varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಭಾವೈಕ್ಯದ ಸುಲ್ತಾನ ಇಬ್ರಾಹೀಂ ಆದಿಲ್ ಶಾ

ವಾರ್ತಾ ಭಾರತಿ : 9 Dec, 2018
ರಂಜಾನ್ ದರ್ಗಾ

ರಂಜಾನ್ ದರ್ಗಾ

ಶರಣ ಸಂಸ್ಕೃತಿಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ವೈಚಾರಿಕ ಲೋಕದ ನಡೆದಾಡುವ ಶರಣ ಎಂದೇ ಗುರುತಿಸಲ್ಪಟ್ಟವರು. ತಮ್ಮ ವೃತ್ತಿ ಬದುಕಿನ ಸುದೀರ್ಘ ಅವಧಿಯನ್ನು ಪತ್ರಿಕಾ ಕ್ಷೇತ್ರದಲ್ಲಿ ಸವೆಸಿದ ದರ್ಗಾ, ಕಾವ್ಯವನ್ನು ಬೀದಿಗೆ ತಂದವರ ಸಾಲಿನಲ್ಲಿ ಮುಖ್ಯರು. ಇವರು 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಅಂಕಣಕಾರರಾಗಿಯೂ ಗುರುತಿಸಿಕೊಂಡಿರುವ ದರ್ಗಾ, ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಇಬ್ರಾಹೀಂ ಆದಿಲ್ ಶಾ, ಸೂಫಿಸಂತರ ಹಾಗೆ ವಿಶ್ವಮಾನವನಾಗಿದ್ದ. ಈತನ ಆಡಳಿತಾವಧಿಯಲ್ಲಿ ವಿಜಾಪುರ ನಗರ ವಿಶ್ವದ ಪ್ರಮುಖ ಸೂಫಿ ಕೇಂದ್ರಗಳಲ್ಲಿ ಒಂದಾಗಿತ್ತು. ಸೂಫಿ ತತ್ವದಂತೆ ಆತ ಅತ್ಯುನ್ನತ ಪ್ರೇಮದ ಆರಾಧಕನಾಗಿದ್ದ. ಎಲ್ಲ ಧರ್ಮಗಳನ್ನು ಮತ್ತು ವಿವಿಧ ಜನಾಂಗಗಳಿಂದ ಕೂಡಿದ ತನ್ನ ಪ್ರಜೆಗಳ ನಂಬಿಕೆ ಮತ್ತು ಆಚರಣೆಗಳನ್ನು ಏಕೋಭಾವದಿಂದ ನೋಡಿದ. ಆತನ ಆಸ್ಥಾನದಲ್ಲಿ 300 ಮಂದಿ ಹಿಂದೂ ಕವಿಗಳು ಮತ್ತು ತತ್ವಜ್ಞಾನಿಗಳಿದ್ದರು. ಜನ ಅವನನ್ನು ಪ್ರೀತಿಯಿಂದ ಜಗದ್ಗುರು ಎಂದು ಕರೆಯುತ್ತಿದ್ದರು.

‘ಕಿತಾಬ್ ಎ ನೌರಸ್’ ಕರ್ತೃ ಎರಡನೇ ಇಬ್ರಾಹೀಂ ಆದಿಲ್ ಶಾ (1580- 1626) ಅರಸ, ಕವಿ, ಹಿಂದೂಸ್ತಾನಿ ಗಾಯಕ, ವಾದ್ಯಸಂಗೀತಗಾರ, ಚಿತ್ರಕಲಾವಿದ ಮತ್ತು ಲಿಪಿಕಾರನಾಗಿದ್ದ. ಹೊಸ ರಾಗಗಳನ್ನು ಸೃಷ್ಟಿಸಿದ ಕೀರ್ತಿಯನ್ನೂ ಹೊಂದ್ದದಾನೆ. 46ನೇ ವಯಸ್ಸಿಗೆ ನಿಧನನಾದ ಇಬ್ರಾಹೀಂ, ಒಂಬತ್ತು ವರ್ಷದವನಿದ್ದಾಗಲೇ ವಿಜಾಪುರದ ದೊರೆಯಾಗಿದ್ದೊಂದು ವಿಶೇಷ.

ಇವೆಲ್ಲಕ್ಕಿಂತ ಹೆಚ್ಚಾಗಿ ಆತ ಸೂಫಿಸಂತರ ಹಾಗೆ ವಿಶ್ವಮಾನವನಾಗಿದ್ದ. ಈತನ ಆಡಳಿತಾವಧಿಯಲ್ಲಿ ವಿಜಾಪುರ ನಗರ ವಿಶ್ವದ ಪ್ರಮುಖ ಸೂಫಿ ಕೇಂದ್ರಗಳಲ್ಲಿ ಒಂದಾಗಿತ್ತು. ಸೂಫಿ ತತ್ವದಂತೆ ಆತ ಅತ್ಯುನ್ನತ ಪ್ರೇಮದ ಆರಾಧಕನಾಗಿದ್ದ. ಎಲ್ಲ ಧರ್ಮಗಳನ್ನು ಮತ್ತು ವಿವಿಧ ಜನಾಂಗಗಳಿಂದ ಕೂಡಿದ ತನ್ನ ಪ್ರಜೆಗಳ ನಂಬಿಕೆ ಮತ್ತು ಆಚರಣೆಗಳನ್ನು ಏಕೋಭಾವದಿಂದ ನೋಡಿದ. ಆತನ ಆಸ್ಥಾನದಲ್ಲಿ 300 ಮಂದಿ ಹಿಂದೂ ಕವಿಗಳು ಮತ್ತು ತತ್ವಜ್ಞಾನಿಗಳಿದ್ದರು. ಜನ ಅವನನ್ನು ಪ್ರೀತಿಯಿಂದ ಜಗದ್ಗುರು ಎಂದು ಕರೆಯುತ್ತಿದ್ದರು. ಅಕ್ಬರನ ಸರ್ವಧರ್ಮ ಸಮಭಾವದ ‘ದೀನ್ ಏ ಇಲಾಹಿ’ ತತ್ವಕ್ಕೂ ಇಬ್ರಾಹೀಮನ ‘ದಾದ್ ಏ ಇಲಾಹಿ’ (ಜನರನ್ನು ಒಂದುಗೂಡಿಸುವುದು ದೇವರನ್ನು ಬೆಂಬಲಿಸುವ ಕೆಲಸ) ತತ್ವಕ್ಕೂ ಸಾಮ್ಯವಿದೆ. ಆತನಿಗೆ ನಮಾಝ್‌ನಲ್ಲಿ ಶ್ರದ್ಧೆ ಇದ್ದಂತೆ ಶಿವ, ಗಣಪತಿ ಮತ್ತು ಸರಸ್ವತಿ ಮುಂತಾದ ದೇವತೆಗಳ ಬಗ್ಗೆ ಗೌರವವಿತ್ತು. ಧರ್ಮ, ಭಾಷೆ, ವಾಸ್ತುಶಿಲ್ಪ, ಚಿತ್ರಕಲೆ ಮತ್ತು ಸಂಗೀತದಲ್ಲಿ ಸಮ್ಮಿಶ್ರ ಸಂಸ್ಕೃತಿಯನ್ನು ಸೃಷ್ಟಿಸಿದ. ಜನಸಾಮಾನ್ಯರ ಭಾಷೆಯಾದ ದಖನಿ ಉರ್ದು ಭಾಷೆಯಲ್ಲಿ ಬರೆದ ಹಿಂದೂಸ್ತಾನಿ ಸಂಗೀತ ಗೀತೆಗಳ ಸಂಕಲನ ‘ಕಿತಾಬ್ ಏ ನೌರಸ್’ ಇಬ್ರಾಹೀಂನ ಕಾವ್ಯಪ್ರತಿಭೆಗೆ ಮತ್ತು ಸಮಕಾಲೀನ ಹಿಂದೂಸ್ತಾನಿ ಸಂಗೀತದ ರೂಪುರೇಷೆಗೆ ಸಾಕ್ಷಿಯಾಗಿದೆ. 59 ಗೀತೆಗಳೂ 17 ದೋಹಾಗಳೂ ಇದರಲ್ಲಿ ಇವೆ. ಒಟ್ಟು 17 ರಾಗಗಳಿಂದ ಕೂಡಿದೆ. ಪ್ರಾಕೃತ, ಸಂಸ್ಕೃತ, ಮರಾಠಿ ಮತ್ತು ಉರ್ದು ಶಬ್ದಗಳಿಂದ ಈ ಭಾಷೆ ರೂಪುಗೊಂಡಿದೆ.

ಆತನ ‘ಕಿತಾಬ್ ಏ ನೌರಸ್’ ಕೇವಲ ಸಂಗೀತ ಗ್ರಂಥವಾಗದೆ ಜೀವನ ಪ್ರೇಮದ ಸಂದೇಶವನ್ನು ಸಾರುವ ಅಮರ ಗ್ರಂಥವಾಗಿದೆ. ಮಾನವರು ಭೂಮಿಯ ಮೇಲೆ ಹೇಗೆ ಬದುಕಬೇಕೆಂಬುದನ್ನು ಈ ಗ್ರಂಥದ ಮೂಲಕ ಸೂಚಿಸುವುದೇ ಇಬ್ರಾಹೀಮನ ಉದ್ದೇಶವಾಗಿತ್ತು. ಬದುಕು ಸಂಗೀತಮಯವಾಗಿರಬೇಕು, ಆ ಮೂಲಕ ಸರಳತೆಯನ್ನು ಸಾಧಿಸಬೇಕು. ಉತ್ತಮ ಸಾಹಿತ್ಯದಿಂದ ಕೂಡಿದ ಸಂಗೀತವೇ ಜ್ಞಾನ. ಅದುವೇ ಸರಸ್ವತಿ. ಈ ವಿದ್ಯೆಯ ಸಂಪತ್ತಿನ ಮುಂದೆ ಭೌತಿಕ ಸಂಪತ್ತು ಏನೂ ಅಲ್ಲ. ಎಲ್ಲ ದೇವಾನುದೇವತೆಗಳು ಜ್ಞಾನ ಮತ್ತು ತತ್ವದ ಸಂಕೇತಗಳು. ಅವೆಲ್ಲವುಗಳನ್ನು ನಿರ್ವಿಕಾರ ಮನದಿಂದ ಗ್ರಹಿಸಿ ಜ್ಞಾನಸಾಗರವನ್ನು ಸಂಪಾದಿಸಬೇಕು. ತಾಯಿ, ಪತ್ನಿ, ಪ್ರಾಣಿ ಮತ್ತು ವಸ್ತುಗಳನ್ನು ಕೂಡ ಕುಟುಂಬ ಪ್ರೇಮ ಭಾವದೊಂದಿಗೆ ನೋಡಬೇಕು. ಹೀಗೆ ಮಾನವ ಉದಾತ್ತನಾಗುತ್ತ ಪರಮಾನಂದವನ್ನು ಸಾಧಿಸಬೇಕು ಎಂಬುದು ಇಬ್ರಾಹೀಮನ ಆಶಯವಾಗಿತ್ತು. ಇಂಥ ಉನ್ನತ ವ್ಯಕ್ತಿತ್ವದ ಇಬ್ರಾಹೀಂ ತನ್ನ ರಾಜಪದವಿಯ ಮೇಲ್ಮೆಯ ಬಗ್ಗೆ ಕೂಡ ನಿರಾಶೆಯ ಮನಸ್ಥಿತಿಯನ್ನು ಹೊಂದಿದ್ದ.

‘‘ನನಗೆ ನಾಚಿಕೆಯಾಗುತ್ತದೆ, ನಾನೊಂದು ಸಂಪೂರ್ಣ ಭಾರರಹಿತ ಬಂಗಾರದ ಮೊಹರು.

ವಸಂತ ರಹಿತ ಋತುವಿನಂತಿಹೆನು ನಾನು, ಹೇಗೆ ಬಣ್ಣಿಸಲಿ ನನ್ನ ಮನದ ಬೇಸರವನ್ನು?’’

ಎಂದು ಇಬ್ರಾಹೀಂ ಹೇಳುತ್ತಾನೆ. ಕಿರೀಟವು ಒಳಗಿಂದ ಟೊಳ್ಳಾಗಿರುತ್ತದೆ ಎಂಬುದು ಅವನ ಭಾವವಾಗಿದೆ. ಜನಸಮುದಾಯ, ಸಂಗೀತ ಮತ್ತು ಅಧ್ಯಾತ್ಮದ ಸಂಪರ್ಕದೊಂದಿಗೆ ರಾಜ್ಯಸತ್ತೆಗೆ ಒಂದು ಅರ್ಥ ಬರುತ್ತದೆ ಎಂಬುದು ಆತನ ಮನದಿಂಗಿತವಾಗಿದೆ.

‘‘ಸಯ್ಯದರ ಮೂಲಕ ತನ್ನ ದಯೆಯನ್ನು ಹಂಚಿದನು ಕರ್ತಾರ

ನಿಮ್ಮದೊಂದು ಕೃಪಾ ನೋಟದಿಂದ ಶೋಕದ ಕತ್ತಲೆ ವಸಂತವಾಗುವುದು.’’

ಮುಹಮ್ಮದ್ ಪೈಗಂಬರರ ಜೀವಕಾರುಣ್ಯವು ಇಬ್ರಾಹೀಮನ ಮೇಲೆ ಆಳವಾದ ಪರಿಣಾಮ ಬೀರಿದೆ. ದೇವರು, ಪೈಗಂಬರರ ಮೂಲಕ ಈ ಭೂಮಿಗೆ ದಯೆಯನ್ನು ಹಂಚಿದ್ದಾನೆ ಎಂದು ಇಬ್ರಾಹೀಂ ಮನದುಂಬಿ ಹೇಳುತ್ತಾನೆ. ಪೈಗಂಬರರ ಕೃಪಾನೋಟದಿಂದ ಅಸಹನೀಯವಾದ ಬದುಕು ಅರ್ಥಪೂರ್ಣವಾಗಿದೆ ಎಂದು ತಿಳಿಸುತ್ತಾನೆ. ‘‘ಕ್ಷಣಕ್ಷಣವೂ ಕವಿ ಇಬ್ರಾಹೀಂ ತಾನೇ ಆರತಿಯಾಗಿ ಅರ್ಪಿಸಿಕೊಳ್ಳುವನು’’ ಎಂದು ಪೈಗಂಬರರ ಬಗ್ಗೆ ಸಮರ್ಪಣಾಭಾವದಿಂದ ಹೇಳುತ್ತಾನೆ.

ಗುಲ್ಬರ್ಗದ ಸೂಫಿ ಸಂತ ಹಝ್ರತ್ ಸಯ್ಯದ್ ಮುಹಮ್ಮದ್ ಹುಸೇನಿ ಗೇಸೂ ದರಾಜ್ ಬಂದೇ ನವಾಝ್ ಅವರು ಇಬ್ರಾಹೀಮನ ಅಂತರಂಗವನ್ನೆಲ್ಲ ಆವರಿಸಿದ್ದರು. ‘‘ಹಝ್ರತ್ ಮುಹಮ್ಮದ್ ತ್ರಿಲೋಕಗಳ ಗುರುಶ್ರೇಷ್ಠರು

ಅವರ ದರ್ಗಾ ನನ್ನ ಮನ ಸೆಳೆಯುವ ಲೋಹಚುಂಬಕವು.’’

ಹೀಗೆ ಗುಲ್ಬರ್ಗದ ಬಂದೇ ನವಾಝ್ ದರ್ಗಾ, ಇಬ್ರಾಹೀಮನ ಮನಸ್ಸನ್ನು ಆಕರ್ಷಿಸಿತ್ತು. ಬಂದೇ ನವಾಝ್ ಅವರು ದಾಸೋಹದ ಪ್ರತೀಕವಾಗಿದ್ದರು. ಎಲ್ಲ ಜೀವಿಗಳ ಸೇವೆ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಇಂಥ ವ್ಯಕ್ತಿತ್ವಕ್ಕೆ ಇಬ್ರಾಹೀಂ ಮಾರುಹೋಗಿದ್ದ.

‘‘ಕೆಲವರು ಬಯಸುವರು ಆನೆ ಕುದುರೆಗಳನ್ನು, ಮತ್ತೆ ಕೆಲವರು ಮುತ್ತು ರತ್ನಗಳನ್ನು

ಕೆಲವರು ಭೋಜನ ವಸ್ತ್ರಗಳನ್ನು; ಮತ್ತೆ ಕೆಲವರು ಉನ್ನತ ಸ್ಥಾನಗಳನ್ನು

ಆದರೆ ಇಬ್ರಾಹೀಂ ಬಯಸುತ್ತಾನೆ ಸೈಯದ್ ಮುಹಮ್ಮದರ ವಸೀಲೆಯಿಂದ

ದೇವರು ಅವನಿಗೆ ಉನ್ನತ ಜ್ಞಾನ, ದಾನಶೀಲತೆ ಧರ್ಮಗಳನ್ನು ದಯಪಾಲಿಸೆಂದು.’’

ಹೀಗೆ ಇಬ್ರಾಹೀಂ ಜ್ಞಾನ ಮತ್ತು ಕರುಣೆಯ ಆರಾಧಕನಾಗಿದ್ದ. ಬದುಕಿನ ನಿಜವಾದ ಸಂಪತ್ತು ಯಾವುದು ಎಂಬುದರ ದರ್ಶನ ಆತನಿಗಾಗಿತ್ತು.

‘‘ಇಬ್ರಾಹೀಂ ಹಾಡುತ್ತಾನೆ, ನುಡಿಸುತ್ತಾನೆ, ಆಕರ್ಷಿಸುತ್ತಾನೆ;

ಐಶ್ವರ್ಯವನ್ನು ತ್ಯಜಿಸಿದ್ದಾನೆ.

ನಾವು ಶಿವನ ಸೇವಕರು, ನಮ್ಮ ಸೇವೆ ಮತ್ತು ಪ್ರೀತಿಯ ಭಾವನೆ

ದಿನದಿನವೂ ವೃದ್ಧಿಸುತ್ತಿದೆ’’.

ಎಂದು ಇಬ್ರಾಹೀಂ ಹೇಳುತ್ತಾನೆ. ಈ ಶಿವನ ಸೇವಕ ರಾಜ್ಯಶಕ್ತಿಯಿಂದ ಕೂಡಿದ್ದ ಸಂಪತ್ತಿನ ಗುಲಾಮನಾಗದೆ, ಸೇವೆ ಮತ್ತು ಪ್ರೇಮಭಾವದ ಆನಂದವನ್ನು ಅನುಭವಿಸುತ್ತಿದ್ದಾನೆ. ಸೂಫಿಗಳ ಹಾಗೆ ಬಸವಣ್ಣನ ಹಾಗೆ ಇಬ್ರಾಹೀಂಗೆ ‘‘ದೇವನೊಬ್ಬ ನಾಮ ಹಲವು’’ ಎಂಬ ಭಾವವಿದೆ.

‘‘ಓ ಶಾರದೆ, ಗಣೇಶ ಮಾತಾಪಿತರೆ, ನೀವು ಎರಡು ಸ್ಫಟಿಕದ ನಿರ್ಮಲ ಗಾಜುಗಳಂತೆ,

ಇಬ್ರಾಹೀಂ ಅನಾಮಿಕನಾಗಿದ್ದ ನೀವು ಪ್ರಕಟಗೊಂಡು ಹರಸಿದುದರಿಂದ

ಅವನು ಕೀರ್ತಿಯ ಮೇರುಶಿಖರವನ್ನು ಪಡೆದ.’’

ಇಬ್ರಾಹೀಂ ತಾನು ರಾಜನಾಗಿದ್ದರೂ ಅನಾಮಿಕ ಎಂದು ಭಾವಿಸಿದ್ದ. ವಿದ್ಯೆ ಮತ್ತು ಬುದ್ಧಿಯ ಸಂಕೇತಗಳಾದ ಸರಸ್ವತಿ ಮತ್ತು ಗಣಪತಿ ಆಶೀರ್ವಾದದಿಂದ ಅಂದರೆ ಜ್ಞಾನಸಂಪಾದನೆಯ ಮೂಲಕ ಮಾನವರು ಕೀರ್ತಿಯನ್ನು ಸಂಪಾದಿಸಬೇಕೇ ಹೊರತು ಲೌಕಿಕದ ಅಧಿಕಾರ ಮತ್ತು ಸಂಪತ್ತಿನಿಂದಲ್ಲ ಎಂದು ಇಬ್ರಾಹೀಂ ಇಲ್ಲಿ ತಿಳಿಸಿದ್ದಾನೆ.

‘‘ಭಾಕಾ ನ್ಯಾರೀ ನ್ಯಾರೀ ಭಾವ್ ಏಕ್; ಕಹಾ ತುರ್ಕ್ ಕಹಾ ಬರ್ಹಾಮನ್

ಉತ್ತಿಮ್ ಭಾಗ ನೀಕೋ ಸೋ ಸೋಹೆ ಜಾ ಸರ್ಸತಿ ಹೋಯೆ ಪರ್ಸನ್’’

(ಭಾಷೆಗಳು ಭಿನ್ನವಾದರೂ ಭಾವ ಒಂದೇ

ಮುಸಲ್ಮಾನನಾದರೇನು, ಬ್ರಾಹ್ಮಣನಾದರೇನು.

ಯಾರ ಮೇಲೆ ಸರಸ್ವತಿ ಪ್ರಸನ್ನಳಾಗುವಳೋ ಅವನೇ ಭಾಗ್ಯಶಾಲಿ.)

ಎಂದು ಸರಸ್ವತಿಯ (ಜ್ಞಾನದ) ಆರಾಧಕನಾದ ಇಬ್ರಾಹೀಂ ಎದೆತಟ್ಟಿ ಹೇಳುತ್ತಾನೆ. ಭಾರತದಂಥ ಸಮ್ಮಿಶ್ರ ಸಂಸ್ಕೃತಿಯ ದೇಶದಲ್ಲಿ ಹಿಂದೂ ಮುಸ್ಲಿಮರು ಹೇಗೆ ಬದುಕಬೇಕೆಂಬುದರ ಸೂಚನೆ ಇಲ್ಲಿದೆ. ಏಕೇಶ್ವರವಾದದ ಮುಸ್ಲಿಮರು ಹಿಂದೂಗಳ ಬಹುದೇವತೆಗಳನ್ನು ವಿವಿಧ ಜ್ಞಾನಗಳ ಸಂಕೇತದಂತೆ ಕಾಣುತ್ತ, ಮಹಾಜ್ಞಾನಿಯಾದ ಪರಮೇಶ್ವರ (ಅಲ್ಲಾಹ)ನಲ್ಲಿ ಏಕೋಭಾವ ತಾಳುವಂತೆ ಮಾಡುವುದು ಮತ್ತು ಆ ಮೂಲಕ ಜನರನ್ನೆಲ್ಲ ಒಂದಾಗಿಸಿ ಭಾಗ್ಯಶಾಲಿ ಜ್ಞಾನಿಗಳನ್ನಾಗಿ ಮಾಡುವುದು ಇಬ್ರಾಹೀಮನ ಆಶಯವಾಗಿತ್ತು.

‘‘ಇಬ್ರಾಹೀಂ ಹಾಡುತ್ತಾನೆ, ನುಡಿಸುತ್ತಾನೆ;

ಆದ್ದರಿಂದ ಜಗದ್ಗುರು, ನಾದಮೂರ್ತಿ ಬಿರುದುಗಳ ಪಡೆದಿದ್ದಾನೆ.

ಅಯ್ಯೋ ಎನ್ನುವೆ, ಇನ್ನೇನು ಮಾಡಲಿ;

ಶೂನ್ಯ ಮನದ ಪಂಡಿತರಿಗೆ ಸರಸ್ವತಿಯ ಕೃಪೆ ಪ್ರಿಯವೆನಿಸುವುದಿಲ್ಲ.’’

ಸಂವೇದನಾಶೀಲತೆಯನ್ನು ಕಳೆದುಕೊಂಡಿರುವ ಶುಷ್ಕ ಪಂಡಿತರು ವರ್ಣವ್ಯವಸ್ಥೆಯ ಮೂಲಕ ಜ್ಞಾನವನ್ನು ಕಟ್ಟಿಹಾಕಲು ಬಯಸುತ್ತಾರೆ. ಸರ್ವರಿಗೂ ಜ್ಞಾನ ಲಭಿಸಲೆಂಬ ಇಬ್ರಾಹೀಮನ ಬಯಕೆ ಅವರಿಗೆ ಹಿಡಿಸುತ್ತಿಲ್ಲ. ಇಬ್ರಾಹೀಂ ದ್ವೇಷ ಕಾರುವುದಿಲ್ಲ. ಆದರೆ ‘‘ಅಯ್ಯೋ’’ ಎಂದು ದುಃಖಿಸುತ್ತಾನೆ.

ಇಬ್ರಾಹೀಮನ ಮನಸ್ಸಿನಲ್ಲಿ ಪ್ರೇಮಸಾಗರವಿದೆ. ಅಲ್ಲಿ ಸಹಾನುಭೂತಿಯ ತೆರೆಗಳಿವೆ. ಹೀಗಾಗಿ ಆತ ಎಲ್ಲದರಲ್ಲಿಯೂ ಒಂದುತನವನ್ನೇ ಕಾಣುತ್ತಾನೆ. ಅಹಂಕಾರದಿಂದ ಎಂಥ ಶಕ್ತಿಶಾಲಿ ಕೂಡ ನಿರ್ನಾಮವಾಗುತ್ತಾನೆ ಎಂಬುದು ಆತ ಕಂಡ ಸತ್ಯವಾಗಿದೆ. ಆತನ ಪ್ರೀತಿಯ ಆನೆ ಆತಿಶ್ ಖಾನ್ ಆ ಕಾಲದಲ್ಲಿ ದೇಶಪ್ರಸಿದ್ಧವಾಗಿತ್ತು.

‘‘ಅವನ ಕೊರಳಲ್ಲಿ ಸ್ಫಟಿಕದ ಜಪಮಾಲೆ ಇದೆ,

ವಿದ್ಯಾಪುರ ಅವನ ಊರು, ಆನೆ ಅವನ ವಾಹನ

ಇಬ್ರಾಹೀಮನ ತಂದೆ ವಿದ್ಯಾದೇವರು ಗಣಪತಿ

ಮತ್ತು ಅವನ ತಾಯಿ ಪವಿತ್ರ ಸರಸ್ವತಿ.’’

ಎಂದು ಇಬ್ರಾಹೀಂ ಹೇಳುವಾಗ, ತನ್ನ ಪ್ರೀತಿಯ ಊರು ವಿಜಾಪುರ (ವಿದ್ಯಾಪುರ), ಅಧ್ಯಾತ್ಮದ ಪ್ರತೀಕವಾದ ಜಪಮಾಲೆ, ಜ್ಞಾನದ ತಂದೆ ತಾಯಿಗಳಾದ ಗಣಪತಿ ಮತ್ತು ಸರಸ್ವತಿಯರ ಜೊತೆ ಆನೆಯನ್ನೂ ತನ್ನ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದರ ಅರಿವಾಗುತ್ತದೆ.

‘‘ಸಿಂಧೂರ ಲೇಪಿಸಿದ ಆನೆಯ ಮುಖ ಸೂರ್ಯನಂತೆ ಹೊಳೆಯುತ್ತಿದೆ

ಇಂದ್ರನ ಬಳಿ ಒಂದಿತ್ತು, ಇದು ಎರಡು ಐರಾವತಗಳಿಗೆ ಸಮವಿದೆ.

ಇಬ್ಬದಿಗಿರುವ ಮೊನಚು ಕೋರೆಗಳು ಭರ್ಚಿಗಳಂತಿವೆ.’’

‘‘ಓ ಗಜವೆ, ಕರ್ತಾರ ನೀಡಲಿ ರಕ್ಷಣೆ ನಿನಗೆ

ಕಿವಿಗೆ ಕೇಳುವ, ನಾಲಗೆಗೆ ಮಾತಾಡುವ ಶಕ್ತಿ ಇರುವವರೆಗೆ

ನಿನ್ನ ಆಯುಷ್ಯವಿರಲಿ ಸೂರ್ಯ ಚಂದ್ರರು ಇರುವವರೆಗೆ.’’

ಹೀಗೆ ಇಬ್ರಾಹೀಂ ಅದರ ಮೇಲೆ ಪ್ರೀತಿಯ ಧಾರೆಯನ್ನೇ ಎರೆದಿದ್ದ. ಆದರೆ ಆ ಮದಗಜದ ‘‘ಅಹಂಕಾರ’’ ಅದಕ್ಕೇ ಮುಳುವಾಗುವುದು ಎಂಬ ಆತಂಕ ಅವನಿಗಿತ್ತು. ಕೊನೆಗೊಂದು ದಿನ ಅದು ಕೆರೆಯೊಂದರ ಹುದಲಲ್ಲಿ ಸಿಕ್ಕಿ ಹೊರಬರಲಿಕ್ಕಾಗದೆ. ತನ್ನ ಭಾರಕ್ಕೆ ತಾನೇ ಬಲಿಯಾಗಿ ಹುದಲಲ್ಲಿ ಮುಳುಗಿ ಹೋಯಿತು. ಇದರಿಂದಾಗಿ ಇಬ್ರಾಹೀಂ ಬಹಳ ದುಃಖಿಯಾದ.

‘‘ತಾನು ಬೆಂಕಿ, ನೀರಿನ ವೈರಿ ಎಂದು ಭಾವಿಸಿ,

ಅಹಂಕಾರ ಮತ್ತು ಮದದಿಂದ ಕೆರೆಯಲ್ಲಿ ಧುಮುಕಿತು ಆತಿಶ್‌ಖಾನ್.

ಜಗತ್ತೊಂದು ಬುದ್ಬುದ, ಅದು ಹೇಗೆ ಉಳಿಯುವುದೋ

ನನಗೆ ತಿಳಿಯದು, ಓ ದೇವಾ!’’

 ಎಂದು ಇಬ್ರಾಹೀಂ ಹಲುಬಿದ. ‘‘ಆತಿಶ್‌ಖಾನನ ವಿರಹದ ಬೆಂಕಿ ಹೇಗೆ ಸುಡುತ್ತಿದೆ ಎಂದರೆ, ಪ್ರಳಯದ ಬೆಂಕಿ ಸೌಮ್ಯ ಎನಿಸುವುದು, ಈ ಸಂಕಟ ಯಾರ ದುರದೃಷ್ಟದ ಕಾರಣವೋ ತಿಳಿಯದು!’’ ಎಂದು ಸಂಕಟಪಟ್ಟ.

 ಆತ ತನ್ನ ತಂಬೂರಿ ಮೋತಿಖಾನ್ ಬಗ್ಗೆ ಕೂಡ ಅತೀವ ವ್ಯಾಮೋಹ ಹೊಂದಿದ್ದ. ಅದರಿಂದ ದೂರವಿದ್ದಾಗ ವಿರಹವೇದನೆಯನ್ನು ಅನುಭವಿಸುತ್ತಿದ್ದ!

‘‘ಮೋತಿಖಾನ್ ಉರುಳುತ್ತಿರುವ ಸಾಗರದಂತೆ

ಅದರ ಲಘು ಗುರು ನಾದಗಳು ಸಣ್ಣ ದೊಡ್ಡ ತರಂಗಗಳಂತೆ.’’

‘‘ಇದು ಮುತ್ತುಗಳಿರುವ ಸಮುದ್ರ ಅದು ನೀರಿನದು ಮಾತ್ರ.

ಈ ನೀರು ಸಿಹಿ, ಆ ನೀರು ಕ್ಷಾರ.’’

ಹೀಗೆ ಮೋತಿಖಾನ್ ತಂಬೂರಿ ಬಗ್ಗೆ ಇಬ್ರಾಹೀಂ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ. ವಸ್ತುಗಳಲ್ಲಿ ಕೂಡ ಆತ್ಮಸಂಬಂಧವಿಟ್ಟುಕೊಳ್ಳುತ್ತಾನೆ. ಸಂಗೀತದ ಮಹೋನ್ನತಿಯನ್ನು ಸಾರುತ್ತಾನೆ. ಸಂಗೀತದಿಂದ ಆತನಿಗೆ ಒಂದು ಕ್ಷಣವೂ ದೂರ ಇರಲಿಕ್ಕಾಗದು.

‘‘ಪ್ರಿಯ ದಯಾಳು ದೇವರೆ, ಬೇಗ ನನ್ನ ನಲ್ಲೆಯ ಮಿಲನ ಮಾಡಿಸು.

ರುಚಿಸುತ್ತಿಲ್ಲ ನನಗೆ ಯಾವುದೇ ಊಟ ಪಾನೀಯದ ಸುಖ

ಇಬ್ರಾಹೀಂ, ಮೋತಿಖಾನನ ವಿರಹಿ ಆಗಿರುವನು.’’

ಎಂದು ಹೇಳುವುದರ ಮೂಲಕ ಇಬ್ರಾಹೀಂ ಹೊಸದೊಂದು ಮಾನವೀಯ ಲೋಕವನ್ನೆ ನಮ್ಮ ಮುಂದೆ ತಂದು ನಿಲ್ಲಿಸುತ್ತಾನೆ.

‘‘ಏಳು ಮಜಲುಗಳ ಅತ್ಯುನ್ನತ ಮಹಲು, ಏಳು ದಿನಗಳ ಮೂರ್ತ ಸ್ವರೂಪವದು.

ಕಾವಲು ಕಾರ್ಯಕ್ಕಾಗಿ ಅದರ ಸೋಪಾನ ಬಲು ಸಡಗರದಿಂದ ಕಟ್ಟಲಾಯಿತು.’’

ಎಂದು ಇಬ್ರಾಹೀಂ ವಿಜಾಪುರದ ದರ್ಬಾರ್ ಹಾಲ್‌ನ ಮೂಲೆಯಲ್ಲಿರುವ ಸಾತ್ ಮಂಝಿಲ್ ಬಗ್ಗೆ ಹೆಮ್ಮೆಯಿಂದ ಹೇಳುತ್ತಾನೆ. ‘‘ಎಲ್ಲ ನಕ್ಷಗಳು ಆರತಿ ಅರ್ಪಿಸುತ್ತಿವೆ ಆ ಮಹಲಿಗೆ’’ ಎಂದು ಹೊಗಳುತ್ತಾನೆ. ಇಂಥ ನಿರ್ಜೀವ ವಸ್ತುಗಳಲ್ಲೂ ಜೀವ ತುಂಬುತ್ತಾನೆ. ಜೀವನಪ್ರೀತಿಯನ್ನು ಉಕ್ಕಿಸುತ್ತಾನೆ. ಅದಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಭಾಷೆ, ಆಚರಣೆ ಮತ್ತು ಸಂಪ್ರದಾಯಗಳನ್ನು ಬಳಸಿಕೊಳ್ಳುತ್ತಾನೆ. ನಂತರ ಎಲ್ಲವೂ ಆತನ ಸಂಗೀತ ಸಾಗರದಲ್ಲಿ ಐಕ್ಯವಾಗುತ್ತವೆ.

‘‘ಏಳು ಮಜಲುಗಳು ಸಪ್ತಸ್ವರಗಳಾಗಿ ಅಮರವಾಗಿಸಿಹವು ರಾಗಗಳನ್ನು

ಮತ್ತು ಕವಿತೆ ಪಾರಸಮಣಿ ಇದ್ದಂತೆ ಅಥವಾ ಸೂರ್ಯನಿದ್ದಂತೆ

ಇಬ್ರಾಹೀಂ ಮತ್ತು ಮಲಿಕ ಎ ಜಹಾನ್ ರಾಗ ರಾಗಿಣಿಯ ಸ್ವರೂಪಗಳು.

ನೌರಸ ಸಂಗೀತ ಕೇಳಿದ ಇಂದ್ರನ ಅಪ್ಸರೆಯರು ಮೂರ್ಛೆಹೋದರು.’’

ಎಂದು ಹೇಳುತ್ತ ತನ್ನ ಕೌಟುಂಬಿಕ ಜೀವನವನ್ನೂ ಸಂಗೀತಮಯಗೊಳಿಸುತ್ತಾನೆ. ಅಂಥ ಭಾಗ್ಯವನ್ನು ತನ್ನ ಪ್ರಜೆಗಳಿಗೂ ಬಯಸುತ್ತಾನೆ.

‘‘ನಿಮ್ಮ ಭಾಗ್ಯನಕ್ಷತ್ರದ ಜ್ಯೋತಿ ದಿನದಿನವೂ ಉಜ್ವಲವಾಗಲಿ

ಸಂಗೀತ ನೃತ್ಯಗಳ ಹಬ್ಬಗಳನ್ನು ಸಂತಸದಿಂದ ಸವಿಯಿರಿ

ಆನಂದದಿಂದ ರಾಜ್ಯ ಭೋಗಿಸಿರಿ ಭೂಮಂಡಲದಲ್ಲಿ ಸದಾಕಾಲ.’’

ಇಂಥ ಒಂದು ಕಲೆ ಮತ್ತು ಸಂಗೀತದ ಸುಖದಿಂದ ಕೂಡಿದ ‘ಆನಂದರಾಜ್ಯ’ವನ್ನು ಕಟ್ಟಿದ ಕೀರ್ತಿ ಇಬ್ರಾಹೀಂಗೆ ಸಲ್ಲುವುದು.

ಇವೆಲ್ಲ ಚಿಂತನೆಗಳ ಮಧ್ಯೆ ಇಬ್ರಾಹೀಂ ತನ್ನ ಕುಟುಂಬದವರನ್ನು ಮರೆಯುವುದಿಲ್ಲ. ಆತ ಚಿಕ್ಕವನಿದ್ದಾಗ ವೀರ ಮಹಿಳೆ ಚಾಂದ್ ಬೀಬಿ ಆಡಳಿತದ ಉಸ್ತುವಾರಿ ವಹಿಸಿದ್ದಳು. ಇಬ್ರಾಹೀಂ ಅವಳಿಗೆ ಬಡೀ ಸಾಹಿಬಾ (ಹಿರಿಯ ಮಾತೆ) ಎಂದು ಕರೆಯುತ್ತಿದ್ದ.

‘‘ಸದಾಕಾಲ ಬಾಳಿರಿ ಓ ಹಿರಿಯ ಮಾತೆ ನಿಮ್ಮ ಕುವರನ ಮೇಲೆ ನಿಮ್ಮ ರಕ್ಷಾ ನೆರಳಿರಲಿ,

ಸೂರ್ಯ ಚಂದ್ರ ಭೂಮಿ ಆಗಸಗಳು ಇರುವವರೆಗೆ.’’

ಎಂದು ಇಬ್ರಾಹೀಂ ಹೃದಯಸ್ಪರ್ಶಿಯಾಗಿ ಹೇಳಿ ಕೃತಜ್ಞತೆಯನ್ನು ಅರ್ಪಿಸುತ್ತಾನೆ.

‘‘ಸಕಲ ಗುಣ ಸಂಪನ್ನೆ, ಮೂರು ಲೋಕಗಳ ಬೆಳಕು,

ಚಾಂದ್ ಸುಲ್ತಾನಾ ಆಗಮಿಸಿಹಳು.

ಚಿರಂಜೀವಿಯಾಗಲಿ ಅವಳು, ನಿತ್ಯವೂ ಆನಂದ ಗೌರವಗಳನ್ನು

ದೇವರು ಅವಳಿಗೆ ಕರುಣಿಸಲಿ. ನವರಸ ಮಹಲಿಗೆ ಅವಳ ಆಗಮನ

ಚಂದ್ರ ರಾಶಿಚಕ್ರದ ಗೃಹವನ್ನು ಪ್ರವೇಶಿಸಿದ ಹಾಗಿದೆ.’’

ಎಂದು ಪತ್ನಿಯ ಗುಣಗಾನ ಮಾಡುತ್ತ ಕುಟುಂಬ ಪ್ರೇಮದ ಆರಾಧಕನಾಗುತ್ತಾನೆ. ಎಲ್ಲರ ಘನತೆ ಗೌರವಗಳನ್ನು ಎತ್ತಿಹಿಡಿಯುತ್ತ ಬದುಕನ್ನು ಸಹನೀಯಗೊಳಿಸುತ್ತಾನೆ. ಜನಸಾಮಾನ್ಯರೊಂದಿಗೆ ಬೆರೆಯುತ್ತ ಬದುಕಿನ ಅರ್ಥವನ್ನು ಕಂಡುಕೊಳ್ಳುತ್ತಾನೆ.

ಸೂಫಿಗಳ ಪವಿತ್ರ ಬದುಕಿನಿಂದ ಇಬ್ರಾಹೀಂ ಬಹಳಷ್ಟು ಆಕರ್ಷಣೆಗೊಳಗಾಗಿದ್ದ. ಅವರು ದೇವರ ವಿರಹವೇದನೆಯಿಂದ ಬಳಲುವವರು. ಆ ಮೂಲಕ ತನುಮನಗಳನ್ನು ಶುದ್ಧಗೊಳಿಸಿಕೊಳ್ಳುವವರು. ಅಹಂಕಾರ ಮುಕ್ತರಾಗಿರುವವರು. ಪ್ರೇಮ ಭಾವದಿಂದ ತುಂಬಿರುವವರು. ಅವರನ್ನು ‘‘ವಿರಹ ತಾಪದಿಂದ ನರಳುವ ಜನರು’’ ಎಂದು ಇಬ್ರಾಹೀಂ ಕರೆಯುತ್ತಾನೆ. ಈ ಆಧ್ಯಾತ್ಮಿಕ ವಿರಹ, ಭೂಮಿ ಮತ್ತು ಆಕಾಶಗಳನ್ನು ಬೆಸೆಯುವಂಥದ್ದಾಗಿದೆ. ಅನುಭಾವದ ಕಡೆಗೆ ಒಯ್ಯುವಂಥದ್ದಾಗಿದೆ.

‘‘ವಿರಹತಾಪದಲ್ಲಿ ನರಳುವ ಬಹಳ ಜನರು, ಸೂರ್ಯ ಚಂದ್ರರಿಗಿಂತಲೂ ಹೆಚ್ಚು ಪ್ರಖ್ಯಾತರು.

ಈ ವಿರಹ ವಚನಗಳನ್ನು ನುಡಿಯುವ ಇಬ್ರಾಹೀಂ, ಅವರ ನಡುವೆ ತೃಣಮಾತ್ರನು.’’

ಎಂದು ಇಬ್ರಾಹೀಂ ಅಧ್ಯಾತ್ಮ ಚಕ್ರವರ್ತಿಗಳ ಮುಂದೆ ಚಕ್ರವರ್ತಿಗಳು ತೃಣಸಮಾನರು ಎಂದು ಸಾರುತ್ತಾನೆ.

‘‘ಪ್ರಿಯೆ ನಿನ್ನ ಪ್ರೇಮದ ಗಾಳಿ ಸದಾ ಸುಳಿಯುತ್ತದೆ ನನ್ನ ಬಳಿ.

ಅದೇ ಜೀವವನ್ನು ಬೆಳಗಿಸುತ್ತದೆ,

ಇಲ್ಲದಿದ್ದರೆ ನನ್ನ ಪ್ರಾಣ ನಂದಿಹೋಗುತ್ತದೆ.

ದಿನ ರಾತ್ರಿ ಸ್ಮರಿಸುತ್ತೇನೆ ಮಧುರ ನುಡಿಗಳ.’’

ಈ ಪ್ರೇಮದ ಗಾಳಿ ಜಗತ್ತನ್ನು ಆವರಿಸಲಿ. ಜಗತ್ತನ್ನೆಲ್ಲ ಪ್ರೇಮಮಯ ಮಾಡಲಿ. ಸರ್ವರೂ ಪ್ರೀತಿ ಮತ್ತು ಕರುಣೆಯೊಂದಿಗೆ ಬದುಕಲಿ. ಮಧುರಭಾವದೊಂದಿಗೆ ಇಹಲೋಕವನ್ನು ಸಹನೀಯ ಮಾಡಲಿ. ಇದೇ ನಾವು ಸುಲ್ತಾನ ಇಬ್ರಾಹೀಂಗೆ ಸಲ್ಲಿಸುವ ಗೌರವ.

ಸಂಗೀತೋತ್ಸವ ಆಚರಿಸುವಾಗ ವಿಜಾಪುರದ ಜನರೆಲ್ಲಾ ರಾಜಬೀದಿಗೆ ಬಂದು ಇಡೀ ರಾತ್ರಿ ಹಾಡು ಕುಣಿತಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಗೀತಮಯಗೊಳಿಸುತ್ತಿದ್ದರು. ಇಂತಹ ಅಪರೂಪದ ದಾಖಲೆ ಕೂಡ ಕಿತಾಬೇ ನೌರಸ್‌ನಲ್ಲಿದೆ. ಸುಲ್ತಾನ ಇಬ್ರಾಹೀಂ ಆದಿಲ್ ಶಹಾ ಸ್ಮರಣಾರ್ಥ ಕರ್ನಾಟಕ ಸರಕಾರ ಪ್ರತಿವರ್ಷ, ಆತ ವಿಜಾಪುರದ ಹೊರವಲಯದಲ್ಲಿ ನಿರ್ಮಿಸಿದ ನಗರ ನೌರಸಪುರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿದೆ.

( ಖ್ಯಾತ ಸಾಹಿತಿ ಅಬ್ದುಲ್ ಮಜೀದ್ ಖಾನ್ ಅವರು ಕನ್ನಡಕ್ಕೆ ಅನುವಾದಿಸಿದ ‘ಕಿತಾಬ್ ಏ ನೌರಸ್’ ಗ್ರಂಥದಿಂದ ಪದ್ಯಗಳನ್ನು ಆಯ್ದುಕೊಳ್ಳಲಾಗಿದೆ.)

ಸಂಗೀತೋತ್ಸವ ಆಚರಿಸುವಾಗ ವಿಜಾಪುರದ ಜನರೆಲ್ಲಾ ರಾಜಬೀದಿಗೆ ಬಂದು ಇಡೀ ರಾತ್ರಿ ಹಾಡು ಕುಣಿತಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಗೀತಮಯಗೊಳಿಸುತ್ತಿದ್ದರು. ಇಂತಹ ಅಪರೂಪದ ದಾಖಲೆ ಕೂಡ ಕಿತಾಬೇ ನೌರಸ್‌ನಲ್ಲಿದೆ. ಸುಲ್ತಾನ ಇಬ್ರಾಹೀಂ ಆದಿಲ್ ಶಹಾ ಸ್ಮರಣಾರ್ಥ ಕರ್ನಾಟಕ ಸರಕಾರ ಪ್ರತಿವರ್ಷ, ಆತ ವಿಜಾಪುರದ ಹೊರವಲಯದಲ್ಲಿ ನಿರ್ಮಿಸಿದ ನಗರ ನೌರಸಪುರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿದೆ.

ಸೂಫಿಗಳ ಪವಿತ್ರ ಬದುಕಿನಿಂದ ಇಬ್ರಾಹೀಂ ಬಹಳಷ್ಟು ಆಕರ್ಷಣೆಗೊಳಗಾಗಿದ್ದ. ಅವರು ದೇವರ ವಿರಹವೇದನೆಯಿಂದ ಬಳಲುವವರು. ಆ ಮೂಲಕ ತನುಮನಗಳನ್ನು ಶುದ್ಧಗೊಳಿಸಿಕೊಳ್ಳುವವರು. ಅಹಂಕಾರ ಮುಕ್ತರಾಗಿರುವವರು. ಪ್ರೇಮ ಭಾವದಿಂದ ತುಂಬಿರುವವರು. ಅವರನ್ನು ‘‘ವಿರಹ ತಾಪದಿಂದ ನರಳುವ ಜನರು’’ ಎಂದು ಇಬ್ರಾಹೀಂ ಕರೆಯುತ್ತಾನೆ. ಈ ಆಧ್ಯಾತ್ಮಿಕ ವಿರಹ, ಭೂಮಿ ಮತ್ತು ಆಕಾಶಗಳನ್ನು ಬೆಸೆಯುವಂಥದ್ದಾಗಿದೆ. ಅನುಭಾವದ ಕಡೆಗೆ ಒಯ್ಯುವಂಥದ್ದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)