ಕೆ ಸೇರಿದ ರಾಜ್ಯವರ್ಧನ್ ಅವರು ಸಾಧ್ಯವಾದಷ್ಟೂ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜನಾಂಗದ ಮನವೊಲಿಸುವಂತೆ ಬಿಜೆಪಿ ತಂತ್ರ ಹೂಡಿತ್ತು. ಆದ್ದರಿಂದ ಗೋವಾದಲ್ಲಿ ಚಲನಚಿತ್ರೋತ್ಸವಕ್ಕೆ ತೆರಳುವ ಬದಲು ರಾಜ್ಯದಲ್ಲಿದ್ದುಕೊಂಡೇ ರಾಜ್ಯವರ್ಧನ್ ಹೋರಾಡಲಿ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.
ದಿಗ್ವಿಜಯ್ ವಿಶ್ವಾಸ
ರಾಜ್ಯವರ್ಧನ ಸಿಂಗ್ ರಾಥೋಡ್ ರಾಜಸ್ಥಾನದಲ್ಲಿ ಪಕ್ಷಕ್ಕೆ ಮುಖಭಂಗ ತಪ್ಪಿಸಲು ಹೋರಾಡುತ್ತಿದ್ದರೆ, ಮತ್ತೊಬ್ಬ ರಜಪೂತ ನಾಯಕ ದಿಗ್ವಿಜಯ ಸಿಂಗ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಮುಗಿದು ಎಲ್ಲ ನೇತಾರರು ಆರಾಮವಾಗಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗದ ಸಿಂಗ್ ಇತ್ತೀಚೆಗೆ ಭೋಪಾಲ್‌ನ ಕಾಫಿಹೌಸ್‌ನಲ್ಲಿ ಪತ್ರಕರ್ತರ ಜತೆ ಕಾಫಿ ಹೀರುತ್ತಾ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು. ಪ್ರತಿ ಕ್ಷೇತ್ರಗಳ ಬಗ್ಗೆಯೂ ಪತ್ರಕರ್ತರ ಜತೆ ವಾದಕ್ಕೆ ಇಳಿದು, ಅವುಗಳನ್ನು ಗೆಲ್ಲುವ ಮೂಲಕ ಪಕ್ಷ ಹೇಗೆ ಬಹುಮತ ರೇಖೆ ದಾಟಲಿದೆ ಎಂಬ ಪ್ರತಿಪಾದನೆ ಮಾಡುತ್ತಿದ್ದರು. ಈ ಮಧ್ಯೆ ರಾಜ್ಯದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕಮಲ್‌ನಾಥ್, ರಾಜ್ಯದಲ್ಲಿ ಕಾಂಗ್ರೆಸ್‌ನ ಸಾಧ್ಯತೆಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲು ದಿಲ್ಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರನ್ನು ರಾಜಸ್ಥಾನ ಚುನಾವಣಾ ಪ್ರಚಾರಕ್ಕೆ ಆ ಪಕ್ಷ ನಿಯೋಜಿಸಿದೆ. ಆದರೆ ದಿಗ್ವಿಜಯ್ ಅವರ ವಿಶ್ವಾಸವನ್ನು ನೋಡಿದರೆ, ಕಾಂಗ್ರೆಸ್‌ಗೆ ಅವಕಾಶವಿದೆ ಎಂದು ಖಚಿತವಾಗುತ್ತದೆ. ಆದರೆ ದಿಗ್ವಿಜಯ್ ಅವರಿಗೆ ವಿಶ್ವಾಸದ ಕೊರತೆ ಇಲ್ಲ; ಬದಲಾಗಿ ಅತಿಯಾದ ಆತ್ಮವಿಶ್ವಾಸವಿದೆ ಎನ್ನುವುದು ಪತ್ರಕರ್ತರೊಬ್ಬರ ಅನಿಸಿಕೆ. ಮಧ್ಯಪ್ರದೇಶದ ಭವಿಷ್ಯ ಏನಾಗುತ್ತದೆ ಎಂದು ತಿಳಿಯಲು ಡಿಸೆಂಬರ್ 11ರವರೆಗೂ ಕಾಯಬೇಕು.
ಗೊಗೋಯಿ ಅನಿವಾರ್ಯತೆ
ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ತಮ್ಮ ಕಾರ್ಯಾಚರಣೆ ಬಿರುಸುಗೊಳಿಸಿದಂತಿದೆ. ಈ ಕಾರಣದಿಂದಲೇ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗಳಿಗೆ ಕೊಲಿಜಿಯಂ ಶಿಫಾರಸು ಮಾಡಿ, ಕೇಂದ್ರದ ಮುಂದೆ ಬಾಕಿ ಉಳಿದಿದ್ದ ಹಲವು ಪ್ರಕರಣಗಳನ್ನು ಸರಕಾರ ಕ್ಷಿಪ್ರವಾಗಿ ವಿಲೇವಾರಿ ಮಾಡಿದೆ. ಇದರ ಜತೆಜತೆಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮಲಯ್ ಕುಮಾರ್ ಡೇ, ನ್ಯಾಯಮೂರ್ತಿ ಗೊಗೋಯಿ ಅವರಿದ್ದ ಪೀಠದ ಮುಂದೆ ಹಾಜರಾದಾಗ ಸ್ವಾರಸ್ಯಕರ ಪ್ರಸಂಗಕ್ಕೆ ಕೋರ್ಟ್ ಸಾಕ್ಷಿಯಾಯಿತು. ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಕೋರ್ಟ್ ಹಾಲ್ ನಿರ್ಮಿಸುವಲ್ಲಿ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸಾಕಷ್ಟು ವಸತಿಗೃಹಗಳನ್ನು ನಿರ್ಮಿಸಿಕೊಡಲು ವಿಫಲವಾದ ಬಗ್ಗೆ ಅಲ್ಲಿನ ಸರಕಾರ ಹಾಗೂ ಕೋಲ್ಕತಾ ಹೈಕೋರ್ಟನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸುವಾಗ ಹಲವು ಬಾರಿ ಡೇ ಅವರು ಮುಖ್ಯ ನ್ಯಾಯಮೂರ್ತಿಗಳನ್ನು ತಪ್ಪಾಗಿ ‘ಮೇಡಂ’ ಎಂದು ಸಂಬೋಧಿಸಿದರು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಸಾಮಾನ್ಯವಾಗಿ ‘ಮೇಡಂ’ ಎಂದು ಸಂಬೋಧಿಸಿ ರೂಢಿಯಾದ ಹಿನ್ನೆಲೆಯಲ್ಲಿ ಡೇ, ಸುಪ್ರೀಂಕೋರ್ಟ್‌ನಲ್ಲೂ ‘ಮೇಡಂ’ ಎಂದು ಸಂಬೋಧಿಸುತ್ತಿರಬೇಕು ಎಂದು ಕೆಲವರು ವಿಶ್ಲೇಷಿಸಿದರು. ಆದರೆ ನ್ಯಾಯಮೂರ್ತಿ ಗೊಗೋಯಿ ಅವರು, ತಮ್ಮನ್ನು ಡೇ ‘ಮೇಡಂ’ ಎಂದು ಸಂಬೋಧಿಸಿದ್ದನ್ನು ಮುಗುಳ್ನಗೆಯಿಂದಲೇ ಸ್ವೀಕರಿಸಿದರು.
ಉಮಾ ರಾಜಕೀಯ ತಿರುವು
2019ರ ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಶ್ಮ್ಮಾ ಸ್ವರಾಜ್ ಘೋಷಿಸಿದ ಎರಡು ವಾರಗಳಲ್ಲಿ ಮತ್ತೊಬ್ಬ ಸಚಿವೆ ಉಮಾಭಾರತಿ ಕೂಡಾ ಚುನಾವಣಾ ರಾಜಕೀಯದಲ್ಲಿ ಮುಂದುವರಿಯುವ ಇಚ್ಛೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರದಿಂದ ಉಮಾಭಾರತಿ 2014ರಲ್ಲಿ ಗೆದ್ದಿದ್ದರು. ಆದರೆ ಮಧ್ಯಪ್ರದೇಶ ಚುನಾವಣೆ ವೇಳೆ ಈ ಘೋಷಣೆ ಮಾಡದೆ, ಚುನಾವಣಾ ಪ್ರಚಾರ ಮುಗಿದ ಬಳಿಕ ಉಮಾಭಾರತಿ ತಮ್ಮ ನಿರ್ಧಾರ ಪ್ರಕಟಿಸಿದರು. ಆದರೆ ಸುಶ್ಮ್ಮಾ ಅವರ ಪ್ರಕರಣದ ಅರಿವು ಪಕ್ಷದ ವರಿಷ್ಠರಿಗೆ ಇದ್ದಂತೆ ಉಮಾಭಾರತಿ ವಿಚಾರ ಮುಖಂಡರ ಗಮನಕ್ಕೆ ಬಂದಿರಲಿಲ್ಲ. ಹಿಂದಿನಂತೆ ತೀರಾ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ತಮಗೆ ಸಾಧ್ಯವಿಲ್ಲ. ಆದ್ದರಿಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಬಯಸಿದ್ದಾಗಿ ಉಮಾ ಹೇಳಿಕೊಂಡಿದ್ದಾರೆ. ಈ ಉಕ್ಕಿನ ಮಹಿಳೆ ದಿಢೀರ್ ನಿರ್ಧಾರ ಕೈಗೊಳ್ಳಲು ಏನು ಕಾರಣ ಎನ್ನುವ ಬಗ್ಗೆ ಬಿಜೆಪಿ ವಲಯದಲ್ಲಿ ಊಹಾಪೋಹಗಳು ಸುಳಿದಿವೆ. ಮತ್ತೆ ಕೆಲವರು, ಉಮಾ ಹಾಗೂ ಸುಶ್ಮ್ಮಾ ನೀಡಿದ ಕಾರಣಗಳು ಸಮರ್ಪಕವಾಗಿಯೇ ಇವೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇತರ ನಾಯಕರು 2019ರ ಕಣದಲ್ಲಿ ಇಲ್ಲದಿರುವುದರಿಂದ ತಾವು ಕೂಡಾ ಕಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಉಮಾ ಹಾಗೂ ಸುಶ್ಮ್ಮಾ ಬಂದಿದ್ದಾರೆಯೇ?
ಅಕ್ಬರ್ ಅವರ ಪ್ರಭಾವಿ ಮಿತ್ರರು
ಕೇಂದ್ರ ಸಚಿವರಾಗಿದ್ದ ಎಂ.ಜೆ.ಅಕ್ಬರ್ ಅವರ ವಿರುದ್ಧದ ಲೈಂಗಿಕ ದುರ್ನಡತೆ ಆರೋಪಗಳ ಬಳಿಕ, ಅವರು ಪದತ್ಯಾಗ ಮಾಡುವುದು ಅನಿವಾರ್ಯವಾಯಿತು. ಆದರೆ ಈಗ ಕೂಡಾ ಪ್ರಭಾವಿ ಸ್ಥಳಗಳಲ್ಲಿ ಅವರಿಗೆ ಸಾಕಷ್ಟು ಸ್ನೇಹಿತರು ಇದ್ದಂತಿದೆ. ದಿಲ್ಲಿಯ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಅಂಕಣ ಬರೆದ ಅವರು, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸದಸ್ಯರಾಗಿ ಮುಂದುವರಿದಿದ್ದಾರೆ. ಇವರು ಗಿಲ್ಡ್‌ನ ಮಾಜಿ ಅಧ್ಯಕ್ಷ. ಮೀಟೂ ಆರೋಪ ಕೇಳಿಬಂದ ಬಳಿಕ, ಈ ಕೂಟದಿಂದ ಅವರನ್ನು ಉಚ್ಚಾಟಿಸಬೇಕು ಎಂಬ ಕೂಗು ಕೇಳಿಬಂತು ಹಾಗೂ ಈ ಬಗ್ಗೆ ಚರ್ಚೆಗಳೂ ನಡೆದವು. ಆದರೆ ಗಿಲ್ಡ್ ಈ ನಿರ್ಧಾರವನ್ನು ಕೋರ್ಟ್ ಕೈಗೊಳ್ಳಲಿ ಎಂಬ ಅಭಿಪ್ರಾಯಕ್ಕೆ ಬಂತು. ಅಕ್ಬರ್ ವಿರುದ್ಧ ಆರೋಪ ಮಾಡಿದ ಹಲವು ಮಂದಿ ಮಹಿಳೆಯರು ಪತ್ರಿಕೆಗಳ ಮೂಲಕ ಮತ್ತು ಗಿಲ್ಡ್‌ಗೆ ನೇರವಾಗಿಯೂ ಒತ್ತಡ ತಂದಿದ್ದಾರೆ. ಆದರೆ ಅಕ್ಬರ್ ತಮ್ಮದೇ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದು, ಸೂಕ್ತ ಸ್ಥಳಗಳಲ್ಲಿ ಇಂದಿಗೂ ಒಳ್ಳೆಯ ಸ್ನೇಹಿತರನ್ನು ಹೊಂದಿರುವ ಅವರ ವಿರುದ್ಧ ಎಷ್ಟೇ ಗಂಭೀರ ಆರೋಪಗಳು ಬಂದರೂ ಇದರಿಂದ ಹೊರಬರುವುದು ಕಷ್ಟವಾಗದು.