varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಸ್ವಾಮಿ ಅಗ್ನಿವೇಶ್ ಜೊತೆ ಒಂದು ಸಂದರ್ಶನ

ಬಸವಣ್ಣನ ಹೋರಾಟ ನಮಗೆ ಮಾದರಿಯಾಗಲಿ

ವಾರ್ತಾ ಭಾರತಿ : 9 Dec, 2018

        ಬಿ.ಶ್ರೀಪಾದ ಭಟ್

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ 1966ರಲ್ಲಿ ಜನಿಸಿದ ಇವರು, ಸಿರಗುಪ್ಪ, ಹೊಸಪೇಟೆ, ಬಳ್ಳಾರಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ರಾಯಚೂರಿನಲ್ಲಿ ಬಿಇ ಪದವಿ ಪಡೆದವರು. ವೃತ್ತಿಯಲ್ಲಿ ಇಂಜಿನಿಯರ್ ಆದರೂ, ಸಾಮಾಜಿಕ ಮತ್ತು ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡು, ಸಮಾಜಪರ ಚಿಂತನೆಯಲ್ಲಿ ತೊಡಗಿಸಿಕೊಂಡವರು. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯಲ್ಲಿ ತೊಡಗಿಸಿಕೊಂಡದ್ದು, ದಲಿತ ಉದ್ಯಮಶೀಲತೆ ಶಿಬಿರಗಳನ್ನು ಸಂಘಟಿಸುವಲ್ಲಿಯೂ ಆಸಕ್ತರು. ‘ವಿಮೋಚಕಿಯ ಕನಸುಗಳು: ಸಾವಿತ್ರಿಬಾಯಿ ಫುಲೆ ಬದುಕುಹೋರಾಟ’, ‘ಹುಲಿಯ ನೆರಳಿನೊಳಗೆ: ನಾಮದೇವ್ ನಿಂಗಾಡೆ ಅವರ ಆತ್ಮಕಥೆ’, ‘ಬಹುಸಂಖ್ಯಾತವಾದ’ ಇವರ ಅನುವಾದ ಕೃತಿಗಳು. ‘ಹಿಂದುತ್ವರಾಜಕಾರಣ’, ‘ಬಿಸಿಲ ಬಯಲು ನೆಳಲು’ ಎಂಬ ಚಿಂತನಾರ್ಹ ಕೃತಿಗಳನ್ನು ನೀಡಿರುವ ಇವರು ಸಿನೆಮಾ, ಸಂಗೀತ ಮತ್ತು ಪುಸ್ತಕಗಳ ಅಧ್ಯಯನದಲ್ಲಿ ಆಸಕ್ತಿ ಇರಿಸಿಕೊಂಡವರು. ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡುತ್ತಿರುವವರು. ಆರ್ಯ ಸಮಾಜದ ಬೆಳಕಿನ ಕಿಡಿಯಾಗಿ ಹೊರಹೊಮ್ಮಿದ ಸ್ವಾಮಿ ಅಗ್ನಿವೇಶ ಅವರನ್ನು ಇಲ್ಲಿ ಮುಖಾಮುಖಿಯಾಗಿಸಿದ್ದಾರೆ. ತಮ್ಮ ಪ್ರಶ್ನೆಗಳ ಮೂಲಕ ಅಗ್ನಿವೇಶರ ತಾತ್ವಿಕ ನೆಲೆಗಳ ಆಳವನ್ನು ತಲುಪುವ ಪ್ರಯತ್ನವನ್ನು ಮಾಡಿದ್ದಾರೆ.

ಮಹರ್ಷಿ ದಯಾನಂದರು ಕೇವಲ ಗೋವಿನ ಬಗ್ಗೆ ಮಾತನಾಡಲಿಲ್ಲ. ಅವರು ಗೋವು, ಇತ್ಯಾದಿ ಪಶುಗಳ ರಕ್ಷಣೆ ಕುರಿತು ಮಾತನಾಡುತ್ತಾರೆ. ಅವರು ಎಲ್ಲಾ ಜೀವಿಗಳನ್ನು ರಕ್ಷಿಸಬೇಕೆಂದು ಹೇಳುತ್ತಾರೆ. ಇಲ್ಲಿ ಅವರು ಗೋವನ್ನು ಕೇವಲ ಸಾಂಕೇತಿಕವಾಗಿ ಬಳಸುತ್ತಾರೆ. ಇಲ್ಲಿ ಗೋವನ್ನು ಸಂಕೇತವಾಗಿ ಬಳಸಿ ಅದರಲ್ಲಿ ಎಲ್ಲ ಪಶು, ಪಕ್ಷಿಗಳನ್ನು ಒಳಗೊಂಡವು. ದಯಾನಂದರು ತಮ್ಮ ‘ಗೋ ಕರುಣಾನಿಧಿ’ ಎನ್ನುವ ಜನಪ್ರಿಯ ಪುಸ್ತಕದಲ್ಲಿ ಪದೇ ಪದೇ ಗೋವು, ಇತ್ಯಾದಿ ಪಶು ಎಂದೇ ಸಂಬೋಧಿಸುತ್ತಾರೆ. ‘ಒಮ್ಮೆಯೂ ಗೋಮಾತೆ’ ಎನ್ನುವ ಶಬ್ದ ಬಳಸುವುದಿಲ್ಲ. ಅವರು ಗೋವಿನ ಬಗ್ಗೆ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗುವುದಿಲ್ಲ.

 

►ವಾರ್ತಾಭಾರತಿ ದಿನಪತ್ರಿಕೆಯ ಪರವಾಗಿ ನಿಮಗೆ ಸ್ವಾಗತ. ಈ ದಿನ (5.9.2018) ನೀವು ಗೌರಿ ಲಂಕೇಶ್‌ರ ನೆನಪಿನ ಕಾರ್ಯಕ್ರಮಕ್ಕೆ ಬಂದಿದ್ದೀರಿ. ನಿರಂಕುಶ ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧ ಹೋರಾಡಿದ ಗೌರಿಯವರ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಯಿತು. ಇದೇ ಪ್ರಭುತ್ವದ ದೌರ್ಜನ್ಯದ ಬಲಿಪಶುವಾಗಿರುವ ನಿಮ್ಮ ಜೊತೆ ‘ವಾರ್ತಾಭಾರತಿ’ ಕೆಲ ವಿಷಯಗಳ ಕುರಿತಾಗಿ ಚರ್ಚಿಸಲು ಬಯಸಿದೆ.

- ಇಂದು ಹೊಸ ವಿಚಾರವನ್ನು ನಾವು ಬೆಳೆಸಬೇಕು. ಇಲ್ಲಿ ನಮ್ಮನ್ನು ಒಡೆಯಬೇಡಿರಿ. ಬಹಳಷ್ಟು ಕಾಲದಿಂದ ನಡೆಯುತ್ತಿರುವ ಈ ಆತಂಕಕಾರಿ ಘಟನೆಗಳು ತುಂಬ ಅಪಾಯಕಾರಿಯಾಗಿವೆ. ನಾವು ಇದರ ವಿರುದ್ಧ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿಲ್ಲ.

►ಅಂದರೆ ಐಕ್ಯತೆಯ ಕೊರತೆ? ಪ್ರಜ್ಞಾವಂತರಲ್ಲಿ ಏಕತೆಯ ಬಿಕ್ಕಟ್ಟು ಇದೆಯಲ್ಲವೇ?

- ಐಕ್ಯತೆಯೂ ಇಲ್ಲ. ರಾಜಕೀಯವಾಗಿಯೂ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ನಾವು ಮತ್ತಷ್ಟ್ಟು ಹಿಂದಕ್ಕೆ ಸಾಗುತ್ತಿದ್ದೇವೆ. ಜಾತಿ ಆಧಾರಿತ, ಮತೀಯತೆ ಆಧಾರಿತ ರಾಜಕಾರಣ ಮೇಲುಗೈ ಸಾಧಿಸಿದೆ. ಎಲ್ಲರೂ ಜಾತಿ, ಕೋಮುವಾದದ ರಾಜಕಾರಣ ಮಾಡುತ್ತಿದ್ದಾರೆ. ಕೆಲವು ಜಾಸ್ತಿ, ಕೆಲವು ಕಡಿಮೆ, ಅಷ್ಟೇ ವ್ಯತ್ಯಾಸ. ಜಾಸ್ತಿ ಮಾಡುವವರನ್ನು ಕೆಟ್ಟವರು ಎಂದು ಕರೆಯುತ್ತೇವೆ, ಕಡಿಮೆ ಮಾಡುವವರನ್ನು ಪರವಾಗಿಲ್ಲ ಎಂದು ಸಮಾಧಾನ ಪಡುತ್ತಿದ್ದೇವೆ.

►ಇದಕ್ಕೆ ನಾವು ಏನು ಮಾಡಬೇಕು? ನೀವು ಕಳೆದ ಐವತ್ತು ವರ್ಷಗಳಿಂದ ಸೌಹಾರ್ದ ಸಮಾಜಕ್ಕಾಗಿ ಶ್ರಮಿಸುತ್ತಿದ್ದೀರಿ, ಈಗ ಕೂಡಲೇ ಮಾಡಬೇಕಾದ ಕಾರ್ಯವೇನು?

-ನಾವು ಮಕ್ಕಳ ಬಳಿ, ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ ಬಳಿ ಹೋಗಬೇಕು. ಅವರು ತಮ್ಮ ಶಾಖೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ನಾವು ಅದನ್ನು ಮಾಡಬೇಕಾಗಿಲ್ಲ. ಶಾಲೆಯಲ್ಲಿ ಮಕ್ಕಳಿರುತ್ತಾರೆ. ಇವರಿಗೆ ಈ ಹೊಸ ವಿಚಾರಗಳ ಕುರಿತು ಅರಿವು ಮೂಡಿಸಬೇಕು.

►ಸರ್, ನಾನು ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನಲ್ಲಿ ಕೆಲವು ಪ್ರಶ್ನೆಗಳಿವೆ. ನಿಮಗೆ ಈ ಪ್ರಶ್ನೆಗಳನ್ನು ಅನೇಕ ಬಾರಿ ಕೇಳಿರಬಹುದೇನೊ. ಆದರೂ ಮತ್ತೆ ಕೇಳುವ ಅನಿವಾರ್ಯ ಇದೆ. ನೀವು ಮೂಲಭೂತವಾಗಿ ಆರ್ಯ ಸಮಾಜದ ಸಂಘಟಕ, ಪ್ರಚಾರಕರು. ಹಿಂದೂಯಿಸಂ ತತ್ವಗಳನ್ನು, ಪಠ್ಯವನ್ನು ಬೋಧಿಸುತ್ತೀರಿ. ನಿಮ್ಮನ್ನು ಹಿಂದೂ ಸ್ವಾಮಿ ಯೆಂದೇ ಪರಿಗಣಿಸಲಾಗುತ್ತದೆ. ನೀವು ಕೇಸರಿ ಬಟ್ಟೆಯನ್ನು ತೊಡುತ್ತೀರಿ. ಆದರೂ ಹಿಂದುತ್ವವಾದಿ ಸಮರ್ಥಕರು ನಿಮ್ಮ ಮೇಲೆ ಯಾಕೆ ಹಲ್ಲೆ ನಡೆಸಿದರು?

- ನಿಮ್ಮ ಈ ಪ್ರಶ್ನೆಗೆ ನಾನು ಮತ್ತೊಂದು ಪ್ರಶ್ನೆ ಕೇಳ ಬಯಸುತ್ತೇನೆ. ಈಗ ಹೇಳಲಾಗುತ್ತಿರುವ ಹಿಂದೂ ಸಮಾಜದ ಬಲು ದೊಡ್ಡ ಸುಧಾರಕ, ಆರ್ಯ ಸಮಾಜದ ಸ್ಥಾಪಕ ದಯಾನಂದ ಸ್ವಾಮಿಗಳು ಯಾಕೆ ಹತ್ಯೆಗೀಡಾದರು? ಅವರನ್ನು ಯಾಕೆ ಕೊಲೆ ಮಾಡಲಾಯಿತು? ಅವರ 59ನೇ ವಯಸ್ಸಿನಲ್ಲಿ ವಿಷ ನೀಡಿ ಕೊಲ್ಲಲಾಯಿತು. ಅವರ ಮೇಲೆ ಹಿಂದೆ 16 ಬಾರಿ ಕೊಲೆ ಯತ್ನ ನಡೆಸಲಾಯಿತು. ಆದರೆ 17ನೇ ಪ್ರಯತ್ನದಲ್ಲಿ ಕೊಲೆ ಮಾಡುವಲ್ಲಿ ಯಶಸ್ವಿಯಾದರು. ತೀವ್ರವಾದಿ ಹಿಂದೂ ಶಕ್ತಿಗಳು ಈ ಕೊಲೆಯನ್ನು ಮಾಡಿವೆ. ಈ ಶಕ್ತಿಗಳಿಗೆ ಸಮಾನತೆ ಬೇಕಾಗಿರಲಿಲ್ಲ. ಅವರಿಗೆ ಜಾತಿ ಪದ್ಧತಿ ಮುಂದುವರಿಯಬೇಕಿತ್ತು. ವಿಧವಾ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಧರ್ಮದ ಹೆಸರಿನಲ್ಲಿ, ವೇದಗಳ ಹೆಸರಿನಲ್ಲಿ ಮುಂದುವರಿಸಿಕೊಂಡು ಹೋಗಬೇಕಾಗಿತ್ತು. ಆದರೆ ತಮ್ಮ ಸಂಕುಚಿತ ಕೋಮುವಾದಿ ಹಿತಾಸಕ್ತಿಗಾಗಿ ಈ ಶಕ್ತಿಗಳು ನಮ್ಮ ಭವ್ಯ ಪರಂಪರೆಯನ್ನು ಸಾರುವ ವೇದಗಳನ್ನು ಹೈಜಾಕ್ ಮಾಡಿದವು. ಸ್ವಾಮಿ ದಯಾನಂದ ಬಂದು ಇದನ್ನು ವಿರೋಧಿಸಿದ್ದರು.

►ದಯಾನಂದ ಸ್ವಾಮಿಗಳು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದರಾ?

- ವೇದಗಳನ್ನು ಎಲ್ಲರಿಗೂ ಕಲಿಸಬೇಕು. ಕೇವಲ ಬ್ರಾಹ್ಮಣರು ಮಾತ್ರವಲ್ಲ. ಎಲ್ಲರೂ ಅಧ್ಯಯನ ಮಾಡಬೇಕು. ಆ ಕಾಲದಲ್ಲಿ ಈ ವೇದಗಳ ಅಧ್ಯಯನವನ್ನು ಬ್ರಾಹ್ಮಣರು ತಮಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರು. ಮಹಿಳೆಯರು, ಶೂದ್ರರಿಗೂ ಈ ಅವಕಾಶ ಕೊಡಲಿಲ್ಲ. ಸ್ವಾಮಿ ದಯಾನಂದರು ಈ ಬಾಗಿಲನ್ನು ಎಲ್ಲರಿಗೂ ತೆರೆದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದರು. ಈ ಅಧ್ಯಯನವನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿದರು. ಬೋಧಿಸಿದರು. ಅದಕ್ಕೂ ಹಿಂದೆ ಈ ಜನರ ಭಾಷೆ(ಹಿಂದಿ)ಯನ್ನು ಬಳಸುತ್ತಿರಲಿಲ್ಲ. ಅವರ ಸುಧಾರಣೆಯು ಕ್ರಾಂತಿಕಾರಿಯಾಗಿದೆ. ಇದರ ಮೂಲಕ ಹುಟ್ಟಿನ ಆಧಾರದ ಮೇಲೆ ಜಾತಿ ಪದ್ಧತಿಯನ್ನು ನಿರಾಕರಿಸಿದರು. ಮಹಿಳೆಯರ ಬಗ್ಗೆ ಅಸಮಾನತೆ ಇರಬಾರದು ಎಂದು ಬೋಧಿಸಿದರು. ಎಲ್ಲವನ್ನೂ ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಅಧ್ಯಯನ ಮಾಡಿದರು. ಅರಬಿಂದೊರಂತಹ ದಾರ್ಶನಿಕರು ಸ್ವಾಮಿ ದಯಾನಂದರನ್ನು ಪ್ರಶಂಸಿದರು. ಆದರೆ ಈ ಜಾತಿ ಪದ್ಧತಿ, ಅಸಮಾನತೆಯನ್ನು ತಮ್ಮ ಹೊಟ್ಟೆಪಾಡು ಮಾಡಿಕೊಂಡವರು, ಪೂಜಿಸಿದವರು, ಆಚರಿಸಿದವರು ಇದನ್ನು ವಿರೋಧಿಸಿದರು.

   ಸ್ವಾಮಿ ದಯಾನಂದ ಸರಸ್ವತಿ

►ಅಧಿಕಾರದ ಮೆಟ್ಟಿಲುಗಳಾಗಿ, ಶಕ್ತಿ ಕೇಂದ್ರಗಳನ್ನಾಗಿ ಮಾಡಿಕೊಂಡವರು ಸಹ ಇದನ್ನು ಬೆಂಬಲಿಸಿದರಲ್ಲವೇ? ಇದು ಈಗಲೂ ಮುಂದುವರಿಯುತ್ತಿದೆ?

- ಹೌದು ಶಕ್ತಿಕೇಂದ್ರಗಳು ಈ ಸುಧಾರಣೆಯನ್ನು ವಿರೋಧಿಸಿದರು. ದಯಾನಂದ ಸರಸ್ವತಿಯವರು ಈ ಸಾಂಪ್ರದಾಯಿಕತೆಯನ್ನು ವಿರೋಧಿಸಿದಾಗ ಈ ಸಂಪ್ರದಾಯವಾದಿಗಳು ಅವರ ಮೇಲೆ 17 ಬಾರಿ ಹಲ್ಲೆ ಮಾಡಿದರು. ಕೊನೆಗೂ ಕೊಲೆ ಮಾಡಿದರು. ಒಂದನ್ನು ನೀವು ನೆನಪಿಟ್ಟುಕೊಳ್ಳಬೇಕು. ಮಹಾತ್ಮಾ ಗಾಂಧಿಯವರ ಇಡೀ ಬದುಕು ಶಾಂತಿಯನ್ನು ಒಳಗೊಂಡಿತ್ತು. ಗಾಂಧಿ ತಮ್ಮನ್ನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌ರನ್ನು ಪ್ರೀತಿಸುತ್ತಿದ್ದರು. ಅವರ ಹಕ್ಕಗಳಿಗಾಗಿ ಹೋರಾಡಿದರು. ಮಾನವೀಯತೆಯ ಜೊತೆ ಜೊತೆಗೆ ಬೆಳೆಯುತ್ತ ಹೋದರು. ಅವರ ಮೇಲೆಯೂ ಹಲ್ಲೆ ಮಾಡಲಾಯಿತು. ಅವರನ್ನು ಹತ್ಯೆ ಮಾಡಲಾಯಿತು. ಯಾಕೆ? ಅದೇ ಹಿಂದುತ್ವ ಶಕ್ತಿಗಳು ಕೊಲೆ ಮಾಡಿದವು. ನಾಥುರಾಂ ಗೋಡ್ಸೆ ತಾನು ಹಿಂದೂ ಎಂದು ಹೇಳಿಕೊಂಡಿದ್ದ.

►ಹೌದು. 1993ರಲ್ಲಿ ನಾಥುರಾಮ್ ಗೋಡ್ಸೆ ಬರೆದ ಪುಸ್ತಕ ‘ನಾನೇಕೆ ಗಾಂಧಿಯನ್ನು ಕೊಂದೆ’ಅನ್ನು ಬಿಡುಗಡೆಗೊಳಿಸಿದ ನಂತರ ಆತನ ಸಹೋದರ ಗೋಪಾಲ್ ಗೋಡ್ಸೆ (ಗಾಂಧಿ ಹತ್ಯೆಯಲ್ಲಿ 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ) ಫ್ರಂಟ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ (ಫ್ರಂಟ್‌ಲೈನ್ 28, ಜವರಿ, 1994) ಗೋಡ್ಸೆ ಸಹೋದರರಾದ ನಾವೆಲ್ಲ ಆರೆಸ್ಸೆಸ್‌ನಲ್ಲಿ ಇದ್ದವರು. ನಾಥುರಾಮ್ ಆರೆಸ್ಸೆಸ್‌ನಲ್ಲಿ ಬೌದ್ಧಿಕ ಕಾರ್ಯಕರ್ತನಾಗಿದ್ದ. ನಂತರ ತಾನು ಆರೆಸ್ಸೆಸ್ ತೊರೆದಿರುವುದಾಗಿ ಒಂದು ಹೇಳಿಕೆ ಕೊಟ್ಟಿದ್ದ. ಏಕೆ ಹಾಗೆ ಹೇಳಿದನೆಂದರೆ ಗಾಂಧಿ ಹತ್ಯೆಯ ನಂತರ ಗೋಳ್ವಾಲ್ಕರ್ ಮತ್ತು ಆರೆಸ್ಸೆಸ್ ತುಂಬಾ ಒತ್ತಡದಲ್ಲಿತ್ತು. ಆದರೆ ನಿಜ ಹೇಳಬೇಕೆಂದರೆ ನಾಥುರಾಮ್ ಆರೆಸ್ಸೆಸ್ ತೊರೆದಿರಲಿಲ್ಲ ಎಂದು ಹೇಳಿದ್ದ.

- ಮೂಲಭೂತವಾಗಿ ಆರೆಸ್ಸೆಸ್ ಮಾತೃಸಂಸ್ಥೆ. ಅದು ಅತೀತ ತಲೆಗಳ ಪೆಡಂಭೂತ. ಅದಕ್ಕೆ ಹಲವಾರು ಬೇರೆ ಬೇರೆ ಹೆಸರುಗಳಿವೆ. ತನಗೆ ಸೂಕ್ತವೆನಿಸಿದಾಗ ಆ ಹೆಸರನ್ನು ಬಳಸಿಕೊಳ್ಳುತ್ತದೆ.

               ಸ್ವಾಮಿ ಶ್ರದ್ಧಾನಂದ

►ಸರ್, ನನ್ನ ಪ್ರಶ್ನೆ ಏನೆಂದರೆ 20ನೇ ಶತಮಾನದ ಆರಂಭದಲ್ಲಿ ಆರ್ಯ ಸಮಾಜವು ‘ಶುದ್ಧಿ ಚಳವಳಿ’ಯನ್ನು ಆರಂಭಿಸಿತು. ಸ್ವಾಮಿ ಶ್ರದ್ಧಾನಂದ ಅವರು ಇದರ ನೇತೃತ್ವ ವಹಿಸಿದ್ದರು. ಈ ಶುದ್ಧ್ದಿ ಚಳವಳಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರನ್ನು ಶುದ್ಧೀಕರಿಸಿ ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗುತ್ತಿತ್ತು. ಇಂದು ಸಂಘ ಪರಿವಾರವು ‘ಘರ್ ವಾಪಸಿ’ ಹೆಸರಿನಲ್ಲಿ ಇದೇ ಪ್ರಕ್ರಿಯೆಯನ್ನು ಮಾಡುತ್ತಿದೆ. ಮುಸ್ಲಿಮರನ್ನು ಶುದ್ಧೀಕರಿಸಿ ಹಿಂದೂ ಧರ್ಮಕ್ಕೆ ಮರಳಿ ಕರೆ ತರುತ್ತಿದೆ. ಅಂದರೆ ಮತಾಂತರದ ವಿಷಯದಲ್ಲಿ ಆರೆಸ್ಸೆಸ್ ಮತ್ತು ಆರ್ಯ ಸಮಾಜದ ತತ್ವಗಳಲ್ಲಿ ಸಾಮ್ಯತೆ ಇದೆ. ಮರಳಿ ಹಿಂದೂ ಧರ್ಮಕ್ಕೆ ಬರಬೇಕು ಎನ್ನುವುದರಲ್ಲಿ ಇಬ್ಬರಲ್ಲಿ ಯಾವುದೇ ಭೇದವಿಲ್ಲ. ಸಂಘ ಪರಿವಾರ ಮಾಡುತ್ತಿರುವ ಈ ‘ಘರ್ ವಾಪಸಿ’ ಧ್ವಂಸಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದೆ. ಇದು ಕೋಮುವಾದವನ್ನು ಪ್ರಚೋದಿಸುತ್ತದೆ. ಆದರೆ ಆರ್ಯ ಸಮಾಜದ ಶುದ್ಧ್ದಿ ಚಳವಳಿ ಇದಕ್ಕಿಂತ ಹೇಗೆ ಭಿನ್ನ? ಇಲ್ಲಿ ಯೋಚನೆಯಲ್ಲಿ ಒಂದೇ ಇದ್ದರೂ ಕಾರ್ಯ ರೂಪದಲ್ಲಿ ಬೇರೆಯೇ?

- ಹೌದು. 20ನೇ ಶತಮಾನದಲ್ಲಿ ಆರ್ಯ ಸಮಾಜವು ಶುದ್ಧ್ದಿ ಚಳವಳಿಯನ್ನು ಪ್ರಾರಂಭಿಸಿತು. ಇದರ ನೇತೃತ್ವವನ್ನು ಸ್ವಾಮಿ ಶ್ರದ್ಧಾನಂದ ವಹಿಸಿದ್ದರು. ಅವರು ಸಾವಿರಾರು ಮುಸ್ಲಿಮರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದರು. ಆದರೆ ದುರದೃಷ್ಟವಶಾತ್ ಈ ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಮೂಲ ಉದ್ದೇಶ ಸಾಕಾರಗೊಳ್ಳಲಿಲ್ಲ. ಏಕೆಂದರೆ ಹಿಂದೂ ಸಮುದಾಯದೊಳಗಿನ ಅನೇಕರು ಜಾತಿ ಮನಸ್ಥಿತಿಯನ್ನು ಹೊಂದಿದ್ದರು. ಈ ಜಾತಿವಾದಿಗಳು ಹಿಂದೂ ಧರ್ಮಕ್ಕೆ ಮರಳಿ ಮತಾಂತರಗೊಂಡ ಮುಸ್ಲಿಮರನ್ನು ತಮ್ಮ ಸಮಾನವೆಂದು ಪರಿಗಣಿಸಲಿಲ್ಲ. ಅವರು ಮತ್ತೆ ಮತ್ತೆ ನಿಮ್ಮ ಜಾತಿ ಯಾವುದೆಂದು ಮರಳಿ ಮತಾಂತರಗೊಂಡವರನ್ನು ಕೇಳತೊಡಗಿದರು. ಇವರು ‘ನಾವು ಮುಸ್ಲಿಮರಾಗಿದ್ದೆವು, ಈಗ ಹಿಂದೂಗಳಾಗಿದ್ದೇವೆ’ ಎಂದು ಹೇಳಿದರು. ಆದರೆ ಈ ಹಿಂದೂ ಧರ್ಮದೊಳಗಿನ ಕರ್ಮಠರು ‘ಇಲ್ಲ, ನೀವು ಯಾವ ಜಾತಿಯವರೆಂದು ಹೇಳಬೇಕು’ ಎಂದು ಒತ್ತಾಯಿಸತೊಡಗಿದ್ದರು. ಆದರೆ ಸಮಾಜವು ಜಾತಿ ಪದ್ಧತಿಯನ್ನು ವಿರೋಧಿಸುತ್ತದೆ. ಇದೇ ಹಿಂದೂ ಸಮಾಜವು ಈ ಸಾಮಾಜಿಕ ಒಳಗೊಳ್ಳುವಿಕೆಯನ್ನು, ಸಮಾನತೆಯನ್ನು ವಿರೋಧಿಸುತ್ತದೆ. ಆಗ ಆ ಮುಸ್ಲಿಮರು ‘‘ನಾವು ಹಿಂದೂ ಧರ್ಮದೊಳಗೆ ಬಂದು ಯಾವ ಪ್ರಯೋಜನ? ನೀವು ನಮ್ಮನ್ನು ಸಮಾನರೆಂದು ಒಪ್ಪಿಕೊಳ್ಳದಿದ್ದರೆ ನಾವು ಇಸ್ಲಾಂ ಧರ್ಮಕ್ಕೆ ಮರಳಿ ಹೋಗುತ್ತೇವೆ’’ ಎಂದು ಹೇಳಿ ಸಾವಿರಾರು ಜನ ತಮ್ಮ ಇಸ್ಲಾಂ ಧರ್ಮಕ್ಕೆ ಮರಳಿದರು. ಇದು ಸ್ವಾಮಿ ಶ್ರದ್ಧಾನಂದರನ್ನು ಹತಾಶೆಗೊಳಿಸಿತು. ಅವರು ಈ ಶುದ್ಧಿ ಚಳವಳಿಯನ್ನೇ ಕೈ ಬಿಟ್ಟರು. ಜಾತಿ ಪದ್ಧತಿಯನ್ನು ಪಾಲಿಸುವ ಹಿಂದೂಗಳೇ ಇದಕ್ಕೆ ಅಡ್ಡಗಾಲಾಗಿದ್ದಾರೆ ಎಂದು ಹೇಳಿದರು.

►ಇದೇ ರೀತಿಯಲ್ಲಿ ಆರ್ಯ ಸಮಾಜವು ಗೋರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಆದರೆ ಸಂಘ ಪರಿವಾರವೂ ಇದೇ ಗೋರಕ್ಷಣೆ ಪರವಾಗಿ ಉಗ್ರವಾಗಿ ವರ್ತಿಸುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ, ಕೊಲೆಗಳನ್ನು ಮಾಡುತ್ತಿದೆ. ಇಲ್ಲಿಯೂ ಸಹ ಆರ್ಯ ಸಮಾಜದ ತತ್ವ ಮತ್ತು ಸಂಘ ಪರಿವಾರದ ಗೋರಕ್ಷಣೆಯ ನಂಬಿಕೆಯಲ್ಲಿ ಸಾಮ್ಯತೆ ಇದೆ. ಆದರೂ ಅವರು ನಿಮ್ಮ ಮೇಲೆ ಯಾಕೆ ಹಲ್ಲೆ ಮಾಡುತ್ತಿದ್ದಾರೆ? ಪ್ರಗತಿಪರರನ್ನು, ಎಡಪಂಥೀಯರನ್ನು ನೀವು ಬೀಫ್ ತಿನ್ನುತ್ತೀರಿ, ನೀವು ಗೋಮಾತೆಯನ್ನು ನಂಬುವುದಿಲ್ಲ ಎನ್ನುವ ಕಾರಣಕ್ಕಾಗಿ ಸಂಘ ಪರಿವಾರದವರು ವಿರೋಧಿಸುತ್ತಾರೆ ಮತ್ತು ಇಲ್ಲಿ ಕನಿಷ್ಠ ಒಂದು ತರ್ಕವಿದೆ. ಆದರೆ ಗೋರಕ್ಷಣೆಯಲ್ಲಿ ನಂಬಿಕೆ ಇರುವ ನಿಮ್ಮಂತಹ ಆರ್ಯ ಸಮಾಜದ ಕಾರ್ಯಕರ್ತರ ಮೇಲೆ ಯಾಕೆ ದಾಳಿ ಮಾಡುತ್ತಾರೆ?

- ಒಂದು ವಿಷಯ ನೆನಪಿಟ್ಟುಕೊಳ್ಳಿ. ಮಹರ್ಷಿ ದಯಾನಂದರು ಕೇವಲ ಗೋವಿನ ಬಗ್ಗೆ ಮಾತನಾಡಲಿಲ್ಲ. ಅವರು ಗೋವು, ಇತ್ಯಾದಿ ಪಶುಗಳ ರಕ್ಷಣೆ ಕುರಿತು ಮಾತನಾಡುತ್ತಾರೆ. ಅವರು ಎಲ್ಲಾ ಜೀವಿಗಳನ್ನು ರಕ್ಷಿಸಬೇಕೆಂದು ಹೇಳುತ್ತಾರೆ. ಇಲ್ಲಿ ಅವರು ಗೋವನ್ನು ಕೇವಲ ಸಾಂಕೇತಿಕವಾಗಿ ಬಳಸುತ್ತಾರೆ. ಇಲ್ಲಿ ಗೋವನ್ನು ಸಂಕೇತವಾಗಿ ಬಳಸಿ ಅದರಲ್ಲಿ ಎಲ್ಲ ಪಶು, ಪಕ್ಷಿಗಳನ್ನು ಒಳಗೊಂಡವು. ದಯಾನಂದರು ತಮ್ಮ ‘ಗೋ ಕರುಣಾನಿಧಿ’ ಎನ್ನುವ ಜನಪ್ರಿಯ ಪುಸ್ತಕದಲ್ಲಿ ಪದೇ ಪದೇ ಗೋವು, ಇತ್ಯಾದಿ ಪಶು ಎಂದೇ ಸಂಬೋಧಿಸುತ್ತಾರೆ. ‘ಒಮ್ಮೆಯೂ ಗೋಮಾತೆ’ ಎನ್ನುವ ಶಬ್ದ ಬಳಸುವುದಿಲ್ಲ. ಅವರು ಗೋವಿನ ಬಗ್ಗೆ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗುವುದಿಲ್ಲ. ಅವರು ಗೋವಿನ ಹಾಲು, ಸೆಗಣಿಯ ಕುರಿತಾಗಿ, ಅದರ ಆರ್ಥಿಕ ಉಪಯುಕ್ತತೆ ಕುರಿತಾಗಿ ಮಾತನಾಡುತ್ತಾರೆ. ಈ ಹಿನ್ನೆಲೆಯಲ್ಲಿ ಗೋಶಾಲೆಯನ್ನು ಪ್ರಾರಂಭಿಸುತ್ತಾರೆ. ರಾಣಿ ವಿಕ್ಟೋರಿಯಗೆ ಎಲ್ಲಾ ಪಶುಗಳನ್ನು ರಕ್ಷಿಸಬೇಕೆಂದು ಮನವಿ ಸಲ್ಲಿಸುತ್ತಾರೆ. ಆದರೆ ಇಂದಿನ ಗೋರಕ್ಷಕರು ತಮ್ಮ ತಮ್ಮ ಮನೆಗಳಲ್ಲಿ ಹಸುಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲ. ಅವರು ಹಾಲನ್ನು ಕರೆಯುತ್ತಾರೆ. ಒಮ್ಮೆ ಅದು ಹಾಲು ಕೊಡುವುದನ್ನು ನಿಲ್ಲಿಸಿದಾಗ ಸ್ವತಃ ತಾವೇ ಆ ಹಸುವನ್ನು ಕುದ್ದಾಗಿ ಕಸಾಯಿಖಾನೆಗೆ ಮಾರುತ್ತಾರೆ. ಇದನ್ನು ತಣ್ಣಗೆ ಪ್ರಚಾರವಿಲ್ಲದೆ ಮಾಡುತ್ತಾರೆ. ಆದರೆ ಈ ಬರಡು ಹಸುವನ್ನು ಖರೀದಿಸುವವ ಮುಸ್ಲಿಂ ಆಗಿರುತ್ತಾನೆ. ಆತ ತನ್ನ ವೃತ್ತಿಧರ್ಮಕ್ಕೆ ಅನುಗುಣವಾಗಿ ಹಸುವನ್ನು ಕಸಾಯಿಖಾನೆಗೆ ಸಾಗಿಸಿದರೆ, ಅದರ ಮಾಂಸವನ್ನು ಮಾರಾಟ ಮಾಡಿದರೆ ಆತ ಗೋ ಹಂತಕನಾಗುತ್ತಾನೆ. ಮುಸ್ಲಿಂ ಗೋಹತ್ಯೆಯು ಅಪರಾಧ ಎನ್ನುವುದಾದರೆ ಈ ಹಸುಗಳನ್ನು ಮಾರುವವನೂ ಸಹ ಅಪರಾಧಿಯಾಗುತ್ತಾನೆ. ಆತನೂ ಸಹ ಆರೋಪಿ. ಬೀಫ್ ರಫ್ತಿನಲ್ಲಿ ಶೇ.16 ಪ್ರಮಾಣದಲ್ಲಿ ಏರಿಕೆಯಾಗಿದೆ. ಮೋದಿಯವರು ‘ಪಿಂಕ್ ಕ್ರಾಂತಿ’ಯನ್ನು ಕೊನೆಗೊಳಿಸುವ ಕುರಿತಾಗಿ ಶಪಥ ಮಾಡಿದ್ದರು. ಆದರೆ ಈ ಕಸಾಯಿಖಾನೆಗಳು ಎಂದಿನಂತೆ ನಡೆಯುತ್ತಿವೆ. ಮುಂಚಿನಂತೆ ಬೀಫ್ ರಫ್ತಾಗುತ್ತಿದೆ. ಇವರು ಚುನಾವಣೆಯ ಸಂದರ್ಭದಲ್ಲಿ ಹೇಳಿದ ಒಂದೂ ಮಾತುಗಳನ್ನು ಉಳಿಸಿಕೊಳ್ಳಲಿಲ್ಲ. ಈ ಸೋಕಾಲ್ಡ್ ಗೋರಕ್ಷಕರು ಹಾಲು ಕರೆದ ನಂತರ ಹಸುಗಳನ್ನು ಬೀದಿಗೆ, ಹೊಲಗಳಿಗೆ ಅಟ್ಟುತ್ತಾರೆ. ಅಲ್ಲಿ ಈ ಹಸುಗಳು ಕೊಳಚೆಯಿಂದ ಎಲ್ಲವನ್ನೂ ತಿನ್ನುತ್ತವೆ, ಪ್ಲಾಸ್ಟಿಕ್ ಅನ್ನು ತಿನ್ನುತ್ತವೆ. ಈ ಕಾರಣಕ್ಕಾಗಿಯೇ ಸಾಯುತ್ತಿವೆ. ನೋವಿನಿಂದ ಸಾಯುತ್ತಿವೆ. ಇದಕ್ಕೆ ಯಾರು ಹೊಣೆಗಾರರು? ಇವರೂ ಸಹ ಗೋಹಂತಕರು. ಈ ಗೋರಕ್ಷಕರು ಸರಕಾರದಿಂದ ಹಣ ಸಹಾಯ ಪಡೆದುಕೊಂಡು ಗೋಶಾಲೆಯನ್ನು ನಡೆಸುತ್ತಾರೆ. ಬಿಜೆಪಿ, ಆರೆಸ್ಸೆಸ್‌ನ ಗೋರಕ್ಷಕರು ನಡೆಸುವ ಈ ಗೋಶಾಲೆಗಳಲ್ಲಿ ಸಾವಿರಾರು ಹಸುಗಳು ಸೂಕ್ತ ಸೌಲಭ್ಯ, ನೀರು, ಸೂರುಗಳಿಲ್ಲದೆ ಸಾಯುತ್ತಿವೆ. ಜೈಪುರ ಬಳಿ ಸರಕಾರ ನಡೆಸುವ ಗೋಶಾಲೆಯಿದೆ. ಕಳೆದ ವರ್ಷ ಅಲ್ಲಿ ಸಾವಿರಾರು ಹಸುಗಳು ಸಾವನ್ನಪ್ಪಿವೆ. ಇದಕ್ಕೆ ಯಾರು ಜವಾಬ್ದಾರರು? ಇದರ ಕುರಿತಾಗಿ ಯಾರೂ ತುಟಿ ಬಿಚ್ಚುತ್ತಿಲ್ಲ. ಇದೇ ರೀತಿ ಅನೇಕ ಗೋಶಾಲೆಗಳಿವೆ. ಬಹುತೇಕ ಸಂದರ್ಭಗಳಲ್ಲಿ ಈ ಗೋರಕ್ಷಕರು ಅಧಿಕೃತವಾಗಿ ದನಗಳನ್ನು ಸಾಗಿಸುವ ಲಾರಿಗಳನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡುತ್ತಾರೆ. ನಂತರ ಈ ದನ, ಹಸುಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗುತ್ತದೆ. ಮರುದಿನ ಇದೇ ಪೊಲೀಸರು ಈ ದನ, ಹಸುಗಳನ್ನು ಗೋಶಾಲೆಗಳಿಗೆ ಬಿಡುತ್ತಾರೆ. ಅಂದರೆ ಗೋಶಾಲೆ ಮಾಲಕರು ಈ ದನ, ಹಸುಗಳನ್ನು ಉಚಿತವಾಗಿ ಪಡೆಯುತ್ತಾರೆ. ಕೆಲದಿನಗಳ ನಂತರ ಇವರು ದನ, ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಾರೆ. ಆ ಮೂಲಕ ಎರಡೂ ಕಡೆಯಿಂದಲೂ ಪುಕ್ಕಟೆ ಹಣ ಸಂಪಾದಿಸುತ್ತಾರೆ. ಹೀಗಾಗಿ ಇಡೀ ಪ್ರಕ್ರಿಯೆಯೇ ಒಂದು ಹಿಪೋಕ್ರಸಿ ಎಂದು ಕರೆಯುತ್ತೇನೆ. ಇವರು ನಿಜದಲ್ಲಿ ಗೋವನ್ನು ರಕ್ಷಣೆ ಮಾಡುವಲ್ಲಿ ಆಸಕ್ತಿ ಹೊಂದಿಲ್ಲ. ಉಪಯೋಗಕ್ಕೆ ಬಾರದ ದನ, ಹಸುಗಳಿಂದ ಸೆಗಣಿ, ಗಂಜಲವನ್ನು ಶೇಖರಿಸಿ, ಸಂಸ್ಕರಿಸಿ ಅದನ್ನು ವ್ಯಾಪಾರೋದ್ಯಮವನ್ನಾಗಿ ಪರಿವರ್ತಿಸಬೇಕೆಂದು ನಾನು ಸಲಹೆ ಮಾಡುತ್ತೇನೆ. ಹಾಲು ಶೇಖರಣೆ ಕೇಂದ್ರಗಳಂತೆ ಸರಕಾರವು ಸೆಗಣಿ, ಗಂಜಲ ಶೇಖರಣೆ ಕೇಂದ್ರಗಳನ್ನು ಪ್ರಾರಂಭಿಸಬೇಕು. ರೈತರಿಗೆ ಸ್ಥಳದಲ್ಲಿಯೇ ಹಣವನ್ನು ಪಾವತಿಸಬೇಕು. ನಂತರ ಸಂಸ್ಕರಣ ಘಟಕಗಳಲ್ಲಿ ಇದರ ಉಪ ಉತ್ಪನ್ನಗಳನ್ನು ತಯಾರಿಸಬೇಕು ಮತ್ತು ಮಾರಬೇಕು. ಇದನ್ನು ಒಂದು ವ್ಯಾಪಾರಿ ಕೇಂದ್ರವಾಗಿ ರೂಪಿಸಿದರೆ ಪ್ರತಿಯೊಬ್ಬರೂ ಹಸುವನ್ನು ರಕ್ಷಿಸುತ್ತಾರೆ. ಆದರೆ ಉತ್ತರ ಭಾರತದಲ್ಲಿ ಬರಡಾದ ದನ, ಹಸುಗಳನ್ನು ರೈತರು ಸಾಕುವಂತಿಲ್ಲ, ಆದರೆ ಅದನ್ನು ಮಾರುವಂತೆಯೂ ಇಲ್ಲ. ಆಗ ಅಸಹಾಯಕರಾಗಿ ದನ, ಹಸುಗಳನ್ನು ಬೀದಿಗೆ ಬಿಡುತ್ತಾರೆ. ಇದು ಕ್ರಮೇಣ ಸಾರ್ವಜನಿಕ ಪಿಡುಗಾಗಿ ಬೆಳೆಯುತ್ತದೆ

►ಸರ್, ಇದು ಗೋರಕ್ಷಣೆಯ ಮಾತಾಯಿತು. ನನ್ನ ಪ್ರಶ್ನೆ ಏನೆಂದರೆ ಗೋವನ್ನು ಮತೀಯವಾದೀಕರಣಗೊಳಿಸುವ ನೆಪದಲ್ಲಿ ಆಹಾರ ಸಂಸ್ಕೃತಿಯ ಮೇಲೆ ಹಲ್ಲೆಯಾಗುತ್ತಿದೆ. ಈ ಮತಾಂಧರು ಗೋವಿನ ಜೊತೆ ಬೀಫ್ ಆಹಾರವನ್ನು ಸಹ ವಿವಾದಗೊಳಿಸುತ್ತಿದ್ದಾರೆ. ಗೋಮಾತೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಬೀಫ್ ಎನ್ನುವ ಆಹಾರವನ್ನು ಎಳೆದುತಂದು ಅದರ ಮೇಲೆ ನಿಷೇಧ ಹೇರಲು ಒತ್ತಾಯಿಸುತ್ತಿದ್ದಾರೆ. ಶೇ.80 ಪ್ರಮಾಣದ ಜನಸಂಖ್ಯೆ ಸೇವಿಸುವ ಬೀಫ್ ಆಹಾರ ವನ್ನು ಈ ರೀತಿಯಲ್ಲಿ ಧರ್ಮಕ್ಕೆ ಗಂಟು ಹಾಕಿ ದ್ವೇಷ, ಹಿಂಸೆಯ ವಾತಾವರಣ ನಿರ್ಮಿಸುತ್ತಿದ್ದಾರೆ. ಬೀಫ್ ತಿನ್ನುವುದು ಹಿಂದೂ ಫಿಲಾಸಫಿಗೆ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕ್ರೌರ್ಯವಲ್ಲವೇ? ಧರ್ಮದ, ಪ್ರಾಣಿಯ ಹೆಸರಿನಲ್ಲಿ ಪ್ರಜೆಗಳ ಆಹಾರದ ಹಕ್ಕನ್ನು ನಿಯಂತ್ರಿಸುವುದು ಜೀವವಿರೋಧಿ ಕೃತ್ಯವಲ್ಲವೇ? ಸಂಘ ಪರಿವಾರದ ಈ ಜೀವವಿರೋಧಿ ಕೃತ್ಯಕ್ಕೆ ಉತ್ತರವೇನು? ನಿಮ್ಮ ಅಭಿಪ್ರಾಯವೇನು?

- ಮೊದಲನೆಯದಾಗಿ ನಾವು ಅವರಿಗೆ ಸಂಘ ಪರಿವಾರದ ಪ್ರಕಾಶನದಿಂದ ಹೊರಬಂದ ಅಧಿಕೃತ ಪುಸ್ತಗಳನ್ನು ಓದಿ ಎಂದು ಹೇಳಬೇಕು. ಸ್ವಾಮಿ ವಿವೇಕಾನಂದರ ಕುರಿತಾದ ವಿಶ್ವಾಸಾರ್ಹ, ನೈಜ ಪುಸ್ತಕಗಳನ್ನು ಓದಿದಾಗ ವಿವೇಕಾನಂದರಿಗೆ ಬೀಫ್ ಆಹಾರವು ಇಷ್ಟವೋ, ಇಲ್ಲವೋ ಎಂದು ಗೊತ್ತಾಗುತ್ತದೆ. ಅವರು ಬೀಫ್ ಸೇವಿಸುವುದನ್ನು ಖುಷಿಪಡುತ್ತಿದ್ದರೋ ಇಲ್ಲವೋ ಎಂದು ಗೊತ್ತಾಗುತ್ತದೆ (ನಗು). ಸಾವರ್ಕರ್ ಅವರೂ ಸಹ ಬೀಫ್ ಆಹಾರದ ಪರವಾಗಿ ಮಾತನಾಡಿದ್ದಾರೆ. ಎರಡನೆಯದಾಗಿ ನಾವು ಯಾವುದೇ ಆಹಾರ ಸಂಸ್ಕೃತಿಯ ಕುರಿತು ಮಾತನಾಡುವಾಗ ಮೊದಲು ಅದರ ಉಪಯುಕ್ತತೆ, ನಿರುಪಯುಕ್ತತೆ ಕುರಿತು ಮನವರಿಕೆ ಮಾಡಿಕೊಡಬೇಕು. ಸಾಧ್ಯವಾದರೆ ನಮ್ಮ ಬದುಕಿನ ಕ್ರಮವನ್ನ್ನು ಉದಾಹರಣೆಯಾಗಿ ಹೇಳಬೇಕು. ಆದರೆ ಎಲ್ಲಿಯೂ ಒತ್ತಾಯ ಮಾಡುವುದನ್ನು ನಿಲ್ಲಿಸಬೇಕು.

►ಕಳೆದ ಕೆಲವು ದಶಕಗಳಿಂದ ಯುವಜನತೆ ಸಂಘಪರಿವಾರದ ಮತೀಯವಾದದ ಕಡೆಗೆ ಸೆಳೆಯಲ್ಪಡುತ್ತಿದ್ದಾರೆ. ಅಲ್ಲಿ ಹೊಕ್ಕ ನಂತರ ಮುಸ್ಲಿಂ ವಿರೋಧಿ, ದಲಿತ ವಿರೋಧಿ, ಮೀಸಲಾತಿ ವಿರೋಧಿ ಧೋರಣೆಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮತಾಂಧರಾಗುತ್ತಿದ್ದಾರೆ. ಹದಿಹರೆಯದವರು ಮತೀಯವಾದಿ ಸಂಘ ಪರಿವಾರದ ಕಡೆಗೆ ವಲಸೆ ಹೋಗುವುದನ್ನು ತಡೆಯುವುದು ಹೇಗೆ? ಇಲ್ಲಿ ಸಂಘ ಪರಿವಾರದ ಮತೀಯವಾದವನ್ನು ವಿರೋಧಿಸುವವರನ್ನು ಎಡಪಂಥೀಯರು, ಪ್ರಗತಿಪರರು, ನಕಲಿ ಸೆಕ್ಯುಲರಿಸ್ಟರು ಎಂದು ಟೀಕಿಸಲಾಗುತ್ತಿತ್ತು. ಮುಸ್ಲಿಮರನ್ನು ಓಲೈಸುತ್ತಾರೆ ಎಂದು ಹೀಗೆಳೆಯಲಾಗಿದೆ. ಇವರು ದೇವರು, ಧರ್ಮವನ್ನು ನಂಬುವುದಿಲ್ಲ ಎನ್ನುವ ಪ್ರಚಾರದ ಮೂಲಕ ಯುವಕರಲ್ಲಿ ಈ ಪ್ರಗತಿಪರರ ಕುರಿತಾಗಿ ಸಿನಿಕತನ, ದ್ವೇಷವನ್ನು ಬೆಳೆಸಿದ್ದು ಇದೇ ಸಂಘ ಪರಿವಾರ. ಇದಕ್ಕೆ ಪ್ರಗತಿಪರರ ಕೊಡುಗೆಯೂ ಇದೆ. ಆದರೆ ಈ ಮೂಲಕ ಆರೆಸ್ಸೆಸ್ ಇಂದು ಅತ್ಯಂತ ಪ್ರಭಾವಶಾಲಿ, ಬಲಿಷ್ಟ ಸಂಘಟನೆಯಾಗಿ ಬೆಳೆದು ನಿಂತಿದೆ. ಆದರೆ ಮತ್ತೊಂದೆಡೆ ನಿಮ್ಮ ಆರ್ಯ ಸಮಾಜವು ಹಿಂದೂಯಿಸಂ ಅನ್ನು ನಂಬುತ್ತದೆ. ಆರ್ಯ ಸಮಾಜದ ಚಟುವಟಿಕೆಯ ಮೂಲಕ ಹಿಂದೂ ಧರ್ಮದ ಮಾನವೀಯ ಸಿದ್ಧಾಂತಗಳನ್ನು ಕಲಿಸುತ್ತಿದ್ದೇವೆ ಎಂದು ನೀವು ಹೇಳುತ್ತೀರಿ. ನಿಮ್ಮ ಈ ಹಿಂದೂಯಿಸಂ ಫಿಲಾಸಫಿಯ ಮೂಲಕ ಈ ಮುಗ್ಧ ಯುವಕರೊಳಗಿನ ಈ ಬಹುಸಂಖ್ಯಾತವಾದದ ಅಮಲನ್ನು ಇಳಿಸಬಹುದೇ? ಆರ್ಯ ಸಮಾಜದ ಹಿಂದೂಯಿಸಂ ಸಿದ್ಧಾಂತದಲ್ಲಿ ಇದಕ್ಕೆ ಪರಿಹಾರವಿದೆಯೇ? ಏಕೆಂದರೆ ಇಂದು ಸೆಕ್ಯುಲರಿಸಂ ಅಂದರೆ ಧರ್ಮನಿರಪೇಕ್ಷೆ ಎನ್ನುವ ವಾದವೂ ಇದೆ.

- ಬಹಳ ಮುಖ್ಯವಾದ ಪ್ರಶ್ನೆ. ಇಲ್ಲಿ ಸೆಕ್ಯುಲರಿಸಂ ಅಂದರೆ ಧರ್ಮನಿರಪೇಕ್ಷೆ ಅಲ್ಲ, ಬದಲಾಗಿ ಅದು ಮತ ನಿರಪೇಕ್ಷಿತ. ವೇದದ, ಉಪನಿಷತ್ತಿನ ಬೋಧನೆಗಳು, ಚಿಂತನೆಗಳ ಮೂಲ ಹಿಂದೂಯಿಸಂ ಎಂದು ಕರೆಯುತ್ತೇವೆ. ಇಲ್ಲಿ ಸಾಂಪ್ರದಾಯಿಕತೆಯ ವಿರೋಧವಿದೆ. ಇಲ್ಲಿ ಹಿಂದೂವಾದವಿಲ್ಲ, ಮುಸ್ಲಿಂವಾದವಿಲ್ಲ. ಇಲ್ಲಿ ಮಾನವತಾವಾದವಿದೆ. ವೇದಗಳಲ್ಲಿ ಮನುಷ್ಯನಾಗು, ಉತ್ತಮ ವ್ಯಕ್ತಿತ್ವ ಬೆಳೆಸಿಕೋ ಎಂದು ಹೇಳಲಾಗಿದೆ. ಈಗ ಮತ್ತೆ ವೇದಗಳ ಕಡೆಗೆ ಮರಳಬೇಕಾಗಿದೆ. 1875ರಲ್ಲಿ ಮಹರ್ಷಿ ದಯಾನಂದ ಅವರು ಆರ್ಯ ಸಮಾಜ ಸ್ಥಾಪಿಸುವುದರ ಮೂಲಕ ಈ ಕೆಲಸವನ್ನು ಪ್ರಾರಂಭಿಸಿದರು. ಸಂಸಾರದ ಮೌಲ್ಯೀಕರಣ ಇದರ ಉದ್ದೇಶವಾಗಿತ್ತು. ನಾವು ಈ ಸತ್ಯ ಧರ್ಮದ ಕಡೆಗೆ ಹೊರಳಿಕೊಳ್ಳಬೇಕು. ಆಗ ಹಿಂದೂವಿಗೂ ಗರ್ವ ಉಂಟಾಗುತ್ತದೆ. ಇಲ್ಲಿಯವರೆಗೂ ಈ ಸಂಸ್ಕೃತಿಯನ್ನು ರಕ್ಷಿಸಿಟ್ಟದ್ದು ಹಿಂದೂಗಳೇ. ಆದರೆ ಈಗ ಇದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಈ ದೋಷಪೂರಿತ ವ್ಯಾಖ್ಯಾನದ ಮೂಲಕ ಜಾತಿಪದ್ಧತಿಯನ್ನು ವೈಭವೀಕರಿಸಲಾಗಿದೆ, ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರಗಳು ಜರುಗಿವೆ. ಇವೆಲ್ಲವನ್ನೂ ನಾವು ಇಂದಿನ ಯುವಜನತೆಗೆ ವಿವರಿಸಬೇಕು. ನೀನು ಈಗ ನಂಬುತ್ತಿರುವ ಹಿಂದೂ ಧರ್ಮ ಕೇವಲ ಧರ್ಮ ಮಾತ್ರ. ಹಿಂದೂ ಅಲ್ಲ ಎಂದು ತಿಳಿ ಹೇಳಬೇಕು. ಹಿಂದೂಯಿಸಂ ಕರ್ಮಠವಲ್ಲ, ಮಾನವತಾವಾದಿ, ವಿಶ್ವಾತ್ಮಕವಾಗಿದೆ ಎಂದು ವಿವರಿಸಬೇಕು. ವಾಸ್ತವದಲ್ಲಿ ನಮಗೆ ಅಧ್ಯಾತ್ಮದ ಕಡೆಗೆ ಮರಳಬೇಕಾಗಿದೆ. ನಾವು ಮತ ನಿರಪೇಕ್ಷತೆ, ಸಂಪ್ರದಾಯ ನಿರಪೇಕ್ಷತೆಯನ್ನು ಕಲಿಸಬೇಕಾಗಿದೆ. ಪ್ರಭುತ್ವವು ಈ ಮತೀಯವಾದವನ್ನು ಬೆಂಬಲಿಸಬಾರದು. ಆದರೆ ದೌರ್ಭಾಗ್ಯವೆಂದರೆ ಇಂದು ಯಾರ ಕೈಯಲ್ಲಿ ಅಧಿಕಾರವಿದೆಯೋ ಅವರು ಮತೀಯವಾದಿ ಧಾರ್ಮಿಕತೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ರಾಜಕೀಯ ಹಿಂದೂ ಆಗಿ ರೂಪಿಸುತ್ತಿದ್ದಾರೆ. ಇದರ ಅಪಾಯದ ಕುರಿತು ಯುವಜನತೆಗೆ ನಾವು ಮನವರಿಕೆ ಮಾಡಿಕೊಡಬೇಕು. ಆಗ ಅವರಲ್ಲಿ ಕೇವಲ ಗೋವಿನ ಬಗ್ಗೆ ಮಾತ್ರವಲ್ಲ, ಎಲ್ಲಾ ಪ್ರಾಣಿಗಳ, ಪಕ್ಷಿಗಳ ಕುರಿತಾಗಿಯೂ ಕರುಣೆ ಬೆಳೆಯುತ್ತದೆ. ಆಗ ಜಾತಿವಾದವನ್ನು, ಮೇಲು ಕೀಳು ತತ್ವವನ್ನು ಪಾಲಿಸುವುದಿಲ್ಲ. ಎಲ್ಲರ ನಡುವೆ ಅಂತರ್ಜಾತಿ ವಿವಾಹಗಳು ನಡೆಯುತ್ತವೆ. ನಾವು ಡಿ.21ರಂದು ಬನಾರಸ್‌ನಲ್ಲಿ ಹೊಸ ಕಾರ್ಯಯೋಜನೆ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ವಸುದೈವ ಕುಟುಂಬಕಂನ ನಿಜದ ಅರ್ಥವನ್ನು ಅಲ್ಲಿ ವಿವರಿಸಲಾಗುತ್ತದೆ. ಇದು ಸಂಕೀರ್ಣ ಹಿಂದುತ್ವದ, ಯಾವುದೇ ಬಗೆಯ ಮೂಲಭೂತವಾದಕ್ಕೆ ಪರ್ಯಾಯವಾಗಿರುತ್ತದೆ. ಇದನ್ನು ಒಂದು ಚಳವಳಿಯಾಗಿ ಬೆಳೆಸಿ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಹೋಗುತ್ತೇವೆ. ಏಕೆಂದರೆ ಇಂದು ಎಲ್ಲರಿಗಿಂತಲೂ ಮಿಗಿಲಾಗಿ ಮಕ್ಕಳಿಗೆ ಈ ಪರ್ಯಾಯ ಚಳವಳಿಯ ಅಗತ್ಯವಿದೆ. ಅವರಿಗೆ ಜಾತಿ ಪದ್ಧತಿಯನ್ನು ವಿವರಿಸುತ್ತೇವೆ. ಅದನ್ನು ಮೀರಿದ ಮಾನವತಾವಾದ ಧರ್ಮವನ್ನು ವಿವರಿಸುತ್ತೇವೆ. ನಂತರ ಸಮಾಜದಲ್ಲಿ ಇದನ್ನು ಬೆಳೆಸುತ್ತೇವೆ.

►ಇದು ಸರಿ. ಆದರೆ ಈಗಾಗಲೇ ಆರೆಸ್ಸೆಸ್‌ನ ಶಾಖೆಗಳು ಸಮಾಜದ ಎಲ್ಲಾ ದಿಕ್ಕುಗಳಲ್ಲಿ, ಕೋನಗಳಲ್ಲಿ ಹಬ್ಬಿಕೊಂಡಿವೆ. ಆರೆಸ್ಸೆಸ್‌ನ ಸಾವಿರಾರು ಶಾಲೆಗಳು ಮತೀಯವಾದಿ ಹಿಂದುತ್ವವನ್ನು ಬೋಧಿಸುತ್ತಿವೆ. ಅದರ ಪಠ್ಯಗಳು ಮಕ್ಕಳ ಮನಸ್ಸನ್ನು ಪ್ರವೇಶಿಸಿವೆ. ಅದರ ಹಿಂದುತ್ವ ಮತ್ತು ಬಹುಸಂಖ್ಯಾತವಾದವನ್ನು ಬೋಧಿಸುವ ಲಕ್ಷಾಂತರ ಪುಸ್ತಕಗಳನ್ನು ಈಗಾಗಲೇ ಮಕ್ಕಳು ಓದಿಕೊಂಡಿದ್ದಾರೆ. ಗೀತ ಪ್ರೆಸ್ ಕಳೆದ 80 ವಷರ್ಗಳಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಅದರ ಪ್ರತಿಗಾಮಿ ಪುಸ್ತಕಗಳು ಇಂದಿಗೂ ರೈಲು ನಿಲ್ದಾಣಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದನ್ನು ನೀವು ಹೇಗೆ ಎದುರಿಸುತ್ತೀರಿ? ಆರೆಸ್ಸೆಸ್‌ನ ಈ ಪ್ರಭಾವವನ್ನು ನಿವಾರಿಸಿಕೊಂಡು ನಿಮ್ಮ ಪರ್ಯಾಯ ಚಳವಳಿ ಹೇಗೆ ಬೆಳೆಯುತ್ತದೆ? ಕೊಂಚ ವಿವರಿಸಿ.

- ಇಷ್ಟೆಲ್ಲ ಹಬ್ಬಿಕೊಂಡರೂ ಸಹ ಶೇ.70 ಪ್ರಮಾಣದ ಹಿಂದೂಗಳು ಇದನ್ನು ಅನುಸರಿಸುತ್ತಿಲ್ಲ. ಸಂಕೀರ್ಣ ಮತೀಯವಾದವನ್ನು ಸ್ವೀಕರಿಸುತ್ತಿಲ್ಲ. ಇದರ ಕುರಿತು ನನಗೆ ನಂಬಿಕೆ ಇದೆ. ಇವರೆಲ್ಲ ಎಲ್ಲಾ ಪಕ್ಷಗಳಲ್ಲಿ ಇದ್ದಾರೆ. ಇವರು ಕಾರ್ಮಿಕ ಸಂಘಟನೆಯಲ್ಲಿ ಇದ್ದಾರೆ, ವ್ಯವಸ್ಥೆಯಲ್ಲಿ ಇದ್ದಾರೆ. ಇವರೊಳಗೆ ನಾವು ಪ್ರಗತಿಶೀಲ ಹಿಂದೂಯಿಸಂ ಅನ್ನು ಬೆಳೆಸಿದರೆ ಇವರು ಸುಧಾರಿಸುತ್ತಾರೆ, ಕೋಮುವಾದಿಗಳ ವಿರುದ್ಧ ಹೋರಾಡಬಹುದು ಎಂದು ಅವರಿಗೂ ಅನಿಸುತ್ತದೆ. ಆರೆಸ್ಸೆಸ್‌ನ ಶಿಕ್ಷಣ, ಗೀತ ಪ್ರೆಸ್, ಗೋರಖಪುರ ಪ್ರೆಸ್‌ನ ಪುಸ್ತಕಗಳು ನಮ್ಮನ್ನು ಹಾದಿ ತಪ್ಪಿಸಿವೆ ಎಂಬ ಭಾವನೆ ಇವರೊಳಗೆ ಬೆಳೆದರೆ ಅವರು ಇದರಿಂದ ಹೊರ ಬರುತ್ತಾರೆ. ಸಂಪೂರ್ಣ ಕತ್ತಲು ತುಂಬಿದ ಕೋಣೆಯೊಳಗೆ ನೀವು ಸಣ್ಣ ದೀಪವನ್ನು ಒಯ್ದರೂ ಅದು ಬೆಳಕನ್ನು ನೀಡುತ್ತದೆ. ಅಂಧಕಾರದಿಂದ ಬೆಳಕಿನೆಡಗೆ ಚಲಿಸಬೇಕಿದೆ. ಸತ್ಯಮೇವ ಜಯತೆಯನ್ನು ಮುಂದಿಟ್ಟುಕೊಂಡು ನಾವು ಮುಂದುವರಿಯೋಣ.

►ನಾನು ಮುಂಚಿಂದಲೂ ಕೇಳಬೇಕೆಂದುಕೊಂಡಿದ್ದೇನೆಂದರೆ ನಿಮ್ಮ ಆರ್ಯ ಸಮಾಜದ ಸದಸ್ಯರು, ಹಿಂಬಾಲಕರು, ಕಾರ್ಯಕರ್ತರು, ಸಂಘಟಕರು ಇವರ ಅಭಿಪ್ರಾಯ ಏನಿದೆ? ಈಗಿನ ನಿರಂಕುಶ ಪ್ರಭುತ್ವದ ಕುರಿತು, ಹಿಂದುತ್ವದ ಕುರಿತು ಅವರು ಹೇಗೆ ಚಿಂತಿಸುತ್ತಾರೆ? ನಿಮ್ಮ ಮೇಲೆ ದಾಳಿ ನಡೆದಾಗ ಅವರ ಪ್ರತಿಕ್ರಿಯೆ ಹೇಗಿತ್ತು? ಆಘಾತ ವ್ಯಕ್ತಪಡಿಸಿದರೇ? ಖಂಡಿಸಿದರೇ?

- ನಮ್ಮ ಆರ್ಯ ಸಮಾಜದ ಕೆಳವು ಶಾಖೆಗಳಲ್ಲಿ, ಕೆಲವು ವಲಯಗಳಲ್ಲಿ ಆರೆಸ್ಸೆಸ್‌ನವರು ಒಳನುಸುಳಿದ್ದಾರೆ. ಇದರ ಕಾರಣಕ್ಕಾಗಿ ಅಲ್ಲಿ ಭ್ರಮೆಗಳು ಉಂಟಾಗಿವೆ. ಆದರೆ ದೊಡ್ಡ ಮಟ್ಟದಲ್ಲಿ ಆರ್ಯ ಸಮಾಜದ ಸದಸ್ಯರಲ್ಲಿ ಒಳಿತು, ಕೆಡಕುಗಳ ತಿಳುವಳಿಕೆ ಇದೆ. ಈ ಕಾರಣಕ್ಕಾಗಿ ಅವರು ನನ್ನ ಜೊತೆ ಅಂದರೆ ಆರ್ಯ ಸಮಾಜದ ಚಿಂತನೆಗಳ ಬೆಂಬಲಕ್ಕೆ ನಿಂತಿದ್ದಾರೆ. ಅವರು ನನ್ನ ಮೇಲಿನ ಹಲ್ಲೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ನನ್ನ ಮೇಲಿನ ಹಲ್ಲೆಗಳನ್ನು ಖಂಡಿಸುತ್ತಿದ್ದಾರೆ.

►ನೀವು ಇಂದಿನ ಇಂಡಿಯಾವು ಅಟಲ್ ಭಾರತಕ್ಕಿಂತ ಭಿನ್ನವಾಗಿದೆ ಎಂದು ಹೇಳಿದ್ದೀರಿ. ನೀವು ಇದನ್ನು ವಿವರಿಸುತ್ತೀರ, ಅಟಲ್‌ಜಿಯವರ ಭಾರತ ಅಂದರೆ ಯಾವುದು? ಅಟಲ್‌ಜಿ ಅವರು ಬಿಜೆಪಿ ನಾಯಕತ್ವ ವಹಿಸಿದ ಕಾಲಘಟ್ಟದಲ್ಲಿಯೇ ಬಾಬರಿ ಮಸೀದಿಯ ಧ್ವಂಸವಾಯಿತು. ಆಗಲೂ ಅಟಲ್ ಬಿಹಾರಿ ವಾಜಪೇಯಿಯವರು ಇಡೀ ದುಷ್ಕೃತ್ಯವನ್ನು ಖಂಡಿಸಲಿಲ್ಲ. ಬಾಯಿ ಮಾತಿನ ಸಂತಾಪ ಸೂಚಿಸಿದರು. ಉನ್ಮಾದಗೊಂಡಿದ್ದ, ಧರ್ಮದ ಅಮಲೇರಿಸಿಕೊಂಡಿದ್ದ ತಮ್ಮ ಸ್ವಯಂಸೇವಕರು, ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲಿಲ್ಲ. ಅಟಲ್ ಅವರು ಪ್ರಧಾನಿಯಾಗಿದ್ದಾಗ ಗುಜರಾತ್‌ನಲ್ಲಿ ಮುಸ್ಲಿಮರ ಹತ್ಯಾಕಾಂಡ ನಡೆಯಿತು. ಆಗಲೂ ಬಾಯಿ ಮಾತಿನ ಕೆಲ ಶಬ್ದಗಳನ್ನು ಹೊರತುಪಡಿಸಿ ಅಲ್ಲಿನ ಬಿಜೆಪಿ ಸರಕಾರದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕನಿಷ್ಠ ಆಗಿನ ಮುಖ್ಯಮಂತ್ರಿ ಮೋದಿಯವರನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಇವೆಲ್ಲವೂ ಅಟಲ್‌ಜಿಯವರ ಭಾರತವಾಗಿತ್ತು. ಆಗಲೂ ಹತ್ಯಾಕಾಂಡಗಳು, ಕೋಮುಗಲಭೆಗಳು ನಡೆದವು. ಆದರೆ ನಿಮ್ಮ ಪ್ರಕಾರ ಅಟಲ್ ಅವರ ಭಾರತ ಎನ್ನುವುದಕ್ಕೆ ಸಮರ್ಥನೆ ಏನು?

- ನನಗೆ ನಿಮ್ಮ ಪ್ರಶ್ನೆ ಅರ್ಥವಾಯಿತು. ಅಟಲ್ ಅವರು ಸಂಪೂರ್ಣವಾಗಿ ನ್ಯಾಯ ಒದಗಿಸಲಿಲ್ಲ, ಸೆಕ್ಯುಲರಿಸಂಗೆ ನಿಯತ್ತನ್ನು ವ್ಯಕ್ತಪಡಿಸಲಿಲ್ಲ. ತಾವು ಮಾಡಬೇಕೆಂದುಕೊಂಡಿದ್ದನ್ನೂ ಸಹ ಮಾಡಲು ಸಾಧ್ಯವಾಗಲಿಲ್ಲ. ಇದರ ಕುರಿತಾಗಿ ಆರೋಪಗಳನ್ನು ಮಾಡಬಹುದು. ಆದರೆ ಅವರು ಕೋಮುವಾದಿಯಾಗಿದ್ದರೇ? ಅಥವಾ ಸುಳ್ಳುಗಳನ್ನು ಹೇಳಿ ನಾಟಕವಾಡುತ್ತಿದ್ದರೇ? ಇಲ್ಲ. ಅಟಲ್ ಅವರು ಹಾಗಿರಲಿಲ್ಲ. ಅವರು ಮನಸ್ಸಿನ ಆಳದಲ್ಲಿ ನರೇಂದ್ರ ಮೋದಿ ರಾಜೀನಾಮೆ ಕೊಡಬೇಕೆಂದು ಬಯಸುತ್ತಿದ್ದರು. ಅಟಲ್‌ಜಿಯವರ ಖಾಸ ಮಿತ್ರ ವೇದ ಪ್ರತಾಪ್ ವೈದ್ಯ ಅವರು ನನಗೆ ಮೊನ್ನೆ ಮಾತನಾಡುತ್ತ ‘ಅಟಲ್ ಅವರನ್ನು ನಾನು ಭೇಟಿ ಆಗಲು ಹೋದಾಗ ಅವರು ಹೇಳಿದರು ನಾನು ಇವರನ್ನು (ಮೋದಿ) ಕೆಳಗಿಳಿಸುತ್ತಿದ್ದೇನೆ. ಆದರೆ ಮೋದಿಯವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಕೆಲ ದಿನಗಳ ನಂತರ ಗೊತ್ತಾಯಿತು. ಆಗ ನಾನು (ವೈದ್ಯ) ಕೇಳಿದೆ ಏನಾಯಿತು? ಯಾಕೆ ರಾಜೀನಾಮೆ ಪಡೆಯಲು ಸಾಧ್ಯವಾಗಲಿಲ್ಲ. ಅಟಲ್‌ಜಿ ಹೇಳಿಕೆಯ ಅನುಸಾರ ಅಡ್ವಾಣಿಯವರು ಮಧ್ಯ ಪ್ರವೇಶಿಸಿ ಮೋದಿಯವರ ವಿರುದ್ಧ ಯಾವುದೇ ಕ್ರಮಗಳನ್ನು ತಡೆಹಿಡಿದರು’ ಎಂದು ಹೇಳಿದರು. ಅಡ್ವಾಣಿಯವರು ಆಗ ಆರೆಸ್ಸೆಸ್‌ನ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ಆರೆಸ್ಸೆಸ್ ಮತ್ತು ಇನ್ನಿತರರು ಮೋದಿಯವರನ್ನು ಕೆಳಗಿಳಿಸಲು ಬಿಡಲಿಲ್ಲ. ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಎನ್‌ಡಿಟಿವಿಯ ಪ್ರಣಬ್ ರಾಯ್‌ಗೆ ನೀಡಿದ ಸಂದರ್ಶನದಲ್ಲಿ ‘ಮಸೀದಿ ಕೆಡುವುದನ್ನು ನಾನು ಬೆಂಬಲಿಸುವುದಿಲ್ಲ’ ಎಂದು ಹೇಳಿದರು. ಮೋದಿಯವರೊಂದಿಗೆ ಅಟಲ್‌ಜಿ ಅವರನ್ನು ಹೋಲಿಸಿದಾಗ ಅವರು ಉದಾರವಾದಿಯಾಗಿದ್ದರು.

►ಆದರೆ ವಾಜಪೇಯಿಯವರು ನಾನು ಆರೆಸ್ಸೆಸ್ ಸ್ವಯಂಸೇವಕರೆಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ ಮತ್ತು ಆರೆಸ್ಸೆಸ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಆರೆಸ್ಸೆಸ್‌ನ ಭಾರತ ಚೆನ್ನಾಗಿ ಗೊತ್ತಿದೆ. ಹಾಗಿದ್ದಲ್ಲಿ ಅಟಲ್‌ಜಿಯವರ ಭಾರತವೆಂದರೆ?

- ಹೌದು. ಅಟಲ್‌ಜಿಯವರ ವಿಷಯದಲ್ಲಿ ಈ ರೀತಿಯ ಅನೇಕ ವೈರುಧ್ಯಗಳಿವೆ. ಒಂದೆಡೆ ಅವರು ತಾವು ಆರೆಸ್ಸೆಸ್ ಸ್ವಯಂಸೇವಕರೆಂದು ಹೇಳುತ್ತಿದ್ದರು. ಆದರೆ ಆರೆಸ್ಸೆಸ್ ಜೊತೆಗೆ ಕೆಲ ವಿಷಯಗಳಲ್ಲಿ ಭಿನ್ನಮತವನ್ನಿಟ್ಟುಕೊಂಡಿದ್ದರು. ಅವರಲ್ಲಿ ಆರೆಸ್ಸೆಸ್‌ನ ವಿಚಾರಗಳು ಮತ್ತು ಆರ್ಯ ಸಮಾಜದ ವಿಚಾರಧಾರೆ ಎರಡೂ ಮಿಳಿತಗೊಂಡಿದ್ದವು. ಹೀಗಾಗಿ ಅವರಲ್ಲಿ ಉದಾರವಾದಿ ಗುಣ ಇತ್ತು. ಅಂದರೆ ಆರ್ಯ ಸಮಾಜ ಮತ್ತು ಆರೆಸ್ಸೆಸ್‌ನ ಎರಡೂ ಗುಣಗಳನ್ನು ಹೊಂದಿದವರು ಶುದ್ಧ ಆರೆಸ್ಸೆಸ್ ಕಾರ್ಯಕರ್ತರಷ್ಟು ಕಟ್ಟರ್‌ವಾದಿಯಾಗಿರುವುದಿಲ್ಲ

► ಸರ್, ಈಗ ನಿರಂಕುಶ ಪ್ರಭುತ್ವವಿದೆ. ಫ್ಯಾಶಿಸಂ ಇದೆ. ಅಭಿವ್ಯಕ್ತಿ ಸ್ವಾತಂತ್ರವಿಲ್ಲ. ಮೊನ್ನೆ ತಮಿಳುನಾಡಿಗೆ ವಿಮಾನದಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಬಿಜೆಪಿ ವಿರುದ್ಧ, ಮೋದಿ ವಿರುದ್ಧ ಮಾತಾಡಿದ್ದಕ್ಕೆ ಜೈಲು ಸೇರಬೇಕಾಯಿತು. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಿಷಕ್ರೆಿಯವಾಗಿವೆ. ಇಲ್ಲವೋ ಒಂದು ಸಮಾನ ವೇದಿಕೆಯನ್ನು ನಿರ್ಮಿಸಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಹೆಣಗುತ್ತಿವೆ. ಇದು ಚುನಾವಣಾ ರಾಜಕೀಯದ ಮಾತಾಯಿತು. ಆದರೆ ಸಮಾಜೋ-ಸಾಂಸ್ಕೃತಿಕ ನೆಲೆಯಲ್ಲಿ ನಾವು ಏನು ಮಾಡಬಹುದು? ಯಾವ ಸಾಧ್ಯತೆಗಳಿವೆ? ಇಲ್ಲಿ ಸಮಾನ ವೇದಿಕೆ ಕಟ್ಟಿಕೊಳ್ಳಲು ಸಾಧ್ಯವೇ? ಏಕೆಂದರೆ ಆರೆಸ್ಸೆಸ್ ಈ ಸಮಾಜೋ-ಸಾಂಸ್ಕೃತಿಕ ವಲಯದಲ್ಲಿ ತುಂಬಾ ಗಟ್ಟಿಯಾಗಿ, ಆಳವಾಗಿ ನೆಲೆಯೂರಿದೆ. ಈ ಹಿನ್ನೆಲೆಯಲ್ಲಿ ಆರ್ಯಸಮಾಜದ ಕಾರ್ಯಕರ್ತರು, ನಿಮ್ಮಂತಹ ಮಾನವತಾವಾದಿಗಳು ಯಾವ ರೀತಿ ಭಿನ್ನವಾದ ಸಾಂ್ಕೃತಿಕ ಚಲನಶೀಲತೆಯನ್ನು ರೂಪಿಸುತ್ತೀರಿ? ಆರೆಸ್ಸೆಸ್‌ನ ವಿಧ್ವ್ವಂಸಕ ಸಾಂ್ಕೃತಿಕ ನೀತಿಯನ್ನು ಪಲ್ಲಟಗೊಳಿಸಲು ಯಾವ ಬಗೆಯ ಸಮಾನಮನಸ್ಕ ವೇದಿಕೆ ಕಟ್ಟಲು ಬಯಸುತ್ತೀರಿ?

- ನೋಡಿ ಈಗ ಆರೆಸ್ಸೆಸ್ ಸಂಪೂರ್ಣ ಸಾಂಸ್ಕೃತಿಕ ಸಂಘಟನೆ ಎನ್ನುವುದರಲ್ಲಿ ನಂಬಿಕೆ ಇಡಬಾರದು. ಅವರ ಸಿದ್ಧಾಂತವೆಂದರೆ ಅದು ಸಾಂಸ್ಕೃತಿಕ-ರಾಷ್ಟ್ರೀಯತೆ. ಹಿಟ್ಲರ್‌ನ ಸಿದ್ಧಾಂತವೂ ಇದೇ ಆಗಿತ್ತು. ಆತನೂ ಸಹ ಸಾಂಸ್ಕೃತಿಕ-ರಾಷ್ಟ್ರೀಯತೆ ಕುರಿತಾಗಿ ಮಾತನಾಡುತ್ತಿದ್ದ. ಹಿಟ್ಲರ್‌ನು ಯಹೂದಿಗಳ ಹತ್ಯೆ ಮಾಡಿದ. ಯಹೂದಿಗಳನ್ನು ತಮ್ಮ ಶತ್ರುಗಳೆಂದು ಗುರಿ ಇಟ್ಟು ಹತ್ಯೆ ಮಾಡಿದ. ಇದೇ ಮಾದರಿಯಲ್ಲಿ ಆರೆಸ್ಸೆಸ್ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ಗುರಿಯಾಗಿಸಿಕೊಂಡಿದೆ. ಗೋಳ್ವಾಲ್ಕರ್ ಇವರನ್ನು ಆಂತರಿಕ ಶತ್ರುಗಳೆಂದು ಕರೆದರು. ಅವರಿಗೆ ಸಂವಿಧಾನ ಬೇಕಾಗಿರಲಿಲ್ಲ. ಆರೆಸ್ಸೆಸ್ ಅತ್ಯಂತ ಚಾಲಾಕಿಯಿಂದ ರಾಜಕೀಯ ಅಂಗವನ್ನು ಬೆಳೆಸಿತು. ಜನಸಂಘವನ್ನು ಹುಟ್ಟು ಹಾಕಿತು. ಅದು ಕೇವಲ ಸಾಂಸ್ಕೃತಿಕ ರಾಜಕಾರಣವನ್ನು ಮಾಡಿದ್ದರೆ ಅದನ್ನು ನಿಭಾಯಿಸಬಹುದಿತ್ತು. ಸೋಲಿಸಬಹುದಿತ್ತು. ಆದರೆ ಅದು 1952ರಲ್ಲಿ ಭಾರತೀಯ ಜನಸಂಘದ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿತು. ಇದು ಮುಂದೆ ಭಾರತೀಯ ಜನತಾ ಪಕ್ಷವಾಗಿ ಬದಲಾಯಿತು. ಇಂದು ಇದೇ ಬಿಜೆಪಿ ತನ್ನ ಸಂಘ ಪ್ರಚಾರಕನನ್ನು ಗುಜರಾತ್‌ನ ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಅಲ್ಲಿ ಅವರನ್ನು ಬಳಸಿಕೊಂಡು ಆ ರಾಜ್ಯವನ್ನು ಪ್ರಯೋಗಶಾಲೆಯನ್ನಾಗಿಸಿ ಪ್ರಯೋಗವನ್ನು ನಡೆಸುತ್ತದೆ. ನಂತರ ಅವರನ್ನೇ ಭಾರತದ ಪ್ರಧಾನಮಂತ್ರಿಯಾಗಿ ಮಾಡುತ್ತದೆ. ಆ ಮೂಲಕ ಇಡೀ ದೇಶದಲ್ಲಿ ಪ್ರಯೋಗ ಮಾಡುತ್ತಿದೆ. ಅವರ ಸಂಘ ಪ್ರಚಾರಕ ಮಹಾರಾಷ್ಟ್ರ್ಟ್ರದ ಮುಖ್ಯಮಂತ್ರಿಯಾಗುತ್ತಾರೆ, ಹರಿಯಾಣದ ಮುಖ್ಯಮಂತ್ರಿಯಾಗುತ್ತಾರೆ. ನೀವು ಗಮನಿಸುತ್ತಿದ್ದೀರಿ ಇದೇ ಸಂಘ ಪ್ರಚಾರಕರು ವಿಶ್ವವಿದ್ಯಾನಿಲಯಗಳಲ್ಲಿ, ಕಾಲೇಜುಗಳಲ್ಲಿ ನೇಮಕಗೊಳ್ಳುತ್ತಿದ್ದಾರೆ. ಶಿಕ್ಷಣ ವಲಯದಲ್ಲಿ ಸ್ಯಯಂಸೇವಕರನ್ನು ತುಂಬುತ್ತಿದೆ. ನೀವು ನೋಡುತ್ತಿರುವ ಆರೆಸ್ಸೆಸ್ ರಾಜಕೀಯ ಶಕ್ತಿಯಿಂದ ಬೇರ್ಪಟ್ಟಿಲ್ಲ. ರಾಜಕೀಯ ವ್ಯವಸ್ಥೆಯನ್ನು ಪ್ರಬಲವಾಗಿ ಬಳಸಿಕೊಳ್ಳುತ್ತಿದೆ. ನಾವು ಆರ್ಯ ಸಮಾಜದವರು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆವು. ಬ್ರಿಟಿಷ್ ಇತಿಹಾಸಕಾರ ವಿನ್ಸೆಂಟ್ ಶಿರೋನ್ ಅವರು ‘ಇಂಡಿಯಾದಲ್ಲಿ ಅಶಾಂತಿ’ ಎನ್ನುವ ಪುಸ್ತಕ ಬರೆದರು. ಅದರಲ್ಲಿ ಎಲ್ಲಿ ಆರ್ಯ ಸಮಾಜವಿರುತ್ತದೆಯೋ ಅಲ್ಲಿ ಅಶಾಂತಿ, ದಂಗೆ ಇರುತ್ತದೆ ಎಂದು ಉಲ್ಲೇಖಿಸುತ್ತಾರೆ. ಆರ್ಯ ಸಮಾಜವು ಇಷ್ಟು ದೊಡ್ಡ ಕೆಲಸ ಮಾಡಿದೆ. ಶ್ರದ್ಧಾನಂದ, ಲಾಲಾ ಲಜಪತ್‌ರಾಯ್, ಶಹೀದ್ ಭಗತ್‌ಸಿಂಗ್, ರಾಮಪ್ರಸಾದ್, ಅಶ್ಫಕುಲ್ಲಾ ಖಾನ್ ಇವರೆಲ್ಲ ಆರ್ಯ ಸಮಾಜದ ಉತ್ಪನ್ನವಾಗಿದ್ದರು. ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದರು. ಆದರೆ ಆರೆಸ್ಸೆಸ್ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ. ಜೈಲು ಸೇರಲಿಲ್ಲ.

►ಆದರೆ ಲಾಲಾ ಲಜಪತ್‌ರಾಯ್ ಅವರು ಹಿಂದೂ ಮಹಾಸಭಾದ ಸದಸ್ಯರಾಗಿದ್ದರು, ಅದರ ಪರವಾಗಿ ಕೆಲಸ ಮಾಡಿದ್ದರು. ಆ ಕಾಲದಲ್ಲಿ ಲಾಲಾ ಲಜಪತ್‌ರಾಯ್, ಬಿಪಿನ್‌ಚಂದ್ರ ಪಾಲ್, ಬಾಲ ಗಂಗಾಧರ ತಿಲಕ್ ಅವರನ್ನು ಲಾಲ್, ಪಾಲ್, ಬಾಲ್ ಎಂದು ಕರೆಯುತ್ತಿದ್ದರು. ಈ ಮೂವರು ತೀವ್ರ ಹಿಂದೂವಾದಿಗಳಾಗಿದ್ದರು. ಇವರನ್ನು ಹಿಂದೂ ಮಹಾಸಭಾದ ಸೌಮ್ಯವಾದಿಗಳೆಂದು ಕರೆಯುತ್ತಿದ್ದರು. ಹೇಗೆ ಅಡ್ವಾಣಿಯವರನ್ನು ಕಟ್ಟರ್‌ವಾದಿ ಎಂದೂ ವಾಜಪೇಯಿಯವರನ್ನು ಉದಾರವಾದಿ ಎಂದು ಕರೆಯುತ್ತಿದ್ದರೊ ಹಾಗೆ. ಈ ಲಾಲ್, ಪಾಲ್, ಬಾಲ್ ಮೃದು ಹಿಂದುತ್ವವಾದಿಗಳಾಗಿದ್ದರು ಅಲ್ಲವೇ?

- ಹೌದು. ಲಾಲಾ ಲಜಪತ್ ರಾಯ್ ಅವರು ಕೆಲಕಾಲ ಹಿಂದೂ ಮಹಾ ಸಭಾದಲ್ಲಿದ್ದರು. ಆದರೆ ಅಲ್ಲಿನ ತೀವ್ರವಾದ ಸಿದ್ಧಾಂತಗಳಿಂದ ಭ್ರಮನಿರಸನಗೊಂಡು ಹೊರಬಂದರು. ನಮ್ಮಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಆರ್ಥಿಕತೆ ಇರಬಹುದು, ರಾಷ್ಟ್ರೀಯತೆ, ಧರ್ಮ ಇರಬಹುದು ಈ ಭಿನ್ನತೆಯನ್ನು ಒಪ್ಪಿಕೊಂಡು ಮುನ್ನಡೆಯುವವರು ಕಡಿಮೆ ಕಟ್ಟರ್‌ವಾದಿಗಳಾಗಿರುವುದಿಲ್ಲ. ಇವರು ಹಿಂಸೆಯನ್ನು ಬಳಸುವುದಿಲ್ಲ. ಸಂಧಾನ, ಚರ್ಚೆಯ ಮೂಲಕ ಭಿನ್ನಾಭಿಪ್ರಾಯವನ್ನು ಅರಿಯಲು ಪ್ರಯತ್ನಿಸುತ್ತಾರೆ. ಇದು ನಮ್ಮ ಶಾಸ್ತ್ರದ ಪರಂಪರೆ. ಆದರೆ ಆರೆಸ್ಸೆಸ್‌ನವರು ಇದನ್ನು ಶಸ್ತ್ರಾಸ್ತ್ರವನ್ನಾಗಿ ಬದಲಿಸಿದರು. ಇವರ ಬಳಿ ವಾದಗಳಿಲ್ಲ. ಸತ್ಯ ಹೇಳುವ ಧೈರ್ಯವಿಲ್ಲ. ಬೌದ್ಧ್ದಿಕತೆ ಇಲ್ಲ. ಇದು ಇವರ ದೌರ್ಬಲ್ಯ. ಹೀಗಾಗಿ ದೌರ್ಜನ್ಯ ನಡೆಸುತ್ತಾರೆ. ಇದು ಇವರ ದಿವಾಳಿತನವನ್ನು ತೋರಿಸುತ್ತದೆ. ನಾವು ಸಮಾಜವನ್ನು ಅದರಲ್ಲೂ ಯುವಜನತೆಯನ್ನು ಎಚ್ಚರಿಸಬೇಕಾಗಿದೆ. ನೀವು ಸಂಘಪರಿವಾರದಿಂದ ಭಾರತದ ಪ್ರಧಾನಮಂತ್ರಿಯ ಕುರ್ಚಿಯನ್ನು ಕಸಿದುಕೊಳ್ಳಿ. ಆಗ ಇವರು ಅಷ್ಟ್ಟು ಅಪಾಯಕಾರಿಯಾಗಿರುವುದಿಲ್ಲ. ಆಗ ಚಿಂತನೆ, ಸಿದ್ಧ್ದಾಂತಗಳ ರೂಪದಲ್ಲಿ ಮಾತ್ರ ಇರುತ್ತಾರೆ. ಆದರೆ ಅಧಿಕಾರವು ಇವರಿಗೆ ಕೊಟ್ಟ ತಾಕತ್ತಿನಿಂದ ದುಪ್ಪಟ್ಟು ಅಪಾಯಕಾರಿಯಾಗುತ್ತಾರೆ. ಇವರನ್ನು ಸೋಲಿಸಬೇಕೆಂದರೆ ಏಕತೆ ಸಾಧಿಸಬೇಕು. ಎಲ್ಲೆಲ್ಲಿ ವಿರೋಧಿ ರಾಜಕೀಯ ಪಕ್ಷಗಳ ನಡುವೆ ಐಕ್ಯತೆ ಇದೆಯೊ ಅಲ್ಲಿ ಬಿಜೆಪಿ ಸೋತಿದೆ. ಅಂದರೆ ವಿರೋಧ ಪಕ್ಷಗಳಿಗೆ ತಾವು ಒಗ್ಗಟ್ಟಾಗಿದ್ದರೆ ಗೆಲ್ಲುತ್ತೇವೆ, ಬೇರೆ ಬೇರೆಯಾದರೆ ಸೋಲುತ್ತೇವೆ ಎನ್ನುವ ಅರಿವು ಬಂದಿದೆ.

►ಇದು ಚುನಾವಣಾ ರಾಜಕೀಯದ ಮಾತಾಯಿತು. ನಾನು ಕೇಳುತ್ತಿರುವುದು ಸಾಮಾಜಿಕ-ಸಾಂಸ್ಕೃತಿಕದ ಕುರಿತಾಗಿ. ಇಲ್ಲಿ ಆರೆಸ್ಸೆಸ್ ಪ್ರಬಲವಾಗಿ, ಬಲಿಷ್ಠ ವಾಗಿ ಬೆಳೆದಿದೆ. ಏಕೆಂದರೆ ಆರೆಸ್ಸೆಸ್‌ಗೆ ಆಡಳಿತ ಮುಖ್ಯವಲ್ಲ. ನೀವು ಹೇಳುವ ಅಧಿಕಾರದಿಂದ ವಂಚಿತವಾದರೆ ಸಂಘ ಪರಿವಾರದ ತಾಕತ್ತು ಕೊಂಚ ಕಡಿಮೆ ಯಾಗಬಹುದು. ಆದರೆ ಆರೆಸ್ಸೆಸ್ ಅಂತೂ ಇರುತ್ತದೆಯಲ್ಲವೇ? ಅದು ಮುಂದಿನ ನೂರು ವರ್ಷಗಳ ಭಾರತ ತನ್ನದು ಎನ್ನುವ ಧಾಟಿಯಲ್ಲಿ ಮಾತನಾಡುತ್ತದೆ. ಅದೇ ದಿಕ್ಕಿನಲ್ಲಿ ಸಂಘಟನೆ ನಡೆಸುತ್ತದೆ.

- ಇಲ್ಲ. ಅದು ಹಾಗಲ್ಲ. ಆರೆಸ್ಸೆಸ್‌ಗೆ ಕಚ್ಚುವ ಹಲ್ಲುಗಳು ಇಲ್ಲದಿದ್ದರೆ ಅದು ನಿಶ್ಯಕ್ತವಾಗುತ್ತದೆ. ಅದಕ್ಕೆ ರಾಜಕೀಯ ಅಧಿಕಾರ ಬೇಕೇ ಬೇಕು. ಒಂದು ವೇಳೆ ಪೊಲೀಸ್ ಪಡೆ ಯಾರ ಪರವಾಗಿರದೆ ತಟಸ್ಥವಾಗಿದ್ದರೆ ರಾಜ್ಯ ಸರಕಾರಗಳು ಮುಹಮ್ಮದ್ ಅಖ್ಲಾಕ್ ಕೊಲೆಗಾರರು, ಪೆಹ್ಲೂ ಖಾನ್ ಕೊಲೆಗಾರರನ್ನು ಶೋಧಿಸಿ ಬಂಧಿಸುತ್ತಿದ್ದವು. ಈಗ ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸುತ್ತಿದ್ದಾರಲ್ಲವೇ ಆ ರೀತಿಯಲ್ಲಿ. ಇವರು ಹೇಡಿಗಳು. ಓಡಿ ಹೋಗುತ್ತಾರೆ. ನಿಜವಾದ ಯುದ್ಧವೆಂದರೆ ಚುನಾವಣಾ ಕಣ. ಸಮಾಜೋ-ಸಾಂಸ್ಕೃತಿಕ ಸಂಘಟನೆ ಕೆಳಮಟ್ಟದಲ್ಲಿ ನಡೆಯುತ್ತಿರಬೇಕು, ಮೇಲ್ಮಟ್ಟದಲ್ಲಿ ಚುನಾವಣಾ ರಾಜಕೀಯದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಬೇಕು. ಎರಡೂ ಜೊತೆ ಜೊತೆಗೆ ನಡೆಯಬೇಕು.

►ಆದರೆ ಇಲ್ಲಿನ ಬಿಕ್ಕಟ್ಟು ಏನೆಂದರೆ ವಿರೋಧ ಪಕ್ಷಗಳಲ್ಲಿ ಅನೇಕ ಬಣಗಳಿವೆ. ಸೈದ್ಧ್ದಾಂತಿಕ ಪ್ರತ್ಯೇಕತೆ ಇದೆ. ಬಲಪಂಥೀಯ, ಎಡಪಂಥೀಯ, ಅಂಬೇಡ್ಕರ್‌ವಾದಿ, ಮಧ್ಯಪಂಥೀಯ, ಎಡ ಮಧ್ಯಪಂಥೀಯ, ಬಲ ಮಧ್ಯಪಂಥೀಯ ಸಿದ್ಧಾಂತಗಳಿವೆ. ಸೈದ್ಧಾಂತಿಕವಾಗಿ ಇವರೆಲ್ಲಾ ಎಂದೂ ಒಗ್ಗಟ್ಟಾಗಲು ಸಾಧ್ಯವಿಲ್ಲ. ಬಿಜೆಪಿಯನ್ನು ಸಮಾನ ಶತ್ರುಎಂದು ಪರಿಗಣಿಸಿದರೂ ಅದರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಅನೇಕ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಒಂದು ಗಂಟೆ ಇವರನ್ನ್ನು ನೀವು ಆರೆಸ್ಸೆಸ್‌ನ ಮತಾಂಧತೆಯನ್ನು ಸೋಲಿಸುವುದು ಹೇಗೆ ಎಂದು ಕಾರ್ಯಯೋಜನೆ ರೂಪಿಸಿ ಎಂದು ಕೋಣೆಯಲ್ಲಿ ಕೂಡಿಸಿದರೆ, ಒಂದು ಗಂಟೆಯ ನಂತರ ತಮ್ಮೆಳಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವಿರೋಧಗಳ ಪಟ್ಟಿಯೊಂದಿಗೆ, ಪರಸ್ಪರ ಟೀಕೆಗಳೊಂದಿಗೆ ಹೊರಬರುತ್ತಾರೆ. ಇವರ ಮಧ್ಯೆ ಒಮ್ಮತ ಮೂಡಿಸುವುದು ಹೇಗೆ? ಒಂದು ವೇಳೆ ಒಮ್ಮತ ಸಾಧ್ಯವಾಗದಿದ್ದರೆ ಕನಿಷ್ಠ ಒಂದು ಮಟ್ಟದ ಹೊಂದಾಣಿಕೆಯನ್ನು ಸಾಧಿಸುವುದು ಹೇಗೆ? ಇದು ಕಟುಸತ್ಯ.

- ಆದರೆ ಶಕ್ತಿಕೇಂದ್ರದ ತರ್ಕದ ಮುಂದೆ ಈ ಎಲ್ಲ ಕಟುಸತ್ಯವೂ ಹಾರಿಹೋಗುತ್ತದೆ. ನೀವು ಅಟಲ್ ಬಿಹಾರಿ ವಾಜಪೇಯಿಯವರು ಮೂರು ಬಾರಿ ಪ್ರಧಾನಿಯಾದ ಸಂದರ್ಭಗಳನ್ನು ಅವಲೋಕಿಸಿ. ಮೊದಲ ಬಾರಿ ಕೇವಲ ಒಂದು ಮತದಿಂದ ಸೋತರು. ಆ ಸೋಲಿನ ನಂತರ ಬಿಜೆಪಿಗೆ ತನ್ನ ರಾಮಮಂದಿರ ಪ್ರಸ್ತಾಪವನ್ನು ಕೈಬಿಡಬೇಕಾಯಿತು. ನಂತರವಷ್ಟೇ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿತು. ಸಮ್ಮಿಶ್ರ ಸರಕಾರದ ಧರ್ಮವನ್ನು ಪಾಲಿಸಿದರೆ ಎಲ್ಲವೂ ಸರಳಗೊಳ್ಳುತ್ತದೆ. ಬಿಜೆಪಿಗೆ ಬಹುಮತ ದೊರಕದಂತೆ ಕಾರ್ಯಯೋಜನೆ ರೂಪಿಸಬೇಕಾಗಿದೆ. ಸಮತೆ, ಸಮಾನತೆಯಲ್ಲಿ ನಂಬಿಕೆ ಇರುವ ಪಕ್ಷಗಳು, ಮಾನವತಾವಾದವನ್ನು ನಂಬುವ ಪಕ್ಷಗಳು ಹತ್ತಿರವಾಗಬೇಕು. ಈ ಪ್ರಗತಿಪರ ವಲಯವು ಅಲ್ಪಸಂಖ್ಯಾತವಲ್ಲ. ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಬಹಿರಂಗವಾಗಿ ಮಾತನಾಡುತ್ತಿಲ್ಲ. ಮೌನವಾಗಿದ್ದಾರೆ. ಇವರು ತಮ್ಮ ಮೌನ ಮುರಿದು ಒಂದಾಗಬೇಕಿದೆ. ಇವರೆಲ್ಲ ವಿರೋಧ ಪಕ್ಷಗಳ ನಡುವೆ ಪರಸ್ಪರ ಒಗ್ಗಟ್ಟು ಸಾಧಿಸುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ. ಕಾಲಮಿತಿ ಹಾಕಿಕೊಂಡು ಪ್ರಣಾಳಿಕೆ ರೂಪಿಸಬೇಕು. ಇಲ್ಲಿ ಶಿಕ್ಷಣ, ಆರೋಗ್ಯದಲ್ಲಿ ಸಮಾನತೆ ಸಾಧಿಸಬೇಕು, ಗ್ರಾಮಪಂಚಾಯತಿಯನ್ನು ಬಲವರ್ಧನೆಗೊಳಿಸಬೇಕು, ಸಂವಿಧಾನ ಧರ್ಮಗ್ರಂಥವಾಗಬೇಕು ಎನ್ನುವ ಸಾಮಾನ್ಯ ಕಾರ್ಯಕ್ರಮಗಳೊಂದಿಗೆ ಒಂದಾಗಬೇಕು. ಹಿಂದೂ ಉದಾರವಾದಿ, ಮುಸ್ಲಿಂ ಉದಾರವಾದಿ, ಕ್ರಿಶ್ಚಿಯನ್ ಉದಾರವಾದಿ ಪರಸ್ಪರ ಹತ್ತಿರ ಬರಬೇಕು. ಈ ಉದಾರವಾದಿಗಳು ಎಲ್ಲ ಕಡೆಯಲ್ಲಿ ಇದ್ದಾರೆ. ಆದರೆ ಮೌನವಾಗಿದ್ದಾರೆ. ಭಯದಿಂದ, ಸಂಘಟನೆಯ ಕೊರತೆಯಿಂದ ನಿಶ್ಚಲವಾಗಿದ್ದಾರೆ. ನಾವೆಲ್ಲ ಸಮ್ಮಿಶ್ರ ರಾಜಕಾರಣದ ಕಡೆಗೆ ಸಾಗಬೇಕು. ಅದೇ ವಾಸ್ತವ.

►ಇಲ್ಲಿ ಪ್ರಧಾನಮಂತ್ರಿ ಆಯ್ಕೆಯ ಕುರಿತಾಗಿಯೂ ವಿರೋಧ ಪಕ್ಷಗಳಲ್ಲಿ ಒಮ್ಮತವಿಲ್ಲ. ಪರಸ್ಪರ ಅಪನಂಬಿಕೆಗಳಿವೆ, ಗೊಂದಲಗಳಿವೆ.

- ಇಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ಸಂಸದೀಯ ಪ್ರಜಾಪ್ರಭುತ್ವವನ್ನು ಅಧ್ಯಕ್ಷ ಮಾದರಿಯ ಪ್ರಜಾಪ್ರಭುತ್ವವನ್ನಾಗಿ ಬದಲಾಯಿಸಿದ್ದಾರೆ. ತಾನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಂಡು ವಿರೋಧ ಪಕ್ಷಗಳನ್ನು ನಿಮ್ಮಲ್ಲಿ ಆ ಅಭ್ಯರ್ಥಿ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸಮ್ಮಿಶ್ರ ಬಣಗಳ ವೇದಿಕೆಯಲ್ಲಿ ಒಬ್ಬ ವ್ಯಕ್ತಿಯನ್ನು ಪ್ರಧಾನಮಂತ್ರಿಯೆಂದು ಆಯ್ಕೆ ಮಾಡುವ ವಿಧಾನವಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೊರಡುವಾಗ ‘ನಿಮ್ಮಲ್ಲಿ ಇಷ್ಟೊಂದು ಜಾತಿಗಳಿವೆ, ವಿವಿಧ ಭಾಷೆಗಳಿವೆ, ಧರ್ಮಗಳಿವೆ, ರಾಜ್ಯಗಳಿವೆ. ನೀವು ಹೇಗೆ ಆಡಳಿತ ನಡೆಸುತ್ತೀರಿ? ನಿಮಗೆ ಅದರ ಅನುಭವವಿಲ್ಲವಲ್ಲ’ ಎಂದು ಕೇಳುತ್ತಾರೆ. ಆಗ ಗಾಂಧೀಜಿಯವರು ‘ನೀವು ಮೊದಲು ತೊಲಗಿ, ನಾವು ನಮ್ಮದನ್ನು ಸಂಭಾಳಿಸುತ್ತೇವೆ’ ಎಂದು ಹೇಳುತ್ತಾರೆ. ಅರ್ಥವಾಯ್ತಲ್ವ. ಮೋದಿಯು ಸಹ ಬ್ರಿಟಿಷರ ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ, ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಇಲ್ಲಿ ನಾನಿದ್ದೇನೆ, ನಿಮ್ಮಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸಿ ಗೊಂದಲ ಮೂಡಿಸುತ್ತಿದ್ದಾರೆ. ಇದು ಸುಳ್ಳುವಾದ ಎಂದು ನಿರ್ಲಕ್ಷಿಸಬೇಕು. ಇದರ ಜಾಲದಲ್ಲಿ ಬೀಳಬಾರದು. ನಮ್ಮ ಬಳಿ ಬಹುಸಂಖ್ಯಾತ ಜನರಿದ್ದಾರೆ, ನಿಮ್ಮ ಆಡಳಿತದಿಂದ ಭ್ರಮನಿರಸನಗೊಂಡ ಮಹಿಳೆ, ರೈತ, ಕೂಲಿ ಕಾರ್ಮಿಕರು, ಆದಿವಾಸಿ, ದಲಿತರಿದ್ದಾರೆ ಎಂದು ಉತ್ತರಿಸಬೇಕು. ಇವರೆಲ್ಲ ನಿಮ್ಮ ವಿರುದ್ಧವಿದ್ದಾರೆ. ನೀವು ಮೊದಲು ಕೆಳಗಿಳಿಯಿರಿ ಎನ್ನುವ ವಾತಾವರಣ ನಿರ್ಮಾಣವಾಗಬೇಕು. ಅಧಿಕಾರ ಹಂಚಿಕೊಳ್ಳುವ ಸಂದರ್ಭ ಬಂದರೆ ಎರಡು ವರ್ಷಕ್ಕೊಮ್ಮೆ ಸರದಿಯಲ್ಲಿ ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡಬಹುದು. ಐದು ವರ್ಷಗಳಲ್ಲಿ ಮೂವರು ಪ್ರಧಾನ ಮಂತ್ರಿಗಳಾಗಬಹುದು. ಅದರಲ್ಲಿ ತಪ್ಪೇನಿದೆ? ಈಗಂತೂ ವಿರೋಧ ಪಕ್ಷಗಳು ಪಾಠ ಕಲಿತಿವೆ.

►ನಾವು ಫ್ಯಾಶಿಸಂ ವಿರುದ್ಧ ಹೋರಾಡಬೇಕೆಂದರೆ ಮೊದಲು ಇಲ್ಲಿನ ಅಸಮಾನ ಜಾತಿ ಪದ್ಧತಿಯ ವಿರುದ್ಧ ಹೋರಾಡಬೇಕು. ಭಾರತದಲ್ಲಿ ಫ್ಯಾಶಿಸಂನ ಶಕ್ತಿಯೆಂದರೆ ಅದು ಜಾತಿ ಪದ್ಧತಿ. ಇದರ ವಿರುದ್ಧ ಒಗ್ಗಟ್ಟಾಗಿ ಸಂಘಟಿತರಾಗೋಣ. ಸರ್, ನಮ್ಮ್ಮಾಂದಿಗೆ ಸಂವಾದ, ಚರ್ಚೆ ನಡೆಸಿದ್ದಕ್ಕೆ ತುಂಬ ಧನ್ಯವಾದಗಳು. ನಾವು ಸದಾ ನಿಮ್ಮೆಂದಿಗೆ, ನಿಮ್ಮ ಬೆಂಬಲಕ್ಕಿರುತ್ತೇವೆ.

- ಧನ್ಯವಾದಗಳು. ಬಸವಣ್ಣ ಅವರು ಶುರು ಮಾಡಿದ ಹೋರಾಟ ಇಂದು ಅತ್ಯಂತ ಪ್ರಸ್ತುತವಾಗಿದೆ. ಬಸವಣ್ಣನವರು ಇಂದು ನಮಗೆ ಮಾದರಿಯಾಗಬೇಕು.

ಸ್ವಾಮಿ ವಿವೇಕಾನಂದರ ಕುರಿತಾದ ವಿಶ್ವಾಸಾರ್ಹ, ನೈಜ ಪುಸ್ತಕಗಳನ್ನು ಓದಿದಾಗ ವಿವೇಕಾನಂದರಿಗೆ ಬೀಫ್ ಆಹಾರವು ಇಷ್ಟವೋ, ಇಲ್ಲವೋ ಎಂದು ಗೊತ್ತಾಗುತ್ತದೆ. ಅವರು ಬೀಫ್ ಸೇವಿಸುವುದನ್ನು ಖುಷಿಪಡುತ್ತಿದ್ದರೋ ಇಲ್ಲವೋ ಎಂದು ಗೊತ್ತಾಗುತ್ತದೆ. ಸಾವರ್ಕರ್ ಅವರೂ ಸಹ ಬೀಫ್ ಆಹಾರದ ಪರವಾಗಿ ಮಾತನಾಡಿದ್ದಾರೆ. ಎರಡನೆಯದಾಗಿ ನಾವು ಯಾವುದೇ ಆಹಾರ ಸಂಸ್ಕೃತಿಯ ಕುರಿತು ಮಾತನಾಡುವಾಗ ಮೊದಲು ಅದರ ಉಪಯುಕ್ತತೆ, ನಿರುಪಯುಕ್ತತೆ ಕುರಿತು ಮನವರಿಕೆ ಮಾಡಿ ಕೊಡಬೇಕು. ಸಾಧ್ಯವಾದರೆ ನಮ್ಮ ಬದುಕಿನ ಕ್ರಮವನ್ನ್ನು ಉದಾಹರಣೆಯಾಗಿ ಹೇಳಬೇಕು. ಆದರೆ ಎಲ್ಲಿಯೂ ಒತ್ತಾಯ ಮಾಡುವುದನ್ನು ನಿಲ್ಲಿಸಬೇಕು.

ಇಲ್ಲಿ ಸೆಕ್ಯುಲರಿಸಂ ಅಂದರೆ ಧರ್ಮನಿರಪೇಕ್ಷೆ ಅಲ್ಲ, ಬದಲಾಗಿ ಅದು ಮತ ನಿರಪೇಕ್ಷತೆ. ವೇದದ, ಉಪನಿಷತ್ತಿನ ಬೋಧನೆಗಳು, ಚಿಂತನೆಗಳ ಮೂಲ ಹಿಂದೂಯಿಸಂ ಎಂದು ಕರೆಯುತ್ತೇವೆ. ಇಲ್ಲಿ ಸಾಂಪ್ರದಾಯಿಕತೆಯ ವಿರೋಧವಿದೆ. ಇಲ್ಲಿ ಹಿಂದೂವಾದವಿಲ್ಲ, ಮುಸ್ಲಿಂವಾದವಿಲ್ಲ. ಇಲ್ಲಿ ಮಾನವತಾವಾದವಿದೆ. ವೇದಗಳಲ್ಲಿ ಮನುಷ್ಯನಾಗು, ಉತ್ತಮ ವ್ಯಕ್ತಿತ್ವ ಬೆಳೆಸಿಕೋ ಎಂದು ಹೇಳಲಾಗಿದೆ. ಈಗ ಮತ್ತೆ ವೇದಗಳ ಕಡೆಗೆ ಮರಳಬೇಕಾಗಿದೆ.

ನಮ್ಮ ಆರ್ಯ ಸಮಾಜದ ಕೆಳವು ಶಾಖೆಗಳಲ್ಲಿ, ಕೆಲವು ವಲಯಗಳಲ್ಲಿ ಆರೆಸ್ಸೆಸ್‌ನವರು ಒಳನುಸುಳಿದ್ದಾರೆ. ಇದರ ಕಾರಣಕ್ಕಾಗಿ ಅಲ್ಲಿ ಭ್ರಮೆಗಳು ಉಂಟಾಗಿವೆ. ಆದರೆ ದೊಡ್ಡ ಮಟ್ಟದಲ್ಲಿ ಆರ್ಯ ಸಮಾಜದ ಸದಸ್ಯರಲ್ಲಿ ಒಳಿತು, ಕೆಡಕುಗಳ ತಿಳುವಳಿಕೆ ಇದೆ. ಈ ಕಾರಣಕ್ಕಾಗಿ ಅವರು ನನ್ನ ಜೊತೆ ಅಂದರೆ ಆರ್ಯ ಸಮಾಜದ ಚಿಂತನೆಗಳ ಬೆಂಬಲಕ್ಕೆ ನಿಂತಿದ್ದಾರೆ. ಅವರು ನನ್ನ ಮೇಲಿನ ಹಲ್ಲೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಈಗ ಆರೆಸ್ಸೆಸ್ ಸಂಪೂರ್ಣ ಸಾಂಸ್ಕೃತಿಕ ಸಂಘಟನೆ ಎನ್ನುವುದರಲ್ಲಿ ನಂಬಿಕೆ ಇಡಬಾರದು. ಅವರ ಸಿದ್ಧಾಂತವೆಂದರೆ ಅದು ಸಾಂಸ್ಕೃತಿಕ-ರಾಷ್ಟ್ರೀಯತೆ. ಹಿಟ್ಲರ್‌ನ ಸಿದ್ಧಾಂತವೂ ಇದೇ ಆಗಿತ್ತು. ಆತನೂ ಸಹ ಸಾಂಸ್ಕೃತಿಕ-ರಾಷ್ಟ್ರೀಯತೆ ಕುರಿತಾಗಿ ಮಾತನಾಡುತ್ತಿದ್ದ. ಹಿಟ್ಲರ್‌ನು ಯಹೂದಿಗಳ ಹತ್ಯೆ ಮಾಡಿದ. ಯಹೂದಿ ಗಳನ್ನು ತಮ್ಮ ಶತ್ರುಗಳೆಂದು ಗುರಿ ಇಟ್ಟು ಹತ್ಯೆ ಮಾಡಿದ. ಇದೇ ಮಾದರಿಯಲ್ಲಿ ಆರೆಸ್ಸೆಸ್ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ಗುರಿಯಾಗಿಸಿಕೊಂಡಿದೆ.

ಇಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ಸಂಸದೀಯ ಪ್ರಜಾಪ್ರಭುತ್ವವನ್ನು ಅಧ್ಯಕ್ಷ ಮಾದರಿಯ ಪ್ರಜಾಪ್ರಭುತ್ವವನ್ನಾಗಿ ಬದಲಾಯಿಸಿದ್ದಾರೆ. ತಾನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಂಡು ವಿರೋಧ ಪಕ್ಷಗಳನ್ನು ನಿಮ್ಮಲ್ಲಿ ಆ ಅಭ್ಯರ್ಥಿ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸಮ್ಮಿಶ್ರ ಬಣಗಳ ವೇದಿಕೆಯಲ್ಲಿ ಒಬ್ಬ ವ್ಯಕ್ತಿಯನ್ನು ಪ್ರಧಾನಮಂತ್ರಿಯೆಂದು ಆಯ್ಕೆ ಮಾಡುವ ವಿಧಾನವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)